ರೈಲು ಹಳಿಯ ಮೇಲಿನ ನಾಣ್ಯ

                                                   

ಚಿಕ್ಕವನಾಗಿದ್ದಾಗ ನನಗಿದ್ದ ಒಂದೇ ಕನಸೆಂದರೆ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಆಗುವುದು. ನಿತ್ಯವೂ ರೈಲಿನಲ್ಲಿ ಸಂಚರಿಸುವ, ನಿತ್ಯವೂ ಹಲವು ಬಗೆಯ ಜನರನ್ನ ಕಾಣುವ ಟಿಕೆಟ್ ಕಲೆಕ್ಟರ್ ವೃತ್ತಿ ಬಹಳ ಆಕರ್ಷಿಸಿತ್ತು. ಎಲ್ಲಿಗಾದರೂ ಉಚಿತವಾಗಿ ಪ್ರಯಾಣ ಮಾಡುವ ಅನುಕೂಲ ತಿಳಿದಾಗಲಂತೂ ಬದುಕಿನ ಧ್ಯೇಯವೆ ಆ ವೃತ್ತಿಯನ್ನ ಪಡೆಯುವುದು ಎಂದೆನಿಸಿಬಿಟ್ಟಿತ್ತು. ಅದೃಷ್ಟವೋ ದುರಾದೃಷ್ಟವೋ ನಾನು ಟಿಕೆಟ್ ಕಲೆಕ್ಟರ್ ಆಗಲಿಲ್ಲ, ಅದು ಬೇರೆಯದೆ ಕತೆ. ಏನೇ ಆದರೂ ನನಗೆ ರೈಲೆಂದರೆ ಈಗಲೂ ಇಷ್ಟ. ರೈಲಿನ ಒಳಗಿಂದ ಹೊರಗೆ ಕೈ ಬೀಸಿ ಮಕ್ಕಳಿಗೆ ಟಾಟ ಹೇಳುವ ಬಯಕೆ, ಚಿಕ್ಕವನಾಗಿದ್ದಾಗ ರೈಲು ಹೊರಗಿಂದ ರೈಲಿಗೆ ಟಾಟ ಹೇಳುವಾಗಿನ ಬಯಕೆಯಷ್ಟೆ ತೀವ್ರವಾಗಿದೆ. ಬೇಸರವಾದಾಗ, ಯಾವುದೋ ಖಿನ್ನತೆ ನನ್ನನ್ನಾವರಿಸಿಬಿಟ್ಟಿದೆಯೆಂದೆನಿಸಿದಾಗ ರೈಲು ನಿಲ್ದಾಣದಲ್ಲಿ ಹೋಗಿ ಕೂತುಬಿಡುತ್ತೇನೆ. ರೈಲು ನಿಲ್ದಾಣದಲ್ಲಿ ಟೀ ಕುಡಿಯುತ್ತ, ಅಲ್ಲಿ ಹೋಗುವ ಬರುವ ಜನರನ್ನ, ಅವರ ವೇಷಗಳನ್ನ, ಸಾಮಾನುಗಳನ್ನ ನೋಡುತ್ತ ನನ್ನ ಪ್ರಶ್ನೆಗಳ ಜಗತ್ತನ್ನ ಮರೆಯುತ್ತೇನೆ. ಇಡೀ ರೈಲು ನಿಲ್ದಾಣವು ಮೌನವಾಗಿ ಸಂವಹಿಸುವ ಗುರುವಿನಂತೆ ಕಾಣುತ್ತೆ.

ನನ್ನ ತಾತ(ಅಮ್ಮನ ಅಪ್ಪ) ದೊಡ್ಡ ಸಂಗೀತ ವಿದ್ವಾಂಸರಾಗಿದ್ದವರು. ಸಂಗೀತದಲ್ಲಿ ದೊಡ್ದ ವಿದ್ವಾಂಸರಾಗಿದ್ದರೂ ಅದರಲ್ಲಿ ಹಣ ದಕ್ಕುತ್ತಿರಲಿಲ್ಲ. ಹಲ್ಲುಪುಡಿ, ವೋಂವಾಟರ್, ಕಸ್ತೂರಿ ಮಾತ್ರೆಗಳನ್ನ ಮಾಡಿ ನಿತ್ಯವೂ ಹೆಗಲ ಮೇಲೆ ಹೊತ್ತು ಊರೂರೂ ಅಲೆದು ಅವುಗಳನ್ನು ಮಾರಿದರೆ ಅಂದಿನ ಜೀವನ. ನಮ್ಮ ಅಮ್ಮನ ಊರು ಆಂಧ್ರದ ಪೆನುಗೊಂಡ ಹತ್ತಿರದ ಹಳ್ಳಿ. ಆ ಬಿಸಿಲಿನಲ್ಲಿ ಎಷ್ಟೋ ಬಾರಿ ಚಪ್ಪಲಿಯಿಲ್ಲದ ಕಾಲುಗಳಲ್ಲಿ ಸಾಮಾನುಗಳನ್ನ ಹೊತ್ತು ಊರೂರು ಅಲೆಯುವಾಗ ಆ ಬಿಸಿಲ ನೋವು ಕಾಡದಿರಲೆಂದು ದಾರಿಯುದ್ದಕ್ಕೂ ಹಾಡನ್ನಾಡುತ್ತ ಆ ನೋವು ಮರೆಯುತ್ತಿದ್ದರು. ತಾತನಿಗೆ ಸಂಗೀತದಿಂದ ಎಂತಹ ಬೇಸರವಾಗಿತ್ತೆಂದರೆ, ತನ್ನ ಮಕ್ಕಳಿಗ್ಯಾರಿಗೂ ತಾತ ಎಂದಿಗೂ ಸಂಗೀತವನ್ನ ಹೇಳಿಕೊಡಲಿಲ್ಲ. ಸಂಗೀತದಿಂದ ತನ್ನ ಬದುಕಿಗೆ ಏನೂ ಉಪಯೋಗವಾಗಲಿಲ್ಲವೆಂದೆ ತಾತ ಭಾವಿಸಿದ್ದರು. ತಾತ ಅಕಾಲದಲ್ಲಿ ತೀರಿಕೊಂಡರು. ನನ್ನ ಅಮ್ಮ, ಅವಳ ಐದು ಜನ ಸಹೋದರರು, ಇಷ್ಟೂ ಜನರ ಭಾರ ಅಜ್ಜಿಯ ಮೇಲೆ ಬಿದ್ದಿತು. ಬದುಕು ಸಾಗಲೆ ಬೇಕು. ಅದೆ ಸಮಯಕ್ಕೆ ಆ ಊರಿಗೆ ರೈಲು ನಿಲ್ದಾಣ ಬಂತು. ರೈಲು ನಿಲ್ದಾಣದ ಕಾಮಗಾರಿಗೆ ಜನ ಬರತೊಡಗಿದರು. ಊರ ಹೊರಗೆ ಮನೆ ಮಾಡಿಕೊಂಡಿದ್ದ ಅಜ್ಜಿಯವರಿಗೆ ರೈಲು ನಿಲ್ದಾಣ ಹತ್ತಿರವಿತ್ತು. ರಾಜ್ಯ ರಸ್ತೆ ಹೆದ್ದಾರಿಗೆ ಹಾಕಿದ ರೈಲ್ವೆ ಗೇಟು ಮನೆಯಿಂದ ಸ್ವಲ್ಪ ದೂರವೆ ಇತ್ತು. ಆಗ ಅಜ್ಜಿ ಹೋಟೆಲ್ ತೆಗೆದಳು. ಹಿರಿಯ ಮಗನಿಗೆ ಕಿರಾಣಿ ಅಂಗಡಿ ಹಾಕಿಕೊಟ್ಟಳು. ಅಂದಿನಿಂದ ರೈಲು ಕಾರ್ಮಿಕರು, ರೈಲು ಗೇಟು ಹಾಕಿದಾಗ ಬರುವ ಮಂದಿ ಹೀಗೆ ಅಜ್ಜಿಯ ಹೋಟೆಲು ಊರಿನ ಕೇಂದ್ರಸ್ಥಾನವಾಯಿತು. ಅಜ್ಜಿಯ ಮನೆಯು ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತು. ನನ್ನ ಅಮ್ಮನಿಗೆ, ಅವಳ ಇಡೀ ಕುಟುಂಬಕ್ಕೆ ರೈಲಿನ ಬಗೆಗೆ ಒಂದು ರೀತಿಯ ಧನ್ಯತಾ ಭಾವವಿತ್ತು. ಅವಳ ಈ ಧನ್ಯತಾ ಭಾವ ನನ್ನ ಕುತೂಹಲವಾಗಿ ರೈಲು ಆಕರ್ಷಿಸತೊಡಗಿತು.

ಅಜ್ಜಿಯ ರೀತಿಯಲ್ಲಿ ಅಮ್ಮ ಎಂದಿಗೂ ರಾಜ ರಾಣಿಯರ, ದೇವತೆಗಳ, ಭಾರತ, ರಾಮಾಯಣದಂತಹ ಕತೆಗಳನ್ನ ಹೇಳಲೇ ಇಲ್ಲ. ನನಗೆ ಈಗ ನೆನಪಾಗುತ್ತೆ, ನಾನು ಚಿಕ್ಕವನಾಗಿದ್ದಾಗ ಅಮ್ಮನಿಗೆ ಎಂದೂ ಕತೆಗಳನ್ನ ಹೇಳೆಂದು ಕಾಡುತ್ತಿರಲಿಲ್ಲ. ಎಷ್ಟು ಕತೆ ಕೇಳಿದ್ರೂ ಹೇಳಲಿಕ್ಕೆ ಅಜ್ಜಿ ಇರ್ತಾ ಇದ್ದಳು. ನಂತರದ ದಿನಗಳಲ್ಲಿ ಅಮ್ಮ ಹಲವು ಕತೆಗಳನ್ನ ಹೇಳುತ್ತಿದ್ದಳು. ತನ್ನದೇ ಬದುಕಿನ ನಿಜದ ಸಂಗತಿಗಳು ನನಗೆ ಕತೆಗಳಾಗಿ ಕೇಳುತ್ತಿತ್ತು. ತನ್ನ ಗತದ ನೋವನ್ನ, ನಲಿವನ್ನ, ನನ್ನೊಡನೆ ಹೇಳಿಕೊಳ್ಳುತ್ತ ಅವಳ ಬದುಕಿನ ಪೂರ್ಣ ಚರಿತ್ರೆಯಲ್ಲಿ ನನ್ನನ್ನೂ ಭಾಗಿಯಾಗಿಸುತ್ತಿದ್ದಳು. "ನಿಮ್ಮ ಮಾಮ ರೈಲು ಹಳಿಗಳನ್ನ ಪರೀಕ್ಷಿಸೋ ಟ್ರಾಲೀನ ನೂಕಲಿಕ್ಕೆ ಹೋಗ್ತಾ ಇದ್ರು. ದಿನಕ್ಕೆ ಒಂದು ರೂಪಾಯಿ ಕೊಡ್ತಾ ಇದ್ರು. ಆಗ ನಂಗೆ ಒಂದು ರೂಪಾಯಿ ಎಷ್ಟು ದೊಡ್ಡದಾಗಿ ಕಂಡಿತು ಅಂದ್ರೆ, ದಿನಾ ಒಂದು ರೂಪಾಯಿ ಅಂದ್ರೆ ತಿಂಗಳಿಗೆ ಮೂವತ್ತು ರೂಪಾಯಿ ಅಂತ ಖುಷಿಯಿಂದ ನಿಮ್ಮ ಮಾವಂಗೆ ನಾನೇ ಹೋಗು ಅಂತ ಹೇಳ್ತಾ ಇದ್ದೆ." ಅಂತ ಹೇಳ್ತಾ ನನ್ನ ಮಾಮ ಈಗ ತಲುಪಿರುವ ಹಂತದ ಬಗೆಗೆ ಅಭಿಮಾನಪಡುತ್ತಿದ್ದಳು. ಹಾಗೆ ಟ್ರಾಲಿ ನೂಕುತ್ತ ನನ್ನ ಮಾವ ಚೆನ್ನಾಗಿ ಓದಿ ಬ್ಯಾಂಕಿನಲ್ಲಿ ಉನ್ನತ ಹಂತದ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ನನ್ನ ಅಮ್ಮನ ಹಳೇ ಕಪ್ಪು ಬಿಳುಪಿನ ಎರೆಡು ಜಡೆಗಳ ಫೋಟೋ ಒಂದಿದೆ. ಆ ಫೋಟೋವನ್ನ ನೋಡಿ, ನನ್ನ ಅಮ್ಮ ಹೋಗುವ ರೈಲಿಗೆ ಹೇಗೆ ಟಾಟ ಹೇಳುತ್ತಿದ್ದಳು ಅಂತ ನೆನೆದಾಗ ನಗು ಬರುತ್ತೆ.

ಹವಾನಿಯಂತ್ರಿತಬೋಗಿ(ಎಸಿ)ಯೊಳಗೆ ಏನಿರುತ್ತದೆ, ಹೇಗಿರುತ್ತದೆ ಎಂಬುದು ನನಗೆ ರೈಲಿನ ಬಗೆಗಿದ್ದ ಕುತೂಹಲಗಳಲ್ಲಿ ಅತಿ ಮುಖ್ಯವಾದದ್ದಾಗಿತ್ತು. ಸದಾ ಕಪ್ಪು ಗಾಜಿನಿಂದ ಆವೃತವಾಗಿರುತ್ತಿದ್ದ, ಎಂದಿಗೂ ನಮಗ್ಯಾರಿಗೂ ಟಾಟ ಮಾಡಲಾಗದ ಆ ಕಪ್ಪು ಕನ್ನಡಕದ ಬೋಗಿಯೊಳಗೆ ಏನಿರಬಹುದು, ಅಲ್ಲಿನ ಜನ ಹೇಗಿರುತ್ತಾರೆ ಎಂದು ತಿಳಿಯಲು ಬಹಳ ಆಸೆಪಟ್ಟಿದ್ದೆ. ಜೀವನದಲ್ಲಿ ಆ ಬೋಗಿಯೊಳಗೆ ಸುಮ್ಮನೆ ಒಮ್ಮೆಯಾದರೂ ಹೋಗಿ ನೋಡಿಕೊಂಡು ಬರಬೇಕೆಂಬೊ ಆಸೆ ಇತ್ತು. ನಮ್ಮ ಆರ್ಥಿಕ ಅರಿಸ್ಥಿತಿಯಲ್ಲಿ ಎಸಿ ಬೋಗಿಯೊಳಗೆ ಪ್ರಯಾಣ ಮಾಡುವುದು ಸಾದ್ಯವಿರಲಿಲ್ಲ. ಒಮ್ಮೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹಳ್ಳಿಗೋಗುವ ರೈಲಿಗೆ ಕಾಯುತ್ತಿದ್ದಾಗ ಯಾವುದೋ ರೈಲು ಎದುರಿಗೆ ಬಂದು ನಿಂತಿತು. ಸರಿಯಾಗಿ ಎಸಿ ಬೋಗಿ ನನ್ನೆದುರಿಗೆ ನಿಂತಿತ್ತು. ಹೆಚ್ಚು ಜನರ್ಯಾರೂ ಇರಲಿಲ್ಲ. ಆಗ ಒಳ ಹೋಗಿ ನೋಡಿಕೊಂಡು ಬರಲೆ ಅಂತನ್ನಿಸಿತು. ಅದೇ ಕ್ಷಣದಲ್ಲಿ ಅತ್ಯಂತ ಭಯವೂ ಆಗತೊಡಗಿತು, ಅಕಸ್ಮಾತ್ ಯಾರಾದರೂ ನೋಡಿದರೆ! ಯಾರೋ ಹೇಳಿದ್ದರು, ಎಸಿ ಬೋಗಿಗಳೊಳಗೆ ಪೋಲೀಸರು ಇರುತ್ತಾರೆ ಅಂತ, ಹಾಗೇನಾದರೂ ಪೋಲಿಸರು ಇದ್ದು ನನ್ನನ್ನು ಹಿಡಿದುಕಂಡುಬಿಟ್ಟರೆ ಎಂದೆಲ್ಲ ಭಯವಾಗುತ್ತಿತ್ತು. ಭಯವನ್ನು ಮೀರಿದ ಆಕರ್ಷಣೆ ಆ ಬೋಗಿಗಳೊಳಗಿತ್ತು. ಅದರಲ್ಲಿ ಏನೋ ಇದೆ. ಅಲ್ಲಿನ ಜನಗಳು ಬೇರೆಯದೆ ರೀತಿ ಇರುತ್ತಾರೆ. ಅಲ್ಲಿನ ಸೀಟುಗಳು ಬೇರೆಯದೆ ರೀತಿ ಇರುತ್ತದೆ. ಆ ಆಕರ್ಷಣೆ ನನ್ನನ್ನ ಒಳಗೆ ನೂಕಿತು. ಬಾಗಿಲನ್ನ ಹೇಗೆ ತೆಗೆಯುವುದೆಂಬುದೂ ತಿಳಿದಿರಲಿಲ್ಲ. ಹೇಗೋ ನೂಕಿದಾಗ ತೆರೆದು ಒಳಗೆ ಸೇರಿಕೊಂಡೆ. ಕೆಲವೆ ಜನರಿದ್ದರು. ಯಾವುದೋ ಅನ್ಯ ಗ್ರಹದ ಜೀವಿಯೊಬ್ಬ ಒಳಗೆ ಬಂದಂತೆ ಕಾಣುತ್ತಿದ್ದರು. ಹವಾನಿಯಂತ್ರಿತ ವ್ಯವಸ್ತೆ ತಣ್ಣಗಿನ ಅನುಭವವನ್ನೂ, ಹೊರಗಿನ ಶಬ್ದವು ಕೇಳದಂತಹ ನಿಶ್ಯಬ್ದವನ್ನೂ ಸೃಷ್ಟಿಸಿತ್ತು. ದೀರ್ಘವಾಗಿ ಉಸಿರೆಳೆದುಕೊಂಡಾಗ ಜೀವನದ ಮಹತ್ಸಾದನೆ ಮಾಡಿದ ಭಾವನೆಯುಂಟಾಯಿತು. ಅಷ್ಟರೊಳಗೆ ರೈಲು ಹೊರಟಿತ್ತು. ಬಾಗಿಲನ್ನು ಹಿಂದೆ ತೆರೆಯಲು ಹೋಗಿ ಮುಂದೆನೂಕುತ್ತಿದ್ದೆ, ಬಾಗಿಲು ತೆರೆಯುತ್ತಿಲ್ಲ, ರೈಲು ಹೊರಡುತ್ತಿತ್ತು. ಭಯ ಗಾಬರಿಯಿಂದ ಬೆವೆತುಹೋದೆ. ನಂತರ ಆ ಕಡೆಯಿಂದ ಯಾರೋ ತೆಗೆದರು. ಹೊರಗೆ ಬಂದು ರೈಲಿನಿಂದ ದುಮುಕಿದೆ. ಬದುಕಿದೆನೊ ಜೀವವೆ ಅಂತನ್ನಿಸಿಬಿಟ್ಟಿತ್ತು. ಕಡೆಗೂ ಆ ಬೋಗಿಯೊಳಗೆ ಹೋದೆನಲ್ಲ ಅಂತ ಅನ್ನಿಸಿದರೂ ನಂತರದ ದಿನಗಳಲ್ಲಿ ಆ ಆಕರ್ಷಣೆಯೆ ಹೊರಟುಹೋಯಿತು. ಅದೂ ಕೂಡ ಮಾಮೂಲಿ ಬೋಗಿಯಂತೆಯೆ ಅನ್ನಿಸಿಬಿಟ್ಟಿತು. ಮುಂದೆ ಉನ್ನತ ವ್ಯಾಸಂಗಕ್ಕೆ ಸೂರತ್ಕಲ್ಲಿಗೆ ಹೋದಾಗ, ಕಾಲೆಜಿನ ವತಿಯಿಂದ ಅಲಹಾಬಾದಿಗೆ ಹೋಗಿ ಅಲ್ಲಿ ನೊಬೆಲ್ ವಿಜೇತರನ್ನ ಬೇಟಿಯಾಗುವ ಅವಕಾಶ ದೊರಕಿತು. ಆಗ ಅಲಹಬಾದಿಗೆ ಎಸಿ ಬೋಗಿಯಲ್ಲಿ ಹೋಗುವ ಅವಕಾಶವನ್ನ ಸರ್ಕಾರ ಒದಗಿಸಿತ್ತು. ಅಂದು ಎರಡು ದಿನಗಳ ಪ್ರಯಾಣವನ್ನ ಆ ಎಸಿ ಬೋಗಿಯಲ್ಲೆ ಕಳೆದೆ. ಈಗ ಯಾವ ಸಮ್ಮೇಳನಕ್ಕೆ ಹೋಗಬೇಕಾದರೂ ಎಸಿ ಬೋಗಿಯಲ್ಲಿ ಹೋಗುವ ಸೌಲಬ್ಯವಿದೆ. ನನ್ನ ಈಗಿನ ಸ್ಥಿತಿಯ ಬಗ್ಗೆ ನನಗೆ ಹೆಮ್ಮೆ ಗೌರವ ಮೂಡಿದರೂ, ಸಾಮಾನ್ಯ ದರ್ಜೆಯಲ್ಲಿ ಹೋಗುತ್ತಿದ್ದಾಗಿನ ಆ ಆತ್ಮೀಯತೆ ಇದರಲ್ಲಿ ದಕ್ಕುವುದೇ ಇಲ್ಲ. ಅಲ್ಲಿನ ಗಲಾಟೆ, ಅಲ್ಲಿನ ಹರಟೆ, ಅಲ್ಲಿನ ಮಕ್ಕಳ ಸದ್ದು, ರೈಲಿನ ಸದ್ದು, ಹೊರಗಿನ ಚಲಿಸುವ ದೃಶ್ಯಗಳು ಯಾವೂ ಇಲ್ಲಿಲ್ಲ. ಕೇವಲ ಸಾಮಾನ್ಯ ದರ್ಜೆಯ ಪ್ರಯಾಣವನ್ನ ಅನುಭವಿಸಲಿಕ್ಕಾಗಿಯೆ ಬೆಂಗಳೂರಿನಿಂದ ಹಳ್ಳಿಗೆ ಹೋಗುವಾಗಲೆಲ್ಲ ಸಾಮಾನ್ಯ ದರ್ಜೆಯ ರೈಲಿನಲ್ಲೆ ಹೋಗುತ್ತೇನೆ. ದೂರ ಪ್ರಯಾಣದ ವೇಳೆ ಎಸಿ ಬೋಗಿ ಹತ್ತುವಾಗಲೆಲ್ಲ, ನನ್ನ ನೋಟ ಆ ಸಾಮಾನ್ಯ ಬೋಗಿಯೆಡೆಗೆ ಇರುತ್ತೆ. ಹಂತಗಳ ಬೆಳವಣಿಗೆಯ, ಅಥವಾ ಯಾವುದರಿಂದಲೋ ದೂರ ಸರಿಯುವ ಕ್ರಿಯೆಯ ಎಂಬೋ ದ್ವಂದ್ವಕ್ಕೆ ಉತ್ತರ ಸಿಗದೆ ರೈಲಿಳಿಯುತ್ತೇನೆ.

**************************************************************

ಎಂದಿಗೂ ಐದೇ ಐದು ನಿಮಿಷವೂ ಸುಮ್ಮನೆ ಇರದ ನಮ್ಮೂರ ಸುಬ್ಬ ಅಂದೇಕೆ ಇಡೀ ದಿನ ಏನನ್ನೂ ಮಾತನಾಡಲಿಲ್ಲ ಎಂಬೋದು ನನಗೆ ಇಂದಿಗೂ ತಿಳಿಯುತ್ತಿಲ್ಲ. ಸುಬ್ಬನನ್ನು ಕಂಡಾಗಲೆಲ್ಲ ಅಂದೇಕೆ ಸುಬ್ಬ ಸುಮ್ಮನೆ ಕೂತಿದ್ದ ಎನ್ನುವ ಸಂಗತಿ ಎಚ್ಚರಗೊಳ್ಳುತ್ತೆ. ಸುಬ್ಬ ನಮ್ಮೂರ ರಾಮರಾಯರ ಮಗ. ನನಗಿಂತೆ ಸುಮಾರು ಇಪ್ಪತ್ತು ವರ್ಷ ದೊಡ್ಡವನು. ಆದರೆ ಅವನ ಬುದ್ದಿ ಬೆಳೆಯಲೇ ಇಲ್ಲ. ಸುಬ್ಬ ಒಬ್ಬ ಮಾನಸಿಕ ಅಸ್ವಸ್ತ. ಹಾಗನ್ನೋದು ಸರಿಯ ಅಂತನ್ನಿಸುತ್ತೆ. ಯಾರೂ ಎಂದಿಗೂ ಸುಬ್ಬನನ್ನ ಹುಚ್ಚ ಅಂದದ್ದು ನಾನು ಕೇಳಿಸಿಕೊಂಡಿಲ್ಲ. ಸದಾ ಸುಮ್ಮನೆ ಏನನ್ನೋ ಮಾತನಾಡುತ್ತಲೆ ಇರುತ್ತಾನೆ. ಸುಬ್ಬ ಯಾವಾಗ ನನ್ನನ್ನ ನೋಡಿದರೂ, ಅಥವಾ ಯಾರನ್ನೇ ನೋಡಿದರೂ "ರೈಲು ಬಂತೇನ?" "ಏಷ್ಟೊತ್ತಿಗೆ ಬರುತ್ತಾ..?" ಹೀಗೆ ಏನೋ ಅಸಂಬದ್ದ ಮಾತುಗಳನ್ನ ಸದಾ ಆಡುತ್ತಿರುತ್ತಾನೆ. ನಮ್ಮ ಹಳ್ಳಿಯಲ್ಲಿ(ನನ್ನ ಅಪ್ಪನ ಊರು) ಯಾವ ರೈಲೂ ಇಲ್ಲ. ರೈಲ್ವೇ ನಿಲ್ದಾಣವೂ ಇಲ್ಲ. ಸುಬ್ಬನ ಪರಿಸ್ಥಿತಿಯನ್ನ ತಿಳಿದ ಜನರು "ಹೂ ಬಂತು", "ನಾಳೆ ಬರುತ್ತೆ", "ಇಗೋ ಈಗ ಬರುತ್ತೆ". ಹೀಗೆ ತಮಗೆ ಆ ಕ್ಷಣದಲ್ಲಿ ತೋಚಿದ್ದೇನನ್ನೋ ಹೇಳುತ್ತಿದ್ದರು. ಕೆಲವರಿಗೆ ಇದು ಸುಬ್ಬನ ಜೊತೆಗೆ ಆಡುವ ಆಟ. ನಿಜಕ್ಕೂ ಸುಬ್ಬನಿಗೆ ಈ ರೈಲಿನ ಗೀಳು ಹೇಗೆ ಹತ್ತಿತು ಎಂಬುದು ನಿಗೂಢ ಸಂಗತಿಯಾದರೂ, ನಮ್ಮ ಊರಿನಲ್ಲಿ ಒಂದು ಕತೆ ಸದಾ ಪ್ರಚಲಿತದಲ್ಲಿತ್ತು.

ನಮ್ಮೂರ ರಾಮರಾಯರು ಬಾರೀ ಜಮೀನ್ದಾರರು. ನೂರಾರು ಎಕರೆ ಜಮೀನಿತ್ತು. ಬಹಳ ಶ್ರೀಮಂತರಾಗಿದ್ದುದರಿಂದ ಸಹಜವಾಗಿ ಗತ್ತು ಗರ್ವ ಎಲ್ಲವೂ ಸೇರಿಕೊಂಡಿತ್ತು. ಕಾಲಾಂತರದಲ್ಲಿ ಹಲವು ಸಾಹಸಗಳಿಗೆ ಕೈ ಹಾಕಿ ಎಷ್ಟೋ ಆಸ್ತಿಯನ್ನು ಕಳೆದುಕೊಂಡರೂ, ಗರ್ವವೇನೂ ಕುಸಿದಿರಲಿಲ್ಲ. ಆಗಿನ ಕಾಲಕ್ಕೆ ನಮ್ಮೂರಿಗೆ ಮೊದಲನೆ ಟಿವಿಯನ್ನೂ, ಸ್ಕೂಟರನ್ನೂ ತಂದವರು ಅವರೆ. ಅವರ ಮನೆಯಲ್ಲಿ ಟಿವಿ ನೋಡಲಿಕ್ಕೆ ಅಂತಲೆ ಜನ ಸೇರುತ್ತಿದ್ದರು. ಆ ಟಿವಿಯ ಮುಂದೆ ಕೂತು ಕೈ ಕಾಲನ್ನ ಆಡಿಸುತ್ತ, ಹಿಂದೆ ಕೂತು ನೋಡುವವರಿಗೆ ತೊಂದರೆ ಕೊಡುವುದು ರಾಮರಾಯರ ನೆಚ್ಚಿನ ಹವ್ಯಾಸಗಳಲ್ಲೊಂದು. ನಮ್ಮ ಸುಬ್ಬ ಚಿಕ್ಕವನಾಗಿದ್ದಾಗ ಆ ಟಿವಿಯ ಯಾವುದೋ ಕಾರ್ಯಕ್ರಮದಲ್ಲಿ ರೈಲು ಬಂಡಿಯನ್ನ ನೋಡಿದ. ಅದು ತನಗೆ ಬೇಕು ಅಂತ ಅವರಪ್ಪನ ಬಳಿ ಹಟ ಹಿಡಿದ. ರಾಮರಾಯರು ತಮ್ಮ ದರ್ಪದಿಂದ ಮಗನಿಗೆ ಕೊಡಿಸುವುದಾದರೆ ನಿಜವಾದ ರೈಲನ್ನೆ ಕೊಡಿಸುವ, ಕೊಡಿಸುತ್ತೇನೆ ಅಂದು ಬಿಟ್ಟರು. ನಮ್ಮೂರ ಜನಗಳು ಈಗಲೂ ಹೇಳುತಾರೆ, ರಾಮರಾಯರು ಹಲವು ಬಾರಿ ಬೆಂಗಳೂರಿಗೆ ಹೋಗಿ ನಮ್ಮೂರಿಗೆ ರೈಲನ್ನ ತರಿಸುವ ಪ್ರಯತ್ನ ಮಾಡಿದ್ದರು ಅಂತ. ವಯಸ್ಸಾದಂತೆ ರಾಮರಾಯರ ಆಸ್ತಿ ದರ್ಪ ಎರೆಡೂ ಕಳೆಯಿತು. ಕಡೆಗೆ ಒಂದು ದಿನ ರಾಮರಾಯರೂ ಇಲ್ಲವಾದರು. ಬುದ್ದಿ ಬೆಳೆಯದ ಕಾರಣ, ಸುಬ್ಬನು ಮಾತ್ರ ರೈಲು ಊರಿಗೆ ಬರುತ್ತದೆಂದೆ ಬಾವಿಸಿದ್ದ. ಎಷ್ಟೇ ದೊಡ್ಡವನಾದರೂ, ಬಂದವರನ್ನೆಲ್ಲ ರೈಲು ಬಂತೇನ, ಯಾವಾಗ ಬರುತ್ತ ಅಂತಾನೆ ಕೇಳುತ್ತಿದ್ದ.

ಒಮ್ಮೆ ಸುಬ್ಬನ ಹಟ ಜಾಸ್ತಿಯಾಗಿ ಹೋಯಿತು. ಬೇರೆ ಏನೂ ಮಾತನಾಡದಂತೆ ಯಾವಾಗಲೂ ರೈಲು ರೈಲು ಅಂತಾನೆ ಅನ್ನಲಿಕ್ಕೆ ಶುರುವಿಟ್ಟುಕೊಂಡ. ಸುಬ್ಬನ ತಾಯಿಯೂ ನಮ್ಮ ಅಜ್ಜಿಯೂ(ಅಮ್ಮನ ಅಮ್ಮ) ಯಾವುದೋ ರೀತೀಲಿ ಸಂಬಂಧಿಕರು. ಜೊತೆಗೆ ಒಂದೇ ಊರಿನವರಾದ ಕಾರಣ ನಮಗೂ ಅವರಿಗೂ ಒಳ್ಳೆಯ ಸ್ನೇಹ ಸಂಬಂಧವಿತ್ತು. ಆಗಲೆ ತಿಳಿಸಿದಂತೆ ನನ್ನ ಅಜ್ಜಿಯ ಊರಲ್ಲಿ ರೈಲು ನಿಲ್ದಾಣವಿತ್ತು, ಜೊತೆಗೆ ದಿನಕ್ಕೆ ಎರಡು ರೈಲುಗಳು ನಿಲ್ಲುತ್ತಲೂ ಇದ್ದವು. ಮನೆಯ ಮುಂದಿನ ಜಗುಲಿಯ ಮೇಲೆ ಕೂತರೆ ನಿತ್ಯ ಬೆಳಗಿನಿಂದ ಸಂಚರಿಸುವ ಅಷ್ಟೂ ರೈಲುಗಳನ್ನ ಕಾಣಬೊಹುದಿತ್ತು. ಸುಬ್ಬನ ಕಾಟ ಹೆಚ್ಚಾದುದರಿಂದ ಸುಬ್ಬನ ತಾಯಿ ಒಮ್ಮೆ ನಮ್ಮಜ್ಜಿಯ ಊರಿಗೆ ರೈಲಲ್ಲಿ ಹೋಗಿ ಒಂದೆರೆಡು ದಿನ ಇದ್ದು ಮತ್ತೆ ರೈಲಲ್ಲಿ ಸುಬ್ಬನನ್ನು ಕರೆದುಕೊಂಡು ಬರುವ ಅಂತ ಒತ್ತಾಯಿಸಿದರು. ಅಮ್ಮನಿಗೆ ಹೇಗೂ ಅಜ್ಜಿಯ ಮನೆಗೆ ಹೋಗುವುದೆಂದರೆ ಖುಷಿಯ ವಿಚಾರ, ಹಾಗಾಗಿ ಸುಬ್ಬನನ್ನು ಕರೆದುಕೊಂಡು ಅವರ ತಾಯಿ, ನಾನು, ಅಮ್ಮ ಎಲ್ಲರೂ ರೈಲಲ್ಲಿ ಹೊರಟೆವು.  

ನಾನು ಎಣಿಸಿದಂತೆ ರೈಲು ನಿಲ್ದಾಣದಲ್ಲಾಗಲಿ, ರೈಲಿನಲ್ಲಾಗಲಿ ನಡೆಯಲೇ ಇಲ್ಲ. ಅದೇಕೆ ಹಾಗೆನ್ನಿಸಿತೋ ಏನೋ, ರೈಲು ನೋಡಿದ ತಕ್ಷಣ ಸುಬ್ಬ ಭಾವುಕನಾಗುತ್ತಾನೆ ಅಥವಾ ಮೌನವಾಗುತ್ತಾನೆ ಅಥವಾ ಖುಷಿಯಿಂದ ಕಿರುಚುತ್ತಾನೆ. ಒಟ್ಟಿನಲ್ಲಿ ಅವನ ನಡವಳಿಕೆಯಲ್ಲಿ ಗುರುತಿಸುವಂತಹ ಬದಲಾವಣೆಗಳಾಗುತ್ತೆ ಎಂದು ಭಾವಿಸಿದ್ದೆ. ಆದರೆ ಅದೇನೂ ಜರುಗಲೇ ಇಲ್ಲ. ರೈಲನ್ನ ನೋಡಿದ ಸುಬ್ಬ ರೈಲಿನ ಕುರಿತಾದ ಮಾತು ಬಿಟ್ಟು ಬೇರೆ ಬೇರೆ ಮಾತುಗಳನ್ನು ಸುಮ್ಮನೆ ಆಡುತ್ತಲೇ ಇದ್ದ. ರೈಲು ನಿಲ್ದಾಣದಲ್ಲಿ ರೈಲು ಯಾವಾಗ ಬರುತ್ತೆ ಅಂತ ಕೇಳಲೇ ಇಲ್ಲ. ರೈಲು ಬಂದಾಗ, ಹತ್ತುವಾಗ ಸ್ವಲ್ಪ ಭಯಪಟ್ಟಂತೆ ಕಂಡ. ಆದರೆ ನಂತರ ನಾವೆಲ್ಲ ಹತ್ತಿದ ಮೇಲೆ ಸುಲಭವಾಗಿ ಹತ್ತಿಬಿಟ್ಟ. ನಮ್ಮೂರ ಸುಬ್ಬ ರೈಲಿನಲ್ಲಿ ಕೂತಿದ್ದ. ಯಾವುದೇ ರೀತಿಯ ಬದಲಾವಣೆಯಿಲ್ಲದೆ, ಯಾವ ರೀತಿಯಲ್ಲಿ ಮನೆಯ ಮುಂದೆ ನಿತ್ಯವೂ ಕೂತು ರೈಲು ಬಂತೇನ ಅಂತ ಕೇಳುತ್ತಿದ್ದನೊ ಅದೇ ರೀತಿ ರೈಲಲ್ಲಿ ಕೂತು ಸುಮ್ಮನೆ ಅರ್ಥವಿಲ್ಲದ ಅರ್ಥವಾಗದ ಮಾತುಗಳನ್ನ ಆಡುತ್ತಲೇ ಇದ್ದ.

ಸುಮಾರು ಎರಡು ದಿನಗಳ ಕಾಲ ನಾವುಗಳು ಸುಬ್ಬ ಎಲ್ಲರು ಅಜ್ಜಿಯ ಮನೆಯಲ್ಲಿದ್ದೆವು. ಮನೆಯ ಮುಂದಿನ ಜಗುಲಿಯ ಮೇಲೆ ಇಡೀ ದಿನ ಕೂತು, ಬರುವ ಹೋಗುವ ರೈಲನ್ನ ಗೂಡ್ಸ್ ಗಾಡಿಯನ್ನ ನೋಡುತ್ತಲಿದ್ದ. ಯಾರಿಗೂ ತೊಂದರೆ ಕೊಡದ ಕಾರಣ ಸುಬ್ಬನ ನೋಟವೂ, ಅವನ ಅರ್ಥವಿಲ್ಲದ ಮಾತುಗಳೂ ಯಾರಿಗೂ ಮುಖ್ಯವೆನಿಸಲೇ ಇಲ್ಲ. ಮಾರನೆಯ ದಿನ ನಾವುಗಳು ಊರಿಗೆ ಹಿಂತಿರುಗಿದೆವು. ತೀರ ಆಶ್ಚರ್ಯವೆಂಬಂತೆ ಹಿಂತಿರುಗುವ ಆ ಇಡೀ ದಿನ ಬೆಳೆಗ್ಗೆಯಿಂದಲೆ ಸುಬ್ಬ ಏನನ್ನೂ ಮಾತನಾಡಲಿಲ್ಲ. ಇಂದಿಗೂ ನನ್ನನ್ನು ಈ ಸಂಗತಿ ಕಾಡುತ್ತೆ. ಮಾರನೆ ದಿನದಿಂದ ಸುಬ್ಬ ಮಾಮೂಲಿಯಂತೆ ಮತ್ತೆ ಅದೇ ಸ್ಥಿತಿಯಲ್ಲಿ ಮನೆಯ ಮುಂದೆ ಕೂತು ರೈಲು ಬಂತೇನ ಅಂತ ಮಾತನಾಡುತಿದ್ದ. ಈಗಲೂ ಹೋದರೆ ಅದೇ ಸ್ಥಿತಿ, ಅದೇ ಮಾತು.

ಯಾಕೋ ಇವೆಲ್ಲಾ ಸಂಗತಿಗಳೂ ನೆನಪಾಯಿತು. ಮೊನ್ನೆ ಅಜಿಯ ಊರಿಗೆ ಹೋಗಿದ್ದೆ. ಅಲಿ ಏನೂ ಇರಲಿಲ್ಲ. ಅಜ್ಜಿ, ಅಜ್ಜಿಯ ಮನೆ ಎಲ್ಲವೂ. ಅಜ್ಜಿ ಸತ್ತ ನಂತರ ಒಬ್ಬೊಬ್ಬರಾಗಿ ಎಲ್ಲರೂ ಊರು ಬಿಟ್ಟರು. ಮನೆ ಬಿದ್ದು ಹೋಯಿತು. ಈಗ ಆ ಊರಿನಲ್ಲೇನೂ ಉಳಿದಿರಲಿಲ್ಲ. ಅಮ್ಮ ನಾನು ಆಡಿದ ರೈಲು ನಿಲ್ದಾಣದ ಹತ್ತಿರದ ಬಯಲಿಗೆ ನಡೆದೆ. ಯಾಕೋ ಬೇಸರವಾಯಿತು. ಯಾರೋ ಅಲ್ಲಿ ಆಟವಾಡುತ್ತಿದ್ದರು. ಚಿಕ್ಕವನಾಗಿದ್ದಾಗ ಹತ್ತು ಪೈಸೆ ನಾಣ್ಯವನ್ನು ರೈಲು ಹಳಿಯ ಮೇಲಿಟ್ಟರೆ, ರೈಲು ಆ ನಾಣ್ಯದ ಮೇಲೆ ಚಲಿಸಿದರೆ ಆ ನಾಣ್ಯ ಮ್ಯಾಗನೇಟ್ ಆಗುತ್ತೆ ಅಂತ ಯಾರೋ ಹೇಳಿದ್ದರು. ನಾವೆಲ್ಲ ನಂಬಿದ್ದೆವು. ಎಷ್ಟೋ ಬಾರಿ ಹತ್ತು ಪೈಸೆ ತೆಗೆದುಕೊಂಡು ಹೋಗಿ ಹಳಿಯ ಮೇಲಿಟ್ಟು ಮ್ಯಾಗನೇಟ್ ತೆಗೆದುಕೊಳ್ಳೊಣ ಅಂತನ್ನಿಸಿದ್ದರೂ ಹೆದರಿಕೆಯಾಗುತ್ತಿತ್ತು, ಅಕಸ್ಮಾತ್ ರೈಲು ಬಿದ್ದು ಹೋದರೆ ಅಂತ. ಈಗ ನನಗೆ ಗೊತ್ತು ನಾಣ್ಯ ಮ್ಯಾಗನೇಟ್ ಆಗೋಲ್ಲ ಅಂತ. ಆದರೂ, ಜೇಬಲ್ಲಿ ಇದ್ದ ಒಂದು ರೂಪಾಯಿಯ ನಾಣ್ಯವನ್ನ ರೈಲಿನ ಹಳಿಯ ಮೇಲೆ ಇಟ್ಟು ಬಂದೆ. ರೈಲಿಗಾಗಿ ಕಾದೆ. ಸ್ವಲ್ಪ ಹೊತ್ತಾದ ಮೇಲೆ ರೈಲು ಹಳಿಯ ಮೇಲೆ ಸಾಗಿತು. ರೈಲು ಹೋದ ನಂತರ ಆ ನಾಣ್ಯಕ್ಕೆ ಹುಡುಕಿದೆ. ಸಿಗಲೇ ಇಲ್ಲ. ಎಷ್ಟೇ ಹುಡುಕಾಡಿದರೂ ಅದು ಸಿಗಲೇ ಇಲ್ಲ.
..................................................