......................

ನಿನ್ನ ಬಸುರಿನ ಹಾರೈಕೆ ದೊಡ್ಡದು ಕಣೇ
ನನ್ನನ್ನೇ ಹೊಟ್ಟೆಯೊಳಗಿಟ್ಟುಕೊಂಡು ಸಲಹತೀ
ನಾ ಒದ್ದರೂ ಖುಷಿಪಡ್ತೀಯ ಮಗೂನ ಆಟ ಅಂತ
ನನಗೆ ಪಾಪ ಪ್ರಜ್ಞೆ ಕಾಡುತ್ತೆ
ಎಂದಿಗೂ ನೀನು ನನ್ನ ಪ್ರೇಯಸಿ ಆಗಲಿಲ್ಲ ಆಗಲಾರೆ
ನನ್ನ ಅಮ್ಮ ಕಣೇ ನೀನು

.........................

ಶೌಚಕ್ಕೆ ಹೋದಾಗ ಕೈ-ಕಾಲು ತೊಳೆದು ಬರ್ತೇವೆ
ಮಲ ಒಳಗಿದ್ದಾಗ ನಾವೆ ಜೀರ್ಣಿಸಿಕೊಂಡದ್ದು
ಹೊರಗೆ ಬಂದರೆ ಗಲೀಜು ಅಸಹ್ಯ
ಒಂದಾ ಕೈ ಕಾಲು ತೊಳೆದು ಬರೋದನ್ನೇ ಬಿಡಬೇಕು
ಇಲ್ಲವಾ ಒಳಗಿದ್ದಾಗಲೂ ತೊಳೀಬೇಕು
ಶಬ್ದ ಹಾಗು ಮಲ ಎರೆಡೂ ಒಂದೇ ರೀತಿ
ಇಲ್ಲಿ ತೊಳೆದು ಅಲ್ಲಿ ಬಿಡ್ತೀನಿ ಅನ್ನೋನು ಕಿರುಚುತಾನೆ

.....................

ಒಮ್ಮೆ ಒಬ್ಬ ಒಂದು ಅನಾಥ ಮನೆಯೊಂದನ್ನು ಕಂಡು ಒಳಹೊಕ್ಕ
ಗೋಡೆಯ ಮೇಲೆಲ್ಲ ಅರ್ಥವಾಗದ ಮಗುವಿನ ಬರಹಗಳು
ಹಳದಿ ಬಣ್ಣ ತಿರುಗಿದ ಕಿರಾಣಿ ಅಂಗಡಿ ಲೆಕ್ಕದ ಪುಸ್ತಕ ಹಾಗು ದಿನಚರಿ
ಹರಿಸಿನ ಕುಂಕುಮ ಚೆಲ್ಲಿದ್ದ ಸಮಾಧಿ

ಏನನ್ನೋ ಕಂಡವನಂತೆ ತಿಳಿಸಿದಾಗ
ಪುರಾತತ್ವ ಇಲಾಖೆಯವರು ಆಕ್ರಮಿಸಿ
ಪ್ರವೇಶ ಶುಲ್ಕವನ್ನು ನಿಗದಿಗೊಳಿಸಿದ್ದಾರೆ

...........................

ಪ್ರಶ್ನೆ ಉತ್ತರ ಎಂಬೋದು ಸಂಭೋಗದಂತೆ
ಆತ್ಮ ಸಂತೃಪ್ತಿ ಅಥವಾ ಹುಟ್ಟು
ಮತ್ತೆ ಮತ್ತೆ ಬೇಕಾದಾಗ ಚಟ
ಪ್ರಭುದ್ಧ ಭಾಷೇಲಿ ಸಂಬಂಧ

ಹುಟ್ಟು ಸಂಭೋಗಾನ ಮೀರಿದ್ದು   
ತೇಟ್ ಪ್ರಶ್ನೆ ಉತ್ತರಗಳಂತೆ
ತಿರುಕನ ಮನೆಯ ಮುಂದೆ ತಿರುಕ
ತಿರುಬೋಕಿಯ ಸ್ವಗತ

...................

ನನಗೆ ತಿಳಿಯೋಲ್ಲ
ಯಾಕೆ ಜನಗಳು ದೆವ್ವಗಳನ್ನ ಕಂಡರೆ ಹೆದರುತ್ತಾರೆ ಅಂತ,
ದೆವ್ವಗಳು ಅಂದರೆ ಅತೃಪ್ತ ಆತ್ಮಗಳಂತೆ

ನಾನು ಒಂದು ಅತೃಪ್ತ ಆತ್ಮಕ್ಕೆ
ಕಾವಲುಗಾರನಾಗಿ ನಿಯಮಿಸಲ್ಪಟ್ಟಿದ್ದೇನೆ
ಒಂಟಿ ಕಾವಲುಗಾರನಾದುದರಿಂದ
ಬೇಸರ ಕಾಡದಿರಲೆಂದು/ಭಯಪಡಬಾರದೆಂದು
ಈ ಅತೃಪ್ತ್ ಆತ್ಮವು ತೃಪ್ತವಾಗುವ ಬಗೆಯನ್ನ ತಿಳಿಯಲಿಕ್ಕೆ
ನನ್ನ ಜೀವನವನ್ನ ಮೀಸಲಿರಿಸಿದ್ದೇನೆ.