(ಮೊದಲನೆಯ ಬಾಗಕ್ಕೆ ಇಲ್ಲಿ ಕ್ಲಿಕ್ಕಿಸಿ --- ಬಾಂಗ್ಲಾ ದಿನಗಳು : ಅಲೆಮಾರಿಯ ಆರಂಭ )
ಭಾರತದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣವಾದ ಹೌರಾ ನಿಲ್ದಾಣಕ್ಕೆ ಬಂದಿಳಿದಿದ್ದೆವು. ನಮ್ಮ ಸಂಸ್ಥೆಯಲ್ಲಿ ನಮಗೆ ವಾಸಕ್ಕೆ ಮನೆ ಕೊಟ್ಟಿರಲಿಲ್ಲ. ಹೊರಗೆ ಎಲ್ಲಾದರೂ ಬಾಡಿಗೆಗೆ ಮನೆ ಮಾಡಬೇಕಿತ್ತು. ಒಂದು ವಾರಗಳ ಕಾಲ ಸಂಸ್ಥೆಯ ಅಥಿತಿಗೃಹದಲ್ಲಿ ಇದ್ದುಕೊಂಡು ನಂತರ ಸುತ್ತಲಿನ ಜಾಗಗಳಲ್ಲಿ ಹುಡುಕುತ್ತಾ ಹೋದರೆ ಮನೆ ಸಿಗುವುದು ಸುಲಭ ಎಂದು ತೀರ್ಮಾನಿಸಿದ್ದದ್ದು. ಅದರೆ ನಮ್ಮ ಸಂಸ್ಥೆಯಲ್ಲಿ ಆ ಸಮಯಕ್ಕೆ ಸರಿಯಾಗಿ ಯಾವುದೋ ಸಮ್ಮೇಳನ ಇದ್ದುದರಿಂದ ನಮಗೆ ಸಂಸ್ಥೆಯ ಅಥಿತಿಗೃಹದಲ್ಲಿ ಇರಲಿಕ್ಕೆ ಜಾಗ ಸಿಕ್ಕಿರಲಿಲ್ಲ. ನನ್ನ ಪ್ರೊಫೆಸರ್ ಸಹ ನಮ್ಮ ವಾಸಕ್ಕೆ ಬೇರೆ ಬೇರೆ ಕಡೆಗಳಲ್ಲಿ ಪ್ರಯತನಿಸುತ್ತಲೇ ಇದ್ದರು. ಅವರಂತೂ ಅವರ ಮನೆಯಲ್ಲಿ ಬಂದು ಇರಿ ಎಂದು ಹೇಳಿದ್ದರು ಸಹ. ನಮ್ಮ ಸಂಸ್ಥೆಯ ಸುತ್ತಮುತ್ತಲಿನಲ್ಲಿ ಯಾವುದಾರೂ ಹೋಟೇಲ್ ಇರುತ್ತದ ಎಂದು ನೋಡಿದರೆ, ಯಾವುದೂ ಇರಲಿಲ್ಲ. ಇದ್ದದ್ದು ನಮಗೆ ಸರಿಹೊಂದುತ್ತಿರಲಿಲ್ಲ. ನಮ್ಮ ಪ್ರೋಫೇಸರ್ ಹತ್ತಿರವೇ ಇದ್ದ (National sample survey office) NSSO ಅಥಿತಿಗೃಹದಲ್ಲಿ ಐದು ದಿನಗಳ ಮಟ್ಟಿಗೆ ವಸತಿ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿ ನಮ್ಮ ವಸತಿ ನಾವು ಕೋಲ್ಕತ್ತ ಸೇರಿದ ಮಾರನೆ ದಿನದಿಂದ ಆರಂಭವಾಗುವುದಿತ್ತು. ಒಂದು ದಿನದ ಮಟ್ಟಿಗೆ ನಾವು ಎಲ್ಲಿಯಾದರೂ ಉಳಿದುಕೊಳ್ಳಬೇಕಿತ್ತು. ನಮ್ಮ ಇಡೀ ಮನೆಯ ಸಾಮಾನುಗಳನ್ನ ಹೊತ್ತುಕೊಂಡು ಸೌಖ್ಯವಾಗಿ ಇರಬಲ್ಲ ಕ್ಷೇತ್ರ ಯಾವುದು ಎಂದು ಹೊಳೆಯಲೇ ಇಲ್ಲ. ತಕ್ಷಣ ನೆನಪಾದದ್ದು ರಾಮಕೃಷ್ಣರ ಬೇಲೂರು ಮಠ. ನಮ್ಮ ಸಂಸ್ಥೆಯ ಹತ್ತಿರದಲ್ಲೇ ಇದೆ, ಅದೂ ಅಲ್ಲದೆ ಬೇಲೂರಿಗೆ ಹೋಗೆಬೇಕೆಂಬುದು ಬಹುದಿನಗಳ ಕನಸಾಗಿತ್ತು. ರಾಮಕೃಷ್ಣರ ಅವಧೂತ ವ್ಯಕ್ತಿತ್ವಕ್ಕೆ ಬಹಳವಾಗಿ ಆಕರ್ಷಿತನಾಗಿದ್ದವನಾದುದರಿಂದ ಅದುವೇ ಸರಿಯೆನಿಸಿ ಬೇಲೂರು ಮಠಕ್ಕೆ ಮಿಂಚಂಚೆ ಕಳುಹಿಸಿ ವಸತಿಯ ಬಗೆಗೆ ಕೇಳಿದ್ದೆ. ಎಲ್ಲಾ ವಿವರಗಳನ್ನ ಪಡೆದು ವಿವೇಕಾನಂದ ಯಾತ್ರೀನಿವಾಸದಲ್ಲಿ ನಮ್ಮ ವಸತಿಯಾಗಿತ್ತು. ಹಾಗಾಗಿ ಹೌರಾ ರೈಲ್ವೇ ನಿಳಾಣದಿಂದ ನೇರವಾಗಿ ವಿವೇಕಾನಂದ ಯಾತ್ರೀ ನಿವಾಸಕ್ಕೆ ಬಂದಿಳಿದೆವು.
ದೇಹ ದಣಿದಿತ್ತು. ಎರಡು ದಿನಗಳಿಂದ ರೈಲಿನಲ್ಲಿದ್ದ ಕಾರಣ ಒಳ್ಳೆಯ ಊಟ ಸಿಕ್ಕಿರಲಿಲ್ಲ. ಒಳ್ಳೆಯ ಊಟಕ್ಕೆ ಹಪಹಪಿಸುತ್ತಿದ್ದೆವು. ನಾವು ವಿವೇಕಾನಂದ ಯಾತ್ರೀ ನಿವಾಸ ಸೇರಿದಾಗ ಸುಮಾರು ೨. ೩೦ ರ ಹೊತ್ತು. ಹಾಗಾಗಿ ಊಟದ ಸಮಯ ಮುಗಿದಿತ್ತು. ಆದರೂ ನಾವು ಬಂದ ತಕ್ಷಣ ಊಟ ಸಿದ್ದವಿದೆಯೆಂದು ಹೇಳಿ ಊಟ ಮಾಡಿಹೋಗಿ ಎಂದರು. ಎರಡು ದಿನಗಳ ನಂತರ ಊಟ ಮಾಡುತ್ತಿದ್ದೆವು. ದಪ್ಪ ಅಕ್ಕಿ ಅದೇನೋ ಸಾರು. ಹೆಸರು ಗೊತ್ತಿಲ್ಲವಾದರೂ, ಆಹಾ ಎನ್ನಿಸಿತು. ಸಂಜೆ ೩.೩೦ ಕ್ಕೆ ಆಶ್ರಮ ತೆಗೆಯುವುದಾಗಿಯೂ, ನಂತರ ಒಳ ಹೋಗಬಹುದೆಂದು ತಿಳಿಸಿದ್ದರು.
ಸಂಜೆ ೩.೦೦ ಗೆಂಟೆಗೆಲ್ಲಾ ಆಶ್ರಮದ ಕಡೆಗೆ ಹೊರಟೆವು. ಆ ಕ್ಷಣ ರಾಮಕೃಷ್ಣರ ಆಶ್ರಮದಲ್ಲಿ ನಿಂತಿದ್ದೆ. ನಾಲ್ಕುಗಂಟೆಗೆಲ್ಲಾ ಎಲ್ಲಿ ನೋಡಿದರೂ ಮಬ್ಬು ಕತ್ತಲು ಆವರಿಸಿಬಿಟ್ಟಿತ್ತು. ಪಕ್ಕದಲ್ಲ್ಲಿ ಹರಿಯುತ್ತಿದ್ದ ಗಂಗಾ ನದಿ. ಆ ದಡದಲ್ಲಿ ದಕ್ಷಿಣೇಶ್ವರ ಈ ದಡದಲ್ಲಿ ಬೇಲೂರು ಮಠ. ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ನಾವೆಗಳು ಜನರನ್ನು ಹೊತ್ತು ಸಾಗುತ್ತಿತ್ತು. ಎಷ್ಟೋ ಜನ ಪುಟ್ಟ ಪುಟ್ಟ ಮಣ್ಣಿನ ದುರ್ಗಾ ಪ್ರತಿಮೆಗಳನ್ನ ತಂದು ನೀರಿನಲ್ಲಿ ವಿಸರ್ಜಿಸುತ್ತಿದ್ದರು. ಹಾಗೆ ನೀರಲ್ಲಿ ಮುಳುಗಿದ ದುರ್ಗೆ ಕರಗುವುದ ನೋಡುತ್ತಾ ಮುಂದೆ ಆ ದಡದಲ್ಲಿ ಕಾಣುತ್ತಿದ್ದ ಕಾಳಿಯನ್ನ ನೆನೆಯುತ್ತಾ ಪಕ್ಕದಲ್ಲೇ ಇದ್ದ ರಾಮಕೃಷ್ಣರ ಮಂದಿರದೆಡೆಗೆ ದೃಷ್ಥಿ ನೆಟ್ಟು ತಂಪಾದ ಗಾಳಿಯಲ್ಲಿ ಮೈ ಮರೆತಿದ್ದೆ.
ಯಾರು ತಾನೆ ವಿವೇಕಾನಂದರ ಮಾತುಗಳಿಗೆ ಆಕರ್ಷಿತರಾಗುವುದಿಲ್ಲ. ನಾನು ಅವರ ಮಾತುಗಳಿಂದ ಬಹಳ ಆಕರ್ಷಿತನಾಗಿದ್ದೆ. ನಾನು ಕಾಲೇಜಿಗೆ ಹೋಗುವಾಗ ನನಗೆ ವಿವೇಕಾನಂದರ ಪುಸ್ತಕಗಳ ಪರಿಚಯವಾದದ್ದು. ಯಾರು ಕೊಟ್ಟರು ಎಂದು ನೆನಪಿಲ್ಲ. ಆಶ್ರಮದವರು ಒಂದು ಕೆಂಪು ಬಣ್ಣದ ಪುಟ್ಟ ಪುಸ್ತಕ ಪ್ರಕಟಿಸಿದ್ದರು. ಒಂದು ರೂಪಾಯಿಗಳ ಪುಸ್ತಕ. ವಿವೇಕಾನಂದರ ಮುಖ್ಯವಾದ ವಿಚಾರಗಳ ಆಯ್ದ ಭಾಗಗಳ ಕಿರು ಹೊತ್ತಿಗೆ. ನಮ್ಮ ಊರಿನಿಂದ ಕಾಲೇಜಿಗೆ ಹೋಗಲಿಕ್ಕೆ ಬಸ್ಸಿನಲ್ಲಿ ಅರ್ದಗಂಟೆ ಹಿಡಿಯುತ್ತಿತ್ತು. ಪ್ರತೀ ನಿತ್ಯವೂ ಹೋಗುವಾಗ ಬರುವಾಗ ಆ ಪುಸ್ತಕವನ್ನ ಓದುವುದು. ಆ ಪುಸ್ತಕ, ಅದರಲ್ಲಿನ ಮಾತುಗಳು ಅದೆಷ್ಟು ಪ್ರಭಾವಿಸಿದ್ದವೆಂದರೆ, ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತೆಂದೇ ನಾನು ಭಾವಿಸುತ್ತೇನೆ. ಆ ಒಂದು ಪುಸ್ತಕ ಇಲ್ಲದೇ ಹೋಗಿದ್ದರೆ ನನ್ನ ಬದುಕು ಬೇರೆಯ ರೀತಿಯಲ್ಲೇ ಇರುತ್ತಿತ್ತೋ ಏನೋ. ಪದವಿಗೆ ಸೇರಿದ ಮೇಲೆ ಅವರ ಅಷ್ಟೂ ಪುಸ್ತಕಗಳನ್ನ ಓದಿದೆ. ನಂತರದ ದಿನಗಳಲ್ಲಿ, ಓದಿನ ವಿಸ್ತಾರವಾದ ಹಾಗೆ ವಿವೇಕಾನಂದರನ್ನ ಮತ್ತೇ ಓದಬೇಕೆಂದು ಅನ್ನಿಸಲಿಲ್ಲ. ಈ ಬಾರಿ ರಾಮಕೃಷ್ಣರ ಅವಧೂತ ಪ್ರಜ್ಞೆ ಆಕರ್ಷಿಸಿತು ಹಾಗು ಕಾಡಿತು. ಅವರ ಮುಗ್ದವ್ಯಕ್ತಿತ್ವ ಬಹಳವಾಗಿ ಕಾಡಿತ್ತು. ರಾಮಕೃಷ್ಣರೆಂದರೆ ಏನೋ ಆಕರ್ಷಣೆ ಏರ್ಪಟ್ಟಿತ್ತು. ಇಂದು ಇಲ್ಲಿ ಮಠದ ಆವರಣದಲ್ಲಿ ನಿಂತಿದ್ದಾಗ ಎಲ್ಲವೂ ನೆನಪಾಯಿತು.
ನಾವು ಮಾರನೆಯ ದಿನವೇ ನಾವು ಉಳಿಯಬೇಕಿದ್ದ ಅಥಿತಿಗೃಹಕ್ಕೆ ಹೋಗಬೇಕಿದ್ದುದರಿಂದ ಮಠದ ಕಚೇರಿಗೆ ಒಂದು ಪತ್ರವನ್ನ ಹಾಗು ಸ್ವಲ್ಪ ಕಾಣಿಕೆಯನ್ನು ನೀಡಬೇಕಿತ್ತು. ಕಚೇರಿಯಲ್ಲಿದ್ದ ಆಶ್ರಮದ ಸ್ವಾಮೀಜಿ ನಮ್ಮನ್ನು ಮಾತನಾಡಿಸಿ, ನಮ್ಮ ವಿಳಾಸ ನಮ್ಮ ಕೆಲಸ, ಕುಷಲೋಪರಿಗಳನ್ನ ಕೇಳಿ ಪ್ರಸಾದ ನೀಡಿದರು. ನೀವು ದೀಕ್ಷೆ ಪಡೆದ ರಾಮಕೃಷ್ಣರ ಭಕ್ತರ ಎಂದು ಕೇಳಿದರು. ನಾವು ಇಲ್ಲ ಭಕ್ತರಲ್ಲ ಎಂದು ಹೇಳಬೇಕಾಯಿತು. ನಿಜದಲ್ಲಿ ನಾನು ಭಕ್ತನಲ್ಲ. ರಾಮಕೃಷ್ಣರ ಮೇಲೆ ಅಗಾಧವಾದ ಗೌರವ ಇದೆಯಾದರೂ ರೂಡಿಗತವಾದ ಅರ್ಥದಲ್ಲಿ ನಾನು ಅವರ ಭಕ್ತನಲ್ಲ. ಅವರು ಕಂಡ ಸತ್ಯಗಳ ಬಗೆಗೆ ಗೌರವವಿದೆ. ಅವರ ಸತ್ಯವಲ್ಲ ನನ್ನನ್ನು ಆಕರ್ಷಿಸಿದ್ದು, ಹಾಗೆ ಸತ್ಯವನ್ನು ಅವರದೇ ಮಾರ್ಗಗಳಲ್ಲಿ ಹುಡುಕಬೇಕಾದ ಅಗತ್ಯವನ್ನೂ, ಹಾಗೆ ಹುಡುಕಬಹುದಾದ ಸಾದ್ಯತೆಯನ್ನು ತೆರೆದಿರಿಸಿದ್ದಕ್ಕೆ. ಅವರೇ ಹೇಳಿದಂತೆ ಅದೆಷ್ಟು ನಂಬಿಕೆಗಳೋ ಅಷ್ಟು ದಾರಿಗಳು. ಸತ್ಯವು ಸಾಂಸ್ಥಿಕ ರೂಪ ಪಡೆಯುವುದಕ್ಕೂ, ನಿರಂತರ ಚಲನೆಯಲ್ಲಿರುವುದಕ್ಕೂ ನಡುವಿನ ಘರ್ಷಣೆಯಲ್ಲಿರುವಾಗ ಕಾಣುವುದಾದರೂ ಏನನ್ನೂ ಮತ್ತು ಹೇಗೆ ಎಂಬುದು ತಿಳಿಯದಾಯಿತು. ರಾಮಕೃಷ್ಣರಿಗೆ ವಂದಿಸಿ ನಮ್ಮ ಮುಂದಿನ ಪಯಣಕ್ಕೆ ಸಿದ್ದರಾದೆವು.
*******************************
NSSO, ಆ ರೀತಿಯ ಒಂದು ಸಂಸ್ಥೆ ಇದೆ ಎಂದೇ ಮೊದಲ ಬಾರಿಗೆ ತಿಳಿದದ್ದು. ಶ್ರೀ ಮೊಹಲ್ನೋಬಿಸ್ ಅವರು ಸ್ಥಾಪಿಸಿದ, ದೇಶದ ಹಲವಾರು ಯೋಜನೆಗಳಿಗೆ ಪೂರಕವಾದ ದತ್ತಾಂಶಗಳನ್ನು ಶೇಖರಿಸಿ ಕ್ರೋಢೀಕರಿಸಿ ಸೂಕ್ತವಾದ ಸಲಹೆಗಳನ್ನ ಕೊಡುವುದು ಮೇಲ್ನೋಟಕ್ಕೆ ನನಗೆ ತಿಳಿದ ಈ ಸಂಸ್ಥೆಯ ಉದ್ದೇಶ. ಈ ಸಂಸ್ಥೆಯ ಅಥಿತಿಗೃಹದಲ್ಲಿ ನಮಗೆ ಮುಂದಿನ ಐದು ದಿನಗಳಿಗೆ ವಾಸ್ತವ್ಯಕ್ಕೆ ವ್ಯವಸ್ತೆ ಆಗಿತ್ತು. ನನ್ನ ಸಂಸ್ಥೆಯಾದ Indian Statistical Institute ಇಲ್ಲಿಂದ ಬಹಳ ಹತ್ತಿರದಲ್ಲಿತ್ತು. ಹಾಗಾಗಿ ಇಲ್ಲಿ ಇದ್ದುಕೊಂಡು ನನ್ನ ಸಂಸ್ಥೆಗೆ ಹತ್ತಿರದಲ್ಲೇ ಮನೆ ಹುಡುಕುವುದು ಸೂಕ್ತವೆಂದು ಇಲ್ಲಿ ಇರಲು ಒಪ್ಪಿಕೊಂಡಿದ್ದೆ. ಇದೊಂದು ದೊಡ್ಡ ಅಥಿತಿಗೃಹ. ಇದೊಂದು ಸರ್ಕಾರಿ ಅಥಿತಿಗೃಹ. ಯಾವುದೋ ಶತಮಾನದಲ್ಲಿ ಹಾಕಿದ ಕಿಟಕಿಯ ಬಾಗಿಲಿನ ಕರ್ಟನ್ನುಗಳು, ಅದರಲ್ಲಿನ ದೂಳು, ದೊಡ್ಡ ದೊಡ್ಡ ಭೂತಾಕಾರದ ಮೇಜು, ಮಂಚ, ಹಾಸಿಗೆ ಇತ್ಯಾದಿ. ಈ ಚಳಿಯಲ್ಲಿ ಹೊದಿಯಲಿಕ್ಕೆ ಚಾದರವೇ ಇಲ್ಲವೆ ಎಂದು ನೋಡುತ್ತಾ ಹೋದರೆ, ಕಪಾಟಿನಲ್ಲಿರಬುದೆಂದು ತೆರೆದರೆ, ಇದ್ದ ಬದ್ದ ಎಲ್ಲಾ ದೇವರುಗಳೂ ನೆನಪಾಗುವಷ್ಟು ಸೀನು. ಮತ್ತಿನ್ನೇನಿರಬಹುದು ಎಂದು ನೋಡಿದರೆ, ಮೇಲೆ ಸೊಳ್ಳೆ ಪರದೆಯ ಬಾಕ್ಸ್ ಇತ್ತು. ಆ ಸೊಳ್ಳೆ ಪರದೆ ಸೊಳ್ಳೆ ಸಂತತಿ ವಿಕಾಸಗೊಂಡ ಹಂತದಲ್ಲಿ ಆದಿಮಾನವನ್ಯಾರೋ ತಯಾರಿಸಿರಬೇಕು ಎಂದೆನಿಸಿದ್ದಂತೂ ಸತ್ಯ. ಇದೆಲ್ಲದರ ಜೊತೆಗೆ ನಾಲ್ಕು ಅಂತಸ್ತುಗಳ, ಮೂವತ್ತು ನಲವತ್ತು ರೂಮುಗಳ ಈ ಅಥಿತಿ ಗೃಹದಲ್ಲಿ ವಾಸಕ್ಕಿದ್ದ ವ್ಯಕ್ತಿಗಳೆಂದರೆ ನಾವು ಮಾತ್ರ. ಪುರಾತನ ವಸ್ತು ಸಂಗ್ರಹಾಲಯದಲ್ಲಿ ರಾತ್ರಿ ಎಲ್ಲರೂ ಹೋದಮೇಲೆ, ಅಲ್ಲೆ ಕಳೆದುಹೋದ ವ್ಯಕ್ತಿಗಳೆಂತೆ ನಾವು ಅಲ್ಲಿ ವಾಸವಿದ್ದೆವು.
ಇಲ್ಲಿನ ಅಧಿಕಾರಿಗಳು, ಅಡುಗೆ ಮಾಡುವವರು ಹಾಗು ಇತರೆ ಕಾರ್ಮಿಕರು, ಕೋಲ್ಕತ್ತದಲ್ಲಿ ನಮಗೆ ಎದುರಾದ ವ್ಯವಹರಿಸಲೇ ಬೇಕಿದ್ದ ಮೊದಲ ಕೋಲ್ಕತ್ತ ನಿವಾಸಿಗಳು. ನಮ್ಮ ಮೊದಲ ಬೇಟಿಯಲ್ಲಿ, ಯಾರನ್ನೇ ಬೇಟಿಯಾದರೂ ಮುಖದಲ್ಲಿ ಯಾವ ಚಹರೆಯೂ ಇಲ್ಲ. ನಗು, ಬೇಸರ, ಕೋಪ. ಇಲ್ಲ ಯಾವುದೂ ಇಲ್ಲ. ಯಾವ ಪ್ರತಿಕ್ರಿಯೆಯೂ ಇಲ್ಲದೆ ನಮ್ಮ ಮುಖವನ್ನು ಒಂದೇ ರೀತಿ ಕಾಣಬಲ್ಲವರು. ಮೊದ ಮೊದಲು ಇವರು ಮಾತ್ರಾ ಹೀಗೆ ಎಂದುಕೊಂಡಿದ್ದೆ, ನಂತರ ತಿಳಿಯಿತು, ನಾವು ಯಾರನ್ನೇ ಮೊದಲ ಬಾರಿಗೆ ಬೇಟಿಯಾದರೂ ಎಲ್ಲರದ್ದೂ ಒಂದೇ ಪ್ರತಿಕ್ರಿಯೆ. ಸುಮ್ಮನೆ ಮುಖ ನೋಡುವುದು. ನಾವೋ ನೋಡಿದವರಿಗೆಲ್ಲಾ ಹಲ್ಲು ಕಿರಿಯುವುದು. ಆದರೆ, ಇದೇ ಜನ ಒಂದೆರೆಡು ಬಾರಿ ನಮ್ಮ ಅದೇ ಮುಖಗಳನ್ನ ಕಂಡ ನಂತರದ ಸ್ಥಿತಿಯೇ ಬೇರೆ. ಅಥಿತಿಗೃಹದ ಎಲ್ಲಾ ಕೆಲಸಗಾರರೂ ಮಾತಿಗಿಳಿದರು. ಒಬ್ಬರಂತೂ, ನಮಗೆ ಬಂಗ್ಲಾ ಬರುವುದಿಲ್ಲ ಎಂದರೂ, ಇರಲಿ ಬಿಡಿ ನೀವು ಕೇಳಿ ಎಂದು ಬಿಡದೆ ಒಂದು ಗಂಟೆ ತಾನು ಮನೆಗೆ ಹೋಗಬೇಕಾದರೆ ಆಗುವ ಟ್ರಾಫಿಕ್ ಸಮಸ್ಯಯ ಬಗೆಗೆ ಹೇಳಿದರು. ಅಡುಗೆಯವರು ಒಮ್ಮೆ ಬದನೇಕಾಯಿಯ ಪಲ್ಯ ಮಾಡಿದ್ದರು, ಅದನ್ನ ನಾನು ತಿನ್ನುವಹಾಗಿರಲಿಲ್ಲ, ಹಾಗಾಗಿ ತಿನ್ನುವುದಿಲ್ಲ ಎಂದು ಹೇಳಿದ್ದೆ. ನಂತರ ನಾನು ಏನೇನನ್ನ ತಿನ್ನುವುದಿಲ್ಲ ಎಂದು ತಿಳಿದುಕೊಂಡು ಅದನ್ನು ಹಾಕದೆ ಅಡುಗೆ ಮಾಡಿಕೊಡುತ್ತಿದ್ದರು, ಅದೂ ಬಹು ಪ್ರೀತಿಯಿಂದ, ಬಹಳ ರುಚಿಯಿಂದ. ನಾವು ಅಥಿತಿಗೃಹ ಬಿಟ್ಟು ಹೋಗುವಾಗಲಂತೂ ತಮ್ಮ ಮನೆಯವರನ್ನೇ ಬೇರೆ ಊರಿಗೆ ಕಳುಹಿಸುತ್ತಿದ್ದೇವೆ ಎಂಬಂತೆ, ರಿಕ್ಷ ತಂದು ಎಲ್ಲಾ ರೀತಿಯ ಸಹಾಯ ಮಾಡಿ ಬೀಳ್ಕೊಟ್ಟಿರು. ಅಷ್ಟೇ ಅಲ್ಲದೆ ಮತ್ತೇ ಬಂದು ಸ್ವಲ್ಪ ದಿವಸ ಇದ್ದು ಹೋಗಿ ಎನ್ನುವುದೆ. ಯಾರು ಬೇಕಾದರೂ ಯಾವಾಗಬೇಕಾದರೂ ನಮ್ಮ ಸನಿಹದ ಬಂದುಗಳಾಗಬಲ್ಲ ಸಾದ್ಯತೆ ತಿಳಿಯದ ದೈರ್ಯವನ್ನು ನೀಡಿತ್ತು.
ಇನ್ನು ನಾವು ಮನೆ ಹುಡುಕಿದ ನಮ್ಮ ಸಾಹಸದ ಕತೆ. ಯಾವಾಗಲೂ ಹಾಸ್ಟಲ್ಗಳಲ್ಲೇ ಇದ್ದು ಬೆಳೆದ ನನಗೆ ಮೊಟ್ಟ ಮೊದಲನೆ ಬಾರಿಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಿದ್ದೆ ಒಂದು ದೊಡ್ಡ ಕತೆ. ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಆ ಟ್ರಾಫಿಕ್ ಅಲ್ಲಿ ಓಡಾಡಿ ಮನೆಗೆ ಬರುವಷ್ಟರಲ್ಲಿ ನನ್ನ ಹೆಣಬಿದ್ದಿರುತ್ತಿತ್ತು. ಅದಕ್ಕಾಗಿ ಮುಂದೆ ಎಲ್ಲೇ ಮನೆ ಮಾಡಿದರೂ ಅದು ಸಂಸ್ಥೆಗೆ ನಡೆದು ಹೋಗುವಷ್ಟು ಸನಿಹದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದ್ದೆ. ಚೆನ್ನೈಗೆ ಬಂದಾಗ ಬಹಳ ಸುಲಭದಲ್ಲಿ ಮನೆ ಸಿಕ್ಕಿತ್ತು. ಚೆನ್ನೈ ಅಲ್ಲಿ ನಮ್ಮ ಸಂಸ್ಥೆಯ ಆಸುಮಾಸಿನ ರಸ್ತೆಗಳಲ್ಲಿ ಓಡಾಡಿದರೆ ಮನೆ ಮುಂದೆ ಮನೆ ಖಾಲಿ ಇದೆ ಎಂಬೊ ಬೋರ್ಡ್ ನೋಡಿ, ಹಲವು ಮನೆಗಳನ್ನ ವಿಚಾರಿಸಿ ಒಂದು ಮನೆ ಇಷ್ಟವಾಗಿ, ಬೆಳಗ್ಗೆ ಹೋಗಿದ್ದವರು ಮದ್ಯಾನ್ಹದ ವೇಳೆಗೆಲ್ಲಾ ಮನೆ ಸಿಕ್ಕಿ ಆಗಿತ್ತು. ಆದರೆ ಕೋಲ್ಕತ್ತದಲ್ಲಿ ಬೇರೆಯದೇ ಪರಿಸ್ಥಿತಿ. ಮೊದಲನೆಯದಾಗಿ ಇಲ್ಲಿ ಮನೆಗಳ ಮುಂದೆ ಬೋರ್ಡ್ ಹಾಕಿರುವುದಿಲ್ಲ. ಮತ್ತೆ ಅಂತರ್ಜಾಲದಲ್ಲಿ ತಿಳಿಸುವವರೂ ಬಹಳ ಕಡಿಮೆ. ಹಾಗಾಗಿ ದಲ್ಲಾಳಿಯನ್ನ ಬೇಟಿಯಾಗಲೇ ಬೇಕು. ಅವರೋ ಎರಡು ತಿಂಗಳ ಬಾಡಿಗೆಯಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದು ಅರ್ಥವಾಗದ ಲೆಕ್ಕಾಚಾರ. ಜೊತೆಗೆ ನಮಗೆ ಅದು ತೀರ ಹೆಚ್ಚಿನ ಹಣ. ಅಷ್ಟೊಂದು ಕೊಡಲಿಕ್ಕೆ ಇಷ್ಟವೂ ಇರಲಿಲ್ಲ, ಹಣವೂ ಇರಲಿಲ್ಲ. ಸಂಶೋದನ ವಿದ್ಯಾರ್ಥಿಯ ಬಳಿ ಅದೆಷ್ಟು ಹಣ ಇದ್ದೀತು. ಇವೆಲ್ಲ ತಿಳಿದ ನನ್ನ ಪ್ರೊಫೆಸರ್ ಅವರ ಪರಿಚಯದವರ ಬಳಿ ಮಾತನಾಡಿ, ಒಬ್ಬ ದಲ್ಲಾಳಿಯನ್ನ ಗೊತ್ತುಮಾಡಿದ್ದರು. ಅವರು ಕಡಿಮೆ ಹಣಕ್ಕೆ ಮನೆ ತೋರಿಸುವುದೆಂದು ನಿರ್ದಾರವಾಗಿತ್ತು. ನಮಗೆ ಬಂಗ್ಲಾ ಬಾರದ ಕಾರಣ, ಜೊತೆಗೆ ಒಬ್ಬರು ಇಲ್ಲಿನವರು ಇರಲಿ ಎಂದು ನನ್ನ ಗೆಳಯನನ್ನೂ ಜೊತೆಗೆ ಕರೆದೆವು. ಹೀಗೆ ಎಲ್ಲಾ ಸರಂಜಾಮುಗಳೊಂದಿಗೆ ಮನೆ ಹುಡುಕುವ ಯುದ್ಧಕ್ಕೆ ಸನ್ನದ್ಧರಾದೆವು.
ನಮ್ಮ ದಲ್ಲಾಳಿ ಮೊದಲನೆಯ ಮನೆಗೆ ಕರೆದುಕೊಂಡು ಹೋದರು. ಅದು ಹೇಗೆ ನಮ್ಮನ್ನ ಕರೆದುಕೊಂಡು ಹೋದರು ಎಂದರೆ ಪದ್ಮವ್ಯೂಹವನ್ನ ಬೇದಿಸುವುದನ್ನ ಅಭಿಮನ್ಯುಗೆ ಹೇಳಿಕೊಟ್ಟಿದ್ದರಂತಲ್ಲ ಹಾಗೆ. ಇಲ್ಲಿ ಅಷ್ಟೊಂದು ಗಲ್ಲಿಗಳು. ಎಲ್ಲಾ ಗಲ್ಲಿಗಳೂ ಒಂದೇ ರೀತಿ. ನಾವು ಎಲ್ಲಿ ಹೋದೆವು ಎಂದು ಸ್ವಲ್ಪವೂ ತಿಳಿಯದಂತೆ ನಾವು ನೋಡಬೇಕಿದ್ದ ಮನೆಯ ಮುಂದೆ ಬಂದು ನಿಂತಿದ್ದೆವು. ಒಂದು ಖುಷಿಯ ಸಂಗತಿ ಎಂದರೆ ಕೋಲ್ಕತ್ತದಲ್ಲಿ ಬಾಡಿಗೆ ಕಡಿಮೆ. ಬೇರೆ ಕಡೆಗೆ ಮುಖ್ಯವಾಗಿ ಬೆಂಗಳೂರಿಗೆ ಹೋಲಿಸಿದರಂತೂ ಇಲ್ಲಿ ಬಹಳ ಕಡಿಮೆ. ಆದರೂ ನಮಗೆ, ಇರುವ ಇಬ್ಬರಿಗೆ ಒಂದು ಬಿ ಹೆಚ್ ಕೆ ಮನೆ ಸಾಕಾಗಿತ್ತು. ಕೆಳಮಹಡಿಯಲ್ಲಿದ್ದ ಮನೆ. ಹೊರಗೆ ಎಂತಹ ಬೆಳಕಿದ್ದರೂ ಒಳಗೆ ಬರೀ ಕತ್ತಲು. ಬೆಳಕಿಲ್ಲದ ಮನೆಗಳಲ್ಲಿನ ವಾಸದ ಹಿಂಸೆ ಬೆಂಗಳೂರಿನಲ್ಲಿದ್ದಾಗಲೆ ಅನುಭವಿಸಿದ್ದೆವು. ಏನೇ ಆದರೂ ಈ ಕತ್ತಲ ಗುಹೆಗಳಂತಹ ಮನೆಗಳಲ್ಲಿ ವಾಸಿಸಬಾರದು ಎಂದು ತೀರ್ಮಾನಿಸಿದ್ದೆವು. ಹಾಗಾಗಿ ಮೊದಲ ಮನೆಯೇ ನಮಗೆ ಇಷ್ಟವಾಗದೇ ಹೋಯಿತು. ಈ ದಲ್ಲಾಳಿ ಒಮ್ಮೆಗೆ ಒಂದಿಷ್ಟು ಮನೆಗಳನ್ನ ತೋರಿಸುತ್ತಾನೆ ನಂತರ ನಾವು ಅದರಲ್ಲಿ ಸರಿಯಾದದ್ದನ್ನು ಆಯ್ಕೆಮಾಡಿಕೊಳ್ಳಬಹುದು ಎಂದು ಕೊಂಡಿದ್ದರೆ, ಅಲ್ಲಿ ನಡದದ್ದೆ ಬೇರೆ. ಒಂದು ಮನೆ ತೋರಿಸಿದವನೇ ಆತ ಹೊರಟೇ ಹೋದ. ನಾಳೆಯೋ, ನಾಡಿದ್ದೋ ಸಮಯ ಬಂದಾಗ ಮತ್ತೊಂದು ಮನೆ ತೋರಿಸುತ್ತೇನೆ ಎಂದು ಹೇಳಿ ಹೊರಟೇ ಬಿಟ್ಟ. ಏನು ಮಾಡುವುದೋ ತಿಳಿಯದಾಗಿತ್ತು. ನನ್ನ ಸಂಶೋಧನಾ ಕೆಲಸಗಳು ಒಂದು ವಾರದಿಂದ ಹಾಗೆಯೇ ಉಳಿದಿದ್ದವು. ಏನೂ ಓದಿರಲಿಲ್ಲ. ಆದಷ್ಟು ಬೇಗ ನಾವು ಮನೆ ಹುಡುಕಿ ನಮ್ಮ ಕೆಲಸಗಳನ್ನ ಆರಂಭಿಸಬೇಕಿತ್ತು. ಹಾಗಾಗಿ ನಾವು ಸಹ ಏನಾದರೂ ಮಾಡಲೇ ಬೇಕಿತ್ತು.
ಇದ್ದ ಒಂದೇ ಆಯ್ಕೆ ಎಂದರೆ ಅಂತರ್ಜಾಲದಲ್ಲಿ ಮನೆ ಹುಡುಕುವುದು. ಅಂತರ್ಜಾಲದಲ್ಲಿ ಎಲ್ಲಿಯೂ ೧ ಬಿ ಹೆಚ್ ಕೆ ಮನೆ ಇರಲಿಲ್ಲ. ಇದ್ದದ್ದೆಲ್ಲಾ ೨ ಅಥವಾ ೩ ಬಿ ಹೆಚ್ ಕೆ ಮನೆಗಳೆ. ನಾವು ಯಾವ ಪರಿಸ್ತಿತಿಗೆ ತಲುಪಿದ್ದೆವೆಂದರೆ, ಯಾವುದೋ ಒಂದು ಮನೆ ಸಿಕ್ಕರೆ ಸಾಕಿತ್ತು. ಹೋಗಿ ನಮ್ಮದು ಎಂದು ಮಲಗಿದರೆ ಸಾಕಿತ್ತು. ಹಾಗಾಗಿ ಅಂತರ್ಜಾಲದಲ್ಲಿದ್ದ ಮನೆಗಳಲ್ಲಿ ನಮ್ಮ ಸಂಸ್ಥೆಯ ಹತ್ತಿರದ ಮನೆಗಳನ್ನ ಗುರುತು ಹಾಕಿಕೊಂಡು ಅವರಿಗೆ ಫೋನ್ ಮಾಡಿ ವಿಳಾಸ ತೆಗೆದುಕೊಂಡು ಹೊರಟೆವು.
ಮೊದಲನೆ ಮನೆ ನಾಲ್ಕು ಮಹಡಿ ವಸತಿ ಸಮುಚ್ಚಯದಲ್ಲಿ ನಾಲ್ಕನೆ ಅಂತಸ್ತಿನಲ್ಲಿತ್ತು. ಹೊಸದಾಗಿ ಕಟ್ಟಿದ ಸಮುಚ್ಚಯ, ಇಡೀ ಸಮುಚ್ಚಯದಲ್ಲಿ ಸುಮಾರು ೧೫ ರಿಂದ ೨೦ ಮನೆಗಳಿರಬಹುದು. ಹಲವಾರು ಮನೆಗಳಲ್ಲಿ ಇನ್ನೂ ಯಾರು ಬಂದಿಲ್ಲವಾದುದರಿಂದ ಖಾಲಿ. ಒಂದೋ ಎರೆಡರಲ್ಲೋ ಜನ ವಾಸ. ಈ ಮನೆಯಲ್ಲೇನೋ ಗಾಳಿ ಬೆಳಕು ಎಲ್ಲಾ ಸರಿ ಇತ್ತು. ಆದರೆ …। ನಮ್ಮದೇ ಕಡೆ ಮನೆ, ಇಡೀ ಸಮುಚ್ಚಯದಲ್ಲಿ ಯಾರೂ ಇಲ್ಲ. ಇಲ್ಲಿ ಕೂಗಿದರೂ, ಯಾರಾದರೂ ಸತ್ತರೂ ಯಾರಿಗೂ ತಿಳಿಯೋಲ್ಲ. ಇನ್ನು ಉಳಿದಂತೆ ಮನೆಯಲ್ಲಿ ಪೂರ ವಿದ್ಯುತ್ ಕಾಮಗಾರಿ ಮುಗಿದಿಲ್ಲ. ಬಾಗಿಲು, ಕಿಟಕಿ ಹೀಗೆ ಇನ್ನೂ ಕೆಲಸ ಬಾಕಿ ಇದೆ. ಆದರೂ ಬಾಡಿಗೆಗೆ ಕೊಡುತ್ತಾರಂತೆ, ಆದರೆ ಇಡೀ ಒಂದು ತಿಂಗಳು ಕೆಲಸಗಾರರು ಅವರಿಗೆ ಸಮಯ ಬಂದಾಗ ಬಂದು ಕೆಲಸ ಮಾಡುತ್ತಾರಂತೆ. ಜೊತೆಗೆ ವಿದ್ಯುತ್ ಉಪಕರಣಗಳನ್ನ ನಾವೇ ಕೊಂಡು ತರಬೇಕಂತೆ. ಆಗುವುದಿಲ್ಲ ಎಂದು ಅಲ್ಲಿಂದ ಓಡಿದೆವು. ಮೊದಲನೇ ಸೋಲಿಗೆಲ್ಲ ನಾವು ಬಗ್ಗುವವರೆ. ಖಂಡೀತ ಇಲ್ಲ. ಚಲೋ ಎಂದು ಎರಡನೆ ಮನೆ ಕಡೆ ನಡೆದವು. ಮನೆ ಮಾಲೀಕರು ಅವರ ತಮ್ಮ ಅಲ್ಲಿಯೇ ವಾಸಿಸುತ್ತಿದ್ದಾರೆಂದು ಹೇಳಿ ಅವರ ದೂರವಾಣಿ ಸಂಖ್ಯೆ ಕೊಟ್ಟು ಬೇಟಿಯಾಗಿ ಮನೆ ನೋಡಿ ಎಂದರು. ನಾವೂ ವಿಳಾಸ ಹುಡುಕಿ ಹೊರಟೆವು. ಇದೊಂದು ಹಳೆಯ ಕಾಲದ ಮನೆ. ನಾಲ್ಕೈದು ಮನೆಗಳ ಸಮುಚ್ಚಯ. ಗಾಳಿ ಬೆಳಕು ಎಲ್ಲವೂ ಚನ್ನಾಗಿತ್ತು. ಆದರೆ ತೀರ ದೊಡ್ಡ ಮನೆ. ಹಣವೇನೋ ಕಡಿಮೆ , ಆದರೆ ಮೂರು ರೂಮುಗಳ ಮನೆ. ತೀರಾ ದೊಡ್ಡದು. ದೊಡ್ಡ ದೊಡ್ಡ ರೂಮುಗಳು. ಮಾತಾಡಿದರೆ ಪ್ರತಿಧ್ವನಿಸುತ್ತೆ. ಒಳ್ಳೆ ಚತ್ರದ ರೀತಿ ಇದೆ. ಏನು ಮಾಡುವುದು ಇಬ್ಬರು ಇಷ್ಟು ದೊಡ್ಡ ಮನೆಯಲ್ಲಿ, ಅದೂ ನಮ್ಮಲ್ಲಿ ಏನೂ ಸಾಮಾನುಗಳೂ ಇಲ್ಲ. ಇರುವ ಇಬ್ಬರು ಮನೆಯಲ್ಲಿದ್ದೂ ಎಲ್ಲಿದ್ದೀ ಎಂದು ಫೋನ್ ಮಾಡಿ ಹುಡುಕಬೇಕಾದ ಪರಿಸ್ಥಿತಿ. ಅದೂ ಯಾಕೋ ಸರಿ ಹೋಗಲಿಲ್ಲ. ಅಷ್ಟು ಹೊತ್ತಿಗೆಲ್ಲಾ ಮನಸ್ಸು, ದೇಹ ಎರಡೂ ದಣಿದಿತ್ತು. ಕಡೆಯದಾಗಿ ಇನ್ನೊಂದು ಮನೆಯನ್ನ ನೋಡುವಷ್ಟು ಶಕ್ತಿ ಇತ್ತು. ಹಾಗಾಗಿ ಇರೋ ಬರೋ ಶಕ್ತಿಯನ್ನೆಲ್ಲಾ ಒಟ್ಟು ಗೂಡಿಸಿ ಆ ಮನೆಯನ್ನೂ ನೋಡಿಬಿಡೋಣ ಎಂದು ಹೊರಟೆವು. ಅಲ್ಲೂ ಬಹಳಷ್ಟು ಸಂಗತಿಗಳು ಅದೇ ರೀತಿ ಮುಂದುವರೆದಿತ್ತು. ತೀರಾ ದೊಡ್ಡ ಮನೆ, ಅದರ ಜೊತೆಗೆ ಬೆಳಕಿಲ್ಲದ ಅಡುಗೆ ಮನೆ, ಎಲ್ಲವೂ ಸೇರಿದಂತೆ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ. ಸಾಕಾಗಿತ್ತು ನಮ್ಮ ಒಟ್ಟು ಶಕ್ತಿಯನ್ನ ಅಳಿಸಲಿಕ್ಕೆ. ನಾವು ದಣಿದಿದ್ದೆವು. ಕಡೆಗೆ ದಲ್ಲಾಳಿ, ನೀನೆ ಶರಣು ಎಂದು ಹೇಳಿ. ಮತ್ತೇ ಅವರಿಗೆ ಕರೆ ಮಾಡಿ ಬೇಡಿಕೊಂಡಾಗ, ಮರು ದಿನ ಮತ್ತೊಂದು ಮನೆಯನ್ನ ತೋರಿಸಲಿಕ್ಕೆ ಒಪ್ಪಿಕೊಂಡರು. ಅವರು ತೋರಿಸಿದ ಮನೆ ಎಲ್ಲಾ ರೀತಿಯಿಂದಲೂ ನಮಗೆ ಹಿಡಿಸಿತು ಎಂದು ಹೇಳಲಾರೆವಾದರೂ, ನಾವು ದಣಿದಿದ್ದೆವು. ಹಾಗಾಗಿ ನಮಗೆ ಹಲವು ರೀತಿಗಳಿಂದ ಹೊಂದಿಕೆಯಾಗುತ್ತಿದ್ದುದರಿಂದ ಆ ಮನೆಯನ್ನು ಒಪ್ಪಿದೆವು. ಕಡೆಗೆ ಮನೆ ದೊರೆತು ಅದೇ ದಿನ ಸಂಜೆ ಹೊಸ ಮನೆಗೆ ಬಂದು ಸಂಪೂರ್ಣವಾಗಿ ಬಂಗ್ಲಾ ನಿವಾಸಿಗಳಾದೆವು.
ಆ ರಾತ್ರಿ ಮಲಗಿರುವಾಗ ಹಲವು ಸಂಗತಿಗಳು ಕಾಡುತ್ತಿದ್ದವು. ಈ ಅಲೆಮಾರಿತನದಲ್ಲು ನಮಗೆ ಒಂದು ದೈರ್ಯವೆಂದರೆ ನಮ್ಮದು ಎಂದು ಒಂದು ನೆಲೆಯಿರುವುದು. ನಮ್ಮದು ಎಂದು ಒಂದು ಮನೆ, ಒಂದು ಊರು, ಪರಿಚಿತ ಜನ, ಸ್ನೇಹಿತರು ಎಲ್ಲಾ ಇರುವುದು. ಈ ನೆಲೆಗೆ ಕಾರಣರು ಯಾರು? ಅದೆಷ್ಟು ಜನರ ಋಣ. ಅಂದು ಮಲಗಿದ್ದಾಗ ಯಾರ ಯಾರೋ ನೆನಪಾಗುತ್ತಿದ್ದರು. ಕಾಲೇಜಿಗೆ ಹೋಗುವಾಗ ಕಾಲೇಜಿನ ಹುಡುಗರೆಂದು ಮೂರು ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಕೊಡುತಿದ್ದ ದಾರಿ ಬದಿ ಗಾಡಿಯಲ್ಲಿ ತಿಂಡಿ ಮಾರುವವ, ಒಂದು ರೂಪಾಯಿ ತೆಗೆದುಕೊಂಡು ನಿತ್ಯ ಕಾಲೇಜಿಗೆ ತಲುಪಿಸುತ್ತಿದ್ದ ಬಸ್ಸಿನ ಕಂಡಕ್ಟರ್, ಉಚಿತವಾಗಿ ಮನೆಪಾಠ ಹೇಳಿಕೊಟ್ಟ ಜ್ಯೋತಿ ಮೇಡಂ , ಹಸಿದು ಬಂದಿದ್ದಾಗಲ್ಲಾ ಹೊಟ್ಟೆ ತುಂಬ ಏನಾದರೂ ಮಾಡಿಕೊಡುತ್ತಿದ್ದ ಐತಾಳ್ ಅಂಕಲ್ ಹಾಗು ಆಂಟಿ, ಏನೇ ಬೇಕೆಂದರೂ ಇಲ್ಲ ಎನ್ನದೆ ಕೊಡಿಸುತ್ತಿದ್ದ ಗೆಳೆಯ ನಂದಿ, ರಾತ್ರಿ ಎಷ್ಟೇ ಹೊತ್ತಾದರೂ ರೂಮಿಗೆ ಕರೆದುಕೊಂಡು ಹೋಗಿ ಅಡುಗೆ ಮಾಡಿ ನಿತ್ಯ ಬಿಸಿ ಬಿಸಿ ಊಟ ಹಾಕುತ್ತಿದ್ದ ಗೆಳೆಯ ಮೂರ್ತಿ, ಮದ್ಯಾನ್ಹ ತಿನ್ನಲಿಕ್ಕೆಂದು ಮನೆಯಿಂದ ಏನಾನ್ನಾದರೂ ಮಾಡಿಕೊಂಡು ಬರುತ್ತಿದ್ದ ಗೆಳತಿಯರು, ಕೇಳಿದಾಗ ಇಲ್ಲ ಅನ್ನದೆ ಅವರೇ ಕೊಡುತ್ತಿದ್ದ ಸಾಲಗಳು. ಎಲ್ಲವೂ ನೆನಪಾಯಿತು. ಯಾಕೋ ಎಲ್ಲವನ್ನೂ ಬರೆಯಬೇಕೂ ಎಂದೆನಿಸಿತು. ನೆನಪುಗಳು, ಎಲ್ಲಿಯೋ ಕಳೆದುಹೋದರೆ ಎಂಬ ಭಯವೂ ಕಾಡಿತು. ಈಗ ಎಲ್ಲರೂ ಎಲ್ಲೋ ಇದ್ದಾರೆ. ಹಲವರು ನನ್ನ ಸಂಪರ್ಕದಲ್ಲಿಯೂ ಇಲ್ಲ. ಎಲ್ಲರನ್ನೂ ನೆನೆಯಬೇಕೆನಿಸಿತು. ಜಿ ಎಸ್ ಶಿವರುದ್ರಪ್ಪನವರ ಈ ಕವನದ ಸಾಲುಗಳು ಅದೆಷ್ಟು ಸರಿಯೆಂದೆನಿಸಿತು
ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?