.....

೦೧.
ರಗ್ಗು ಹೊದ್ದು ಮಲಗಿರುವುದೇ?
ಪರಮಹಂಸರಿಗೆ ಮಲ್ಲಿಗೆ

ವಾಸನೆ
ಹೊಂದುವುದೆ?

೦೨.
ರೈಲು
ಒಮ್ಮೆಗೇ ಹೊಗೆ ತುಂಬಿಕೊಂಡು
ನಿಂತುಹೋಯಿತು,
ಜನರು ಗೊತ್ತಲ್ಲ.
ಬಾಳೇಕಾಯಿ ಬಜ್ಜಿ ಮಾರುವವನು
ಕರ್ತವ್ಯ ಪ್ರಙ್ಞೆ ಮರೆತಿರಲಿಲ್ಲ.

೦೩.
ರೈಲು ನಿಲ್ದಾಣದಲ್ಲಿ ಹಳಿಯ ಪಕ್ಕ
ಓಡಾಡುತ್ತಿದ್ದ ಇಲಿಗಳಿಗೆ
ಯಾಕೆ ಇಷ್ಟು ಜನ ಓಡಾಡುತ್ತಾರೆ
ಎಂಬುದು
ಘಟರವನ್ನು ದಾಟುವಾಗೆಲ್ಲಾ
ಕಾಡುತ್ತಿದ್ದ ಪ್ರಶ್ನೆ

೦೪.
ವಿಙ್ಞಾನಿ ಕಲಾವಿದನಾಗಿ
ಊರಿಂದ ಹೊರಡುವ ಬಸ್ಸುಗಳಿಗೆಲ್ಲ
ಹೆಸರುಗಳನ್ನು
ಬರೆದುಕೊಡುತ್ತಿದ್ದ

೦೫.
ಒಂದು ಬುಡ ಕಡಿದ ಮರ
ಬುದ್ಧನ ಸ್ಥೂಪದ ಪಕ್ಕ
ಹೊತ್ತು ಮುಳುಗುವ ಹೊತ್ತು
ಒಂದಿಷ್ಟು ಸದ್ದು
ಅಲ್ಲೊಂದಿಷ್ಟು ವಿಚಿತ್ರ ಕೋತಿಗಳು
ಆಟವಾಡುತ್ತಿದ್ದವು.






ಹಳೆಯ ಮೊಳೆ ಹಾಗೂ ಹೊಸ ಮದುವೆ : ಒಂದು ಉಪಮೆ

      


ಹಾಗಾಗಿ ಮೊಳೆಯೇ
ಇದು ನಿನ್ನದೇ ತಪ್ಪೆಂದು ತೀರ್ಪನ್ನಿರಿಸಿದ್ದಾರೆ

ಆಗಿದ್ದಿಷ್ಟು

ಹೆಣ್ಣನ್ನು ಮನೆ ತುಂಬಿಸಿಕೊಳ್ಳುವಾಗ
ಹೊಸಲ ಮೇಲೆ ಕಾಸನ್ನಿಟ್ಟು ಮೊಳೆ ಹೊಡಿಸುವುದು
ಸಂಪ್ರದಾಯ

ಹೆಣ್ಣು ಗಂಡು ಅದೆಷ್ಟೇ ಪ್ರಯತ್ನಿಸಿದರೂ
ಅಂದು ಮೊಳೆ ಹೊಡೆಯುವುದು ಕಷ್ಟವಿತ್ತು
ಸುತ್ತಿಗೆ ಸರಿಯಿರಲಿಲ್ಲ ಮೊಳೆ ಚೂಪಿರಲಿಲ್ಲ ಕಾಸು ಗಟ್ಟಿಯಿತ್ತು
ಹುಡುಗ ಹುಡುಗಿ ದಣಿದಿದ್ದರು
ಇತ್ಯಾದಿ ಇತ್ಯಾದಿ

ಬಲ ಬಿಟ್ಟು ಹೊಡೆದಾಗ
ಮೊಳೆ ಹೊಸಲಿಗೆ ತಾಗುತ್ತಲೆ
ಗಂಡಿನ ಬೆರಳಿಗೂ - ಹೆಣ್ಣಿನ ಬೆರಳಿಗೂ ತಾಗಿ
ಇಬ್ಬರ ರಕ್ತವನ್ನೂ ಬೆರೆಸಿ
ಹೊಸಲಿಗಿಳಿದಿತ್ತು

ಮಾರನೇ ದಿನದಿಂದ
ಹುಡುಗ  ಹುಡುಗಿ
ಎಲ್ಲರೂ
ರಕ್ತ ಬಳಿದ ಹೊಸಲನ್ನು ದಾಟುತ್ತಲೇ ಸಂ
ಸಾರ ಸಾಗಿಸುತ್ತಿದ್ದರು

ಮೊದಲಿಗೆ ಬೆರಳಿಗೆ ಗಾಯವಾದದ್ದು
ಹುಣ್ಣಾಗಿ
ಮೊದಲು ಬೆರಳು, ಆಮೇಲೆ ಕೈ, ನಂತರ ದೇಹ
ಹೀಗೆ ಪೂರ ಆವರಿಸಿ ಮುಗಿಸುವ ಹೊತ್ತಿಗೆ
ಇಬ್ಬರ ಆಯಸ್ಸೂ

ಈಗ ಹೇಳಿ
ಇದು ಮೊಳೆಯದೇ ತಪ್ಪಲ್ಲವೆ
ಹಾಗಾಗಿ
ಹೊಸಲನ್ನು ಬಿಟ್ಟು ನಾಣ್ಯವನ್ನು ಬಿಟ್ಟು
ಹೊಡೆದ ಸುತ್ತಿಗೆಯನ್ನೂ ಕೈಯನ್ನೂ ಬಿಟ್ಟು
ಮೊಳೆಯನ್ನೇ ಶಿಕ್ಷಿಸಬೇಕಾಗಿ ತೀರ್ಪಾಗಿದೆ.

ಮಗಳು ಕಂಡ ಸಂಖ್ಯೆಗಳು

                                         

ನನ್ನ ಮಗಳಿಗೆ ಸಂಖ್ಯೆಗಳ
ಕೆತ್ತಿದ ಬಿಲ್ಲೆಗಳೆಂದರೆ
ಅವುಗಳೊಡನೆ ಆಡುವುದೆಂದರೆ
ಬಹಳ ಇಷ್ಟ

ಅವಳ ತಾತ
ಒಂದೊಂದೆ ಮರ ಹುಡುಕಿ,
ಕಟ್ಟಿಗೆ ಕಡಿದು ಸಾಪಾಟುಗೊಳಿಸಿ
ನಾಣ್ಯದಾಕಾರದ ಬಿಲ್ಲೆಗಳ ಮಾಡಿ
ಮೊದಲಿಗೆ ಒಂದರಿಂದ ಹತ್ತರವರೆಗೆ ಕೆತ್ತಿದವರು
ನಂತರ ಸೊನ್ನೆಯನ್ನು ಕೆತ್ತಿ ಹತ್ತನ್ನು ಹೊರಗೆಸೆದರು
ನಿತ್ಯ ಸೊನ್ನೆಯಿಂದ ಒಂಬತ್ತರವರೆಗೆ ಕೆತ್ತುವುದು
ನನ್ನಪ್ಪನ ದಿನಚರಿಯಾಗಿತ್ತು.

ನನ್ನ ಮಗಳಿಗೆ ಆ ಸಂಖ್ಯೆಗಳ ಬಿಲ್ಲೆಗಳೊಡನೆ
ಆಡುವುದೆಂದರೆ ಬಹಳ ಇಷ್ಟ

ಮೊದಲಿಗೆ ಸೊನ್ನೆಯಿಂದ ಒಂಬತ್ತರ ಒಂದು ಕಟ್ಟಿನೊಂದಿಗೆ
ಆಟವಾಡುತ್ತಿದ್ದವಳು
ಸಾಲದೆಂದು
ಮತ್ತೂ ಒಂದು ಕಟ್ಟನ್ನು ತೆಗೆದುಕೊಂಡಳು
ಮತ್ತೂ ಒಂದು, ಹೀಗೆ
ಆಡುತ್ತಾ ಹೋದಳು

ಅವಳ ತಾತ ಸತ್ತ

ಹೀಗೆ ಆಯ್ದ ಅಂಕೆಗಳ ಕಟ್ಟಿನೊಳಗಿನ ಸಂಖ್ಯೆಗಳಿಗೇನಾದರೂ
ಸಂಬಂಧವಿದೆಯೆ?
ಮಗಳು ಕೇಳುತ್ತಲೇ ಇದ್ದಳು

ಈಗವಳು ಗಣಿತದ ಸಂಖ್ಯಾಶಾಸ್ತ್ರಙ್ಞೆ
ಅವಳೋ ಅವಳ ಸಂಖ್ಯೆಗಳೋ

ನನ್ನ ಮಗಳಿಗೆ ಸಂಖ್ಯೆಗಳೊಡನೆ ಆಡುವುದೆಂದರೆ ಬಹಳ ಇಷ್ಟ

...

ಅದೊಂದು ಜ್ಯಾಮಿತೀಯ ಆಕಾರ
ಹಿಗ್ಗಿಸಿ ಕುಗ್ಗಿಸಿ ತುಳಿಯಲೂ ಬಹುದು
ಉಳಿಯುವುದಿದೆಯಲ್ಲ
ಅದು ಮತ್ತೆ ಒಂದು ಜ್ಯಾಮಿತೀಯ ಆಕಾರ


ಸ್ವರೂಪ ಬಹಳ ಮುಖ್ಯ
ಇಲ್ಲದಿದ್ದಾಗ ಉಳಿಯುವುದೇನು ಬರೀ ಲೆಕ್ಕಾಚಾರ
ಅದೂ ಸಹ ಹಲವೊಮ್ಮೆ ರಚನೆಯ ಒಳಗೇ ಬರತಕ್ಕದ್ದು
ಹಾಗಾಗಿ ಆಕಾರ ಮುಖ್ಯ
ಇದ್ದರೆ, ತಂದು ಕೂರಿಸುವುದೆಲ್ಲವನ್ನು
ಅದಕ್ಕೊಂದು ಜಾಗ ಬೇಕೇ ಬೇಕು
ಆಕಾರ ನಿರ್ಧಾರವಾದಾಗ ಉಳಿದದ್ದೆಲ್ಲವೂ ಜುಜುಬಿ
ಯಾವ ಅಬ್ಬೇಪಾರಿ ಸಹ ಬಣ್ಣ ಹಚ್ಚಬಲ್ಲ
ರಂಗವನ್ನು ನಿರ್ಮಿಸಬಲ್ಲ ನಾಟಕವಾಡಬಲ್ಲ
ಎರಡು ವಾಕ್ಯಗಳ ನಡುವಿನ ಬಿಡುವಲ್ಲಿ
ರಂಗಮಂದಿರದಲ್ಲದೆಷ್ಟು ನಿಶ್ಯಬ್ದವಡಗಿರುತ್ತೆ
ಅದು ಬೇಕಾದದ್ದು

ಕಡಿದ ಮೀನಿನ ಪ್ಲಾಸ್ಟಿಕ್ ಬಲೆಯ ದಾರಗಳು
ಅದೆಷ್ಟೋ ಬಾರಿ ಕಡಲ ತಡಿಯಲ್ಲಿ ಬಂದು ಬಿದ್ದಿರುತ್ತದಲ್ಲ
ಹಾಗೇ ಇದೂ ಸಹ
ಬಲೆ ನೇಯುವುದು ಅವನ ಹೊಟ್ಟೆ ಪಾಡಾದರೆ
ಮೀನಿಡಿಯುವುದು ಇವನದು
ತಿನ್ನುವುದು ನನ್ನದು

ಸ್ವರೂಪ ಹರಿಯುವುದಿಲ್ಲವೆಂದೇನೂ ಅಲ್ಲ
ರೂಪಾಂತರವನ್ನು ಸಹಿಸುವ ತಂತಿಜಾಲ
ಉಳಿದಿರುತ್ತದೆಯಲ್ಲ ಅದು ಸಲಹಿಬಿಡುತ್ತೆ
ಹಾಗಾಗಿ ನಾನು ಬದುಕಿದ್ದೇನೆ.

...



ಮದರಾಸಿನ ರೈಲ್ವೆನಿಲ್ದಾಣದಲ್ಲಿನ ಪುಸ್ತಕದಂಗಡಿಯ ಮಾಲಿ
"ಮತ್ತೆ ಊರಿಗೆ ಹೊರಟಿರ" ಪ್ರಶ್ನೆಗೆ
ಭಾಷೆ ಬಾರದ ನನ್ನ ತಮಿಳಿನ ಉತ್ತರ ಕೇಳಿ ನಕ್ಕು
ಸುಮ್ಮನಾದರೂ
ಸುಮ್ಮನಿರಲಾರದ ನನ್ನ ಅವಸ್ಥೆ
ಬರಿ ನೆಲದ ಮೇಲೆ ಮಲಗಿದ ರೈಲ್ವೆ ಕೂಲಿಗೆ 
ಬಹುಷಃ ಅರ್ಥವಾಗಿರಬಹುದು

ಅವಳ ಕಳುಹಿಸುವುದೇನೂ ಸಂಭ್ರಮವಲ್ಲ
ಹಾಗೆಂದು ಬೇಸರವೂ ಇಲ್ಲ
ಮದರಾಸಿನ ಸೆಕೆಗೆ ಮೈಯೆಲ್ಲ ಒದ್ದೆ
ತಾಳಲಾರದ ಹಿಂಸೆ

ಗಣಿತದಲ್ಲಿ ಊಹೆಗೆ ಬಹಳ ಮಹತ್ವ
Mathematical conjectures
ತರ್ಕಕ್ಕೆ ರುಜುವಾತಿಗೆ ಕ್ರಮಕ್ಕೆ
ಎಲ್ಲಕ್ಕೂ ತನ್ನದೇ ನಿಯಮ ಬಂಧ
ಅವಳನ್ನು ಕಳುಹಿಸಬಾರದಿತ್ತು
ಔಪಚಾರಿಕ ವ್ಯವಸ್ಥೆಗೆ ಗ್ರಹಿಕೆಯಲ್ಲಿ ಒಮ್ಮತದ ವಿಶ್ವಾಸ
ಎಣಿಸಲಾಗದ ಲೆಕ್ಕಾಚಾರವೂ ಇಲ್ಲಿ ಉಂಟು
ಅವಳನ್ನು ಕಳುಹಿಸಬಾರದಿತ್ತ?

ನಾಳೆ ಪತ್ರ ಬಂದು ಸೇರಬಹುದು
ಸಹಿಗೆ ನನ್ನ ಲೇಖನಿಯಲ್ಲಿ ಮಸಿ
ಉಳಿದಿರುತ್ತದೆಯೆ ಎಂಬುದು
ನಿರ್ದರಿಸಲಾಗದ ಅತಿ ಸರಳ ಹೇಳಿಕೆ




...


ಕ್ರೌರ್ಯಕ್ಕೆ ಎಲ್ಲಾ ಮುಖಗಳೆ
ರಗ್ಗು ಹೊದ್ದಿಸಿ ಬೆಚ್ಚಗೆ
ಕಾಪಾಡುತ್ತಾ ಬಂದ ಅತಿರೇಕಕ್ಕೆಲ್ಲ
ನನ್ನದೂ ಸೇರಿಸುತ್ತಿದ್ದೇನೆ

ಬೆಂಗಳೂರಿನ ಮನೆಯೊಳಗೆಲ್ಲಾದರು ಎರೆಹುಳುವೆ
ನಿಧಾನಕ್ಕೆ ತೆವಳುತ್ತ ನೀರ ಹುಡುಕುತ್ತ
ಒಮ್ಮೆಗೆ ಫಿನಾಯಿಲ್ ಸುರಿದೆವೊ
ವಿಲ ವಿಲ ಒದ್ದಾಡುವುದಿದೆಯಲ್ಲ
ನಾನೇನು ಸಾಮಾನ್ಯನ
ಒದ್ದಾಡುವುದನ್ನು ಕಾಣಲಾಗುವುದಿಲ್ಲ
ಕಾಲು ಹಾಕಿ ತುಳಿದುಬಿಡಬೇಕು
ಯಾವ ಜಾಗದಲ್ಲೂ ಜೀವವಿರಬಾರದು
ಆಗ ಆತ್ಮ ಸಂತೃಪ್ತ

ಕ್ರೌರ್ಯಕ್ಕೆ ಎಲ್ಲಾ ಮುಖಗಳೆ
ಅವಳಿಗೆ ಎರೆಹುಳುವೆಂದರೆ ಬಹಳ ಇಷ್ಟ
ಮಣ್ಣು ಹಾಕಿ ಗಿಡ ನೆಟ್ಟು ಹೂವ ನೋಡಬೇಕವಳಿಗೆ
ಮಣ್ಣ ಹುಡುಕುತ್ತಾಳೆ
ನನಗದೇ ಕೋಪ - ಗಿಡ ನೆಟ್ಟು ಹೂವ ನೋಡಿ ಬಂದವನು
ಮಣ್ಣಿನ ವಾಸನೆ ಬಣ್ಣವಾಗಿ ಕೈಗಂಟಿದೆ
ಜೊತೆಗದೆಷ್ಟೊ ಕಲೆಗಳು ಹಾಗೇ ಉಳಿದಿವೆ

"ಕ್ರೂರಿ ನಾನು" ಎದೆಯ ಮೇಲೊಂದು ಫಲಕ
ರಾತ್ರಿಗೆ ಜೊತೆಯಾಗಬೇಕು
ಅದು ಹೇಗೋ ಮಣ್ಣ ಹುಡುಕಿ ಹೂವ ತರುತ್ತಾಳೆ
ಏನು ಮಾಡಬೇಕು?
ಕ್ರೌರ್ಯಕ್ಕೆ ಎಲ್ಲವೂ ಮುಖಗಳೆ