ಅದರೊಳಹೊಕ್ಕು ಅದಾಯಿತು ಹಕ್ಕಿ ಮೀನು

 

ಇದೂ ರೆಕ್ಕೆಯೆಂದೇ ಎನ್ನಿಸಿದರೂ 

ನೀರಿನಿಂದೆದ್ದು ಆಕಾಶಕ್ಕೆಗರಲಿಕ್ಕೆ 

ರೂಪಾಂತರಕ್ಕೆ ತಕ್ಕ ತಯಾರಿ 

ಆ ನಡುವಲ್ಲಿನ ವಿರಾಮ 

ಪಕ್ಕನೆ ಜೀವ ತೆಗೆದು 

ತೊಡಿಸುವ ಆವೇಗಕ್ಕೆ 

ಹೊಂದಿ ನಡೆಯಬೇಕಲ್ಲ 

ಬರೀ ಮೂಳೆಯೆಂದೆನಿಸುತ್ತಿದ್ದರೂ 

ಕೊಕ್ಕು ಕಾಲುಗಳ ಪಡೆದು 

ಮಾಂಸತುಂಬಿ ಗಾಳಿಗುಬ್ಬಿ 

ಹಾರಬೇಕು 


ಮೀನಿಂದ ಹಕ್ಕಿಯಾಗುವುದು 

ಸುಲಭವೇನೂ ಅಲ್ಲ 

ಹಕ್ಕಿಯಿಂದ ಮೀನಾಗುವುದೂ 


ಮೇಲಿಂದ ಕೆಳಗೆ ಹಾರಬೇಕಷ್ಟೆ 

ಮುಳುಗಿದಾಗ ಉಸಿರಿಡಿದುಕೊಳ್ಳುವ ಗುಣ 

ಎಲ್ಲಾ ಹಕ್ಕಿಗಳ ಪಾಡೇನೂ ಅಲ್ಲ 

ಹೀಗಿರಲಾಗಿ 

ಗಾಳಿತೊರೆದು ನೀರೊಳಗವಿತುಬಿಡುವ 

ಈ ರೂಪಾಂತರದ ನಡುವಲ್ಲೂ 

ಜೀವ ತೆಗೆದು ತುಂಬುವ 

ಕಾರುಣ್ಯಕೆ ಸವಾಲೆಸೆಯುವ ಕಠೋರತೆಯನ್ನ

ನೇವರಿಸಿ ಮೈದಡವಿ ಮುದ್ದಿಸಿ 

ಹೋಗಬೇಕು 

ನೀರು ಆಳ-ಅಗಲಕ್ಕೆ  ಪ್ರಸಿದ್ಧಿ

ತೇಟ್ ಆಕಾಶದಂತೆಯೇ ಆದರೂ 

ದೇಹ ಕ್ರಮ ಪರಿಕ್ರಮ ರಚನಾ ವ್ಯೂಹಕ್ಕೆ 

ಬೇರೆಯದೇ ಜಂಜಾಟವಿದೆಯಾದರೂ 


ಮೀನಾಗಿದ್ದೇನೆಂದು ತಿಳಿದದ್ದೇ 

ಮುಳುಗಿದಾಗ ಉಸಿರಾಡದೆ ಹಾಗೇ  ಹೋಗಬಹುದು 

ಮೀನಿಗೂ ಅಷ್ಟೇ 

ಹಕ್ಕಿಯಾದೇನೆಂದು ನೀರಿನಿಂದ ಹಾರಿದಾಗ 

ಮತ್ಯಾವುದೋ ಹಕ್ಕಿ ಹಾಗೇ ಕಚ್ಚಿಕೊಂಡು 

ಹೋಗಿಬಿಡಬಹುದು 

ಹಾರುತ್ತಿದ್ದೇನೆಂದೋ ಈಜುತ್ತಿದ್ದೇನೆಂದೋ 

ಅನ್ನಿಸುತ್ತಿರುವಾಗಲೇ 

ಉಸಿರುನಿಂತು ಸಾಯುವುದು ಮಾಮೂಲು ಸಂಗತಿ 


ಪೂರಾ ಬದಲಾಗಬೇಕು  ಇದ್ದಕ್ಕಿದ್ದಂತೆ 

ಎಲ್ಲಾ ಮಾಂಸ ಮೂಳೆ ಹರಿದು ಕೊರೆದು ಹಂಚಬೇಕು 

 ರೂಪಾಂತರದ ಕ್ಷಣದಲ್ಲಿನ 

ಆ ನೋಟ ಆ ನೋವು  ಆ ಆನಂದ 

ಅರ್ಧ ಮೀನು ಅರ್ಧ ಹಕ್ಕಿ ಆದದ್ದಿದೆಯಲ್ಲ 

ಅದುವೇ ಸಾಕ್ಷಿ  


ಈ ನಡುವಲ್ಲಿ 

ಹಕ್ಕಿ ಮೀನಾಗುವ ಮೀನು ಹಕ್ಕಿಯಾಗುವ 

ಆ ಜಾಗದಲ್ಲಿ 

ಎರಡೂ ಸಂದಿಸುತ್ತಿದೆಯಲ್ಲಾ 

ಅಲ್ಲಿ ಅವುಗಳೆಂದವು 

ಆಕಾಶಕ್ಕೂ ಸಾಗರಕ್ಕೂ ಭಿನ್ನವೇನಿಲ್ಲ 

ಅಲ್ಲೆಲ್ಲೋ ಈಜುವುದು  ಇನ್ನೆಲ್ಲೋ  ಹಾರುವುದು 

ಎರಡೂ ವಿಶೇಷವೇನೂ ಅಲ್ಲ 


ಇಷ್ಟಾದರೂ 

ಹಕ್ಕಿಗೆ ಮೀನಾಗಿಯೂ 

ಮೀನಿಗೆ ಹಕ್ಕಿಯಾಗಿಯೂ 

ಆಗುವಾಸೆ 


ಇಷ್ಟೆಲ್ಲಾ ಯಾಕೆಂದರೆ 

ಒಂದು ಮತ್ತೊಂದಾಗುವುದು 

ಬರೀ ರೂಪಾಂತರವಷ್ಟೇ ಅಲ್ಲವಲ್ಲ 


ಸಾಮಗಾನ


ಆಹೋ ಆಹೋ ಆಹೋ 

ನೋಡಲ್ಲಿ ಕೇಳಲ್ಲಿ ಉಸಿರಲ್ಲಿ 

ಬಯಕೆ ಕಟ್ಟಿ ಮೊರೆವಲ್ಲಿ 

ಬೇಡವೆಂಬುದು ಬೆಂಬಿಡದಂತೆ 

ಒಳಗೆಲ್ಲೋ ಹೊಕ್ಕು 

ಹೊತ್ತು ಹೊತ್ತು ತಿರುಗುವಾಸೆಗೆ 

ಇಣುಕು ನೋಟಕ್ಕೆ 

ಬೇರೆಯದೇ ಬೇಸರ 

ಸಾಕುಮಾಡೆನ್ನದಿರು ಈ ಪ್ರಲಾಪ 

ಮೈಯಲಿಲ್ಲ ನೀರು 

ಉಟ್ಟಬಟ್ಟೆ ಜೊತೆಗಿಲ್ಲ 

ಓಟಕ್ಕೆ ಕಾಲು ಸವೆದಿಲ್ಲ 

ಉರಿವ ಬೆಂಕಿ ಮುಂದೆ 

ಹೊಕ್ಕವಳು ನೀನು 

ಕತ್ತರಿಸಿದವಳು ನೀನು 

ಉಳಿದದ್ದೇನು ಮತ್ತೆ ? 

ಆಹೋ ಆಹೋ ಆಹೋ 

ಎಂಬೀ ಹಾಡಲ್ಲವೆ 

 

ಹಾರೈಕೆ


ದೇಹದೊಳಹೊಕ್ಕು ಕಾಣುವ 

ಸಾಧನಗಳ ಪರಿಣತಿಯ ತಾಂತ್ರಿಕನಾದರೂ 

ನಿನ್ನವಳ ಮನಹೊಕ್ಕು 

ಕಾಣುವುದೇನೂ ಸುಲಭವಲ್ಲ ಗೆಳಯ 

ಕಂಡುಕೋ  ಈ ಹೊತ್ತಲಿ 

ಹೊಸಹಾದಿಯಾದಿಯಲಿ 

ಕೈ ಹಿಡಿವವಳ ಬಳೆ ಸದ್ದು ಕಣ್ಣ ನೋಟ 

ನಿಮಿರಾಗಿ ತೀಡಿದ ಕೆಂಪು ನಾಮ 

ಜಾಗರೂಕನಾಗಿ ನೋಡಿಕೋ ಗೆಳೆಯ 


ನಿನ್ನ ನಾಚಿಕೆಯ ಬಲ್ಲೆ ನಾನು 

ಯಾವುದೋ ಪಯಣದಲಿ 

ಅವಳ ಸನಿಹದಲಿ 

ಮೈಗೆ ಮೈ ತಾಕಿದಾಗ 

ಯಾರೋ ಕಂಡದ್ದು ಕಂಡು 

ನಾಚಿದ್ದು ನೆನಪಿದೆ 

ಇನ್ನು ನಿನ್ನ ದೇಹವಿಲ್ಲ ಗೆಳಯ 

ಇನ್ನೇನಿದ್ದರೂ ಅದು ಅವಳದು 


ಆಕಾಶದೆಲ್ಲಿಯದೋ ನಕ್ಷತ್ರವನು 

ನೀ ತೋರಿದ್ದಾ? ಅವಳು ಕಂಡದ್ದೆಂದದ್ದಾ? 

ಜೊತೆಗಿರಲಿ ಆ ಮುದ್ದಾದ ಸುಳ್ಳು 

ಕಾಲದಕ್ರಮದೊಟ್ಟಿಗೆ ಬದಿ ಸರಿದು 

ನಿಲ್ಲಬೇಕಾದೀತು - ಬೇಸರ ಬೇಡ 

ಮನದಲಿರಲಿ ಅವಳ ಮುಗುಳು ನಗೆ 


ಎಚ್ಚರಿಕೆಯು ಬರೀ ಸಂಜ್ಞೆಯಲ್ಲ 

ಸೂಚನೆಯಲ್ಲ 

ದೇಹ ಮನಸ್ಸುಗಳೆರಡೂ ಹದ ತಪ್ಪಿ 

ಹುಚ್ಚಾಟದೆಲ್ಲಾ ಅಂಕೆಗಳ 

ಅಂಕಕ್ಕೊಪಿಸಿದಂತೆ ಕುಣಿಯಬಲ್ಲದು 

ಹಿಡಿದ ಕೈ ನೆನಪಿರಲಿ ಗೆಳೆಯ 

ಬದುಕ ಎಚ್ಚರದಾಚಾರಕ್ಕೆ ಒಗ್ಗಿಸಿ 

ಕಾಣು 

ಅವಳ ಉಸಿರ ಸನಿಹ 

ನೆನಪಿಸಿಕೊ ಜೊತೆಗಿಟ್ಟ ಆ ಏಳು ಹೆಜ್ಜೆ 

ಬರಿ ಹೆಜ್ಜೆಯಲ್ಲವದು - ನಡಿಗೆ 


ಹಾರೈಸುತ್ತೇನೆ ಗೆಳೆಯ 

ಹಸಿ  ಮಣ್ಣ ನೆಲವಿದೆ ಕೆಳಗೆ

ಕುಣಿದಂತೆ ರೂಪತಾಳ್ವ ಆವೇಶಕ್ಕೆ 

ಆರದ ಆರ್ಧ್ರತೆಯ ಆದರ 

ಬೆನ್ನ ನೇವರಿಸುವ ಕೈಗದುವೇ ಆಧಾರ 

ಕುಣಿದಾಡಿ ಒಟ್ಟಿಗೆ ಕುಣಿದಾಡಿ 

ಮೈಮನವು ದಣಿವಂತೆ 

ಮರೆತು ನೆನವಂತೆ 

ಕುಣಿದಾಡಿ 

ಕಿರುಬೆರಳು ಜೊತೆಯಾಗಿ  

ಕುಣಿತವೇ ಹರಕೆಯಾಗಿ   

ಕುಣಿದಾಡಿ ಗೆಳೆಯ ಕುಣಿದಾಡಿ 


[ಗೆಳೆಯ/ತಮ್ಮನ ಮದುವೆ ನಿಶಿತಾರ್ಥಕ್ಕೆ ಶುಭ ಹಾರೈಸುತ್ತ ಬರೆದ ಕವಿತೆ]

ನಿಘಂಟು


ಬೇಟೆಗೆ ಬಂದಾಗಿದೆ 

ಮೃಗವನ್ನು ಸೆಳೆ 

ಹಾಡಿಂದ 

ಹಾಡು ಹಾಡು ಹಾಡು 


ಇದಕ್ಕೊಂದು ಪದವುಂಟು 

“ಗೋರಿಗೊಳಿಸು” 


ಸೆಳೆತ, ಬೇಟೆಗಾರನ ಹಾಡು 

ನೆಲ ಮಟ್ಟಸ ಮಾಡೋ 

ಸಾಧನ 

ಗೋರಿಗಿರುವ ಹಲವು 

ಅರ್ಥಗಳು

 

ಮುಡಿ



ಮುಡಿ ಬಿಟ್ಟು ಕೂತವಳು
ಧ್ಯಾನಕ್ಕೆ
ಮುಡಿ ಬಿಟ್ಟವಳ
ಧ್ಯಾನಿಸುತ್ತಾ
ಎದುರಿಗೆ
ಯಾರು ಯಾರು ?
ಅವಳಿಗೆ ಕನಸಲ್ಲಿ
ಕರೀ ಕಾಲಿಗೆ ಬಿಳೀಗೆಜ್ಜೆ
ನನಗೆ ಮನೆಯಲ್ಲಿ
ಇವಳದೇ ಗೆಜ್ಜೆ
ಈ ಕಾಣುವ ಮುಖ
ಯಾವುದು ? ಯಾರದು ?

ರೈಲಿನ ಸದ್ದಿನ ಹಕ್ಕಿ


ಇದ್ದಬದ್ದ ಕಿಟಕಿಗಳಲ್ಲೆಲ್ಲಾ 
ಹುಲ್ಲು ತಂದಾಕಿದೆ 
ಈ ಪುಟ್ಟ  ಹಕ್ಕಿ 
ಹೊಸ ಮನೆ - ಆ ಬಾಗಿಲು 
ಮಂತ್ರದ್ದೊಂದು ತೆಂಗಿನಕಾಯಿ 
ಕಾಯಲಿಕ್ಕೆ 
ಮಣ್ಣಗೆದು ಗುಡ್ಡ ಕಡಿದು 
ಹೊಸ ಟಾರಿನ ರಸ್ತೆ 
ಎಲ್ಲೋ ರೈಲಿನ ಸದ್ದು 
ಈ ಪುಟ್ಟ ಹಕ್ಕಿಯ ಮರಿಗಾಗಿ 
ಪಾರಿವಾಳವೊಂದು ಹೊಂಚಾಕಿದೆ 
ನಡುವಲ್ಲಿ ಹಕ್ಕಿ ಗೂಡು ಕಟ್ಟುತ್ತಲೇ ಇದೆ
 

ಹ್ಯುಗೊ ಮುಜಿಕ ಅವರ ಬಿಡಿ ಕವನಗಳು





೦೧.

ಹತ್ತಿರ

ಇನ್ನೂ ಹತ್ತಿರ

ಕುರುಡನೊಬ್ಬನನ್ನ ಪ್ರತಿಪಲಿಸಿದೆ

ನನ್ನೀ ಮೌನದ ಕಣ್ಣೀರ ಹನಿ

ಹತ್ತಿರ

ಇಷ್ಟು ಹತ್ತಿರ

ನನ್ನ ಕಣ್ಣೀರನ್ನ ಅವನ ಕಣ್ಣಲ್ಲಿರಿಸುವೆ

ನಾವಿಬ್ಬರೂ ನೋಡಬಹುದೆಂದು



೦೨.



ಎಲ್ಲವೂ ಇದ್ದಂತೆಯೇ ಇತ್ತು

ನನ್ನ ಕೈ ತೆರೆದೆ ನೀ ಅಲ್ಲಿದ್ದೆ

ಹಾಗೂ ಎಲ್ಲವೂ ಇದ್ದಂತೆಯೇ ಇತ್ತು

ಈ ಬಾರಿ ಮಾತ್ರಾ



೦೩.



ಆ ಕಿಟಕಿ

ಹಾಗೂ ನನ್ನೀ ಟೇಬಲ್ಲಿನ ಮೇಲೆ ನಿನ್ನೆರೆಡು ಮಲ್ಲಿಗೆ ಹೂವು

ಹಾಗೂ ಈ ಬಾರಿ ಆ ಹಕ್ಕಿ,

ಈ ಬಾರಿ ಮಾಂಸ ರೆಕ್ಕೆಗಳೊಟ್ಟಿಗೆ



೦೪



ಅಸ್ಪಷ್ಟ ಪದಗಳ

ಪಯಣಿಗ

ಭದ್ರವಾಗಿ ಕೈಯಲ್ಲಿಡಿದಿದ್ದಾನೆ

ಒಡೆದ ಗಾಜನ್ನ

ಎಲ್ಲವೂ ಮುಖಾಮುಖಿಯಿಂದ ಹುಟ್ಟಿದ್ದು



೦೫



ಹಾಗೂ ಇವೆಲ್ಲವೂ ಬದುಕನ್ನು ಬೀಳಿಸುವವು

ಇದರೊಟ್ಟಿಗೆ ಎಲ್ಲವನ್ನೂ ಸುಡುವೆವು

ಅರ್ಪಣೆಯಿದು

ನೆನಪಿನ ದಹನಕಾಂಡಕ್ಕೆ

ನನಗೆ ಗೊತ್ತು ಇದು ಈ ರೀತಿಯದ್ದಾವುದೂ ಅಲ್ಲ

ಆದರೂ ಇದಾಗಿ ಇರುವುದು ಹೇಗೆ ಇದಾವುದಕ್ಕಲ್ಲದಿದ್ದರೂ








 ಹ್ಯುಗೊ ಮುಜಿಕರ ಕವನಗಳು ಅನುಭವಗಳನ್ನು ಅತ್ಯಂತ  ಸಾಂದ್ರವಾಗಿ ಪ್ರಕಟಪಡಿಸುತ್ತವೆ. ಹಾಗಾಗಿ ಕೆಲವನ್ನು ಇಲ್ಲಿ ಅನುವಾದಿಸಿದ್ದೇನೆ. ಇಲ್ಲಿರುವುದೆಲ್ಲವೂ ಬಿಡಿಕವನಗಳು. ಮುಜಿಕರನ್ನು ಪರಿಚಯಿಸಿದ ಹೆಚ್. ಎಸ್. ಶಿವಪ್ರಕಾಶರಿಗೆ ಧನ್ಯವಾಗಳು. ಅನುವಾದದಲ್ಲಿ ಅಶ್ವಿನಿ ಹಾಗು ಶಿವಪ್ರಕಾಶರ ಸಹಾಯವನ್ನು ನೆನೆಯುತ್ತೇನೆ. 

ಮುಜಿಕ ಅವರ ಬಗೆಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು 

Hugo Mujica Wiki 

Hugo Mujica Home page

ನಾಟಕಕಾರ

ಕೆಂಪು ನಿಲುವಂಗಿಯಲ್ಲಿನ
ಒಂದೆಳೆ ರೇಶ್ಮೆ ಹೊಳಪಿನೊಟ್ಟಿಗೆ
ಕಂಡ ನಿಮ್ಮ ನಗು
ದೇವಿಗೆ ಹಾಕಿದ ಸುಗಂಧರಾಜಕ್ಕೆ
ಸುತ್ತಿದ್ದ
ಫಳ ಫಳ ನೆಕ್ಕಿಯ ಎಳೆಯು
ದೀಪದ ಬೆಳಕಿಗೆ ಬೆಳಗಿ
ಅವಳ ನಗುವನ್ನು ಕಂಡದ್ದು
ನೆನಪಾಯಿತು

ನಮ್ಮನೆಯಲ್ಲೆಲ್ಲವೂ ನಾಟಕವೇ
ಅದಕ್ಕಲ್ಲವೇ
ಶಬ್ಧ ಧ್ವನಿ ಬೆಳಕು
ಸಂಯೋಜನೆ
ವಿಘಟನೆಗೆ ವೇಷ ರಂಗ ಪಾತ್ರ
ಕಾಲವ ಹರಿದು ಕಟ್ಟುವ
ಹಿಂದು ಮುಂದನ್ನಾಗಿ
ಮುಂದು ಹಿಂದನ್ನಾಗಿಸುವ
ಹರಿವನ್ನು ಹಿಡಿದು ಕಟ್ಟುವ
ಚಿಮ್ಮಿ ಎಸೆಯುವ
ದೆಲ್ಲವನ್ನೂ ಕಲಿತದ್ದಾದರೂ ಎಲ್ಲಿ ?
ಎಂದದ್ದಕ್ಕೆ ದಂಗು ಬಡಿಸಿತ್ತು
ನೀವು ಕೊಟ್ಟ ಪಟ್ಟಿ
ವೇದಾಂತಿಯಿಂದ ಸಿದ್ಧರವರೆಗೂ‌
ಭಿಕ್ಕುವಿನಿಂದ ಜೆನ್ ಗುರುವಿನವರೆಗೂ
ಮಾರ್ಕ್ಸ್ ನಿಂದ ಶ್ರೀಮನ್ನಾರಾಯಣನವರೆಗೂ
ಸಂಘರ್ಷವಲ್ಲ ಸಂವಾದವು ದರ್ಶನ

ತಲೆಯ ಮೇಲೊಂದು ಕಾಲು
ಆ ಕಾಲಿನವನ ತಲೆಯಮೇಲೆ ಮತ್ತೊಂದು
ಪುರುಷ ಸೂಕ್ತದ ಸಹಸ್ರಪಾದ
ನಿಮ್ಮದೇ ನಾಟಕ
ಸಾವಿರ ಕಣ್ಣನ್ನು ನಾಟಕದಲ್ಲಿ ತೋರಿಸಿದಿರಲ್ಲ
ನೀವು ನಾಟಕಕಾರರೇ ಸರಿ
ಒಟ್ಟಿನಲ್ಲಿ ನೀವೂ ಹಾಗೇ
ಅಲ್ಲಿನ ನಾಯಕಿಯಂತೆ

ಚಕ ಚಕ ಓಡುತ್ತಿರುವ
ನಿಮ್ಮನ್ನು ಹಿಡಿಯುವುದಾದರೂ ಹೇಗೆ
ಎಂದೆಣಿಸಿದಾಗಲೆಲ್ಲಾ
ನಗುತ್ತಾ ಪಕ್ಕದಲ್ಲೇ ಇರುತ್ತೀರಿ
ವಾಚ್ಯವು ಹಳಹಳಿಕೆ ಎಂದು ಹೇಳುವ
ನಿಮ್ಮ ಬಗೆಗಿನ ಕವನವನ್ನು
ಮುಗಿಸುವುದಾದರೂ ಹೇಗೆ ಹೇಳಿ?

ಎಲ್ಲೋ ಯಾವುದೋ ಸಿದ್ಧ
ಹುಲಿಯೇರಿ ಬಂದದ್ದೋ
ಕರಡಿಯೊಂದು ಮಗುವಿನ ತೊಟ್ಟಿಲು ತೂಗಿದ್ದೋ
ದುರ್ಗಿ ಬಂದೆದುರು ಕೂತದ್ದೋ
ಕತೆಯೆಂದೆನಿಸುತ್ತಿದ್ದುದು ರೂಪಕವೆಂದೆನಿಸುತ್ತಿದ್ದುದು ನನಗೆ
ನಿಮಗದು ಅಪ್ಪಟ ಸತ್ಯ



[ಪ್ರೊಫೆಸರ್ ಜೆ. ಶ್ರೀನಿವಾಸಮೂರ್ತಿಗಳು ನನ್ನನ್ನು ಪ್ರಭಾವಿಸಿದವರಲ್ಲಿ ಬಹಳ ಮುಖ್ಯರು. ಇತ್ತಿಚೆಗೆ ಅವರ ಅಭಿನಂದನಾ ಸಮಾರಂಭ ನಡೆಯಿತು. ನಾ ಕಂಡ ಅವರ ಬಗೆಗಿನ ಚಿತ್ರಣ ಈ ಕವನ ]


ಪ್ರಾರ್ಥನೆ


ನೀ ಕನಸಲ್ಲಿ ಬಂದಿದ್ದೆಯೆಂದೇ

ನೋಡಲು ಬಂದದ್ದು

ಅಲಂಕಾರ ತೆಗೆದಾಗ

ಬರೀ ಒರಟು ಕಲ್ಲು ನೀನು

ಹೆಳವ, ರಂಗ ನಿಂಗೆ ಕಂಡದ್ದಾದರೂ ಹೇಗೋ


ಆ ಕಪ್ಪು ಒರಟು ಕಲ್ಲಿನಲ್ಲೆಲ್ಲಿಯದು

ಆ ವೈಕುಂಠ, ಸಾವಿರ ಹೆಡೆಯ ಸರ್ಪ

ಹೊಕ್ಕುಳಲ್ಲಿದ್ದ ಕಮಲವೂ

ಅದರೊಳಗೆ ನಾಲ್ಕು ಮುಖದ ಬೊಮ್ಮನೂ

ಚಂದದಾ ಲಕುಮಿಯೂ 

ಅಲ್ಲೇ ಪಕ್ಕದಲ್ಲೇ


ಹೆಳವಾ, ಆ ಕಣ್ಣನ್ನೆಲ್ಲಿ ಪಡೆದೆಯೋ

ಕಲ್ಲ ಭಾಷೆ ನಿನಗೆ ಕೇಳಿಸಿದ್ದಾದರೂ ಹೇಗೆ

ಅದ ಮಾತನಾಡುವುದಾದರೂ ಹೇಗೆ

ಬಿಳೀ ದಾಸವಾಳ ನನ್ನ ಕೈಲೂ ಇದೆ

ನಿನಗೇ ಕೊಡುತ್ತೇನೆ

ಕಲಿಸುತ್ತೀಯ

ಕಲ್ಲ ಭಾಷೆಯ

ಕವಿಯಾಗಿ ಪ್ರತಿಮೆಗಳೊಟ್ಟಿಗೆ

ಸೋತ ಹಾಗಾಗಿದೆ

ಒರಟು ಕಲ್ಲಲಿ

ಕಲ್ಲನ್ನ ಕಾಣ್ವಂತೆ

ಆ ಕಲ್ಲ ಮಾತ ಕೇಳ್ವಂತೆ

ಅದರೊಟ್ಟಿಗೆ ಹರಟೆ ಹೊಡೆವಂತೆ

ಮಾಡೋ ರಂಗನ ಕಂಡ

ಹೆಳವನಕಟ್ಟೆಯ ಹೆಳವ

ಅನುತ್ತರ

 

ಬಂದಂದಿನಿಂದ ಇದ್ದಲ್ಲೇ ಇದ್ದ

ನಾಗಮಲ್ಲಿಗೆ ಮರ

ಹಚ್ಚ ಹಸಿರಾಗಿ

ಬಿಳೀ ಹೂವ್ಗಳಾಗಿ

ಬೆಳಗಾದದ್ದೇ

ಕಡು ಕೆಂಪಾಗಿದೆ


ಹೂ ಉದುರಿದೆ

ನಾಗರ ಸದ್ದು

ನಾ ಹೂವಾಗಿದ್ದೇನೆ

ನೀ ಮುಡಿಯಬಹುದು

ಅಥವಾ

ಹೊಕ್ಕುಳಿಗಾಕಿಕೊಳ್ಳಬಹುದು

ಬೇರಿಳಿದು ಒಳಗೆ

ನಾಗಮಲ್ಲಿಗೆಯಾದೀತು

ಎಷ್ಟಾದರೂ

ಉದರದೊಳಗೆ ಬ್ರಹ್ಮಾಂಡವನ್ನೇ

ಇಟ್ಟುಕೊಂಡವಳಲ್ಲವೇ



ಅನುತ್ತರ


ಮಟ ಮಟ ಮದ್ಯಾಹ್ನದಲ್ಲಿ

ಕೆರೆಯಂಗಳದಲ್ಲಿ ನಿಂತು

ನೀರನ್ನೇ ದಿಟ್ಟಿಸುತ್ತಿರಬೇಕಾದರೆ

ನಾನೇ ನೀರಾದಾಗೆನಿಸಿ

ಸೋಶೋ ನೆನಪಾದ

ನಾ ಚಿಟ್ಟೆಯಾದ ಕನಸ ಕಂಡದ್ದೋ

ಚಿಟ್ಟೆಯೇ ನಾನಾದ ಕನಸ ಕಂಡದ್ದೋ "

ಹಾಗಾಗಿ

ನಾನು ನೀರ? ನೀರೇ ನಾನ?

ತಿರುವಲಂಗಾಡು

 

ಸುಡು ಬಿಸಿಲು ರಣ ಬಿಸಿಲು

ದೇಹ ಸುಟ್ಟು ಕರಕಲಾಗಿ

ಸುಡುಗಾಡ ಬಗಲಲ್ಲಿ

ಮೈಯೆಲ್ಲಾ ತಂಪಾಗಿ

ಕಾಳೀಯ ಮುಖ ಕಂಡೆ

ಹೊಳೆವ ಮೂಗುತಿ

ಪುಟ್ಟ ಮೂರುತಿ

ಕುಣಿತದಾಟ ಮುಗಿಸಿ ಬಂದ

ನಗುವಿನಲ್ಲಿ

ತಿರುವಲಂಗಾಡಿನಲ್ಲಿ

ಅವನದೊಂದು ಕಾಲು ನೆಲವ ಕಂಡಿದೆ

ಮತ್ತೊಂದಾಗಸದೆಡೆಗೆ ಚಾಚಿದೆ

ಕಣ್ಮುಚ್ಚಿದಾಗ ಕರೆದವರಾರು

ಹುಡುಕಾಟಕ್ಕೆ ಕಾರೈಕಲ್ ಅಮ್ಮಯಾರ್ ಸಾಕ್ಷಿ

ರೂಪವು ದೇಹವನೊಕ್ಕಿ

ಅರಸುತಿದೆ



Thiruvalangadu (ತಿರುವಲಂಗಾಡು)  


Karaikkal_Ammaiyar (ಕಾರೈಕಲ್ ಅಮ್ಮಯಾರ್)

ಅನುತ್ತರ


ಸಂಖ್ಯೆಗಳೂ ಸಹ ಚಿತ್ರಗಳು

ಮನುಷ್ಯ ಪ್ರಾಣಿ ಮರ ಗಿಡ

ಹೀಗೆ ಚಿತ್ರ ಬರೆಯುತ್ತಾರಲ್ಲ

ತೇಟ್ ಹಾಗೆಯೇ


ಚಿತ್ರಗಳು ಭೌತಿಕ ಸಾಧ್ಯತೆಗಳು

ಛಂಧಸ್ಸು -  ಮೇಲೊಂದು ಗೆರೆ ಕೆಳಗೊಂದು

ಚಿತ್ರವೇ ಅದು

ರಾಗವಿನ್ನೇನು ಮತ್ತೆ

ಕಡೆಗೆ ಧ್ವನಿಯೂ ಶಬ್ದವೂ


ದೇಶಕಾಲವು ಜ್ಯಾಮಿತೀಯ ಆಕಾರ

ಬ್ರೆಡ್ಡಿನ ಪದರಗಳಂತೆ ಒಂದರ ಮೇಲೊಂದು

ಅದೂ ಸಾದ್ಯ - ಹಾಗಾಗಿ ಅದೊಂದು ಚಿತ್ರ

ಮುಂದೆ ಹಿಂದೆ ಆಗ ಈಗ ಅಲ್ಲಿ ಎಲ್ಲಿ