ಬಾಂಗ್ಲಾ ದಿನಗಳು : ಅಲೆಮಾರಿಯ ಆರಂಭ


ಅಮ್ಮನಿಗೆ ಕರೆ ಮಾಡಿದಾಗ ಹೇಳಿದ್ದು ಮತ್ತೆ ನಿಮ್ಮ ಪ್ರಯಾಣವ, ಎಲ್ಲಾ ಸಿದ್ದವಾಯ್ತ, ಇರೋ ಮನೇ ಬಿಡಲಿಕ್ಕೆ, ಹೊಸ ಮನೆ ಹುಡುಕಲಿಕ್ಕೆ, ಹೊಸ ಊರಿಗೆ ಹೋಗಲಿಕ್ಕೆ, ಒಳ್ಳೇ ಅಲೆಮಾರಿ ಬದುಕು ನಿಂದು ಅಂತ. ಕೇಳಿದಾಗ ನಮ್ಮೂರಲ್ಲಿ ಹಿಂದೆ ನಡೆಯುತ್ತಿದ್ದ ಒಂದು ಸಂಗತಿ ನೆನಪಾಯಿತು. ನಮ್ಮೂರಲ್ಲಿ ಮುಂಚೆ ನಾನು ಚಿಕ್ಕವನಾಗಿದ್ದಾಗ ಹೀಗೆ ಊರಿಗೆ ಅಲೆಮಾರಿಗಳು ಬರುತ್ತಿದ್ದರು. ಏನೋ ಕೆಲಸ ಇಟ್ಟುಕೊಂಡು. ಉದಾಹರಣೆ, ಪಾತ್ರೆ ಮಾರುವುದು, ಸರಿ ಮಾಡುವುದು, ಬಡಗಿಗಳು, ಇಲ್ಲಾ ದೇವರ ವಿಗ್ರಹ ಮಾಡುವವರು. ಇವರಲ್ಲದೆ ಡ್ಯಾನ್ಸ್ ಮಾಡೋರೂ ಹೀಗೆ ಬೇರೆ ಬೇರೆ ಕೆಲಸದ ನಿಮಿತ್ತವಾಗಿ ಹಳ್ಳಿಗೆ ಬರುತ್ತಿದ್ದರು. ಒಂದು ಮೂರು ದಿನದಿಂದ ಒಂದು ವಾರಗಳ ಕಾಲ ಇಡೀ ಕುಟುಂಬ, ಒಂದು ಹತ್ತು ಜನ ಇರುತ್ತಿದ್ದರು. ಬಂದ ಊರಲ್ಲಿ ಕೆಲಸ ಎಲ್ಲಾ ಆಯಿತು, ಇನ್ನೇನೂ ಇಲ್ಲಿ ಗಿಟ್ಟುವುದಿಲ್ಲ ಅಂತ ತಿಳಿದ ನಂತರ ಊರು ಬಿಟ್ಟು ಹೋಗುತ್ತಿದ್ದರು. ಪಕ್ಕಾ ಅಲೆಮಾರಿ ಬದುಕು. ಆಗ ನನಗೆ ತಿಳಿಯುತ್ತಿರಲಿಲ್ಲ. ಈಗ ಅನ್ನಿಸುತ್ತೆ, ಅವರಿಗೆ ಅವರದು ಅಂತ ಒಂದು ಊರು, ಮನೆ ಎಲ್ಲಾ ಇರುತ್ತದ ಅಂತ. ಈ ಎಲ್ಲಾ ಆಲೋಚನೆಗಳು ಬಂದದ್ದು ಅಮ್ಮ ನನ್ನನ್ನೂ ಒಬ್ಬ ಅಲೆಮಾರಿ ಎಂದು ಕರೆದಾಗ. ನನಗೆ ಯಾವುದೇ ಸ್ವಂತ ಮನೆ ಊರು ಇಲ್ಲವಾದರೂ, ಹೇಳಿಕೊಳ್ಳಲಿಕ್ಕೆ , ಅರ್ಜಿಗಳಲ್ಲಿ ಬರೆಯಲಿಕ್ಕೆ ಖಾಯಂ ವಿಳಾಸ ಅಂತೂ ಒಂದಿದೆಯಲ್ಲ ಎಂದೆನ್ನಿಸಿ, ಅಮ್ಮ ಅಲೆಮಾರಿಯೆಂದು ಕರೆದದ್ದು ಹಿತವೆನಿಸಿ ಈ ಅಲೆಮಾರಿತನದ ಆಯ್ಕಯಲ್ಲಿ ಕಂಡ, ಕಾಣುವ ಅನುಭವಗಳನ್ನ ಧಾಖಲಿಸಬೇಕೆನಿಸಿತು.

ನನ್ನ ಈ ಅನುಭವಗಳನ್ನು ಬರೆಯ ಹೊರಟಾಗ ಯಾವಾಗಲೂ ಕಾಡುವಂತೆ, ನನ್ನ ಅನುಭವಗಳನ್ನ ಯಾಕೆ ಹಂಚಿಕೋಬೇಕು, ಯಾಕೆ ಬರೆಯಬೇಕು ಎಂದು ಮತ್ತೇ ಮತ್ತೇ ಕಾಡಿದ್ದಿದೆ. ಈ ಊರಿಂದ ಊರಿಗೆ ತಿರುಗಬೇಕಾದ ಸಂದರ್ಭದಲ್ಲಿ ಬದುಕಿನ ಕುರಿತಾದ ಒಂದಿಷ್ಟು ದ್ವಂದ್ವಗಳು ಕಾಡಿದಾಗ, ಅವುಗಳಿಗೆ ಉತ್ತರಗಳನ್ನ ಕಂಡುಕೊಳ್ಳುವ ಸಾಧ್ಯತೆಯಲ್ಲಿ ಈ ಬರಹ ರೂಪಗೊಂಡಿತು.
 
ಈ ರೀತಿಯ ಅಲೆಮಾರಿ ಬದುಕು , ನಮ್ಮದೇ ನಿರ್ಧಾರವಾಗಿತ್ತು. ಮೇಲೆ ಹೇಳಿದಷ್ಟು ನಾವು ಅಲೆಮಾರಿಗಳಲ್ಲದಿದ್ದರೂ, ಒಂದು ಊರಲ್ಲಿ ಈಗ ಆರು ತಿಂಗಳಿಂದ ಒಂದು ವರ್ಷ ಇರುವುದು ಎಂದು ತೀರ್ಮಾನವಾಗಿತ್ತು. ಮದ್ರಾಸಿನಲ್ಲೆ ಎರೆಡು ವರ್ಷವಿದ್ದದ್ದು. ಅಲೆಮಾರಿತನದ ಆಯ್ಕೆ ಅಂತಿಮ ತೀರ್ಮಾನವಲ್ಲದಿದ್ದರೂ, ಸದ್ಯದ ತೀರ್ಮಾನವಷ್ಟೆ. ಈ ಅಲೆಮಾರಿತನವು ಅದರದೇ ಆದ ಹೊಸ ಅನುಭವಗಳಿಗೆ ನಮ್ಮನ್ನು ತೆರೆದಿಡುವುದು ಒಂದೆಡೆಯಾದರೆ, ತೀರ ಅನಿಶ್ಚಿತ ಅಪರಿಚಿತ ಪ್ರಪಂಚಕ್ಕೆ ಒಮ್ಮೆಗೇ ನೂಕಿಬಿಡುವಾಗ ಭೀಕರವೆನಿಸುವುದೂ ಉಂಟು. ಈ ಎಲ್ಲವನ್ನೂ ಎದುರಿಸಬೇಕಾದ ಅನಿವಾರ್ಯವೂ ಉಂಟು. ಈ ಘಟ್ಟದಲ್ಲಿ ನಮ್ಮ ಪಯಣ ಸಾಗಿದ್ದು ಮದ್ರಾಸಿನಿಂದ ಕೋಲ್ಕತ್ತಾ ಕಡೆಗೆ.
 
ನನ್ನ ಸಹಚರರೆಲ್ಲಿ ಬಹಳಷ್ಟು ಮಂದಿ ಬೆಂಗಾಲಿಗಳು. ಭಾರತದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆಯಲ್ಲಿರುವವರ ಪೈಕಿ ಬೆಂಗಾಲಿಗಳ ಸಂಖ್ಯೆ ಬಹಳ ದೊಡ್ಡದಿದೆ. ಅದಕ್ಕೆ ಅಲ್ಲಿನ ಸಾಂಸ್ಕೃತಿಕ ಕಾರಣಗಳು ಬಹಳಷ್ಟಿವೆ. ಹಾಗಾಗಿ ನನ್ನ ಜೊತೆಗೆ ನನ್ನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರೆಲ್ಲರೂ ಬೆಂಗಾಲಿಗಳು.. ಅವರು ಕೋಲ್ಕತ್ತಾವನ್ನು, ಅಲ್ಲಿನ ಭೌದ್ಧಿಕ ಪ್ರಪಂಚವನ್ನು ಹೊಗಳುವುದನ್ನು ಕಂಡಾಗ ಒಮ್ಮೆಯಾದರೂ ಅಲ್ಲಿ ಇರಬೇಕೆಂದೆನಿಸಿದ್ದು ಸತ್ಯ. ಅದೊಂದೇ ಅಲ್ಲದೆ ನನ್ನ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆಯೂ ಇಲ್ಲ ಬಹಳಷ್ಟು ಮಂದಿಯಿದ್ದಿದ್ದರಿಂದ ಇಲ್ಲಿಗೆ ಹೋಗುವುದೆಂದು ತೀರ್ಮಾನಿಸಿದ್ದು. ನಿರ್ಧರಿಸಿದ ನಂತರ ನನಗೆ ಉದ್ಯೋಗದ ಆಯ್ಕೆ ಪತ್ರ ಬಂದ ನಂತರ ಕೇವಲ ಹತ್ತು ದಿನಗಳು ಮಾತ್ರ ಉಳಿದಿತ್ತು.. ಈ ಹತ್ತು ದಿನಗಳಲ್ಲಿ ಮದ್ರಾಸಿನಿಂದ ಹೊರಟು ಕೋಲ್ಕತ್ತಾ ಸೇರಿ ಅಲ್ಲಿ ಮನೆ ಮಾಡಿ ಎಲ್ಲವನ್ನೂ ಹೊಂದಿಸಬೇಕಿತ್ತು.
 
ಅಲೆಮಾರಿತನದ ಸಾದ್ಯತೆಗೆ ತೆರೆದುಕೊಳ್ಳಬೇಕೆಂದುಕೊಂಡಾಗ ಮೊದಲು ಎದುರಿಸಿದ ಸಂದಿಗ್ಧತೆಯೆಂದರೆ ನಮ್ಮ ಬದುಕಿಗೆ ಅವಶ್ಯವಾದ ವಸ್ತುಗಳೇನು ? ಬೆಂಗಳೂರಿನಿಂದ ಚೆನ್ನೈಗೆ ಬಂದಾಗ, ಅಪ್ಪಟ ಸಂಸಾರಿಯ ಬದುಕಿಗೆ ಸಿದ್ದಗೊಂಡಿದ್ದೆ. ಅಪ್ಪಟ ಸಂಸಾರಿಯ ಎಲ್ಲಾ ಸಾಮಗ್ರಿಗಳೂ ಬೆಂಗಳೂರಿನಿಂದಲೇ ಇಲ್ಲಿಗೆ ಬಂದಿದ್ದವು. ಅಲ್ಲದೆ ಚೈನ್ನೈಗೆ ಬಂದ ಒಂದೇ ದಿನದಲ್ಲಿ ಹೋಗಿ ಟಿ.ವಿ, ಬಟ್ಟೆ ಒಗೆಯೋ ಯಂತ್ರ, ಮಂಚ, ದಿವಾನ ಎಂದು ಮನೆಯಲ್ಲಿ ಜಾಗ ಎಲ್ಲಿದೆ ಎಂದು ಹುಡುಕಬೇಕು ಎನ್ನುವಷ್ಟು ಸಾಮಗ್ರಿಗಳನ್ನ ಜೋಡಿಸಿಟ್ಟುಕೊಂಡದ್ದು. ಸಂಸಾರಿಯೆಂದರೆ ಅಷ್ಟೇ ಅಲ್ಲವ. ಎಲ್ಲರಿಗೂ ತೋರಿಸಬೇಕಲ್ಲವ. ಮನೆಯಲ್ಲಿ ಸಾಮಾನು ಸೇರಿದಷ್ಟೂ ನಾವು ಸುಖೀ ಜೀವಿಗಳಲ್ಲವೆ. ಇದು ಸಮಾಜ ಬರೆದದ್ದು ಅಲ್ಲವ. ಹಾಗಾಗಿ ಮನೆ ತುಂಬಾ ಸಾಮಾನುಗಳೇ, ಸಾಮಾನುಗಳು. ಯಾರೋ ಎಂದೋ ಬರುತ್ತಾರೆಂದು ನಾಲ್ಕು ಹಾಸಿಗೆ, ಒಂದಿಷ್ಟು ಜಮಖಾನ, ಇರುವ ಇಬ್ಬರಿಗೆ ಮತ್ತೇ ಎರಡು ಖುರ್ಚಿ. ಹೀಗೆ ವಿವರಿಸುತ್ತಾ ಹೋದರೆ ಹೋಗುತ್ತಲೇ ಇರುತ್ತದೆ. ಇಷ್ಟ ಪಟ್ಟು, ದುಡ್ಡು ಕೊಟ್ಟು ತಂದಿದ್ದೇನೋ ಆಯಿತು. ಆದರೆ…. ಸ್ವಲ್ಪೇ ದಿನಕ್ಕೆ ಈ ಸಂಸಾರಿಯ ಜೀವನ ಹೊಂದುವುದಿಲ್ಲವೆಂದು ತಿಳಿದು ಹೋಯಿತು. ಟಿ. ವಿ ನಮ್ಮ ಮನೆಗೆ ಮೊದಲ ಶತ್ರುವಾಗಿದ್ದು. ನಾನು ಮನೆಗೆ ಬರುತ್ತಿದ್ದದ್ದೆ, ರಾತ್ರಿ ಏಳು ಗಂಟೆಗೆ. ಬಂದ ನಂತರ ಆಯಾಸವಾಗಿರುತ್ತಿತ್ತು, ತಗೋ ಟಿ. ವಿ. ಮುಂದೆ ಕೂತರೆ ಆಯಿತು. ಬೇಕೋ ಬೇಡವೋ ಸುಮ್ಮನೆ ನೋಡುತ್ತ ಕೂರುವುದು. ಒಂದಾದರೂ ಉಪಯೋಗಕ್ಕೆ ಬರುವ ಕಾರ್ಯಕ್ರಮಗಳಿದ್ದವ, ಇಲ್ಲ. ಟಿ ವಿ ನೋಡುವ ಖುಷಿಯಲ್ಲಿ ಮೃಣನ್ಮಯಿಯೊಂದಿಗೆ ಮಾತನಾಡುವುದೇ ತಪ್ಪಿ ಹೋಯಿತು, ಹಾ ಇದೆ, ಇಲ್ಲ ಅಷ್ಟೆ. ಅವಳೂ ಟಿ ವಿ ನಾನೂ ಟಿ ವಿ. ಇನ್ನು ನಿತ್ಯವೂ ನಾನು ರಾತ್ರಿ ಮಲಗುವ ಮುಂಚೆ ಪುಸ್ತಕ ಓದುತ್ತಿದ್ದ ಹವ್ಯಾಸಕ್ಕೂ ಸ್ಪಷ್ಟವಾಗಿ ಎಳ್ಳು ನೀರು ಬಿಟ್ಟದ್ದಾಯಿತು. ಯಾರಾದರೂ ಏನನ್ನಾದರೂ ಓದಿದೆಯ ಎಂದು ಕೇಳಿದರೆ ಸಿದ್ಧ ಉತ್ತರ. “ಅಯ್ಯೋ ಸಮಯಾನೆ ಇಲ್ಲಪ್ಪ, ಕೆಲಸಾನೇ ಸಾಕಾಗಿ ಹೋಗುತ್ತೆ". ನಿಜ ಹೇಳಬೇಕೆಂದರೆ, ಕೆಲಸ ಅಷ್ಟೋಂದು ಇರುತ್ತಿರಲಿಲ್ಲ. ನಾನೋ post-doctoral fellow ಆಗಿದ್ದದ್ದು. ಮನೆ ಪಕ್ಕವೇ ಸಂಶೋದನಾ ಸಂಸ್ಥೆಯಿದ್ದದ್ದು. ಯಾವುದೇ ಒತ್ತಡಗಳಿರಲಿಲ್ಲ. ಬಿಂದಾಸ್ ಕೆಲಸ. ಆದರೂ ಮನೆಗೆ ಬಂದರೆ ಮಾಡುತ್ತಿದ್ದದ್ದೇನಪ್ಪಾ ಎಂದರೆ ನಯಾ ಪೈಸೆ ಉಪಯೋಗವಿಲ್ಲದ ಕಿತ್ತು ಹೋದ ಧಾರವಾಹಿಗಳನ್ನೋ, ವಾರ್ತೆಗಳನ್ನೋ ನೋಡುತ್ತಿದ್ದದ್ದು. ಅದು ಇಷ್ಟಕ್ಕೇ ನಿಲ್ಲಲಿಲ್ಲ, ತಿಳಿದೋ ತಿಳಿಯದೆಯೊ ನಮ್ಮ ಆಲೋಚನೆಗಳನ್ನ ಈ ಧಾರವಾಹಿಗಳು ನಿಯಂತ್ರಿಸಹೊರಟಿದ್ದವು. ಮಯಿಯೂ ನಾನು ಯಾವ ಕಾರಣಕ್ಕೆ ಕೋಪಿಸಿಕೊಳ್ಳುತ್ತಿದ್ದೇವೆ ಎಂಬ ಅರಿವೇ ಇರುತ್ತಿರಲಿಲ್ಲ. ಊಟ ತಿಂಡಿ ಮಾಡುವಾಗ ಎದುರಿಗೆ ಟಿ ವಿ, ತಿನ್ನುತ್ತಿದ್ದುದರ ಬಗೆಗೆ ಸ್ವಲ್ಪವೂ ಗಮನವಿಲ್ಲ. ಅದೂ ಒಂದು ತಿನ್ನುವ ವಿಧಾನವ? ಈಗ ನೆನೆದರೆ ಹೇಸಿಗೆಯೆನಿಸುತ್ತೆ. ಇಬ್ಬರ ಮನಸ್ಥಿತಿಗಳು ಪೂರ ಕೆಡುತ್ತಿದೆ ಎಂದು ಅರಿವಾದಾಗ, ಈ ಟಿ ವಿ ಅನ್ನು ಬಂದ್ ಮಾಡುವುದೆಂದು ನಿರ್ದರಿದೆವು. ಸಂಸಾರಿಯ ಮೊದಲ ಸರಂಜಾಮು ಹೀಗೆ ಮೂಲೆ ಸೇರಿತು. ನಂತರ ಅದು ಹೇಗೋ ಏನೋ ಅದನ್ನ ಹಳ್ಳಿ ಮನೆಗೆ ಸೇರಿಸಿದ್ದಾಯಿತು. ಹಳ್ಳಿಯಲ್ಲಿ ನಮ್ಮ ಮನೆಯಲ್ಲಿ ಹೊಸ ಟಿ ವಿ ಎಲ್ಲರಿಗೂ ಖುಶಿಯೋ ಖುಶಿ. ಹಳೇ ಟಿ ವಿ ಯನ್ನೂ ಇಟ್ಟುಕೊಂಡು ಎರೆಡರಲ್ಲೂ ಈಗ ನೋಡುವುದು ಸಾದ್ಯವಾದದ್ದಕ್ಕೆ.
 
ಹೀಗೆ ಸಂಸಾರಿಯಾಗಲಿಕ್ಕೆ ತಂದ ಒಂದೊಂದು ವಸ್ತುವಿಗೂ ಒಂದೊಂದು ಕತೆಗಳಿವೆ. ತಾಳ್ಮೆಯಿಂದಿರಿ. ಹೇಳುತ್ತಿರುತ್ತೇನೆ. ಇನ್ನು ಕಬ್ಬಿಣದ ಮಂಚ. ಅದನ್ನ ಹೇಗೆ ಕೊಂಡೆವೋ ದೇವರಿಗೇ ಗೊತ್ತು. ಬರೀ ತಗಡು. ಹೇಗೇ ಮಲಗಿದರೂ ಬೆನ್ನು ನೋವು. ಅದನ್ನೂ ಮೂಲೆಗೆ ಸೇರಿಸುವುದೆಂದು ನಿರ್ದಾರವಾಯಿತು. ಸುಮ್ಮನೆ ಮೂಲೆಯಲ್ಲಿಡಲಿಕ್ಕೆ ಸಾದ್ಯವಿಲ್ಲವಲ್ಲ. ಅದಕ್ಕೊಂದಿಷ್ಟು ಜಾಗ ದಂಡ. ಏನು ಮಾಡುವುದು. ಯಾರಿಗಾದರೂ ಮಾರುವುದ?. ಏನಂತ ಹೇಳಿ ಮಾರುವುದು, ಇದು ಡಬ್ಬ ತಗಡು, ರಾತ್ರಿ ಮಲಗಿದರೆ ಸರಿಯಾಗಿ ಬೆನ್ನು ನೋವು ಬರುತ್ತೆ ಎಂದೇ. ಇಲ್ಲ ಹೇಳದೆ ಮಾರಿದೆವು ಎಂದಿಟ್ಟುಕ್ಕೊಳ್ಳೋಣ, ಮಂಚ ಮುರಿದೋ ಇನ್ನೇನೋ ಆದರೆ, ಕೊಂಡವ ಸುಮ್ಮನಿದ್ದಾನೆಯೆ, ಅದೂ ಮದ್ರಾಸಿನಲ್ಲಿ, ಭಾಷೆ ಗೊತ್ತಿಲ್ಲದ ನಮ್ಮನ್ನ ಸುಮ್ಮನೆ ಬಿಟ್ಟಾರೆಯೆ. ಹೀಗೆಲ್ಲ ಆಲೋಚನೆಗಳು ಸಾಗುತ್ತಿರಬೇಕಾದರೆ, ನನ್ನ ಶ್ರೀಮತಿಗೆ ಅದೆಲ್ಲಿಂದ ಅದೇನು ಆಲೋಚನೆ ಹೊಳೆಯಿತೋ ಏನೋ ಸೀದ ತೆಗೆದುಕೊಂಡು ಹೋಗಿ ಮನೆಯ ಮುಂದೆ ಇಟ್ಟು ಬೇಕಿದ್ದವರು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಎಂದು ತಮಿಳು ಬಾರದಿದ್ದರೂ, ಅದ್ಯಾವ ಭಾಷೆಯಲ್ಲಿ ಹೇಳಿದಳೋ, ಅವರಿಗೇನರ್ಥವಾಯಿತೋ ಒಟ್ಟಿನಲ್ಲಿ ಮಂಚವನ್ನು ಉಚಿತವಾಗಿ ತೆಗೆದುಕೊಂಡುಹೋಗಿದ್ದರು. ಹೀಗೆ ಮತ್ತೊಂದು ವಸ್ತುವು ಉಚ್ಚಾಟಿಸಲ್ಪಟ್ಟಿತು. ಅಜ್ಜಿ ಮಲಗಲಿಕ್ಕೆ ಅಂತ ಸಣ್ಣ ಮಂಚೆ, ದಿವಾನ ತಂದಿದ್ದದ್ದು. ಅಜ್ಜಿ ಯೇನೋ ಇದ್ದಷ್ಟೂ ದಿವಸ ಮಲಗಿದ್ದರು. ಅಜ್ಜಿ ಹೋದ ಮೇಲೆ ಆ ಒಂದು ಸಣ್ಣ ಮಂಚವೂ ಅನಾಥವಾಗಿಹೋಯಿತು. ಚೆನ್ನೈ ಅಲ್ಲಿ ಬಟ್ಟೆ ಒಗೆಯುವ ಯಂತ್ರ ತೆಗೆದುಕೊಂಡದ್ದು ಬೇಸಿಗೆ ಬಂದ ತಕ್ಷಣ ಅದರ ನಿರುಪಯುಕ್ತತೆ ತಿಳಿದುಹೋಯಿತು. ಎಲ್ಲಿದೆ ನೀರು ಅಷ್ಟೊಂದು. ಯಂತ್ರವೇನೋ ಉಂಟು। ಸ್ವಲ್ಪ ಬಟ್ಟೆ ಒಗೆಯಲಿಕ್ಕೆ ಬಕೀಟುಗಳ ಗಟ್ಟಲೆ ನೀರನ್ನ ತೆಗೆದುಕೊಳ್ಳುತ್ತೆ. ನಮ್ಮ ಮನೆಯಲ್ಲೋ ನಾಲ್ಕು ಸಾರಿ ಮೋಟರ್ ಹಾಕಿದರೂ ನೀರು ಬರುವುದು ಅಷ್ಟೆಕ್ಕಷ್ಟೆ ಒಮ್ಮೆ ಕಾಲು ತೊಳೆದರೆ ಮುಖ ತೊಳೆಯಲ್ಲಿಕ್ಕೆ ಇರುತ್ತಿರಲಿಲ್ಲ. ಹಾಗಾಗಿ ಬಟ್ಟೆ ಒಗೆಯುವ ಯಂತ್ರವೂ ಉಪಯೋಗವಿಲ್ಲದೆ ಹೋಯಿತು.
 
ಈಗ ಒಂದೂರಿಂದ ಮತ್ತೊಂದೂರಿಗೆ ಪಯಣ. ಇಲ್ಲಿಂದ ಅಲ್ಲಿಗೋಗಿ ಮತ್ತೆ ಬದುಕನ್ನ ಕಟ್ಟಿಕೋಬೇಕು. ಹೊಸ ಜಗತ್ತು. ಹೊಸ ಜನ. ಹೊಸ ರೀತಿ ನೀತಿಗಳು. ಒಮ್ಮೆಗೇ ಹೊಂದುವುದಿಲ್ಲ. ಬಹಳಷ್ಟು ಬಾರಿ ಭಯವಾಗುತ್ತಿರುತ್ತದೆ. ಆದರೂ ಆಯ್ಕೆಯಿದು. ಆ ಹೊಸ ಅವತಾರಗಳೇ ಹೊಸ ಅನುಭವಗಳಾಗುವುದು. ಅದೇ ನಂಬಿಕೆ. ಹಾಗಾಗಿಯೆ ಹೊಸದಕ್ಕೆ ಹಾರೈಕೆ. ಮೊದಲನೆಯದಾಗಿ, ಕೋಲ್ಕತ್ತಾಗೆ ಹೋಗಲಿಕ್ಕಿರುವುದೇ ಇನ್ನು ಹತ್ತು ದಿನಗಳು. ಅಲ್ಲಿ ಎಷ್ಟು ಕಾಲ ಇರುತ್ತೇವೆಯೋ ಗೊತ್ತಿಲ್ಲ. ಬಹಳ ಅನಿಶ್ಚಿತತೆಯಿದೆ. ಅಲ್ಲದೆ ಮದ್ರಾಸಿನಿಂದ ಕೋಲ್ಕತ್ತ ಬಹಳ ದೂರ. ಇಲ್ಲಿಂದ ಸಾಮಾನುಗಳನ್ನು ಸಾಗಿಸಲಿಕ್ಕೆ ಆಗುವುದಿಲ್ಲ. ಅದಕ್ಕೆ ಕೊಡುವ ಹಣದಲ್ಲಿ ನಾವದನ್ನು ಕೊಳ್ಳಲೇ ಬಹುದು. ಹೀಗೆ ಅನಿವಾರ್ಯವಾದ ಪ್ರಾಯೋಗಿಕ ಕಷ್ಟಗಳೊಂದಿಗೆ ಸೈದ್ಧಾಂತಿಕವಾಗಿಯು ಹಲವು ಪ್ರಶ್ನೆಗಳಿದ್ದವು. ನಮ್ಮಿಬ್ಬರಿಗೆ ಬೇಕಿರುವುದೆಷ್ಟು? ನಮ್ಮ ಕೈಯಲ್ಲಿ ಕೊಂಡೊಯ್ಯಲಿಕ್ಕೆ ಆಗುವುದೆಷ್ಟೋ ಬಹುಷಃ ಅಷ್ಟು ಮಾತ್ರ ನಮಗೆ ಬೇಕಿರುವುದು. ಉಳಿದದ್ದು ವ್ಯರ್ಥ. ಬೇಕಿಲ್ಲ. ಅನವಶ್ಯ. ಎರಡೇ ಮುಖ್ಯ ಅವಶ್ಯ ವಸ್ತುಗಳು. ಬಟ್ಟೆ,, ಹಾಕಿಕೊಳ್ಳುವ ಹಾಗು ಹೊದೆಯುವವು ಮತ್ತು ಅಡುಗೆ ಮಾಡಿಕೊಳ್ಳಲು ಬೇಕಿರುವ ಕನಿಷ್ಟ ಪಾತ್ರೆ ಸಾಮಾನುಗಳು. ಉಳಿದಂತೆ ಲ್ಯಾಪ್ ಟಾಪ್ ಮತ್ತಿತರೆ ಸಣ್ಣ ಪುಟ್ಟ ಸಾಮಾನುಗಳು. ಮಾನಸಿಕವಾಗಿ ನಿರ್ದರಿಸಿದೆವು. ನಮ್ಮ ಬಳಿ ಎರೆಡು ಟ್ರಾಲಿ ಸೂಟ್ ಕೇಸ್ ಗಳಿದ್ದವು, ಒಂದು ಕೈ ಸೂಟ್ ಕೇಸ್, ಮಿಕ್ಸಿ ಬೇಕೇ ಬೇಕಿದ್ದುದರಿಂದ ಅದರದೊಂದು ಡಬ್ಬ. ಎರಡು ಬ್ಯಾಕ್ ಪ್ಯಾಕ್. ಇಷ್ಟರಲ್ಲಿ ನಮ್ಮ ಮನೆಯ ಸಾಮಾನುಗಳಿಡಿಸಬೇಕು ಎಂದು ನಿರ್ದರಿಸಿಯಾಗಿತ್ತು.
 
ಇನ್ನು ವಸ್ತುಗಳನ್ನ ಜೋಡಿಸುವುದೆಂದು. ತೆಗೆದುಕೊಂಡು ಹೋಗಬೇಕಾದ ವಸ್ತುಗಳೇನು ಎಂಬುದೇನೋ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಆದರೆ, ಉಳಿದವುಗಳನ್ನು ಏನು ಮಾಡುವುದು. ಅಷ್ಟೊಂದು ಸಾಮಾನುಗಳು. ಬೇರ್ಪಡಿಸುವುದು ಸುಲಭವಾಗಿರಲಿಲ್ಲ. ಅದೆಷ್ಟು ವಸ್ತುಗಳು, ಅವುಗಳ ಜೊತೆಗಿದ್ದ ನೆನಪುಗಳೂ, ಹಾಗು ಭಾವಗಳು. ಮಯಿಗೆ ಯಾವ ಯಾವ ಕಾರಣಕ್ಕೋ, ಯಾವುದೋ ದಿನದ ವಿಶೇಷವೆಂದೋ, ಯಾವುದೋ ನೆನಪುಗಳಿಗೋ ಎಂಬಂತೆ ಕೊಂಡುತಂದು ಕೊಟ್ಟ ವಸ್ತುಗಳು. ಎಂದಿಗಾದರೂ ಅವಶ್ಯಕ್ಕೆ ಬಂದೀತು ಎಂದು ಶೇಖರಿಸಿಟ್ಟ ವಸ್ತುಗಳು. ಮನೆಗೆ ಯಾರಾದರೂ ಬಂದರೆ ಅವರುಗಳಿಗೆ ಎಂದು ಎಂದು ತಂದಿಟ್ಟ ವಸ್ತುಗಳು. ಹಲವಕ್ಕೆ ಹಣ ವ್ಯಯಿಸಿ ಕೊಂಡವುಗಳು. ಏನನ್ನು ಮಾಡುವುದು. ಎಲ್ಲಕ್ಕಿಂತಲೂ ಮುಖ್ಯವಾಗಿ ಎಷ್ಟೋ ಪುಸ್ತಕಗಳು. ಈಗ ಬೇಡವೆಂದೆನಿಸಿರುವುದನ್ನು ಏನು ಮಾಡುವುದು, ಒಮ್ಮೆಗೇ ತಿಪ್ಪೆಗೆ ಹಾಕಲಿಕ್ಕೆ ಮನಸ್ಸು ಒಪ್ಪುವುದಿಲ್ಲವಲ್ಲ. ಒಂದಿಷ್ಟು ಬೆಲೆ ಬಾಳುವ, ಮಯಿಯ ಮನೆಯಿಂದ ತಂದಿದ್ದ ಪಾತ್ರೆಗಳನ್ನು, ಹಾಗು ಅತೀ ಮುಖ್ಯವಾಗಿ ಕನ್ನಡ ಪುಸ್ತಕಗಳನ್ನು, ಸುಮಾರು ನೂರರ ಮೇಲ್ಪಟ್ಟು ಪುಸ್ತಕಗಳಿರಬಹುದು, ಎಲ್ಲವನ್ನೂ ಶಿವಮೊಗ್ಗದ ಬಸ್ಸಿಗಾಕಿ ಮಯಿಮನೆಗೆ ಕಳುಹಿಸಿದ್ದಾಯಿತು. ಆದರೂ ಇನ್ನೂ ನೂರಕ್ಕೂ ಹೆಚ್ಚು ಪುಸ್ತಕಗಳಿವೆ. ಹಲವಾರು ಆಂಗ್ಲ ಪುಸ್ತಕಗಳು. ರಷ್ಯಾದ ಮೂಲ ಆವೃತ್ತಿಗಳು, ಭಾರತೀಯ ತತ್ವಶಾಸ್ತ್ರ, ಬೌದ್ಧ ತತ್ವಗಳು, ಮಾದ್ವ ಸಿದ್ಧಾಂತ, ಮಾರ್ಕ್ಸನ, ಲೆನಿನರ ಅಷ್ಟೂ ಪುಸ್ತಕಗಳು, ಹೀಗೆ ಅದೆಷ್ಟೋ ಪುಸ್ತಕಗಳು. ಅವಗಳನ್ನು ಎಲ್ಲಿಗೂ ಕಳುಹಿಸಲಿಕ್ಕೆ ಆಗಲಿಲ್ಲ. ಅಂತರ್ಜಾಲದಲ್ಲಿ ಯಾರಾದರೂ ತೆಗೆದುಕೊಂಡು ಹೋಗುತ್ತಾರ, ಯಾವುದಾದರೂ ಉಪಯೋಗಿಸುವ ಗ್ರಂಥಾಲಯವಿದೆಯ ಎಂದು ಅದೆಷ್ಟೋ ಹುಡುಕಿದೆ, ಸಾದ್ಯವಾಗಲಿಲ್ಲ. ನಮಗೆ ಅವಶ್ಯ ಇಲ್ಲಾ ಎಂದು ತಿಳಿದರೂ ಅದನ್ನು ಉಪಯೋಗಿಸಿದ್ಧಕ್ಕಾಗಿ ಅದನ್ನು ಸೂಕ್ತ ಸ್ಥಳಕ್ಕೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಕಡೆಗೆ ಸೋತು, ನಮ್ಮದೇ ಸಂಶೋಧನಾ ಸಂಸ್ಥೆಗೇ ಕೊಟ್ಟು ಬಿಡುವುದೆಂದು ತೀರ್ಮಾನಿಸಿದ್ದೆ. ಅದೃಷ್ಟವಷಾತ್ ಚೆನ್ನೈ ಗಣಿತ ಸಂಸ್ಥೆಯ ಸಹೋದ್ಯೋಗಿಯೊಬ್ಬರು ತಾವು ಕಮ್ಯೂನಿಟಿ ಗ್ರಂಥಾಲಯವನ್ನ ನಡೆಸುತ್ತಿರುವುದಾಗಿ, ಎಲ್ಲಾ ಪುಸ್ತಕಗಳನ್ನ ತೆಗೆದುಕೊಳ್ಳುತ್ತೇನೆಂದು ಹೇಳಿದರು. ಒಂದು ದೊಡ್ಡ ಭಾರ ನೀಗಿತು. ಆ ಎಲ್ಲಾ ಪುಸ್ತಕಗಳನ್ನು ಅವರಿಗೆ ಕೊಟ್ಟು ಬಂದು ನೆಮ್ಮದಿಯಿಂದ ಕೂತೆ.
 
ಇನ್ನು ಉಳಿದ ಸಾಮಾನುಗಳು. ಬೀರುವಿನ ತುಂಬಾ ಬಟ್ಟೆಗಳು. ಯಾಕೆ ಕೊಂಡೆ ಎಂದು ಈಗಲೂ ತಿಳಿದಿಲ್ಲ. ಕೊಂಡವುಗಳನ್ನು ಸುಮ್ಮನೆ ಬೀರುವಿನ ತುಂಬಾ ತುಂಬಿಸಿದ್ದದ್ದು. ಮದುವೆಗೆ ಕೊಂಡ ಬಟ್ಟೆಗಳೂ ಸಹ ಸುಮ್ಮನೆ ಬೀರುವಿನ ತುಂಬ. ಅದೆಷ್ಟು ಲೋಲುಪರು ನಾವು ಎಂದೆನಿಸಿತು. ಬೇಸರವಾಯಿತು. ಈ ಅನವಷ್ಯಕ ದುಂದು ವೆಚ್ಚಕ್ಕೆ. ಎಲ್ಲವನ್ನೂ ತೆಗೆದು ಹತ್ತಿರದಲ್ಲೆ ಇದ್ದ ಗೊತ್ತಿದ್ದವರೊಬ್ಬರ ಮನೆಗೆ ನೀಡಿದೆವು. ಅವರೂ, ಅವರಿಗೆ ಗೊತ್ತಿರುವವರು, ಅವಶ್ಯಕತೆಯಿರುವವರಿಗೆ ಕೊಡುತ್ತಾರೆಯೆಂದು ತೀರ್ಮಾನವಾಗಿತ್ತು. ಅದೇ ರೀತಿ ಪಾತ್ರೆಗಳೂ. ಎಲ್ಲವೂ ಅನವಶ್ಯ. ಎಲ್ಲವನ್ನೂ ಅಲ್ಲೇ ವಿಲೇವಾರಿ ಮಾಡಿಬಿಟ್ಟೆವು. ಸಾಕು ಸಾಕಾಗಿ ಹೋಯಿತು. ನಮ್ಮ ಮನಯ ಮಾಲೀಕರೂ ಸಹ ನಿಮಗೆ ಬೇಡವಾದುದ್ದನೆಲ್ಲ ಇಲ್ಲೇ ಬಿಟ್ಟು ಹೋಗಿ ನಾವದನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು. ಹಾಗಾಗಿ ಎಲ್ಲವನ್ನೂ ಚೊಕ್ಕ ಮಾಡಿ ಅಲ್ಲೇ ಬಿಟ್ಟೆವು. ಕಡೆಗೆ ತೀರ್ಮಾನಿಸಿದ್ದಷ್ಟನ್ನ ಮಾತ್ರಾ ಜೋಡಿಸಿಟ್ಟುಕೊಂಡಿದ್ದೆವು. ನಾವಿಬ್ಬರೂ ಜೊತೆಯಾಗಿ ತೆಗೆದು ಕೊಂಡು ಹೋಗುವಷ್ಟು. ನಮ್ಮ ಕೈಯಲ್ಲಿ ಎಲ್ಲಾ ಕಡೆಯೂ ಹೊರುವುದಕ್ಕಾಗುತಿರಲಿಲ್ಲವಾದರೂ, ಕನಿಷ್ಟ ಕಾರಿನಲ್ಲಿ ಇಡುವಷ್ಟಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ಸಹಾಯಕ್ಕೆ ಕೂಲಿಯವರು ಸಿಗುತ್ತಿದ್ದುದರಿಂದ ಸರಿಹೋಯಿತು.
 
ಈ ಅಲೆಮಾರಿ ಬದುಕಿನ ಆರಂಭದ ಪ್ರಯಾಣ ಮಾನಸಿಕವಾಗಿಯೂ, ಬೌದ್ಧಿಕವಾಗಿಯೂ ಹಲವು ಪ್ರಶ್ನೆಗಳಿಂದ ಕಾಡಿತು. ಪಕ್ಕದ ಊರಿಗೇ ಏನನ್ನೂ ಸಾಗಿಸಲಾಗದ ಪರಿಸ್ತಿತಿ ನಮ್ಮದಾಗಿತ್ತು. ಇಂತಹ ಸಂದರ್ಭದಲ್ಲಿ ಅನ್ನಿಸಿದ್ದು. ಸಾವು ನಿಶ್ಚಿತ ಎಂದು ತಿಳಿದಿರುವಾಗ, ಸತ್ತ ನಂತರ ಏನನ್ನೂ ಕೊಂಡೊಯ್ಯಲಿಕ್ಕ ಸಾದ್ಯವಾಗಲಿಲ್ಲವಲ್ಲ ಎಂಬ ಕೊರಗಿನ ಸಮಾಧಾನಕ್ಕ ಒಂದು ಶಾಶ್ವತದ ಚಿತ್ರಣ ಕಟ್ಟಿದ್ದು? ಏನೋ ಒಂದು ಶಾಶ್ವತವಾದದ್ದುಂಟು. ಮಾಡುವುದೆಲ್ಲವುದಕ್ಕೂ ಅದರಲ್ಲಿ ಲೆಕ್ಕವುಂಟು. ಬದುಕಿನಲ್ಲಿ ಸಂಪಾದಿಸಿದ್ದು, ಅದು ಪುಣ್ಯವಿರಲಿ, ಪಾಪವಿರಲಿ ಕೊಂಡೊಯ್ಯಲಿಕ್ಕುಂಟು. ಕಳೆದುಕೊಳ್ಳಬೇಕಾದ ಭೀಕರವಾದ ಶೂನ್ಯಕ್ಕೆ ಸಂವಾದಿಯಾಗಿ ಶಾಶ್ವತದ ಚಿತ್ರಣ ಮೂಡಿದ್ದಿರಬಹುದ? ಗೊತ್ತಿಲ್ಲ. ನನಗೆ ಶಾಶ್ವತದ ಮೇಲೆ ನಂಬಿಕೆ ಇಲ್ಲ. ಸದ್ಯದ ಮಟ್ಟಿಗೆ ನನ್ನ ಶರೀರದ ಹೊರತಾಗಿ ನನ್ನದು ಎಂದು ಇರಬಹುದಾದುದರ ಚಿತ್ರಣ ನನಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸಾವು ನಿಶ್ಚಿತ ಎಂದು ತಿಳಿದು, ಏನನ್ನೂ ಎಂದಿಗೂ ಎಲ್ಲಿಗೂ ಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎಂದು ತಿಳಿದಾಗ, ಸ್ವಲ್ಪ ವಿಚಲಿತನಾದೆ. ಲಕ್ಷ್ಮೀಶ ತೋಳ್ಪಾಡಿಯವರು ಭಾಗವತದ ಕುರಿತಾಗಿ ಮಾತನಾಡುವಾಗ, ಆಡಿದ "ಮನುಷ್ಯ ಸಾವು ನಿಶ್ಚಿತ ಎಂದು ತಿಳಿದಾಗ ಮಾಡಲೇಬೇಕಾಗಿರುವುದೇನು" ಎಂಬಂತಹ ಮಾತು ನೆನಪಾಯಿತು. ಸ್ವಲ್ಪ ಬದಲಾಯಿಸಿದರೆ, ಸಾವು ನಿಶ್ಚಿತ ಎಂದು ತಿಳಿದ ಮನುಷ್ಯ ಬದುಕಬೇಕೇಕೆ ಎಂಬ ಪ್ರಶ್ನೆ ಇನ್ನೂ ಮುಖ್ಯವಾಗಿ ಕಾಡಲಾರಂಭಿಸಿತು.
 
ಆರಂಭದಲ್ಲಿ ನಾನೆ ಕೇಳಿಕೊಂಡ, ಬರೆಯಬೇಕೇಕೆ, ಅನುಭವಗಳನ್ನ ಹಂಚಿಕೊಳ್ಳಬೇಕೇಕೆ ಎಂಬ ಪ್ರಶ್ನೆಗೆ ಈ ಸಂದರ್ಭದಲ್ಲಿ ಮೂಡಿದ ಪ್ರಶ್ನೆಗಳ ಜೊತೆಯಲ್ಲೆ ಉತ್ತರ ಕಾಣ ಬಯಸಿದೆ. ಅನುಭವಕ್ಕಿಂತ ಮಿಗಿಲಾದದ್ದು ಏನುಂಟು? ಕಾಣುವುದಕ್ಕಿಂತ ಉಳಿದದ್ದು ಏನಿದೆ? ಹೊತ್ತಯ್ಯೊಲಿಕ್ಕೆ ಆಗದಾದಾಗ ಇರುವುದಲ್ಲದೆ ಇನ್ನೇನುಂಟು. ಇರುವುದರಲ್ಲೆ ಕಾಣಬೇಕಿದೆ. ಈ ಕಾಣುವುದು ಎನ್ನುವ ಪದ ವಿಶೇಷವಾದದ್ದು. ನಾನು ಒಂದು ಬಗೆಯಲ್ಲಿ ಎದುರಿಗಿರುವುದನ್ನು ಕಾಣಬಹುದು, ಮತ್ತೊಬ್ಬರಿಗೆ ಅದು ಬೇರೆಯದೇ ರೀತಿಯಲ್ಲಿ ಕಾಣಬಹುದು. ಈ ಕಾಣುವುದು ಎನ್ನುವ ಪದವನ್ನ ನಾನು ಬಹಳ ಎಚ್ಚರಿಕೆಯಿಂದ ಬಳಸುತ್ತಿದ್ದೇನೆ. ಹೆಚ್ಚಿನ ವಿವರಣೆ ಸಾದ್ಯವಾಗುತಿಲ್ಲ. ಎದುರಿಗಿರುವ ವಸ್ತುವಿನಲ್ಲೆ, ದಕ್ಕಿದ ಅನುಭವದಲ್ಲೆ ನಮಗೆ ಕಾಣುವುದಕ್ಕೊಂದಿದೆ. ಅನುಭವಗಳನ್ನು ಪುನಃ ನಿರ್ಮಿಸಿ ಬರೆಯಹೊರಟಾಗ ಕಾಣುವುದು ಬೇರೆಯದೇ ಹಂತ ತಲುಪಲಿಕ್ಕುಂಟು. ನೋಟ ಸೂಕ್ಷ್ಮವಾದಷ್ಟೂ ಇರುವಿಕೆಯು ಹಲವು ಪದರಗಳಲ್ಲಿ ತೆರೆದುಕೊಳ್ಳತೊಡಗುತ್ತವೆ. ಹೀಗೆ ಕಾಣುವುದೇ ಈ ಅಲೆಮಾರಿತನದ ಉದ್ದೇಶವೋ ಏನೋ ಎಂದು ಆಲೋಚಿಸುತ್ತಾ ಕೋರಮಂಡಲ್ ರೈಲು ಹತ್ತಿ ಕೋಲ್ಕತ್ತಾ ಕಡೆಗೆ ಹೊರಟೆವು.


ವಿಸರ್ಜನೆ

                                        

ಕಾಳೀ, ನೀನೂ ಮಣ್ಣೇನ
ಏನು ಸೋಜಿಗವೆ ನಿಂದು
ಒಳಗೆಲ್ಲಾ ಬರೀ ಹುಲ್ಲು
ವಿಸರ್ಜನೆಗೆ ಹೂಗ್ಲಿ 
ಹರಿಯುತ್ತಲೇ ಇದ್ದಾಳೆ
ಜನಜಂಗುಳಿ
ಎಲ್ಲೆಲ್ಲೂ ಆರತಿ ಬೆಳಕು
ನೀರೊಳಗಿನ ಮೀನು ಕಂಡೀತೆ
ಒಬ್ಬನೇ ನಿಂತಿದ್ದೀನಿ ದೂರದಲ್ಲಿ
ಕೆಂಪು ದಾಸವಾಳ ಕೈಲಿಡಿದು
ಕರಗಿದ ಮೇಲೆ ಬರುತ್ತೀಯ
ಒಂದಿಷ್ಟು ಹರಟೋಣವಂತೆ

ರಥಬೀದಿ

                                        

ಮರೆಯಾಗಿದೆ  ರಥಬೀದಿ
ಹಣೆಯಲ್ಲಿನ ವಿಭೂತಿ
ಅಳಿಸಿದಂತೆ ಮಳೆನೀರಲ್ಲಿ
ಒಂದೇ ಹೊಡೆತಕ್ಕೆ
ತುಂಬಿದೆ ನೀರು ಎಲ್ಲೆಲ್ಲೂ
ಕಾಣೆಯಾಗಿದ್ದಾಳೆ - ಸಿಕ್ಕಿಲ್ಲ
ಕಪಾಲಿ, ಸ್ಮಶಾನ ದೂರ
ಅದೂ ಮುಳುಗಿರಬಹುದು
ಇದ್ದಾರ ಯಾರಾದರೂ
ಬಿಕ್ಷೆ ಹಾಕಲಿಕ್ಕೆ 
ಈಗಲೂ ಬೇಡಲಿಕ್ಕುಂಟ
ನಾನೂ ನೀರಲ್ಲಿ ಮುಳುಗಿದ್ದೇನೆ
ಉಸಿರುಕಟ್ಟಿದೆಯಾದರೂ ಹಸಿವಿದೆ
ಕೊಡುತ್ತೀಯ ನೀನು ಬೇಡಿತಂದಿದ್ದರಲ್ಲಿ
ಸ್ವಲ್ಪವನ್ನಾದರೂ
ಓ ಕಪಾಲಿ

........


ಮಣ್ಣ
ತಂದು ಗುಡ್ಡೆ ಮಾಡಿ
ಒಂದೆರೆಡು ಬಾರಿ ಕುಟ್ಟಿ
ನೀರು ಹಾಕಿ
ಕಣ್ಣ ಹುಬ್ಬು ತೀಡಿದರೆ
ಗಣೇಶ,  ದೇವರು ಸಿದ್ಧ 
ಎಷ್ಟು ಸುಲಭ,  ದೇವರು

ನನ್ನದೊಂದೇ ಫಿರ್ಯಾದು
ಎಷ್ಟೇ ಚಂದವಾಗಿ ತೀಡಲಿ
ನೀರಿಗಾಕಿದಾಗ ಕರಗುತ್ತೆ
ಮತ್ತೇ ಮಣ್ಣಾಗುತ್ತೆ
ದೇವರೂ ಸಹ

ಭೌತಶಾಸ್ತ್ರದ ಪ್ರೀತಿಗಾಗಿ

ಇನ್ನೇನು ಆಗಲೇ ಕಾಲೇಜು, ಮುಖ್ಯವಾಗಿ ಪದವಿ ತರಗತಿಗಳು ಆರಂಭವಾಗಿರಬೇಕು ಅಥವಾ ಇಷ್ಟರಲ್ಲೇ ಆರಂಭವಾಗಬಹುದು. PUC ಎಂಬ ತ್ರಾಸಮಯ ಘಟ್ಟ ಮುಗಿಸಿ ಈಗ ಹೊಸದೊಂದು ಯಾನವನ್ನ ಆರಂಭಿಸಲು ಹೊರಡುವ ಸಮಯ. ಹಲವರು ಇಂಜಿನಿಯರಿಂಗ್ ಎಂದೋ ಮೆಡಿಕಲ್ ಎಂದೋ ಹೋಗಿರುತ್ತಾರೆ. ಕೆಲವರು ಮೂಲತಃ ಮೂಲ ವಿಜ್ಞಾನದಲ್ಲಿ ಆಸಕ್ತಿಯಿರುವವರು ಪದವಿಗೆ ಸೇರಿರುತ್ತಾರೆ. ಮತ್ತೆ ಕೆಲವರಿಗೆ ಮೂಲ ವಿಜ್ಞಾನದಲ್ಲಿ ಆಸಕ್ತಿಯಿದ್ದರೂ ಇಂಜಿನಿಯರಿಂಗ್ ಸೇರಿರುತ್ತಾರೆ. ಮೂಲ ವಿಜ್ಞಾನದಲ್ಲಿ ಆಸಕ್ತರಾಗಿ ಮುಂದೆ ಸಂಶೋಧಕರಾಗಬೇಕೆಂದು ಬಯಸುವವರಿಗೆ ನನ್ನ ಅನುಭವದಲ್ಲಿ ದಕ್ಕಿದ ಒಂದಿಷ್ಟು ಮಾಹಿತಿಗಳನ್ನ ಕೊಡಬೇಕೆಂದೆನಿಸಿ ಈ ಲೇಖನ ಬರೆಯುತ್ತಿದ್ದೀನಿ. ನನ್ನ ಕ್ಷೇತ್ರ ಸೈದ್ಧಾಂತಿಕ ಬೌತಶಾಸ್ತ್ರ., ಹಾಗಾಗಿ ಆ ಕ್ಷೇತ್ರದ ಬಗೆಗೆ ಮಾತ್ರ ದೀರ್ಘವಾಗಿ ಬರೆಯುತ್ತೀದ್ದೀನಿ. ನನ್ನ ಸ್ನೇಹಿತರ್ಯಾರಾದರೂ ಒಪ್ಪಿದರೆ ಉಳಿದ ಕ್ಷೇತ್ರಗಳ ಬಗೆಗೆ ಬರೆಸಲು ಪ್ರಯತ್ನಿಸುತ್ತೇನೆ.. ಅಷ್ಟೇ ಅಲ್ಲ ಮಾನವೀಯ ವಿಷಯಗಳ ಬಗೆಗೂ ಬರೆಸಬೇಕೆಂದಿದ್ದೇನೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ. ವಿಷಯಾಧಾರಿತ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಉಳಿದ ಹಲವು ವಿಷಯಗಳನ್ನು ಸಮಾನವಾಗಿ ಸ್ವೀಕರಿಸಬಹುದು. ಇಲ್ಲಿನ ವಸ್ತುನಿಷ್ಠ ವಿಷಯಗಳನ್ನು ಹೊರತುಪಡಿಸಿ ಉಳಿದದ್ದು ನನ್ನ ಅನುಭವಕ್ಕೆ ಬಂದವುಗಳು, ಹಲವನ್ನು ನಾವುಗಳು ಅನುಸರಿಸಿದವುಗಳು. ಇವೇ "ಇದ ಮಿತ್ತಂ" ಎಂಬಂತಹ ಶಾಸನಗಳೇನೂ‌ ಅಲ್ಲ. ಎಲ್ಲರಿಗೂ ಎಲ್ಲಾ ಸಂಧರ್ಭಕ್ಕೂ ಅನ್ವಯವಾಗಬೇಕೆಂದೇನೂ ಅಲ್ಲ. ಏನೋ ನನಗನ್ನಿಸಿದ್ದನ್ನ ಬರೆದಿದ್ದೇನೆ ಅಷ್ಟೆ.


ಮೊದಲಿಗೆ, B.Sc ನಂತರ Msc ಗೆ IIT ಗಳಿಗೆ ಸೇರಬೇಕೆಂದೆನಿಸಿಕೊಂಡವರು IIT-JAM ಎಂಬ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ಅದೇ ರೀತಿ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಪ್ರವೇಷ ಪಡೆಯಲಿಕ್ಕೂ ಯಾವುದಾದರೂ ಒಂದು ಪ್ರವೇಷ ಪರೀಕ್ಷೆಯನ್ನ ಬರೆಯಲೇ ಬೇಕಾಗುತ್ತೆ. ಅಷ್ಟೆ ಅಲ್ಲ M.Sc ನಂತರ PhD ಮಾಡಲಿಕ್ಕೆ ಸಂಶೋದನೆಗೆ ಉನ್ನತ ಸಂಶೋಧನಾ ಸಂಸ್ಥೆಗಳನ್ನ ಸೇರಬಯಸುವವರೂ ಸಹ ಒಂದಲ್ಲ ಒಂದು ಪ್ರವೇಶ ಪರೀಕ್ಷಗಳನ್ನ ಬರೆಯಲೇ ಬೇಕು, ಅದರಲ್ಲಿ ಉತ್ತೀರ್ಣರಾಗಲೇ ಬೇಕು. ಉದಾಹರಣೆ, CSIR NET, JEST, GATE etc. . ಸಂಶೋಧನೆಯೆಂಬುದು ಬಹಳ ಶಿಸ್ತು ಹಾಗು ತಾಳ್ಮೆಯನ್ನ ಬೇಡುತ್ತೆ. ಆಸಕ್ತಿಯಿದ್ದರಷ್ಟೆ ಸಾಲದು, ಶಿಸ್ತು ಬೇಕಾಗುತ್ತೆ. ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಕೆಲವು ವಿಷಯಗಳಿಗಾಗಿ ನನ್ನನ್ನು ಸಂಪರ್ಕಿಸಿದ್ದರು. ಎಲ್ಲರಿಗೂ ಸಂಶೋಧನೆಯ ಮೇಲೆ, ಭೌತಶಾಸ್ತ್ರದ ಮೇಲೆ ಬಹಳ, ಬಹಳ ಎನ್ನುವಷ್ಟು ಆಸಕ್ತಿ ವ್ಯಕ್ತವಾಗುತ್ತಿತ್ತು. ಒಬ್ಬ ಹುಡುಗ ತಾನು ಬೆಳಕಿನ ಮೇಲೆ ಸಂಶೋಧನೆಯನ್ನ ಮಾಡಿ ನ್ಯೂಟನ್ ಅನ್ನು ತಪ್ಪು ಎಂದು ಸಾಧಿಸಿದ್ದಾಗಿಯೂ, ಮತ್ತೊಬ್ಬ Einstein ತಪ್ಪೂ ಎಂದು ಸಾಧಿಸಿದ್ದಾಗಿಯೂ "ವಾದಿಸುತ್ತಿದ್ದರು". ನ್ಯೂಟನ್, Einstein ಸಿದ್ಧಾಂತಗಳೇನೂ ಶಾಶ್ವತವೇನೂ ಅಲ್ಲ. ವಿಜ್ಞಾನದಲ್ಲಿ ಯಾವುದೂ ಶಾಶ್ವತವೇನೂ ಅಲ್ಲ. ಇಲ್ಲಿ ಎಲ್ಲರೂ ಪ್ರಶ್ನಾರ್ಹರೆ. ಆದರೆ ಹಾಗೆ ಪ್ರಶ್ನಿಸುವುದಕ್ಕೆ ಒಂದು ಕ್ರಮವುಂಟು., ತಾರ್ಕಿಕ ನಿಯಮಗಳುಂಟು. ಮೊದಲು ಆ ನಿಯಮಗಳನ್ನ, ಆ ತರ್ಕವನ್ನ ಕಲಿಯಬೇಕು. ಗಟ್ಟಿ ಹತ್ಯಾರಗಳು ಸಿದ್ಧಪಡಿಸಿಕೊಂಡಾದ ಮೇಲೆ, ಎಲ್ಲವೂ ಆರಂಭಗೊಳ್ಳುವುದು. ಶಾಸ್ತ್ರೀಯ ಸಂಗೀತಕ್ಕೆ ಹೇಗೆ ಹಲವು ವರ್ಷಗಳ ಸಿದ್ಧತೆಯಿರುತ್ತದೆಯೋ ಇದೂ ಹಾಗೆಯೆ, ಆ ಸಿದ್ಧತೆ ಬೇಕು. ಅದರ ಕ್ರಮದಲ್ಲೆ ಹೋಗಬೇಕು, ಆಗ ಉತ್ತಮ ಸಂಶೋಧನೆ ಸಾಧ್ಯ . ಮತ್ತೊಂದು ವಿಷಯ ನಾನು ಇಲ್ಲಿ ಪ್ರವೇಶ ಪರೀಕ್ಷೆಗಳ ಸಿದ್ಧತೆಗಳ ಬಗೆಗೆ ಮಾತ್ರ ಬರೆಯುತ್ತಿಲ್ಲ. ಇದು ವ್ಯವಸ್ಥಿತವಾಗಿ ಸಂಶೋಧನೆ ಮಾಡಲು ಆರಂಭ ಹಂತದಿಂದಲೇ ಮೊದಲುಗೊಂಡರೆ ಅನುಕೂಲ ಎಂಬುದು ನನ್ನ ಅಭಿಪ್ರಾಯ. ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಸಂಶೋಧನೆಯಲ್ಲಿ ಯಶಸ್ವಿಯಾಗುತ್ತಾರೆಂದಾಗಲೀ, ಪ್ರವೇಶ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರು ಸಂಶೋಧನೆಗೆ ಲಾಯಕ್ಕಿಲ್ಲೆಂದಾಗಲೀ ಅಲ್ಲ. ಇದೊಂದು ತಯಾರಿ ಅಷ್ಟೆ.

ನಾವುಗಳು ಓದುವ ವಿಧಾನವನ್ನ ಬದಲಿಸಿಕೊಳ್ಳಬೇಕಿದೆ. ಕೆಲವು ಸಂಗತಿಗಳನ್ನು ನೆನಪಿಡುವ ಅವಶ್ಯಕತೆಯಿದೆಯಾದರೂ ನೆನಪಿಡುವುದೇ ನಮ್ಮ ಓದಿನ ಉದ್ದೇಶವಾಗಬಾರದು. ಕೇವಲ ಬಾಯಿಪಾಠದ ನೆನಪಿನಿಂದ ಯಾವ ಉಪಯೋಗವೂ ಇಲ್ಲ. ಒಂದು ಸಂಗತಿಯ ಬಗೆಗೆ ಓದಿದರೆ, ಅದರ ಆಳದ ಅರ್ಥ ತಿಳಿಯಬೇಕು. ಅದು ನಮಗೆ ಅರ್ಥವಾಗಿರಬೇಕು. ಏನೋ ನಮ್ಮ ಮನೆಯ ಮುಂದೆ ನಿತ್ಯ ನಡೆಯುವ ಸಂಗತಿಯಂತೆ ಅತೀ ಸಹಜವಾಗಿ ಕಣ್ಣೆದುರು ಕಾಣುವಂತಿರಬೇಕು. ಸ್ವಲ್ಪ ಕಾವ್ಯಾತ್ಮಕವಾಗಿ ಹೇಳುವುದಾದರೆ ಆ ಸಂಗತಿಗಳೊಡನೆ ಮಾತಿಗೆ, ಮೌನಕ್ಕೆ, ಮುನಿಸಿಗೆ ಸಿಗುವ ಹಾಗೆ ಒಲಿಸಿಸಿಕೊಂಡಿರಬೇಕು. ಇರಲಿ ಈಗ ಒಂದಿಷ್ಟು ಮುಖ್ಯ ಪ್ರಾಯೋಗಿಕ ವಿಷಯಗಳು.

ಪದವಿ ತರಗತಿಗಳಿಗೆ ಪಠ್ಯ ಪುಸ್ತಕಗಳಿರುವುದಿಲ್ಲ. ಯಾರೋ ಕೆಲವರು ಬರೆದಿರುತ್ತಾರೆ. ಆದರಿಂದ ಪರೀಕ್ಷೆಗಳಿಗೆ ತಪ್ಪ ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ. ಹಾಗಾಗಿ ಮೊದಲು ಮಾಡಬೇಕಿರುವ ಕೆಲಸವೆಂದರೆ, ನಿಯಮಿತ ಪಠ್ಯದ ಹೊರಗೆ ಓದುವುದು. ಅತೀ ಮುಖ್ಯವಾಗಿ ಆಕರ ಗ್ರಂಥಗಳನ್ನು ಓದುವುದು. ಇಲ್ಲಿ ನನಗೆ ತೋಚಿದ ಕೆಲವು ಪುಸ್ತಗಳ ಪಟ್ಟಿಯನ್ನು ನೀಡುತ್ತಿದ್ದೇನೆ. ಇಲ್ಲಿ ಇವುಗಳನ್ನ ಎರಡು ವಿಭಾಗಗಳಾಗಿ ವಿಂಗಡಿಸಿದ್ದೇನೆ. ಇಲ್ಲಿನ ಬಹಳಷ್ಟು ಎಲ್ಲಾ ಪುಸ್ತಕಗಳೂ ಲಿಬ್ ಜೆನ್ ಎನ್ನುವ ಕಡೆ ಉಚಿತವಾಗಿ ದೊರೆಯುತ್ತದೆ (ಇದು ಒಂದು ರೀತಿ ಕಳ್ಳ ತಾಣ. ಆದರೂ ಎಲ್ಲರೂ ಇದನ್ನು ಉಪಯೋಗಿಸುತ್ತಾರೆ. ಹಲವರಿಗೆ ಇದರ ಬಗೆಗೆ ತಿಳಿದಿರುತ್ತದೆ. ನಿಮಗೆ ದೊರೆಯದಿದ್ದರೆ ನನಗೆ ಮೇಲ್ ಮಾಡಿ ಲಿಂಕ್ ಅನ್ನು ಕಳುಹಿಸುತ್ತೇನೆ. )

 ಮೊದಲನೆಯದು, ಬಹಳ ವಿಸ್ತಾರವಾಗಿ ಒಂದು ಹಂತದಲ್ಲಿ ಯಾವುದೇ ವಿಷಯವನ್ನ ಹೇಗೆ ಅರ್ಥೈಸಿಕೊಳ್ಳಬಹುದು ಎಂದು ತೋರಿಸುವವು.

1. The Feynman Lectures on Physics :

Vol I - Mainly mechanics, radiation, and heat

Vol II - Mainly electromagnetism and matter

Vol III - Quantum mechanics


2. Berkeley Physics Course

1. Mechanics by Charles Kittel, et al.

2. Electricity and Magnetism by Edward M. Purcell

3. Waves by Frank S. Crawford, Jr.

4. Quantum Physics by Eyvind H. Wichmann

5. Statistical Physics by Frederick Reif

ಮೇಲಿನ ಎರಡೂ ಸರಣಿ ಪುಸ್ತಕಗಳು ಪ್ರಾಥಮಿಕ ಹಂತದವುಗಳು. ಸ್ವಲ್ಪ ಹೆಚ್ಚಿನ ಓದು ಬೇಡುವವರು, ಪ್ರೌಢ ಓದನ್ನ ಬಯಸುವವರು Landau “Course of Theoretical Physics” by L. D. Landau and E. M. Lifshitz ಸರಣಿಯನ್ನ ಓದಬಹುದು.

ಎರಡನೆಯದು ಒಂದೊಂದು ವಿಷಯಕ್ಕೆ ಸಂಬಂಧಪಟ್ಟಂತೆ ರಚಿತವಾದವುಗಳು. ಇವುಗಳಿಂದಲೇ ಬಹಳಷ್ಟು ಪ್ರಶ್ನೆಗಳು ಬರುವುದು. ಅಷ್ಟೇ ಅಲ್ಲ ಇವುಗಳಿಂದ ವಿಷಯವನ್ನ ಹೇಗೆ ಉಪಯೋಗಿಸಬೇಕು ಎಂಬ ಬಹಳಷ್ಟು ಮಾಹಿತಿ ದೊರೆಯುತ್ತದೆ. ಅವುಗಳು ಹೀಗಿವೆ.

1. Classical Mechanics by John R. Taylor

2. Classical Mechanics by Goldstein

3. Classical Mechanics by N.C.Rana and P.S.Joag

4. Optics by A. Ghatak

5. Heat and Thermodynamics by M. W. Zemansky and R. H. Dittman

6. Fundamentals of Statistical and Thermal Physics by F. Reif

7. Introduction to Electrodynamics by D. J. Griffiths

8. Introduction to Quantum Mechanics by D. J. Griffiths

9. Principles of Quantum Mechanics by R. Shankar

10. Mathematical Methods for Physicists G. B. Arfken and H. J. Weber

11. Quantum mechanics by A.Ghatak and S.Lokanathan

12. Modern Quantum mechanics by J.J.Sakurai

13. Special Theory of Relativity by R. Resnick


ಈ ಪುಸ್ತಕಗಳು ನಾವು ಓದುತ್ತಿದ್ದಾಗ ಉಪಯೋಗಿಸಿಕೊಳ್ಳುತ್ತಿದ್ದವುಗಳು. ಈಗ ಈ ಪುಸ್ತಕಗಳಷ್ಟೇ ಉಪಯುಕ್ತವಾದವುಗಳು Lecture notes , ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಹಲವು Lecture notes ದೊರೆಯುತ್ತವೆ. ನೀವು ಸುಮ್ಮನೆ ಗೂಗಲ್ ಮಾಡಿದರೆ ದೊರೆಯುತ್ತದೆ. ಅದರಲ್ಲಿ ಯಾವುದು ನಿಮಗೆ ಇಷ್ಟವಾಗುತ್ತದೋ ಅದನ್ನ ಓದಬಹುದು. ಅದಲ್ಲದೆ wikipedia ಇಂದಲೂ ಬಹಳಷ್ಟು ವಿಷಯ ಸಂಗ್ರಹ ಸಾದ್ಯವಿದೆ.

ಇಷ್ಟು ವಿಷಯ ಸಂಗ್ರಹವಾದ ಮೇಲೆ , ನನಗೆ ತೋಚಿದ ನನ್ನ ಅನುಭವಕ್ಕೆ ಬಂದ ಒಂದಿಷ್ಟು ಸಂಗತಿಗಳು.

ನಾವು ಪದವಿ ಓದುತ್ತಿದ್ದ ಕಾಲದಲ್ಲಿ, ನಮ್ಮ ಪ್ರಾಧ್ಯಾಪಕರು ಮಾಡಿದ್ದೆ ಪಾಠ, ಅವರು ಹೇಳಿದ್ದೆ ಸತ್ಯ. ಅವರಲ್ಲಿ ಹಲವು ಒಳ್ಳೆಯ ಉಪಾಧ್ಯಾಯರುಗಳಿರುತ್ತಿದ್ದರೂ ಕೆಲವೊಬ್ಬರು ಮಾಡಿದ್ದು ಅರ್ಥವಾಗುತ್ತಿರಲಿಲ್ಲ. ನಾವು ಅದೆಷ್ಟೇ ಸ್ವಂತವಾಗಿ ಓದಿ ತಿಳಿಯುತ್ತೇವೆ ಎಂದುಕೊಂಡರೂ ಒಮ್ಮೆ ಯಾರಾದರೂ ಪಾಠ ಮಾಡಿದ್ದಿದ್ದರೆ ಚನ್ನಾಗಿರುತ್ತಿತ್ತು ಎಂದೆನಿಸುವುದು ನಿಜ. ಹಾಗೆ ಪಾಠ ಕೇಳಿದ ನಂತರ ಓದಿದರೆ ಮತ್ತೂ ವಿಷಯಗಳು ಸ್ಪಷ್ಟವಾಗುತ್ತಿತ್ತು. ಅಲ್ಲದೆ ಆಕರ ಗ್ರಂಥಗಳಲ್ಲಿ ಹಲವು ವಿಷಯಗಳಿರುತ್ತವೆ, ಅವುಗಳಲ್ಲಿ ಯಾವುದನ್ನು ಓದಬೇಕು, ಅದೆಷ್ಟು ಓದಬೇಕು, ಹೀಗೆ ಅದೆಷ್ಟೋ ಸಮಸ್ಯೆಗಳು ಕಾಡುವುದುಂಟು. ಈಗ ಅವುಗಳನ್ನ ಪರಿಹರಿಸಿಕೊಳ್ಳಲಿಕ್ಕಾಗಿ ಅತ್ಯುತ್ತಮವಾದ video lecture ಗಳು ದೊರಕ್ಕುತ್ತವೆ. ಪ್ರಪಂಚದ ಪ್ರಸಿದ್ದ ವಿಶ್ವವಿದ್ಯಾಲಯಗಳ ಪ್ರಸಿದ್ದ ವ್ಯಕ್ತಿಗಳು ನೀಡುವ ಒಂದಿಡೀ course ಲಭ್ಯವಿದೆ. ಅದಲ್ಲದೆ, ಭಾರತ ಸರ್ಕಾರದ, IIT, IISc ಪ್ರಾದ್ಯಾಪಕರು ಸಿದ್ದಪಡಿಸಿದವುಗಳು NPTEL ಎಂಬ ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ಹಾಗಾಗಿ ಒಂದು ವಿಷಯದ ಬಗೆಗೆ ತಿಳಿಯಬೇಕೆಂದರೆ ಮೊದಲು ಈ course ಗಳನ್ನು ನೋಡಿ ನಂತರ ಅದಕ್ಕೆ ತಕ್ಕುದಾದ ಪುಸ್ತಕಗಳನ್ನ ಓದಬಹುದು.


ಒಮ್ಮೆಗೇ ಎಲ್ಲವನ್ನೂ ಓದಿ ಬಿಡೋಣ ಎಂಬ ಅವಸರಕ್ಕೆ ಓದಲು ಹೋಗುವುದು ಉತ್ತಮ ಯೋಚನೆಯಲ್ಲ. ಒಂದು ಶಿಸ್ತಿನಲ್ಲಿ ಮೊದಲು ಯಾವುದನ್ನು ಓದಬೇಕು ನಂತರ ಯಾವುದನ್ನು ಓದಬೇಕು ಎಂದು ನಿಮ್ಮ ಸಮಯ ಹಾಗು ಆಸಕ್ತಿಯನ್ನವಲಂಬಿಸಿ ನೀವುಗಳೇ ಒಂದು ಯೋಜನೆಯನ್ನು ಸಿದ್ಧಪಡಿಸಿಕೊಂಡರೆ ಒಳಿತು. ಸೆಮಿಸ್ಟರ್ ಪದ್ಧತಿಯಲ್ಲಿ ಒಂದೊಂದು ಸೆಮಿಸ್ಟರ್ಗೆ ಒಂದೊಂದು ವಿಷಯಗಳಿರುತ್ತವೆ. ಹಾಗಾಗಿ ಆ ವಿಷಯಗಳ ಜೊತೆ ಜೊತೆಗೇನೇ ಆಕರ ಗ್ರಂಥಗಳಿಂದಲೂ ಓದಿದರೆ ಪರೀಕ್ಷೆಗೂ ಅನುಕೂಲ. ಒಂದು ಕ್ರಮದಲ್ಲಿ ಓದುವುದು ವಾಡಿಕೆ. ಉದಾಹರಣೆ, ಕ್ರಮವಾಗಿ Classical Mechanics, Thermodynamics, Statistical Mechanics, Electrodynamics, and Quantum Mechanics, ಹೀಗೆ. ಪ್ರತೀ ವಿಷಯಕ್ಕೂ ಹಲವು ಓದುಗಳನ್ನ ಮಾಡಬೇಕಾಗುತ್ತೆ. ಮೊದಲು ಮೇಲು ಪದರವಾಗಿ ಈ ಇಡೀ ವಿಷಯದಲ್ಲಿ ಏನಿದೆ ಎಂದು ತಿಳಿಯಲು ಓದುವುದು, ಹಾಗೆ ಓದಿದ ನಂತರ ಒಂದೊಂದು ವಿಷಯವನ್ನೂ ಬಿಡಿಸಿ ಬಿಡಿಸಿ ಓದುವುದು (ಇದಕ್ಕೆ ನಾವು ಕೂದಲು ಸೀಳುವ ವಿಧಾನ ಎನ್ನುತ್ತೇವೆ ), ನಂತರ ಹೀಗೆ ಬಿಡಿಸಿ ಓದಿದ್ದನ್ನು ಒಟ್ಟುಗೂಡಿಸಿ ಒಟ್ಟಾಗಿ ಈ ಇಡೀ ವಿಷಯ ಏನನ್ನ ಹೇಳುತ್ತಿದೆ, ವಿಶಾಲ ಕ್ಯಾನ್ವಾಸ್ ಅಲ್ಲಿ ಈ ವಿಷಯದ ಮಹತ್ವ ಏನು ಎಂದು ಆಲೋಚಿಸುವುದು, ಹೀಗೆ ಸಾಗುತ್ತಿರುತ್ತದೆ. ಈ ರೀತಿಯ ಓದಿಗೆ ನೋಟ್ಸ್ (ಟಿಪ್ಪಣಿ) ಮಾಡಿಕೊಳ್ಳುವುದು ಪೂರಕವಾಗಿ ಸಹಾಯವಾಗುತ್ತದೆ. ಹಲವು ಬಾರಿ ನಮಗೆ ಒಂದು ಪಠ್ಯದಲ್ಲಿನ ಸಂಗತಿ ಒಂದೇ ಪುಸ್ತಕದಿಂದ ದೊರೆಯುವುದಿಲ್ಲ. ಹಲವು ಪುಸ್ತಕಗಳನ್ನ ಓದಿದ ನಂತರ ನಮಗೆ ಅರ್ಥವಾಗುತ್ತದೆ. ಹಾಗಾದಾಗ ಹಾಗೆ ಓದಿದವುಗಳನ್ನ ಮರೆಯದಂತೆ ಒಂದು ಟಿಪ್ಪಣಿಯನ್ನ ಮಾಡಿಟ್ಟುಕೊಂಡರೆ ಮುಂದೆ ನಮಗೆ ಬೇಕಾದಾಗ ಸುಮ್ಮನೆ ಪುಟ ತಿರುಗಿಸಿದರೆ ದೊರಕುತ್ತದೆ. ಎಷ್ಟೋ ಬಾರಿ ಇವೆಲ್ಲ ನಮಗೆ ಗೊತ್ತಿದೆ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಅದು ಹಾಗಾಗಿರುವುದಿಲ್ಲ. ಒಮ್ಮೆ ನಮ್ಮದೇ ಭಾಷೆಯಲ್ಲಿ ಅದನ್ನ ಟಿಪ್ಪಣಿ ಮಾಡಿಕೊಂಡರೆ ಅದರ ಒಳ ಆಂತರ್ಯ ದಕ್ಕುತ್ತದೆ.

ನಮ್ಮಲ್ಲಿ ಕೆಲವರು, ನಾನು ನೋಡಿದಂತೆ, ಈ ವಿಷಯವು ಅರ್ಥವಾಗಿದೆ, ದೊಡ್ಡ ಕ್ಯಾನ್ವಾಸಿನ ಪ್ರಾಮುಖ್ಯತೆ ತಿಳಿದಿದೆ ಹಾಗಾಗಿ ನಾನು ಸಮಸ್ಯೆಗಳನ್ನ ಬಿಡಿಸುವುದಿಲ್ಲ. ಸಮಸ್ಯೆ ಬಿಡಿಸುವುದು ತೀರ ಸರಳ ಕೆಲಸ, ಅಂತಹುದನ್ನು ಸುಮ್ಮನೆ ಮಾಡುತ್ತಾ ಹೋದರೆ ಸಮಯ ವ್ಯರ್ಥ ಎಂದು ಭಾವಿಸಿರುತ್ತಾರೆ. ಈ ಅಭಿಪ್ರಾಯ ನನ್ನ ಪ್ರಕಾರ ತಪ್ಪು. ಯಾವುದೇ ವಿಷಯವು ನಮಗೆ ತಿಳಿದಂತೆ ಇರುತ್ತದೆ, ಆದರೆ ಅದು ನಮಗೆ ನಿಜಕ್ಕೂ ತಿಳಿದಿದೆಯೆ, ಅದೆಷ್ಟರ ಮಟ್ಟಿಗೆ ತಿಳಿದಿದೆ ಎಂದು ಅರ್ಥವಾಗಬೇಕಾದರೆ, ನಾವು ಅದಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನ ಬಿಡಿಸಬೇಕು. ಮೊದಲಿಗೆ ಕಷ್ಟವೆಂದೆನಿಸಿದರೂ ಸಮಸ್ಯೆಗಳನ್ನ ಬಿಡಿಸುತ್ತಾ ಹೋದ ಹಾಗೆ ಅಭ್ಯಾಸವಾಗುತ್ತದೆ. ಮೊದಲಿಗೆ ಪಠ್ಯದಲ್ಲಿ ನೀಡಿದ ಸಮಸ್ಯೆಗಳನ್ನ ಬಿಡಿಸಬೇಕು, ನಂತರ ಒಂದೊಂದೇ ಹಂತಗಳಲ್ಲಿ ಸಮಸ್ಯೆಗಳನ್ನ ಬಿಡಿಸುತ್ತಾ ಹೋಗಬೇಕು. ಸಮಸ್ಯೆ ಬಿಡಿಸುವುದನ್ನ ಆಟವಾಡಿದಂತೆ ಅನುಭವಿಸುವುದನ್ನ ಕಲಿಯಬೇಕು. ಆಗಲೆ ಅದರ ಚಂದ. ಸಮಸ್ಯೆ ಬಿಡಿಸುವ ಬಗೆಗಳನ್ನ ಮುಂದೆ ಮತ್ತೊಮ್ಮೆ ಬರೆಯುತ್ತೇನೆ.

ಕಡೆಯದಾಗಿ ಹೇಳಬೇಕೆನಿಸಿರುವುದು, ಗುಂಪು ಚರ್ಚೆ, ಸೆಮಿನಾರು, ಹರಟೆ ಇವುಗಳ ಬಗೆಗೆ. ನಾನು ಬಹಳಷ್ಟು ವಿಷಯ ಕಲಿತದ್ದು ನಾವು ಕಾಫಿ ಟೀ ಕುಡಿಯುತ್ತಾ ಕೂತು ಹರಟೆ ಹೊಡೆಯುತ್ತಿದ್ದ ಕಾಫೀ ಅಂಗಡಿಗಳಲ್ಲೆ. ಆ ರೀತಿಯ ಒಂದು ಗುಂಪು ಸಾದ್ಯವಾದರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಈ ರೀತಿಯ ಗುಂಪನ್ನು ನಿಮ್ಮಲ್ಲೇ ಯಾರೋ ಒಬ್ಬರು ನಾಯಕತ್ವ ವಹಿಸಿ ನಿರ್ಮಿಸಿಕೊಳ್ಳಲೂ ಬಹುದು. ಒಂದಿಷ್ಟು ನಮ್ಮ ಅಹಂಗಳನ್ನು ಪಕ್ಕಕ್ಕಿಟ್ಟರೆ ಸಮಾನಾಸಕ್ತರ ಒಂದು ಗುಂಪು ಸಾದ್ಯ. ಆ ಗುಂಪಿನಲ್ಲಿ ಗುಂಪು ಚರ್ಚೆ ಹಾಗು ಸೆಮಿನಾರ್ ಗಳ ಒಂದು ಯೋಜನೆಯನ್ನು ಸಿದ್ದಪಡಿಸಿಕೊಳ್ಳಿ. ಪ್ರತೀ ವಾರ ಒಂದು ವಿಷಯದ ಬಗೆಗೆ ಚರ್ಚೆ, ಹೊಸ ವಿಷಯದ ಬಗೆಗೆ ಸೆಮಿನಾರ್ ಕೊಡುವುದು. ಎಂದಿಗೂ ನಮ್ಮ ಅಹಂಗಳನ್ನ ಇಲ್ಲಿ ತಲೆದೂರಲು ಬಿಡದಿರಿ. ವಸ್ತುನಿಷ್ಠ ಮೌಲ್ಯಮಾಪನ ಒಳ್ಳೆಯ ಓದಿಗೆ ಬಹಳ ಅವಶ್ಯ. ಗುಂಪು ಚರ್ಚೆಗಳಲ್ಲಿ, ಸೆಮಿನಾರುಗಳಲ್ಲಿ ಚರ್ಚಿಸುವುದರಿಂದ, ನಾವು ಬೇರೆಯವರಿಗೆ ವಿಷಯವನ್ನ ಒಪ್ಪಿಸುವಾಗ ನಮಗೆ ಆ ವಿಷಯಗಳು ಬಹಳಷ್ಟು ಸ್ಪಷ್ಟವಾಗಿರುತ್ತದೆ. ಅಲ್ಲದೆ, ನಮ್ಮಲ್ಲಿ ಮೂಡದ ಯಾವುದೋ ಪ್ರಶ್ನೆ ಮತ್ತೊಬ್ಬರಲ್ಲಿ ಬರುತ್ತದಲ್ಲ, ಅದಕ್ಕೆ ಉತ್ತರಿಸುವ ಪ್ರಯತ್ನದಲ್ಲೂ ನಾವು ಕಲಿಯುತ್ತೇವೆ.

ಸದ್ಯಕ್ಕೆ ನನಗೆ ತೋಚಿದ ಒಂದಿಷ್ಟು ಸಂಗತಿಗಳನ್ನ ಇಲ್ಲಿ ಹೇಳಿದ್ದೇನೆ. ಇದರ ಮುಂದುವರೆದ ಬಾಗವಾಗಿ, ಸಂಶೋಧನಾ ಸಂಸ್ಥೆಗಳ ಬಗೆಗೆ, ಸಮಸ್ಯೆ ಬಿಡಿಸುವ ಬಗೆ, ಸಂಶೋದನೆಯೆಂದರೇನು? ಎಂಬ ಉಳಿದ ವಿಷಯಗಳ ಬಗೆಗೆ ಮುಂದಿನ ದಿನಗಳಲ್ಲಿ ಬರೆಯುತ್ತಾ ಹೋಗುತ್ತೇನೆ. ಲೇಖನ ಓದಿದವರು ಹೆಚ್ಚಿನ ಮಾಹಿತಿಯನ್ನ ನೀಡಲು ಬಯಸಿದರೆ, ಅಥವಾ ಬೇರೆ ಪ್ರಶ್ನೆಗಳಿದ್ದರೆ ಕೆಳಗಿನ Comments ಅಲ್ಲಿ ಬರೆದು ತಿಳಿಸಿ.

ಹೈಕುಗಳು

( ಒಂದಿಷ್ಟು ಜಪಾನಿ ಹೈಕುಗಳ ಅನುವಾದ )


೦೧.

ಒಣಗಿದ ಹುಲ್ಲು
ಹಾಗೂ ಒಂದಿಷ್ಟು ಬಿಸಿ ಗಾಳಿ
ಬೆಳೆವುದು ಒಂದಿಂಚು ಅಥವ ಎರೆಡು --- BASHO


೦೨.

ತೆರೆದುಕೊಂಡಾಗ
ಮಂಜುಗಡ್ಡೆ ಮತ್ತು ನೀರು
ಮತ್ತೇ ಗೆಳೆಯರಾದವು --- TEISHTITSU


೦೩.

ಅವಸರವೇನೂ ಇಲ್ಲ
ಅರಳುವುದಕ್ಕೆ
ದ್ರಾಕ್ಷಾಮರ ನಮ್ಮ ಮುಂಬಾಗಿಲ ಬಳಿ ---- ISSA


೦೪.

ಪ್ರತೀ ಬಾರಿ ಗಾಳಿ ಬೀಸಿದಾಗಲೂ
ಗಿಡದ ಮೇಲೆ ಹೊಸದಾಗಿ
ಚಿಟ್ಟೆ ಕುಳಿತುಕೊಳ್ಳುತ್ತೆ ---- BASHO


೦೫.
ಮನೆಯ ಬಾತುಕೋಳಿ
ತೆಲೆಯೆತ್ತಿತ್ತು
ಜಗವ ನೋಡಬಹುದೆಂದು ಬಾವಿಸಿ ---- KOJI

ದೇಶ ಕಾಲ ಚಲನ(೧)
ಬೇರೆ ಯಾವ ದೇಶದ್ದೋ
ದೂರದ್ದೋ
ಸಮಯವನ್ನ
ನಮ್ಮಲ್ಲಿರುವ ಗಡಿಯಾರವನ್ನ
ಹಿಂದಕ್ಕೋ ಮುಂದಕ್ಕೋ
ಮಾಡಿ
ಹೊಂದಿಸಿಕೊಂಡುಬಿಡುತ್ತೇವೆ

(೨)
ರಾತ್ರಿಯೆಲ್ಲಾ ಮಳೆಸುರಿದ
ಮಾರನೆಯ ದಿನದ
ಬೆಳಗಲಿ ಮೋಡಗಳು
ಅದೆಷ್ಟು
ನಿಧಾನಕ್ಕೆ ಚಲಿಸುತ್ತದೆಯೆಂದರೆ
ಗೊತ್ತೇ ಆಗದಂತೆ

(೩)
ಗೂಡು ಕಟ್ಟಲು ಹಕ್ಕಿ
ತೆಗೆದುಕೊಂಡು
ಹೋಗುತ್ತಿದ್ದ ಹುಲ್ಲು
ಕೆಳಕ್ಕೆ ಬಿದ್ದಾಗ
ಹುಳವೊಂದು ಹೊರಗೆ ಬಂದು
ಹಾರಿಹೋಯಿತು
ಯುದ್ಧ
No mans landಲ್ಲಿ
ಬೆಳೆದ ತರಕಾರಿ
ಯಾವ ದೇಶಕ್ಕೆ
ಯಾವ ರಾಜನರಮನೆಯ
ಬೆಳಗಿನ ಉಪಹಾರಕ್ಕೆ?

ಕುಯ್ದದ್ದು ಎರಡೇ ಎರಡು
ನರ
ರಕ್ತದ್ದೊಂದು ಉಸಿರಿನದ್ದಿನ್ನೊಂದು
ಬೆಳಗಿನುಪಹಾರಕ್ಕೆ ನಂಜಿಕೊಳ್ಳಲಿಕ್ಕೆ

ಅಂಬಂಡೆ: ಊರಿನ ಹೆಸರು
ಅರೆ ಮನಸ್ಸಿನ ಆಡೊಂದು ಆಡುತ್ತಿದ್ದ ಬಂಡೆ
ಆಡಿಗೆ ಕೊಂಬು ಬಂದು ಹಾರಿ ಹೋಯಿತು
ಊರಿನ ಹೆಸರು
ಹಾಗೆ ಉಳಿಯಿತು
ಅಪಭ್ರಂಶವಾಗಿ
ಹಾರಿ ಹೋದ ಆಡು ಮನುಷ್ಯನಾಗಿ
ಮರಳಿ ಊರಿಗೆ ಬಂದಾಗ
ಮದ್ಯಾನ್ಹದ ಊಟಕ್ಕೆ
ಕಟ್ಟು ಮಸ್ತಾದ
ಮಸಾಲೆ ಲೇಪಿತ
ಅರಮನೆಯ ಪ್ರಸಾದ

ಮೂಲತಃ ಕ್ರೌರ್ಯ


ಬೇಡವಮ್ಮ ಕಣಿ
ತಮಿಳು ಬರೋಲ್ಲ
ಹೇಳಿದ್ದು ತಿಳಿಯೋಲ್ಲ
ಹೊರಗಿನವ
ನಮ್ಮ ಕಡೆ ಹೀಗೆ ಬೀಚಿನಲ್ಲಿ
ಸಿಗುವುದಿಲ್ಲ ಯಾರೂ
ಕಣಿ ಹೇಳುವವರು

ಬಣ್ಣ ಮಾಸಿದ್ದರೂ
ಕೆಂಪು ಪಾನು, ಕೇರಂ ಬೋರ್ಡಿನದು
ಹಳೇ ಜಿಪ್ಪು ಕಿತ್ತು
ಹೋದ ವ್ಯಾನಿಟಿ ಬ್ಯಾಗು
ಅದೆಲ್ಲಿಂದ ಬರುತ್ತಿದು
ತೆಂಗಿನ ಕಾಯಿಯೂ
ನೀರಿನಲೆಗಳ ಜೊತೆ
ಕಾಲಿಗೆ ಬಡಿದಾಗ

ಬೀಚಿನಲ್ಲೂ
ಮುತ್ತಾ ಅದು
ಕಾಲ ಬಳಿ ಬರಿ ಬಿಳಿ ನೊರೆ

ಕೊಂದೇ ಬಿಟ್ಟರಲ್ಲ
ಆ ಕಣಿ ಹೇಳುವವಳನ್ನ
ಒಂದು ಮರಿ ಮೀನು ಕೊಳ್ಳಲ್ಲಿಕ್ಕಾಗಿ
ಈ ಬೀಚು ಈ ಕಣಿ
ನೋಡಲಿಕ್ಕಲ್ಲವ ಬಂದದ್ದು
ಸಮುದ್ರವನ್ನ
ಕೊಂದೇ ಬಿಡುವುದ?

ಕರಿಬೇವಿನ ಸೊಪ್ಪು
“ಅಲ್ಲೇ, ಊರಲ್ಲಿ ಒಂದೂ ಕರಿಬೇವಿನ ಮರ ಇಲ್ವಾ?, ಊರೋರೆಲ್ಲ ನಮ್ಮನೇಲಿದ್ದ ಕರಿಬೇವನ್ನ ಕಿತ್ತು ಕಿತ್ತು ಮರ ಎಲ್ಲ ಬೋಳು ಮಾಡಿದರು, ಆ ಮರಾನೋ ಮತ್ತೆ ಬೆಳೀಲೇ ಇಲ್ಲ. ಬರೀ ಬೋಳು ಮರ. ನೀರು ಹಾಕಿದ್ದೇ ಹಾಕಿದ್ದು. ಒಮ್ಮೆ ಅದಕ್ಕೊಂದಿಷ್ಟು ಗೊಬ್ಬರಾನೂ ಹಾಕಿದ್ದಾಗಿತ್ತು. ಕಡೆಗೂ ಒಂದು ಎಲೆ ಸಹ ಚಿಗುರಲಿಲ್ಲ. ಉಪ್ಪಿಟ್ಟು ತಿನ್ಬೇಕು ಅಂತ ಅನ್ಸಿದ್ರೆ , ಒಗ್ಗರಣೆಗೆ ಒಂದೂ ಕರಿಬೇವು ಇಲ್ಲ ಅಂದ್ರೆ !, ಮಾಡೋದೆ ಆದ್ರೆ ಸರಿಯಾಗೇ ಮಾಡ್ಬೇಕು ಕರಿಬೇವಿನ ಒಗ್ಗರಣೆ ಇಲ್ಲದ ಉಪ್ಪಿಟ್ಟನ್ನ ಮನುಷ್ಯ ಅನ್ನೋನು ತಿನ್ನೋಕ್ಕಾಗುತ್ತ " ಅಂತ ಹೊರಟ ಶೇಷಣ್ಣನಿಗೆ ಹಿಂದೆ ಒಮ್ಮೆ ತಾನು ರೈಲ್ವೇ ನಿಲ್ದಾಣದ ಹಿಂದಿನ ಬೀಡಿನಲ್ಲಿ ಯಾವಾಗಲೋ ಒಂದು ಕರಿಬೇವಿನ ಪುಟ್ಟ ಗಿಡವನ್ನು ಇಟ್ಟದ್ದು ನೆನಪಾಗಿ ಅದು ಈಗ ದೊಡ್ಡದಾಗಿರಬಹುದು, ಹೋದರೆ ಒಂದು ಎಳೆಯಾದರೂ ಸಿಗಬಹುದೆಂದು ರೈಲ್ವೇ ನಿಲ್ದಾಣದ ಕಡೆ ಹೊರಟ.

ರಾಮಕ್ಕನಿಗೆ ಈ ವಯ್ಯ ಈಗ್ಯಾಕೆ ತನ್ನ ಮನೆಗೆ ಬಂದು ಹೀಗೆ ಉಪ್ಪಿಟ್ಟು ಮಾಡ್ತೀನಿ ಅಂತ ಕುಂತಿದ್ದಾನೋ, ಊರೋರ ಬಾಯಿಗೆ ಎಲ್ಲಿ ಸಿಗಬೇಕಾಗುತ್ತೋ ಅನ್ನೋದು ಅವಳಿಗಿದ್ದ ಭಯ. ಎಲ್ಲರಿಗೂ ಮರೆವು ಬೇಗ ಸಂಭವಿಸಿದರೂ ತನಗಲ್ಲ.

“ಈ ವಯ್ಯಂಗೆ ಈಗ ಉಪ್ಪಿಟ್ಟು ಮಾಡು ಅಂತ ಹೇಳ್ದೋರಾದ್ರು ಯಾರು, ಅದೂ ನಮ್ಮನೆಗೆ ಬಂದು ಮಾಡ್ಬೇಕಾ ಹೇಳು?, ನಂಗೋ ಬೇಡ ಅನ್ಲಿಕ್ಕೆ ಆಗ್ಲಿಲ್ಲ ನೋಡು. ಹಿಂದೆ ಆಗಿದ್ದನ್ನ ಮರೆತಿದ್ದಿ ನೀನು? ಅಲ್ಲಾ, ಈ ವಯ್ಯನ ಹೋಟೇಲಿಗೆ ನಾನು ಸುಮ್ಮನೆ ಹೋದದ್ದಪ್ಪ. ಊರಲ್ಲಿ ಇದ್ದದ್ದು ಇದೊಂದೇ ಹೋಟೇಲು. ನಾ ಸುಮ್ನೆ ಬರ್ಬೇಕಿತ್ತು ತಾನೆ, ಅದ್ಯಾಕೋ ಈ ವಯ್ಯ ಮಾಡಿದ್ದ ಉಪ್ಪಿಟ್ಟು ಚಂದಾಗಿತ್ತು, ಅದಕ್ಕೆ ಉಪ್ಪಿಟ್ಟು ಚೆನ್ನಾಗಿದೆ ಅಂತ ಅಂದೆನಪ್ಪ ಅಷ್ಟೇ. ನನ್ನ ಗ್ರಹಚಾರ ನೋಡು..
ಹುಶಾರಿರ್ಲಿಲ್ಲ, ಜೀವ ಹೋಗೋ ಜ್ವರ. ನನಗೆ ಯಾರಿದ್ರು, ಯಾರೂ ಇಲ್ಲ. ಇದೇ ಮನೇಲೇ ಇದ್ದಿದ್ದು. ಒಬ್ಳೇ. ಸತ್ರೂ ಕೂಡಾ ವಾಸನೆ ಬಂದಮೇಲೆ ಜನಕ್ಕೆ ಗೊತ್ತಾಗ್ತಿದ್ದಿದ್ದು, ಈ ಮನೇಲೂ ಒಂದು ಜೀವ ಇತ್ತು ಅಂತ. ಈಗ ಜನ ಗೊತ್ತು. ನಂದು ಊರು ಅಂತ ಆಗಿದೆ. ಆಗ್ಯಾರಿದ್ರು?. ಈ ವಯ್ಯ ದಿನಾ ಉಪ್ಪಿಟ್ಟು ತಂದು ಮನೇಲಿ ಇಟ್ಟು ಹೋಗುತ್ತಿದ್ದ, ಬ್ಯಾಡಯ್ಯ ಅಂತ ಹೇಳಿದ್ರೂ ಕೇಳ್ತಿರ್ಲಿಲ್ಲ. ಇಟ್ಟು ಹೋಗ್ತಾ ಇದ್ದ. ರೋಗ ಅಂತೂ ವಾಸಿ ಆಯ್ತು. ಉಪ್ಪಿಟ್ಟು ತಿಂದಾ ಇಲ್ಲ ಔಷಧ ತಗೊಂಡಾ ಗೊತ್ತಿಲ್ಲ. ಒಟ್ಟಿನಲ್ಲಿ ರೋಗ ವಾಸಿ ಆಯ್ತು. ಆದ್ರೆ ಊರಲ್ಲಿ, ಈ ಜನ, ಅವರ ಮನೆಯವರು. ಹಾಳು ಹೊಲಸು. ಅದೇ ಕೊನೆ. ಆವಯ್ಯನ ಹೋಟೇಲಿಗೆ ಹೋಗಿದ್ದು ಕಾಣೆ. ಆ ವಯ್ಯನ ಮುಖ ಕೂಡ ಕಂಡಿರಲಿಲ್ಲ. ಅದ್ಯಾವಗಲೋ ಊರು ಬಿಟ್ಟು ಹೊರಟು ಹೋದರು. ಮಕ್ಕಳು ದೊಡ್ಡೋರಾಗಿದ್ರು. ಎಲ್ಲ್ಲೋ ಫಾರೀನ್ ಸೇರಿಕೊಂಡರಂತೆ. ಈಗ ಬಂದವ್ನೆ, ರಾಮಕ್ಕ ನಾನು ಉಪ್ಪಿಟ್ಟು ಮಾಡ್ಬೇಕು ಪಾತ್ರೆ ಕೊಡು ಅಂತೇಳಿ ಒಳಗೆ ನುಗ್ಗೇ ಬಿಡೋದೆ? ಈ ವಯ್ಯನ್ನ ಗುರ್ತು ಹಿಡಿಯೋಕೆ ಸ್ವಲ್ಪ ಹೊತ್ತು ಹಿಡೀತು.
ಆದ್ರೂ ಯಾಕೋ ಬೇಡ ಅನ್ನೋಕೆ ಆಗ್ಲಿಲ್ಲ ನೋಡು.”
ರಾಮಕ್ಕ ಹೇಳ್ತಾನೆ ಇದ್ದಳು.
*********
*******


ಬೇಕು-ಬೇಡ, ಹೋಗಬೇಕು-ಬಾರದು, ಇವುಗಳ ನಡುವೆ ಆಯ್ಕೆ ಇರಲಿಲ್ಲವೆಂದೇನೂ ಅಲ್ಲವಾದರೂ, ಹೆಚ್ಚಾಗಿ ಆ ಆಯ್ಕೆಗಳು ಬೇಕಿರಲಿಲ್ಲ. ಆಯ್ದುಕೊಳ್ಳಬೇಕು ಎಂದಾದಾಗ ಏನೋ ವಿಚಿತ್ರವೆನಿಸಿ, ಸಿಗರೇಟೋ ಬೀಡಿಯೋ ಬೇಕೆನಿಸುತ್ತಿತ್ತು, ಅದಕ್ಕೆ ಕಾಸು ಬೇಕಿತ್ತು, ಅದು ತನ್ನಲ್ಲಿರಲಿಲ್ಲ, ಹೆಂಡತಿಯ ಬಳಿ ಪಡೆಯಬೇಕು, ಹೀಗಾಗಿ ರಮಾದೇವಿ ಹೇಳಿದ್ದೆ ಶೇಷಣ್ಣ ಊರಿಗೆ ಹೊರಡಲು ಸಿದ್ದವಾಗಿದ್ದ. ತಾನು ಹುಟ್ಟಿದ ಊರು, ಬೆಳೆದ ಊರು, ಹಲವು ವರ್ಷಗಳ ನಂತರ ಊರಿಗೆ ಹೊರಟಿರುವುದು, ಎಲ್ಲವೂ ಒಮ್ಮೆ ನೆನಪಾಯಿತಾದರೂ, ಹೀಗೆ ನೆನಪಾದಾಗ ಖುಷಿಯಾಗಬೇಕಲ್ಲ, ತನಗೇಕೆ ಏನು ಅನ್ನಿಸುತ್ತಿಲ್ಲ ಎಂದೆನಿಸಿ, ಖುಷಿ ಪಡೋಣವೆಂದು ಬಸ್ಸಿನ ಕಿಟಕಿಯ ಹೊರಗೆ ಮುಖಮಾಡಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ ಕಂಡು ಕಾಣದ ಹಲ್ಲನ್ನ ಗಾಳಿಗೆ ತೋರುತ್ತಿದ್ದಾಗ, ಮುಖಕ್ಕೆ ನೀರು ಚಿಮುಕಿದಂತಾದಾಗ, ರಮಾಬಾಯಿ ಜೋರಾಗಿ ,

“ಕರ್ಮ, ಮುಖ ಒಳಗೆ ಹಾಕ್ರೀ. ಮುಂದಿನ ಸೀಟಲ್ಲಿ ಯಾರೋ ವಾಂತಿ ಮಾಡ್ಕೊಂಡ್ರೆ, ಅದು ನಿಮ್ಮ ಮುಖಕ್ಕೆ ಬಿದ್ರೂ ನಿಮಗೆ ಗೊತ್ತ್ತಾಗಲಿಲ್ಲ. ಕಿಟಕಿ ಹಾಕ್ರಿ" ಜೇಬಿನಲ್ಲಿ ತಡಕಿದಾಗ ಕರವಸ್ತ್ರ ಇಲ್ಲದ್ದು ನೆನೆಪಾಗಿ, ಹೆಂಡತಿಗೆ ತಿಳಿಯದಂತೆ ಹಾಕಿದ್ದ ಅಂಗಿಯಲ್ಲೆ ಮುಖ ಒರೆಸಿಕೊಂಡ.
“ನಮ್ಮನೇಲೂ ಇದೆ. ಐದು ವರ್ಷ ಕಳೀತು. ವಾಂತಿ ಮಾಡ್ಕೊಂತ. ಎಂತಾದೂ ಇಲ್ಲ. ಕೇಳ್ದೋರಿಗೆಲ್ಲ ಹೇಳಿ ಹೇಳಿ ಸಾಕಾಯ್ತು. ನಿಮ್ಗೆ ಬಡ್ಕೋ ಬೇಕು. ಏನೂ ತಿಳಿಯೋಲ್ಲ. ಎಲ್ಲಾ ನಾನೆ ಸಾಯಬೇಕು. ಅವ ಮನೆ ಕಟ್ಬೇಕು ಸರಿ. ಪಾಯದ ಪೂಜೆ ಯಾರು ಮಾಡಬೇಕು. ಹಾಲನ್ನ ಮೊದ್ಲು ನಿಮ್ಮ ಕೈಯಲ್ಲಿ ಹಾಕಿಸ್ತಾರೋ ಅವರ ಮಾವನ ಕೈಯಲ್ಲೋ? ಬಡ್ಕೊಂಡ್ರೂ ನಿಮ್ಗೆ ನೆತ್ತೀಗೋಗಲ್ಲ. ನಾಳೆಯಿಂದ ಪೂಜೆ ಶುರು ಆಗುತ್ತೆ. ಒಂದೂ ಒಳ್ಳೇದಾಗಿಲ್ಲ ನಮ್ಮ ಮನೇಗೆ ಅಂತಾನೆ ಎಲ್ಲ್ರೂ ಸೇರಿ ಏನೋ ಹೋಮ ಅಂತ ಮಾಡ್ತಾ ಇದ್ದಾರೆ. ಆರು ತಿಂಗಳಿಗೆ ಒಬ್ಬರು ಸಾಯೋದು ನಿಮ್ಮ ಮನೇಲಿ. ಒಂದು ಸರತಿಯಲ್ಲಿ ಜನ ಸತ್ತರು. ಯಾವ ಜನ್ಮದಲ್ಲಿ ಯಾರ್ಯಾರು ಅದೇನೇನು ಕರ್ಮ ಮಾಡಿದ್ರೋ, ಎಲ್ಲಾನೂ ನಾವು ಅನುಭವಿಸಬೇಕಾಗಿ ಬಂದಿದೆ ಈಗ. ನಿಮ್ಮಣ್ಣನ ಮಗಂಗೋ ಮದ್ವೇನೇ ಆಗ್ತಾ ಇಲ್ಲ. ಏನೋ ಈ ಹೋಮ ಮಾಡಿದ್ರೆ ಎಲ್ಲಾ ಸರೀ ಹೋಗುತ್ತಂತೆ. ಸ್ವಲ್ಪ ನೆಟ್ಟಗೆ ಇರಿ ಅಲ್ಲಿ. ಸ್ವಲ್ಪ ನೇಮ ಇರಲಿ. ಎಡವಟ್ಟು ಆದರೆ ನಮಗೆ ಆಗೋದು. ನಾಳೆ ಇಂದ, ಪ್ರತಿ ದಿನ ಪೂಜೆ ಮುಗಿದು ತೀರ್ಥ ಪ್ರಸಾದ ಕೊಡೋ ವರ್ಗೂ ಏನೂ ತಿನ್ನೋ ಹಾಗಿಲ್ಲ. ಇದಾದ್ರೂ ಸ್ವಲ್ಪ ನ್ಯಾಯವಾಗಿ ಮಾಡ್ರಿ. ವಯಸ್ಸಾಯ್ತು, ಈಗಲಾದ್ರು ಸ್ವಲ್ಪ ಸರಿ ಹೋಗ್ರಿ."

ರಮಾಬಾಯಿ ಹೀಗೆ ಹೇಳುತ್ತಲೇ ಇರುವಾಗಲೆ ಶೇಷಣ್ಣನ ಮೂಗಿಗೆ ಆ ವಾಸನೆ ಹೊಡೆದದ್ದು. ಉಪ್ಪಿಟ್ಟಿನ ವಾಸನೆ. ಅದೆಷ್ಟು ಗಾಢವಾಗಿ ಅವನನ್ನು ಆವರಿಸಿತ್ತೆಂದರೆ ಅದಕ್ಕೆ ಒಗ್ಗರಣೆಗೆ ಹಾಕಿದ ಕರಿಬೇವಿನ ಸೊಪ್ಪು ಬಲಿತದ್ದೆ, ಎಳೆಯದೆ ಎಂದು ಹೇಳುವಷ್ಟರ ಮಟ್ಟಿಗೆ. ಯಾರದ್ದಿರಬಹುದು, ಒಂದು ತುತ್ತಾದರೂ ರುಚಿಗೆ ಸಿಗಬಹುದೆ, ಅವರನ್ನ ಹಾಗೆ ಕೇಳಲು ಸಾದ್ಯವ , ನೋಡುವ ಎಂದು ಏಳಲು ಹೊರಟವ ಅದೇನಾಯಿತೊ ಸುಮ್ಮನೆ ಕೂತವ ಮತ್ತೆ ಕಿಟಕಿಯಿಂದ ಬರುತ್ತಿದ್ದ ಗಾಳಿಗೆ ಮುಖವೊಡ್ಡಿ ದೂರದ ಬೆಟ್ಟಗಳಲ್ಲಿನ ಬೋಡು ಬಂಡೆಗಳನ್ನೆ ದಿಟ್ಟಿಸುತ್ತಿದ್ದ.
**********
********
ಮೂರು ದಿನಗಳ ಕಾಲ ನಡೆಯುವ ಹೋಮ. ಪ್ರತೀ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಏನೂ ತಿನ್ನದೆ ನೂರಾ ಒಂದು ಗಾಯಿತ್ರಿ ಜಪ ಮಾಡಬೇಕು. ಅದಾದ ನಂತರ ಹೋಮಕ್ಕೆ ಕುಳಿತುಕೊಳ್ಳಬೇಕು. ಪೂಜೆ ಹೋಮ ಎಲ್ಲಾ ಆದ ಮೇಲೆ ಮದ್ಯಾನ್ಹದ ಊಟ. ಶೇಷಣ್ಣನಿಗೆ ಯಾವುದನ್ನೂ ಮಾಡಬಾರದು ಎಂದೇನೂ ಇಲ್ಲದ ಕಾರಣವಾಗಿ, ಉಪವಾಸಕ್ಕೆ ಸ್ವಲ್ಪ ಕಷ್ಟವಾಗುತ್ತಾದರೂ, ಸಕ್ಕರೆ ಕಾಯಿಲೆಯಿಂದ ಬಹಳಷ್ಟು ಸುಸ್ತಾದ ಹಾಗೆ ಅನ್ನಿಸುತ್ತದೆಯಾದರೂ, ಮೂರೂ ದಿನಗಳು ಅವರು ಹೇಳಿದಂತೆ ಉಪವಾಸ, ಜಪ ಹಾಗು ಹೋಮ ಮಾಡುವುದೆಂದುಕೊಂಡಿದ್ದ. ಮೊದಲನೆಯದಿನ ಕುಳಿತವನಿಗೆ ಒಂದು ಹತ್ತು ಗಾಯಿತ್ರಿಗೆಲ್ಲಾ ತೂಕಡಿಸಿ, ಎದ್ದು ಮತ್ತೇ ತೂಕಡಿಸಿ ಹೇಗೋ ಏನೋ ಮಾಡಿ ನೂರಾ ಒಂದು ಗಾಯಿತ್ರಿಯನ್ನ ಜಪಿಸಿದನೋ ಇಲ್ಲವೋ ಅವನಿಗಂತೂ ನೂರೊಂದನ್ನು ಜಪಿಸಿದ್ದು ಖಾತ್ರಿಯಾಗಿ ಹೋಮವನ್ನೇನೋ ಮುಗಿಸಿದ್ದ. ತನ್ನ ಜೊತೆ ಇನ್ನೂ ಉಳಿದ ಅಣ್ಣಂದಿರು, ತಮ್ಮಂದಿರು, ಇವರಲ್ಲದೆ ಚಿಕ್ಕಪ್ಪ ದೊಡ್ಡಪ್ಪ ಅವರ ಕುಟುಂಬ ಹೀಗೆ ಎಲ್ಲರೂ. ಇಡೀ ಗೋತ್ರದವರು, ಸುಮಾರು ಮೂವತ್ತು ನಲವತ್ತು ಮಂದಿ ಜಪ ಮಾಡುವಾಗ, ಬಾಯಿ ಗಾಯಿತ್ರೀ ಮಂತ್ರವನ್ನೇನೋ ಜಪಿಸಿತ್ತಿದ್ದರೂ, ಕೈಯಲ್ಲಿನ ತುಳಸೀ ಮಣಿಗಳು ಮುಂದೆ ಹೋಗುತ್ತಿದ್ದರೂ, ಇಷ್ಟೊಂದು ಜನ ನಮ್ಮ ಮನೆಯವರ?, ಹಿಂದೆಲ್ಲ ಇದ್ದರ?, ನಾನು ಎಲ್ಲರನ್ನು ಎಲ್ಲಿ ನೋಡಿದ್ದೆ?, ಎಲ್ಲೋ ಕೆಲವರು ಮದುವೆಗೊ ಮುಂಜಿಗೊ ಸೀಮಂತಕ್ಕೋ ಮತ್ತೆನಕ್ಕೋ, ಅಥವಾ ಸತ್ತಾಗಲೋ ಬಂದಿರಲೇ ಬೇಕು. ನೋಡಿರಲೇ ಬೇಕು. ಆದರೂ, ಎಲ್ಲರೂ ಬಂದಿದ್ದರ?, ಎಲ್ಲರೂ ಎಲ್ಲಿ ಇದ್ದರು?, ಎಲ್ಲರೂ ನೆಂಟರೆ?, ಒಬ್ಬಬ್ಬರೊಡನೆ ಒಂದೊಂದು ಸಂಬಂಧ. ಎಲ್ಲವೂ ಸರಿ, ಆದರೂ ಇವರೆಲ್ಲಾ ಯಾರು?, ಯಾರೂ ನೆನಪಾಗುತ್ತಿಲ್ಲವಲ್ಲ, ತನ್ನ ನೆನಪಿನ ಶಕ್ತಿ ಕಳೆದುಹೋಗುತ್ತಿದೆಯ, ಇನ್ನೂ ೬೩ ವರ್ಷ ಅಷ್ತೆ. ಮನುಷ್ಯ ಇಷ್ಟು ಬೇಗ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾನ?, ಯಾವುದು ನೆನಪಲ್ಲಿ ಉಳಿಯುವುದು?, ಯಾವುದು ಕಳೆಯುವುದು?, ತಿಳಿಯದೆ ಒದ್ದಾಡುತ್ತಿದ್ದ. ಎದುರಿಗೆ ಸಿಕ್ಕವರಲ್ಲರೂ "ಏನಪ್ಪಾ ಶೇಷಣ್ಣ, ಹೇಗಿದ್ದೀಯೊ?” ಅಂತಲೋ, ಮಾವ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ಕಕ್ಕ, ಇಲ್ಲ "ಏ ಶೇಷಣ್ಣ" ಅಂತ, ಏನೋ ಹೆಸರಿನಿಂದಲೋ ಹತ್ತಿರ ಬಂದು ಮಾತಿಗಿಳಿದಾಗ ಪ್ರಯತ್ನ ಪೂರ್ವಕವಾಗಿ ಮುಖದಲ್ಲಿ ಮೂಡುವ ನಗು, ಹಲ್ಲು ಕಿರಿದು ನಕ್ಕು, ‘ಹಾ ನಾ ಚನ್ನಾಗಿದ್ದೀನಿ' ಎಂಬೋ ಮಾತು. ಎಲ್ಲವೂ ಸರಿ, ಆದರೆ ಯಾರ ನೆನಪೂ ಮೂಡುತ್ತಿಲ್ಲವಲ್ಲ. ಆ ಹೆಸರುಗಳಿಗಿರುವ ಸಂಬಂಧದ ಅರ್ಥಗಳಾದರೂ ಏನು. ನಾನು ನಿಜಕ್ಕೂ ಇವರಿಗೇನಾಗಬೇಕು ಎಂಬೋ ಪ್ರಶ್ನೆಗಳು ಶೇಷಣ್ಣನಿಗೆ ಯಾವುದೇ ಒತ್ತಾಸೆಯಿಲ್ಲದೆ ಸಹಜವಾಗಿ ಜಪದ ಜೊತೆ ಜೊತೆಗೆ ಬಂದಾಗ, ಉಪವಾಸವಿದ್ದುದರಿಂದಲೇ, ಹಸಿವಿನಿಂದ ಹೀಗೆಲ್ಲಾ ಆಗುತ್ತೇನೊ ಎಂದು ತೂಕಡಿಸುತ್ತಲೇ ಜಪದಲ್ಲಿ ನಿರತನಾದ. ಎದುರುಗಿನ ಎಲ್ಲಾ ವ್ಯಕ್ತಿಗಳೂ ಒಂದು ಸಂಕೀರ್ಣ ಬಲೆಯಂತೆ ಕಂಡು, ಯಾರು ಯಾರು ಏನು ಎಂಬುದು ಗಾಬರಿಪಡಿಸಿಬಿಡುವ ಸಂದರ್ಭದಲ್ಲಿ ಅವನಿಗೆ ಬಸ್ಸಿನಲ್ಲಿ ಮೂಗಿಗೆ ಸೋಂಕಿದ ಉಪ್ಪಿಟ್ಟಿನಲ್ಲಿದ್ದ ಕರಿಬೇವಿನ ಸೊಪ್ಪಿನ ವಾಸನೆ ನೆನಪಾಗಿ ಏನನ್ನೋ ಮರೆತಿರುವುದು ನೆನಪಾಯಿತು.

ಮನೆಯಲ್ಲಾದರೆ ರಮಾಭಾಯಿ ಕೆಲಸಕ್ಕೆ ಹೊರಗೆ ಹೋಗುತ್ತಿದ್ದುದರಿಂದ, ಹೇಗೂ ಹೋಟೇಲು ನಡೆಸಿ ರೂಡಿಯಿದ್ದುದರಿಂದ, ಶೇಷಣ್ಣನದೆ ಮನೆಯಲ್ಲಿ ಅಡುಗೆ ತಿಂಡಿ ಎಲ್ಲಾ ಜವಾಬ್ದಾರಿ. ಬೆಳಗ್ಗೆ ಎದ್ದಾಗಿಂದ ಅಡುಗೆ ಕೆಲಸ ಇರುತ್ತಿತ್ತು. ರಮಾಭಾಯಿ ಕೆಲಸಕ್ಕೆ ಹೋದ ಮೇಲೆ ಟೀವಿ ನೋಡಿಕೊಂಡು ಇದ್ದು ಬಿಡುತ್ತಿದ್ದ. ಸಂಜೆಯಾಗುತ್ತಿದ್ದಂತೆ ರಮಾಭಾಯಿ ಮನೆಗೆ ಬಂದಿರುತ್ತಿದ್ದಳು, ಮತ್ತೇ ರಾತ್ರಿಯ ಊಟ ತಿಂಡಿ, ಇದು ಅವನ ನಿತ್ಯ ಕರ್ಮ .

ಊಟವಾದ ಮೇಲೆ ಒಂದು ಘಾಡವಾದ ನಿದ್ರೆಯಾದ ಪರಿಣಾಮ ಸಂಜೆ ಎದ್ದವನೆ ಹೊರಗೆ ಹೊರಟ. ಈ ಊರಿನಲ್ಲಿ ಅವರದೆ ಎಂದು ಮನೆಯಿರಲಿಲ್ಲ. ಊರ ಹೊರಗಿನ ಒಂದು ಆಶ್ರಮದಲ್ಲಿ ನಾಲ್ಕುದಿನದ ಮಟ್ಟಿಗೆ ಬಾಡಿಗೆಗೆ ಪಡೆದು ಅಲ್ಲೆ ಎಲ್ಲರೂ ಇದ್ದರು .

ದಾರಿಗುಂಟಾ ನಡೆವಾಗೆಲ್ಲಾ ಮತ್ತೆ ಅದೇ ರೀತಿ ಯಾರು ಯಾರೋ ಮಾತನಾಡಿಸ್ತಾ ಇದ್ದರೂ, ಎಲ್ಲರಿಗೂ ಪ್ರತಿಕ್ರಿಯಿಸುತ್ತಿದ್ದರೂ, ಯಾರೂ ಏಕೆ ತನ್ನ ನೆನಪಿಗೆ ಬರುತ್ತಿಲ್ಲ ಅಂತ ಅನ್ನಿಸುತ್ತಿದ್ದಾಗ, ಹೋಟೇಲಿನ ಬಳಿ ಕುಳಿತಿದ್ದ ನಾಗಣ್ಣನ ಗುರುತು ಸಿಕ್ಕಿದ್ದಕ್ಕೆ ಖುಷಿಯಾಗಿ, ಅಬ್ಬಾ ತನ್ನ ನೆನಪು ಪೂರ ಹೋಗಿಲ್ಲ, ಕೆಲವಾದರೂ ಉಳಿದಿದೆಯಲ್ಲ ಎಂದೆನಿಸಿ, ಅವನಿಗೆ ಇಡೀ ಆ ದಿನಗಳೆಲ್ಲ ಒಮ್ಮೆಗೇ ಒಂದು ಮೂಕೀ ಸಿನಿಮಾವನ್ನ fast forward ಮಾಡಿದರೆ ಆಗುತ್ತಲ್ಲ ಹಾಗೆ ಎದುರಿಗೆ ಕಾಣತೊಡಗಿತು.

ಈ ಹೋಟೆಲನ್ನ ನಡೆಸೋವಾಗ ಯಾರು ಬಂದರೂ ಬಾರದೇ ಇದ್ದರೂ ನಾಗಣ್ಣ ಮಾತ್ರ ನಿತ್ಯ ಬರುತ್ತಿದ್ದ. ಪೇಪರ್ ಓದಲಿಕ್ಕೆ ಅಂತ ಬಂದೇ ಬರುತ್ತಿದ್ದ. ಹಾಗೆ ಬಂದವ ಪೇಪರ್ರಿನ ಪ್ರತೀ ಸಾಲೂ ಓದುತ್ತಿದ್ದ. ಅವನು ಓದಿ ಮುಗಿಸುವಷ್ಟರಲ್ಲಿ ಹೋಟೇಲಲ್ಲಿ ಉಪ್ಪಿಟ್ಟು ಸಿದ್ದವಾಗಿರ್ತಿತ್ತು. ಆಗ ಮೊದಲ ಒಂದು ತುತ್ತನ್ನ ನಾಗಣ್ಣನಿಗೆ ಕೊಟ್ಟು, ಎಲ್ಲಾ ಸರಿಯಿದೆಯ ಅಂತ ಕೇಳಲೇ ಬೇಕಿತ್ತು. ಅವ ಎಲ್ಲಾ ಸರಿಯಿದೆ ಅಂತ ಹೇಳಿದಮೇಲಷ್ಟೆ ಶೇಷಣ್ಣನಿಗೆ ಸಮಾಧಾನ. ನಾಗನೋ ಎಂದೂ ಅದು ಸರಿಯಿಲ್ಲ, ಇದು ಕಡಿಮೆ, ಅದು ಹೆಚ್ಚು ಅಂತ, ಏನೂ ಹೇಳುತ್ತಿರಲಿಲ್ಲ. ಚನ್ನಾಗಿದೆ ಅಂತ ಮಾತ್ರಾ ಹೇಳುತ್ತಿದ್ದ. ಆದರೂ ಶೇಷಣ್ಣನಿಗೆ ಮೊದಲ ಒಂದು ತುತ್ತನ್ನು ಅವನಿಗೆ ನೀಡಿದರೇನೆ ಸಮಾಧಾನ. ಹಾಗೆ ಹೇಳಿದವನೆ ನಾಗಣ್ಣ ಹೊರಟುಹೋಗುತ್ತಿದ್ದ. ಅವ ಎಂದಿಗೂ ಹೋಟೇಲಿನಲ್ಲಿ ಇನ್ನೇನನ್ನೂ ಹೆಚ್ಚು ತಿನ್ನುತ್ತಿರಲಿಲ್ಲ. ಪ್ರತೀ ದಿನ ಪೇಪರ್ ಓದಲಿಕ್ಕೆ ಅಂತ ಬರುವ ರಾಮ, ಹಾಗೇ ಪೇಪರ್ ಓದಿ, ಶೇಷಣ್ಣನ ಒಂದು ತುತ್ತು ಉಪ್ಪಿಟ್ಟು ತಿಂದು ಚನ್ನಾಗಿದೆ ಅಂತ ಹೇಳಿ ಹೋಗುವುದು. ಅದಿಷ್ಟೂ ನೇರವಾಗಿ ಕಣ್ಣ ಮುಂದೆ ಹಾದು ಹೋದದ್ದು ಕಂಡು ಶೇಷಣ್ಣನಿಗೆ ತನ್ನ ನೆನಪು ಮರುಕಳಿಸಿದಂತಾಗಿ ಖುಷಿಯಾಗಿ, “ಅಲ್ಲೋ ನಾಗ ಹೇಗಿದ್ದೀಯೋ" ಅಂತ ಕೇಳಬೇಕು ಅಂತ ಬಾಯಿತೆರೆದವನೆ, ಅವನ ಮುಖ ಕಂಡದ್ದೆ, ಛೆ ಅದೇತಕ್ಕೆ ಸುಮ್ಮನೆ ಅಂತ ತೀರ್ಮಾನಿಸಿದವರಂತೆ ಸುಮ್ಮನೆ ನಡೆಯುತ್ತಿದ್ದರು.

“ನಾಗ, ಈಗ ಅದೆಲ್ಲಿ ಪೇಪರ್ ಓದುತ್ತೀಯೊ? ಈಗಲೂ ಓದುತ್ತಿಯೋ ಇಲ್ಲವೊ?

“ಹಾಂ ಓದ್ತಾ ಇದ್ದೀನಿ. ಎಲ್ಲೋ ಯಾರ ಮನೇಲೋ. ಅಂತೂ ಪೇಪರ್ ಬಂದೇ ಬರುತ್ತೆ. ಹಾಗೆ ಬಂದವರ ಮನೇಲಿ ಓದ್ತೇನೆ"

“ನಿಂಗೆ ರಾತ್ರಿ ನಿದ್ರೆ ಬರುತ್ತ? ರಾತ್ರಿ ನಿಂಗೆ ಹೆದರಿಕೆ ಆಗುತ್ತ?”

“ನಿದ್ರೆ ಬರುತ್ತೆ. ರಾತ್ರಿ ಹೆದರಿಕೆ ಏನೂ ಆಗೋಲ್ಲ. ಒಮ್ಮೆಮ್ಮೆ ನಿದ್ರೆಯಲ್ಲಿ ಏಳ್ತೇನೆ. ಅಷ್ಟು ಬಿಟ್ರೆ, ನಿದ್ರೆ ಅಂತೂ ಬರುತ್ತೆ.”

“ ನಾಗ, ನಂಗೆ ನಿದ್ರೇನೇ ಬರೋಲ್ವೋ. ಬರೋಲ್ಲ ಅಂದರೆ ಪೂರಾ ಬರೋಲ್ಲ ಅಂತ ಅಲ್ಲ. ಒಂಥರಾ ಬಹಳ ಕದಡಿದ ನಿದ್ರೆ. ಬೆಳಗ್ಗೆ ಎದ್ದಾಗ ರಾತ್ರಿ ನಿದ್ರೆ ಮಾಡಿದ್ದೆನ ಅಂತಾನೆ ತಿಳಿಯೋಲ್ಲ. ಒಂತರಾ, ಇಡೀ ರಾತ್ರಿ ಕೆಲಸ ಮಾಡ್ತಾ ಇದ್ದೀನೇನೋ ಅಂತ ಅನ್ನಿಸಿಬಿಡುತ್ತೆ ಗೊತ್ತ. ಅಕಸ್ಮಾತ್ತಾಗಿ ನಿದ್ರೆ ಬಂದದ್ದೇ ಆದರೆ, ಯಾವುದೋ ಹೊತ್ತಲ್ಲಿ ಒಮ್ಮೆಗೇ ಗಾಬರಿಯಾಗಿ ಎಚ್ಚರವಾಗಿ ಬಿಡುತ್ತೆ. ಬಹಳ ಗಾಬರಿಯಾಗಿರುತ್ತೆ ಗೊತ್ತ. ವಿಪರೀತ ಬೆವರ್ತಾ ಇರ್ತೀನಿ. ನಾನು ಯಾರು, ನಾನು ಇಲ್ಲಿ ಯಾಕೆ ಇದ್ದೀನಿ, ಯಾವುದೂ ತಿಳಿಯೋಲ್ಲ. ಜೋರು ಗಾಬರಿಯಾಗುತ್ತೆ. ಎದೆ ಜೋರು ಹೊಡೆದುಕೊಳ್ತಾ ಇರುತ್ತೆ. ಮೈಯೆಲ್ಲಾ ಬೆವರ್ತಾ ಇರುತ್ತೆ. ಏನೂ ಗೊತ್ತೇ ಆಗೋಲ್ಲ. ಇಪರೀತ ಭಯ ಆಗುತ್ತೆ. ಸುಮ್ಮನೆ ಕೂತಿರ್ತೀನಿ, ಏನು ತಿಳಿಯೋಲ್ಲ. ಆಮೇಲೆ ಅದೆಷ್ಟೋ ಸಮಯ ಆದ ಮೇಲೆ ಪಕ್ಕದಲ್ಲಿ ಮಲಗಿರೊ ರಮಾನ ನೋಡಿದಾಗ ಒಮ್ಮೆಗೇ ಎಲ್ಲಾನೂ ನೆನಪಾಗುತ್ತೆ. ನಾನು ಅವಳ ಗಂಡ. ನನಗೆ ಇಬ್ಬರು ಮಕ್ಕಳು. ಎಲ್ಲೋ ದೂರದಲ್ಲಿದ್ದಾರೆ. ನಾನು ಇಲ್ಲಿ ಇದ್ದೀನಿ. ಈ ಮನೆಯಲ್ಲಿ. ಅಡುಗೆ ಮಾಡುತ್ತೀನಿ. ನನ್ನದು ಅಂತ ಒಂದು ಊರಿತ್ತು. ಆ ಊರಲ್ಲಿ ನನ್ನಮ್ಮ, ಅಣ್ಣ, ತಮ್ಮ , ಅವರ ಕುಟುಂಬಗಳೂ, ಎಲ್ಲವೂ ಇತ್ತು. ಅದೇ ಊರಲ್ಲಿ ನನ್ನದೂ ಒಂದು ಹೋಟೇಲು ಇತ್ತು. ಅಲ್ಲಿಗೆ ಜನ ಬರ್ತಿದ್ರು. ನಾನು ಉಪ್ಪಿಟ್ಟು ಮಾಡ್ತಾ‌ ಇದ್ದೆ. ಆಮೇಲೆ ಅಮ್ಮ ಸತ್ಲು, ಅಣ್ಣ ಸತ್ತ, ತಮ್ಮ ಅವರ ಮಕ್ಕಳು ಊರು ಬಿಟ್ರು. ಒಂದು ದಿನ ನಾವೂ ಊರು ಬಿಟ್ಟೆವು. ಬೆಂಗಳೂರು ಸೇರಿದ್ವಿ. ಮಕ್ಕಳು ದೂರದ ಊರಿಗೆ ಹೋದರು. ಹೆಂಡತಿ ಕೆಲಸಕ್ಕೆ ಹೋಗ್ತಾಳೆ. ನಾನು ಮನೇಲಿ ಇರ್ತೇನೆ. ಹೀಗೆ ಎಲ್ಲವೂ. ಇನ್ನೂ ಹಲವು. ಕೆಲವೊಮ್ಮೆ ಒಟ್ಟಿಗೆ, ಕೆಲವೊಮ್ಮೆ ಬಿಡಿಬಿಡಿಯಾಗಿ ಸೇರಿಸಿ ತೀವ್ರವಾಗಿ ಒಂದೇ ಕ್ಷಣದಲ್ಲಿ ಇಡೀ ನನ್ನ ಬದುಕು ಒಂದು ಅಪ್ಪಟ ನೆನಪಾಗಿ ನಿದ್ರೆಯಿಂದೆಬ್ಬಿಸಿ ಬೆಚ್ಚಿಬೀಳಿಸುತ್ತೆ. ಆಗ ಗಾಬರಿಯಾಗುತ್ತೆ. ಅಷ್ಟೊಂದು ಸಂಗತಿಗಳನ್ನ, ಅಷ್ಟೊಂದನ್ನ ನಾನೇನಾ ಬದುಕಿದ್ದು ಎಂದು ತಿಳಿದು ಅಷ್ಟು ಕಡಿಮೆ ಅಂತರದಲ್ಲಿ ಹೀಗೆ ಎಲ್ಲವೂ ಎದುರಿಗೆ ಬಂದಾಗ ತಡೆಯೋಕೆ ಆಗೋಲ್ಲ. ಹೆದರಿಕೆ ಆಗುತ್ತೆ. ತಲೆ ಚಚ್ಚಿಕೊಂಡು ಬಿಡುವ ಅಂತನ್ನಿಸುತ್ತೆ. ಅದೇ ಬೆಳಗ್ಗೆ ಎದ್ದಾಗ ಯಾವುದೂ ನೆನಪಲ್ಲಿರೋದಿಲ್ಲ. ಆದರೆ ನೋವು ಇರುತ್ತೆ. ಏನೋ ಬೇಸರ. ರಾತ್ರಿ ಮಲಗಿದ್ದದ್ದೆ ನೆನಪಿಲ್ಲದ ರೀತಿಯಲ್ಲಿ ಬೇಸರ. ಹಾಲಿನವನದೋ, ಪೇಪರಿನವನದೋ ಸ್ವಲ್ಪ ಶಬ್ದವಾದರೂ ಇಡೀ ದೇಹ ಕಂಪಿಸಿ ಗಾಬರಿಗೊಂಡು ಕಿರುಚಿಕೊಂಡಿದ್ದೀನಿ ಅಂದೆನಿಸಿರುತ್ತೆ. ಆದರೆ ಹಾಗಾಗಿರುವುದಿಲ್ಲ. ಇಷ್ಟೆಲ್ಲಾ ಆದರೂನೂ ಬೆಳಗ್ಗೆಯ ನಂತರದ ದಿನ ಹಾಗೇ ಇರುತ್ತೆ. ದಿನದಲ್ಲಿ ಬದಲಾವಣೆಗಳೇನೂ ಇರೋದಿಲ್ಲ, ಹಾಗೇ ಇರುತ್ತೆ. ಏನು ನಡೀತಿದೆ ಅಂತ ಕೇಳಿಕೊಳ್ಳಬೇಕು ಎಂದೆನಿಸುವಷ್ಟರಲ್ಲಿ ಮದ್ಯಾನ್ಹದ ನಿದ್ರೆ ಬರುತ್ತೆ. ಮಲಗಿದ್ದಾಗ ಕನಸಲ್ಲಿ ಯಾವುದೋ ಹೆಣ್ಣು ಕಾಣುತ್ತಾಳೆ, ಯಾವಾಗಾದರೊಮ್ಮೆ ಸ್ಕಲನವಾದಂತೆ ಅನಿಸುತ್ತೆ ಆದರೆ ಅದೂ ಆಗಿರುವುದಿಲ್ಲ.

ನಾನೇಕೆ ಇವೆಲ್ಲ ನಿನ್ನ ಹತ್ರ ಹೇಳ್ತಿದ್ದೀನಿ ಗೊತ್ತ., ನೀನು ನನಗೆ ಯಾವುದೋ ಕನಸಿನ ಭಾಗದ ರೀತೀನೆ ಅನ್ನಿಸೋಕೆ. ನೀನು ನಿಜವಲ್ಲ. ನಿಜವೆಂದು ಅನ್ನಿಸೋದೇ ಇಲ್ಲ. ಉಳಿದವರೆಲ್ಲಾ ನಿಜ ಅನ್ನಿಸ್ತಾರೆ. ಅವರೆಲ್ಲಾ ನಗ್ತಾ ಇದ್ದಾರೆ. ಹೇಗಿದ್ದೀಯ ಅಂತ ಬಾಯಿ ತುಂಬಾ ಮಾತನಾಡಿಸ್ತಾರೆ. ಅದಕ್ಕೇ ಅವರೆಲ್ಲಾ ನಿಜ. ನೀನೂ ಇದ್ದೀಯ. ಸುಮ್ಮನೆ ಇದ್ದೀಯ . ನಿನ್ನ ಮುಖ ನೋಡು ಸ್ವಲ್ಪಾನೂ ನಗು ಇಲ್ಲ. ನೀನು ನನ್ನನ್ನ ಏನು, ಹೇಗಿದ್ದೀಯ ಅಂತಾನೂ ವಿಚಾರಿಸಿಲ್ಲ. ಆದ್ದರಿಂದ ನೀನು ನನ್ನ ಮಟ್ಟಿಗೆ ಇಲ್ಲಾ ಅಂತಾನೆ ಅನ್ನಿಸೋದು. ಅದಕ್ಕೇ ಹೇಳ್ತಿದ್ದೀನಿ.

ಮಲಗಿರೋವಾಗೆಲ್ಲ ಭೂಮಿ ನಡುಗುತ್ತಾ ಇದೆಯೇನೋ ಅಂತ ಅನ್ನಿಸುತ್ತೆ. ಒಮ್ಮೊಮ್ಮೆ ಅದೇ ಭೂಮಿ ನನ್ನನ್ನ ತಬ್ಬಿಕೊಂಡಂತೆ, ಅದರ ಮಡಿಲಲ್ಲ ಮಲಗಿರುವಂತೆ ಅನ್ನಿಸುತ್ತೆ. ಆದರೂ ಗಾಬರಿ. ಭಯ. ರಾತ್ರಿಯ ಪ್ರತೀ ಕ್ಷಣ ಭಯ. ಯಾರೋ ಬಂದಂತೆ, ಕಪ್ಪು ಬಿಳಿ ಬಣ್ಣಗಳು ಹಲವು ರೂಪಗಳು ಎದುರಿಗೆ ಬಂದಂತೆ, ಸುಮ್ಮನೆ ಬಂದಂತೆ ಹೆದರಿಕೆಯಾಗುತ್ತೆ. ಓಡಿ ಹೋಗಬೇಕು ಅಂತನಿಸುತ್ತೆ. ಯಾರೋ ಇದ್ದಾರೆ ಅಂತ ಸುಮ್ಮನೆ ಅನ್ನಿಸುತ್ತೆ. ಅಲ್ಲಿ ಯಾರೂ ಇರೋಲ್ಲ.

ಅಲ್ಲೋ ನಾಗ, ಇಲ್ಲೇ ನಮ್ಮ ಮನೆ ಇದ್ದದ್ದು ಅಲ್ವ. ಮನೆ ಮುಂದಿನ ಕಟ್ಟೆಯಲ್ಲೇ ಅಲ್ವ ಅಶ್ವತ್ಥ ವೃಕ್ಷ ಇದ್ದದ್ದು. ನೋಡು ಎಲ್ಲವನ್ನೂ ದೇವಸ್ಥಾನಕ್ಕೆ ಕೊಟ್ಟು ಬಿಟ್ಟಿದ್ದಾರೆ. ಆದರೂ ನನ್ನ ಹೋಟೇಲು ಇಲ್ಲೇ ಇದೆಯಲ್ಲ, ಅದಕ್ಕೆ ಮೆಚ್ಚಲೇ ಬೇಕು. ಒಂದಿಷ್ಟು ಜೇಡ ಕಟ್ಟಿದೆ ಒಳಗೆಲ್ಲಾ. ಯಾರು ಯಾರು ಹೋಟೆಲನ್ನ ನಡೆಸ್ತೇವೆ ಅಂತ ಬಂದಿದ್ರು. ಅದೇಕೋ ಯಾರಿಗೂ ಆಗಲಿಲ್ಲ ನೋಡು.

ಈ ಮನೆ ಇತ್ತಲ್ಲ, ಇಲ್ಲೇ ಅಲ್ಲೇನೋ ಮಂಜ, ನನ್ನ ತಮ್ಮ ಬಜ್ಜಿ ಮಾರ್ತಾ ಇದ್ದದ್ದು. ನಿಂಗೆ ಗೊತ್ತ ಅಣ್ಣಂದು ಅಲ್ಲಿ ಅಂಗಡಿ ಇತ್ತು. ಅವನ ಅಂಗಡಿ, ನನ್ನ ಹೋಟೆಲು, ಇವನದು ಸಂಜೆ ಬಜ್ಜಿ. ಇಲ್ಲೊಂದು ಭಾವಿ ಇತ್ತು. ಯಾವತ್ತೂ ನೀರಿರುತ್ತಿರಲಿಲ್ಲ. ಆದರೂ ಆ ಭಾವಿ ತೆರೆದೇ ಇರುತ್ತಿತ್ತು. ಅದನ್ನೂ ಈಗ ಮುಚ್ಚಿಯಾಗಿದೆ. ನಾವು ನಿಂತಿರೋದೆ ಹಾಗೆ ಮುಚ್ಚಿರುವ ಬಾವಿಯ ಮೇಲೆ ನೋಡು. ಬಾವಿಯೊಳಗೆ ನಮ್ಮ ಅತ್ತೇನೋ ಅವಳ ಮಗಳೋ, ಸರಿಯಾಗಿ ನೆನಪಿಲ್ಲ, ಅವಳು ಮುತ್ತೈದೆ ಅಂತೆ, ಗರ್ಬಿಣಿ ಬೇರೆ ಆಗಿದ್ದಳಂತೆ, ಬಿದ್ದು ಸತ್ತಿದ್ದಳಂತೆ. ಹಾಗಾಗಿ ಊರಿಗೆ ಕೇಡು ಅಂತ ಆ ಬಾವಿಯಿಂದ ಯಾರೂ ನೀರನ್ನ ತೆಗೆದುಕೊಂಡು ಹೋಗುತ್ತಿರಲಿಲ್ಲ. ಈಗ ಹಾಗೆ ತೆರೆದು ಇದ್ದ ಬಾವಿಯನ್ನ ಮುಚ್ಚಿದ್ದಾರೆ. ಒಳ್ಳೇದಾಯ್ತು. ನಾವು ನೋಡು ಹೀಗೆ ಯಾರೋ ಸತ್ತ ಬಾವಿಯಲ್ಲಿ, ಮುಚ್ಚಿದ ಮಣ್ಣಿನ ಮೇಲೆ ನಿಂತು ಏನೇನೋ ಮಾತಾಡ್ತಾ ಇದ್ದೀವಿ.

ಇವರಿಗೆಲ್ಲಾ ನೆನ್ನೆ ಪಿಂಡ ಇಟ್ಟು ಬಂಡೆವು. ಯಾರ್ಯೋರೋ ಸತ್ತೊದ್ದಾರಂತೆ ನಮ್ಮ ಮನೇಲಿ. ಯಾರಿಗೂ ನಾವು ಪಿಂಡ ಇಟ್ಟಿರಲಿಲ್ಲವಂತೆ. ಹಾಗಾಗಿ ನಮಗೆ ಈಗ ಈ ಪರಿಸ್ಥಿತಿ ಅಂತ ಯಾರೋ ಹೇಳಿದರಂತೆ. ಹಾಗಾಗಿ ಗೊತ್ತಿರುವ ಗೊತ್ತಿಲ್ಲದ ಎಲ್ಲಾ ಆತ್ಮಗಳಿಗೂ ಪ್ರೇತಾತ್ಮಗಳಿಗೂ ನೆನ್ನೆ ಪಿಂಡ ಇಟ್ಟು ಬಂದೆವು. ಎಲ್ಲರೂ ತಿಂದು ಸುಖವಾಗಿದ್ದು, ನಮ್ಮನ್ನೂ ಸುಖವಾಗಿರಿಸಲಿ ಅಂತ.

ನಾನೂ ಅವುಗಳಿಗೆ ಪಿಂಡ ಇಟ್ಟೆ. ನನಗೆ ಈಗ ಸರಿಯಾಗೆ ನಿದ್ರೆ ಬರುತ್ತಾ?. ನನ್ನ ನಿದ್ರೇಗೆ, ಈ ಪರಿಸ್ಥಿತಿಗೆ ಇದೇ ಗೊತ್ತಿಲ್ಲದ ಆತ್ಮಗಳೇ ಕಾರಣಾನ?, ಈಗಲಾದರೂ ನನಗೆ ನಿದ್ರೆ ಬರಿಸುತ್ತಾ ?. ಇರು ಅವುಗಳಿಗೆ ಒಮ್ಮೆ ಜೋರಾಗಿ ಒಂದು ಸರಿ ಹೇಳಿ ಬಿಡ್ತೇನೆ. ಅವುಗಳಿಗೆ ಕೇಳುತ್ತೋ ಇಲ್ಲವೋ "ಓ ಆತ್ಮಗಳೆ, ಪ್ರೇತಾತ್ಮಗಳೆ, ದಯವಿಟ್ಟು ನನಗೆ ನಿದ್ರೆ ಹೋಗಲು ಬಿಡಿ, ನಿಮಗೆ ಅದೆಷ್ಟು ಬಾರಿ ಬೇಕಾದ್ರೂ ಪಿಂಡ ಇಡಲು ನಾನು ಸಿದ್ದ".

ಅದ್ಯಾವಾಗ ಇಬ್ಬರೂ ಬೇರೆಯಾಗಿದ್ದರೋ ಇಬ್ಬರಿಗೂ ತಿಳಿಯಿತೋ ಇಲ್ಲವೋ ಅವರಿಗೂ ತಿಳಿಯಲಿಲ್ಲ. ಹೀಗೆ ಮಾತು ಮುಗಿಸಿದವನೆ ಶೇಷಣ್ಣ ಯಾರೂ ಹಿಂಬಾಲಿಸುತ್ತಿಲ್ಲ ಎಂದು ಖಾತ್ರಿಪಡಿಸಿಕೊಂಡು ನೇರ ನದಿಯೆಡೆಗೆ ನಡೆದ. ಶೇಷಣ್ಣನಿಗೆ ಯಾವಾಗಲಾದರೊಮ್ಮೆ ಬೇಸರವಾದರೆ ಇಲ್ಲಿಗೆ ಬರುವುದು ವಾಡಿಕೆ. ಯಾಕೋ ಮಾಡಿದ ಕೆಲಸ ಸಾಕಾಯಿತು ಅಂತ ಅನ್ನಿಸಿದ್ದೇ ತಡ, ಇವತ್ತು ಹೋಟೇಲು ಸಾಕು ಎಂದು ಮುಚ್ಚಿ ನೇರ ಇಲ್ಲಿಗೆ ಬಂದು ಬಿಡುತ್ತಿದ್ದ. ನದಿಯ ಪಕ್ಕದ್ದೇ ಜಮೀನು. ನದಿಯ ನೀರೆ ಜಮೀನಿಗೂ. ಹೀಗೆ ಜಮೀನಿನ ಮುಖಾಂತರ ಹೋದಾಗ ನದಿಯಲ್ಲೊಂದು ಬಂಡೆ ಸಿಗುತ್ತಿತ್ತು. ಆ ಬಂಡೆ ಅವನ ನೆಚ್ಚಿನ ಬಂಡೆ. ಅಲ್ಲಿ ಕೂರಬೇಕು. ಆ ಬಂಡೆಯಮೇಲೆ ಕೂತಾಗ ಆ ಬಂಡೆಯ ಸುತ್ತಾ ಹರಿಯುವ ನೀರಲ್ಲಿ ಕಾಲಾಡಿಸುತ್ತಾ ಆಕಾಶ ನೋಡುತ್ತ ಕೂತನೆಂದರೆ ಮುಗಿಯಿತು, ಬೇರೆ ಯಾರಾದರೂ ಬಂದು ಅವನನ್ನು ಎಬ್ಬಿಸಿದರೇನೆ ಅವನಿಗೆ ಮತ್ತೆ ಜಗತ್ತು ಕಾಣುತ್ತಿದ್ದದ್ದು. ಹಾಗೆ ಮೈ ಮರೆಯುತ್ತಿದ್ದ. ಅಲ್ಲಿಂದ ಏನೇನೆಲ್ಲಾ ಕಂಡಿದ್ದ. ಈ ನದಿ ಜೀವ ನದಿಯೇನೂ ಅಲ್ಲ. ವರ್ಷ ಪೂರ ಏನೂ ಹರಿಯೋಲ್ಲ. ಮಳೆಗಾಲದಲ್ಲಿ ಜೋರು ಮಳೆಯಾದರೆ ಆ ಮಳೆ ನೀರಿಂದ ಹರಿಯುವ ನದಿ. ಮೇಲಿನ ಪ್ರದೇಶದಲ್ಲಿ ಮಳೆಯಾಗಬೇಕು. ಹೀಗೆ ಎತ್ತರದಲ್ಲಿ ಮಳೆಯಾದರೆ ಆ ನೀರು ನದಿಯಾಗಿ ಕೆಳಗೆ ಹರಿಯುತ್ತಿತ್ತು. ಒಮ್ಮೆ ಹೀಗೆ ಆ ಬಂಡೆಯ ಮೇಲೆ ಕೂತಿದ್ದಾಗ ಮೇಲಿನ ಪ್ರದೇಶದಲ್ಲೆಲ್ಲೋ ಮಳೆಯಾದದ್ದರಿಂದ ನೀರು ಹರಿಯುತ್ತಾ ಬರುತ್ತಿತ್ತು. ಬೇಸಿಗೆ ಕಳೆದಿತ್ತು. ಇನ್ನೂ ಮಳೆಯಾಗಿರಲಿಲ್ಲ. ಈ ಸಮಯದಲ್ಲಿ ಮೊದಲ ಬಾರಿಗೆ ಹರಿಯುತ್ತಿತ್ತು.

ಹಾಗೆ ನದಿ ಮೊದಲ ಬಾರಿಗೆ ಹರಿಯುವುದನ್ನ ಅವ ಕಾಣುತ್ತಿದ್ದ. ಕೆಳಗೆ ಬಿಸಿಲಿಂದ ಬೆಂದಿದ್ದ ಭೂಮಿ ಒಂದೇ ಒಂದು ಹನಿಯನ್ನೂ ಮುಂದಕ್ಕೆ ಬಿಡುವುದಿಲ್ಲವೆಂದೂ, ಎಲ್ಲವನ್ನೂ ಕುಡಿಯಲು ತನ್ನನ್ನು ತಣಿಸಿಕೊಳ್ಳಲು ಹೊರಟಾಗ, ನೀನೆಷ್ಟೇ ಕುಡಿದರೂ ನೀನೂ ತಣಿಯುತ್ತೀಯೆ, ತಣಿದಾಗ ನಾ ಮುಂದಕ್ಕೆ ಸಾಗಿಯೇ ಸಾಗುತ್ತೀನಿ ಎಂದು ನದಿ ಹರಿಯುತ್ತಿತ್ತು. ಹಾಗೆ ಭೂಮಿ ನೀರ ಹೀರುವಾಗ ಕೆಳಗಿಂದ ಏಳುವ ಗಾಳಿ ಗುಳ್ಳೆಗಳು ಹರಿಯುವ ನೀರನ್ನು ಕುದಿಯುತ್ತಿದೆಯೇನೋ ಎಂದು ಭಾಸವಾಗುವಂತೆ ತೋರುತ್ತಿತ್ತು. ಕಣ್ಣಳೆತೆಗೆ ಸಿಕ್ಕ ಅಷ್ಟೂ ಭೂಮಿಯಲ್ಲಿ ಹರಿಯುವ ನೀರು, ಕೆಳಗಿನ ಬಿಸಿ ಭೂಮಿಯ ಒಳಗಿಂದ ಏಳುತ್ತಿದ್ದ ಗಾಳಿ ಬುಗ್ಗೆಗಳೊಟ್ಟಿಗೆ ಇಡೀ ಭೂಮಿಯ ಕುದಿತ ಕಂಡಿತ್ತು.

ಆಗಲೇ ಅವನಿಗೊಂದು ಆಸೆ ಕಾಡಿತ್ತು. ಅದೇ ರೀತಿ, ನದಿ ಹಿಂತಿರುಗುವಾಗ, ಬತ್ತುವಾಗ, ಅದ್ಯಾವ ರೀತಿ ಕಾಣುತ್ತದೆ. ಅದ್ಯಾವ ರೀತಿ ಭೂಮಿ ನೀರು ಭೇರ್ಪಡುತ್ತದೆ, ನೋಡಬೇಕೆಂದು ಬಹುವಾಗಿ ಆಶಿಸಿದ್ದ. ಅದೆಷ್ಟೋ ಮಂದಿ ಹೇಳಿಯೂ ಇದ್ದರು, ನದಿ ಹಿಂತಿರುಗುವಾಗ ನೋಡಬಾರದು ಅಂತ, ಆದರೂ ಅದೆಷ್ಟೇ ಕಾದರೂ ಎಂದಿಗೂ ಅವನಿಗೆ ನದಿ ಹಿಂತಿರುಗುವುದನ್ನ ಕಾಣಲಿಕ್ಕೆ ಆಗಿರಲಿಲ್ಲ.

ಜಮೀನಿಗೆ ಬಂದವನೆ ನದಿಗೋಗಿ ಸ್ವಲ್ಪ ಹೊತ್ತು ತಾನು ಕೂರುತ್ತಿದ್ದ ಬಂಡೆಯ ಮೇಲೆ ಕೂರಬೇಕೆನಿಸಿತು. ಆದರೆ ಇಲ್ಲಿ ಯಾವುದು ನದಿ? ಎಲ್ಲಿದೆ ಮರಳು? ಎಲ್ಲಿದೆ ತಾನು ಯಾವಾಗಲೂ ಬಂದು ಕೂರುತ್ತಿದ್ದ ಆ ಬಂಡೆ.

ಇಲ್ಲಿ ನದಿಯೊಂದು ಹರಿಯುತ್ತಿತ್ತು ಎಂದು ಹೇಳಲಿಕ್ಕೆ ಆ ಕಡೆಯಿಂದ ಈ ಕಡೆಯವರೆಗೆ ಇರುವ ಬ್ರಿಡ್ಜಿನಿಂದ ಮಾತ್ರ ತಿಳಿಯಲು ಸಾದ್ಯವಾಗಿರುವಂತಹ ಸ್ಥಿತಿ. ಸುಮಾರು ವರ್ಷಗಳಿಂದ ಸರಿಯಾಗಿ ಮಳೆಯಿಲ್ಲ. ಮರಳು ನಗರ ಸೇರಿದೆ. ನದಿಯಲ್ಲಿ ಮರಳಿಲ್ಲ. ಇರುವುದೆಲ್ಲಾ ಬರೀ ಗುಂಡಿಗಳು. ಮರಳು ತೆಗೆದ ದೊಡ್ಡ ದೊಡ್ಡ ಗುಂಡಿಗಳು. ಸುತ್ತಲೂ ಇರುವ ಜಾಗದಲ್ಲಿ ಬರೀ ಕಳ್ಳಿ ಕಿಡಗಳು, ಮುಳ್ಳು ಜಾಲಿ ಗಿಡಗಳು ಬೆಳೆದಿವೆ. ಅದರೊಳಗೆ ಆ ಮುಳ್ಳ ಕೊಂಪೆಯ ಮದ್ಯದಲ್ಲೇ ಎಲ್ಲಾದರೂ ತನ್ನ ಬಂಡೆ ಸಿಗಬಹುದ ಎಂದು ಹುಡುಕತೊಡಗಿದವನಿಗೆ, ಅದು ಸಿಗದೆ ತನಗೆ ವಯಸ್ಸಾಗಿದ್ದಕ್ಕೆ ಇಲ್ಲಿ ಸಿಗುತ್ತಿಲ್ಲವೋ , ಇಲ್ಲವ ಈ ನದಿಗೆ, ಈ ಭೂಮಿಗೆ ವಯಸ್ಸಾಗಿದೆಯೋ ತಿಳಿಯದೆ ಹಾಗೇ ಕುಸಿದಾಗ ಕೆಳಗಿನ ಮುಳ್ಳು ಕಾಣದೆ ಅವನ ತಿಕಕ್ಕೆ ಚುಚ್ಚಿಕೊಂಡು ಏಳಲಾರದೆ, ಕೂಡಲೂ ಆಗದೆ ತನ್ನ ಈ ಅಸಾಹಾಯಕ ಪರಿಸ್ಥಿತಿಗೆ ನೊಂದು ಕಿರುಚಿ, ಆ ಮುಳ್ಳನ್ನು ತೆಗೆಯಲು ಹೋಗಿ ಅದು ಮತ್ತೆ ಕೈಗೆ ಚುಚ್ಚಿದಾಗ ನೋವು ತಾಳಲಾರದೆ ಜೋರಾಗಿ ಅಳಲಾರಂಬಿಸಿದಾಗ, ಅವನ ಅಳು ಆ ನದಿಯಲ್ಲಿ ಪ್ರತಿಧ್ವನಿಸಿ ಅದೆಷ್ಟೋ ಆಕ್ರಂದನಗಳು ಬೆರೆತು ಒಮ್ಮೆಲೆ ಎಲ್ಲ್ಲರೂ ಅಳುತ್ತಿರುವವರಂತೆ ಕೇಳಲಾರಂಬಿಸಿದಾಗ, ಏನೂ ಮಾಡಲೂ ತೋಚದೆ ಹಾಗೆಯೇ ರಕ್ತ ಹರಿವ ಮೈಯಿಂದ ತಾನಿದ್ದ ಮನೆಯೆಡೆಗೆ ನಡೆದ. ಈಗ ಹಿಂತಿರುಗುವ ದಾರಿಯೂ ಮರೆತಿತ್ತು. ಯಾವುದೋ ದಾರಿಯಲ್ಲಿ ಹಿಂತಿರುಗಿ ಮನೆ ಸೇರಿದರೆ ಸಾಕಿತ್ತು. ದಾರಿಗುಂಟಾ ನಡೆವಾಗೆಲ್ಲಾ ಅನುಭವಿಸಿದ್ದು ಮುಳ್ಳು ಚುಚ್ಚಿದ ಬರೀ ನೋವು.
**********
********
ಅದೆಷ್ಟೇ ನೋವಿದ್ದರೂ ಕಡೆಯ ದಿನದ ಜಪ ಹಾಗೂ ಹೋಮ ಮಾಡಿಬಿಟ್ಟರೆ ಮನೆಯವರಿಗೆಲ್ಲರಿಗೂ ಒಳಿತಾಗುವುದೆಂಬ ಕಾರಣದಿಂದಲೋ, ಇದೊಂದು ದಿನವಲ್ಲವ ಆಗಿ ಹೋಗಲಿ ಅಂತಲೋ, ಏನೋ ಶೇಷಣ್ಣ ಒಪ್ಪಿ ದೇವಸ್ಥಾನಕ್ಕೆ ಬಂದಿದ್ದ. ಹಿಂದಿನ ದಿನ ತಿಕಕ್ಕೆ ಮುಳ್ಳು ಚುಚ್ಚಿದ್ದರಿಂದ ಅವನಿಗೆ ಕೂರಲು ಆಗದಾದ ಕಾರಣ ನಿಂತೇ ಗಾಯತ್ರೀ ಜಪಿಸುವುದೆಂದು ನಿಂತೇ ಜಪಿಸುತ್ತಿದ್ದ. ಆ ನೋವಿಗೋ ನೆನ್ನೆಯ ದಿನ ತಿಂದದ್ದು ಸರಿ ಹೋಗದ ಕಾರಣಕ್ಕೋ , ನೋವಿಗೆ ತೆಗೆದುಕೊಂಡ ಮಾತ್ರೆಯಿಂದಲೋ ಹೊಟ್ಟೆಯೆಲ್ಲಾ ಒಂದು ರೀತಿಯಲ್ಲಿ ಗುಳ ಗುಳ ಎನ್ನುತ್ತಿತ್ತು. ಕಕ್ಕವೋ, ಹೂಸೋ ತಿಳಿಯದಾದರೂ ಈ ಜಪವೊಂದು ಮುಗಿದು ಹೋಗಲಿ ಆಮೇಲೆ ಹೋದರಾಯಿತು ಎಂದು ಕಷ್ಟಪಟ್ಟು ತಡೆದುಕೊಂಡಿದ್ದ. ಆಗಲೇ ಅನಾಹುತ ಸಂಭವಿಸಿದ್ದು. ಆಗಲೇ ದೇವಸ್ಥಾನಕ್ಕೆ ನಮಸ್ಕಾರಕ್ಕೆ ಅಂತ ರಾಮಕ್ಕ ಬಂದದ್ದು. ಆಕೆ ಕಂಡದ್ದೇ ಅವಳನ್ನು ತಕ್ಷಣ ಗುರುತಿಸಿದವನಿಗೆ ಬಸ್ಸಿನಲ್ಲಿ ಬಂದಿದ್ದ ಉಪ್ಪಿಟ್ಟಿನಲ್ಲಿದ್ದ ಕರಿಬೇವಿನ ಸೊಪ್ಪಿನ ವಾಸನೆ ನೆನಪಾಗಿ ಜಪ ತಪ್ಪಿದ್ದೇ ಊಸೆಂದು ಬಿಟ್ಟವನಿಗೆ ಗೊತ್ತಾದದ್ದು ಅದು ಬೇದಿಯೆಂದು. ಭಾರೀ ಶಬ್ದದಿಂದ ಹೊರಬಂದದ್ದರಿಂದ ಎಲ್ಲರಿಗೂ ತಿಳಿದು ಅವರವರ ಜಪಗಳು ಭಗ್ನವಾಗಿ ಅಲ್ಲೊಂದು ಕೋಲಾಹಲವೇ ನಿರ್ಮಾಣವಾದ ಸಂದರ್ಭದಲ್ಲಿ ಶೇಷಣ್ಣನಿಗೆ ರಾಮಕ್ಕನ ಮುಖ ತಪ್ಪ ಬೇರೇನೂ ಕಾಣದೆಂಬಂತೆ ಅವಳನ್ನೂ, ಅವಳ ಪೂಜೆಯನ್ನೂ ದಿಟ್ಟಿಸುತ್ತಿದ್ದ. ರಮಾಬಾಯಿ ತಕ್ಷಣ ಎದ್ದವಳೆ ಶೇಷಣ್ಣನ್ನ ಬಚ್ಚಲಿಗೆ ಕರೆದುಕೊಂಡು ಹೋಗಿ ಬಂದು ಅಲ್ಲಿದ್ದವರಿಗೆಲ್ಲಾ ಕ್ಷಮೆಕೇಳಿ ಆಗಿದ್ದ ಗಲೀಜನ್ನೆಲ್ಲಾ ನೀರು ಬಟ್ಟೆ ತಂದು ವರೆಸುತ್ತಿದ್ದಾಗ, ಹೇಗಾದರೂ ಈಗ ರಾಮಕ್ಕನ ಮನೆಗೋಗಿ ಕರಿಬೇವಿನ ಸೊಪ್ಪಿನ ಒಗ್ಗರಣೆ ಹಾಕಿದ ಉಪ್ಪಿಟ್ಟು ಮಾಡಲೇ ಬೇಕೆಂದು ಶೇಷಣ್ಣ ನಿರ್ದರಿಸಿದ್ದ.

******************

.................

ಅರಳೀ ಕಟ್ಟೆಯ ಮೇಲೆ
ದಾರಿಹೋಕರಿಗೆಲ್ಲಾ
ಮುಖ ತೋರುತ್ತಿದ್ದವನ
ದಿನಕ್ಕೊಂದು ಪವಾಡದಲ್ಲಿ
ಹಲವು ಬಾರಿ
ಗಾಳಿಯಲ್ಲಿ ಕೈ ಬೀಸಿದಾಗ
ಹಕ್ಕಿಗಳು ಹಾರಿ ಹೋಗುತ್ತಿದ್ದವು

ಒಂದು Quantum ಕವಿತೆ

ಅಯ್ಯಾ, ಬೆಕ್ಕು                         
ಕಾಡಿದ್ದು ನಿಮ್ಮನ್ನಷ್ಟೇ ಅಲ್ಲ.              
ಒಳಗೆ ಮರಿಗಳನ್ನಿಟ್ಟು                   
ನಾವಿಲ್ಲದ ವೇಳೆ ನೋಡಿ
ಈಗೇನಾದರು ಮಾಡಬೇಕಲ್ಲ
ಅವಕ್ಕೇನು ತಿಳಿಯುತ್ತೆ
ಪರಚಲಿಕ್ಕೆ ಬರುವುದು
ಎದುರಿಗೋದಾಗ

ಅಯ್ಯಾ, ಬೆಕ್ಕು                                     
ಕಾಡಿದ್ದು ನಿಮ್ಮನ್ನಷ್ಟೇ ಅಲ್ಲ.       
ಇಲ್ಲದಿದ್ದಾಗ ಮರಿಗಳಿನ್ನಿಟ್ಟು              
ಎಲ್ಲೋ ದೂರದಲ್ಲಿದ್ದೆನೆಂದು
ಮರಿ ಕಿರುಚಿದ್ದು ಕೇಳಲಿಲ್ಲವೆಂಬುದೇನೋ
ನಿಜ
ಗೊತ್ತಿತ್ತೇನು ? ಹಿಂತಿರುಗುವವರೆಗೂ
ಬಂದಾಗ ಆದದ್ದು ಗಾಬರಿ

ಈ ಮರಿಗಳೊಂದು ಆಟಿಕೆ
ಮನೆಯ ಮಾಲಕನ ಮಕ್ಕಳಿಗೆ
ಕೊಟ್ಟು ಬಂದೆವು
ತಪ್ಪಿಸಿಕೊಂಡರೆ ಸಾಕಿತ್ತು
ಊರ ತುಂಬ ನಾಯಿಗಳು
ಬೆಕ್ಕಿನ ಮರಿಗಳು ಕಾಣಲಿಲ್ಲ
ಮಕ್ಕಳು ದಿನಕ್ಕೊಂದು
ಕತೆ ಕಟ್ಟಿ ಹೇಳುತ್ತಿದ್ದವು
ಹೊಸ ಅವತಾರಗಳಲ್ಲಿ

ಒಂದಿಷ್ಟು ನಾಯಿಗಳ ಕತೆನನಗೆ ಮೊದಲಿನಿಂದಲೂ ನಾಯಿಗಳೆಂದರೆ ಅತೀ ಪ್ರೀತಿಯೂ ಇಲ್ಲ, ಹಾಗಂತ ದ್ವೇಷವೂ ಇಲ್ಲ. ಮೃಣನ್ಮಯಿ ಆಗಾಗ ನಾಯಿಗಳೊಡನೆ ಆಡುವಾಗ, ಅವುಗಳನ್ನು ಮುದ್ದಿಸುವಾಗ ಅವುಗಳನ್ನು ಕಂಡರೆ ಹೊಟ್ಟೆ ಉರಿಯುತ್ತೆ. ಅವಳಿಗೆಂದೂ ನಾನು ನಾಯಿ ಮರಿಯನ್ನು ಕೊಡಿಸುವುದಿಲ್ಲವೆಂದೂ, ನಮ್ಮ ಮನೆಯಲ್ಲಿ ನಾಯಿ ಮರಿಯನ್ನು ಸಾಕಬಾರದೆಂದೂ, ಅವಳಿಗೆ ನಾಯಿಗಳನ್ನು ಕಂಡರೆ ಇಷ್ಟವೆಂದು ತಿಳಿದಂದೇ ತೀರ್ಮಾನಿಸಿದ್ದೇನೆ. ಆದರೂ ನಾನು ಕಂಡು ಕೇಳಿದ ನಾಯಿಯ ಕಥೆಗಳು, ನಾಯಿಗಳೊಡನೆ ಜೀವಿಸಿದ ವ್ಯಕ್ತಿಗಳು, ವೈಶಿಷ್ತ್ಯಗಳು ಹಲವು ಬಾರಿ ಸುಮ್ಮನೆ ಕೂತಿದ್ದಾಗ ಯಾವುದೋ ನಾಯಿ ನನ್ನನ್ನೇ ನೋಡಿ ಮೊದಲಿಗೆ ಬಾಲ ಅಲ್ಲಾಡಿಸಿ, ನಾನು ಅದರ ಕಡೆ ನೋಡದೇ ಇದ್ದಾಗ, ನನ್ನ ನೋಡಿ ಬೊಗುಳಿ ಅದೊಂದು ರೀತಿಯ ಗಾಂಭೀರ್ಯದಿಂದ ಕುಂಡಿ ತಿರುಗಿಸಿಕೊಂಡು ಹೋದಾಗೆಲ್ಲ , ಅದೆಷ್ಟೋ ಕಥೆಗಳು ಒಟ್ಟಿಗೆ ನೆನಪಾಗಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ನನ್ನೆದುರು ತೆರೆದುಕೊಳ್ಳುತ್ತವೆ.

ನನಗೀಗಲೂ ಯಾರಾದರೂ ಪುಟ್ಟ ಮಕ್ಕಳು ನಾಯಿ ಮರಿಗಳನ್ನು ಹೊತ್ತುಕೊಂಡು ಸಾಕುವುದನ್ನು ಕಂಡಾಗೆಲ್ಲ ನಾನು ಚಿಕ್ಕವನಾಗಿದ್ದಾಗ, ನನ್ನ ನೆನಪಿನಲ್ಲಿರದ ದಿನಗಳಲ್ಲಿ, ಎಂದಾದರೂ ನಾಯಿ ಮರಿಯನ್ನು ಹೀಗೆ ಕಂಕುಳಲ್ಲಿ ತಂದು ಸಾಕಿದ್ದೆನೆ ಎಂದು? ಮನೆಯಲ್ಲಿದ್ದ ಎಲ್ಲಾ ಫೋಟೋಗಳನ್ನು ತಡಕಿದಾಗ ಮೇಕೆ ಮರಿಯನ್ನು ಹಿಡಿದುಕೊಂಡು ತೆಗೆಸಿಕೊಂಡ ಫೊಟೋ ಇದೆಯಾದರೂ, ಎಲ್ಲಿಯೂ ನಾಯಿ ಮರಿಯ ಜೊತೆ ತೆಗೆಸಿಕೊಂಡ ಫೋಟೋಗಳಿರಲಿಲ್ಲ. ಅಮ್ಮನನ್ನು ಕೇಳಿದಾಗ ನಾನು ಎಂದಿಗೂ ಯಾವುದೇ ಸಾಕು ಪ್ರಾಣಿಯನ್ನು ಸಾಕಲಿಲ್ಲ ಎಂದೂ, ಬೇರೆ ಪ್ರಾಣಿಯ ಕತೆ ಹಾಗಿರಲಿ ನಾಯಿಯ ಮಟ್ಟಿಗಂತೂ ಎಂದೂ ಅವುಗಳ ಹತ್ತಿರವೂ ಹೋಗುತ್ತಿರಲಿಲ್ಲವೆಂದೂ ಹೇಳಿದಳು. ನಮ್ಮ ಮನೆಯಲ್ಲಿ ಬೇರೆ ಯಾರೂ ಸಾಕಿದ ನೆನಪೂ ನನಗಿಲ್ಲವಾಗಿ ಅಮ್ಮನನ್ನು ಕೇಳಿದಾಗ ತಿಳಿದದ್ದು ನಾಯಿಯ ಬಗೆಗಿನ ಮೊದಲ ಕತೆ.

ನನ್ನ ಮಾವ ಒಂದು ನಾಯಿ ಸಾಕಿದ್ದರಂತೆ. ಬಹಳ ದಷ್ಟಪುಷ್ಟವಾಗಿ ಬಹಳ ಚುರುಕಾಗಿದ್ದ ನಾಯಿಯದು. ನಮ್ಮದು ಹಳ್ಳಿಯಾದದ್ದರಿಂದ ಆಗೆಲ್ಲ ಈಗಿನಂತೆ ಆದುನಿಕ ನಾಯಿಗಳಿರಲಿಲ್ಲ. ಊರಲ್ಲಿ ಇದ್ದದ್ದು ಇರುತ್ತಿದ್ದದ್ದು ಸಹಜವಾಗಿ ಓಡಾಡಿಕೊಂಡಿರುವ ಬೀದಿ ನಾಯಿಗಳು ಅಷ್ಟೆ. ಅದೂ ಸಾಕುವುದು ಅಂದರೆ ಏನು? ದೊಡ್ಡದೊಂದು ಚೈನು ಹಾಕಿ ಎಳೆಯುವುದು, ಅದಕ್ಕೆ ಒಂದು ದೊಡ್ಡ ಜೈಲಿನಾಕಾರದ ಮನೆ ಮಾಡಿ ಅದರಲ್ಲಿ ಕೂಡಿ ಹಾಕಿ ದಿನಾ ಬೆಳಿಗ್ಗೆ ಸಂಜೆ ಹೊರಗೆ ಕರೆದೊಕೊಂಡು ಹೋಗುವುದು, ಹೀಗೆಲ್ಲ ಇರಲಿಲ್ಲ. ಯಾವಗಲೋ ಮರಿಯಾಗಿದ್ದಾಗ ಬೇರೆ ಯಾವುದೋ ನಾಯಿ ಇದನ್ನು ಕಚ್ಚಲು ಬಂದಾಗ ನನ್ನ ಮಾವ ಆ ದೊಡ್ಡ ನಾಯಿಯನ್ನು ಓಡಿಸಿರಬೇಕು, ಈ ಮರಿ ನಾಯಿ ಕುಯ್ಯೋ ಅಂದಾಗ ಒಳಗಿನ ಉಳಿದ ಒಂದು ರಾಗಿ ಮುದ್ದೆ ಚೂರನ್ನೋ , ಅನ್ನದ ಗಟ್ಟಿಯನ್ನೋ ತಂದು ಹಾಕಿರಬೇಕು. ಇಷ್ಟಕ್ಕೇ ಆ ನಾಯಿ ನಮ್ಮ ಮನೆಯನ್ನ ಬಿಟ್ಟು ಹೋಗುತ್ತಿರಲಿಲ್ಲ. ರಾತ್ರಿ ಉಳಿದ ಅನ್ನ ಮುದ್ದೆ ಎಲ್ಲವೂ ಅದಕ್ಕೇ ಆದರೂ , ಅದೇನೂ ನಮ್ಮ ಅನ್ನಕ್ಕೆ ಕಾದು ಕುಳಿತಿರುತ್ತಿರಲಿಲ್ಲ. ಅದೆಷ್ಟೋ ಬಾರಿ ಹಾಕಿದರೂ ತಿನ್ನುತ್ತಿರಲಿಲ್ಲ. ಹೊರಗೆ ಸ್ವಚ್ಚಂದವಾಗಿ ಓಡಾಡಿ ರಾತ್ರಿ ಮಾತ್ರ ತಪ್ಪದೇ ಬಂದು ಮನೆಯ ಓಣಿಯಲ್ಲಿ ಮಲಗಿರುತ್ತಿತ್ತು.

ಆಗಲೇ ಊರಿಗೆ ಮೊಟ್ಟ ಮೊದಲ ಬಾರಿಗೆ ಟೀವಿ ಬಂದದ್ದು. ಊರಿನಲ್ಲಿ ಬಹಳ ಶ್ರೀಮಂತರು ಎಂದು ಹೇಳಿಕೊಳ್ಳುವ ಸುಬ್ಬಣ್ಣನ ಮನೆಗೆ ಆಗ ಟೀವಿ ಬಂದದ್ದು. ಸಹಜವಾಗಿ ಊರವರೆಲ್ಲರಿಗೂ ಅದು ಮುಖ್ಯ ವಿಚಾರವೇ ಆಗಿತ್ತು. ಎಷ್ಟೋ ಜನಕ್ಕೆ ಟೀವಿ ಎಂಬುದೊಂದಿದೆ, ಅದರಲ್ಲೇನೆಲ್ಲವನ್ನು ನೋಡಬಹುದು ಎಂದೆಲ್ಲ ಕೇಳಿ ತಿಳಿದಿದ್ದ ಜನರಿಗೆ ಅದನ್ನು ಈಗ ಪ್ರತ್ಯಕ್ಷವಾಗಿ ನೋಡುವುದೇ ಭಾಗ್ಯವೆನಿಸಿತ್ತು. ನೀರಿಗೆ ಬರುವ ಹೆಂಗಸರ ಮಾತಿಗೆ ಹೊಸದೊಂದು ವಿಷಯ ಸೇರ್ಪಡೆಯಾಯಿತು. ಆ ಟೀವಿಯನ್ನು ಸುಬ್ಬಣ್ಣ ಮನೆಯ ಹೊರಗಿನ ರೂಮಿನಲ್ಲಿ, ತನಗೆ ಮಲಗಲು ವ್ಯವಸ್ಠೆ ಮಾಡಿಕೊಂಡು, ಕಿಟಕಿಯಿಂದ ಹೊರಗಿನ ಜನಕ್ಕೆ ಕಾಣುವಂತೆ ಮಾಡಿದ್ದರು. ಊರ ಜನ ಟೀವಿ ನೋಡಲು ಬಂದಾಗ ತಾನು ಕಾಲು ಕುಣಿಸುತ್ತ ಟೀವಿ ನೊಡುತ್ತಿರುವುದನ್ನು, ಜನರಿದ್ದಾರೆ ಎಂದು ಗೊತ್ತಿದ್ದರೂ ಟೀವಿಗೆ ಅಡ್ಡಲಾಗಿ ಕೈ ಕಾಲು ಆಡಿಸುವುದು, ಅಡ್ಡಲಾಗಿ ಓಡಾಡುವುದು ಹೀಗೆಲ್ಲಾ ಮಾಡುತ್ತಿದ್ದ. ಅದನ್ನು ಯಾರಿಗೂ ದನಿ ಎತ್ತಿ ಹೇಳಲಾಗುತ್ತಿರಲಿಲ್ಲ. ಸುಬ್ಬಣ್ಣನ ಮಾತನ್ನು ಎದುರಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಈ ಟೀವಿ ತರಲು ಅವರು ಪೇಟೆಗೆ ಹೋಗಿದ್ದಾಗ, ಟೀವಿ ಕೊಡಿಸಿದ ಅವನ ಗೆಳೆಯನ ಮನೆಯಲ್ಲಿ ನಾಯಿ ಸಾಕಿದ್ದನ್ನು ಕಂಡವನಿಗೆ, ಮನೆಯಲ್ಲಿ ಕಟ್ಟಿ ಹಾಕಿ ನಾಯಿ ಸಾಕುವುದು ಘನತೆಯ ವಿಷಯವಾಗಿ ಕಂಡಿರಬೇಕು. ಟೀವಿ ಬಂದ ದಿನವೇ ಅವರ ಮನೆಯಲ್ಲಿ ಒಂದು ನಾಯಿ ತಂದು ಕಟ್ಟಿ ಹಾಕಿದ್ದರು.. ಅದನ್ನು ತಾನು ಪೇಟೆಯಿಂದ ದುಡ್ಡು ಕೊಟ್ಟು ತಂದದ್ದೆಂದೂ, ಇಂಗ್ಲೀಷ್ ನಾಯಿಯೆಂದು ಹೇಳಿದರೂ, ನಮ್ಮ ಊರಿನ ನಾಯಿಗಳಂತೆಯೇ ಅದೂ ಇದ್ದುದರಿಂದ ಎಲ್ಲೋ ಪಕ್ಕದ ಊರಿಂದ ಕದ್ದು ತಂದದ್ದೆಂದೇ ಎಲ್ಲರೂ ನಂಬಿದ್ದದ್ದು.

ಆ ನಾಯಿಯೊ ಸದಾ ಜೋರಾಗಿ ಬೊಗಳುತ್ತಿರುತ್ತಿತ್ತು. ಟೀವಿ ನೊಡಲು ಜನ ಕೂತರೆ ಆ ನಾಯಿಯ ಬೊಗಳುವಿಕೆಯ ಸದ್ದಿನಲ್ಲಿ ಏನೂ ಕೇಳುತ್ತಿರಲಿಲ್ಲವಾದರೂ ಬೊಂಬೆ ನೋಡಿ ಖುಷಿ ಪಡುತ್ತಿದ್ದರು. ನನ್ನಮ್ಮನೂ ಆಗಾಗ ಟೀವಿ ನೋಡಲು ಆ ಮನೆಗೆ ಹೋಗುತ್ತಿದ್ದಳು. ನಾನಾಗ ಚಿಕ್ಕ ಹುಡುಗ. ಯಾವಾಗಲೋ ಏನೋ ನನ್ನನ್ನು ಕರೆದುಕೊಂಡು ಹೋದಾಗ ನಾನು ಅತ್ತೆನೋ, ಕೂಗಿದೆನೋ ಒಟ್ಟಿನಲ್ಲಿ ಏನೋ ಗಲಾಟೆ ಮಾಡಿದೆನಂತೆ. ಈ ಸುಬ್ಬಣ್ಣನೋ ಎದ್ದವನೇ ಈ ಜನ ಯಾಕಾಗಿ ಮಕ್ಕಳನ್ನ ಹಡೀತಾರೋ ಸುಮ್ಮನೆ ಕಿರಿಕಿರಿ ಅಂತ ಜೋರಾಗಿ ಬೈದದ್ದೇ ಅಮ್ಮ ಕೇಳಿಸಿಕೊಂಡು ಅಳುತ್ತ ಅಮ್ಮ ಮನೆಗೆ ಬಂದರು. ಅಪ್ಪನಿಗೆ ಗೊತ್ತಾಗುವ ಮುಂಚೆಯೇ ಮಾವನಿಗೆ ಈ ವಿಷಯ ತಿಳಿದಿತ್ತು. ಅಪ್ಪನಿಗೆ ತಿಳಿದರೂ ಅಪ್ಪ ಸಮಾಧಾನ ಪಡಿಸಿದರೆ, ಮಾವನೋ ಹುಟ್ಟಾ ಕ್ರಾಂತಿಕಾರಿ. ಅದೆಲ್ಲಿ ದುಡ್ಡಿಟ್ಟಿದ್ದನೋ ಒಂದೇ ತಿಂಗಳಲ್ಲಿ ನಮ್ಮ ಮನೆಗೂ ಟೀವಿ ಬಂದಿತು, ಅದೇ ಸಮಯದಲ್ಲೇ ಈ ನಾಯಿಯೂ ಮನೆ ಸೇರಿದ್ದು.


ಇಂತಹ ನಾಯಿಗೆ ಯಾರೋ ಅನ್ನದಲ್ಲಿ ವಿಷ ಹಾಕಿ ಕೊಂದು ಹಾಕಿದರು. ಅಂದು ಮಾವ ಎದ್ದಾಗ ನಾಯಿಯ ಶವವನ್ನು ನೋಡಿ ಆ ಊರಲ್ಲಿ ಇರಲಿಕ್ಕಾಗದೆ ಊರು ಬಿಟ್ಟು ಪಟ್ಟಣ ಸೇರಿದ. ಮುಂದಿನದೆಲ್ಲ ದೊಡ್ಡ ಕತೆ. ಹಳ್ಳಿಗೆ ಎಂದೂ ಮಾವ ಹಿಂದಿರುಗಲಿಲ್ಲ. ಮಾವ ಊರು ಬಿಡಲು ಸಿದ್ಧರಾಗಿ ಯಾವುದೋ ಸನ್ನಿವೇಷಕ್ಕಾಗಿ ಕಾಯುತ್ತಿದ್ದರೇ? ನಾಯಿಯ ಸಾವು ಅವರನ್ನು ಊರಿನಿಂದ ಬಿಡಿಸಿತೇ? ಇಷ್ಟಕ್ಕೂ ನಾಯಿಯನ್ನು ಕೊಂದವರು ಯಾರು? ಯಾವುದಕ್ಕೂ ಉತ್ತರಗಳು ದೊರೆಯುವುದಿಲ್ಲ. ಹೀಗೆ ಬಂದ ನಾಯಿ ಸತ್ತಿತು, ಮಾವ ಒಂದು ದಿನ ಪೇಟೆಯಲ್ಲಿ ಬೈಕಿನಲ್ಲಿ ಹೋಗುವಾಗ ಎದೆನೋವೆಂದು ಬಿದ್ದು ಸತ್ತ. ಸುಬ್ಬಣ್ಣ ಯಾವುದೋ ಕಾಯಿಲೆಯೆಂದು ಕಣ್ಣು ಕಾಣದೆ, ಕಿವಿ ಕೇಳದೆ, ಮಂಚದಲ್ಲಿಯೇ ವರ್ಷಾನುಗಟ್ಟಲೆ ಜೀವವನ್ನ ನೂಕಿ ಕಡೆಗೆ ಸತ್ತ. ಅವನು ತಂದ ಟೀವಿ, ನಮ್ಮ ಮಾವ ತಂದ ಟೀವಿ ಎರೆಡನ್ನೂ ಗುಜರಿಗೂ ಯಾರೂ ಕೊಳ್ಳುವವರಿಲ್ಲ. ಇವೆಲ್ಲವುಗಳ ಮಧ್ಯದಲ್ಲಿ ಹಲವು ಕಾದಂಬರಿಗಳಾಗುವಷ್ಟು ಸಂಗತಿಗಳು ಹೊಕ್ಕು ಕೂತಿರುವುದಂತೂ ನಿಜ.


----------------------------------------------------------------------------------------------
----------------------------------------------------------------------------------------------


ನಾಯಿಯ ಕುರಿತಾದ ಮತ್ತೊಂದು ಕತೆ ನಡೆದದ್ದು ಮಯಿಯ ಮನೆಯಲ್ಲಿ. ಇದನ್ನ ಮಯಿ ನನಗೆ ಹೇಳಿದ್ದು. ಅವರ ಮನೆಯಲ್ಲೂ ನಾಯಿ ಸಾಕಿದ್ದರು. ಅವರ ಊರು ಹಳ್ಳಿಯಲ್ಲ ಜಿಲ್ಲಾ ಕೇಂದ್ರ. ಮನೆಗೆ ಒಂದು ದಿನ ಕುಯ್ಯೋ ಕುಯ್ಯೋ ಎನ್ನುತ್ತ ಒಂದು ನಾಯಿ ಮರಿ ಬಂದಿತ್ತು. ಆಗ ಮಳೆ ಬೇರೆ. ಆ ನಾಯಿಯ ಸ್ಥಿತಿಯನ್ನು ನೋಡಿ, ಮನೆಯ ಮುಂದಿನ ಸ್ವಲ್ಪ ಜಾಗದಲ್ಲಿ, ಮಳೆ ನೀರು ಬೀಳದ ಜಾಗದಲ್ಲಿ, ಚೀಲವೊಂದನ್ನು ಹಾಕಿ, ಬಟ್ಟಲಲ್ಲಿ ಹಾಲು ತಂದು ಕೊಟ್ಟದ್ದು ಮಯಿಯ ಅಮ್ಮ ಇಂದ್ರಮ್ಮ. ಆ ಜಾಗವನ್ನೇ ನಾಯಿ ಅದರ ಸಾಮ್ರಾಜ್ಯವಾಗಿ ಸ್ಥಾಪಿಸಿಕೊಂಡು ಬಿಟ್ಟಿತು. ನಿತ್ಯ ಎಲ್ಲೇ ತಿರುಗಿದರೂ, ಎಲ್ಲಿಗೇ ಹೋದರೂ, ರಾತ್ರಿ ಎಂಟು ಗಂಟೆಗೆಲ್ಲಾ ಮನೆಯ ಬಳಿ ಬಂದು ಬೊಗಳಿ ತನಗೆ ಊಟ ಹಾಕುವವರೆಗೂ ಮಾಡಬಾರದ ನಾಟಕ ಮಾಡಿ ನಂತರ ತಿಂದು ಅದೇ ಚೀಲದ ಮೇಲೆ ಮಲಗುತ್ತಿತ್ತು. ನಾಯಿ ಎಂದಿಗೂ ಮನೆಯೊಳಗೆ ಬರುತ್ತಿರಲಿಲ್ಲ.

ಒಮ್ಮೆ ಇಂದ್ರಮ್ಮನಿಗೆ ಆರೋಗ್ಯ ಕೆಟ್ಟಿತು, ಸರಳವಾಗಿ ಮನೆ ಮದ್ದಿಗೆ ಸರಿಹೋಗಬಹುದಾದ ಕಾಯಿಲೆಯಾಗಿ ಆರಂಭವಾದದ್ದು ಬಹು ಬೇಗ ವಿಚಿತ್ರ ನೋವನ್ನುಂಟು ಮಾಡತೊಡಗಿತು. ತೀವ್ರವಾದ ತಲೆ ನೋವು ಹಾಗು ಸುಸ್ತು. ಹಲವು ವೈದ್ಯರಿಗೆ ತೋರಿಸಿದರೂ ಉಪಯೋಗವಾಗಲಿಲ್ಲ. ಮುಖ್ಯವಾಗಿ ಕಾಯಿಲೆ ಏನೆಂಬುದೇ ಯಾವ ವೈದ್ಯರಿಗೂ ತಿಳಿಯಲಾಗಲಿಲ್ಲ. ಮನೆಯವರು ಸ್ವಲ್ಪ ಸ್ಥಿತಿವಂತರಾದುದ್ದರಿಂದ ಇದ್ದ ಬದ್ದ ವೈದ್ಯರಿಗೆಲ್ಲಾ ತೋರಿಸಿದ್ದಾಯಿತು. ಆರೋಗ್ಯ ಒಂದೇ ಸಮನೆ ಹದಗೆಡುತ್ತಾ ಹೋಯಿತೆ ವಿನಃ ಸುದಾರಿಸಲಿಲ್ಲ. ವೈದ್ಯರ, ಆಸ್ಪತ್ರೆಗಳ ಕಾಟ ತಾಳಲಾರದೆ ಇನ್ನು ಯಾವ ವೈದ್ಯರೂ ಬೇಡ ಯಾವ ಆಸ್ಪತ್ರೆಯೂ ಬೇಡ, ಇದ್ದರೆ ಈ ಮನೆಯಲ್ಲಿ ಇರುವುದು, ಇಲ್ಲ ಸಾಯುವುದು ಎಂದು ತೀರ್ಮಾನಿಸಿ ಮನೆಯಲ್ಲೇ ಇರಲು ನಿರ್ದರಿಸಿದರು. ಯಾರು ಎಷ್ಟೇ ಹೇಳಿದರೂ ಕೇಳಲಿಲ್ಲ. ನೋವು ಯಾತನೆ ಹೆಚ್ಚುತ್ತಾ ಹೋಯಿತು, ಕಡಿಮೆಯಾಗಲೇ ಇಲ್ಲ. ಅವಳಿಗೋ ಬದುಕುವ ಆಸೆ. ಮನೆಯಲ್ಲಿ ಆಡಿಕೊಂಡಿರುವ ಪುಟ್ಟ ಹೆಣ್ಣು ಮಗು. ನಿತ್ಯ ನೋವು ಗೋಳಾಟ. ಇದ್ದ ಬದ್ದ ದೇವರುಗಳನ್ನೆಲ್ಲಾ ನೋಡಿ ಬಂದರೂ ನೋವು ಕಡಿಮೆಯಾಲಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಇಂದ್ರಮ್ಮ ನಾಯಿಗೆ ಊಟ ಹಾಕುವುದನ್ನು ಎಂದೂ‌ ಮರೆತಿರಲಿಲ್ಲ. ಜೊತೆಗೆ ಯಾವುದೋ ಒಂದು ಮದ್ಯಾಹ್ನ ಅದರ ಜೊತೆಗಾಡುತ್ತ ಯಾವ ಯಾವುದೋ ಹೆಸರುಗಳಿಂದ ಕೂಗುತ್ತಾ ಇರಬೇಕಾದರೆ ಒಂದು ಹೆಸರಿಗೆ ಈ ನಾಯಿ ತಿರುಗಿದ್ದನ್ನು ಕಂಡು ಅದೇ ಇದಕ್ಕೆ ಸರಿಯಾದ ಹೆಸರೆಂದು ಅದಕ್ಕೊಂದು ಹೆಸರನ್ನೂ ಇಟ್ಟಿದ್ದಳು.


ಯಾರಿಗೂ ಏನೂ ತಿಳಿಯದ ಸ್ಥಿತಿ ತಲುಪಿದಾಗ ಇಂದ್ರಮ್ಮ ಸಾಯುವುದೆಂದೇ ನಿರ್ಧಾರವಾಗಿತ್ತು. ಒಂದು ದಿನ ನೋವು ವಿಪರೀತವಾದಾಗ ಅವಳಿಗೆ ತಾನು ಇಂದು ಸಾಯುವುದೇ ಸರಿ ಎಂದು ಅನ್ನಿಸಿತ್ತು. ಮನೆಯ ಮುಂದೆ ಅವಳೇ ಹೆಸರಿಟ್ಟಿದ್ದ ನಾಯಿ ಹಾಗೆ ಮಲಗಿತ್ತು. ನೋವು ತೀವ್ರವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಇಂದ್ರಮ್ಮನನ್ನು ಹೇಗಾದರೂ ಆಸ್ಪತ್ರೆಗೆ ಸೇರಿಸೋಣವೆಂದರೂ ಅವರಿಗಾಗಲಿಲ್ಲ. ಮನೆಯವರೆಲ್ಲಾ ಏನೂ ದಿಕ್ಕು ತೋಚದೆ ಕೂತಿದ್ದರು. ಮಯಿ ಆಗ ಚಿಕ್ಕ ಹುಡುಗಿ. ಸಾವು, ನೋವು, ಬದುಕು ಯಾವುದರ ಅರಿವೂ ಇರದ ಪುಟ್ಟ ಹುಡುಗಿ. ಅವಳಿಗೆ ಅವಳ ಅಮ್ಮ ಯಾಕೋ ಹೀಗೆ ಮಲಗಿದ್ದಾಳೆ. ಅವಳಿಗೇನೋ ಆಗಿದೆ. ಅವಳು ಖುಶಿಯಾಗಿಲ್ಲ. ಇಷ್ಟೆ ಗೊತ್ತಿದ್ದದ್ದು. ಅವಳಮ್ಮನ ಆ ಸ್ಥಿತಿ ಅವಳು ನೋಡದಿರಲೆಂದು ಅವರಜ್ಜಿ ಅವಳನ್ನು ಮನೆಯ ಹೊರಗಿನ ಮೆಟ್ಟಿಲುಗಳ ಮೇಲೆ ಕೂರಿಸಿ ಬಂದಿದ್ದಳು. ಮನೆಯ ಮುಂದಿದ್ದ ನಾಯಿ ಅವಳೆಡೆಗೇ ಬರಲು ಪ್ರಯತ್ನಿಸುತ್ತಿತ್ತು. ಮಯಿಯೆಂದೂ ಈ ನಾಯಿಯೊಡನೆ ಮಾತಾಡಿರಲಿಲ್ಲ, ಮುದ್ದಿಸಿರಲಿಲ್ಲ, ಆಟವಾಡಿರಲಿಲ್ಲ. ನಾಯಿಯೆಂದರೆ ಅವಳಿಗಾಗ ಭಯ. ನಾಯಿಯನ್ನು ಕಂಡು ಹೆದರಿ ದೂರ ಸರಿದರೂ ಸಹ, ಅವಳೆಡೆಗೆ ಬರುತ್ತಿದ್ದ ನಾಯಿ ನೇರ ಬಂದು ಅವಳ ತೊಡೆಯೆಮೇಲೆ ಮಲಗಿ ಪ್ರಾಣ ಬಿಟ್ಟಿತು. ಒಳಗೆ ಜೋರಾಗಿ ಉಸಿರೆಳೆದುಕೊಂಡ ಇಂದ್ರಮ್ಮ ಕಣ್ಣು ತೆರೆದಿದ್ದಳು. ನಾಯಿ ಹೀಗೆ ಸತ್ತದ್ದನ್ನು ಕಂಡು ಗಾಬರಿಯಾದ ಮಯಿ ಜೋರಾಗಿ ಕಿರುಚಿದ ಶಬ್ದ, ಇಂದ್ರಮ್ಮ ಉಸಿರೆಳೆದುಕೊಂಡ ಶಬ್ದದೊಡನೆ ಹೊಂದಿಕೆಯಾಗಿ ಯಾರಿಗೆ ಏನಾಯಿತು ಎಂದೇ ಉಳಿದವರಿಗೆ ತಿಳಿಯಲಿಲ್ಲ. ಹೊರಗೆ ಕಿರುಚಿ ಕೊಂಡ ಮಯಿಯನ್ನ ನೋಡಲು ಹೊರಗೆ ಬಂದಾಗಲೇ ತಿಳಿದದ್ದು, ಅವಳ ತೊಡೆಯ ಮೇಲೆ ಮಲಗಿ ಅವರ ಮನೆಯ ನಾಯಿ ಸತ್ತಿದೆ ಎಂದು. ಅದಾದ ನಂತರ ಇಂದ್ರಮ್ಮನ ಆರೋಗ್ಯ ಸರಿಹೋಯಿತು. ಅವರು ಈಗ ಆರಾಮಾಗಿದ್ದಾರೆ. ಈಗಲೂ ಮನಯ ಬಳಿ ಆಗಾಗ ಬರುವ ನಾಯಿಗಳಿಗೆ ಹೆಸರಿಡುವುದನ್ನು ಮರೆತಿಲ್ಲ. ಯಾವ ನಾಯಿಯಾದರೂ ತಾನು ಬದುಕುಳಿದ ದಿನ ಸತ್ತ ನಾಯಿಯ ಹೆಸರಿಂದ ಕರೆದಾಗ ತಿರುಗಿ ನೋಡುತ್ತಾ ಎಂಬುದು ಅವಳ ಆಸೆ.

----------------------------------------------------------------------------------------
----------------------------------------------------------------------------------------

ಇನ್ನೂ ಅದೆಷ್ಟೋ ಕತೆಗಳಿವೆ. ನಾಯಿಗಳು ಮನುಷ್ಯ ಸಮಾಜದೊಳಗೆ ಬಹು ಹತ್ತಿರದಲ್ಲಿ ಬದುಕುವ ಪ್ರಾಣಿಗಳಾದುದರಿಂದ, ಮನುಷ್ಯ ಚಟುವಟಿಕೆಯ ಹಲವು ಸ್ಥರಗಳಲ್ಲಿ, ವೇದಿಕೆಗಳಲ್ಲಿ ಇವುಗಳ ಸಹಭಾಗಿತ್ವ ಕಾಣುತ್ತೆ. ಹಾಗಾಗಿ ಹಲವು ಕತೆಗಳಿವೆ. ಆದರೂ ಇದೊಂದು ಕತೆ ಹೇಳಿ ಈ ಬರಹವನ್ನು ಮುಗಿಸುತ್ತೇನೆ. ಈ ಕತೆ ನಾನೂ ಮಯಿ ಒಮ್ಮೆ ಒಬ್ಬರ ಮನೆಗೆ ಹೋದಾಗ ನಡೆದದ್ದು. ಈ ಕತೆ ಅವರಿಗೆ ಸಂಬಂಧಿಸಿದ್ದು. ನಾವು ಕಂಡದ್ದು.

ನಾವು ಅವರ ಮನೆಯ ಗೇಟನ್ನು ತೆರೆದಾಗ ಮೊದಲಿಗೆ ಗಾಬರಿಯಾದದ್ದು ಅಲ್ಲಿದ್ದ ನಾಯಿಗಳು. ಒಂದು ಎರಡಲ್ಲ, ಹನ್ನೆರಡು ನಾಯಿಗಳು. ಬೇರೆ ಬೇರೆ ಜಾತಿಯವು. ಅವುಗಳ ಮರಿಗಳೂ ಉಂಟು. ಎಲ್ಲಾ ವಯಸ್ಸಿನ ನಾಯಿಗಳು. ಮರಿ ನಾಯಿ, ಮುದಿ ನಾಯಿ, ರೋಗಗ್ರಸ್ಠ ನಾಯಿ , ಹೆಣ್ಣು ನಾಯಿ, ಗಂಡು ನಾಯಿ ಹೀಗೆ. ಒಮ್ಮೆಲೆ ಇಷ್ಟೊಂದು ನಾಯಿಗಳನ್ನು ಹೀಗೆ ಎಂದಿಗೂ ಕಂಡಿರದ ನನಗೆ ಒಮ್ಮೆಗೇ ಅಚ್ಚರಿ ಭಯ ಆದದ್ದುಂಟು. ಎಲ್ಲವೂ ಒಟ್ಟಿಗೆ ಮೇಲೆ ಬರುವ ರೀತಿ ಕಂಡರೂ ಮನೆಯವರು ಒಂದು ಮಾತು ಹೇಳಿದ್ದೇ ಎಲ್ಲಾ ಒಂದೊಂದು ದಿಕ್ಕಿಗೆ ಹೋದವು. ಯಾವ ನಾಯಿಯನ್ನೂ ಕಟ್ಟಿ ಹಾಕಿರಲಿಲ್ಲ. ಯಾವ ನಾಯಿಗೂ ಅದರದೇ ಎಂದು ಪ್ರತ್ಯೇಕ ಸ್ಥಳಗಳಿರಲಿಲ್ಲ, ಎಲ್ಲ ನಾಯಿಗಳೂ ಬೇಕಾಬಿಟ್ಟಿ ಸ್ವಚ್ಚಂದವಾಗಿ ಓಡಾಡಿಕೊಂಡಿದ್ದವು. ಎಲ್ಲವೂ ತಮ್ಮದೇ ರಾಜ್ಯವೆಂದು, ತಾವೇ ರಾಜರೆಂಬಂತೆ ಓಡಾಡಿಕೊಂಡಿದ್ದವು. ಹೀಗೆ ಅವೆಲ್ಲವೂ ಒಟ್ಟಿಗೆ ಓಡಾಡುವುದನ್ನು ಒಮ್ಮೆ ನೋಡುವುದೇ ಚಂದ ಎಂದೆನಿಸಿದರೂ ಎಲ್ಲಿ ಒಮ್ಮೆಲೇ ಎಲ್ಲವೂ ಮೇಲೆ ಎರಗಿದರೆ ಎಂಬ ಭಯವೂ ಕಾಡಿದ್ದಿದೆ.

ಹೀಗೆ ಮನೆಯಲ್ಲಿನ ನಾಯಿಗಳನ್ನ ನೋಡುತ್ತ ಇರಬೇಕಾದರೆ ನನಗೆ ಆಶ್ಚರ್ಯವೆನಿಸಿದ್ದು ಆ ಮನೆಯಲ್ಲಿನ ಅಜ್ಜಿ. ಅಜ್ಜಿಯದು ಒಂದು ಸುಂದರವಾದ ಕತೆ. ಅವೆಲ್ಲವನ್ನೂ ಹೇಳುತ್ತಾ ಕೂತರೆ ಒಂದು ಮಹಾಕಾವ್ಯವೇ ಆದೀತೋ ಏನೋ. ಹಾಗಂತ ಹಲವೊಮ್ಮೆ ಅಜ್ಜಿಯೇ ಹೇಳುವುದೂ ಇದೆ. "ಅಯ್ಯೋ, ನನ್ನ ಕತೆಯೆ, ಹೇಳೋಕೆ ಕೂತರೆ ಅದೊಂದು ಭಾರತ್ವನ್ನೋ, ರಾಮಾಯಣವನ್ನೋ ಮೀರಿಸುತ್ತೆ" ಅಂತ. ಒಂದಿಷ್ಟು ಆಸಕ್ತಿಯ ಸಂಗತಿಗಳನ್ನಂತೂ ಹೇಳಬಹುದು. ಆ ಊರಿಗೆ ಮೊದಲ ಬಾರಿಗೆ ರೈಲು ಬರುವ ದಿನವೇ ಅಜ್ಜಿಯ ಮದುವೆ . ಹಾಗಾಗಿ ಮದುವೆಗೆ ಅಂತ ಬಂದ ಜನರೆಲ್ಲರಿಗೂ ರೈಲು ನೋಡುವ ಸಂಭ್ರಮ. ಎಲ್ಲರೂ ಮದುವೆ ಮನೆ ಬಿಟ್ಟು ರೈಲು ನೋಡೋ ಜಾಗಕ್ಕೆ ಹೋಗೋದೆ. ಮದುವೆ ಮನೆಯಲ್ಲಿ ಜನ ಇಲ್ಲದಿದ್ದರೂ ಪರವಾಗಿಲ್ಲ ಮದುವೆ ಮಾಡಬಹುದು, ಆದರೆ, ಈ ಅಜ್ಜಿಯೇ ಊರಿಗೆ ಬರೋ ಹೊಸ ರೈಲನ್ನು ನೋಡೋಕೆ ಹೋಗಿಬಿಟ್ಟರೆ. ಇದ್ದ ಬದ್ದ ಜನರಿಗೆಲ್ಲ ಮದುಮಗಳದೇ ಚಿಂತೆಯಾಗಿತ್ತಂತೆ. ಅಂತವಳು ಈ ಅಜ್ಜಿ. ಅಜ್ಜಿಯ ಗಂಡ ತೀರಿಹೋದ ದಿನ ಅವಳು ಅಜ್ಜನನ್ನು ಅದೆಷ್ಟು ಕಳೆದುಕೊಂಡಳೋ ಏನೋ ಅವಳು ಅಂದು ಅಳು ನಿಲ್ಲಿಸಲೇ ಇಲ್ಲ. ಊಟ ನಿದ್ರೆ ಬಿಟ್ಟು ಅಳುತ್ತಿದ್ದಳು. ಅವಳ ನೋವು ನೋಡೋಕೇ ಆಗದಷ್ಟು. ಯಾರು ಅದೆಷ್ಟೇ ಸಮಾಧಾನ ಮಾಡಿದರೂ, ಯಾರು ಏನೇ ಹೇಳಿದರೂ ಕೇಳಲಿಲ್ಲ. ಏನಾದರೂ ತಿನ್ನು ಎಂದರೂ ತಿನ್ನಲಿಲ್ಲ. ಹೀಗಿರುವಾಗ ಯಾವುದೋ ಮಗು ರಸ್ಕನ್ನು ತಂದು ಕೊಟ್ಟಾಗ ಆ ಪುಟ್ಟ ಮಗುವಿನ ಮುಖ ನೋಡಿ ರಸ್ಕನ್ನು ತಿನ್ನಲು ಆರಂಭಿಸಿದ ಅಜ್ಜಿ, ಆ ರಸ್ಕು ಅದರ ಜೊತೆಗೊಂದಿಷ್ಟು ಕಾಫಿ ಇಷ್ಟು ಬಿಟ್ಟು ಮತ್ತೇನು ಬೇಡವೆಂದೆನಿಸಿತು. ಈ ರಸ್ಕೂ ಕಾಫೀ ಅವಳಿಗದೆಷ್ಟು ಇಷ್ಟವಾಯಿತೆಂದರೆ, ಅವಳಿಗೀಗ ೧೦೪ ವರ್ಷ ವಯಸ್ಸು, ಸುಮಾರು ೩೦ ವರ್ಷಗಳಿಂದ ಕಾಫಿ, ರಸ್ಕನ್ನು ತಪ್ಪ ಮತ್ತೇನನ್ನೂ ತಿನ್ನುವುದಿಲ್ಲ. ಬರೀ ಇಷ್ಟನ್ನೆ ತಿಂದು ಶತಾಯುಷಿಯಾಗಿಬಿಟ್ಟಳು.


ಅವಳಿಗೆ ಈ ನಾಯಿಗಳನ್ನು ಕಂಡರೆ ಕೋಪ. ಅವಳನ್ನು ನೋಡಲು ಬರುವವರು ಅವಳಿಗೆ ಅಂತ ತರೋ ರಸ್ಕಿನಲ್ಲಿ ಕೆಲ ಭಾಗಗಳನ್ನ ಆ ನಾಯಿಗಳಿಗೆ ಹಾಕುತ್ತಾರೆ ಎಂಬುದೇ ಅವಳಿಗಿರುವ ಬೇಸರ. ಹಾಗಾಗಿ ಮನೆಯಲ್ಲಿ ಹಾಸಿಗೆ ಮೇಲೆ ಮಲಗಿರುವಾಗ ಯಾರಾದರೂ ಬಂದರೆ ರಸ್ಕು ತಂದಿಯೇನೋ ಅಂತ ಕೇಳುತ್ತಲೇ ಆ ನಾಯಿಗಳಿಗೆ ಹಾಕಬೇಡಿ ಅಂತಾನೂ ಅಜ್ಜಿ ಹೇಳೋದು ಕೇಳುತ್ತೆ. ಅಜ್ಜಿಗೆ ಸದ್ಯ ನೆನಪಿರುವುದು ಆ ಮನೆಯಲ್ಲಿನ ನಾಯಿಗಳು ಹಾಗು ರಸ್ಕಿನ ರುಚಿ ಮಾತ್ರಾ. ಇನ್ನೇನೂ ನೆನಪಲ್ಲಿ ಉಳಿದಿಲ್ಲ. ಯಾರ ಗುರುತೂ ಸಿಗೋದಿಲ್ಲ.


ಇಷ್ಟೊಂದು ನಾಯಿಗಳನ್ನು ಇವರು ಯಾಕೆ ಸಾಕಿದ್ದಾರೆ ಎಂಬುದು ನನಗೆ ತಿಳಿಯಲಿಲ್ಲವಾದರೂ, ಯಾರನ್ನು ಹೇಗೆ ಕೇಳಬೇಕೆಂದಾಗಲೀ ಯಾಕೆ ಕೇಳಬೇಕೆಂಬುದಾಗಲೀ ತಿಳಿಯಲಿಲ್ಲ. ಆದರೆ ಯಾವಾಗ ಇದೆಲ್ಲಾ ಆರಂಭವಾಯಿತು ಎಂದು ಯಾರನ್ನಾದರೂ ಕೇಳಬೇಕೆಂದೆನಿಸಿತು. ಈ ನಾಯಿಗಳನ್ನು ಸಾಕಿದ್ದದ್ದು, ಸಾಕಲು ಆರಂಭಿಸಿದ್ದು ಇದೇ ಅಜ್ಜಿ. ಅಜ್ಜಿಯ ಗಂಡನ ಸಾವು ಸಹಜವಾಗಿರಲಿಲ್ಲ. ರೈಲಿನಡಿ ಸಿಲುಕಿ ಸತ್ತದ್ದು. ಅದು ಆತ್ಮಹತ್ಯೆಯೊ, ಅಪಘಾತವೋ, ಕೊಲೆಯೋ ತಿಳಿದಿಲ್ಲ. ಎಲ್ಲರದೂ ಅವರವರದೆ ಊಹೆಗಳು, ಅವರವರದೆ ಸತ್ಯಗಳು. ಅಜ್ಜಿಗೆ ಮಾತ್ರಾ ಅವಳ ಗಂಡ ಸತ್ತದ್ದದ್ದು ಸತ್ಯ. ಊಟ ತಿಂಡಿ ಬಿಟ್ಟು ಅಜ್ಜಿ ಅಳುತ್ತಿರಬೇಕಾದರೆ ಮಗು ತಂದುಕೊಟ್ಟ ರಸ್ಕನ್ನು ತಿನ್ನುತ್ತಿದ್ದಾಗ ಅಲ್ಲೇ ಒಂದು ನಾಯಿ ಮರಿ ಅವಳನ್ನೇ ನೋಡುತ್ತಿರುವುದು ಅವಳಿಗೆ ಕಂಡು ತಾನು ತಿನ್ನುತ್ತಿದ್ದ ರಸ್ಕಿನ ಅರ್ಧಭಾಗ ಆ ನಾಯಿ ಮರಿಗೆ ಹಾಕಿದಾಗ, ಅದಕ್ಕೆ ಆ ರಸ್ಕು ಇಷ್ಟವಾಗಿ ಮನೆಯಲ್ಲೇ ಉಳಿಯಿತು. ಹೀಗೆ ರಸ್ಕನ್ನು ತಿನ್ನುವಾಗೆಲ್ಲಾ ಒಂದೊಂದು ಚೂರು ಹಾಕಿ ನಾಯಿಯನ್ನು ಮುದ್ದಿಸಲು ಆರಂಭಿಸಿದವಳಿಗೆ, ಎಲ್ಲೇ ಯಾವ ನಾಯಿ ಮರಿ ಕಂಡರೂ ಅವುಗಳಿಗೆ ರಸ್ಕನ್ನು ಹಾಕುತ್ತಿದ್ದಳು. ಕೆಲವು ಅವಳನ್ನೇ ಹಿಂಬಾಲಿಸಿ ಈ ಮನೆ ಸೇರಿದವು. ಹೀಗೆ ಮನೆಯ ತುಂಬಾ ನಾಯಿಗಳಾದವು. ಈ ನಾಯಿಗಳು ಅವಳೇ ಸಾಕಿದ ನಾಯಿಗಳಾಗಿದ್ದವು.


.....ಅವಳಿಗೊಮ್ಮೆ ನನ್ನ ಹೆಣ್ಣಾಗಿ
ನೋಡಬೇಕೆಂದೆನಿಸಿ
ಸೀರೆಯುಡಿಸಿದಳು ನಾಜೂಕಾಗಿ
ಸೊಂಟ ಹೊಕ್ಕಳು ಕಾಣುವಂತೆ.

ಬಳೆ ತೊಡಿಸಿದಳು  ಅರ್ದ ಒಡೆದಿತ್ತು
ಮಾಂಗಲ್ಯ  ಬಂಗಾರದ ಸರದಲ್ಲಿ
ಬೀರುವಿನಲ್ಲಿದ್ದದ್ದನ್ನು
ಹಾಕಿದಳು
ಸರಿ ಹೊಂದಲಿಲ್ಲವೆಂದೂ ಹೇಳಿದಳು.

ಜೊತೆಯಾಗಿ ಕುಣಿಯುವ ಎಂದಳು
ಕುಣಿವಾಗ ಸೆರಗು ಜಾರಲಿಲ್ಲ
ಅವಳ ಕೈ  ದೇಹವನ್ನಪ್ಪಿತ್ತು
ಯಾಕೋ ಮತ್ತೆ ಗಂಡಾಗಬೇಕೆಂದಿನೆಸಿಲೇ ಇಲ್ಲ.