ಹುಟ್ಟು ಹಬ್ಬದ ಪ್ರಯುಕ್ತ


ಕಿಟಕಿಯ ಪಕ್ಕದ ಸೀಟೇ ಬೇಕೆಂದು
ಹಟ ಹಿಡಿದು ಕೂತಿದ್ದೆ
ನನಗಾಗ ನಾಲ್ಕು ವರ್ಷಗಳಿರಬಹುದು
ಆಸ್ಪತ್ರೆ   ಹತ್ತಿರಾದಾಗ ಕುತೂಹಲ
'ತಮ್ಮ ಹುಟ್ಟಿದ್ದಾನೆ ನಿಂಗೆ'  ಎಲ್ಲರೂ ಹೇಳಿ ಕಳುಹಿಸಿದ್ದರು.

ಅಮ್ಮ ಅತ್ತದ್ದನ್ನು ನಾ ಕಂಡಿರಲಿಲ್ಲ
ಯಾಕೆ ಅಳುತ್ತಿದ್ದಾಳೆ ಎಂದೂ ನನಗೆ ತಿಳಿಯಲಿಲ್ಲ
ನನ್ನ ತಮ್ಮ ಎಲ್ಲಿ ಎಂದು ಯಾರನ್ನು ಕೇಳುವುದು
ಹುಟ್ಟಿ ಮೂರು ದಿನವಾಗಿತ್ತು ಅಷ್ಟೆ
ಅವನು ಉತ್ತರಿಸುವುದಿಲ್ಲವಲ್ಲ
ಅಮ್ಮನಿಗೆ ನಾ ಹುಟ್ಟುವ ಮುನ್ನ ಗರ್ಭಪಾತವಾಗಿತ್ತಂತೆ

-------------------------------------------------------
-------------------------------------------------------

ಆಟೋ ಹತ್ತಿದಾಗ  ನಮ್ಮವಳ   ಪಕ್ಕದಲ್ಲಿ ನಾ ಕೂತಿದ್ದೆ
ತಲೆ ತಿರುಗುತ್ತದೆಂದಾಗ ಹಣೆ ಒತ್ತುತ್ತಿದ್ದೆ
ಸುಸ್ತಾಗಿದ್ದಳು ಬಹಳ ಬಳಲಿದ್ದಳು
ಆಸ್ಪತ್ರೆ ಹತ್ತಿರ ಆದಂತೆ ಗಾಬರಿ ಭಯ
ಏನೇನೋ ಪರೀಕ್ಷೆಗಳು

ಸ್ತ್ರೀ ದೇಹ ಸಂಬಂಧಿತ ಕಾಯಿಲೆ ನನಗೆ ಅರ್ಥವಾಗಲಿಲ್ಲ
ವೈಜ್ಞಾನಿಕವಾಗಿ ವಿವರಿಸಿದಳು ಒಪ್ಪಿಕೊಂಡೆ
ತಮ್ಮನನ್ನು ಹೊತ್ತು ಹೂತು ಬಂದ ಅಪ್ಪ ನೆನಪಾದ
ಇವಳು ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದಳು

ಹುಟ್ಟು ಹಬ್ಬದ ದಿನ
ಅಪ್ಪ ಅಮ್ಮ ಮತ್ತು ನನ್ನವಳ ಪಾದ ಮುಟ್ಟಿ ನಮಸ್ಕರಿಸಿದೆ
ಯಾಕೋ ಹುಟ್ಟು ಧನ್ಯವೆಂದೆನಿಸಿ

ಹಾರುವ ಮನುಷ್ಯ ಮತ್ತು ನಾನು



೧.
ಕ್ರಮಬದ್ಧವಾಗಿ ಕತ್ತರಿಸಿದ ಸಾಲುಗಳೇನೂ ಆಗಿರಲಿಲ್ಲ
ಆ ವ್ಯಕ್ತಿಯನ್ನು ಸ್ಥಳ ಸಂದರ್ಭವನ್ನು ಗಮನಿಸಿದಾಗ
ಎಲ್ಲವೂ ವೃತ್ತಪತ್ರಿಕೆಯ ಸಾಲುಗಳು
ದಾರಿಯಲ್ಲೆಲ್ಲೋ ಬಿದ್ದ ಕಾಗದದ ಚೂರುಗಳಿಂದ
ಜಾಗರೂಕವಾಗಿ ಪದಗಳನ್ನು ಕತ್ತರಿಸಿ ತಂದಿದ್ದ
ಒಂದರ ಪಕ್ಕ ಒಂದರಂತೆ ಸರಿ ಹೊಂದಿಸಲು
ತಿಣುಕುತ್ತಾ ಕೂತವಗೆ
ಹಾರುವ ಮನುಷ್ಯ ಪ್ರತ್ಯಕ್ಷನಾಗುವ ಊಹೆಯಿತ್ತೆ?


-------------------------------------------------  
-------------------------------------------------
ಅರೆ ಇವ ಪರಿಚಿತನಂತಿರುವವನಲ್ಲ
ಎಲ್ಲಿಗೆ ಹೋಗಿದ್ದಿರಬಹುದು? ಹೋಗುತ್ತಿರಬಹುದು?
ಅವ ಇಲ್ಲಿಯವನೆ ಇರಬೇಕು
ಹಿಂದೊಮ್ಮೆ ಭೇಟಿಯಾಗಿದ್ದಿರಬಹುದು ನಾವುಗಳು
ಮರೆವು ಈಗ
ಹೊರಡಬೇಕಲ್ಲವೆ
ನೆನಪಾಗುತ್ತಿಲ್ಲವಲ್ಲ
ಓ ದೇವರೆ ಗತಿಯೇನು


೨.
ಬರಿ ಕೈಯನ್ನು ಮೇಲೆ ಕೆಳಗೆ ಚಲಿಸುತ್ತ
ಹಾರಬಲ್ಲವನಾಗಿದ್ದು ಹಾರುವ ಮನುಷ್ಯನೆಂದು
ಪರಿಚಯಿಸಿಕೊಂಡವ
ಸಹಜ ಸರಳ ಮನುಷ್ಯನಂತೆಯೆ ಇದ್ದ


----------------------------------------------------
----------------------------------------------------
ಈಗ ಕಾಣೆಯಾದವರ ಪ್ರಕಟಣೆ
ಐದು ಅಡಿ ನಾಲ್ಕು ಇಂಚು ಉದ್ದ ಇದ್ದು ಗುಂಡು ಮುಖ ಗೋಧಿ ಬಣ್ಣ ಹೊಂದಿದವರಾಗಿರುತ್ತಾರೆ
ಸಂಪರ್ಕಿಸಬೇಕಾದ ವಿಳಾಸ
ದೂರವಾಣಿ ಸಂಖ್ಯೆ


೩.
ಕತ್ತರಿಸಿದ ಚಿತ್ರಗಳ ಶೇಖರಣೆಗೆ ಹೊರಟವ
ಕ್ರಮಬದ್ಧತೆಯ ವಿರುದ್ಧ ದಂಗೆಯೆದ್ದವನಂತೆ
ಯಾವುದೋ ಚಿತ್ರಕ್ಕೆ ಯಾವುದೋ ಶೀರ್ಷಿಕೆ
ಭಿನ್ನ ವ್ಯಕ್ತಿಗಳ ಭಿನ್ನ ಶಾರೀರಿಕ ಆವಯವಗಳ ಸಮ್ಮಿಶ್ರಣ
ಹಾರುವ ಮನುಷ್ಯ ಪ್ರತ್ಯಕ್ಷನಾದದ್ದು
ಈ ಪ್ರಯೋಗದ ಫಲದಿಂದಾಗಿಯ?


---------------------------------------------------
---------------------------------------------------
ಗರುಡನ ಪಾತ್ರಕ್ಕೆ ಬಣ್ಣ ಹಚ್ಚಿದ್ದ
ಗಜೇಂದ್ರ ಮೋಕ್ಷ ನಾಟಕ ಜನವೋ ಜನ
ಕೈಗೆ ರೆಕ್ಕೆಗಳನ್ನು ಕಟ್ಟಿತ್ತು
ಡೈಲಾಗು ತೊದಲಿದ್ದಕ್ಕೆ
ನಾಟಕದ ಮೇಷ್ಟ್ರು ಹಾರ್ಮೋನಿಯಂ ಒತ್ತಿ ಹಾಡಾಡಿದ್ದ
ರೆಕ್ಕೆ ಹಾರಿಸಲಾಗಲಿಲ್ಲ
ಹೃದಯಾಘಾತ ಎಂದರು
ಸಣ್ಣ ಪಾತ್ರವಾದುದರಿಂದ ಯಾರಿಗೂ ತಿಳಿಯದೆ
ನಾಟಕ ಯಶಸ್ವಿ ಪ್ರದರ್ಶನಗೊಂಡಿತು


೪.
ಒಮ್ಮೆ ಎಲ್ಲಾ ಚೂರುಗಳನ್ನು ಸುಟ್ಟುಬಿಟ್ಟ

------------------------------------------------
------------------------------------------------
ಮದುವೆ ವೇಳೆ ತೆಗೆಸಿಕೊಂಡ ಫೋಟೋ ಅದು
ಇದೊಂದೇ ನೋಡು ಇದ್ದದ್ದು
ಬಂಗಾರ ಬಣ್ಣದ ಚೌಕಟ್ಟು
ಕೋಟು ಕಂಪ್ಯೂಟರಲ್ಲಿ ಹಾಕಿಸಿದ್ದ
ಸರೀ ಹೊಂದುತ್ತೆ
ದೊಡ್ಡ ಗೋಡೆಗೆ  ನೇತುಹಾಕಿ


೫.
ಮರಣ ದೃಢೀಕರಣ ಪತ್ರದ ಬರಹ
ಯಾವ ಪ್ರಕಾರಕ್ಕೂ ಒಳಪಡುವುದಿಲ್ಲ - ಅವ ಜೀವಂತ


-------------------------------------------------
-------------------------------------------------
ಮರಣೋತ್ತರ ಪರೀಕ್ಷೆ ಏತಕ್ಕೆ
ಇದೇನು ಕೊಲೆಯೆ? ಅಪಘಾತವೆ? ಅನುಮಾನವೆ?
ಸಹಜ ಸಾವಿದು  ವಿಶೇಷವೇನೂ ಇಲ್ಲ
ಹೊರಡಿ ಇಲ್ಲಿಂದ
ಮನೆಗೆ ಹೋಗುವ ಹೊತ್ತಾಯಿತು.

ಒಂದು ಪ್ರೇಮ ಪತ್ರ

                                           
ಒಂದು ವಿಭಿನ್ನ ಹತಾಶಾ ಭಾವಕ್ಕೆ ಬರೆದ ಮುನ್ನುಡಿ
ಏಕಾಗಬೇಕಾಯಿತೆಂದರೆ
ಮೂಲತಃ ನಾನೊಬ್ಬ ಅಲೆಮಾರಿ

ಅಪ್ಪ ಕಳೆದುಹೋದ ಜಾತ್ರೆಗೆ
ಹೆಗಲ ಮೇಲೆ ಕೂರಿಸಿಕೊಂಡು ಮಾಮ ಕರೆದುಕೊಂಡೋಗಿದ್ದ
ನಾಟಕದಲ್ಲಿ ಬಣ್ಣ ಹಚ್ಚಲಾಗದ ತಾತ ಯಾರೂ ಇಲ್ಲದಿದ್ದಾಗ
ಬಣ್ಣ ಹಚ್ಚಿ ನನ್ನ ಮುಂದೆ ಕುಣಿಯುತ್ತಿದ್ದ
ಕುಣಿದ ತಾತನೂ ಆಡಿಸಿದ ಮಾವನೂ ಸತ್ತರು
ಹೀಗೆ ಪುರಾಣ ಕಥನಗಳಿವೆ ಹಾಡಿ ತೋರಿಸಲಿಕ್ಕೆ
ದಿಡೀರನೆ ನೀ ಬಂದು ಎದುರುಗೊಂಡಾಗಲೂ
ನಕ್ಷೆಗಳು, ವಿಳಾಸಗಳು, ಹೆಸರುಗಳು
ನನ್ನ ನೆನಪಲ್ಲಿ ಅಪರೂಪಕ್ಕೆ ಕೆಲವು ಮಾತ್ರಾ ಉಳಿಯುತ್ತವೆ
ಎಂದೇ ನನ್ನ ಪ್ರೇಮ ನಿವೇದನೆಯನ್ನಿಟ್ಟಿದ್ದು.

ಹೇಗಿದ್ದವ ಹೇಗಾದೆ ಎಂಬ ಸರಳೀಕೃತ ಹೇಳಿಕೆಯ ಬಗಲಲ್ಲಿ
ಅನಾಮಿಕನಾಗಬಯಸಿದ ಸೋಗಿಗಾಗಿಯೇನೂ ಅಲ್ಲ
ಚಹರೆ ಬದಲಿಸಬೇಕೆಂದುಕೊಂಡದ್ದು
ಗಾಬರಿಯಾಗಿತ್ತು   ನೀ ತೆರೆದುಕೊಂಡ ಬಗೆಗೆ
ಸ್ವ ಪರಿಚಯದ ಕಾಲಂ ತುಂಬಲು ಕೊಟ್ಟಾಗ
ಹಿಂದೆ ಉತ್ಖನನದ ವೇಳೆ ಶೇಖರಿಸಿಟ್ಟಿದ್ದನ್ನು ತೆರೆದರೆ
ಇದ್ದದ್ದಾದರೂ ಏನು?
ಅಂತಃಪಟದ ಆ ಬದಿಯಲ್ಲಿ ನೀ ಇದ್ದರೆ ಈ ಬದಿಯಲ್ಲಿ ನಾನು

ಎರಡು ರೀತಿಯ ಸಿದ್ಧಾಂತಗಳು
ಮುನ್ಹೊಳಹಿನಲ್ಲಿ ಎರಡೂ ಸಮನಾದದ್ದೆ
ಒಂದು ಕಟ್ಟಲ್ಪಟ್ಟಿದ್ದು ಮತ್ತೊಂದು ಮೂಲತತ್ವದಿಂದೊಡಗೂಡಿದ್ದು
ಈ ಎರಡರ ನಡುವೆಯಷ್ಟೆ ಅಲ್ಲದೆ
ತರ್ಕದ ಸ್ಥರಗಳೊಳಗಿನ ಅಪೂರ್ಣತ್ವಕ್ಕೂ ಅಸ್ಥಿರತೆಗೂ ನಡೆವೆಯೂ
ಶೋಧನಾ ದೀಪವೊಂದನ್ನು ಹಾಕಿಕೊಂಡು ಕುಳಿತಿರುವವ
ಜೋಳಿಗೆ ಹಾಕಿಕೊಂಡು ಹೊರಡಲಾದೀತೆ ಎಂದೆನಿಸಿದರೆ
ಹೇಳಲಿಕ್ಕಾಕುವುದಿಲ್ಲ ಹೊರಟರೂ ಹೊರಟೆ

ಒಂದಿಷ್ಟು ಸಹಜ ವಾಕ್ಯಗಳೆಡೆಗೆ ಗಮನ ಹರಿಸೋಣ
ನಿತ್ಯವೂ ಎಬ್ಬಿಸಿ ಶುಭೋದಯವೂ
ಮಲಗುವ ಮುನ್ನ ಶುಭರಾತ್ರಿಯೂ
ತಿಂದೆಯ ಮಲಗಿದೆಯ ಆರೋಗ್ಯ ವಿಚಾರಣೆ
ನನ್ನೆಲ್ಲಾ ಕುಶಲೋಪರಿಗಳು  ನಿನಗೆ ತಲುಪಬೇಕಾದದ್ದೆ
ಕೆಲವೊಮ್ಮೆ ನನಗೂ  ಅಳು ಬರುವುದುಂಟು
ಒಬ್ಬನೇ ಮಲಗಿದ್ದಾಗ ಭಯವಾಗುವುದು
ರಾತ್ರಿಗಳಲ್ಲಿ ಬಯಸುವುದು - ಕೆಲವೊಮ್ಮೆ ಕೋಪಗೊಳ್ಳುವುದು
ಎಲ್ಲವೂ ಸಾಮಾನ್ಯವೆ

ಇಷ್ಟೆಲ್ಲಾ ಇದ್ದಾಗಲೂ
ಒಂದು ವಿಭಿನ್ನ ಹತಾಶಾ ಭಾವಕ್ಕೆ ಬರೆದ ಮುನ್ನುಡಿ
ಏಕಾಗಬೇಕಾಯಿತೆಂದರೆ
ನಾನೊಬ್ಬ ಅಲೆಮಾರಿಯಾಗಿದ್ದು
ಬಹುಶಃ ಇದೆ ನನ್ನ ಅತ್ಯುತ್ತಮ  ಪ್ರೇಮಪತ್ರವಾದುದರಿಂದ