...........................

ನನಗೆ ಕವನದ ಅನುವಾದ ಸಿದ್ಧಿಸಲೇ ಇಲ್ಲ
ತೀರ ವಿಚಿತ್ರವೆಂಬಂತೆ
ಆಸ್ಪತ್ರೆಯಲ್ಲಿ ಆ ಮುಲುಗಾಟಗಳ ಮಧ್ಯೆ
ಒಂದು ಕವನವನ್ನ ಅನುವಾದಿಸಿದ್ದೆ
"ಆಸ್ಪತ್ರೆಯ ಬೆಡ್ಡುಗಳಿಗೆ ಯಾವ ರೋಗಿಯ ನೆನಪೂ ಉಳಿದಿರೋದಿಲ್ಲ
ಜ್ವರ ತೀವ್ರವಾದಾಗ
ಅಪ್ರಜ್ಞಾವಸ್ಥೆಯಲ್ಲಿ
ಅಸಂಬದ್ಧವೆನಿಸೊ, ಸಂಬಂಧವೇ ಇಲ್ಲ ಎನಿಸೊ
ಎಷ್ಟೋ ಚಿತ್ರಗಳು
ಬಂದು ಹೋಗಿ ಬಿಡುತ್ತೆ
ಅವ್ಯವಸ್ಥಿತವಾಗಿ

ನಿರಚನೆಯ ಮಾತು ಆಗಲೆ ಶುರುವಾದದ್ದು
ನರ್ಸುಗಳಿಗೊ, ಡಾಕ್ಟರುಗಳಿಗೊ ರೋಗಿಯ ನೆನಪುಳಿದಿರಬಹುದು
ಕೆಲವೊಮ್ಮೆ ಹೀಗೂ ಆಗಿಬಿಡುತ್ತೆ
ರೋಗಿಯನ್ನ ನರ್ಸೊ, ನರ್ಸನ್ನ ರೋಗಿಯೊ ಇಷ್ಟಪಟ್ಟು ಮದುವೆಯಾಗಿಬಿಡಬಹುದು
ರೋಗಿಗಳನ್ನ ವರಿಸಿದ ಡಾಕ್ಟರುಗಳ ಕತೆ ಚರಿತ್ರೆಯಲ್ಲಿ ಗಾಢವಾಗಿ ದಾಖಲಾಗಿ ಹೋಗಿದೆ."

ಮೇಲಿನ ಅನುವಾದದ ಮೂಲ ಕವಿತೆಯ ಕರ್ತೃ-ಕವಿ
ರೋಗಿಷ್ಟನಾಗಿ ಆತನೆ ಕವಿತೆಯಾಗಿಸಿದ ಬೆಡ್ಡಿನ ಮೇಲೆ ಮಲಗಿದ್ದಾನೆ
ಅವನನ್ನೇ ನೋಡುತ್ತ ನಾನು ಕವಿತೆಯನ್ನ ಯಥಾವತ್ ಅನುವಾದಿಸಿದ್ದೇನೆ.

ದುರಂತವೆಂದರೆ,
ಆ ಕವಿ/ರೋಗಿ ಹಿಂದೊಮ್ಮೆ
ಪ್ರೇಮಿಯೂ, ತತ್ವಶಾಸ್ತ್ರಜ್ಞನೂ , ಭೌತಶಾಸ್ತ್ರಜ್ಞನೂ  ಆಗಿದ್ದ. 

................ ಅನ್ನೋ ಸಂಕೀರ್ಣ ಪ್ರತಿಮೆ

           
ನಮ್ಮೂರಲ್ಲಿ ಸತ್ತ ನದಿ ಒಂದಿತ್ತು
ಅದರ ಪಕ್ಕ ಸುಡುಗಾಡೂ ಇತ್ತು
ನಾ ಅಂದುಕೊಂಡಿದ್ದೆ
ಗೋರೀಲಿ ಶವ ಬೆಚ್ಚಗೆ ಮಲಗಿರುತ್ತೆ ಅಂತ
ಬಸುರಿ, ಸತ್ತೋಗಿದ್ಲು
ಅವಳ ಹೊಟ್ಟೇಲಿನ ಮಗು
ಹೂಗುಡೊ ಧ್ವನಿ ಕೇಳಿ
ತತ್ತರಿಸಿ ಕುಸಿದುಬಿಟ್ಟೆ

   
ಜಾದುಗಾರ ಜಾದೂನಿಂದ ಮಗು ಹುಟ್ಟಿಸ್ದ
ಶಾಪಕ್ಕೆ ಸಿಕ್ಕು ಅಲೀತಿದ್ದ ದೇವ ಕನ್ಯೆಯ
ದೇಹದಿಂದ ಬರ್ತಿದ್ದ ಗಂಧಕ್ಕೆ
ಮಾರುಹೋಗೊ ಗುಣಾನ
ಆ ಮಗು ಸಹಜವಾಗೆ ದಕ್ಕಿಸಿಕೊಂಡಿತ್ತು

   
ಗರ್ಭಗುಡೀಲಿ ಸಮಾದಿ ಎದ್ದಿದ್ದೆ ಆಗಿದ್ದು
ಈ ದೇವಾಲಯ ದೇವರು ಇತ್ಯಾದಿ
ನದೀನ ಅಗೆದಾಗ ದೊರೆತಿದ್ದು
ಮುಪ್ಪರಿಯದ ತಲೆ ಬುರುಡೆಗಳು

   
ದೇವರ ಸಾವಿಗೆ ಅಳಲೇ ಬೇಕು ಅನ್ನೋ ನಿನ್ನ ಹಠಕ್ಕೆ
ಅಯ್ಯೋ ಅಂತ ಮರುಕ ಪಡೊ ಸ್ಥಿತೀಲಿ ನಾನಿಲ್ಲ
ಇದು ಊರ ಜಾತ್ರೆ
ಜನಗಳು ಜೈ ಜೈ ಅಂತಿರ್ತಾರೆ
ತೇರೆಳೆದಾಗ ಚಕ್ರಕ್ಕೆ ಬಲಿ ಹಾಕ್ತಿರ್ತಾರೆ
ಗರುಡ ತೇರಿನ ಸುತ್ತ ತಿರುಗಿದ್ನ ಅಂತ ನೋಡ್ತಿರ್ತಾರೆ

   
ಅನುಮಾನ ಎದ್ದು ಬಿಟ್ಟಾಗ
ಮಣ್ಣ ವಾಸನೆ ಪ್ರತೀಕಾರ ತೀರಿಸ್ಕೊಳ್ಳುತ್ತೆ
ಕಾರಣ, ನಿರಾಕರಣ, ಸಕಾರಣ ದ ಅಂಚಲ್ಲಿ
ಹೊಂಚು ಹಾಕೋನ ಬಲೆಗೆ
ಹೆಸರೆ, ರೂಪಾನೆ, ಮತ್ತೊಂದೆ ?

 
ಗತಿಗೆ ನಿಯತಿ ಇಲ್ಲ
ಅಹಂಕಾರಾನೆ ಗತಿ

 
ನಿರ್ಲಿಪ್ತತೆ ಅಂತೀವಲ್ಲ
ಅದಕ್ಕೆ ಒಂದು ರೀತಿಯ ಉತ್ಕಟತೆ ಇರುತ್ತೆ
ಕೃತಿ ನಿರ್ಮಾಣದ ಆಕೃತಿಗೆ                  
ದಿಕ್ಕಾರ ಹೇಳ್ತೀವಲ್ಲ, ಅದಕ್ಕೂ

 
ಜಗತ್ತಿನ ಶೀರ್ಷಿಕೇನ ಅಂಗೈಯಲ್ಲಿ ಕಟ್ಟಿಕೊಂಡ ಸುಡುಗಾಡ ಸಿದ್ಧ
ಜೋಳಿಗೇಲಿ ಹಾಕ್ಕೊಂಡು ತಟ್ಟಂತ ಮಾಯವಾಗಿ ಹೋದ.