ಕಟ್ಟಿದ ಕಟ್ಟಡದ ಕಟ್ಟು

 

ಕೆಂಪು ಮಣ್ಣ ರಾಶಿಯಲ್ಲೆದ್ದ 

ನೀಲ ನಕಾಶೆಯ ಸುತ್ತೆಲ್ಲಾ 

ಬರೀ ಬಿಸಿಲ ಜಳ 

ಕೆಂಪು ಕೆಂಡದ ಬೆಟ್ಟದ 

ಬುಡದಲ್ಲಿ ಕಾಣಬೇಕಿತ್ತು 

ಈ ಸಂಪತ್ತು -

ಕಟ್ಟಡ, ರಚನೆ 


ಆರಂಭಕ್ಕೆ ಕಲ್ಲು ನಾಟಿದ್ದು 

ಚಿಗುರುವುದಿಲ್ಲ 

ಬಂಗಾರ ಬಣ್ಣದಿಂದ ಯಾವುದೋ 

ಗೋಡೆಗಲಂಕಾರ 


ತುತ್ತ ತುದಿಯ ಮಹಡಿಯಲ್ಲಿ 

ಕೂತಿದ್ದಾಗ - ಮಳೆಯೋ ಮಳೆ 

ಕೆಂಡದ ಬೆಟ್ಟ ಕೆಂಪಾಗಿ ಹರಿದಿದೆ 

ಕೆಂಪು ನೀರು ಕುಂಡ ಸೇರಿ 

ಕಲ್ಲು ಚಿಗುರ ಹತ್ತಿದೆ 


ಕೆಂಪು ಬೆಟ್ಟಕ್ಕೆ ಹೊದಿಕೆ 

ಬಣ್ಣ ಬಣ್ಣದ ಹಕ್ಕಿ ಪಿಕ್ಕಿ ಪ್ರಭೇದ 

ಎಲ್ಲವನ್ನೂ ಹಿಡಿದೆನೆನ್ನುವ 

ಮಕ್ಕಳ ತಾಯ್ನುಡಿ ಬೆರೆತ ಆಂಗ್ಲಭಾಷೆಗೆ 

ಕಟ್ಟುವುದು ಸುಲಭವಲ್ಲ ಸಂಕೀರ್ಣ 

ಎಂದದ್ದಕ್ಕೆ ವಿಕಾಸವಾದದ ಪಾಠ ನಡೆದಿದ್ದಾಗಲೇ 

ನಡುವೆ 

ಭೂಮಿ ಬಣ್ಣವು ಆಕಾಶದಲ್ಲೋ 

ಆಕಾಶದ್ದು ಭೂಮಿಯಲ್ಲೋ 

ತಿಳಿಯದೆ ನವಿಲು ಕೂಗುತ್ತಿತ್ತು 


ನಿಮ್ಮದದೇ ಗಟ್ಟಿ ಧ್ವನಿ 

ಪಳ ಪಳ ಹೊಳೆವ ಕಣ್ಗಳು 

ಇಳೆ ತಂಪಾಗಿದೆ 

ಎಲ್ಲೆಲ್ಲೂ ಹೂವ ತೋಟ 

ಮಕ್ಕಳ ಕಲರವದಾಟ 

ಕೆಂಡದ ಬೆಟ್ಟವೂ ಜೊತೆಯಾಗಿದೆ 

ಆಡಲಿಕ್ಕಿಲ್ಲಿ ಕುಣಿಯಲಿಕ್ಕಿಲ್ಲಿ 


ಆರಂಭಕ್ಕೆ ಶುಭವಾಗಲಿ …. 





ಶ್ರೀಗುರು


ಮೈದಡವಿ ಬೆನ್ನಸವರಿ 

ಕಣ್ತುಂಬುತ್ತೆ ಪ್ರತಿಬಾರಿ 

ಬೇಟಿ ಬಿಡುವು ಬೀಳ್ಕೊಡುಗೆ ಎಲ್ಲ ಸೇರಿ 

ಪದಗಳ ಬಾರಕ್ಕೆ ಲಿಪಿಕಾರ ಸೋತಾಗ 

ನಗುತ್ತಾ ಎದುರಿಗಿದ್ದವಳು ನೀನಲ್ಲವೇ 


ಬೈದದ್ದಿದೆ ಹೊಡೆದದ್ದಿದೆ ಮುದ್ದು ಮಾಡಿದ್ದಿದೆ 

ಕಾರಣಕ್ಕೊರಟಾಗೆಲ್ಲಾ ಮೊಟಕಿದ್ದಿದೆ 

ಕಾಲನೇವರಿಸಿದಾಗ ಆಹಾ ಎಂದದ್ದಿದೆ 

ಈ ಕಾರುಣ್ಯಕೇನೆಂಬೆ ?

ಮರು ಮರಳಿ ನಿನ್ನೆಡೆಗೆ ಬರುವುದಕೇನೆಂಬೆ 


ಅದೆಂತಾ ಗುರುವಿನುಣ್ಣಿಮೆ !!! 

ಸಿಂಹಾಸನೆವೇರಿ ಕೂತಿದ್ದೀಯೆ ಹೆಣ್ಣೇ

ಈ ಬೆನ್ನ ಬುಜದ ಮೇಲೆ

ಕಾಲನಿಟ್ಟಿದ್ದೀಯೆ 

ಈ ನನ್ನೆ ತಲೆಯ ಮೇಲೆ 


ಒಮ್ಮೊಮ್ಮೆ ಮುನಿಸು ನಿನಗೆ 

ಡೊಂಕಾಗಿ ನಡೆಯಬೇಡವೆಂಬೋ ಎಚ್ಚರಿಕೆ 

ಸುಮ್ಮನೆ ಮೊಟಕುತ್ತೀಯೆ ಕಾಲ ತುದಿಯಿಂದ 

ಹಾಡ ಕೇಳೆಂದು 

ನೀ ಹಾಡ ಹಾಡ ಕೇಳೆಂದು 

ಕೀರಲು ಧ್ವನಿಯೆ ಹೆಣ್ಣೆ ನಿಂದು 

ಅದೇ ನಾದವೆನ್ನುತ್ತೀಯೆ 

ಏನೂ ಕೇಳುತ್ತಿಲ್ಲವೇ ಎಂದರೆ 

ಅದೇ ಶಬ್ದವೆನ್ನುತ್ತೀಯೆ 

ಏನೂ ಇಲ್ಲದಾಗ ನುಡಿಯೆನ್ನುತ್ತೀಯೆ 

ದಣಿದಾಗ ಕುಣಿಯೆನ್ನುತ್ತೀ 

ನಿನ್ನ ಹೊತ್ತು ಕುಣಿವುದೆಂತೇ ಎಂದರೆ 

ಕುಡಿದು ಕುಣಿ ಮತ್ತಲ್ಲಿ ಕುಣಿ 

ಎಂದೆನ್ನುತ್ತೀ 

ತಲೆಕೆಟ್ಟ ಹುಚ್ಚಿ 

ತಲೆಯೇರಿ ಕೂತಿದ್ದೀ 

ಅದೇನು ಕಾರುಣ್ಯವೇ ಹೆಣ್ಣೇ 


ನಿನ್ನ ಹುಚ್ಚಾಟಕ್ಕೆಲ್ಲಾ ಮೈ ಉರಿಯುತ್ತೆ 

ಕೆಳಗಿಂದ ಮೇಲಕ್ಕೆ ಝರ್ರನೆ ಏರುತ್ತೆ 

ಕೋಪ 

ಒಪ್ಪುವವನಲ್ಲ ನಾನು 

ಹಟ ಹಿಡಿಯುತ್ತೇನೆ 

ಬೈಯುತ್ತೇನೆ 

ಭೋ ಎಂದಳುತ್ತೇನೆ 

ಮತ್ತೇ ನಗುವವಳು ನೀ 

ಅದೇ ಹುಚ್ಚಿನಲ್ಲೇ 

ಅದೇ ಮುಗುಳುನಗೆ 

ಕಣ್ತುಂಬ ನೀರು ಅಪ್ಪುಗೆ