ಅಜ್ಜಿ


ಕಿಟಕಿಯಂದದಿ ಕಾಣ್ವ

ಬೆಟ್ಟ ನೀರು ರೈಲು

ಎಲ್ಲವೂ ಒಂದೇ ಬಗೆ - ಮಂಜು ಮಂಜು

ಕಣ್ಣು ತೋರಿಸಿರೋ ಎಂದರೆ

ಬೇರೇನೂಮಾಡಲಿಕ್ಕಾಗುವುದಿಲ್ಲ

ವಯಸ್ಸಾಯಿತು, ಆಯಸ್ಸು ಮುಗಿತಕ್ಕೆ ಬಂತು

ಎಲ್ಲವೂ ಬೆಳ್ಳಗೇ ಕಾಣೋದು

ಎಂದವರ

ಕಪಾಳಕ್ಕೆರೆಡು ಬಾರಿಸಬೇಕೆಂದು ಜೋರುಮಾಡುತ್ತಲೇ

ತಾನು ನಿತ್ಯ ಓದಬೇಕಿರುವ ಪತ್ರಿಕೆಯೂ

ಜಾಗತಿಕ ಶೃಂಗಸಭೆಯಲ್ಲಿ ಪ್ರಸ್ಥಾವನೆಗೊಳ್ಳಬೇಕಿರುವ

ದೀರ್ಘ ಮುನ್ನೋಟದ ಅಂಶವೂ 

ಹಾಗೆ ಹೇಳುವವನಿಗಿರಲಿಕ್ಕಿಲ್ಲ

ಎಂಬ ವಾದವೂ ಕೇಳುವವರಿಲ್ಲ


ರೈಲು ಕಂಡಾಗ ಕಣ್ಣರಳಿಸಿದವಳು

ಅಪ್ಪನು ಮಠದ ಸ್ವಾಮಿಗೇ ಪಾಠ ಹೇಳಿದವನೆಂದು

ಬೀಗುತ್ತಲೇ

ಮೊಮ್ಮಕ್ಕಳಿಗೊಬ್ಬರಿಗೂ ಬರೆಯಲು

ಬಾರದ ಕನ್ನಡದ ಬಗೆಗೆ ಕೊರಗುವವಳಿಗೆ

ಟಿ.ವಿ. ಸೀರಿಯಲ್ ನೋಡಲಿಕ್ಕೆಂದು ಕೊಟ್ಟ

ಕಿವಿಯುಲಿಯ ಭಾರಕ್ಕೆ ಕಿವಿಯೇ ಜೋತು

ದೂರದಲ್ಯಾರೋ ಹಸುಮಂದೆಯನ್ನೋಡಿಸುವ ಸದ್ದು 



ಹಾದಿಬದಿಯಲ್ಲಿ ಘಮ್ಮೆನ್ನುವ ಮಸಾಲೆದೋಸೆಯೊಳಗಿನ

ಕೆಂಪುಚಟ್ನಿಯನ್ನು ತನ್ನದೇ ಬಗೆಯಲ್ಲಿ ಮಾಡಿ

ಚಾ ಜೊತೆಗೆ ತಿಂದರೇನೇ -

ನಿತ್ಯ ಬಾಲ್ಕನಿಯಿಂದ ಬೀಳುತ್ತೇನೆನ್ನುವ ಮಗಳೂ

ಮಗಳ ಮಗನನ್ನೂ ನೋಡುತ್ತಾ

ಕಟ್ಟಿದ ಹಸುಗಳೂ ಬಚ್ಚಿಟ್ಟು ಮಾರಿದ ತುಪ್ಪವೂ

ನೆನಪಾಗಿ - ಸವಿಯುವುದಕ್ಕೂ ಯೋಗವುಂಟು

ನೆನಪು ಕಟ್ಟು ಕತೆಯಲ್ಲವೇ

ಪಕ್ಕದ ಹಳಿಯಲ್ಲಿ ರೈಲು ಎಂತಹ ಜೋರು ಮಳೆಗೂ

ಲೆಕ್ಕಿಸದೆ ಗಾಂಭಿರ್ಯದಲ್ಲಿ ಹೊರಟಿದೆ



ಎರಡು ಹಳಿಗಳ ನಡುವಲ್ಲಿ 

ದೂರ ಬೆಟ್ಟದ ಸಾಲನ್ನು

ಕಾಣುತ್ತಾ ಕೂತವನ ಕೈಯಲ್ಲಿನ ದಿವ್ಯಮಣಿಯಾದರೂ

ಏನೆಂಬುದು 

ಬಲವಂತಕ್ಕೆ ಹೊಟ್ಟೆಕರಗಿಸಲಿಕ್ಕೆ

ವ್ಯಾಯಾಮಕ್ಕಿಳಿದವನಿಗೆ ಬಹುಶಃ

ಅರ್ಥಕ್ಕೆಟುಕದ ಪ್ರಶ್ನೆ

ನೆನಪು ಕಟ್ಟು ಕತೆ ಎಂದಾದಾಗಲೂ

ಅದಕ್ಕೊಂದು ಬೆಲೆ ಕಟ್ಟಿ

ಮಾರಲ್ಲಿಕ್ಕೆಂದೇ ಮಹಡಿ ಕಟ್ಟಿ

ಜನ ಹೋ ಹೋ ಎನ್ನುತ್ತಲೂ

ಹಾಡಿಗೆ ಕವನಕ್ಕೆ, ಕುಣಿತಕ್ಕೆ ಬೆಂಕಿ ಬಿದ್ದಂಗೆ -

ಅವಳ ವರಾತ


ಒಟ್ಟೊಟ್ಟಿಗೆ ಆಗಾಗ ಸುಮ್ಮನೆ ರೈಲಿನ ಇಂಜಿನ್ನುಗಳು

ಬೋಗಿಗಳಿಲ್ಲದೆ ಚಲಿಸುವುದೇಕೆ ಎಂದದ್ದಕ್ಕೆ

ಬೇಕಿರುವುದು ಕರ್ಕಶ ಸದ್ದು

ನಮಗೊಂದು ಕಾಲಕ್ಕೆ ದಿಕ್ಕು ಬೇಕಲ್ಲ

ಸದ್ದಡಗಿದರೆ ಹಿಂದೂ ಮುಂದೂ

ಎರಡೂ ಕಾಣಲಿಕ್ಕುಂಟು

ಎಷ್ಟೆಂದರೂ ಗಣಿತೀಯ ಆಕೃತಿ

ದೇಶಕಾಲ ಎಂದ ಮೊಮ್ಮಗನ

ತಲೆಗೆ ಮೊಟುಕುತ್ತಲೇ

ರಾಮಾಯಣದ ಪುಟ ತಿರುವುತ್ತಾ ಕೂತಳು