[ಇದನ್ನ ಕಥನ ಕವನ ಎಂದು ಕರೆಯುತ್ತೇನೆ. ಗಮನಿಸಿ, ಇದು ಕತೆಯಲ್ಲ. ಇಲ್ಲಿ ಕತೆಯ ಬಂಧವಿಲ್ಲ. ಆದ್ದರಿಂದ ಇಲ್ಲಿ ಕತೆಯನ್ನ ಹುಡುಕಬೇಡಿ. ಓದಲು ಬೇಸರ ಆದರೆ ಓದದೆ ನಿಲ್ಲಿಸಿಬಿಡಿ. ಇದು ಕಥನವೂ ಹೌದು, ಕವನವೂ ಹೌದು.]
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
ಸಂಚದ ನೋಟ ಒಂದೆ ನೋಡಾ
ಗುಹೇಶ್ವರ...............
ರಶೀದ್ ಅಣ್ಣ ದಯವಿಟ್ಟು ಕ್ಷಮಿಸಿ ಬಿಡಿ, ನಾನು ಕತೆಯನ್ನು ಬರೆಯಲಿಕ್ಕೆ ಆಗಲಿಲ್ಲ. ನೀವು ಹೇಳಿದ್ದಿರಿ ಒಂದು ಕತೆ ಬರಿ ಎಂದು, ಆಗಲಿಲ್ಲ.
ನಿಜ್ವಾಗು ಕತೆ ಬರೀಲಿಕ್ಕೆ ಆಗಲೇ ಇಲ್ಲ.
ಏನೇನೋ ಮಾಡಿದೆ. ಆಯ್ತ ಅಂದರೆ ಇಲ್ಲ. ಪಟ್ಟಾಕಿ ಕೂತದ್ದು ಆಯ್ತು. ಊಹೂ ಏನು ಪ್ರಯೊಜನ ಇಲ್ಲದೆ ಹೋಯಿತು. ಏನೂ ಬರೆಲೇ ಇಲ್ಲ. ಎಲ್ಲೊ ದೂರದಲ್ಲಿ ಆರಾಮಾಗಿ, ಹಾಯಾಗಿ, ಕೂತು ಆ ಪದ ಈ ಪದ ಅಂತ ಹುಡ್ಕಿ ಜೋಡಿಸಿ ನಾಲ್ಕು ಸಾಲು ಮಾಡಿ ಕವನ ಅಂತ ಮಾಡಿ ಬಿಟ್ಟರೆ ಮುಗೀತು. ಎಷ್ಟು ಆರಾಮು. ಆದ್ರೆ ಈ ಕತೆ ,ಬಹುಶಃ ಈ ಕತೆ ಬರ್ಯೋಕೆ ಆಗ್ದೇ ಇರೋದು ನಂಗೆ ಮಾತ್ರ ಇರ್ಬೇಕು. ಜಪ್ಪಯ್ಯ ಅಂದ್ರೂ ಬರೀಲಿಕ್ಕೆ ಆಗ್ಲೆ ಇಲ್ಲ. ನಮ್ಮ ಒಬ್ಬರು ಗಣಿತದ ಮೆಡಮ್ ಹೇಳ್ತ ಇದ್ದರು ಅಲ್ಲಾರಿ ಬದ್ಕು ಇಷ್ಟೊಂದು ನರಳಾಟದಲ್ಲಿ ಉಂಟ, ಇಲ್ಲ ಅಂದಮೇಲೆ ಈ ಕತೆಗಳ್ಯಾಕ್ರಿ ಈ ಪಾಟಿ ತೊನ್ಲಾಡ್ತವೆ ಅಂತ. ಅದ್ಕೆ ಅಲ್ಲೆ ಪಕ್ಕ ಇದ್ದ ನಮ್ಮ ಕನ್ನಡದ ಮೇಡಮ್, ಅಲ್ಲ ಮೇಡಮ್ ಆ ಕತೆಗಳಲ್ಲಿ ಅಷ್ಟು ಕಾಡಿಸ್ತಾರೆ ಅದ್ಕೆ ನಿಮ್ಗೆ ಅದು ನೆನಪಿರುತ್ತೇ ಅಂತ. ಅದೇನಾದ್ರು ಇರ್ಲಿ ನಂಗಂತು ಕತೆ ಬರೀಲಿಕ್ಕೆ ಆಗಲಿಲ್ಲ. ಬಹುಶಃ ಮುಂದೇನು ಆಗೋಲ್ಲ ಅಂತ ಕಾಣುತ್ತೆ.
ಅದೇನಾಯ್ತು ಗೊತ್ತುಂಟ, ನಾನು ಕತೆ ಬರಿಬೇಕು ಅಂತ ಅಂದುಕೊಂಡನ, ಹೇಗೆ ಬರೀಬೇಕು ಏನನ್ನ ಬರೀಬೇಕು, ಎಷ್ಟು ಬರೀಬೇಕು ಹೀಗೆ ಬಾರಿ ತಲೆ ಕೆಡಿಸಿಕೊಂಡು ಬಿಟ್ಟೆ. ಮೊದ್ಲೆ ನಂದು ಸೊಟ್ಟ ಕಾಲು, ಸೊಟ್ಟ ತಲೆ, ಅಂತದ್ರಲ್ಲಿ ತಲೇಲಿ ಏನಾದ್ರು ಇತ್ತಾ ಮುಗೀತು. ದೊಡ್ಡ ಮಂಡೆ(ನನ್ನ ಗೆಳತಿ ಸ್ವಾತಿ ಅಂತ, ಅವಳು ಯಾವಾಗ್ಲು ನಂದು ದೊಡ್ಡ ಮಂಡೆ ಅಂತ ಚೇಡಿಸ್ತಾ ಇದ್ಲು, ಅದಕ್ಕೆ ನಾನು ರೇಗೋದು. ಯಾವಾಗ್ಲು ಕಿತ್ಲಾಡ್ತ ಇದ್ವಿ.) ಹಾಳಾಗಿ ಹೋಯಿತು. ತೇಟ್ ಹುಚ್ಚೂರಾಯನೆ, ಅನುಮಾನಾನೆ ಇಲ್ಲ, ಅದೂ ಈ ಸರಿ ಸ್ವಲ್ಪ ವಿಕೋಪಕ್ಕೆ ಕೂಡ ಹೋಗಿತ್ತು. ಒಂದು ದಿನ ಬೆಳಗ್ಗೆ ಎದ್ದೋನೆ ಸೀದ ಬೀಚಿಗೆ ಹೋಗಿ ಕೂತಿದ್ದೆ, ಅವತ್ತು
ನಾನು ಸೂರ್ಯೋದಯ ನೋಡೋಣ ಅಂತ ಹೋದೋನು,
ನೋಡ್ತೀನಿ ಎಷ್ಟೇ ಹೊತ್ತಾದ್ರೂ ಸೂರ್ಯ ಕಾಣಿಸ್ಲೇ ಇಲ್ಲ,
ಆದ್ರು ಬೆಳ್ಕು ಕಾಣ್ತ ಇತ್ತು. ಇದೇನಪ್ಪ ಆಯ್ತು ಅಂತ ನೊಡಿದ್ರೆ ಸೂರ್ಯ ಹಿಂದ್ನಿಂದ ಬರ್ತಾ ಇದ್ದ.
ಆಗ ಗೊತ್ತಾಯ್ತು ಹೌದಲ್ವ
ಇದು ಸೂರ್ಯ ಮುಳುಗೋ ದಿಕ್ಕು, ಸೂರ್ಯ ಹೂಟ್ಟೋ ದಿಕ್ಕು ಅಲ್ಲ ಅಂತ.
ಹಾಗಂತ ಮೊದ್ಲೆ ಗೊತ್ತಿರ್ಲಿಲ್ಲ ಅಂತಲ್ಲ ಇದೆ ಬೀಚಿಗೆ ದಿನಾ
ಸಂಜೆ ಬರೋನು ನಾನು.
ಈ ವಿಷ್ಯ ಅದೇಗೊ ಏನೋ ನಮ್ ಮೃಣನ್ಮಯಿಗೆ ತಿಳ್ದು ಬಿಡ್ತು. ಅದ್ಕೆ ಅವ್ಳು ಏನು, ಏನು ಅಂತ ಪೀಡಿಸಿ ಪೀಡಿಸಿ, ಕಡೇಗೆ ಅವ್ಳಿಗೆ ಹೇಳಲೇಬೇಕಾಯ್ತು. ಅದು ನಾನು ಕತೆ ಬರಿಬೇಕು ಅಂತ ಅಂದ್ಕೊಂಡಿದ್ದೀನಿ. ಅದಕ್ಕೋಸ್ಕರ ಅದಕ್ಕೆ ಬೇಕಾಗಿರೋ ವಸ್ತು, ಅದೂ ಇದೂ ಅಂತ ಹುಡ್ಕುತಾ ಇದ್ದೀನಿ ಅಂತ ಹೇಳಿಬಿಟ್ಟೆ. ಎಲ್ಲೋ ಆತ್ಮಹತ್ಯೆ ಮಾಡ್ಕೊತಾಯಿದ್ದೀನಿ ಅಂತಾ ಹೇಳಿದ್ನೇನೊ ಅನ್ನೋರೀತೀಲಿ ಊಹೂಃ ನೀನು ಕತೆ ಬರಿ ಬಾರ್ದು ಅಂದ್ರೆ ಬರಿಬಾರ್ದು ಅಂದು ಬಿಟ್ಲು. ಇದೇನಾಯ್ತಪ್ಪಾ ಹೀಗೆ ಅಂತ ಮಂಡೆ ಬಿಸಿ ಆಗಿಹೋಯ್ತು. ಯಾವಾಗ್ಲು ಅದು ಬರೆದೆ, ಇದು ಬರೆದೆ ಅಂತ ಹೇಳಿದಾಗ ಖುಶಿಯಿಂದ ಹೂ ಬರಿ ಅಂತ ಹೇಳ್ತಾ ಇದ್ದೋಳು. ಈಗೇನಾಯ್ತು ಅಂತ ಯೊಚ್ಸಿ ಯೋಚ್ಸಿ ಮಂಡೆ ಬೆಚ್ಚಾಯ್ತು.
ಕತೆ ಬರೀಬೇಕು ಅನ್ನೋದು ಮರ್ತೇ ಹೋಯ್ತು. ಮತ್ತೆ ಆ ಕತಾ ವಸ್ತು, ಅದು ಇದೂ ಎಲ್ಲಾನು ಮರ್ತು ಹೋಯ್ತು. ಅಲ್ಲಿ ಉಳಿದದ್ದು ಮಾತ್ರ ಇವ್ಳಿಗೇನಾಯ್ತು, ಯಾಕೆ ಹಿಗಾದ್ಲು, ಕತೆ ಬರೆದೀರ ಅಂದ್ರೆ ನಿಮ್ಮನ್ನು ಬಿಟ್ಟು ಹೊರಟು ಹೋಗ್ತೀನಿ ಅನ್ನೋ ಮಟ್ಟಕ್ಕೆ ಹೋದ್ಲಲ್ಲ. ಇದ್ರಲ್ಲಿ ಏನೋ ಚಿದಂಬರ ರಹಸ್ಯ ಅಡಗಿದೆ, ನಾನು ಕತೆ ಬರಿತೀನಿ ಅಂದರೆ ಬೇಡ ಅಂತ ಹೇಳ್ತಾ ಇದ್ದಾಳೆ ಅಂದರೆ ಏನೋ ಇದೆ, ಏನಿರಬೊಹುದು. ಇರ್ಲಿ, ನಾನು ಏನೇ ಆದ್ರು ಕತೆ ಬರೀಲೆ ಬೇಕು ಅನ್ನೋ ಮಟ್ಟಕ್ಕೆ ಹೋಗಿಬಿಟ್ಟೆ . ಇವಳೇನು ಮಾಮೂಲೀನ, ಜಗ ಮಂಡಿ ಇವಳೂ ಹಟಕ್ಕೆ ಬಿದ್ಲು. ಕಡೇಗೆ ಯಾವಮಟ್ಟಕ್ಕೆ ಹೋಯ್ತು ಅಂದರೆ ಕತೆ ಬೇಕ, ನಾನು ಬೇಕ ಅಂತ ಕೇಳೋ ಮಟ್ಟಕ್ಕೆ ಹೊಗಿಬಿಟ್ಟಾಗ " ನಿನ್ನಜ್ಜಿ, ನಿಂಗೇಳ್ದೆ ನೋಡು ನನ್ನೆಕ್ಡ ತಗೊಂಡು ನಾನೆ ಹೊಡ್ಕೊಬೇಕು, ತಲೇಗೆ ಮೆಟ್ಟು ಕೇಳೋಳು ನೀನು" ಅಂತ ಕೋಪದಲ್ಲಿ ಅಂದುಬಿಟ್ಟೆ. ಕೋಪ ಮಾಡಿಕೊಂಡು ಬಿಟ್ಟಳು. ನಮ್ಮೋಳು ಸುಮ್ನೆ ಎಲ್ಲ ಅಳ್ತ ಕೂರಲ್ಲ. ಅವಳ ಕಡೆ ನೋಡಿದ್ರೆ ಸಾಕು ತೇಟ್ ಕಾಳಿ ಮಾತಾನೆ, ದೇವಸ್ತಾನದಲ್ಲಿ ನೋಡೋದೆ ಬೇಡ ಅನ್ನೋ ಅಷ್ಟು ಕೋಪ. ಒಂದೆರಡು ದಿನ ಹಾಗೆ ಹೀಗೆ ಸುಮ್ಮನೆ ಇದ್ವಿ. ಎಷ್ಟು ದಿನ ಅಂತ ಸುಮ್ಮನೆ ಇರೋದು. ಪ್ರೀತಿಸಿದವಳು. ನಂಗೋ ಅವಳನ್ನ ಬಿಟ್ಟು ಮತ್ತಿನ್ಯಾರು ಇಲ್ಲ, ಅವಳನ್ನ ಬಿಟ್ಟು ಇರಲಿಕ್ಕೂ ಸಾದ್ಯಾನೇ ಇಲ್ಲ. ನಂಜೊತೆ ಅವ್ಳು, ಅವ್ಳ ಜೊತೆ ನಾನು ಮಾತಾಡದೆ ಇದ್ರೆ ಬದ್ಕೋಕೇ ಆಗೋಲ್ಲ ಅನ್ನೋ ಮಟ್ಟಕ್ಕೆ ಹೋದಾಗ ಇಬ್ಬರೂ ಒಂದು ಒಪ್ಪಂದಕ್ಕೆ ಬಂದ್ವಿ. ಅವ್ಳು ನಾನು ಯಾಕೆ ಕತೆ ಬರಿಬಾರದು ಅಂತ ಹೇಳ್ತಾಳೆ ನಾನು ಕತೆ ಬರಿಬಾರ್ದು. ಇದು ಒಪ್ಪಂದ. ಸರಿ ಅಂತ ಅವ್ಳು ಕತೆ ಹೇಳಲಿಕ್ಕೆ ಶುರು ಮಾಡಿದ್ಲು. ಅವ್ಳು ಹೇಳಿದ್ದು ಒಬ್ಬ ಕತೆಗಾರನ ಕತೇನ. ಅವರ ಊರಲ್ಲಿ ಮೋಹನ ಅಂತ ಒಬ್ಬ ಹುಡ್ಗ ಇದ್ನಂತೆ. ನೋಡಲ್ಲಿಕ್ಕೆ ಲಕ್ಷಣವಾಗಿ, ಸ್ವಲ್ಪ ತುಂಬ ಅನ್ನೋ ಅಷ್ಟೆಲ್ಲಾ ಓದ್ಕೊಂಡು ಎಲ್ಲಾ ಮಾಡಿದ್ನಂತೆ, ಅವ್ನು ಹೀಗೆ ಒಂದು ದಿನ ಕತೆ ಬರಿತಾ ಇದ್ದೀನಿ ಅಂತ ಹೇಳಿ ಕತೆ ಬರಿತಾ ಇದ್ದೋನು, ಇದ್ದಕ್ಕಿದ್ದಂತೆ "ಶಂಕರಪ್ಪ ಶಂಕರಪ್ಪ ಅಂತ ಕೂಗ್ತ ಕೂಗ್ತ ಹೊರ್ಟು ಹೋದ್ನಂತೆ. ಆಮೇಲೆ ಎಲ್ಲಾರು ಹೇಳ್ತಾರೆ, ಅವ್ನು ಕತೆ ಬರ್ಯೋಕೆ ಶುರುಮಾಡಿದ್ಮೇಲೆ, ಅದ್ರಲ್ಲಿರೊ ಶಂಕರಪ್ಪ ಅಂತ ಇರೋ ಪಾತ್ರ ಒಂದು ಎದುರಿಗೆ ಬರೋಕೆ ಶುರು ಆಯ್ತಂತೆ. ಆಮೇಲೆ ಅದು ಮಾತ್ನಾಡ್ಲಿಕ್ಕೆ ಆರಂಭ ಆದ್ಮೇಲೆ ಅದ್ರ ಜೊತೆ ಮಾತಾಡ್ತ ಮಾತಾಡ್ತ ಅದ್ರ ಜೊತೆ ಹೊರ್ಟು ಹೋದ್ನಂತೆ. ಆದ್ರಿಂದ ಇವ್ಳು ನಂಗೆ ಯಾವ್ದೆ ಕಾರ್ಣಕ್ಕೂ ಕತೆ ಬರೀಬಾರದು ಅಂತ ಹೇಳಿಬಿಟ್ಟಿದ್ದಳು.
ಅವ್ಳ ಮಾತು ಮೀರೋಕೆ ಆಗುತ್ತ. ಪ್ರೀತ್ಸಿದ ಹುಡ್ಗಿ ಹೇಳಿದ ಮಾತನ್ನ. ಅದೂ ಮೊದ್ವೆ ಆಗೋಕೂ ಮುಂಚೆ. ಸಾದ್ಯಾನೆ ಇಲ್ಲ. ಅದೂ ನನ್ನ ಹುಡುಗಿ ತುಂಬಾ ಚೆನ್ನಾಗಿದ್ದಾಳೆ. ಪುಟ್ಟ ಪುಟ್ಟ ಕಾಲುಗಳು. ಬುಡ್ಡಕ್ಕೆ, ಗುಂಡಾಗಿ,ಮುದ್ದು ಮುದ್ದಾಗಿ ಇದ್ದಾಳೆ.ಆದ್ರಿಂದ ಅವ್ಳ ಮಾತು ಮೀರೋಕೆ ಆಗುತ್ತ. ನನ್ಕೈಲಂತು ಆಗೋಲ್ಲ. ಅದ್ಕೆ ಕತೆ ಬರೀಲಿಲ್ಲ. ಅದ್ರೆ ಆ ಮಹನುಬಾವ ಅದೆ ಆ ಮೋಹನ ಅನ್ನೊ ಬಡಪಾಯಿ ಇದ್ದನಲ್ಲ ಅವನ ಕತೆ ಇನ್ನೆಂತಾದು ಅಂತ ಓದೋ ಕುತೂಹಲ ಆಯ್ತು. ಈ ಸರಿ ಅವ್ಳಿಗೆ ಹೇಳಿದ್ರೆ ಮತ್ತಿನ್ನೇನ್ ಕತೆ ತೆಗಿತಾಳೊ ಅಂತ ಸ್ವಲ್ಪ ಗಾಬರಿ ಆಗಿ ಅವ್ಳಿಗೆ ಹೇಳದೇನೆ ಹೊರ್ಟುಬಿಟ್ಟೆ. ಆ ಶಂಕರಪ್ಪ ಅನ್ನೋ ಪಾತ್ರ ಇನ್ನೇಗಿರ್ಬೇಕು, ಅದೇನಾದ್ರು ಚಂದ್ರಮುಕೀನ ಅತ್ವ ನಾಗವಲ್ಲೀನ ಅನ್ನೋಮಟ್ಟಿಗೆ ಕುತುಹಲ ಕೆರಳಿ ಅವನ ಮನೇಗೆ ಹೋದಾಗ, ಅದು ಪಾಳು ಬಿದ್ದು ಹೋಗಿತ್ತು. ಯಾವುದೊ ಓಬಿರಾಯನ ಕಾಲದ್ದು ಅಂತ ಅನ್ನಿಸುತ್ತೆ, ಆ ಗುಹೆ ತರ ಇರೊ ಮನೇಲಿ ಹೋಗಿ ನೋಡ್ದಾಗ ಎಲ್ಲೂ ಕಾಣಿಸದೆ ಒಂದು ಹಳೇ ಟ್ರಂಕ್ ಅಲ್ಲಿ ಈ ಕತೆ ಬರ್ದಿರೊ ಕಾಗದಗಳನ್ನ ಇಟ್ಟಿದ್ದ(ಹಳೇ ಬ್ಲಾಕ್ ಅಂಡ್ ವೈಟ್ ಸಿನಿಮಾನ ಸ್ವಲ್ಪ ನೆನಪು ಮಾಡ್ಕೊಳಿ) ಇಗೊ ಅದೆ ಈ ಕತೆ. ಕತೆಗಾರ ಬರೆದಿರೋ ಕತೆಯ ಕತೆ. ನಂಗಂತು ಕತೆ ಬರೀಲಿಕ್ಕೆ ಆಗಲಿಲ್ಲ, ಕಡೆ ಪಕ್ಷ ಈ ಕತೆನಾದ್ರು ನೊಡುವ. ಮುಂದೆ ಬರೋ ಪಾತ್ರ ಹಾಗು ಕತೆ ಎಲ್ಲಾನು ಮೋಹನ ರಚಿಸಿದ್ದು.
ಈಗ ಕತೆ ಆರಂಭ.
"ಎಲೆ ಹಾಕ್ಲ"
ಹಾಕೋ ಎಲೇನ ಎಲ್ಲಿ ಜೋಡಿಸ್ಕೋಬೇಕು ಅಂತ ಆಲೋಚಿಸ್ತಾನೆ, ಮೋಟು ಬೀಡಿ ಸುಡ್ತ ಒಂದು ಧಮ್ ಎಳೆದು ಹಾಯಾಗಿ, ಬಿದ್ದ ಎಲೇನ ತಂಗ್ಬೇಕಾದ್ದೆ ಹಾಕಿದಾನೆ, ಹುಚ್ಚುಮುಂಡೇಗಂಡಂಗೆ ಆಟಾನೆ ಗೊತ್ತಿಲ್ಲ, ನಾ ಗೆಲ್ಲಿ ಅಂತಾನೆ ಎಲೆ ಹಾಕ್ತಾರೊ ಏನೋ ಅಂತೇಳಿ, ತಾ ಗೆದ್ದದ್ದು ಗೊತ್ತಾಗಿ, ಈ ಆಟ ಗೊತ್ತಿಲ್ದೆ ಇರೊ ಮುಂಡೆಗಂಡರತ್ರ ಆಡಿ ಗೆದ್ದಾಗ , ನಿಜವಾಗಿ ನಾ ಗೆದ್ದನೋ ಅಥ್ವಾ ಅವ್ರು ಸೋತಿದ್ದೋ ತಿಳೀದೆ ಆಗಿ ಮತ್ತೊಂದ್ ಆಟಕ್ಕೆ ಎಲೆ ಕಲ್ಸೋಕ್ಕೆ ಸಿದ್ದ ಆದ ಶಂಕರಪ್ಪಂಗೆ ಮಗ ಬಂದಿರೋದು ಗೊತ್ತಾಗಿ, ಕುಲಪುತ್ರ, ವಂಶೋದ್ದಾರಕ ಬಂದಿದಾನೆ ಅಂತ ಸಂತೋಷ ಆದ್ರೂನು, ಅವನನ್ನ ನೋಡಿ ಹಾಗೆ ಸ್ಲೋ ಮೋಷನ್ನಲ್ಲಿ ಹೋಗಿ ತಬ್ಕೋಬೇಕು ಅಂತ ಅನ್ನಿಸಿದ್ರೂ, ಚೆನ್ನಾಗಿರೋ ಆಟ ಬಿಟ್ಟುಹೋಗಲಿಕ್ಕೆ ಆಗದೆ ಇಸ್ಪೀಟು ಎಲೆಗಳ ಮದ್ಯೆ, ಮಿದುಳು ಮನಸ್ಸು, ದೇಹ ಮೂರೂ ಬೇರೆ ಬೇರೇನೋ ಒಂದೇನೋ ಅಂತ ಯಾವ್ದೇ ಕಾರ್ಣಕ್ಕು ಆಲೋಚಿಸ್ದೆ ಎಲ್ಲಾನು ಏಕೀಭವಿಸಿ ಆಟದಲ್ಲಿ ತಲ್ಲೀನನಾಗಿಹೊದ.
ಮಾಕಾಹಳ್ಳಿ ನನ್ನೂರು,
ಈ ಮಾಕಾಹಳ್ಳೀಲಿರೋ ಹಲವು ಪಾತ್ರಗಳಲ್ಲಿ ಒಂದಾದ ಶಂಕರಪ್ಪನ್ನ ಕಂಡು, ಮಾತ್ನಾಡಿ, ಜೊತ್ಗೆ ಸೇರೇ ತಿಳೀಬೇಕು ಅತನ ಗತ್ತು, ಗಮ್ಮತ್ತು, ಪುರುಸೊತ್ತು. ವೃತ್ತಿಯಿಂದ ಮೇಷ್ಟ್ರಾಗ್ಗಿದ್ದಕ್ಕೆ ನಿಲ್ಲೋದಕ್ಕೆ ಒಂದು ಜಾಗಾ ಅಂತ ಇಲ್ದೆ, ಆ ಊರು, ಈ ಊರು ಮತ್ಯಾವ್ದೋ ಊರು, ಹೀಗೆ ತಾನೂ ಸುತ್ತುತ್ತಾ ತನ್ನ ಸಂಸಾರಾನು ಸುತ್ತಿಸ್ತಾ ಕಡೇಗೆ ವೃತ್ತಿಯಿಂದ ನಿವೃತ್ತಿ ಅಂತ ಆದಮೇಲೆ ವೃತ್ತಿ ಇಂದ್ಬಂದ ವರ್ಮಾನಕ್ಕೆ ಪ್ರತಿರೂಪ್ವಾಗಿ ತಾ ಹುಟ್ಟಿದ್ ಊರಲ್ಲಿ, ಅದೆ ಈ ಮಾಕಾಹಳ್ಳೀಲಿ ಮನೆ ಕೊಂಡು ರಾತ್ರಿ ಹೋತ್ತು ನಾಟ್ಕ ಆಡಿಸ್ತಾ, ಸಂಜೆ ಮೋಟುಬೀಡಿ ಸುಡ್ತಾ, ಇಸ್ಪೀಟು ಎಲೆಗಳ ಮದ್ಯ ಬೆರ್ತು ಮಾಕಾಹಳ್ಳಿಯ ಎಲ್ಲಾ ಪಾತ್ರಗಳೊಂದಿಗೂ ಸಂಭಂಧದಲ್ಲಿ ಇದ್ದೂ, ಯಾವ ರೀತಿಯ ಸಂಬಂದ ಎಂದು ತಿಳಿಯುವ ಯಾವಾ ಗೋಜಿಗೂ ಹೋಗದೆ ಇದ್ದು ಬಿಟ್ಟಿದ್ದಾ.
ಹೀಗೆ ಶಂಕರಪ್ಪ ಯಾವುದೊ ಕಾರಣಕ್ಕೆ ಅಂತ ಬೆಂಗಳೂರಿಗೆ ಹೋಗಿದ್ದ. ಹಲವು ದಿನಗಳ ನಂತರ. ಈಗ ಕಂಡ.
ಸುಮ್ಮನೇ ನಡೀಬೋದಿತ್ತೇನೋ ಮುಖ ತೀರ ಬಾಡಿದ ಹಾಗಿದೆ, ಇಷ್ಟು ದಿನಗಳಿಂದ ಅವನಲ್ಲಿ ಏನೇನು ಆಯ್ತು ಅಂತ ನಾ ಊಹಿಸಿ ಹೇಳಿದ್ರೆ ತಪ್ಪಾಗುತ್ತೋ ಏನೋ, ಛೇ ಇರ್ಲಿಕ್ಕಿಲ್ಲ, ಎಲ್ಲಾರೂ ಮಾಡೋದು ಹಾಗೆ ಅಲ್ವ. ಅವನ ತಲೇಲಿ ಅದು ನಡಿತೂ ಇದು ನಡಿತೂ ಅಂತ ಹೇಳಿದ್ರೆ ನಿಜಾ ಆಗುತ್ತೋ ಸುಳ್ಳಾಗುತ್ತೋ?
ಇಲ್ಲ ಕಂಡಿತವಾಗಿಯೂ ಇಲ್ಲ. ಯವುದೋ ಒಂದು ಘಟನೆಯಿಂದ ಈತನಿಗೆ ಹೀಗೆ ಆಗಿರಲಿಕ್ಕೆ ಸಾದ್ಯವಿಲ್ಲ.
ಒಟ್ಟೂ ಬದುಕನ್ನ ತನ್ನ ಎದುರಿಗೆ ಇಟ್ಟುಕೊಂಡು ಎದುರಿಗಿದ್ದದ್ದನ್ನ ಕಂಡನ?
ಅಥವ ಕಾಣಲಿಕ್ಕೆ ಪ್ರಯತ್ನಿಸಿದನ ಅಂತ? ಇರಬೊಹುದೇನೋ,
ಆದರೆ ಆತನಿಗೆ ಕಾಣಲಿಕ್ಕೆ ಸಾದ್ಯವಾಯಿತ
ಅನ್ನೋದರ
ಜೊತೆಗೇನೆ
ಕಾಣಬೇಕೇಕೆ ಅನ್ನೋದು ಉತ್ತರವೊ ಪ್ರಶ್ನೆಯೋ ಗೊತ್ತಾಗಲಿಲ್ಲ.
ಈ ಸಮಯದಲ್ಲಿ ಇದು ಅವಶ್ಯವಿತ್ತ ಅಂತ ಅನ್ನಿಸುತ್ತೆ. ಸಣ್ಣ ಸಣ್ಣ ಘಟನೆಗಳನ್ನ ಒಟ್ಟಾಗಿ ಸೇರಿಸಿ ಕೂತು ಕಂಡನ?
ಒಬ್ಬ ಕತೆಗಾರನಾಗಿ ಈ ಕತೆಯನ್ನ ಬರೆಯುತ್ತ ನನಗೆ ಕಾಡುವುದು,
ಪ್ರತೀ ಕ್ಷಣವೂ ನಡೆದುಹೋದ ಆ ಬಿಡಿ ಬಿಡಿ ಕ್ಷಣಗಳನ್ನು ಒಟ್ಟುಗೂಡಿಸಿ ನೋಡಿದ ಒಂದು ದೃಷ್ಟಿಯೆ?
ಅಷ್ಟೆ ಅಲ್ಲವ,
ಪ್ರತೀ ಕ್ಷಣವನ್ನು ಒಟ್ಟುಗುಡಿಸುವುದಾದರೂ ಹೇಗೆ?
ಈಗ ಅನಿಸುತ್ತೆ ಎಷ್ಟು ಆರಾಮಾಗಿ ಶಂಕರಪ್ಪ ಬದುಕು ಸಾಗಿಸಿಬಿಟ್ಟ ಅಂತ. ಆರಾಮಾಗಿ, ಮೇಷ್ಟ್ರಾಗಿ ಪಾಠ ಮಾಡುತ್ತ ಮಾಡುತ್ತ, ತುಂಡು ಬೀಡಿ ಸುಡ್ತ, ಇಸ್ಪೀಟ್ ಆಡ್ತ ಆಡ್ತ ಹೀಗೆ ಬದುಕು ಸಾಗಿಸಿಬಿಟ್ಟ.
ಅವ್ನು ಪ್ರಶ್ನೆಗಳ ಮಗ್ಗೆ ಯೋಚಿಸಿದನ ಗೊತ್ತಿಲ್ಲ.
ಆದರೆ ಬದುಕಿಬಿಟ್ಟ.
ಇಲ್ಲಿವರೆಗೂ ಆರಾಮಾಗೇ ಇದ್ದಾನೆ, ಅಥವ ಇದ್ದಾನೆ ಅಂತ ನಾನು ಬಾವಿಸಬೇಕಿದೆ ಅಂತ ಅನ್ಸೊತ್ತೋ ಏನೋ.
ನಾನೂ ಹಾಗೆ ಬದುಕಬೊಹುದಿತ್ತಲ್ಲ, ಅರ್ಥಗಳ ಇರಾದೆ ಬೇಕಿತ್ತ,
ಆದರೆ ನಾನು ಹಾಗೆ ಇರಬಲ್ಲವನಾಗಿದ್ದೆನ? ಅಯ್ಯೋ...
ಎಲ್ಲವನ್ನು ಎಲ್ಲಾ ಕ್ಷಣವನ್ನೂ ಒಟ್ಟುಗೂಡಿಸಲೇ ಇಲ್ಲವಲ್ಲ, ಒಟ್ಟುಗೂಡಿಸಲಿಕ್ಕೆ ಆಗಲೇ ಇಲ್ಲವಲ್ಲ, ಇದು ನನ್ನ ಸೋಲ..? ಅಥವ ಒಟ್ಟುಗೂಡಿಸಬಲ್ಲೆ ಅಂತ ಅಂದುಕೊಂಡಿದ್ದರಲ್ಲಿ ಸೋಲಿತ್ತ..? ಅಥವ ಎಂದಿಗೂ ಕ್ಷಣಗಳನ್ನ ಒಟ್ಟುಗೂಡಿಸಲು ಸಾದ್ಯವೇ ಇಲ್ಲವ..? ನನ್ನಿಂದ ಮಾತ್ರ ಸಾದ್ಯವಿಲ್ಲವ..? ಯಾರಿಂದಲೂ ಸಾದ್ಯವಿಲ್ಲವ..? ಎಲ್ಲಿಂದಲೂ ಯಾರಿಂದಲೂ ಸಾದ್ಯವಿಲ್ಲದಾದರೆ ಅದು ಇರುವುದಾದರೂ ಉಂಟ...? ಛೆ... ಬಿಡಿ
ಇವೆಲ್ಲ ಶಂಕರಪ್ಪನ್ನ ಕಾಡಿತ್ತ...? ಇರಲಾರದು, ಇಲ್ಲ ಇರಬೊಹುದು.
ನನಗೆ ಕಾಡಿದ್ದು ಅವನಿಗೂ ಕಾಡಬೇಕೇಕೆ..? ಅಥವ ನನಗೆ ಕಾಡಿದ್ದು ಅವನಿಗೂ ಕಾಡಬಾರದೇಕೆ..?
ಶಂಕ್ರಪ್ಪ ನಡೀತಾ ಇದ್ದಾನೆ, ಮುಂದೇ ಹೋಗ್ತಾ ಇದ್ದಾನೆ. ದೊಡ್ಡ ದೊಡ್ಡ ಕಟ್ಟಡಗಳು, ಜನಗಳು ನಡೀತ ಇದ್ದಾರೆ. ಎದುರಿಗೆ ಏನನ್ನೋ ಮಾರ್ತ ಇರೋ ಮುದ್ಕಿ, ಅಲ್ಲಿ ಅಲ್ಲಿಗೇಕೆ ಹೋಗ್ತಾ ಇದ್ದನೇ, ಟ್ರಾಫಿಕ್ ಬೇರೆ,
ಪಾಪ ಶಂಕ್ರಪ್ಪ
"ನೋಡಿದ್ಯ ಆ ಪಾಪುನ, ತೈ ತೈ ತಕ್ಕ ಅಂತ ಕುಣೀತಿರೋದು ನೋಡಿ"
" ಅಯ್ಯೊ ಅದಕ್ಕೆ ಆ ಕಾರು ಗುದ್ದತ್ತೆ"
" ಮರಿ ಸ್ವಲ್ಪ ಪಕ್ಕ ಬಾಮ್ಮ"
ಶಬ್ದ ಶಬ್ದ ಬರೀ ಶಬ್ದ ನಾನೂ ನೋಡ್ತಾನೇ ಇದ್ದೀನಿ
ನಿಂತು ಹೋದ ಕಾಲದಲ್ಲಿನ ಚಿತ್ರಗಳಾಗಿ
ಇಡೀ ವಾತವರಣ ಇದೆ. ಇದನ್ನೆಲ್ಲಾ ನೋಡ್ತಾ ಇದ್ದಾ ಶಂಕರಪ್ಪ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಕುಸಿದು ಬಿದ್ದ.
"ಶಂಕ್ರಪ್ಪ ಹುಷಾರು, ನಾ ಬಂದೆ"
ಛೇ, ಇದೇನಾಯ್ತು, ಮಾಕಾಹಳ್ಳಿ ನಾ ಹುಟ್ಸಿರೋ ಊರು, ಅದ್ರಲ್ಲಿ ಬರೋ ಪಾತ್ರ ಶಂಕರಪ್ಪ. ಅದನ್ನೂ ನಾನೆ ಹುಟ್ಸಿದ್ದು.ನಿರ್ಲಿಪ್ತವಾಗಿ ಆತನನ್ನ ಚಿತ್ರಿಸ್ಬೇಕು, ಯಾಕೆ? ನನ್ಕಣ್ಣೆದುರೀಗೆ, ನಾ ಬರೀತಿದ್ದಾಗ ಆತ ಬೀಳ್ತಾ ಇದ್ದಾನೆ. ನಾ ನೋಡ್ತಾ ಇದ್ದೀನಿ. ಛೇ, ಇಷ್ಟಕ್ಕೂ ಈ ಪರಿಸ್ಥಿತೀಲಿ, ಹೋ ನನ್ನ ಪರಿಸ್ಥಿತಿ, ನಾನಿದಿನಿ ಈಗ ಇಲ್ಲಿ. ಬೀದಿ ಇದು, ಬಿಕಾರೀ ತರ ಕೂತಿದೀನಿ. ತರ ಏನ್ಬಂತು ಬಿಕಾರೀನೆ. ನೆನ್ನೇ ನೆನ್ಪೇ ಇಲ್ಲ, ನಾಳೆ ಕನ್ಸೇ ಇಲ್ಲ. ಸಂದಿ ಗೊಂದಿ ಸುತ್ತಿ ಈಗ ಇಲ್ಲಿ ಕೂತಿದ್ದಿನಿ ಅಂತಾದ್ರಲ್ಲಿ, ........
ಶಂಕ್ರಪ್ಪ ಹೊರ್ಟೋಗ್ತಾ ಇದ್ದಾನೆ,ನಾ ಅವ್ನ ಹಿಂದೆ ಹೋಗ್ತಾ ಇದ್ದಿನೀ.
ನನ್ನ ಕೈ ತಪ್ಪಿ ಹೋಗಿದೆ. ಪಾತ್ರ ಸ್ವತಂತ್ರ್ಯವಾಗಿ ಹೋಗಿದೆ.
ಅರೆ , ಐ, ದೇಹ ಬಂತು, ಜೀವಾನು ಬಂತು, ಮಾತಾಡ್ತಾ ಇದೆ.
ನನ್ನ ಪಾತ್ರ ನಂಗೇ ಕೇಳೋ ರೀತೀಲಿ ಮಾತಾಡ್ಕೊಂಡು ಹೊರ್ಟೋಗ್ತಾ ಇದೆ.
ನಾನು ನಾನು ನಾನು ಅದರ ಹಿಂದೆ ಹೋಗ್ತಾ ಇದ್ದೀನಿ.
ನನ್ನ ಕೈ ತಪ್ಪಿ ಹೋದ ಪಾತ್ರವನ್ನ ನಿರ್ದೇಶಿಸ್ತಾ ಇರೋರು ಯಾರು ಅಂತ ಚಿಂತಿಸೋಕೆ ಈಗ ನಂಗೆ ಸಮ್ಯಾನೆ ಇಲ್ಲ.
ಈಗ ಮಾಡೋದೇನಿದ್ರು ಶಂಕರಪ್ಪನ್ನ ಹಿಂಬಾಲಿಸೋದು, ಹಾಗು ಅವ್ನ್ ಹೇಳಿದ್ದನ್ನ ಕೇಳೋದು ಅಷ್ಟೆ.
ಹಾ, ಅವ್ನು ಮುಂದೆ ಹೋಗ್ತಾ ಇದ್ದಾನೆ, ನಾ ಹಿಂದೆ
ಹೋಗ್ತ ಇದ್ದೀನಿ,
ನಾನೆ ಹುಟ್ಸಿದ ಪಾತ್ರದ ಹಿಂದೆ.
ಶಂಕ್ರಪ್ಪ ಮಾತಾಡ್ತಾ ಇದ್ದಾನೆ ನಾನು ಕೇಳ್ತಾ ಇದ್ದೀನಿ,
"ಹೌದು ನಾನು ಕುಸೀತಾ ಇದ್ದೀನಿ. ಪಾತಾಳಕ್ಕೆ ಭಯಂಕರವಾಗಿ ಕುಸೀತಾ ಇದ್ದೀನಿ. ಕೈಗಳಿಗೆ, ಕಾಲುಗಳಿಗೆ ಏನೋ ಹಾಕಿ ಎಳೀತಾ ಇದ್ದಾರೆ. ಹಾ.., ಈಗ ಗೊತ್ತಾಯ್ತು ನಾನು ಸಾಯ್ತಾ ಇದ್ದೀನಿ ಅಂತ. ಛೆ ಛೆ ಇಲ್ಲ. ಸಾಯೋದು ಯಾರಿಗಾದ್ರು ಗೊತ್ತಾಗುತ್ತ, ಬಹುಶಃ ನಾನು ಸತ್ತು ಹೋಗಿದ್ದೀನಿ. ಬಹುಶಃ ನೂ ಇಲ್ಲ ಪಿಂಡಾನೂ ಇಲ್ಲ. ನಾನು ಸತ್ತೋಗಿದ್ದೀನಿ. ನಮ್ಮ ನಾಟ್ಕದಲ್ಲಿ ಇದೇ ರೀತಿ ಅಲ್ವ, ಸತ್ಯವಾನನ ಎದುರಿಗೆ ಯಮ ಕಾಣಿಸ್ಕೊಂಡಾಗ, ಆಗ ಆತಂಗೆ ಹೇಳ್ಕೊಟ್ಟಿದ್ದೆ ಏನೆಲ್ಲಾ ಮಾಡ್ಬೇಕು ಅಂತ. ಯಮನ್ನ ನಿಜ್ವಾಗಿ ನೋಡಿ ಬಂದಿದಾರೇನೊ ಅನ್ನೋ ರೀತಿ ಹೇಳಿ ಕೊಟ್ಟಿದ್ದಾರೆ ನಮ್ ನಾಟ್ಕದ್ ಮೇಷ್ಟ್ರು ಅಂತ ಅಂತಿದ್ರು. ಒಟ್ನಲ್ಲಿ ನಾನು ಈಗ ಸತ್ತಿದ್ದೀನಿ, ಅದೆ ಶಂಕ್ರಪ್ಪ ಅನ್ನೊ ಈ ವ್ಯಕ್ತಿ ಸತ್ತಿದ್ದಾನೆ. ಹೌದೂ, ಸತ್ತೋನ್ಗೂ ಹೆಸ್ರು ಅನ್ನೋದು ಇರುತ್ತ. ಇರ್ಲಿ ಬಿಡ್ಲಿ, ನಂಗೆ ಇನ್ಯಾರಾದ್ರು ಬಂದು ಹೊಸದಾಗೀ ಏನಾದ್ರು ಹೆಸ್ರು ಕೊಟ್ರೆ ಸರಿ ಇಲ್ಲಾಂದ್ರೆ ಇದೆ ಇರ್ಲಿ. ಎಷ್ಟು ಚಂದ ಇದೆ. ಲೇ ಶಂಕ್ರಾ ಅಂತ ಕರ್ದರೆ, ಕೇಳಿಸ್ಕೊಳ್ಲಲಿಕ್ಕೆ ಏನು ಆನಂದ ಅಂತೀರ. ಈಗ ನನ್ನ ಕರ್ಕೊಂಡು ಹೋಗ್ಲಿಕ್ಕೆ ಯಮ ಬರ್ತಾನೆ, ಇಲ್ಲ ಕಂಡೀತಾ ಇಲ್ಲ, ಅಲ್ಲಿ ಸಾವಿತ್ರಿ ಇದ್ಲು ಏನೋ ಎಡ್ವಟ್ಟಾಯ್ತು ಅದ್ಕೆ ಯಮಾನೆ ಬಂದ. ಇಲ್ಲಿ ಯಾರಿದ್ದಾರೆ, ಯಾರೂ ಇಲ್ಲ. ಹೌದು ಯಾರೂ ಇಲ್ಲ. ಅದೂ ನಾನೋ, ನಮ್ಮೂರ ಜಗುಲಿ ಆಂಜನೇಯಂಗೆ ಬಿಟ್ಟು ಮತ್ತೊಬ್ರಿಗೆ ನಮಸ್ಕಾರ ಹಾಕ್ಲಿಲ್ಲ, ಅಂತಾದ್ರಲ್ಲಿ ಗ್ಯಾರೆಂಟಿ ಯಮ ಬರ್ಲಿಕ್ಕಿಲ್ಲ. ಯಮ ಸೇವಕರು ಬರ್ಬೋದು. ಆದ್ರು ಯಮ್ಲೋಕ ಅದೆಂಗಿರುತ್ತೋ ನೋಡ್ಲೆ ಬೇಕು, ಯಾರ್ನಾದ್ರು ಕೇಳಿ ಅಲ್ಲೊಂದು ಮೋಟು ಬೀಡಿ ಇಸ್ಕೊಬೇಕು ಅಷ್ಟೆ. ಕಣ್ಣೇ ತೆಗೀಲಿಕ್ಕೆ ಆಗ್ತಾ ಇಲ್ಲ. ಹಾ ಈಗ ಆಯ್ತು. ಅರೆ ಯಮ್ಲೋಕ ಬೆಂಗ್ಳೂರಿನ್ ತರಾನೆ ಇದ್ಯಲ್ಲ"
"ಲೇ ಮುದ್ಕ ಏಳೋ ... ಎಲ್ಲಾರೂ ಬಿಕ್ಷೆ ಬೇಡೋವ್ರೆ ಆಗೋದ್ರು"
ಇದೇನಾಯ್ತು, ನನ್ನ ಪಾತ್ರ ಕೈ ತಪ್ಪಿದ್ದು ನಿಜ, ಈಗ ನೊಡಿದ್ರೆ ಹೊಸ ಪಾತ್ರಗಳು ಹುಟ್ತಾ ಇವ್ಯಲ್ಲ. ಅದೂ ಪೋಲೀಸಿನ ಪಾತ್ರ, ಇರ್ಲಿ ನೋಡುವ.
"ಸ್ವಾಮಿ ನಾನು ಶಂಕ್ರಪ್ಪ. ಚೆನ್ನಾಗಿದ್ದೀರ ಸ್ವಾಮಿ?"
"ಲೇ ಯಾವನ್ಲ ನೀನು?"
"ಇದು ಯಮಲೋಕ ಅಲ್ವ?"
"ಬೋಳೀಮಗ್ನೆ, ಬೆಂಗ್ಳೂರ್ನ ಹಿಡ್ಕೊಂಡು ಯಮಲೋಕ ಅಂತೀಯೇನೋ, ಎಷ್ಟು ಕೊಬ್ಬು ನಿಂಗೆ, ನಿಮ್ಮಂತಾವ್ರಿರೋದ್ರಿಂದಾನೆ ನಮ್ಮ ದೇಶ ಹಾಳಾಗ್ತ ಇರೋದು"
" ಓ ಹಂಗಾ ಸ್ವಾಮಿ, ದೇಶನ? ಯಾವ್ದೇಶ ಸ್ವಾಮಿ? ಹೌದೂ, ದೇಶ ಅಂದ್ರೇನ್ ಸಾಮಿ?"
"ಬೇವರ್ಸಿ ನನ್ಮಕ್ಳ, ಯಾವ ದೇಶಾ ಅಂತಾನು ಗೊತ್ತಿಲ್ವೇನೋ ನಿಂಗೆ? ಕಣ್ಣೆದ್ರಿಂದ ಈಗ್ಲೆ ಒಂಟು ಬಿಡು. ಕಾಣ್ಸಿದ್ರೆ ನೋಡು. ಅಮ್ಮಾ ಭಾರತ ಮಾತ ನೊಡಮ್ಮಾ ನಿನ್ನ ಮಕ್ಕಳನ್ನ, ಯಾವ ದೇಶಾ ಅಂತಾ ಕೇಳ್ತಾರಲ್ಲಮ್ಮ. ಕ್ಷಮಿಸು ತಾಯಿ, ಕ್ಷಮಿಸು. ಗಾಂದೀ, ಇಂತವ್ರಿಗಾಗೇನ ನೀನು ಸ್ವಾತಂತ್ರ್ಯ ತಂದ್ಕೊಟ್ಟದ್ದು"
"ಲೋ ಯಾವನ್ಲಾ ಅಲ್ಲಿ ನೋ ಪಾರ್ಕಿಂಗ್ ಪ್ಲೇಸ್ ಅಲ್ಲಿ ಗಾಡಿ ನಿಲ್ಲಿಸ್ದೋನು?"
"ಸ್ವಾತಂತ್ರ್ಯ ಅಂದ್ರೆ ಬೆಲೆ ಇಲ್ದಾಗೆ ಹಾಗಿದೆ ತಾಯಿ"
"ಗಾಡಿ ತೇಗೀಲ, ನಿಮ್ಮಪ್ಪಂದು ಅಂತ ಅಂದ್ಕೊಂಡಿದಿಯಾ ಜಾಗಾನ?"
"ಭಾರತ ಮಾತ, ಒಂದೇ ಮಾತರಂ"
"ಅನ್ಮಾನಾನೇ ಇಲ್ಲ, ಇದು ಯಮಲೊಕಾನೆ. ಇಲ್ಲಾಂದ್ರೆ ಯಾರಾದ್ರು ಗಾಂದೀ ಅಂತ ಕರೀತಾರ. ಹೌದೂ, ಈತ ಕರ್ದದ್ದು, ಅದೆ ಹಳೆ ಮಹಾತ್ಮ ಅಂತ ಕರೀತಾರಲ್ಲ ಆ ಗಾಂದೀನ್ನಾ ಅತ್ವಾ ಈ ಯಾವ್ಯಾವ್ದೋ ಗಾಂದೀಗಳಿದ್ದಾರಲ್ಲ ಅವರನ್ನ? ಛೆ ಅದಾದ್ರು ಸ್ವಲ್ಪ ಸ್ಪಷ್ಟ ಆಗಿದ್ದಿದ್ರೆ ಇದು ನಿಜ ಲೋಕಾನೊ, ಅತ್ವಾ ಯಮಲೋಕಾನೋ ತಿಳ್ದು ಹೋಗ್ತಾ ಇತ್ತು. ನಾವು ನಮ್ಮ ನಾಟ್ಕದಲ್ಲಿ ಯಮಲೋಕಕ್ಕೆ ಅಂತ ಎಷ್ಟೊಂದು ಹಣ ವ್ಯರ್ಥ ಮಾಡಿ ಸೆಟ್ ಹಾಕಿಸ್ತಾ ಇದ್ವಿ. ಯಮಲೋಕ ನಮ್ಮ ಬೆಂಗ್ಳೂರಿನ ತರಾನೆ ಇದ್ದಂಗೆ ಇರುತ್ತೆ ಅಂತ ಗೊತ್ತಿದ್ದಿದ್ರೆ, ಇಲ್ಲೆ ಕರ್ದುಕೊಂಡು ಬಂದು ನಾಟ್ಕ ಆಡಿಸ್ಬೋದಿತ್ತು."
ನಗು ಬರ್ತಿದೆ ನಂಗೆ, ಶಂಕ್ರಪ್ಪನ ಮಾತನ್ನ ನಿಲ್ಸೋಕೆ ಸಾದ್ಯಾನೆ ಇಲ್ಲ. ನಾನೆ ಬರಿತಿರೋ ಕತೆಯ(ಇದಕ್ಕೆ ಕತೆ ಅಂದರೆ) ನನ್ನದೇ ಊರಿನ ನನ್ನದೇ ಪಾತ್ರಾನೂ ನನ್ ಕೈ ಅಲ್ಲಿ ನಿಯಂತ್ರಿಸೋಕೆ ಆಗ್ತ ಇಲ್ಲ ಅಂದ್ರೆ ಏನು ಅರ್ಥ? ಯಾವ್ದೋ ಒಂದು ಕ್ಷಣ
ಎಲ್ಲಾನ್ನು ನಾವೆ ಮಾಡ್ತ ಇದ್ರೂ ಸಹ ಎಲ್ಲೋ
ಅದು
ನಮ್ಮಿಂದ
ತಪ್ಪಿ ಹೋಗಿದೆ
ಅಂತ
ಅನ್ಸೋಕ್ಕೆ ಶುರು ಆಗುತ್ತೆ.
ಒಂಥರಾ ಆ ಶುರೂ ಸಹ ನಮ್ಮ ನಿಯಂತ್ರಣ
ತಪ್ಪಿ ಹೋಗಿರುತ್ತೆ.
ಕಾಲಕ್ಕೆ ತನ್ದೇ ಆದ ಒಂದು ಅಸ್ಥಿತ್ವ
ಅಂತ
ಇದ್ಯಾ
ಅಂತ
ಪ್ರಶ್ನೆ ಬಂದರೆ
ಮೊದ್ಲಿಗೆ ಕಾಲ ಅನ್ನೋದು ಇದ್ಯಾ ಅಂತ ಕೇಳ್ಕೋತೀವಿ, ಅಮೇಲೆ ತನ್ದೇ ಅನ್ನೋದು ಏನಾದ್ರೂ ಇದ್ಯ ಅಂತ ಕೇಳ್ಕೋತೀವಿ, ನಿಲ್ತೀವ ಇಷ್ಟಕ್ಕೆ, ಇಲ್ಲ, ಒಂದು ಅನ್ನೋದೊಂದಿದ್ಯಾ ಅಂತ ಕೇಳ್ಕೋತೀವಿ? ಆಮೇಲೆ ಅಸ್ಥಿತ್ವ ಅಂದ್ರೆ ಏನೂ ಅಂತ ಬರುತ್ತೆ.
ಯಾಕೋ ಶಂಕ್ರಪ್ಪ ಕೂಗ್ತ ಇದ್ದಾನೆ, ನಾ ಅವ್ನ ಹಿಂದೆ ಹೋಗ್ತ ಇದ್ದಿನಿ.
"ಹೌದು, ಯಾಕೋ ತುಂಬ ಅನುಮಾನ.
ನಾನು ಸತ್ತಿದ್ದೀನೋ ಇಲ್ವೋ ಅಂತ ಕೇಳೋಣ ಅಂದ್ರೂ ಯಾರೂ ಇಲ್ಲ ಇಲ್ಲಿ.
ಆದ್ರು ಇಷ್ಟುಬೇಗ ಸಾಯಬಾರದಾಗಿತ್ತು.
ಮಗ್ಳು ಗಾಯಿತ್ರೀನ ನೋಡ್ಬೇಕಿತ್ತು.ಮೊಮ್ಮಗ ಹೇಗಿದ್ದಾನೋ ಏನೋ.ಅವ್ಳ ಮದ್ವೇಗೆ ಅಂತ ಎಷ್ಟು ಮಾಡಿದೆ. ಸುಂದರಿ ಸತ್ತಾಗ ಅಳ್ಳೇ ಇಲ್ವಂತೆ, ಬಂದ ನೆಂಟರೆಲ್ಲಾ ಹೇಳಿದ್ರು. ಗಂಡ ಅಂತ ಅನ್ಸಿಕೊಂಡೋನು ಅಳೋದು ಬೇಡ್ವಾ ಅಂತ. ಅದೇನೊ ಆಗ್ಲು ತಿಳೀಲಿಲ್ಲ. ಈಗ್ಲು ತಿಳ್ದಿಲ್ಲ ಬಿಡಿ.ಮಗನ್ನ ನಾನೆ ಓದ್ಸಿದ್ದು. ಹೋಗ್ಲಿ ಬಿಡು, ಇದ್ದು ಮಾಡೋದೇನಿದೆ ಮತ್ತೆ"
ಅಲ್ಲೊಬ್ಬ ಕೂತಿದ್ದಾನೆ. ಎಷ್ಟೋದಿನದಿಂದಾನು ಅಲ್ಲೆ ಕೂತಿದ್ದಾನೆ. ಎರ್ಡೂ ಕೈಗಳಿಲ್ಲ. ನಾನು ನೋಡಿದ್ದೆ. ಆದ್ರೆ ಈ ಶಂಕ್ರಪ್ಪ ಯಾಕೆ ಅವ್ನತ್ರಾ ಹೋಗ್ತಾ ಇದ್ದಾನೆ
"ಮಗಾ ಊಟಾ ಮಾಡ್ದೇನಾ? ಓ ನಿಂಗೆ ಮಾತು ಬರೋಲ್ವ ಇರು"
ಊಟ ಎಲ್ಲಿ ಸಿಕ್ತು ಈತನಿಗೆ, ತೆಗೆದುಕೊಂಡು ಹೋಗಿ ತಿನ್ನಿಸ್ತಾ ಇದ್ದಾನೆ.
ಶಂಕ್ರಪ್ಪಾನೂ, ಆ ಕೈ ಇಲ್ಲದ ಬಿಕ್ಷುಕಾನು ಸಮ್ಮನೆ ಒಬ್ಬರನ್ನೊಬ್ಬರು ನೋಡ್ತ ಕೂತಿದಾರೆ. ಅರೆ ನೋಡ್ತಾ ಇದ್ದಾರೆ. ಈತ ಎದ್ದ. ಈ ಮನುಷ್ಯ ಇದನ್ನೆಲ್ಲಾ ನಂಗೇಕೆ ಹೇಳ್ತಾ ಇದ್ದಾನೆ, ಇಲ್ಲ, ಅದೂ ಇಲ್ಲ, ಈತ ನಂಗೆ ಹೇಳ್ತಾ ಇಲ್ಲ. ಮತ್ಯಾಕೆ ಹೇಳ್ತಾಇದ್ದಾನೆ. ಶಂಕರಪ್ಪಾಂಗು ಗೊತ್ತಿದ್ಯೋ ಇಲ್ವೋ? ಆತ ಮಾತಾಡ್ತ ಇರೋದನ್ನ ಬೇರೇಯವ್ರಾದ್ರು ಕೇಳ್ತಾ ಇದ್ದಾರ ಅಂತ? ಅದರ ಬಗ್ಗೆ ಅಷ್ಟೊಂದು ತಲೆ ಕೆಡ್ಸಿಕೊಂಡ ಹಾಗೆ ಕಾಣಿಸ್ತಾ ಇಲ್ಲ. ಅತ ಏನೋ ಹೇಳ್ಬೇಕು ಹೇಳ್ತಿದಾನೆ, ಅಷ್ಟೆ. ನಿಜ್ವಾಗಿ ಅಷ್ಟೇನ? ನನ್ಗಂತೂ ಈಗ ಗೊತ್ತಿಲ್ಲ.
ಕಾಲಕ್ಕೆ ರೂಪ ಅಂತ ಒಂದು ಕಂಡಿತವಾಗಿಯು ಇದೆ,
ಆದ್ರೆ
ಕಾಲ ಅದೆಷ್ಟು ಸ್ವತಂತ್ರವಾಗಿ ಹೋಗಿದೆ ಅಂದ್ರೆ ಅದ್ಕೆ ಪ್ರತಿ ರೂಪಾನೇ ಇಲ್ಲ. ನಂಗೆ ಅನ್ಸೊ ಮಟ್ಟಿಗೆ ಹೇಳೋದಾದ್ರೆ ಅದ್ಕೆ ಎಂದೂ ಪ್ರತಿ ರೂಪ ದಕ್ಕೋದಿಲ್ಲ. ಆದ್ರೆ ನಾವ್ಗಳು ರೂಪ ಕಾಣ್ತೇವ, ಕಾಣೋದಕ್ಕಾದ್ರು ಹಂಬಲಿಸ್ತೀವ, ಇಲ್ಲ. ನಮ್ಗೆ ಪ್ರತಿ ರೂಪಾನೆ ಬೇಕು. ಇಷ್ಟಕ್ಕೂ ಆದದ್ದಾರು ಏನು? ಅವ ಶಂಕರಪ್ಪ. ಅವ ಮಾತಾಡ್ತಾ ಇದ್ದಾನೆ. ಒಂದು ಹಂತದಲ್ಲಿ ಸುಮ್ಮನೆ ಮಾತಾಡ್ತ ಇದ್ದಾನೆ.
ಆದರೆ
ನಾನು ಅವನನ್ನು ಸುಮ್ಮನೆ ಹುಡುಕಿದ್ದ? ಇಲ್ಲ, ಒಂದು ತುಡಿತಕ್ಕೆ ಹುಟ್ಟಿಸಿದೆ. ಕಣ್ಣೆದುರಿಗಿನ ಪ್ರಪಂಚ ಒಟ್ಟಾಗಿ ಒಂದು ಸ್ಥಬ್ದಚಿತ್ರದಂತೆ ಕಂಡಾಗ ಭಯವಾಗಿ
ಜೀವ ಎಲ್ಲಿದೆ?
ಅಂತೇಳಿ ಹುಡುಕಾಟಕ್ಕೆ ಸಿಕ್ಕು ನರಳಿ ತೊಳಲಿದಾಗ, ಇಲ್ಲ ಈಗ ಇದು ಬೇಕು ಅನ್ನೋ ಮಟ್ಟಕ್ಕೆ ಹೋದಾಗ ಶಂಕರಪ್ಪನ್ನ ಸೃಷ್ಟಿಸಿದೆ. ಈಗ ಅದು ಸ್ವತಂತ್ರವಾಗಿದೆ. ಅದರ ಮಾತುಗಳನ್ನು ಕೇಳುತ್ತಾ ಕೇಳುತ್ತ ಹಲವು ಸಂಗತಿಗಳು ನೆನಪಾಗುತ್ತಲಿವೆ. ಆದ್ದರಿಂದ ನನಗೂ ಹೇಳಬೇಕೆನಿಸುತ್ತಿದೆ ಆದರೆ ಕೇಳುವವರ್ಯಾರು? ಅಸಲು ಶಂಕರಪ್ಪ ನಂಗೆ ಅಂತ ಹೇಳ್ತಾ ಇದ್ದಾನ ಅದೇ ತಿಳಿದಿಲ್ಲ. ಹಾಗಾದರೆ ನಾನು ಯಾರಿಗೆ ಅಂತ ಹೇಳಲಿ, ಇನ್ನು ಮುಂದೆ ನನ್ನ ಪಾಡಿಗೆ ನನೂ ಹೇಳುತ್ತಿರುತ್ತೇನೆ ಅಷ್ಟೆ.
ಶಂಕರಪ್ಪ,
"ನಂಗೆ ಎಲ್ಲಾ ನೆನಪಾಗ್ತಾ ಇದೆ. ಅಯ್ಯೋ ಎಷ್ಟೆಲ್ಲಾ ಮಾಡಿದೆ ,ಮಗನ್ನ ಓದ್ಸಿದೆ, ಮಗಳಿಗೆ ಮದ್ವೆ ಮಾಡಿದೆ,ಒಳ್ಳೇ ಮನೆ ಕಟ್ಟಿದೆ, ಎಲ್ಲಾ ನೆನಪಾಗ್ತ ಇದೆ.
ನಂಗೆ ಬೆಕ್ಕು ಅಂದರೆ ಭಯ ಈಗ್ಲು ಭಯ ಯಾಕೆ? ಕನಸಲ್ಲಿ, ಕನ್ಸ ಅಂದ್ರೆ ?
ಆ ಕನ್ಸಲ್ಲಿ ನಾನು ಓಡ್ತಾ ಇದ್ದೆ. ನನ್ನಿಂದೆ ಬೆಕ್ಕು ಅಟ್ಟಿಸ್ಕೊಂಡು ಬರ್ತಾ ಇತ್ತು.
ಭಯ ಬಿದ್ದು ಓಡ್ತಾನೇ ಇದ್ದೆ. ಅಲ್ಲೊಂದು ದೊಡ್ಡ ಕಟ್ಟಡ ಇತ್ತು.
ಅಮ್ಮಾ ಹೇಳ್ತಾ ಇದ್ರು ಅಲ್ಲೀಗೆ ಹೋಗ್ಬೇಡ, ಶಿಡ್ಲು ಹೊಡ್ದಿರೋ ಕಟ್ಟಡ ಯಾವಾಗ್ಬೇಕಾದ್ರು ಬೀಳ್ಬೋದು ಅಂತ.
ಆದ್ರೆ ಏನ್ಮಾಡೋದು
ಹಿಂದ್ನಿಂದ ಬೆಕ್ಕು ಅಟ್ಟಿಸ್ಕೊಂಡು
ಬರ್ತಾ ಇತ್ತು,
ನಾನು ಆ ಶಿಡ್ಲು ಹೊಡ್ದಿರೋ ಮನೇಗೆ ಹೋದೆ.
ಅಲ್ಲೂ ಬಿಡ್ಲಿಲ್ಲ ನನ್ನನ್ನ ಬಂದು ಕಚ್ಚೇ ಬಿಡ್ತು.
ನಾನು ಜೋರಾಗಿ ಕಿರ್ಚುಕೊಂಡೆ.
ಕಿರ್ಚಿದ ಶಬ್ದಕ್ಕೇ ಇಡೀ ಕಟ್ಟಡ ಬಿತ್ತು.
ದೊಡ್ಡ ಶತಮಾನಗಳಷ್ಟು ಹಳೆಯ ಕಟ್ಟಡ,
ಮೊದಲ ಏಟಿಗೇನೆ ಬೆಕ್ಕು ಸತ್ತಿತು.
ನಂತರ ನಾನೂ ಸತ್ತೆ.
ಇದು ಕನ್ಸು.
ಅಂದ್ನಿಂದ ನಂಗೆ ಬೆಕ್ಕು ಅಂದ್ರೆ ಬಾರೀ ಭಯ ಹಾಗು ಕೋಪ ಒಂತರಾ ದ್ವೇಶ.
ಬೆಕ್ಕು, ನಾ ಸುಮ್ನೆ ಇದ್ನಾ?
ಇಲ್ಲಾ ಹಿಡ್ಕೊಂಡೆ.
ರಂಗಂಗೆ ಹೇಳಿ, ಅದೂ ಹೇಗಿತ್ತು, ನಾವು ಅದನ್ನ ಹೇಗೆ ಹಿಡಿದ್ವಿ
ತಣ್ಣಗಿರೊ ಹಾಲನ್ನ ಇಟ್ಟು,
ಸತ್ತ ಇಲಿ ಇಟ್ರೆ ಬರೋಲ್ಲ ಅಂತೇಳಿ ಮೊದ್ಲು ಬದ್ಕಿರೊ ಇಲೀನ,
ಅದ್ಕೆ ಚಕ್ಲಿ ಆಸೆ ತೋರ್ಸಿ ಬೋನಲ್ಲಿ ಹಿಡ್ದು,
ಅದ್ರ ಕಾಲ್ಗೆ ದಾರ ಕಟ್ಟಿ ಓಡಾಡೋಕೆ ಬಿಟ್ವಿ.
ಬೆಕ್ಕು ನೋಡ್ತು, ಸಿಕ್ತು ಅಂತ ಹಿಡ್ಕೊಂತು.
ನಾವು ಅಂದ್ಕೊಂಡಿದ್ವಿ ಅದು ತಿಂದುಬಿಡುತ್ತೆ ಅಂತ.
ಅದು ಆಟ ಆಡೋಕೆ ಶುರು ಮಾಡ್ತು
ಇದೆ ಸರ್ಯಾದ ಸಮ್ಯ ಅಂತೇಳಿ ತಂತಿ ಬಿಗಿದ್ವಿ ನೋಡಿ ಎಳೆದ್ವಿ ನೋಡಿ ಭಯಂಕರವಾಗಿ ಕಿರ್ಚುತ್ತಾ ಇತ್ತು.
ಹಾಗೇ ಅದನ್ನ ನೋಡ್ತಾ ಇದ್ದೆ.
ಕೈ ಕಾಲು ಒದ್ದಾಡ್ತಾ ಇತ್ತು.
ನಾನು ಜೋರಾಗಿ ನಗ್ತಾ ಇದ್ದೆ.
ಅದು ಉಸ್ರು ಇರೋ ವರ್ಗು ನನ್ನನ್ನೇ ನೋಡ್ತಾ ಇತ್ತು.
ಅದಕ್ಕೆ ಎಷ್ಟು ಕೊಬ್ಬಿರಬೇಡ ಅಂತ ಅನ್ನಿಸ್ತು.
ದೊಡ್ಡ ಕಲ್ಲು ತಗೊಂಡೆ,
ತಲೆ ಮೇಲೆ ಒಂದೇ ಏಟು,
ರಕ್ತ ಬಂದು ಹಣೆಗೆ ತಾಕಿತು.
ಕೊಂದಾಕಿದ್ದೆ . ಸಾಯಿಸಿಬಿಟ್ಟಿದ್ದೆ . ಬೆಕ್ಕನ್ನ ಸಾಯಿಸಿಬಿಟ್ಟಿದ್ದೆ .
ಇಷ್ಟು ಕ್ರೂರವಾಗಿ ಕೊಂದರೂನು ಬೆಕ್ಕಿನ ಭಯ ನಂಗೆ ಹೋಗ್ಲಿಲ್ಲ .
ಅದ್ಕೆ ಅಮ್ಮ ಹೇಳಿದ್ರು ಅಂತ ಮದ್ವೆ ಆದೆ.
ರಂಗಿ ರಂಗನಾಯಕಿ ಅಂತ ಹೆಸರು.
ಹಾಸ್ಗೆ ಮೇಲೆ ಪಕ್ಕಾ ಮಲಗ್ತಾ ಇದ್ಲು
ದಿನಾಲು.
ಅದ್ಕೆ ಯಾವತ್ತು ರಾತ್ರಿ ಬೆಕ್ಕು ಕನ್ಸಲ್ಲಿ ಬರ್ಲೇ ಇಲ್ಲ.
ಬೆಕ್ಕೀಗ್ ಭಯ ಬಿದ್ದು ಅವ್ಳನ್ನ ತಬ್ಕೋತಾಇದ್ದೆ.
ಮಕ್ಳಾಗ್ಬಿಟ್ರು.
ಆಮೇಲೆ ಬೆಕ್ಕು ನೆನ್ಪೇ ಆಗ್ಲಿಲ್ಲ."
ನಾನು ಮೊಹನ ಮಾತಾಡ್ತ ಇದ್ದೀನಿ
"ಎದುರಿಗೆ ಕಾಣ್ತಾ ಇತ್ತು.
ಕಾಣ್ತಾ ಇದ್ದದ್ದನ್ನ ಇದಲ್ಲ ಇದಲ್ಲ
ಅಂತ
ಹುಡುಕಿಕೊಂಡು ಇಲ್ಲಿಗೆ ಬಂದದ್ದು.
ಒಳಗೇನೋ ಇದೆ ಅಂತ.
ಸುಮ್ಮನೆ ಇದ್ದನಾ ಇಲ್ಲ.
ಕೂತು ಗಂಟೆಗಳು ದಿನಗಳು
ಹೀಗೆ ಹಾಗೇ ಕೂತು ಪ್ರಯತ್ನಿಸಿ ಹೊಕ್ಕುತ್ತಾ ಹೋದದ್ದು,
ಕಡೆಗೆ ವಿಙ್ಞಾನಿ ಆದದ್ದು.
ಪಕ್ಕಾ ಸತ್ಯ ಸಂಗತಿಗಳು ಪಕ್ಕಾ ವಾಸ್ತವ ಖುಶಿಯಲ್ಲಿದ್ದೆ.
ನಿತ್ಯ ಸಂಜೆ ಬೇಸರ ಆದಾಗ ಸಮುದ್ರ ತೀರಕ್ಕೆ ಹೋಗಿ ಕೂರುತ್ತಿದ್ದೆ.
ಪ್ರತೀ ಎದುರಿಗೆ ಕಂಡದಕ್ಕೂ ಪ್ರಶ್ನೆ,
ಸಂಜೆಗಳು ಕಳೆದು ಕತ್ತಲಾಗಿ ರಾತ್ರಿಯಾಗುವ ಪ್ರತೀ ಕ್ಷಣಕ್ಕೂ ಸಾಕ್ಷಿಯಾದೆ.
ಆದ್ದರಿಂದ ರಾತ್ರಿ ಆದದ್ದು ತಿಳಿಯಿತು.
ನಕ್ಷತ್ರಗಳು ನೋಡಿದೆ ನಗಲಿಕ್ಕಾಗಲಿಲ್ಲ.
ಪ್ರತೀ ನಕ್ಷತ್ರದ ಹೆಸರೂ ಗೊತ್ತಿತ್ತು.
ಅದರ ಪ್ರತೀ ಚಲನೆಯನ್ನೂ ಲೆಕ್ಕಚಾರ ಹಾಕಬಲ್ಲವನಾಗಿದ್ದೆ.
ನಾನು ಎದ್ದು ನಡೆದೆ.
ಹೆಚ್ಚು ಹೊತ್ತು ಅಲ್ಲಿ ಇರಲಾಗಲೇ ಇಲ್ಲ"
ಶಂಕರಪ್ಪ
"ಜನ ಇದನ್ನ ಮೆಜೆಸ್ಟಿಕ್ ಅಂತ ಕರೀತಾರಂತೆ. ನಾನು ಈಗ ಇದರ ಒಳಗೇ ಇದ್ದೀನಿ.
ಓ ಮೆಜೆಸ್ಟಿಕ್ ಮನುಷ್ಯ ಜೀವಿತದ ಸ್ವಪ್ನ ಸುಂದರಿಯೆ,
ಹಗಲು ಮುದುಕಿಯೇ ರಾತ್ರಿಯ ಅಪ್ಸರೆ ಸುಂದರಿಯೆ,
ನಡೆದಾಡುವ ರಸ್ತೆಗಳೆ ಓಡಿಹೋಗುವ ಕಟ್ಟಡಗಳೇ ನಿಂತೇ ಇರುವ ಬಸ್ಸುಗಳೆ
ನಾನು ನಿಮ್ಮನ್ನೆಲ್ಲಾ ನೋಡುತ್ತಿದ್ದೇನೆ ಬಹುಪರಾಕ್.
ಓ ಮಜೆಸ್ಟಿಕ್, ಮನುಷ್ಯ ಜೀವಿತವನ್ನು ಹುದುಗಿಸಿಟ್ಟುಕೊಂಡುಬಿಟ್ಟಿದ್ದೀಯೆ.
ಪ್ರತಿಮೆಗಳು ಸೋತಿಲ್ಲ.
ತೇಟ್ ಮೊಲದಂತೆಯೇ ಇರೋ ಪ್ರತಿಮೇನ ಕಸದ ಬುಟ್ಟಿಮಾಡಿ ಆಕರ್ಷಿಸುತ್ತಿದ್ದಾರೆ.
ನಿನ್ನ ನನ್ನಾ ಅಲ್ಲ ಕಸವನ್ನ.
ಹಾಗೆ ಮೋಟು ಬೀಡಿ ಸುಡ್ತ ಸುಡ್ತ ಸುಟ್ಟುಬಿಡಬೇಕು ಪ್ರತಿಮೆಗಳನ್ನ.
ಇಲ್ಲಾಂದ್ರೆ ನಿಜ್ವಾದ ಮೊಲಾನ ಕೊಂದು ಹಾಕ್ತಾರೆ.
ನಿನ್ನಲ್ಲಿಗೆ ಬೆಳಗಿನಿಂದ ಸಂಜೆಯವರೆಗೂ,
ಛೆ ನಿಂಗೆ ಬೆಳ್ಗು ಇಲ್ಲ ಸಂಜೇನೂ ಇಲ್ಲ. ಎಂದಾದ್ರು ಒಂದು ಕ್ಷಣ ಕಣ್ಮುಚ್ಚಿದ್ದೀಯ?
ನಿನಗೆಲ್ಲಿಯದು ಪುರುಸೊತ್ತು ಮುದ್ದಾದ ಗುಂಡುಮುಖದ ಹುಡುಗಿಯರು, ಅವರನ್ನ ಇವರೋ, ಇವರನ್ನ ಅವರೋ ನೋಡುತ್ತಾ ನಡೆಯುವ ನಿತ್ಯ ನೈಮಿಕ ಕ್ರಿಯೆ.
ಅಲ್ಲಿ ನೋಡು ಸೆರೆಗೊದ್ದಿಸಿಕೊಂಡು ಹಾಲು ನೀಡುತ್ತಿದ್ದಾಳೆ.
ಯಾವ ಪಡಪೋಶಿ ನಡೆದರೂ ದಿಕ್ಕು ಕೇಳುವವರಿಲ್ಲ ಇಲ್ಲಿ.
ಯಾವ ಬಸ್ಸು ಎಲ್ಲಿಗೆ ಹೋಗಬೇಕು ಅಷ್ಟೆ ಇಲ್ಲಿ.
ಶಂಕರಪ್ಪ ಆಕಾಶ ನೋಡ್ತ ಇದ್ದಾನೆ, ಮತ್ತೆ ಅಲ್ಲಿರೊ ಮರ, ಆಮೇಲೆ ಹಾಗೆ ನೋಡ್ತಾ ಇದ್ದಾನೆ. ಅವ ನೋಡ್ತಾ ಇದ್ದಾನೆ ಅಂತೇಳಿ ನಾನೂ ನೋಡೊಕೆ ಶುರು ಮಾಡಿದೀನಿ. ಇದೆ ಆಕಾಶ ನೋಡ್ತಾ ಇದ್ದೀನಿ. ನೆಲ ಕುಸಿತಾ ಇದೆ. ಏನೇನೋ ಭಾವಗಳು ಕಾಡ್ತಾ ಇದೆ. ನಾನು ತೇಲ್ತ ಇದ್ದೀನಿ. ಅಯ್ಯೋ ನಂಗೇ ತಿಳೀದೆ ಇರೋ ರೀತಿ ನಾನು ತೇಲ್ತ ಇದ್ದೀನಿ. ಈ ಊರು, ಈ ತಾಲೂಕು, ಈ ರಾಜ್ಯ, ಕಡೆಗೆ ಈಗೆ ದೇಶ ಎಲ್ಲಾನು ದಾಟಿ ವ್ಯಾಪಿಸ್ತಾ ಇದೆ. ನಾನೇ ವ್ಯಾಪಿಸ್ತ ಇದ್ದೀನಿ. ನೊಡ್ತ ನೋಡ್ತಾನೆ ಬೆಳೀತಿದೀನಿ. ಇಲ್ಲಿ ಎಲ್ಲವೂ ಚಲಿಸ್ತಾ ಇದೆ, ಹೊರಗೆ ಸ್ತಬ್ದವಾದಂತೆ ಕಂಡವುಗಳು ಇಲ್ಲಿ ಚಲಿಸ್ತಾ ಇದೆ. ಶಂಕರಪ್ಪ ಆಕಾಶ ನೋಡ್ತಾನೇ ಇದಾನೆ.
ಶಂಕರಪ್ಪ
"ಏನೂ ನೆನಪಾಗ್ತಾ ಇಲ್ಲ ನಾನು ಇಲ್ಲಿ ಇದ್ದೀನಿ. ಆದರೆ ಅವಳು ನೆನಪಾಗ್ತಾ ಇದ್ದಾಳೆ.
ಎಪ್ಪತ್ತು ವರ್ಷ ನಂಗೀಗ.
ಆದ್ರು ಅವಳನ್ನ ಮರ್ಯೊಕೆ ಆಗಿಲ್ಲ.
ಅವ್ಳ ಜೊತೆ ಎಂದೂ ಮಾತಾಡಲೇ ಇಲ್ಲ"
ನಾನು ಮೋಹನ ಮಾತನಾಡುತ್ತಿದ್ದೀನಿ
"ಮನುಷ್ಯ ಪ್ರೀತಿ. ಅಥವ ಅದೆನ್ನೆಲ್ಲವನ್ನ ಮೀರಿದ ಪ್ರೀತಿ.
ನೀನು ಕಂಡದ್ದನ್ನ ನಾನು ಕಾಣುತ್ತೀನ..?
ಅವಳು ಹೌದು ಅವಳು ಇದೆ ಮೆಜೆಸ್ಟಿಕ್,
ಅವತ್ತು ಇಲ್ಲಿ ನಿಂತಿದ್ದದು ಒಂದು ಪ್ರಾಣಿ,
ಹೆಗ್ಣಾನೋ ಇಲೀನೋ ತಿಳ್ಯದ ಪ್ರಾಣಿ ಒಂದು ನನ್ನನ್ನೇ ತಿಂದು ಹಾಕೋ ರೀತಿ ನೋಡ್ತ ಇತ್ತು.
ಅವತ್ತು ನಂಗೆ ಬೇರೆ ಕೆಲ್ಸಾ ಇರ್ಲಿಲ್ವೋ ಅತ್ವಾ
ಇದನ್ನ ನೋಡೋ ಬಯ್ಕೆ ಆಯ್ತೋ
ಒಟ್ನಲ್ಲಿ ಮೊದಮೊದಲಿಗೆ ಸುಮ್ಮನೆ ನೋಡ್ತಾ ಇದ್ದೋನು
ಅದರ ಕಣ್ಣುಗಳ
ಜೊತೆಗೆ ಸಂಬಾಷಣೆಗೆ ನಿಂತು
ಅದ್ರ ಪ್ರತಿ ಚಲ್ನೇಗೂ ಸೇರಿ
ಅದರೊಳಗಿನ
ಆಲೋಚನೆಯ ಸ್ಥಾನಕ್ಕೆ
ಪ್ರಙ್ಞೆ ಅನುರಣನೆಗೊಂಡು
ಒಂದಕ್ಕೊಂದು ಚಲಿಸಲು ಆರಂಭ ಆದಾಗ
ಕಣ್ಣು ದೇಹ ನಂತರ ಬುದ್ದಿ ಕಡೆಗೆ ನನ್ನ ಮನ್ಸೂ
ಎಲ್ಲಾನೂ ಸೇರಿ
ಆ ಪ್ರಾಣಿ
ಆ ಕ್ಷಣದ
ಜೊತ್ಗೆ
ಮೀಟೋಕೆ
ಶುರು
ಆದಮೇಲೆ
ಒಮ್ಮೆಲೇ
ನನ್ನನ್ನ
ತಬ್ಬಿಕೊಂಡು
ಅವಳು
ಹೋದಾಗ
ನಾನು
ಅವಳನ್ನ
ಕಂಡೆ.
ಆಗಲಿಂದ ನಾನು ಅವಳನ್ನ ಹುಡುಕುತ್ತಲೇ ಇದೀನಿ"
"ಶಂಕರಪ್ಪೊರೆ ನಿಲ್ಲಿ"
ನಾನೂ ಬರ್ತಾ ಇದ್ದೀನಿ......
ನಾ ಬರ್ತಿದ್ದಿನಿ....
ಸರಿ, ನಾ ಹೋಗ್ತಾ ಇದ್ದಿನಿ........