ಪ್ರತಿಮಾ ಸೃಷ್ಟಿ

ಬೆಂಕಿ ಇಲ್ಲ  ವಿಪರೀತ ಚಳಿ
ದಿನ ಪತ್ರಿಕೆಗಳು 
ಸುಮಾರು ಹಲವಾರು ಕಾಲದ್ದು
ಕತ್ತರಿಸಿ ಉರಿವ ಬೆಂಕಿ ಚಿತ್ರಗಳ  
ಶಿರೋನಾಮೆಯ ಸಹಿತ
ಕೈ ಕಟ್ಟಿ ಕುಳಿತು
ಹರವಿಕೊಂಡು ಮುಂದೆ
ವಿಪರೀತ ಚಳಿ

ಹೊತ್ತಲ್ಲದ ಹೊತ್ತು
ಪತ್ರ ಮಾರಲಿಕ್ಕಲ್ಲ ತೂಕಕ್ಕೆ
ತುಕ್ಕಿನ ಪೋಸ್ಟ್  ಬಾಕ್ಸುಗಳು
ಸಂಗ್ರಹಕಾರನ ಸ್ವತ್ತು
ಎಂಟಾಣೆ ಸ್ಟಾಂಪ್ ಕಾಗದವೂ

ಹೂವು ಪಾರಿಜಾತ
ಅತೀ ಸಣ್ಣಗೆ ಸೂಕ್ಷ್ಮ
ಕೊಯ್ದ ರಕ್ತನಾಳ
ಕಳೆದ ಚೂಡಾಮಣಿ
ನೆನಪು ಆಕಾಶಮಲ್ಲಿಗೆ
ಬಿದ್ದಿರಲೇ ಬೇಕು ಈ ಜೋರು ಮಳೆಗೆ 

ಜೀರುಂಡೆ ಪಳ ಪಳ
ತಾಕಿ ಬಣ್ಣ ಮೈ ಬದಲಾಗಿ
ಚೀರುತ್ತಿದೆ ಹಕ್ಕಿ
ಯಾಕಾಗೋ ಏನು  ಕತೆಯೋ
ಡೆಲಿವರಿಗೆ ಬಂದ ಬಾಕ್ಸೊಳಗಿನ
ಗಡಿಯಾರದ ಟಿಕ್ ಟಿಕ್ ಸದ್ದಿಗೆ
ಮಧ್ಯವಯಸ್ಕನ ಎಪ್ಪತ್ತರ ದಶಕದ
ಭಾವಗೀತೆಗೆ
ಅಮಲು ಮೈಲಿಗೆ

ರೆಕ್ಕೆಯಿಲ್ಲದೆ ಬಿದ್ದಿದೆ ರಾಶಿ
ಎಲ್ಲೆಂದರಲ್ಲೆ ರಾತ್ರಿ ಮಳೆಗೆ
ಮಳೆಹುಳು   ಗೆದ್ದಲು
ಹುತ್ತದೊಳಗಿಂದೆಲ್ಲವೂ ಒಮ್ಮೆಗೆ
ಹಾರಿವೆ ರೆಕ್ಕೆ ಬಡಿದು
ಇರುವೆ ಜಿರಲೆ ಹಕ್ಕಿ ಕಾಗೆ
ಬರೋಬ್ಬರಿ ಭೋಜನ
ಮಳೆ ಬರುವ ಹೊತ್ತು

ಜೋರು ಮಳೆ 
ಧಗಧಗನುರಿವ ಹಸಿರು ಮರ  
ಮರದ್ದು ಹೊಸಿಲು
ಮನೆ ದೂರ
ನೆಂದಿದ್ದೇನೆ, ಭಯ ಬಿದ್ದಿದ್ದೇನೆ
ಚಳಿಯಿದೆ, ಬೆಂಕಿ ಉರಿಯುತ್ತಿದೆ. 

ಮಳೆ ಬಂದು ನಿಂತ ನೀರು
ಮರಗಳೆಲೆಯ
ಬಿಂಬವ ಫೋಟೋ ತೆಗೆಯಬೇಕು
ಕೊಂಬೆಯ ಮೇಲಿನ ಹಕ್ಕಿ ಹಾರಿದೆ
ಬಿದ್ದ ಹನಿ ನೀರು
ಎಲ್ಲವನ್ನೂ ಕದಡಿದೆ 

...

ಕಾಲು ಚಾಚಿ ಆಕಳಿಸಿದ ಗೂಡೋ
“ಶಿಷ್ಯರೇ ……"
ತಿರುಗಾಟದ ಬಿಕ್ಷು
ಕೈ ಕೋಲು ಮುರಿದು ಕೊಡೆ ಹರಿದಾಗ
ಹೇಳಿದ - ಬುದ್ಧನದ್ದು ಬಹಳ ಸುಲಭ
ಹಸಿದಾಗ ತಿನ್ನು ಬಾಯಾರಿದಾಗ ಚಾ ಕುಡಿ
ಚಳಿಯಾದಾಗ ಬೆಚ್ಚಗೆ ಹೊದೆ
ಅಷ್ಟೇ ….

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...


ನೆಲವ ಜೋರು ಕುಟ್ಟಿ
ಕೋಲ ತುದಿಯಿಂದ
ಗೋಕು ಹೇಳಿದ
ಬುದ್ಧನೊಳಗಿರುವ
ಭೂತ ವರ್ತಮಾನ ಭವಿಷ್ಯದ
ಸತ್ಯವೂ
ನಂಬಿಕೆಯ ಪೂರ್ವೀಕರಿಂದ ಪಡೆದೆದ್ದೆಲ್ಲವೂ
ಈ ಕೋಲ ತುದಿಯಲ್ಲಿದೆ
ನೋಡಿ ನೋಡಿ
ಎಂದೇಳುತ್ತಲೇ ಮೇಲೆದ್ದವ
ಹಾಗೇ  ಹೊರಟು ಹೋದ[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]

...

ಡೈಗು ಎಂದರೇನೇ  ಶತ ಮೂರ್ಖ
ಹೆಸರು, ಅವನಿಗವನೇ ಇಟ್ಟುಕೊಂಡ
ಮಹಾನ್ ಕುಡುಕ
ಅಮಲು ಕೋಪಿಷ್ಠ ಸದಾ
ಮಾತೆತ್ತಿದರೆ ಬೈಗಳು, ಬಿಕ್ಷು

“ವೃಣ ಶರೀರವನ್ನು ಸೂಜಿಗಳು ಚುಚ್ಚುತ್ತಿವೆ
ಬದುಕೆಂಬುದು ಖಾಯಿಲೆಯಂತೆ - ಏನಿದರರ್ಥ ?
ಕಣ್ಣಿಗೇನೇನು ಕಾಣುತ್ತದೆಯೋ ಎಲ್ಲವೂ
ನಿಜವಾಗಿಯಾದರೆ ಒಂದೇ ದಿನದಲ್ಲರಳುವ ಹೂವು ಮಾತ್ರ"


ಮೂರು ದಿನ ಮುಂಚೆ
ಚರಮ ಗೀತೆ ಬರೆದ
“ತಾನೆಷ್ಟು ವಿಶಿಷ್ಟನೆಂದು"
ಮೂರು ದಿನದ ನಂತರ
ಕಾಗದ ಕೇಳಿದ
ತಂದವನನ್ನು ಹೊಡೆದು ಅಟ್ಟಿದ
ಮೂರನೆ ದಿನ ಇಲ್ಲವಾದ.


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ. ]