ರೂಮಿಯ ಕವನನಾದರೂ
ಓದೇ ಹುಡುಗಿ
ನಿನ್ನದೇ ಅನುವಾದವಿರಲಿ
ಅವನ ಹುಡುಕಾಟವ ಹುಡುಕಲಿಕ್ಕೆ
ಈ ಆಸುಪತ್ರೆಯೇ ಮೇಲಲ್ಲವೇ
ನಿನ್ನಜ್ಜನ ಗುರುತೇನು ನೆನಪಿಲ್ಲವಲ್ಲೇ
ಈಗಲಾದರೂ ಸಿಕ್ಕಾನೇನೋ
ಯಮನ ತೋಟದಲ್ಲಿ
ಬುಡ ಇಲ್ಲದಾ ಗಿಡದಲ್ಲಿ
ನೀಲಿ ಹೂ ಒಂದು ಅರಳಿರುತ್ತಂತೆ
ಯಮನಿಗೆ ಭೋ ಪರಾಕ್ ಹೇಳೋಕೆ
ತಂದು ಕೊಡ್ತಿನಿ ಅದನ
ಅಂದಿದ್ದವ ಬಾರಲೇ ಇಲ್ಲ
ತೊಂಬಾತ್ತೈದು ದಾಟಿದವರ್ಯಾರೋ
ಕೂಗುತ್ತಲೇ ಇದ್ದಾರೆ
ಪಕ್ಕ ವಾರ್ಡಿನಲ್ಲಿ
ದೊಡ್ಡ ಮಗ ಬರಲಿಲ್ಲೆಂದು
ಚಿಕ್ಕ ಮಗನಿಗೆ ಮುನಿಸು
ಸೊಸೆ ಬಿಟ್ಟಾಳೆಂದು
ಮಗಳ ನೋವು
ನಾ ಬದುಕಿರಬೇಕೇಕೆ
ಎಂಬುದೆಲ್ಲರ ಪ್ರಶ್ನೆ
ಅವ ಬಾರಲೇ ಇಲ್ಲವಲ್ಲ
ಈ ಹೊತ್ತಲ್ಲೂ
ನೀಲಿ ಹೂವ ಹಿಡಿದು
ಬಸಿರಲ್ಲಿ ರಕ್ತ ಕಾರಿ ಸತ್ತ ಮಗಳಾಗಲೀ
ಮತಿಗೆಟ್ಟು ಬೆಟ್ಟ ಹತ್ತಿ ಕೂಗುತ್ತಾ ಹೋದ ಮಗನಾಗಲೀ
ಬಂದೇನೆಂದು ಎಂದೂ ಬಾರದ ತಂಗಿಯಾಗಲೀ
ಯಾರೋ ಅಪ್ಪನ ಕಡೆಯವರು
ಮತ್ತಿನ್ಯಾರೋ ಮಗನ ನೆಂಟರು
ಯಾರೋ ಯಾರೋ
ಯಾರೆಂದರೆ ಯಾರೂ ನೆನಪಿಲ್ಲವಲ್ಲೇ ಹುಡುಗಿ
ಕಡೆಗೆ ರೂಮಿಗೂ ಹೀಗೆಯೇ ಆಗಿತ್ತಂತೇನೆ?
ಯಮನ ತೋಟದ ನೀಲಿ ಹೂವ ಹಿಡಿದ ಆ
ಹುಡುಗ ಮತ್ತೆ ಮತ್ತೆ ಕಾಡುತಾನೆ
ಕಾಡೆಲ್ಲಾ ಬೆಂಕಿ ಬಿದ್ದು ಉರಿದರೂನೂ
ಹೂವ ಹಿಡಿದು ಬರುತಾನೆ
ಒಮ್ಮೆ ಈ ಬಾಗಿಲು ತೆಗೆದಾಗ
ಆಸುಪತ್ರೆಯ ಬಾಗಿಲು ತೆಗೆದಾಗ
ರೂಮಿ ಬಂದಿದ್ದ
ನನಗಾಗಿ
ರೂಮಿ ಬಂದಿದ್ದ
ನೀಲಿ ಹೂವ ತಂದವನ ಹುಡುಕಿ
“ಎಲೇ ಹುಡುಗಿ
ಅವ ಕೊಯ್ದು ತರಲಿಲ್ಲವೇ
ನನ್ನಲ್ಲಿಂದ ಕದ್ದು ತಂದನೇ
ತಿರುಗಿ ಕೊಡು ಆ ನನ್ನ ನೀಲೀ ಹೂವ
ನನ್ನವಳು ಕಾದಿದ್ದಾಳೆ ಅಲ್ಲೆಲ್ಲೋ”
“ಕಾದಿದ್ದರೇನಂತೆ ? ಅದು ನೀಲೀ ಹೂ
ತಂದವನು ನನ್ನವನು ನನಗಾಗಿ
ಸಾಕಲ್ಲವೆ ಒಲ್ಲೆ ನಾ ಕೊಡಲಾರೆ”
ಹುಡುಗಿ ನಿಲ್ಲಿಸು ನಿನ್ನ ಅನುವಾದವ
ಓದಬೇಡ
ರೂಮಿ ಆ ನೀಲಿ ಹೂ ಹೊತ್ತೊಯ್ದ
ಆ ಹುಡುಗನನೂ ಕೊಂಡೊಯ್ದ
ನಾನಿಲ್ಲಿ ನಾನಿಲ್ಲಿ ಈ
ಆಸುಪತ್ರೆಯಲ್ಲಿ -
ಕವನ ಬೇಡ ಹುಡುಗಿ
ಬರಬಹುದೇನೋ
ನೀಲಿ ಹೂವಿನೊಟ್ಟಿಗೆ ಆ ಹುಡುಗ