ಸಂಚಲನದ ಸುತ್ತೆಲ್ಲಾ
ಸುತ್ತಿ ಸುತ್ತಿ
ಸೋತ ಸೋಗಲಾಡಿಯ ಮುಂದೆ
ಮಾರಣ ಹೋಮಕ್ಕೂ ಮಧುಮಾಸಕ್ಕೂ
ಮದ್ಯದಲ್ಲಿ ಮಾಲಿನಿಯೂ ಮಧ್ಯವೂ ಮನನವೇ ಆಗಿ
ಮಾರನ ಮರೆವು ಮರೆತು
ಮತ್ತೇ ಮರೆಯಾದಾಗ
ಮಿರಿಮಿರಿ ಮಿಂಚುವ ಅಂಚುಂಟಲ್ಲಾ
ಅಲ್ಲಿ ತೆರೆದಿತ್ತು ಮಾಂತ್ರಿಕ ವಿನ್ಯಾಸ
ವಿನ್ಯಾಸದ ಹದ್ದುಗಳಿಗೆ
ಬಣ್ಣ ತುಂಬುತ್ತಾ ಆಡಿದ ಆಟಕ್ಕೆ
ಅನಿಮಿತ ಏಕತಾನತೆಯ
ಅನಿಯಂತ್ರಿತ ಚಲನೆಗೆ
ಪೆಟ್ಟಾಕಿ ಪಟ್ಟಕ್ಕಿಟ್ಟದ್ದು ಸೃಷ್ಟಿಶೀಲತೆ
ವ್ಯಾಖ್ಯಾನದ ಪರಿಹದ್ದಿಗೆ
ಆ ವಿನ್ಯಾಸಗಳಿಗೇ ಭಯ ಎನ್ನುವಾಗ
ಹಾಸು ಹೊಕ್ಕಿನ ಪ್ರತೀ ನೇಯ್ಗೆಯ
ಅಂಚು ಅಂಚಿಗೂ ಕೂಡಬೇಕು
ಸಾದ್ಯವಾದರೆ ಕಳೆಯಬೇಕು
ಎಲ್ಲದರ ಸಾಮ್ಯವನ್ನೊಪ್ಪುವಂತಾಗುವ
ಸಮರೂಪಕ್ಕೆ ಸರಿಸಮವಾಗಿ
ರೂಪವುಕ್ಕಬೇಕು
ಮತ್ತೆಂದು ಮತ್ತೆ ಮತ್ತೆ ಮರೆವು ಮರುಕಳಿಸಿ
ಮರೆಯಾದ ಮಾತ್ರಕ್ಕೆ ಮಮ್ಮಲ ಮರುಗಿ
ಮತ್ತಳಾದೆನೆಂದೇನೂ ಸುಮ್ಮನಾಗಿಸುವುದಲ್ಲ
ಭದ್ರಕ್ಕೆ ಭಯದ ಬೇರಿಗೆ
ಬಾರಯ್ಯ ಬಾರೋ ಬೇಗ ಬಾರೋ
ಬಗೆ ಬಗೆ ಬಕುತಿಗೆ
ಬಗೆ ಬಗೆ ಉರಿತಕ್ಕೆ
ತೆರೆದ ಆ ಕ್ಷಣಕ್ಕೆ
ತೆರೆಯಲೇ ಬೇಕಾದ ಈ ಭಾಗ್ಯಕ್ಕೆ
ಕರೆಯದೆ ಕರಹಿಡಿದವಳ
ಕಪಾಲದಲ್ಲಿ ಕಿರುಗುಡುವ
ಆ ಕ್ರೀಗೆ
ಲೆಕ್ಕದೆಲ್ಲಾ ಹಕ್ಕಿನ ಬಲೆಯ ಬಗೆಗೆ
ಬಾರಕ್ಕೆ ಅತೀ ರಂಜಕತೆಗೆ
ನಿಶ್ಚಿತತೆಯ ಪ್ರಪಂಚವು ಒಗ್ಗುವುದಿಲ್ಲ
ಅನಿಶ್ಚಿತತೆಯೆ ಈ ವಿಶಿಷ್ಠ ವಿನ್ಯಾಸದ ಮೂಲ ಆಧಾರ
ಕಣ್ಕಟ್ಟಿನಿಂದ ಹೊರದಬ್ಬುವ ಮಾರನ ಮಯೂರ
ಮೂಲಾದಿಮೂಲದಲ್ಲಿರುವುದೇನಿದ್ದರೂ ಯಾದೃಚ್ಛಿಕತೆ
ಅಲ್ಲಿಂದ ಸೇರಿದ್ದು ಒಪ್ಪ ಓರಣಗೊಂಡದ್ದು
ಕ್ರಮದ ವ್ಯವಸ್ಥೆಯೊಂದೊಪ್ಪಿಕೊಂಡದ್ದು ಕೊಂಡಿಯಂತಾದದ್ದು
ಅಪ್ಪಟ ಖೇಯೋಸ್
ಚೈತನ್ಯದಾಳದಲ್ಲಿ ಆ ವಿಕಾಸಕ್ಕೆಲ್ಲಾ
ಮತ್ತೆಲ್ಲಾ ಸ್ವರೂಪದಾವರಣಕ್ಕೂ
ಕಾರಣವಲ್ಲದ ಆದಿಕಾರಣವು ಕಾರಣ
ಯಾದೃಚ್ಛಿಕತೆ
ಆಯ್ಕೆಯಲ್ಲ ಉತ್ತರವಲ್ಲ
ಚೈತನ್ಯದ ಸ್ವರೂಪವಡಗಿರುವುದಲ್ಲಿ
ಸ್ವರೂಪವೆಲ್ಲವೂ ಚೈತನ್ಯವಾದುದಲ್ಲಿ