ಚರಿತ್ರೆ




ಹಳೇ ಪೇಪರ್ನಿಂದ ಮಾಡಿದ ಕಾಗದದ ಕ್ಯಾಮರಾದಲ್ಲಿ
ಕ್ಲಿಕ್ ಅನ್ನಿಸಿ
ಕೈಯಲ್ಲೇ ಚಿತ್ರವನ್ನು ಬರೆದು
ಇಗೋ ಫೋಟೋ
ಅಂತ ಕೊಡುವುದರೊಂದಿಗೆ ನನ್ನ ಕ್ಯಾಮರಾಯಾನ ಆರಂಭವಾಯಿತು.

ಚಂದಮಾಮದ ಮಾಯ-ಮಂತ್ರದ ಕತೆಯ ಪಾತ್ರಗಳನ್ನೂ, ದೃಶ್ಯಗಳನ್ನೂ,
ಇದೇ ಕಾಗದದ ಕ್ಯಾಮರಾದಲ್ಲಿ ಸೆರೆಹಿಡಿದದ್ದು.
ಮಣ್ಣ ಬೊಂಬೆಗಳನ್ನು ಮಾಡಿ ಆಡುತ್ತಿದ್ದ ಆಟವನ್ನೂ
ಆ ಬೊಂಬೆಗಳನ್ನೂ
ಆ ಬೊಂಬೆ ಮಾಡುವ ಹುಡುಗಿಯನ್ನೂ
ಸೆರೆಹಿಡಿದದ್ದು ಕೂಡ ಇದೇ ಕಾಗದ ಕ್ಯಾಮರಾದಲ್ಲೇ.

ಯಾರೋ ಹೇಳಿದರು ಅಂತ ದೇವರನ್ನ ಹುಡುಕಿ ಹೊರಟೆ
ಸಿಕ್ಕಿದ
ಆದರೆ, ಪಾಪ ಅಳುತ್ತಿದ್ದ.
ಅಳುವ ದೇವರನ್ನ ಈ ಕ್ಯಾಮರಾದೊಳಗೆ ಸೆರೆಹಿಡಿದಿದ್ದೆ
ಫೋಟೋ ನೋಡಿದಾಗ
ದೇವರು ನಗುತ್ತಿದ್ದ.

ಯಾಕೆ ಹೀಗೆಲ್ಲಾ ಆಯಿತು/ಆಗುತ್ತೆ?

ಗುಡ್ಡದ ದಾಸಯ್ಯ  ಹೇಳಿದ

"ಜಗತ್ತು ಎಂಬೋದು ಬರೀ ಭಾಷೆ ಕಣ್ಮಗ
ಭಾಷೇನ ರಚಿಸಿದ್ದು ನಾನೆ ಅಂತ ನೀ ಅಂದ್ಕೋತೀಯ
ನಿನ್ನನ್ನ್ ರಚಿಸಿದ್ದು ತಾನೆ ಅಂತ ಭಾಷೆ ಅಂದ್ಕೊಳುತ್ತೆ

ನಿನ್ನ ಕಾಗದದ ಕ್ಯಾಮರ ಒಂದು ಪದ
ಇನ್ನು ನಿನ್ನ ಪ್ರಶ್ನೆ
ಭಾಷೆಯ ಸಿದ್ಧ ತಾರ್ಕಿಕ ನಿಯಮಗಳ ಮುಖಾಂತರ ಉದ್ಭವಿಸಿದ
ಮತ್ತೊಂದು ಪದ"

ನಂಬೋದು ಹೇಗೆ?

ಹೀಗಿರಲಾಗಿ,
ಈ ಕಾಗದದ ಕ್ಯಾಮರಾದಿಂದ ತೆಗೆದ ಚಿತ್ರಗಳೆಲ್ಲಕ್ಕೂ
ಜೀವ ಬಂದು
ನನ್ನನ್ನೇ ಬಿಂಬವೆಂದೂ
ಜೀವ ಬಂದ ಚಿತ್ರವೇ/ಪಾತ್ರವೇ ಸತ್ಯವೆಂದಿತು
ಚಿತ್ರಗಳ/ಪಾತ್ರಗಳ ಕೈ ಸೇರಿದ ಕ್ಯಾಮರಾಕ್ಕೂ ಜೀವ ಬಂದು
ಎಲ್ಲಾ ಚಿತ್ರಗಳು ನನ್ನದೇ ನಾನೇ ಸೆರೆಹಿಡಿದದ್ದು/ಸೃಷ್ಟಿಸಿದ್ದು
ಎಂದು ಪಟ್ಟು ಹಿಡಿಯಿತು
ಅಂದಿನಿಂದಲೂ
ನನಗೂ-ಪಾತ್ರಗಳಿಗೂ-ಕಾಗದದ ಕ್ಯಾಮರಾಕ್ಕೂ
ನಿರಂತರ ಸಂಘರ್ಷ ನಡೆಯುತ್ತಲೇ ಇದೆ.

.........................


ಚರಿತ್ರೆ ಮ್ಯೂಸಿಯಂನಲ್ಲಿ ಬಂದಿಸಲ್ಪಟ್ಟಿರುತ್ತೆ
ಕೆಲವೊಮ್ಮೆ ದೂಳಿಡಿಯುತ್ತಿರುತ್ತೆ
ದೂಳು ಕೊಡವಲಿಕ್ಕೆ ಒಬ್ಬ ನೌಕರ, ಅವನಿಗೆ ಸಂಸಾರ, ಅದಕ್ಕೆ ಸಂಬಳ
ಅದಕ್ಕಾಗಿ ಪ್ರವೇಶ ಶುಲ್ಕ.
ಇದನ್ನ ಕೆಲವೊಮ್ಮೆ ಜನರು ಬದುಕು-ಜೀವನ ಅಂತ ಕರೆಯುತ್ತಾರಂತೆ.

.........................


ನೀನು ಸುಮ್ಮನೆ ಕೂಗುವ ಶಬ್ದವೊಂದು
ಪ್ರಪಂಚದ ಯಾವುದೋ ನಿಘಂಟಿನಲ್ಲಿ ಸ್ಥಾನ ದಕ್ಕಿಸಿಕೊಂಡಿರಬೊಹುದು
ಎಲ್ಲವನ್ನೂ ಕತೆಯನ್ನಾಗಿಸಬೇಕೆಂಬೊ ಚಟ ಯಾಕೆ?
ಯುದ್ದಕ್ಕೆ ಮೂಲಾನೇ ಕತೆಯ ಚಟ
ಸ್ವಲ್ಪ ಹೊತ್ತು ಸುಮ್ಮನೆ ಕೂತು ಬಿಡು

..........................



ನಾ ಬರೆದ ಕವನಕ್ಕೆ ಬಲಿಯಾದದ್ದು ನನ್ನ ತಪ್ಪೆ?
ರೂಪಕವನ್ನ ದಕ್ಕಿಸಿಕೊಳ್ಳಲಾರದ ನಿಷ್ಪ್ರಯೋಜಕನಾದೆನ?

ನನಗೆ ಗೊತ್ತು ಗುರುಗಳೆ,
ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ.
ತಮ್ಮೆಲ್ಲಾ ತಪೋ ಶಕ್ತಿಯನ್ನೂ
ನನ್ನ ಸುಡಲಿಕ್ಕೆ, ಸುಟ್ಟು ಸ್ಮಾರಕವನ್ನ ಮಾಡಲಿಕ್ಕೆ
ನನ್ನ ಬಲಿಯನ್ನು ತ್ಯಾಗವೆಂದು ಘೋಷಿಸಲಿಕ್ಕೆ

ಬಾವಗೀತಾತ್ಮಕವಾಗುತ್ತಿದೆಯೆಂದು ಬೇಸರಿಸಿಕೊಳ್ಳಬೇಡಿ,
ಕವನ ಬರೆಯಲೇ ಬೇಕೆಂದು, ಎಂದೂ ನಾನೂ ಹೊರಡಲಿಲ್ಲ.

ನೀವೇ ಹೇಳಿದ್ದು ಗುರುಗಳೆ,
ಛಂದಸ್ಸನ್ನು ಮೀರುವ ಮುನ್ನ ಛಂದಸ್ಸನ್ನು ಅರಿ.
ಅರಿತಿದ್ದೀನೋ ಇಲ್ಲವೋ ನಾ ಅರಿಯೆ!?
ಮೀರುವ, ಛಿದ್ರಿಸುವ ಸಂಕಲ್ಪಕ್ಕೆ ಶರಣಾಗಿದ್ದೇನೆ.
ಬಲಿಯಾಗುವುದೇ ಆದರೆ,
ಇರಲಿ ಬಿಡಿ ಅದಕ್ಕೂ ಒಂದು ಸಾಲು.
ತಪ್ಪಿದ್ದರೆ ಕ್ಷಮಿಸಿಬಿಡಿ.

ಪಯಣ

                                

ಹಿಂದಿನಿಂದ ಕೇಳುತ್ತಿತ್ತು-----
"ಯಾಕೆ?"
"ಗೊತ್ತಿಲ್ಲ."
"ಯಾಕೆ ಗೊತ್ತಿಲ್ಲ?"
"ಅದೂ ಗೊತ್ತಿಲ್ಲ."

ದೊಡ್ಡ ತಪ್ಪು. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಅದು ತಪ್ಪಲ್ಲ, ಆದರೆ, ಒಂದು ಪ್ರಶ್ನೆಯನ್ನ ಕೇಳಿದಾಗ ಆ ಪ್ರಶ್ನೆಯನ್ನ ಯಾಕೆ ಕೇಳಿದ ಅನ್ನೋದು ಗೊತ್ತಿರಬೇಕು. ಪ್ರತೀ ಪ್ರಶ್ನೆಯ ಹಿಂದಿನ ಕಾರಣವನ್ನ ನೀನು ನೀಡಲೇ ಬೇಕು. ಅದು ನಿನ್ನ ಕರ್ತವ್ಯ ಹಾಗೂ ಹೊಣೆ. ಪ್ರತೀ ಪ್ರಶ್ನೆಗೂ, ಉತ್ತರಕ್ಕೂ, ಕಾರಣವಿದ್ದೇ ಇರುತ್ತೆ. ಆ ಕಾರಣವನ್ನ ನೀನು ತಿಳಿಯಲೇಬೇಕು. ಅದು ನಿಯಮ. ನಿಯಮವನ್ನು ನಿರಾಕರಿಸುವ ಹಕ್ಕು ನಿನಗೆ ಇಲ್ಲ.

-------------------------------------------
ಈ ಸಂಸ್ಥೆಯಲ್ಲಿ ನನಗಿದು ಕಡೆಯದಿನ. ಒಂದು ವರ್ಷದ ಕೆಲಸದ ನಂತರ ಉನ್ನತ ವ್ಯಾಸಂಗಕ್ಕಾಗಿ ತೆರೆಳುತ್ತಿರುವುದರಿಂದ ಈ ಸಂಸ್ಥೆಯಲ್ಲಿ ಇನ್ನು ಶಿಕ್ಷಕನಾಗಿ ಮುಂದುವರೆಯಲು ಸಾದ್ಯವಿಲ್ಲ. ಅದಕ್ಕಾಗಿ ನೆನ್ನೆ ರಾಜೀನಾಮೆ ಸಲ್ಲಿಸಿ ಇಂದು ಹೊರಡುತ್ತಿದ್ದೇನೆ.
ಡೈರಿಯಲ್ಲಿ ಈ ರೀತಿ ಬರೆದೆ.
"ಇಂದು ವಿಧಾಯವನ್ನ್ ಹೇಳಬೇಕಿದೆ. ಸ್ವಗತ ಸಹಕಾರಿಯಲ್ಲ. ಸಲ್ಲದ ಸ್ಥಳಗಳಲ್ಲಿ ಸ್ವಗತಕ್ಕೆ ಇಳಿಯಬಾರದು. ಆದರೂ...."

ರಾಯರಿಗೆ ನನ್ನ ಪ್ರಶ್ನೆ ಅರ್ಥವಾಗಿತ್ತು ಅಂತ ಅನ್ನಿಸುತ್ತೆ.
"ವಿದಾಯದ ಈ ಕ್ಷಣ ಒಮ್ಮೆ ಹಿಂದೆ ನೋಡಿದಾಗ, ಅಚ್ಚರಿ, ಭಯ, ಕುತೂಹಲ, ಇಷ್ಟೇನ? ಇಷ್ಟೊಂದ?  ಕಾಡುತ್ತ ಹೋಗುತ್ತೆ.  ಕಡೆಗೆ ಅನುಭವ ಅನ್ನೋದೊಂದು ಜೊತೆಗಿರುತ್ತೆ ಅಷ್ಟೆ."
"ಯಾವುದೋ ತಿರುವು, ಇಲ್ಲಿಗೆ ಯಾಕೆ ಬಂದೆ? ಇಲ್ಲಿ ಬಂದದ್ದಕ್ಕೆ ಉದ್ದೇಶ ಅಂತ ಇದೆಯ? ಇದ್ಯಾವುದಕ್ಕೂ ಉತ್ತರಾನೇ ಇಲ್ಲ ನೋಡಿ. ಅಥವಾ ಪ್ರಶ್ನೆಗಳಾದರೂ ಸರಿ ಇದೆಯ ಅಂದರೆ, ಅದೂ ಅನುಮಾನವೆ.!"

ರಾಯರು ತಮ್ಮ ಪಾಡಿಗೆ ಉಸಿರೆಳೆದುಕೊಳ್ಳುತ್ತಾ ನಿಂತುಬಿಟ್ಟರು. ಅವರಿಗೆ ಮೌನವೆಂದರೆ ಇಷ್ಟ್.

-----------------------------------------
ಈ ನಾಟಕದ ಬಗ್ಗೆ ಅವನಿಗೆ ತುಂಬಾ ಆಸಕ್ತಿಯಿತ್ತು. ಹಲವರಿಗೆ ತಾನೆ ಕರೆ ಮಾಡಿ ವಿಜಯ್ ತೆಂಡೂಲ್ಕರ್ ರ"Silence....The court is in session" ನಾಟಕ ಅಂತಲೂ, IISc ಅಲ್ಲಿ ಪ್ರದರ್ಶನವೆಂದೂ, IISc ಯವರೇ ನಡೆಸಿಕೊಡುವುದೆಂದೂ ತಿಳಿಸಿದ್ದ. ನಾಟಕ ಮುಗಿದ ನಂತರ...
"ನಾಟಕ ತಂತ್ರ ಅದ್ಭುತವಾಗಿದೆ ನೋಡಿ. ಅವರ ನಟನೆ ಸಹ ಬಹಳ ಪ್ರಬುದ್ಧವಾಗಿ ಬಂದಿದೆ. ಆದರೆ, ನಾನು ಆ ಕಡೇ ದೃಷ್ಯದಲ್ಲಿ ಜಾನಕಿ ಬಾಗಿಲನ್ನ ಒದೆಯುತ್ತಾಳೆ ಅಂತ ಭಾವಿಸಿದ್ದೆ. ಆದರೆ ಹಾಗೆ ಆಗಲೇ ಇಲ್ಲ. "
"ನಾಟಕ ನಿಮಗೆ ಬೇಕಾದ ರೀತೀಲಿ ನಡೆಯೋಲ್ಲ ಕಂಣ್ರಿ."
"ಆದರೂ....ಇರಲಿ, ಇದನ್ನೇ ಒಂದು ಕತೆ ಮಾಡಿ ಬರೀಬೇಕು. ಜಾನಕಿಯ ಪಾತ್ರ ಮಾಡಿದ್ದಳಲ್ಲ, ಅವಳ ಮನಸ್ಥಿತಿಯನ್ನ ಬಿಂಬಿಸಿ ಒಂದು ಉತ್ತಮ ಕತೆ ಬರೆಯಬೊಹುದು. ಕತೆಯನ್ನ ಹೀಗೆ ಬರೆದರೆ ಹೇಗೆ..? ನಾಟಕದ ಜಾನಕಿಯ ಪಾತ್ರವು ಜಾನಕಿಯ ಪಾತ್ರ ಮಾಡಿದವಳೊಂದಿಗೆ ಮಾತಿಗಿಳಿಯುವಂತೆ ಚಿತ್ರಿಸಿ, ಅಲ್ಲಿ ಆಕೆಯ ಭಾವನೆಗಳನ್ನ ತಲ್ಲಣಗಳನ್ನ ಚಿತ್ರಿಸೋದು. ಏನಂತೀರ.? ಸ್ವಲ್ಪ ಬಿಂಬ ಪ್ರತಿಬಿಂಬ ಅಂತ ಎಲ್ಲಾ ಸೇರಿಸ್ಬೋದು. "
"ಹೂ, ಅದೂ ಆಗಲಿ... ಆದರೆ, ಈ ನಾಟಕ ಬರೆದದ್ದು ೧೯೬೩ ರಲ್ಲಿ, ಈಗಲೂ ಈ ನಾಟಕ ಮಾಡಬೇಕು ಅಂತ ಅನ್ನಿಸುತ್ತಲ್ಲ.ಕೃತಿಯಾಗಿ ಗೆದ್ದಿರಬೊಹುದು, ಆದರೆ ಈ ನಾಟಕ ಇಂದಿಗೂ ಪ್ರಸ್ತುತವೆ? IISc ಅನ್ನೋ ಸ್ಥಳದಲ್ಲಿ ಮಾಡುವ ಅವಶ್ಯ ಇತ್ತ. ? "
"ನಾಟಕ ಯಾಕ್ರೀ ಪ್ರಸ್ತುತವಾಗಬೇಕು..? ಸುಮ್ನೆ ನೋಡಿದ್ರೆ ಸಾಕಾಗಲ್ವ."
"ಬಿಡಿ.. ವಾದ ಇನ್ನೆಲ್ಲಿಗೋ ಹೋಗುತ್ತೆ. ಆದರೂ ಈವತ್ತಿನ ದಿನಗಳಲ್ಲಿ ಜಾನಕಿಯಂತ ಪಾತ್ರವಾಗಲೀ, ಆ ರೀತಿಯ ಸ್ಥಿತಿಯಾಗಲೀ ಇಲ್ಲ ಅಂತ ಅನ್ನಿಸುತ್ತೆ.
ಹೇ ಸುಷ್ಮಿತ, ನೀ ಯಾಕೇ ಎದ್ದೆ..? ಎಲ್ಲಿಗೆ ಹೊರಟೆ...?"
"ನೀವು ಮಾತಾಡೋದು ಕೇಳಿದ್ರೆ ಏನು ಹೇಳೋದು ಅಂತ ತಿಳಿಯೋಲ್ಲ. ನೀವು ಹೇಳೋ ಆ ಪಾತ್ರ, ಕತೆ, ನಾಟಕ, ಅದೇನೋ ಒಂದೂ ನಂಗೆ ಗೊತ್ತಿಲ್ಲ. ಆದರೆ ನಾಟಕದಿಂದ ಹೊರಗೆ ಬಂದ ಮೇಲೆ ನನಗೆ "ಅವಳು" ನೆನಪಾದದ್ದು. ನಾನೇ ಇಳಿಸಿದ್ದು ಗೊತ್ತ! ಫ್ಯಾನಿಗೆ ನೇತಾಡುತ್ತಿದ್ದ್ಲು. ಈಗಲೂ ಆ ಇಡೀ ದೃಷ್ಯ ನನ್ನ ಕಣ್ಮುಂದೆ ನಡೆಯುತ್ತಿರೋ ರೀತೀಲಿದೆ. ನನ್ನ ಮೆದುಳಲ್ಲಿ ಇರೋದನ್ನ project ಮಾಡೋ ರೀತಿ ಇದ್ದಿದ್ರೆ ಎಷ್ಟು ಚೆನ್ನಾಗಿರ್ತುತ್ತು ಅಲ್ವ ಅಂತ ಅನ್ನಿಸುತ್ತೆ. ನಂಗೆ ನಿನ್ನ ತರ ಕತೆ ಕವಿತೆ ಎಲ್ಲಾ ಬರೆಯೋಕೆ ಬರೋಲ್ಲ. "
------------------------------------------
ಈ ಸಂಸ್ಥೆಯಲ್ಲಿ ನನ್ನ ಕಡೆಯದಿನದಂದೇ ಈಕೆಯ ನಿವೃತ್ತಿಯ ದಿನವೂ ಸಹ. ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿ ಪಾಠ ಮಾಡುತ್ತಿದ್ದರಂತೆ. ನನಗೆ ಎಂದಿಗೂ ಈಕೆ ಕುತೂಹಲದ ವಿಷಯವಾಗಿರಲೇ ಇಲ್ಲ. ಈ ದಿನದ ವರೆಗೂ ಈಕೆಯನ್ನ ನಾನು ಸೂಕ್ಷ್ಮವಾಗಿ ಗಮನಿಸಿಯೇ ಇರಲಿಲ್ಲ. ಇಂದೂ ನಾನು ಈಕೆಯನ್ನ ಸೂಕ್ಷ್ಮವಾಗಿ ಗಮನಿಸಿದ್ದೀನ? ಕಾಲೇಜಿನ ಹಿಂದಿನ ಗೋಡೆಗಳ ಮೇಲೆ ಬರೆದ ಈಕೆಯ ಹೆಸರನ್ನ ಕುತೂಹಲದಿಂದ ನೋಡಿದ ಹಾಗೆ ಈಕೆಯನ್ನ ಎಂದಿಗಾದರೂ ಗಮನಿಸಿದ್ದೆನ? ನನ್ನ ಯಾವ ಕತೆಯ ಪಾತ್ರಕ್ಕೂ ಈಕೆ ಹೊಂದುತ್ತಿರಲಿಲ್ಲ. ಯಾವ ಆಸಕ್ತಿಯೂ ಇಲ್ಲದ ರೀತಿಯಲ್ಲಿ ನಿತ್ಯ ೯ಕ್ಕೆ ಬಂದು ೫ಕ್ಕೆ ಹೊರಡುವ ಈಕೆಯನ್ನ ಗಮನಿಸುವ ಆಸಕ್ತಿಯೇ ಇರಲಿಲ್ಲ. ಹೇಳಿಕೊಳ್ಳಲಿಕ್ಕೆ Professor ಅಂತ ಆದರೂ ಈಕೆಗೆ ಏನು ಗೊತ್ತಿತ್ತು? ಸಾಹಿತ್ಯ ಗೊತ್ತಿರಲಿಲ್ಲ, ಕವಿತೆ ತಿಳಿದಿರಲಿಲ್ಲ, ರಾಜಕೀಯ, ಚರಿತ್ರೆ ಯಾವುದೂ ಏನೂ ತಿಳಿದಿರಲಿಲ್ಲ. ನಮ್ಮ ಜೊತೆ ಕ್ಯಾಂಟೀನಲ್ಲಿ ಕೂತು ಗಂಟೆಗಟ್ಟಲೆ ಮಾತನಾಡಲಿಕ್ಕೆ ಎಂದಿಗೂ ಬರಲಿಲ್ಲ. ಆದ್ದರಿಂದ ಈಕೆ ನನಗೆ ಆಸಕ್ತಿಯ ವಿಷಯವೇ ಅಲ್ಲ. ಇನ್ನು ಈಕೆಯ ಪರಿಣಿತಿಯ ವಿಷಯದ ಬಗ್ಗೆಯೂ ಸಹ ಈಕೆಗೆ ಏನೂ ತಿಳಿದಿರಲಿಲ್ಲವಂತೆ.
ಒಮ್ಮೆ ಅನ್ನಿಸಿತ್ತು, ಕನಿಷ್ಟ ಒಂದು ಕತೆಯನ್ನಾದರೂ ಬರೆಯಬೇಕು ಅಂತ. ಆಗ ಏನಾಯಿತು ಅಂದರೆ, ಯಾರೋ ಹೇಳಿದ್ದರು, ಸುಮಾರು ವರ್ಷಗಳ ಹಿಂದೆ ಈಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು ಅಂತ. ಈಕೆ ಆ ವಿಷಯವನ್ನೇ ಯಾರಿಗೂ ತಿಳಿಸಿರಲಿಲ್ಲವಂತೆ. ತನ್ನ ಮಗಳು ಸತ್ತ ಮಾರನೆಯೆ ದಿನವೇ ಕಾಲೇಜಿಗೆ ಬಂದಿದ್ದಳಂತೆ. ಆಗ ಅನ್ನಿಸಿತ್ತು ಈ ವಿಷಯ ಒಂದು ಕತೆಗೆ ವಸ್ತುವಾಗಲಿಕ್ಕೆ ಸರಿಯಾಗಿದೆ ಅಂತ. ಆದರೆ ಯಾಕೋ ಬರೆಯಲೇ ಇಲ್ಲ.
ನಿವೃತ್ತಿಯ ದಿನ ಹತ್ತಿರ ಬರುತ್ತಿದ್ದಂತೆ, ಎಂದಿಗೂ ಹೊಸ ಸೀರೆ ಉಡದ ಈಕೆ ದಿನಕ್ಕೊಂದರಂತೆ ಹೊಸ ಸೀರೆ ಉಟ್ಟು ಬರುತ್ತಿದ್ದಳು.  ತನ್ನ ವಿಭಾಗದ ಗೋಡೆಯ ಮೇಲೆ ಫೋಟೋ ತಗಲಾಕುತ್ತಾರೆ ಎಂದು ಗೊತ್ತಾದಾಗ ರೇಶ್ಮೆ ಸೀರೆ ಉಟ್ಟು ಫೋಟೋ ತೆಗೆಸಿಕೊಂಡಿದ್ದಳು.
ಇವತ್ತು ಈಕೆಯ ಕಡೆಯ ದಿನ. ಯಾವುದೇ ಬೀಳ್ಕೊಡುಗೆ ಸಮಾರಂಭವನ್ನ ಮಾಡಕೂಡದೆಂದು ಹಠ ಹಿಡಿದ ಪರಿಣಾಮ ಯಾವುದೇ ಗದ್ದಲಗಳಿರಲಿಲ್ಲ. ಈ ಕಡೇ ದಿನದಲ್ಲಿ ಯಾರಿಗೂ ತಿಳಿಸದೆ ಸಾಮಾನ್ಯ ದಿನದಂತೆ ಬಸ್ಸು ಹತ್ತಿ ಮನೆಗೆ ತೆರಳಿದಳು.
ಹಾ, ಹೇಳಲು ಮರೆತೆ ಈಕೆಯ ಹೆಸರು ಸುನಂದಮ್ಮ ಅಂತ....


 

ಆತ್ಮಕತೆ

      ೧ 
ಶಬ್ದವನ್ನ ಕೂಗಿ ಕರೆದೆ
ಬಂದಾಗ
ಗುರುತು ಸಿಕ್ಕಲಿಲ್ಲ.

ಪದಗಳೆಂಬೊ ಚಿಹ್ನೆಗಳ ರಾಶಿಯೊಳಗೆ ಹುದುಗಿ
ಮುಟ್ಟಿನೋಡಿದರೆ
ಸ್ಪರ್ಶಕ್ಕೆ ಸಿಕ್ಕಿದೆಯೆಂದೆನಿಸುತ್ತೆ
ಸ್ಪರ್ಶವೂ ಶಬ್ದದ ರೂಪವಾಗಿದ್ದರೆ?
ಪ್ರಶ್ನೆ ಭಯ ಹುಟ್ಟಿಸುತ್ತೆ
ಪ್ರಶ್ನೆ-ಭಯ ಎರೆಡೂ ಶಬ್ದಗಳೇ ಅಲ್ಲವ
ಅಂದುಕೊಂಡಾಗ
ಉತ್ತರವೂ ಶಬ್ದವಾಗಿ ಬಿಟ್ಟೀತಲ್ಲಾ
ಎಂದು ಗೊಂದಲವಾಗುತ್ತೆ.

ಯಾಕೋ
ಅಕ್ಷರವನ್ನು ಬರೆದುಬಿಟ್ಟೆ
ಹಲವೊಮ್ಮೆ ತಿದ್ದಿದೆ ಕೂಡ
ನನ್ನ ನೆನಪಿನಲ್ಲೀಗ ಬರೀ ಅಕ್ಷರಗಳೇ ಕೂತಿವೆ.

ವ್ಯಾಕರಣವಿಲ್ಲದ ಆಕಾಶ
ಭೂಮಿಯೆಂಬೋ ವಾಕ್ಯವನ್ನ ಕಟ್ಟಿತು
ವ್ಯಾಕರಣವನ್ನೇ ಕಟ್ಟಿ ಹಾಕೋಣವೆಂದಾಗ
ನನ್ನ ಹುಡುಗಿ ಅಡ್ಡ ಬಂದಳು

ಸ್ವ-ಕೇಂದ್ರಿತ ವೃತ್ತಾಂತದ ಗೋಳು
ಕಾಲದ ಮರು ಚರಿತ್ರೆ
ಅರ್ಥದ ಋಣ ಭಾರದ ಶೂಲಕ್ಕೆ
ಕಾರಣಕ್ಕೆ ಮೊರೆಹೋಗಲಾರೆ

ಆತ್ಮಕತೆಯ ಕಡೆಯ ಸಾಲನ್ನ
ಶಬ್ದಕ್ಕೆ ಅಗ್ನಿಸ್ಪರ್ಶಿಸುತ್ತಾ
ಆರಂಭಿಸುತ್ತಿದ್ದೇನೆ

ಸುಟ್ಟ ಶಬ್ದದ ಬೂದಿಯನ್ನ 
ವಿಭೂತಿಯನ್ನಾಗಿಸಿ
ಬೆತ್ತಲೆ ಮೈಗೆಲ್ಲ ಬಳಿದುಕೊಂಡು
ದೇವರ ರೂಪವಾಗಿ
ವ್ಯಾಕರಣ ನಿಯಮಗಳ ನಿಯಾಮಕನಾಗಿ
ಸೃಷ್ಟಿಯಾಗಿ, ಸ್ಥಿತಿಯಾಗಿ, ಲಯವಾಗಿ........

ಕತೆ

                      
[ ಇಲ್ಲಿನ ಪಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾರನ್ನಾದರೂ, ಯಾವುದನ್ನಾದರೂ ಹೋಲುತ್ತಿದ್ದರೆ, ಅದಕ್ಕೆ ಈ "ಕತೆ" ಕಾರಣವಲ್ಲ ]

"ಅಜ್ಜಿ, ಕತೆ ಹೇಳಜ್ಜಿ..."
"ಯಾವ ಕತೇನೋ...?"
"ಯಾವುದೋ ಒಂದು ಕತೆ ಹೇಳಜ್ಜಿ"
"ಒಂದಾನೊಂದು ಕಾಲದಲ್ಲಿ, ಆ ಒಂದು ಊರಲ್ಲಿ...........................................................................................

-------------------೦----------------------೦-------------------------
ದಾಸಯ್ಯ ಅದೇ ಕಂಬಾಲರಾಯನ ಗುಡ್ಡದ ಮೇಲೆ ಕೂತಿದ್ದ.  ಅದೇ ಸ್ಥಿತೀಲಿ, ಯಾವಾಗಲೂ ಕೂತಂತೆ, ಯಾವಗಲೂ ನಿಂತಂತೆ ಹಾಗೇ ಇದ್ದ. ವಯಸ್ಸಾಗಿತ್ತು. ಕಾಲ ಚಲಿಸಿತ್ತು. ಅದರ ಗುರುತು ದೇಹದಲ್ಲಿ ಕಾಣುತ್ತಿತ್ತು. ಏನೇ ಬದಲಾದರೂ ದಾಸಯ್ಯ ಮಾತ್ರ ಹಾಗೇ ಕೂತಿದ್ದ. ಕಂಬಾಲರಾಯನ ಗುಡ್ಡ ಹಾಗೇ ಇತ್ತು, ಕಂಬಾಲರಾಯನೂ ಹಾಗೇ ಇದ್ದ. ನಾನು ಹುಡುಕಿ ಹೊರಟಿದ್ದೆ. ದಾಸಯ್ಯನ್ನ ಕಾಣಬೇಕಿತ್ತು. ಕತೆ ಬೇಕಿತ್ತು ನಂಗೆ.
ಕಂಬಾಲರಾಯನ ಗುಡ್ಡದ ಹತ್ತಿರಕ್ಕೆ ಬರುತ್ತಾ ಇದ್ದಾಂಗೆ ಅಲ್ಲೆ ಇದ್ದ ಗುಹೆ ಕಾಣಿಸ್ತು. ಇದೇ ಗುಹೇನ ತೋರಿಸಿ ಅಜ್ಜಿ ಕತೆ ಹೇಳ್ತಿದ್ಲು. ಈ ಗುಹೇಲಿ ಒಬ್ಬ ದೊಡ್ಡ ರಾಕ್ಷಸ ಇದ್ದಾನೆ. ಆ ರಾಕ್ಷಸ ನಮ್ಮನ್ನೆಲ್ಲಾ ತಿಂದಾಕ್ತಾನೆ. ಯಾವುದಕ್ಕೇ ಹಟ ಮಾಡಿದ್ರೂನು ಮನೇಲಿ ತೋರಿಸ್ತಾ ಇದ್ದದ್ದು ಈ ಗುಹೆ ಹಾಗು ಅದರೊಳಗಿರೋ ರಾಕ್ಷಸ. ಎಷ್ಟು ಕಲ್ಪನೆಗಳನ್ನ ಕಟ್ಕೊಂಡಿದ್ದೆ!!! ಈ ಗುಹೇನ ನೋಡಿದಾಗ, ಇದರ ಮುಂದೆ ನಿಂತಾಗ, ಅಜ್ಜಿ ಹೇಳಿದ ಕತೆಯ ನಾಯಕ ನಾನೇ ಆಗಿ ಹೋಗಿ, ಆ ಕ್ಷಣದಲ್ಲಿ ಕೈಯಲ್ಲೊಂದು ಕತ್ತಿ. -ಅದೂ ಆ ಕತ್ತೀನ ಒಬ್ಬ ದೇವತೆ ಕೊಟ್ಟಿರ್ತಾಳೆ. ಆ ಕತ್ತೀನ ಹಿಡಿದು ಗುಹೆ ಒಳಗೆ ಹೋಗಿ ಅಲ್ಲಿರೋ ರಾಕ್ಷಸನ ಹತ್ರ ಹೊಡದಾಡಿ -ಆ ಮಾಟ ಮಂತ್ರ ಎಲ್ಲಾ ಮಾಡಿ- ಅವನನ್ನ ಕೊಂದು, ಅಬ್ಬ ಆಗ ಆ ಗುಹೆ ಅರಮನೆಯಾಗಿಹೋಗೋದು. ಅಲ್ಲಿನ ರಾಜ ನಾನೆ. ಅಲ್ಲೊಬ್ಬ ರಾಜಕುಮಾರಿ ಸುರ ಸುಂದರಾಂಗಿ. ಅಬ್ಬ ಕನಸೆ!! ಅಬ್ಬ ಕಲ್ಪನೆಯೆ! ಈಗಲೂ ಇದರ ಮುಂದೆ ನಿಂತಾಗ ಮತ್ತೆ ಮತ್ತೆ ನೆನಪಾಗುತ್ತೆ, ಒಳಗೆ ರಾಜಕುಮಾರಿ ಇದ್ದಾಳೆ, ಸುರಸುಂದರಾಂಗಿ ದೇವಕನ್ಯೆ, ರಾಕ್ಷಸ ಹಿಡಿದಿಟ್ಟಿದ್ದಾನೆ. ನಾನು ಹೋಗಬೇಕು, ಹೋಗಿ ರಾಕ್ಷಸನ್ನ ಕೊಂದು ರಾಣಿಯನ್ನ ಕಾಪಾಡಬೇಕು. ಆದರೆ, ರಾಕ್ಷಸನ ಪ್ರಾಣ ಇನ್ನೆಲ್ಲಿಯೋ ಇದೆಯಂತೆ, ಅದನ್ನ ತಿಳಿಬೇಕೆಂದರೆ ಅಲ್ಲಿರೋ ಒಂಟಿ ಕಣ್ಣಿನ ಅಜ್ಜಿ ಕೇಳೋ ಪ್ರಶ್ನೇನ ಉತ್ತರಿಸಬೇಕು. ರಾಕ್ಷಸನ ಪ್ರಾಣದ ರಹಸ್ಯಾನ ತಿಳಿದು ರಾಕ್ಷಸನ್ನ ಕೊಂದರೆ ಆಗ ರಾಜಕುಮಾರಿ ನನ್ನವಳು. ಆಗ ನಾನೇ ರಾಜ. ಅದೆಂತಹ ಕತೆಗಳು. ಒಮ್ಮೆಯೂ ನಾನು ಯಾವ ಕತೆಯ ನಾಯಕನೂ ಆಗಲಿಲ್ಲ, ಪ್ರತಿ ನಾಯಕ, ರಾಕ್ಷಸ, ವೇಷತೊಡುತ್ತೀನೆಂದರೂ ನಾಯಕಿಯಾಗಲಿಲ್ಲ. ಬೇಸತ್ತು ಯಾವುದೋ ಒಂದು ಪಾತ್ರವನ್ನಾದರೂ ಕೊಡಿ ಅಂದರೆ ಕತಯಲ್ಲಿ ನಿನ್ನ ಪಾತ್ರವೇ ಇಲ್ಲ ಅಂದು ಬಿಡೋದೆ...!
ಪಾತ್ರವನ್ನ ನಿರಾಕರಿಸಲಿಕ್ಕೆ ನೀ ಯಾರಯ್ಯ? ನೀ ಬರೆದದ್ದ ಕತೆ? ಯಾರೂ ಯಾವ ಕತೇನೂ ಬರೀಲಿಕ್ಕೆ ಸಾದ್ಯವಿಲ್ಲ. ಕತೆ ಹುಟ್ಟಬೇಕು ಅಂದರೆ ಅದು ಜರುಗಬೇಕು. ಅದಕ್ಕೇ ಜಿದ್ದಿಗೆ ಬಿದ್ದಿದ್ದೇನೆ. ಈ ಕತೆಯ ನಾಯಕ ನಾನೇ ಆಗಬೆಕು. ಪ್ರತಿನಾಯಕನೂ ನಾನೆ. ಸಹ ನಾಯಕ, ಅದೂ ನಾನೆ. ಬಣ್ಣ ತೊಟ್ಟಾದರೂ ಸರಿ ನಾಯಕಿಯೂ ನಾನೆ. ಪಾತ್ರವನ್ನೇ ನಿರಾಕರಿಸಿದ ಕತೆಯನ್ನೇ ಕತೆಯಾಗಿಸಿ ಪ್ರತೀ ಪಾತ್ರವೂ ನಾನೇ ಆಗಬೇಕು. ಅದಕ್ಕೇ ಕತೆ ಬೇಕು. ಅದಕ್ಕೇ ದಾಸಯ್ಯನ್ನ ಹುಡುಕಿ ಬಂದೆ.
" ದಾಸಯ್ಯ ಹೆಂಗಿದಿ?"
"ನಾ ಚೆನ್ನಾಗಿದ್ದೀನ್ ಮಗ, ಏನ್ ಹೀಗೆ ಬಂದೆ?"
"ಕತೆ ಬೇಕಿತ್ತು ದಾಸಯ್ಯ, ಕತೆ"
"ಎಲ್ಲಾ ಬಿಟ್ಟ ಪುಟಗೋಸಿ ದಾಸಯ್ಯ ಕಣೋ ನಾನು. ಮನೆ ಇಲ್ಲ, ಮಠ ಇಲ್ಲ, ಹೆಂಡ್ತಿ ಇಲ್ಲ, ಮಕ್ಳಿಲ್ಲ, ಅಪ್ಪ ಗೊತ್ತಿಲ್ಲ, ಅಮ್ಮನ್ನ ನೋಡಿದ ನೆನಪು ಉಳಿದಿಲ್ಲ. ನಾನ್ ಏನ್ ಕತೆ ಹೇಳ್ಳೋ ನಿಂಗೆ? ಅದೂ ನಿಂಗೆ ಬೇಕಿರೋ ಕತೇಲಿ ನೀನೆ ನಾಯಕನೂ ಆಗ್ಬೇಕು, ನಾಯಕೀನೂ ನೀನೆ ಆಗ್ಬೇಕು, ಎಲ್ಲಾನೂ ನೀನೆ ಆಗೊ ಚಟ ನಿಂಗೆ. ಆ ಕತೆಗೆ ಒಂದು ಬಂಧ ಬೇಕು, ಒಂದು ಭಾವ ಬೇಕು, ಬೆಸೆಯೋಕೆ ಅಂತ ಒಂದು ಸಂಬಂಧ ಬೇಕು. ನಡೆಯೋಕೆ ಒಂದು ದೇಶ ಅದಕ್ಕೆ ತಕ್ಕಂಗೆ ಒಂದು ಕಾಲ. ಎಲ್ಲಿಂದ ತರ್ಲೋ ಇವನ್ನೆಲ್ಲ!! ಆಗ್ಲೋ ಈಗ್ಲೋ ಅಂತಿರೋ ಈ ಮುದಿ ದಾಸಯ್ಯ ಏನೋ ಕತೆ ಹೇಳ್ತಾನೆ"
"ನಂಗೊತ್ತಿಲ್ಲ ದಾಸಯ್ಯ, ನಂಗೊಂದು ಕತೆ ಬೇಕು. ಕತೆಯಿಲ್ಲದೆ ನಂಗೆ ಏನು ಮಾಡೋದು ಅಂತ ಗೊತ್ತಾಗ್ತಿಲ್ಲ. "ಹುಟ್ಟಿದ್ಯಾಕೋ?" ಅಂತ ಕೇಳಿದ್ರೆ ಏನ್ ಹೇಳೋದು ಅಂತಾನೆ ತಿಳಿತಿಲ್ಲ ದಾಸಯ್ಯ. ಎಲ್ಲಿ ಸತ್ತೋಗ್ತೀನೋ ಅಂತ ಭಯ ಆಗ್ತಿದೆ. ಅದಕ್ಕೆ ಒಂದು ಕತೆ ಹೇಳು. ಎಲ್ಲಾ ಪಾತ್ರಾನು ನಾನೆ ಆಗಿಸಿ ಒಂದು ಕತೆ ಕಟ್ಟು"
"ಸರಿ, ನಿಂದೊಂದು  ಋಣ ನನ್ನಲ್ಲಿ ಉಳಿದೋಗಿದೆ. ಅದಕ್ಕೆ ಕತೆ ಹೇಳ್ತೀನಿ. ಅಲ್ಲ ಅಲ್ಲ ನಿಜಾನೆ ಹೇಳ್ತೀನಿ. ನೀ ಚಿಕ್ಕೋನಿದ್ದಾಗ ನಂಗೆ ಒಂದು ನವಿಲುಗರಿ ಕೊಟ್ಟು ಅದು ಮರಿ ಹಾಕುತ್ತೆ ಆ ಮರೀನ ನಂಗೆ ಕೊಡ್ಬೇಕು ಅಂತ ಹೇಳೀದ್ಯಲ್ಲ?"
"ಹೋ ಅದ! ಆಗ ಚಿಕ್ಕ ವಯಸ್ಸು, ನವಿಲು ಗರಿ ಮರಿ ಹಾಕುತ್ತೆ ಅಂತ ಅಂದ್ರೆ ನಂಬಿದ್ದೆ. ಅದಕ್ಕೆ ನಿಂಗೆ ಕೊಟ್ಟೆ. "
"ಹೌದು ಮಗ, ಅಲ್ನೋಡು, ಅಲ್ಲಿ ರೆಕ್ಕೆ ಬಿಚ್ಚಿ ಆಡ್ತಾ ಇರೋ ನವಿಲು ಇದ್ಯೆಲ್ಲ. ಅದು ನಿಂದೆ. ತಗೊಂಡೋಗು"
"ಅಯ್ಯೋ ದಾಸಯ್ಯ. ನಿನ್ನ ಕತೆ ಹೇಳು ಅಂತ ಅಂದೆ. ನಡೆಯೋ ಕತೇನ ಹೇಳು ಅಂತ ಅಂದದ್ದು. ನಾನೆ ಎಲ್ಲಾ ಪಾತ್ರವೂ ಆಗೋ ಕತೇನ ಹೇಳು ಅಂತ ಅಂದದ್ದು. ನವಿಲು ಗರಿ ಎಲ್ಲಾದ್ರೂ ಮರಿ ಹಾಕುತ್ತ? ನಾನೀಗ ದೊಡ್ಡೋನು ದಾಸಯ್ಯ. ಕತೆ ಯಾವುದು, ನಿಜ ಯಾವುದು ಅನ್ನೋದು ನಂಗೆ ಗೊತ್ತು."
"ನಾನು ಹೇಳೋದು ಸತ್ಯ. ನೀ ಕೊಟ್ಟ ನವಿಲು ಗರೀನ ಏನ್ ಮಾಡೋದು ಅಂತ ತಿಳೀದೆ ಜೊತೇಗೇ ಇಟ್ಕೊಂಡಿದ್ದೆ. ಅದರ ಜೊತೆಗೇನೆ ಮಾತಾಡೋದೂ, ಅದರ ಜೊತೆಗೇನೆ ಮಲಗೋದೂ, ಓಡಾಟ, ಊಟ, ಎಲ್ಲವೂ. ಎಲ್ಲೇ ಹೋದರೂನೂ ಅದು ನನ್ನೊಟ್ಟಿಗಿರುತ್ತಿತ್ತು. ಅದು ಮರೀನೇ ಹಾಕಲಿಲ್ಲ. ಯಾರು ಯಾರನ್ನೋ ಕೇಳಿ ನೋಡಿದೆ; ಯಾರೂ ಹೇಳಲಿಲ್ಲ ನವಿಲು ಗರಿಯಿಂದ ನವಿಲು ಹಾಕೋ ವಿಧಾನಾನ. ಆದರೆ ಒಂದು ದಿನ ನವಿಲುಗರಿ ಮೊಟ್ಟೆ ಇಟ್ಟಿತ್ತು. ಇಡೀ ನವಿಲು ಗರಿ ಮೊಟ್ಟೆಯಾಗಿಹೋಗಿತ್ತು. ಆ ಮೊಟ್ಟೆ ಬೆಳೆಯುತ್ತಿತ್ತು. ಅದಕ್ಕೆ ಕಾವನ್ನ ಕೊಟ್ಟೆ. ನಾನೇ ಕೊಟ್ಟೆ. ಒಂದು ದಿನ ನವಿಲು ಮರಿ ಹೊರಗೆ ಬಂತು. ಅದಕ್ಕೆ ಹಾರೋಕೆ ಬರ್ತಾ ಇರಲಿಲ್ಲ, ನಾನು ಹಾರಿ ತೋರಿಸ್ದೆ, ಹಾರೋದು ಕಲೀತು. ಕುಣಿಯೋಕೆ ಬರ್ತಾ ಇರಲಿಲ್ಲ ಕುಣಿದು ತೋರಿಸ್ದೆ ಈಗ ನೋಡು  ಅದೇಗೆ ಕುಣಿತಿದೆ ಅಂತ. ನೀನೇ ಕೊಟ್ಟ ನವಿಲು ಗರಿಯಿಂದ ಹುಟ್ಟಿದ ನವಿಲು. ಅಲ್ಲೋಡು ಕುಣಿತಿದೆ. ಇದನ್ನೇ ಕತೆ ಅಂದ್ಕೊ. ನವಿಲು ಗರಿಯಿಂದ ನವಿಲು ಹುಟ್ಟಿದ್ದನ್ನ ಕತೆಯಾಗಿಸ್ಕೊ. ಆ ಗರೀನೂ ನೀನೆ ಆಗು, ಆ ಮೊಟ್ಟೆಯೂ ನೀನೆ ಆಗು, ಆ ನವಿಲೂ ನೀನೆ ಆಗು. ಅವಶ್ಯ ಬಿದ್ರೆ ಈ ದಾಸಯ್ಯನೂ ನೀನೆ ಆಗು. ಕಡೆಗೆ ಗರಿಯಿಂದ ಮರಿಯಾದ ಬಗೆಯೂ ನೀನೆ ಆಗಿಬಿಡು. ಆಗ ಕತೆ ಕಟಿದ್ದಾಂಗೆ ಆಗುತ್ತೆ."
"ದಾಸಯ್ಯ ನೀ ಹೇಳ್ತಿರೋದು ಕತೆ. ಸತ್ಯವನ್ನ ಕತೆಯಾಗಿಸಬೊಹುದು ಆದರೆ ಕತೆಯನ್ನ ಸತ್ಯವನ್ನಾಗಿಸೋಕ್ಕೆ ಆಗೋಲ್ಲ. ನೀನು ಹೇಳ್ತಿರೋದು ಕತೆ. ನಾನು ನಿನಗೆ ನವಿಲುಗರಿ ಕೊಟ್ಟಿದ್ದು ಸತ್ಯ, ಆದರೆ ನವಿಲು ಗರಿಯಿಂದ ಮರಿಯಾದದ್ದು ಕಲ್ಪನೆ ಅಥವಾ ಅದೇ ಕತೆ. ಕತೆ ಎಂಬೋದು ಶುದ್ಧ ಸುಳ್ಳು, ಭ್ರಮೆ ಅಥವಾ ನಾವೇ ನಿರ್ಮಿಸಿಕೊಂಡೆ ಕಲ್ಪನೆ."
" ಹ... ಹ..."
"ನೀ ನಗಬೇಡ.."
"ಕತೇಲಿ ಅಳು ಇದೆ, ನಗು ಇದೆ. ಕತೇಲಿ ಅಳೋದು ನಗೋದು, ನೀನ ?  ನಿನ್ನ ಪಾತ್ರವ?"
" ನಾನೂ ಅಲ್ಲ ನನ್ನ ಪಾತ್ರವೂ ಅಲ್ಲ. ಅದು ನನ್ನಲ್ಲಿ ರೂಪುಗೊಂಡ ಕಲ್ಪನೆ"
"ನಾ ಹೇಳೋದು ಸತ್ಯ. ನಾನು ನನ್ನ ಕಣ್ಣಾರೆ ಕಂಡಿದ್ದೀನಿ. ನೀ ಕೊಟ್ಟ ನವಿಲುಗರಿ ಮೊದಲು ಮೊಟ್ಟೆ ಆಯ್ತು, ಆಮೇಲೆ ಆ ಮೊಟ್ಟೆ ಒಡೆದು ಮರಿ ಆಯ್ತು. ಆ ಮರಿಯೇ ಅಲ್ಲಿ ಕುಣೀತಿದೆ ನೋಡು. ನಿನ್ನ ಕತೆಯ, ನನ್ನ ಸತ್ಯದ, ಜೊತೆಗೆ ಹುಟ್ಟಿದ ಆ ನವಿಲನ್ನ ನೀನೆ ತೆಗೆದುಕೊಂಡು ಹೋಗು."
"ಅದು ಮಾತ್ರ ಸಾದ್ಯ ಇಲ್ಲ . ನಂದು ಕತೇಲೆ ಪಾತ್ರ ಮಾತ್ರ. ನೀ ತೋರಿಸೋ ನವಿಲು ನಿಜವಾದದ್ದು. ಕತೇಲಿ ಎತ್ತುಕೊಂಡು ಹೋಗ್ತೇನೆ, ರಾಜಕುಮಾರನ ತರ-ಆದರೆ ನಿಜದಲ್ಲಿ ನಿನ್ನ ಹತ್ತಿರಾನೆ ಬಿಟ್ಟು ಹೋಗ್ತೇನೆ. ನಂಗೆ ನಿಜದಲ್ಲಿ ಬದುಕೋ ತಾಕತ್ತಿಲ್ಲ."
" ಸರೀ ಹಾಗಾದ್ರೆ. ನವಿಲನ್ನ ಇಲ್ಲೆ ಬಿಡು. ನಿಂಗೆ ಬೇಕಿರೋದು ಕತೆ ತಾನೆ. ನೋಡು ಅಲ್ಲಿ  ಆ ನವಿಲು ಒಂದು ಕತೇನೆ ಹುಟ್ಟಿಸಿದೆ. ಆ ಕತೇನ ಕರೆದುಕೊಂಡು ಹೋಗು. ಅದನ್ನ ಒಲಿಸಿ, ಆಲಿಸು. ಆಗ ಆ ಕತೆ ನಿಂಗೆ ಒಲಿಯುತ್ತೆ, ನಿಂಗೆ ಕತೆ ಕಟ್ಟುತ್ತೆ."
"ಹೇ ... ಕತೆ... ಬಾ ನಂಜೊತೆ...."

----------------------೦-----------------------೦-----------------------------------
"ಕತೆ, ನಾ ನಿನ್ನನ್ನ ಮುದ್ದಿಸ್ತೀನಿ. ಪ್ರೀತಿಸ್ತೀನಿ. ಆಡಿಸ್ತೀನಿ. ನೀ ಹೇಳ್ದಂಗೆ ಕೇಳ್ತೀನಿ. ನಂಗೊಂದು ಕತೆ ಕಟ್ಟು. ನೋಡು, ಆ ಕತೇಲಿ ನನ್ನನ್ನ ಒಂದು ಪಾತ್ರವನ್ನಾದರೂ ಮಾಡಿಸು. ನಿಂಗೆ ಬೇಕಾದದ್ದನ್ನ ನಾನು ಕೊಡ್ತೇನೆ. ನೀ ಹೇಳ್ದಂಗೆ ಕೇಳ್ತೇನೆ."
"ಅಯ್ಯಾ, ನನ್ನುಟ್ಟು ಯಾವ ಅದ್ಯಾವ ಋಣಾನೋ ಏನೋ ನಂಗೊತ್ತಿಲ್ಲ. ಅದ್ಯಾವ ಕಾರ್ಯ ಕಾರಣದ ಸಂಬಂಧವಾಗಿ ನಾ ಬಂದೆನೋ ಏನೋ? ಅದೇಗೆ ನಿನ್ನ ಹತ್ತಿರ ಬಂದೆನೊ ಗೊತ್ತಿಲ್ಲ. ಗೊತ್ತಿಲ್ಲ ಏನೂ ನನಗೆ. ಮೊದಲು ಕಂಡಾತ ಹೇಳಿದ ನನ್ನ ಹುಟ್ಟಿಗೆ ನೀನೆ ಕಾರಣವಂತೆ. ನನ್ನ ಹುಟ್ಟಿಸಿದಾತ ನೀನಂತೆ. ಮೊದಲು, ನೀನು ನನ್ನ ಯಾಕೆ ಹುಟ್ಟಿಸಿದಿ ಅಂತ ಹೇಳು. ಆಗ ನಾನು ನಿಂಗೆ ಕತೆ ಹೇಳ್ತೀನಿ."
" ಅಯ್ಯಾ ಕತೆ, ಆ ದಾಸಯ್ಯನ ಮಾತನ್ನ ನಂಬಬೇಡ ಕೂಸೆ. ನಾನು ನಿನ್ನನ್ನ ಹುಟ್ಟಿಸಲೇ ಇಲ್ಲ. ಅದು ಶುದ್ಧ್ ಸುಳ್ಳು. ನಿಂಗೊತ್ತ ನವಿಲು ಗರಿಯಿಂದ ಹುಟ್ಟಿದ ನವಿಲಿಂದ ಹುಟ್ಟಿದ್ದಂತೆ ನೀನು! ಅದೇಗೆ ನಂಬುತ್ತೀಯ ಅದನ್ನ. ಆದ್ದರಿಂದ ನಾನು ನಿನ್ನನ್ನ ಹುಟ್ಟಿಸಿದಾತನಾಗಿರಲಿಕ್ಕಿಲ್ಲ ನೋಡು."
"ಅಯ್ಯಾ, ಕತೆಯಲ್ಲಿ ನಿಜವಿಲ್ಲ ಹಾಗೇ ಸುಳ್ಳೂ ಇಲ್ಲ. ನನ್ನ ಹುಟ್ಟು ನಿಜವಲ್ಲವೆಂದಾಗ ಅದು ಸುಳ್ಳೂ ಆಗಿರಲಿಕ್ಕಿಲ್ಲ. ಹೇಳು, ನೀ ಹೇಳದೆ ನಾ ಬದುಕೋಲ್ಲ."
" ಮಗು ಕತೆಯೆ, ನಿನ್ನ ಹುಟ್ಟಿಸಿದ್ದು ನೀ ಕತೆ ಹೇಳಲಿಕ್ಕೆಂದು. ಕತೆಯಿಲ್ಲದೆ ನಾ ಬದುಕಲಿಕ್ಕೆ ಆಗೋಲ್ಲ. ನನ್ನ ಜೀವವನ್ನ ಯಾವುದೋ ಕತೆಯಲ್ಲಿ ಬಂದಿಸಿಟ್ಟುಬಿಟ್ಟಿದ್ದಾರೆ. ಆ ಕತೆಯನ್ನ ನಾ ಹುಡುಕಬೇಕು. ಹುಡುಕಿ ಅಲ್ಲಿರೋ ಜೀವವನ್ನ ಕಾಣಬೇಕಿದೆ. ನೀ ಹೇಳೋ ಕತೇಲಿನ ಪಾತ್ರವು ನಾನಾಗಬೇಕು. ಅದಕ್ಕೆ ನಿನ್ನನ್ನ ಹುಟ್ಟಿಸಿದೆ. ಈಗ ಹೇಳು ಕತೆಯ."
"ಅಯ್ಯಾ, ನಿನಗೆ ಕತೆ ಹೇಳಲಿಕ್ಕೆ, ಆ ಕತೆಯಲ್ಲಿನ ಪಾತ್ರವೊಂದು ನೀನಾಗಲಿಕ್ಕೆ ನನ್ನನ್ನು ಹುಟ್ಟಿಸಿದ್ಯ? ಅದು ಸ್ವಾರ್ಥ ಅಲ್ಲವ?"
"ಸತ್ಯ-ಅಸತ್ಯಗಳೆರೆಡೂ ಇಲ್ಲದ ಕತೇಲಿ, ಸ್ವಾರ್ಥ-ನಿಸ್ವಾರ್ಥಗಳೆಂಬೋ ಪದಗಳಿಗೂ ಜಾಗವಿಲ್ಲ. ಕತೆಯಲ್ಲಿ ಪ್ರಶ್ನೆಗಳಾಗಲಿ ಉತ್ತರಗಳಾಗಲಿ ಇರೋಲ್ಲ. ಈಗ ಪ್ರಶ್ನೆಗಳು ಬೇಡ, ಕತೆ ಬೇಕು...."
" ಅಪ್ಪಣೆ.....
ಒಂದಾನೊಂದು ಕಾಲವಲ್ಲ, ಇದೇ ಕಾಲ. ಒಂದಾನೊಂದು ಊರಲ್ಲ, ಇದೇ ಊರು....... ಅಲ್ಲೊಬ್ಬ.......... ಅವರು...........................................

ಸೃಷ್ಟಿ


ಚಿಕ್ಕೋನಿದ್ದಾಗ ನಾ ಬರೆದ
ಅಪ್ಪ, ಅಮ್ಮ, ಮನೆಯ
ಚಿತ್ರಗಳನ್ನ
ನನ್ ಹುಡುಗೀಗೆ ಇಂದೇ ತೋರಿಸ್ತಿದ್ದೆ.

ಈಗ
ತನ್ನ ಚಿತ್ರ ಬರಿ ಅಂತಾಳೆ,
ಬರೆಯೋಕ್ಕಾಗುತ್ತ?

ನಾ ಕವಿ ಅಂತ ಗೊತ್ತಾಗಿ
ಕವನ ಬರೆಯೋದು ಕಲಿಸು ಅಂತ
ರಚ್ಚೆ ಹಿಡಿದಿದ್ದಾಳೆ.

ನನ್ ಹುಡುಗಿ ಬಸುರಿ ಈಗ

ತಾ ಹೆರುವಾಗ
ಪಡೋ ನೋವನ್ನ
ಕವನ ಆಗಿಸ್ಬೇಕಂತೆ.

ಸುದ್ದಿ ಮುಟ್ತು
ನನ್ ಹುಡುಗೀಗೆ ಮಗೂನಂತೆ
ನನ್ನೇ ಹೋಲುತ್ತಂತೆ
ನನ್ನ ಮಗು

(ಈ ಕವನಾನ ನನ್ ಹುಡುಗೀಗೆ ಕೊಟ್ಟೆ)

ಕತೆ ಸಂಖ್ಯೆ ೩

{ಇಲ್ಲಿನ ಪಾತ್ರಗಳು ಕತೆ ಸಂಖ್ಯೆ ೧ ಹಾಗು ಸಂಖ್ಯೆ ೨ ಇಂದ ಮುಂದುವರೆದದ್ದು. ಈ ಕತೆಗೆ ಆ ಪಾತ್ರಗಳ ನೆನಪು ಅವಶ್ಯ.  ಮೂರೂ ಕತೆಯೂ ಸೇರಿ ಒಂದು ಕತೆಯಾಗಿ, ಅಥವಾ ಮುರೂ ಬೇರೆ ಬೇರೆಯಾಗಿ, ನನ ಬದುಕನ್ನ ಪ್ರವೇಶಿಸಿ ನನ್ನ ಬದುಕಲ್ಲಿ ಲೀನವಾಗಿದೆ. ಈ ಕತೆಯೊಂದಿಗೆ ಈ ಪಾತ್ರಗಳನ್ನ ಅಂತ್ಯಗೊಳಿಸುತ್ತಿದ್ದೇನೆ. ವಂದನೆಗಳು. }



ಅಪ್ಪ ಬೆಳಗ್ಗೇನೆ ಫೋನ್ ಮಾಡಿದ್ರು, ರಘು ಮಾಮ ತೀರ್ಕೊಂಡ್ರು ಅಂತ. ಒಮ್ಮೆಗೆ ತೀವ್ರ ಬೇಸರ ಆಯ್ತು. ಕಡೇ ಸಾರಿ ನೋಡೋಕ್ಕೆ ಅಂತ ಹೋಗಿದ್ದೆ. ಆಗ ಅಪ್ಪ ಹೇಳ್ತಾ ಇದ್ರು, ಸಾಯೋವಾಗ ಅಪ್ಪಾನೆ ಜೊತೆಗಿದ್ರಂತೆ, ಅತ್ತೆ ಅಂತು "ಲೋ ಸೀನ, ಸತ್ತಿದ್ದಾನೆ ಬಿಡೊ" ಅಂತ ಅಂದೇ ಬಿಟ್ರಂತೆ. ಮತ್ತೆ ಮತ್ತೆ ಬೇಸರ ಆಗ್ತಿತ್ತು.
***
"ಯಾವ ವ್ಯಕ್ತೀಗೂ ಆತನದೇ ಆದ ನೆಲೆ ಅನ್ನೋದು ಇಲ್ಲವೇ ಇಲ್ಲ. ಅದು ಬರೀ ಕಲ್ಪನೆ. ಇದೆ ಅನ್ನೋ ಭ್ರಮೆಯಲ್ಲಿ ಬದುಕೋದು ಅಷ್ಟೆ."
"ಗುರುಗಳೇ(ನನ್ನ ಮಿತ್ರನಿಗೆ ನಾವು ಪ್ರೀತಿಯಿಂದ ಹೀಗೆ ಗುರುಗಳೆ ಅಂತ ಕರಿತೀವಿ) ಅದೇಗೆ ಸಾದ್ಯ? ಅದನ್ನ ನಾವು ಪ್ರಶ್ನಿಸೋಕ್ಕೂ ಆಗೋಲ್ಲ."
"ಅರವಿಂದ, ನೆಲೆ ಅನ್ನೋದು, ಅರ್ಥ ಅನ್ನೋದು, ಎಲ್ಲವೂ ಒಂದೆ ಎಂಬಂತೆ ಕಾಣ್ತಾ ಇದೆ. ಬದುಕಿಗೆ ಒಂದು ಅರ್ಥ ಇದೆ, ಆ ಅರ್ಥಕ್ಕಾಗಿ ಈ ಹೋರಾಟ ಎಲ್ಲಾ ಎನ್ನೋದು ಸಿದ್ದಾಂತ. ಮಾರ್ಗ ಏನೇ ಇರಲಿ, ಆದರೆ ಅರ್ಥ ಅನ್ನೋದೊಂದಿದೆ ಅನ್ನೋದು ಎಲ್ಲರೂ ಒಪ್ಪುವ ಸಂಗತಿ. ಈಗ ಆ Axiom ಅನ್ನ ಪ್ರಶ್ನಿಸೋದು ಹೇಗೆ? ಅರ್ಥ ಅನ್ನೋದೊಂದಿದೆ, ಆ ನೆಲೆಯ ಮೇಲೆ ನಾನು ನಿಂತಿದ್ದೇನೆ ಅನ್ನೋ ಭ್ರಮೆಯ ಮೇಲೆ ನಿಂತು ಸತ್ಯಕ್ಕೆ ಹಂಬಲಿಸ್ತಾ ಇದ್ದೇವೆ. ನಂಗೆ ಅನ್ನಿಸೋ ಮಟ್ಟಕ್ಕೆ ಎಂತದೂ ಇಲ್ಲ"
"ಅಯ್ಯೋ ಬಿಡಿ, ಅದಕ್ಕೆ ನಿಮ್ಮನ್ನ ಗುರುಗಳು ಅಂತ ಅನ್ನೋದು ನೋಡಿ."
***
ಸಂಗತಿಗಳನ್ನ ನಿರ್ಧರಿಸುವುದು ಅಷ್ಟು ಸುಲಭವಾಗಿರಲಿಲ್ಲ ನಂಗೆ. ವೈಶಾಖಿ ಅನ್ನೋದು ಬರೀ ಹೆಸರಾಗಿರಲಿಲ್ಲ, ಅಥವಾ ಬರೀ ಹುಡುಗಿಯೂ ಆಗಿರಲಿಲ್ಲ.
"ಅರು ಮದುವೇ ಆಗಬೇಕು ಅಂತ ಅನ್ನಿಸ್ತಾ ಇದೆ, ಯಾರೋ ಒಬ್ಬರನ್ನ. ಹುಡುಕಿ ಸದ್ಯ ಮದುವೆ ಆಗಬೇಕು. ಮನೇಲಿ ಒತ್ತಡ. ಜೊತೆಗೆ ನಂಗೂ ಅನ್ನಿಸ್ತಾ ಇದೆ, ಬೇರೆ ಏನಿದೆ ಮಾಡಲಿಕ್ಕೆ ಅಂತ?"
ಬೇರೆ ಏನೂ ಇರಲಿಲ್ಲವೆ? ಇರುವುದೇ ಇಲ್ಲವೆ? ಅಂದು ಅರ್ಥದ ಪ್ರಶ್ನೆ ನಂಗೆ ಹುಡುಗಿಯ ರೂಪವಾಗಿ ಎದುರು ಕಾಡಿತ್ತು.
"ಹೇ ಅರು, ನಂದು ಮದುವೆ ಕಣೋ. ಮುಂದಿನ ತಿಂಗಳು ಜುಲೈ ೧೩ ನೇ ತಾರೀಖು. ಕಂಡೀತ ಬರಬೇಕು."
ಒಂದು ರೂಪಕ ಉರಿಯುತ್ತಿರುವುದು ಕಂಡಿತು. ಅದು ಬೆಳಕ, ಬೆಂಕಿಯ ತಿಳಿಯಲಿಲ್ಲ. ನಾನು ಸುಮ್ಮನಾಗಿ ಹೋದೆ.
***
"ಗುರುಗಳೆ ನೀವು ಹೇಳ್ತೀರ, ಅರ್ಥವಿಲ್ಲ ಏನೂ ಇಲ್ಲ ಅಂತ. ಆ ಒಂದು ಅರ್ಥಕ್ಕಾಗಿ, ನೆಲೆಗಾಗಿ ನಾನು ಒಂದು ಸಂಬಂಧಾನೆ ಕಳ್ದುಕೊಂಡು ಬಿಟ್ಟೆ.
ಅವತ್ತು ವೈಶಾಖಿ ಕೇಳಿದ್ಲು
"ಹೇ ನಿಂಗೆ ಬದುಕಿನ ಅರ್ಥ ಗೊತ್ತೇನೊ? ಅಂತ ಅಂದ್ರೆ, ನೀನು ಯಾಕೆ ಬದುಕಬೇಕು ಅಂತ ಇದ್ದೀಯ?"
"ಸೃಷ್ಠಿಯನ್ನ ಅರೀಬೇಕು. ಪ್ರಕೃತೀನ ಅದರ ಆಳದಲ್ಲಿ ತಿಳೀಬೇಕು. ಒಬ್ಬ ವಿಜ್ನಾನಿಯಾಗಿ ಕಾರಣಗಳಿಂದ, ತರ್ಕದಿಂದ ತಿಳಿಯಬೇಕು. ಒಬ್ಬ ಕವಿಯಾಗಿ ಅದನ್ನ ಅನುಭವಿಸಬೇಕು. ಈಗ ಸದ್ಯ PhDಗೆ ಹೋಗಬೇಕು. ನಿಂದೇನು ಕತೆ?"
"ನಂಗೆ ಹುಟ್ಟಿಸಬೇಕು. ನಂಗೆ ಮಗೂನ ಹುಟ್ಟಿಸಬೇಕು ಅಂತ ಆಸೆ. ಅದು ಬರೀ ಆಸೆಯಲ್ಲ. ಅದೇ ನನ್ನ ಬದುಕಿನ ಅರ್ಥ ಕೂಡ. ನಿಂಗೆ ತಾಕತ್ತಿದೆಯ, ನನ್ನಲ್ಲಿ ಮಕ್ಕಳನ್ನುಟ್ಟಿಸೋಕೆ? ಹಾಗಾದರೆ ಬಾ, ಈಗಲೆ ಮದುವೆಯಾಗು."

ಅಲ್ಲಿಗೆ ಎಲ್ಲವೂ ಮುಗಿದಿತ್ತು ಗುರುಗಳೆ. ಮಕ್ಕಳನ್ನ ಹುಟ್ಟಿಸೋದು ಅಷ್ಟು ಸುಲಭ ಅಲ್ಲ. ನನ್ನ ನೆಲೆ ಹುಟ್ಟಿನ ಅರಿವಾಗಿತ್ತು, ಹುಟ್ಟೇ ಅವಳ ನೆಲೆಯಾಗಿತ್ತು. ಅದಕ್ಕೆ ಈಗಲೂ ಅರ್ಥ, ನೆಲೆ ಅಂದರೆ ಭಯವಾಗುತ್ತೆ. ಈ ಪ್ರಶ್ನೆಗಳನ್ನ ಪಕ್ಕಕ್ಕೆ ಇಟ್ಟೂ, ಬದುಕಬೇಕಿದೆ. ಅರಿವು, ಹಾಗು ಅದರ ಅನುಭವ ತುಂಬಾ ಆಳಕ್ಕೆ ನನ್ನನ್ನ ಕರ್ಕೊಂಡು ಹೋಗ್ತಾ ಇದೆ. ಆಳದಲ್ಲಿ ಬದುಕನ್ನ ಅನುಭವಿಸಿಬಿಡಬೇಕು ನೋಡಿ. ಅಷ್ಟೆ."

ಮಂತ್ರ



ಇಲ್ಲಿ ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತೆ.

ಅರ್ಥವಾಗದ ಭಾಷೆಯ ಲಿಪಿ
ಅವ್ಯಕ್ತ ಚಿತ್ರಗಳಂತೆ ಕಾಣುತ್ತೆ,
ದೂಳಿಡಿದ ಹಳೆ X-rayಯನ್ನ ಬೆಳಕಿಗೊಡ್ಡಿದಾಗ
ಬರೀ ಎಲುಬುಗಳೇ ಕಾಣುತ್ತೆ ಹೃದಯವಿಲ್ಲದಂತೆ,
ಕಾರ್ಯಕಾರಣದ ಭ್ರಮನಿರಸನಕ್ಕೆ
ಸೂಳೇ ಮಗುವಿನಂತೆ ಕವಿತೆ ಹುಟ್ಟುತ್ತೆ.

ನನ್ನ ಕತೆಯ ಪಾತ್ರವೊಂದು ಸತ್ತಿದ್ದಕ್ಕೆ
ಸ್ಮಶಾನಕ್ಕೋಗಿ ಬಂದು
ಹತ್ತು ದಿನ ಸೂತಕದಲ್ಲಿದ್ದೆ.

ಒಂದೂರಲ್ಲಿ ಒಬ್ಬ ಮನುಷ್ಯ ಇದ್ದ
ನಾಟಕದ ಪಾತ್ರಕ್ಕೆ ಬಣ್ಣ ಹಚ್ಕೊಂಡು ಬದುಕ್ತಿದ್ದ
ಒಬ್ಬ ಹುಡ್ಗಿ ಆ ಪಾತ್ರಾನ ನೋಡಿದ್ದೇ
ಶರತ್ತೊಂದಾಕಿ ಮದುವೆಯಾಗಿಬಿಟ್ಳು
"ರಾತ್ರಿ ಮಲಗೋವಾಗ ಆ ಪಾತ್ರದ ಬಣ್ಣದಲ್ಲೇ ಮಲಗ್ಬೇಕು"
ಹುಡ್ಗಿ ತಾನೂ ಸುಂದರವಾಗಿ ಕಾಣಬೇಕೂಂತ
ಕನ್ನಡೀಗೇ ಬಣ್ಣ ಹಚ್ಚಿ
ನೋಡ್ತಾ ಕೂತ್ಲು.

ಪ್ರತಿಮೆ ರೂಪಕಗಳೆಲ್ಲಾ ಕನ್ನಡಿಯೆದುರು ಸಿಂಗರಿಸಿಕೊಳ್ಳುತ್ತಿರುವಾಗ
ಅರ್ಧ ಸುಟ್ಟ ಶವಕ್ಕೆ ಜೀವ ಬಂದಿದೆ
ಹಸ್ತ ಮೈಥುನದಿಂದ ಮಕ್ಕಳನ್ನುಟ್ಟಿಸುವ ಮಾರುಕಟ್ಟೆಯಲ್ಲಿ
ಬದುಕುತ್ತಿದ್ದೇನೆ
ನಿನ್ನ ಮಾಯಾ ನವಿಲುಗರಿಯಿಂದಲಾದರೂ
ಹುಟ್ಟಿಸಿಬಿಡು
ನಿಜವಾದ ಗಂಡು-ಹೆಣ್ಣನ್ನ

ಅನಾಥ ಸಾವಿನ ಮೂಖ ಮೌನಕ್ಕೆ
ಹುಟ್ಟು ತನ್ನ ತಾನೇ ಕಂಡು ಸಂಭ್ರಮಿಸಿತು
ಅರ್ಥವೆಂಬೋ ಉನ್ಮಾದದಲ್ಲಿ
ಆಕಾರಕ್ಕೆ ಧ್ಯಾನಿಸುತ್ತಿದ್ದೇನೆ

ಇಲ್ಲಿ ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತ?




ಮಹಾನವಮಿ


ಮಹಾನವಮಿ-
"ಅಸ್ಮಿತೆ ಹಾಗೂ ಸ್ವಾತಂತ್ರ್ಯಗಳ ನಡುವಿನ ಜೀವಿತ ಪ್ರಜ್ಞೆ"
ಅಂತ
ಒಂದು ಕವನ ಬರ್ದೆ.

ಮೊದಲಲ್ಲಿ,
ಪ್ರಶ್ನೆ-ಉತ್ತರ-ಅದರ ನೋವೂ ಸಂಕಟ
ಸತ್ಯ-ಮಿಥ್ಯ-ಅದರೊಂದಿಗಿಷ್ಟು ಪರಮ ಸತ್ಯ,
ಜೊತೆಗಿರ್ಲಿ ಅಂತ
ಕೆಂಡದಲ್ಲಿ ಸುಟ್ಟ ಮನುಷ್ಯ
ಅವ್ನ ಬೂದೀಲಿ ಅರಳಿದ ಹೂವಿಗೊಂದು ದುಂಭಿ
ದುಂಭಿಗಾಗಿ ಮನುಷ್ಯನ ಸರ್ವ ತಂತ್ರ ಪ್ರಯತ್ನ.
(ಅದೇ ಮನುಷ್ಯಾನ ಅಥವಾ ಬೇರೆ ಯಾರಾದರೂ ಆಗಿರ್ಬೋದಾ...?)

ಕವಿತೇನ ಮುಂದುವರಿಸ್ಲೇ ಬೇಕು,
"ಹುಡುಗಿಯ ಮಾತೆತ್ತದ ಕವಿತೇನ ಬರೆಸಿಬಿಡು"
ಅಂತ ಕೇಳ್ಕೊಳ್ತಾ
ತಾಯಿ ಮತ್ತೆ ಹುಡುಗಿ, ಒಂದಿಷ್ಟು ಹಾಲು
ಅಂತ ಏನೇನೋ ಬರ್ದು
ಕಡೆಗೆ ಬರ್ದೆ ನೋಡೀ
"ಬರೆಸಿಬಿಡು,
ನಾ ಎಡವಿ ಬಿದ್ದ ತೆಲೆ ಬುರುಡೆಯ ಹಣೆ ಬರಹವನ್ನ
ಒಂದು ಕವಿತೆಯಾಗಿ"

ಕವಿತೇನೂ ಮುಗಿಸ್ಬೇಕು.
"ಸತ್ತ ಹಲ್ಲೀನ ಆಯ್ಕೊಂಡು ತಿಂತಿದ್ದ ಮನುಷ್ಯ
ಮುಟ್ಟು ನಿಂತ ಸೂಳೆ ಮನೇಗೋಗಿ
ಆತ್ಮಹತ್ಯೆ ಮಾಡ್ಕೊಂಡ"

ಕಡೇ ಸಾಲಲ್ಲಿ ನಮ್ಮೂರ ದಾಸಯ್ಯ ಹೇಳ್ದ
"ಮೀರ್ಬೇಕು ಅಂತಂದ್ಕೊಂಡವ
ಅನ್ಬವಾನೇ ಮೀರ್ಬಿಡ್ಬೇಕು ಕಣಾ"
ಅಂತೇಳಿ
ಮುಗಿಸಿಬಿಟ್ಟೆ.

ನಿಜಕ್ಕೂ ಒಂದು ಕವನಾನ ಮುಗಿಸ್ಲಿಕ್ಕೆ ಆಗುತ್ತಾ ಅನ್ನೋದೂ ನಂಗೆ ತಿಳೀತಿಲ್ಲ
ಆದ್ರೂ
ನಾನೂ ಈ ಕವನಾನ ಮುಗಿಸ್ತಾ ಇದ್ದೀನಿ....


ಕಥೆ ಸಂಖ್ಯೆ ೨

{ಆತ್ಮೀಯರೆ,
ಕಥೆ ಸಂಖ್ಯೆ ೨ ರಲ್ಲಿ, ಕಥೆ ಸಂಖ್ಯೆ ೧(ಕಥೆ ಸಂಖ್ಯೆ ೧) ರ ಹಲವು ಪಾತ್ರಗಳು, ಹಾಗು ಸನ್ನಿವೇಶಗಳ ಉಲ್ಲೇಖವಾಗುವುದರಿಂದ, ಕಥೆ ಸಂಖ್ಯೆ ೨ ರ ಓದಿಗೆ ಕಥೆ ಸಂಖ್ಯೆ ೧ ಅವಶ್ಯ. ಆದ್ದರಿಂದ, ಮೊದಲು ಕಥೆ ಸಂಖ್ಯೆ ೧ ನ್ನ ಓದಿ, ನಂತರ ಕಥೆ ಸಂಖ್ಯೆ ೨ನ್ನ ಓದಿ..... }



ತುಂಬಾ ದಿನಗಳಿಂದ ಕತೆ ಬರೀಬೇಕು ಅಂತ ಅಂದ್ಕೊಳ್ಳೋದು, ಬರೀತ ಕೂರೋದು, ಆದ್ರೆ ಅದೇನಾಗುತ್ತೋ ಏನೋ, ಬರ್ದಿದ್ದಾದಮೇಲೆ ಸರೀ ಇಲ್ಲ ಅಂತ ಹೇಳಿ ಹರಿದು ಹಾಕೋದು. ಹೀಗೇ ನಡೀತಾ ಇತ್ತು. ಆದರೆ, ಯಾಕೋ ಕತೇ ಬರೀಬೇಕು ಅನ್ನೋ ಜಿದ್ದು ಮಾತ್ರ ಹೋಗಲೇ ಇಲ್ಲ. ಹೇಗಾದ್ರೂ ಬರೀಲೇ ಬೇಕು ಅನ್ನೋ ಹಸಿವು ಕಾಡ್ತಾ ಇತ್ತು. ಹೀಗೆ ಕತೆ ಬರೀಬೇಕು ಅಂತ ಅಂದ್ಕೊಂಡು ಕೂತಾಗ, ಕತೆ ನಿಜ್ವಾಗಿ ನಡೆದಿರಬೇಕ? ಅಥವಾ ಅದು ಕಲ್ಪನೆ ಮಾತ್ರವಾಗಿದ್ರೆ ಸಾಕಾ? ಅಥವಾ ಕಲ್ಪನೆ ಹಾಗೂ ಸತ್ಯಾ ಎರೆಡೂ ಬೆರೆತಿರಬೇಕ? ಅನ್ನೋ ಪ್ರಶ್ನೆಗಳು ಕಾಡಿದ್ರೂನೂ, ನಾನೇನೂ ಹೆಚ್ಚಿಗೆ ತಲೆ ಕೆಡಿಸ್ಕೊಳ್ಳಲಿಲ್ಲ. ನಾನೇನೂ ಈ ಸಾಹಿತ್ಯ ಮೀಮಾಂಸೆ, ವಿಮರ್ಷೆ ಹಾಳೂ- ಮೂಳೂ ಓದಿದವ್ನಂತೂ ಅಲ್ಲವೇ ಅಲ್ಲ. ಆದ್ರಿಂದ ಅದ್ರ ಬಗ್ಗೆ ಎಲ್ಲಾ ಹೆಚ್ಚಿನ ತಲೆ ಕೆಡಿಸ್ಕೊಳ್ಳೋಕೆ ಹೋಗಲೇ ಇಲ್ಲ.
ಕಥೆ ಸಂಖ್ಯೆ ೧ ನ್ನ ಬರೆದಾಗ, ಅದಕ್ಕೆ ಏನು ಹೆಸರಿಡಬೇಕು ಅಂತ ತಿಳೀಲೇ ಇಲ್ಲ. ಇನ್ನೂ ಮುಖ್ಯವಾಗಿ ಹೇಳೋದಾದರೆ ನಂಗೆ ಹೆಸರಿನಲ್ಲಿ ನಂಬಿಕೆ ಇಲ್ಲ. ಯಾಕೆ ಹೆಸರು ಬೇಕು ಅಂತ.? ಆದರೂ ಮುಂದೆ ಏನಕ್ಕಾದರೂ ಗುರುತಿಸಬೇಕು ಅಂತನ್ನಿಸಿದರೆ ಇರಲಿ ಅಂತ ಕತೆ ಸಂಖ್ಯೆ ೧ ಅಂತ ಹೆಸರಿಟ್ಟೆ. ಹೆಸರಿಟ್ಟ ಮೆಲೆ ತಪ್ಪಿನ ಅರಿವಾಯ್ತು. ನಾನು ಬರೆದದ್ದು ನಿಜಕ್ಕೂ ಕತೆಯೆ?
ಕತೆ ಸಂಖ್ಯೆ ೧ನ್ನ ಬೆರೆದು ಬ್ಲಾಗಿಗೆ ಹಾಕಿ, ಕೊಂಡಿಗಳನ್ನೆಲ್ಲ ಮಿಂಚಂಚೆ ಕಳಿಸಿ ಮಲಗಿದೆ. ಬೆಳೆಗ್ಗೆ ಎದ್ದು ಮಾಮೂಲಿಯಾಗಿ ಕಾಲೇಜಿನಲ್ಲಿ ಯಾವುದೋ ಸಂಶೋಧನಾ ಲೇಖನವನ್ನ ಹಿಡಿದು ಕೂತಿದ್ದೆ. ನನ್ನ ಹುಚ್ಚುತನಗಳ ಅರಿವಿದ್ದ ನನ್ನ ಗೆಳೆಯ ವಿನಯ ದೇಸಾಯಿ ಫೋನ್ ಮಾಡಿ ಒಂದೇ ಸಮನೆ
"ಹೇ ಮಗೆನೇ, ಯಾರೋ ಆ ಹುಡ್ಗಿ...?"
"ಎಲ್ಲಿ ಸಿಕ್ಕಿದ್ಲೋ...?"
"ಲೇ ಅರವಿಂದ, ಒಂದು ಮಾತೂ ಹೇಳಿಲ್ಲ ಅಲ್ವೋ, ಅಲ್ಲ ನಿಜಕ್ಕೂ ನೀನು ಆ ಹುಡುಗೀನ ಹುಡುಕಿಕೊಂಡು ಹೋಗಿದ್ಯಾ...? ಅಥ್ವ ಸುಮ್ನೆ ಕಥೆನ...?
ಅಂತ ಫೋನ್ ಮಾಡಿದಾಗ...? ನಂಗೆ ಒಮ್ಮೆಗೆ ಗಾಬರಿಯಾಗಿ ಹೋಯಿತು. ಮೊದಲಂತು ಇವ್ನು ಏನನ್ನ ಮಾತಾಡ್ತಾ ಇದ್ದಾನೆ ಅಂತಾನೇ ತಿಳೀಲಿಲ್ಲ. ಆಮೇಲೆ ಗೊತ್ತಾಯ್ತು, ಇವ್ನು ರಾತ್ರಿ ನನ್ನ ಕತೆ ಓದಿ ಈಗ ನಂಗೆ ಫೋನ್ ಮಾಡಿದ್ದಾನೆ ಅಂತ. ಹೇಗೋ ಅದೂ ಇದೂ ಹೇಳಿ, ನನ್ನ ಮಾತಿನ ಚಾಕಚಕ್ಯತೆಯಿಂದ ಅವನನ್ನ ಯಾಮಾರಿಸಿ ಫೋನ್ ಇಡೋ ರೀತಿ ಮಾಡಿದೆ.

ಒಂದು ಕ್ಷಣ ಅದೇ ಪ್ರಶ್ನೆಯನ್ನ ನಾನೇ ಹಾಕಿಕೊಂಡೆ. ಹೌದು, ಸತ್ಯಾಸತ್ಯತೆಯ ಪ್ರಶ್ನೆ ಇಲ್ಲೇ ಇದೆ, ನನ್ನಲ್ಲೇ, ನನ್ನ ಕತೆಯಲ್ಲೇ. ನನ್ನ ಕತೆ ಸತ್ಯವ ಅನ್ನೋದರಲ್ಲೇ ನನ್ನ ಬದುಕು ಸತ್ಯವ ಅನ್ನೋದು ಸೇರಿಕೊಂಡುಬಿಡುತ್ತೆ. ಆ ಪ್ರವಳ್ಳಿಕ ಸತ್ಯವ...? ನನ್ನ ಹುಡುಕಾಟ ಸತ್ಯವ....? ಆ ಕತೆಯ ಗೌತಮನ ಭ್ರಮೆ ಸತ್ಯವ.....? ಸಾಹಿತ್ಯ, ಬದುಕು ಎರೆಡೂ ಕೆಲವೊಮ್ಮೆ ತರ್ಕಕ್ಕೆ ಸಿಗೋಲ್ಲ ನೋಡಿ.

ಇಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ. ಒಂದು ದಿನ ನಾನು ಕಾಲೇಜಿನ ಕಡೆ ಹೋಗಬೇಕು ಅಂತ ಅಂದುಕೊಂಡಿದ್ದೆ, ಅದೇ ಸಮಯಕ್ಕೆ ವೈಶಾಖಿ ಫೋನ್ ಮಾಡಿ, ತಾನೂ ಬರ್ತಾ ಇದ್ದೀನಿ ನೀನೇನಾದ್ರು ಕಾಲೇಜಿನ ಕಡೆಗೆ ಬರೋದಾದ್ರೆ ಬಾ ಅಂತ ಹೇಳಿದ್ಲು. ಅವಳ ಮದುವೇಗೂ ಹೋಗಿರಲಿಲ್ಲ. ಬಸುರಿ ಹುಡುಗಿ ಬೇರೆ. ಹೋಗಿ ಮಾತಾಡಿಸಿ ಬರುವ ಅಂತ ಅನ್ನಿಸ್ತು. ಹುಡುಗಿಯಿಂದ ಸ್ತ್ರೀಯಾಗಿ ಈಗ ತಾಯಾಗುವ ಹಂತದಲ್ಲಿ ಇದ್ದಾಳೆ. ನೋಡಿ ಮಾತನಾಡಿಸುವ ಅಂತ ಅನ್ನಿಸ್ತು. ಸರೀ ಅಂತ ಹೋದೆ, ಅದೂ ಇದೂ ಮಾತಾಡ್ತಾ ಕೂತಿದ್ವಿ ಹಳೇ ಸ್ನಾಹಿತರು ಸಿಕ್ಕಿದ್ರೆ ಕೇಳ್ಬೇಕ, ಸಾವಿರ ಮಾತಿರುತ್ತೆ. ಹಾಗೇ ಮಾತಾಡ್ತಾ....
"ಅರವಿಂದ ನೀನು ಬರೆದಿರೋ ಕತೆ, ಅದೆ ಕಥೆ ಸಂಖ್ಯೆ ೧ನ್ನ ಓದಿದೆ. ಅಲ್ಲಿ ಬರೋ ಪ್ರವಳ್ಳಿಕ ಅಂದ್ರೆ ನಾನೇ ತಾನೆ..? ಹೆಸರು ಮಾತ್ರ ಬದ್ಲಾಯ್ಸಿದ್ದೀಯ. ನಂಗಂತೂ ಬಾಳಾ ಖುಷಿಯಾಯ್ತು ನೋಡು. ನನ್ನದೇ ಪಾತ್ರ, ಅಲ್ಲಿ, ಮತ್ತೇ ನಾನು ನೋಡ್ತಾ ಇದ್ದೆ. ಆ ಘಟನೆಗಳು ಹೇಳಿದ್ದೀಯಲ್ಲವ, ಆ ಎಲ್ಲಾ ಘಟನೆಗಳು ನಿಜ. ಅಂದರೆ ಅಲ್ಲಿಯೆಲ್ಲ ನಾನು ಇದ್ದೆ. ಆ ಘಟನೆಗಳೆಲ್ಲ ನನ್ನ ಜೊತೆಗೇನೆ ನಡೆದದ್ದು.
ಹಾಗಾದ್ರೆ, ನೀನು ನಿಜಕ್ಕೂ ನನ್ನನ್ನ ಹುಡುಕಿಕೊಂಡು ಬಂದಿದ್ಯ...?
ಅದ್ಯಾಕೆ ಹುಡ್ಕಿ ಬಂದೆ...?
ಅದೂ, ನನ್ನ ಹೊಟ್ಟೆ ಅಷ್ಟೊಂದು ಇಷ್ಟ ಆಯ್ತ....? "
"ಹೇ, ಹೋಗೆ, ನಿನ್ನ ತಲೆ. ನಂಗೇನ್ ಹುಚ್ಚ ನಿನ್ನನ್ನ ಹುಡ್ಕಿಕೊಂಡು ಬರ್ಲಿಕ್ಕೆ.
ಅದು ಕತೆ ಕಣೆ, ಕತೆ ಅಷ್ಟೆ.."
ಸ್ವಲ್ಪ ಹೊತ್ತು ಸುಮ್ಮನಾದಳು. ಅವಳಿಗೆ ಬೇಸರವಾಗಿತ್ತ, ಸಂತೋಷವಾಗಿತ್ತ...? ಯಾವ ಭಾವನೆಯನ್ನ ಕಾಣಲಿಕ್ಕೆ ಹೋಗಲಿಲ್ಲ. ಸ್ವಲ್ಪ ಹೊತ್ತು ಚೆನ್ನಾಗಿ ರೇಗಿಸಿದೆ. ಕಡೆಗೆ ಹೋಗುವಾಗ
"ಅಲ್ವೋ, ಈಗ ನಾನು ನಿನ್ನನ್ನ ಮದ್ವೆ ಆಗ್ತೀನಿ ಅಂತಂದ್ರೆ ನೀನು ಮದ್ವೆ ಆಗ್ತೀಯ...? Practical ಆಗಿ ಆಗೋಲ್ಲ ಬಿಡು. ಅದೆಲ್ಲಾ ಪಕ್ಕಕ್ಕಿಡು. ಹೀಗೆ ಸುಮ್ನೆ ಮಾತಾಡೋಣ, ಈಗ ನಮ್ಗೆ ಮದ್ವೆ ಆಗೋ ಸಾದ್ಯತೆ ಇದ್ರೆ ಮದ್ವೆ ಆಗ್ತೀಯ...? "
"ಹೋಗೆ ಹೋಗೆ..... ನಿನ್ನನ್ನ ಯಾರು ಕಟ್ಕೊತಾರೆ.... ಪರಮ ರಾಕ್ಷಸಿ ನೀನು...."
ಅಂತ ಜೋರಾಗಿ ಕಣ್ಣಲ್ಲಿ ನೀರು ಬರೋ ಅಷ್ಟು ನಕ್ಕೆ. ಕಣ್ಣಲ್ಲಿ ನೀರು ಬರ್ತಾ ಇತ್ತು. ಜೊತೆಗೆ ನಗ್ತಾ ಇದ್ದೆ. ಕಣ್ಣೀರು ನಕ್ಕಿದ್ದಕ್ಕೆ ಅಂತ ತಿಳ್ಕೊಳ್ಳಲಿ ಅಂತ. ಹೊಟ್ಟೇಲಿ ಮಗೂನ ಇಟ್ಕೊಂಡು ಮದ್ವೆ ಆಗ್ತೀಯ ಅಂತ ತಮಾಶೆ ಮಾಡ್ತಾ ಇದ್ಲು. ಅಲ್ಲಿಗೆ ನನ್ನ ಕತೆ-ಕವಿತೆ ಎಲ್ಲವೂ ನಿಂತುಹೋಯಿತು. ಕವಿತೆಗೆ ಶಬ್ದಗಳು ಸಿಗಲಿಲ್ಲ. ಕತೆ ಬರೀಲಿಕ್ಕೆ ಆಗಲಿಲ್ಲ. ಒಟ್ಟಿನಲ್ಲಿ ಸಾಹಿತ್ಯವನ್ನ ಬಿಟ್ಟುಬಿಟ್ಟೆ. ಅಂದೇ, ನಾನು ಹಿಂದೆ ಬರೆದ ಎಲ್ಲಾ ಕವನಗಳನ್ನಾ, ಕತೆಗಳನ್ನಾ ತಂದು ಒಲೆಗಾಕಿಬಿಟ್ಟೆ. ಎಲ್ಲಾ ಕತೆ, ಕವಿತೆ, ಕಾದಂಬರಿ, ಎಲ್ಲಾ ಸಾಹಿತ್ಯದ ಪುಸ್ತಕಗಳನ್ನೂ ಸುಟ್ಟುಬಿಟ್ಟೆ ಹಾಗು ಇನ್ನು ಮುಂದೆ ಸಾಹಿತ್ಯವನ್ನ ಓದುವುದಾಗಲೀ ಬರೆಯುವುದಾಗಲಿ ಮಾಡುವುದಿಲ್ಲ ಅಂತ ತೀರ್ಮಾನಿಸಿಬಿಟ್ಟೆ. ಕವಿತೆಯನ್ನ ಬರಿಯುವುದನ್ನ ನಿಲ್ಲಿಸೋದು ಅಷ್ಟು ಸುಲಭ ಅಲ್ಲ. ಕವಿತೆ ಬರೆಯೋದು ಎಷ್ಟು ಹಿಂಸೆಯೊ, ಬರೆಯದೆ ಇರುವುದೂ ಅಷ್ಟೇ ಹಿಂಸೆ. ಕಿತ್ತು ತಿನ್ನುತ್ತೆ.

ಆದರೆ, ಯಾವುದೋ ಒಂದು ಮಾರ್ಗ ಬೇಕೇ ಬೇಕು. ಹಾದಿ ಬಿಟ್ಟವುನೂ ನಡೆದ ಹಾದಿ ಒಂದು ಮಾರ್ಗವೆ. ಏನೋ ಇದೆ, ಅದನ್ನ ಅರೀಬೇಕು. ಇಲ್ಲದೇ ಹೋದರೆ ನಾನು ಸತ್ತುಹೋಗ್ತೇನೆ ಅನ್ನೋ ಅಷ್ಟು ಹಿಂಸೆ. ಆದರೆ, ಕವನ ಬರೆಯಲಾಗಲಿಲ್ಲ. ವೈಶಾಖಿಯನ್ನ ಬೇಟಿಯಾದ ನಂತರ, ನನಗೆ ಅತೀವ ಆನಂದವನ್ನ ಕೊಡುತ್ತಿದ್ದ ಕಾವ್ಯ ಭಯಂಕರ ಹಿಂಸೆಯಾಗಿಹೋಯಿತು. ಆದ್ದರಿಂದ ಫಿಸಿಕ್ಸ್ ಅನ್ನ ಹಿಡುದು ಕೂತೆ. ಕ್ವಾಂಟಂ ಫಿಸಿಕ್ಸ್ ನ ತಾತ್ವಿಕತೆಯ ಬಗೆಗೆ ತೀವ್ರ ಸಂಶೋಧನೆಗಿಳಿದೆ. ಕ್ವಾಂಟ್ಂ ಫಿಸಿಕ್ಸ್ ನ ಮೂಲಭೂತ ಸಮಸ್ಯೆಗಳ ಅಧ್ಯಯನಕ್ಕೆ ತೊಡಗಿದೆ. ಪ್ರಕೃತಿಯನ್ನ ಅದರ ಮೂಲಭೂತ ಹಂತದಲ್ಲಿ ಅರಿತುಕೊಳ್ಳಲು ಕ್ವಾಂಟಂ ಫಿಸಿಕ್ಸ್ ಬಗೆಗಿನ ಅರಿವು ಅಗತ್ಯ. ಅಲ್ಲಿ ತಾರ್ಕಿಕವಾಗಿ Reality ಯ ಬಗೆಗಿನ ಪ್ರಶ್ನೆಗಳಿಗೆ ಉತ್ತರಗಳನ್ನ ಕಂಡುಕೊಳ್ಳಬಹುದು. ಹೀಗಾಗಿ ಪಕ್ಕಾ ಫಿಸಿಸಿಸ್ಟ್ ಆದೆ ಹಾಗು ತರ್ಕದ ಮುಖಾಂತರವಾಗಿ ಸತ್ಯವನ್ನ ಹುಡುಕಿ ಹೊರಟೆ. ಇದಿಷ್ಟೇ ಅಲ್ಲದೆ ನಾಗಾರ್ಜುನನ ಮದ್ಯಮ ಮಾರ್ಗ ನನ್ನನ್ನ ಬಹಳ ಆಕರ್ಷಿಸಿತು. ಹೀಗಾಗಿ ಬೌದ್ದ ತತ್ವಶಾಸ್ತ್ರ ಹಾಗು ಫಿಸಿಕ್ಸ್ ನ ತಾತ್ವಿಕತೆ ಇವುಗಳ ಸಂಬಂದವಾಗಿ ತಿಳಿಯಲು ನಾಲಂದ ಮಹಾವಿಹಾರ, ನಾಲಂದಕ್ಕೆ ಹೊರಟೆ. ಅಲ್ಲಿ ಒಂದು ವಾರಗಳ ಕಾಲ ನಡೆದ Phisics meets Philosophy ಎಂಬೋ ಸಮ್ಮೇಳನದಲ್ಲಿ ನಾನು ಹಾಗು ಅಕ್ಷತ ಬಾಗವಹಿಸಿ ಎರೆಡು ದಿನಗಳ ಹಿಂದೆ ವಾಪಸ್ಸು ಬಂದೆವು. ಬರುತ್ತಾ ರೈಲಿನಲ್ಲಿ ಕೆಲವು ಸಂಗತಿಗಳು ನಡೆಯಿತು. ಯಾಕೋ ತಮಗೆ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು. ಅದಕ್ಕೇ ಹೇಳ್ತಾ ಇದ್ದೀನಿ. ನಿಜಕ್ಕೂ ಇದು ಕಥೆ ಅಲ್ಲ, ಹಾಗಂತ ಕವಿತೆ ಅಲ್ಲ. ಮತ್ತೇ ನೋಡಿ ಹೇಳ್ತಿದ್ದೀನಿ, ಇದು ಸತ್ಯವೂ ಅಲ್ಲ. ಅಯ್ಯೋ ಅದೆಲ್ಲ ಬಿಡಿ, ಹಾಳು.... ಸುಮ್ಮನೆ ನಾನು ಹೇಳೋದನ್ನ ಕೇಳಿಬಿಡಿ, ಅದೆ ಓದಿ ಬಿಡಿ. ನಿಜಕ್ಕೂ ಓದಿಸಿಕೊಂಡು ಹೋಗುತ್ತೆ. ಓದೊ ತಮಗೆಲ್ಲ ಬೇಕಿರೋದು ಅದೇ ಅಲ್ಲವ.? ತಮಗೆ ಓದಿಸಿಕೊಂಡು ಹೋಗಬೇಕು, ನಂಗೆ ಓದಿಸೋ ರೀತಿ ಬರೀಬೇಕು. ಅಷ್ಟೆ ಮಾರಾಯ್ರೆ. ನಮ್ಮೂರ ದಾಸಯ್ಯ ಹೇಳ್ತಿದ್ದ, "ಅಷ್ಟೆ ಕಣಾ ಬದ್ಕು" ಅಂತ... ಎಷ್ಟು ದಾಸಯ್ಯ ಅಂತ ಏನಾದ್ರೂ ಕೇಳಿದ್ರೆ, "ಅಷ್ಟೆ ಕಣಾ ಬದ್ಕು" ಅಂತ ಮತ್ತೇ ಅದನ್ನೇ ಹೇಳ್ತಿದ್ದ. ಹಾಗೆ, ಕತೆ, ಸತ್ಯ, ಎಲ್ಲಾ ಅಷ್ಟೇ ಕಣ್ರೀ....... ಅಲ್ವೇ.......?

ನಾಲಂದಯಿಂದ ವಾಪಸ್ಸು ಬರೋವಾಗ ರೈಲಲ್ಲಿ ಒಳ್ಳೆ ಮಜಾ ಇತ್ತು. ನಂಗೆ ಹಿಂದಿ ಸರಿಯಾಗಿ ಬರೋಲ್ಲ. ಪೂರ್ತಿಯಾಗಿ ಬರೋಲ್ಲ ಅಂತಾನೂ ಹೇಳ್ಬೋದು. ಸ್ವಲ್ಪ ಸ್ವಲ್ಪ ಅರ್ಥವಾಗುತ್ತೆ ಅಷ್ಟೆ. ಆದರೂ ನಾಲಂದಕ್ಕೆ ಬಂದಿದ್ದೆ. ಅಕ್ಷತ ಜೊತೆ ಇದ್ದರು, ಅವರಿಗೆ ಹಲವು ಭಾಷೆಗಳು ತಿಳಿದಿತ್ತು. ರೈಲಲ್ಲಿ ಟೀನಾ ಅಂತ ಒಬ್ಬ ಪುಟ್ಟ ಹುಡ್ಗಿ ಇದ್ದಳು. ಮೂರು ನಾಲ್ಕು ವರ್ಷದ ಹುಡುಗಿ. ನನ್ನನ್ನ ಮಾತಾಡಿಸೋಕೆ ಬಹಳಾ ಪ್ರಯತ್ನ ಮಾಡ್ತಾ ಇದ್ದಳು. ಹಿಂದಿಯಲ್ಲಿ ಏನೇನೋ ಕೇಳ್ತಾ ಇದ್ದಳು. ನಾನೂ ಸುಮ್ಮನೆ ಅರ್ಥ ಆದವನಂತೆ ತಲೆ ಮಾತ್ರಾ ಆಡಿಸ್ತಾ ಇದ್ದೆ. ಅಕ್ಷತ ಹತ್ರ ಮಾತ್ರ ಕನ್ನಡದಲ್ಲಿ ಮಾತಾಡ್ತಾ ಇದ್ದೆ. ಆ ಮಗೂಗೆ ತನ್ನ ಬಾಷೆ ಬಾರದ ನಾನು ಒಬ್ಬ ವ್ಯಕ್ತಿಯಾಗಿಯೋ, ಮನುಷ್ಯನಾಗಿಯೋ ಕಾಣಲೇ ಇಲ್ಲ ಅಂತ ಅನ್ನಿಸುತ್ತೆ. ಪ್ರತೀ ಬಾರಿಯೂ ಅಕ್ಷತ ಹತ್ರ ಬಂದು, ಅವಿಂದ ಹೇಗೆ ತಿಂತಾನೆ(ಎಲ್ಲವೂ ಹಿಂದಿಯಲ್ಲೇ ಅವ್ಳು ಕೇಳ್ತಾ ಇದ್ಲು, ಆಮೇಲೆ ಅಕ್ಷತ ಅದರ ಅರ್ಥ ಹೇಳ್ತಾ ಇದ್ಲು), ಅವಿಂದ ಹೇಗೆ ಮಾತಾಡ್ತಾನೆ, ಅವಿಂದ ಹೇಗೆ ನಡೀತಾನೆ? ಹೀಗೆ ಎಲ್ಲವನ್ನೂ ಎಚ್ಚರಿಕೆಯಿಂದ, ಬಹಳ ಕುತೂಹಲದಿಂದ ಕೇಳಿ ತಿಳಿದು ಕೊಳ್ಳುತ್ತಿದ್ಲು. ತನ್ನ ಭಾಷೆ ಬಾರದ ಒಬ್ಬ ಜೀವಂತ ಮನುಷ್ಯ, ಏನೂ ಅರಿಯದ ಆ ಮಗುವಿಗೆ ಒಂದು ಬೊಂಬೆ ಮಾತ್ರ. ಆ ಭಾಷೆ ಬಾರದ ಗೊಂಬೆಯೆ ಬಗೆಗಿನ ಎಲ್ಲವನ್ನೂ ತಿಳಿಯಬೇಕು. ಆ ಕುತೂಹಲ ಆ ಮಗುವಿಗೆ. ಯಾಕೋ ಆ ಮಗೂ, ಆ ಘಟನೆ ತುಂಬಾ ಹಿಡಿಸ್ತು. ನಂಗೆ, ಬದುಕಿನ ಭಾಷೆ ತಿಳೀತಿಲ್ಲ. ಬದುಕಿಗೆ ಒಂದು ಭಾಷೆ ಅನ್ನೋದು ಇದೆಯ? ಅದೂ ನಂಗೆ ಗೊತ್ತಿಲ್ಲ.

ಪಾಟ್ನಾ ಇಂದ ಹೊರಟ ಸಂಘಮಿತ್ರ ರೈಲು ಆಗಲೇ ಚೆನ್ನೈ ದಾಟಿ ಕರ್ನಾಟಕಕ್ಕೆ ಮಂದಿತ್ತು. ಎಲ್ಲಾ ಗೆಳೆಯರಿಗೂ ಕರ್ನಾಟಕಕ್ಕೆ ಬಂದಿದ್ದೀನಿ ಅಂತ ಮೆಸೇಜ್ ಕಳಿಸಿದೆ. ಮುಳುಬಾಗಿಲು ಸ್ಟೇಷನ್ ದಾಟಿತ್ತು. ಯಾಕೋ ತಿರುಗಿ ನೋಡಿದೆ. ಒಬ್ಬ ವ್ಯಕ್ತಿ ನನ್ನನ್ನೇ ನೋಡುತ್ತಿರುವಂತೆ ಕಂಡಿತು. ಮತ್ತೇ ನೋಡಿದೆ,
ಅರೆ, ಅದು ರಘೋತ್ತಮರಾಯರು, ಅದೂ ಇಲ್ಲಿ. ಇವರೇಕೆ ಬಂದರು. ನೋಡಿದರೆ, ಪಂಚೆಯೆಲ್ಲ ಉದುರಿದೆ. ಮುಖದಲ್ಲಿ ತೀವ್ರ ಭಯ, ಆಯಾಸ ಕಾಣ್ತಾ ಇದೆ. ಒಂದು ಕಾಲದ ನಮ್ಮೂರ ಶಾನುಭೋಗರು, ಆಜಾನುಬಾಹು ಇಲ್ಲಿ ಈ ಅವಸ್ತೆಯಲ್ಲಿ...... ತಕ್ಷಣ ಹೋಗಿ ನೋಡಿದೆ.
"ಮಾವ, ಏನಿಲ್ಲಿ ನೀವು..?"
"ಯಾರು"
ಅಂತ ಕೇಳಿ, ಸುಮ್ಮನೆ ಮಾಕಾಹಳ್ಳಿ ಮಾಕಾಹಳ್ಳಿ ಅಂತ ನಮ್ಮೂರಿನ ಹೆಸರನ್ನೇ ಜಪ ಮಾಡ್ತಾ ಅಳ್ತಾ ಇದ್ದರು. ತುಂಬಾ ನೋವಾಯ್ತು. ಒಂದು ಕಾಲದದಲ್ಲಿ ನಾನು ಚಿಕ್ಕವನಾಗಿದ್ದಾಗ ನನ್ನನ್ನ ಆಡಿಸಿದವರು ಮಾವ. ಕರೆದುಕೊಂಡು ಬಂದು ಸೀಟಿನಲ್ಲಿ ಕೂಡಿಸಿ, ನೀರು ಕೊಟ್ಟು, ಪಂಚೆಯನ್ನ ಸರಿಯಾಗಿ ಉಡಿಸಿ ಕೂಡಿಸಿದೆ. ಆಗ ನೆನಪಾಯಿತು, ರಘು ಮಾಮಂಗೆ ನೆನಪಿನ ಶಕ್ತಿ ಹೊರಟು ಹೋಗಿತ್ತು. ಯಾವುದ್ಯಾವುದೋ ಘಟನೆಗಳನ್ನ ಹೇಳ್ತಾ ಇದ್ದರು. ಅವರ ಮಕ್ಕಳನ್ನೂ ಸಹ ಅವರು ಗುರುತಿಸುತ್ತಿರಲಿಲ್ಲ. ಕಡೆಗೆ ಅವರ ಹೆಂಡತಿಯೂ ಅವರಿಗೆ ನೆನಪಿನಲ್ಲಿ ಇರಲಿಲ್ಲ. ಯಾರಾದರೂ ಮುಂದೆ ನಿಂತು, ನಾನು ಯಾರೆಂದು ಹೇಳು ಅಂದರೆ, ಬೇರೆ ಯಾರದೋ ಹೆಸರನ್ನ ಹೇಳ್ತಾ ಇದ್ದರು. ಹೀಗೆ ಅದೇನು ಕಾಯಿಲೆಯೋ ಗೊತ್ತಿರಲಿಲ್ಲ. ತುಂಬಾ ವಯಸ್ಸೂ ಆಗಿತ್ತು. ತಕ್ಷಣ ಅಮ್ಮಂಗೆ ಫೋನ್ ಮಾಡಿದೆ. ರಘು ಮಾಮ ರೈಲಲ್ಲಿ ನನ್ನ ಜೊತೆ ಇರೋದನ್ನ ಹೇಳ್ದೆ. ಆಗ ಅಮ್ಮ ವಿಷಯ ಹೇಳಿದ್ರು, ಮದುವೆಗೆ ಅಂತ ರಘು ಮಾಮ ಮತ್ತೆ ಅವರ ಕುಟುಂಬ ಮುಳುಬಾಗಿಲಿಗೆ ಬಂದಿದ್ರು. ಮಾಮ ಮದುವೆ ಸಮಯದಲ್ಲಿ ಅಲ್ಲೆ ಆ ಜನಗಳಿಂದ ತಪ್ಪಿ ಹೋಗಿದ್ದರು. ಹೀಗೆ ನಡೀತಾ ನಡೀತ, ಮಾಕಹಳ್ಳಿ ಮಾಕಾಹಳ್ಳಿ ಅಂತ ಏನನ್ನೋ ಹೇಳ್ತಾ ರೈಲಿ ಹತ್ತಿಬಿಟ್ಟಿದ್ದರು. ಅವರ ಮಕ್ಕಳೆಲ್ಲಾ ತುಂಬಾ ಹೊತ್ತಿನಿಂದ ಅವರನ್ನ ಹುಡುಕುತ್ತಿದ್ದರಂತೆ. ನಾನು ತಕ್ಷಣ ಅವರಿಗೆ ಫೋನ್ ಮಾಡಿ, ಮಾಮ ನನ್ನ ಬಳಿಯಿರುವುದನ್ನ ತಿಳಿಸಿ, ಬೆಂಗಳುರಿನ ರೈಲ್ವೇ ನಿಲ್ದಾಣಕ್ಕೆ ಬಂದು ಕರೆದುಕೊಂಡು ಹೋಗಿ ಅಂತ ಹೇಳ್ದೆ.

ರಘು ಮಾಮ ಎಲ್ಲೋ ನೋಡುತ್ತ ಸುಮ್ಮನೆ ಅಳುತ್ತಿದ್ದರು.
"ಯಾಕೆ ಮಾಮ ಅಳ್ತಾ ಇದ್ದೀರ...? ಸುಮ್ನಿರಿ, ಏನಾಯ್ತು ಈಗ...? ನಾನು ನಿಮ್ಮನ್ನ ಮನೇಗೆ ಕರ್ಕೊಂಡು ಹೋಗ್ತೀನಿ. ಅದೇ ಮಾಕಾಹಳ್ಳಿಗೆ ಕರ್ಕೊಂಡು ಹೋಗ್ತೀನಿ. "
"ಅಪ್ಪಯ್ಯ ಯಾರೋ ನೀನು..?"
"ಅಯ್ಯೋ ಮಾಮ ನಾನು ಸೀನನ ಮಗ. ಹೋಗ್ಲಿ ಬಿಡಿ, ಈಗ ಅಳಬೇಡಿ."
ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಮತ್ತೆ ಶುರುವಿಟ್ಟುಕೊಂಡರು
"ಮಾಮ, ಯಾಕೆ ಈಗ ಅಳೋದು?"
"ಸತ್ತೋದ, ಅವ್ನು ಸತ್ತೋದ. ಪಾಪಿ ಮುಂಡೆಮಗ ಸತ್ತೋಗ್ಬಿಟ್ಟ."
"ಯಾರು ಮಾಮ ಸತ್ತಿದ್ದು?"
"ರಘೋತ್ತಮ, ಆ ಮಾಕಾಹಳ್ಳಿಯ ರಘೋತ್ತಮ ಸತ್ತೋದ ಕಣಾ"
ಅಂತೇಳಿ ಜೋರಾಗಿ ಅಳ್ತಾ ಇದ್ದರು. ಈ ಮನುಷ್ಯಂಗೆ ಬರೀ ಮರುವಲ್ಲ. ಪೂರ್ತಿ ಹುಚ್ಚು. ಪಾಪ, ಇವರ ಮನೆಯವರು ಅದೇಗೆ ಇವರನ್ನ ಸಹಿಸ್ಕೋತಾರೋ ಏನೋ. ಅಕಸ್ಮಾತ್ ನಮ್ಗು ಹೀಗೆ ಏನಾದ್ರು ಆದ್ರೆ. ಭಗವಂತ ಅಂತನ್ನಿಸಿಬಿಡ್ತು. ಆದರೂ, ಏನಾದ್ರು ಮಾತಾಡ್ತಾ ಇದ್ರೆ ಅಳೋದಿಲ್ಲ ಅಂತೇಳಿ ಮಾತಾಡಿಸ್ತಾ ಇದ್ದೆ.
"ಮಾಮ ಯಾವ ರಘೋತ್ತಮ ಮಾಮ?"
"ಮಾಕಾಹಳ್ಳಿಯ ರಘೋತ್ತಮ, ಶಾನುಭೋಗ, ಮಾಕಹಳ್ಳಿಯ ರಘೋತ್ತಮರಾಯ"
"ಹೆಂಗೆ ಸತ್ತ ಮಾಮ?"
"ಹುಚ್ಚೀನ ನೋಡಿ ಸತ್ತ."
"ಯಾವ್ ಹುಚ್ಚಿ"
""ಅಪ್ಪಯ್ಯ, ಮಾಕಾಹಳ್ಳಿಯ ರಘೋತ್ತಮ ಸತ್ತೋದ. ಅವ್ನು ಹೆಂಗೆ ಸತ್ತ ಅನ್ನೋದು ಒಂದು ದೊಡ್ಡ ಕತೆ. ಯಾರ್ಗೂ ಗೊತ್ತಿಲ್ಲದ ಕತೆ. ಅವ್ನ ಸಾವಿನ್ ಕತೆ. ಹುಚ್ಚಿ ಶಾಂತಮ್ಮನ್ನ ನೋಡಿ, ಅವ್ಳತ್ರ ಹೋಗಿ ಸತ್ತೋದ."

ಅರೆ, ಶಾಂತಮ್ಮನ ಹೆಸ್ರು. ನಮ್ಮೂರಿನ ಫೇಮಸ್ ಹುಚ್ಚಿ. ಶಾಂತಿ ನಮ್ಮೂರಿಗೆ ಎಲ್ಲಿಂದಲೋ ಬಂದಿದ್ದ ಹುಚ್ಚಿ. ಎಲ್ಲರೂ ಶಾಂತಮ್ಮ ಅಂತ ಕರೀತಿದ್ರು. ಅವ್ಳಿಗೆ ಆ ಹೆಸ್ರು ಯಾರು ಇಟ್ರು ಅಂತ ಗೊತ್ತಿಲ್ಲ. ಶಾಂತಮ್ಮ ಅಂತ ಕರೆದ್ರೆ ಮಾತ್ರ ತಿರುಗೋಳು. ಅವ್ಳು ಎಲ್ಲಿಂದ ಬಂದ್ಲು, ಹೇಗೆ ಇಲ್ಲಿಗೆ ಬಂದ್ಲು, ಎಲ್ಲವೂ ಪರಮ ನಿಗೂಢ ಸಂಗತಿಗಳು. ಅದನ್ನ ತಿಳಿಯೋ ಅವಶ್ಯ ಊರಲ್ಲಿ ಯಾರಿಗೂ ಇರಲಿಲ್ಲ. ಇಷ್ಟಕ್ಕೂ ಹುಚ್ಚಿ ಜಾತಕ ಕಟ್ಕೊಂಡು ಆಗೋದೇನಿದೆ. ಅವ್ಳ ಭಾಷೆ ಯಾವ್ದು ಅಂತಾನೂ ಇಲ್ಲಿನೋರಿಗೆ ತಿಳಿದಿಲ್ಲ. ಯಾವ್ದೋ ಉತ್ತರದ ಭಾಷೆ. ಅವಳಷ್ಟಕ್ಕೆ ಅವಳು ಇರೋಳು. ಏನಾದ್ರು ಕೆಲ್ಸ ಹೇಳಿದ್ರೆ ಮಾಡೋಳು, ಆಗ ಸ್ವಲ್ಪ ಊಟ ಹಾಕಿದ್ರೆ ತಿನ್ನೋಳು. ಯಾರ್ಗೂ ತೊಂದ್ರೆ ಕೊಡ್ದೆ ಇದ್ದಿದ್ರಿಂದ ಯಾರು ಆಕೇನ ಬಗ್ಗೆ ಹೆಚ್ಚಿನ ತಲೆ ಕೆಡಿಸ್ಕೊಳ್ಳಲಿಲ್ಲ. ಊರೊಳ್ಗಡೆ ಇರೋ ದೇವಸ್ಥಾನದಲ್ಲಿ ಮಲಗೋಳು. ಏನೂ ಕೆಲ್ಸ ಇಲ್ಲದ ದಿನ ಸುಮ್ನೆ ಕೂತಿರೋಳು. ಯಾವ್ದೋ ಮರಾನ ನೋಡ್ತಾ ಸುಮ್ನೆ ಕೂತಿರ್ತಾ ಇದ್ಲು. ಒಂದು ದಿನ ಕಾಣೆಯಾಗಿಹೋದಳು. ಅವ್ಳು ಹೋದ್ಲು ಅಂತ ಬೇಸ್ರ ಪಟ್ಕೊಳ್ಳೊಕೆ ಯಾರೂ ಇರ್ಲಿಲ್ಲ. ಎಲ್ಲಿಗೋದಳು ಅಂತ ಯಾರೂ ವಿಚಾರಿಸ್ಲೇ ಇಲ್ಲ. ಯಾರಿಗೂ ಬೇಕೂ ಇರ್ಲಿಲ್ಲ. ಹುಚ್ಚಿ ಶಾಂತಿ ಎಂಬೋಳು ನಮ್ಮೂರಲ್ಲಿ ಇದ್ದಳು ಅನ್ನೋ ಒಂದು ನೆನಪನ್ನ ಮಾತ್ರ ಇಟ್ಟು ಹೊರಟು ಹೋಗಿದ್ದಳು.
ಆಕೀನ ಯಾಕೆ ಮಾಮ ನೆನೆಪಿಸ್ಕೊಳ್ತಾ ಇದ್ದಾರೆ ಅಂತಾ ತಿಳೀಲಿಲ್ಲ.

"ಒಂದಿನ ರಘೋತ್ತಮ ಶಾಂತೀನ ನೋಡ್ದ. ಅವ್ನಿಗೆ ಅವ್ಳು ಬಾಳಾ ಬಾಳಾ ಸುಂದರ್ವಾಗಿ ಕಾಣಿಸಿದ್ಲು. ಅಷ್ಟೆ, ಅವ್ಳು ಎಲ್ಲಿಗೋ ಹೊರ್ಟೋದ್ಲು. ಇವ್ನು ರಘೋತ್ತಮ ಸತ್ತೋದ"
ಅಯ್ಯೋ ಪಾಪ ಮಾಮ. ಏನೇನೋ ಅಂತಾ ಇರ್ತಾರೆ ಅಂತ ಸುಮ್ನೆ ಆದೆ.
"ಹೋಗ್ಲಿ ಬಿಡು ಮಾಮ. ನೀನು ಸಮಾದಾನ ಮಾಡ್ಕೊ, ರಘೋತ್ತಮ ಸತ್ತೋದ. ಸತ್ಮೇಲೆ ಏನ್ಮಾಡೋಕಾಗುತ್ತೆ. ನೀವು ಮಲ್ಗಿ."
ಅಂತ ಹೇಳಿ ನಾನೂ ಅಕ್ಷತ ನಮ್ಮ ಮುಂದಿನ ಪ್ರಾಜೆಕ್ಟಿನ ಬಗ್ಗೆ ಮಾತಾಡ್ತಾ ಕೂತ್ವಿ.

ಇನ್ನೇನಿರುತ್ತೆ, ನಾ ಹೇಳೋದು ಮುಗೀತ ಬಂತು. ಬೆಂಗಳೂರು ಬಂತು, ರಘು ಮಾಮನ ಮಕ್ಕಳು ಬಂದಿದ್ರು. ಅವರಿಗೆ ಹೇಳಿ ಮಾಮನ್ನ ಅವರ ಜೊತೆಗೆ ಕಳಿಸಿಕೊಟ್ಟು ಬಂದೆ. ಹೋಗುವಾಗ ರಘುಮಾಮನ ಮಗ ಮೋನ ಮಾಮ ಕರ್ದು, ಮುಂದಿನ ತಿಂಗಳು ರಘುಮಾಮನ ಅರವತ್ತನೆ ವರ್ಷದ ಶಾಂತಿ ಇದೆ ಬರ್ಬೇಕು ಅಂತ ಅಂದ್ರು. ನಾನು ರಘು ಮಾಮಾಂಗೆ ಮತ್ತೊಂದ್ಸಾರಿ ಮದ್ವೆನ ಅಂತ ತಮಾಶೆ ಮಾಡಿದ್ದಕ್ಕೆ, ಹೌದು ಎಲ್ಲಾರು ಬರ್ಬೇಕು ಅಂತೇಳಿ ಹೊರ್ಟುಬಿಟ್ರು.

ಇಷ್ಟೆಲ್ಲಾ ಆದಮೇಲೆ, ಸುಮ್ಮನೆ ಇರಲಿಕ್ಕೆ ಆಗಲೇ ಇಲ್ಲ ನೋಡಿ. ಅದಕ್ಕೆ ತಮ್ಮ ಮುಂದೆ ಹೇಳಿಕೊಂಡುಬಿಟ್ಟೆ. ಈ ಕತೆ(ಅಲ್ಲದ) ಕವಿತೆ(ಆಗದ) ಸತ್ಯ(ಗೊತ್ತಿಲ್ಲದ) ಬರಹದಿಂದ ತಮಗೇನಾದರು ಬೇಸ್ರ ಆಗಿದ್ರೆ, ಕ್ಷಮಿಸಿ ಬಿಡಿ.