ಏಕಾಂತಕ್ಕಿದು ಕಾಲವಲ್ಲ
ಎಂಬೋ ತುರ್ತಿನ ಬರಹ
ವನ್ನೊಯ್ಯುವ ಕೊರಿಯರ್
ಹುಡುಗ ನಾಪತ್ತೆ -
ಛೆ ಪಾಪ! ಎಂದೇಳಿ
ಅಂತರ್ಜಾಲದಲ್ಲಿ ಪ್ರಕಟಿಸಿ
ಹಿಂದೊಮ್ಮೆ ಹೊಲದ ಮಣ್ಣಲ್ಲಿ
ನೀರಲ್ಲಿ ಮರದಡಿಯಲ್ಲಿ
ನಿಂತಿದ್ದ ಫೋಟೋ ಲಗತ್ತಿಸಿದೆ
ಒಮ್ಮೆ ಅವನ ಮಕ್ಕಳಿಗೆ
ಪೆಪ್ಪರುಮೆಂಟು ಕೊಟ್ಟ ನೆನಪಿದೆ
ಈಗಿದ್ದಿದ್ದರೆ, ಡಾರ್ಕ್ ಚಾಕಲೇಟು ಕೊಡಬಹುದಿತ್ತು
ಪಕ್ಕದ ಮನೆಯ ಮಕ್ಕಳು ಬಿಡಿ
ಹಿರಿಯರೂ ಬರುವುದಿಲ್ಲ ಹತ್ತಿರಕೆ
ಸಾಮಾಜಿಕ ಅಂತರ
ಮನುಷ್ಯ ಮನುಷ್ಯರ ನಡುವೆ
ಅವಶ್ಯ ಇದೇ ರೀತಿ ಎಂಬುದು
ಲಿಖಿತ ಶಾಸನವಂತೆ
ಒಮ್ಮೆ ಅವನ ಹೆಂಡತಿ ಅಳುತ್ತ
ಬಂದು ಹೇಳಿದ್ದಳು
ಬಂಗಾರದಂಗಡಿಯಲ್ಲಿ ಸ್ವಾಗತಿಸುವಾಗ
ಶೌಚಕ್ಕೋಗಲಾರದೆಯೂ ನಗುಮುಖ ತೋರುವುದನ್ನ
ಕಂಪನಿ ಆಯೋಜಿಸಿದ ವಾರ್ಷಿಕ ಮ್ಯಾರಥಾನ್ ಓಟದಲ್ಲಿ
ಗೆದ್ದ ಬಂಗಾರ ಬಣ್ಣದ ಪಲಕವನ್ನ
ಶೋಕೇಸಿನಲ್ಲಿಟ್ಟು ಸಿಹಿ ಹಂಚುವಾಗ
ಬಂದಿದ್ದ ಈ ಹುಡುಗ, ನೆನಪಿದೆ
“ಬಿಡಿ ಸಾರ್, ನಾನು ದಿನಕ್ಕೇ ಅಷ್ಟು ನಡೀತೀನಿ"
ಎಂಥಹ ದಾರ್ಷ್ಟ್ಯ
ಬಿಟ್ಟೇನೆಯೆ - ಗೆಲ್ಲು ನೋಡುವ ಎಂದು
ಮರು ಸವಾಲೆಸೆದಿದ್ದೆ
ರಾತ್ರಿ ಹತ್ತಿತ್ತು ನೆಮ್ಮದಿಯ ನಿದ್ದೆ
ಅದನ್ನೇ ನೆನಪಿಟ್ಟುಕೊಂಡಿದ್ದನೋ ಏನೋ
ಊರಿಗೆ ನಡೆದೇ ಹೋಗುತ್ತೇನೆಂದವನು
ಊರಿಗೋಗಲೇ ಇಲ್ಲವಂತೆ
ಮುಂದಿನ ಮ್ಯಾರಥಾನನ್ನು ಅವನ
ನೆನಪಿನ ಮ್ಯಾರಥಾನೆಂದೇ ಹೆಸರಿಸಬೇಕು
ಅವನ ಹೆಸರಲಿ ಮೊದಲ ಬಹುಮಾನ
ಆಕೆಯ ಹೆಸರಿಲಿ ಎರಡನೆಯದು
ಆ ಮಗುವ ಹೆಸರಲಿ ಮೂರನೆಯದು
ಬಹುಷಃ ಈಗ ನಿದ್ರೆ ಬರಬಹುದೋ ಏನೋ
ಎಂದು ಮಲಗಿದ್ದವನಿಗೆ
ಎಚ್ಚರಾದಾಗ ನೆನಪಾದದ್ದು
ಅವರುಗಳ ಹೆಸರೇ ಗೊತ್ತಿಲ್ಲವೆಂದು