ನಮ್ಮ ಜ್ಯೋತಿ ಮೇಡಂ

ನನ್ನ ಬದುಕು ನನ್ನದು ಮಾತ್ರವೆಂದು ಎಂದೂ ನನಗನ್ನಿಸಿಲ್ಲ. ಈ ಬದುಕಿಗೆ ಅದೆಷ್ಟೋ ಜನರ ಪಾಲಿದೆ. ತಂದೆ ತಾಯಿಯ ನಂತರ ನನ್ನ ಬದುಕನ್ನು ರೂಪಿಸಿದ ಬಹು ದೊಡ್ಡ ಪಾಲು ನನ್ನ ಗಣಿತ ಶಿಕ್ಷಕಿ ನಾಗಜ್ಯೋತಿ ಮೇಡಂಗೆ ಸಲ್ಲುತ್ತದೆ. ಅವರು ತೀರಿಹೋಗಿದ್ದಾರೆ ಎಂಬುದು ಎಂದಿಗೂ ನಂಬಲಾರದ ಸಂಗತಿ. ಎಂದಿಗೂ ಮರೆಯಲಾರದ, ಬದುಕಿನ ಪ್ರತೀ ಹಂತವನ್ನೂ ಪ್ರಭಾವಿಸಿದ ವ್ಯಕ್ತಿ ನಮ್ಮ ಬದುಕಿಂದ ದೂರವಾಗಲು ಸಾದ್ಯವಿಲ್ಲ. ನಮ್ಮದೇ ಬದುಕಿನಲ್ಲಿ ಅವರ ಜೀವಂತಿಕೆ ಕಾಣಲು ಸಾದ್ಯ. ನನ್ನ ಬದುಕಿನಲ್ಲಂತೂ ಬದುಕಿನ ಪ್ರತೀ ಹಂತದಲ್ಲೂ ಅವರು ಕಟ್ಟಿಕೊಟ್ಟ ಮೌಲ್ಯಗಳು ಜೀವಂತವಾಗಿರುವವರೆಗೂ ಅವರೂ ನನ್ನ ಮಟ್ಟಿಗೆ ಜೀವಂತ. 

ಇವತ್ತಿಗೂ ಕಣ್ಣಮುಂದೆ ಕಟ್ಟಿದಂತಿದೆ ಆ ದೃಷ್ಯ. ಕನ್ನಡ ಮಾಧ್ಯಮವನ್ನು ಏಳನೇ ತರಗತಿಯವರೆಗೂ ಓದಿದ್ದು, ಎಂಟನೇ ತರಗತಿಗೆ ಆಂಗ್ಲ ಮಾಧ್ಯಮ. ಏನಾಗುತ್ತೋ ಏನೋ ಎಂಬ ವಿಪರೀತ ಭಯ. ಆಗಲೇ ನನ್ನ ಅಕ್ಕ, ಹಳೇ ಟೀವಿಎಸ್ ಸ್ಕೂಟರ್ ಅಲ್ಲಿ ಕರೆದುಕೊಂಡು ಬಂದು, ಇವರ ಹಳೇ ಮನೆಯ ಮುಂದೆ ನಿಲ್ಲಿಸಿ ಕರೆದುಕೊಂಡು ಹೋಗಿ ಮೇಡಂಗೆ ಪರಿಚಯಿಸಿ  ಮನೆ ಪಾಠಕ್ಕೆ ಕಳುಹಿಸಿದ್ದು. ಎಂಟನೇ ತರಗತಿಯಿಂದಲೇ ಮನೆಪಾಠಕ್ಕೆ ಸೇರಿದ್ದು. ಆಗ ಹಳೆಯ ಮನೆಯಲ್ಲಿದ್ದರು. ನಾನು ಆ ಹಳೆಯ ಮನೆಗೆ ಪಾಠಕ್ಕೆ ಹೋಗುತ್ತಿದ್ದ ಹಳೆಯ ವಿಧ್ಯಾರ್ಥಿ. ಮೇಡಂ ಗಣಿತ, ವಿಜ್ಞಾನ, ಪಾಠ ಮಾಡುತ್ತಿದ್ದರು, ನಾಗೇಂದ್ರ ಸಾರ್ ಸಮಾಜ ವಿಜ್ಞಾನ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ನಾನು ಹಳ್ಳಿಯಿಂದ ಸುಮಾರು ಆರು ಕಿ.ಮೀ ದೂರದಿಂದ ಬರುತ್ತಿದ್ದದ್ದು, ಜೊತೆಗೆ ಒಮ್ಮೆಗೇ ಊರಿಂದ ಹೊರಗೆ ಬಂದದ್ದದ್ದು. ಈ ಮನೆಯಲ್ಲಿನ ಆತ್ಮೀಯತೆ ವಿಚಿತ್ರವಾದ ಧೈರ್ಯ ತುಂಬಿತ್ತು. ನಾವು ಆಗ ಮನೆಪಾಠಕ್ಕೆಂದು ಅವರ ಮನೆಗೆ ಹೋಗುತ್ತಿದ್ದವರು ಕಡಿಮೆ ಜನ. ಹಲವರು ಅದಾಗಲೆ ಪ್ರಸಿದ್ಧಿಯಲ್ಲಿದ್ದ ಮತ್ತೊಂದು ಕಡೆಗೆ ಹೋಗುತ್ತಿದ್ದರು. ಹೀಗಾಗಿ ಕೆಲವೇ ಮಂದಿಯಿದ್ದ ನಮಗೆ ಅದು ಮನೆಗಿಂತ ಬೇರೆಯೆಂದೆನಿಸಲೇ ಇಲ್ಲ. ಥೇಟ್ ಗುರುಕುಲದಂತಯೇ ಇತ್ತು. ಚಿಕ್ಕಂದಿನಿಂದಲೂ, ನನ್ನಮ್ಮ ನನಗಾಗಿ ಕನ್ನಡ ಕಲಿತು (ಅವಳದು ತೆಲುಗು ಮಾತೃ ಭಾಷೆ), ನನಗೆ ಪಾಠ ಹೇಳಿಕೊಡುತ್ತಿದ್ದದ್ದು. ಮತ್ತೇ ಮನೆಪಾಠಕ್ಕೆ ಸೇರಿದಾಗ ಈ ಮನೆಯಲ್ಲಿ ನಮ್ಮ ಮನೆಯದೇ ಭಾವ .

ಅಲ್ಲಿಂದ ಹೊಸ ಮನೆಗೆ, ಮಾಡಿ ಮನೆಗೆ ಹೋದದ್ದು. ಹಳೆ ಮನೆಯಲ್ಲಿ ಒಂದೆರೆಡೋ ಮೂರೋ ತಿಂಗಳಿದ್ದೆವೋ ಏನೋ ಹೆಚ್ಚಿಗೆ ನೆನಪಾಗುತ್ತಿಲ್ಲ. ಉಳಿದ ಸಮಯವೆಲ್ಲಾ ಕಳೆದದ್ದು ಈ ಹೊಸ ಮನೆಯಲ್ಲೆ. ವರಂಡಾದಲ್ಲೊಂದು, ಹಾಲಿನಲ್ಲೊಂದು ಕಪ್ಪು ಪ್ಲಾಸ್ಟಿಕ್ ಹಾಳೆಯಂತಹ ಬೋರ್ಡ ಇತ್ತು. ಅದರಲ್ಲಿ ಒಂದೊಂದೋ ಲೆಕ್ಕಗಳನ್ನು ಬಿಡಿಸಲು ಕಲಿಸುತ್ತಿದ್ದದ್ದು. ಸಾರ್, ಒಮ್ಮೆಮ್ಮೊ ಜೋರಾಗಿ ಬೈಯುತ್ತಿದ್ದರೆ, ಮೇಡಂ ಬೈದು, ನನ್ನ ತಪ್ಪನ್ನು ಗುರುತಿಸಿ ಅದನ್ನು ತಿದ್ದುತ್ತಿದ್ದರು. ಮನೆಯವರು ತಿದ್ದಿದ್ದಕ್ಕಿಂತ ಹೆಚ್ಚಾಗಿ ಮೇಡಂ ತಿದ್ದಿದ್ದಾರೆ. ಸಂಜೆ ಮನೆ ಪಾಠ ನಡೆಯುವಾಗ ಮನೆಗೆ ಹೋಗುವುದು ತಡ ಆಗುತ್ತೆ ಎಂದು ಅದೆಷ್ಟೋ ಬಾರಿ ಏನಾದರೊಂದನ್ನು ತಿನ್ನಲು ಕೊಟ್ಟು ಕಳುಹಿಸುತ್ತಿದ್ದರು. ಹತ್ತನೇ ತರಗತಿಯ ನಂತರ ಎರಡು ವರುಷ ಅವರ ಬಳಿಗೆ ಹೋಗಲಿಕ್ಕಾಗಲಿಲ್ಲ. ಆಗ ಗೌರಿಬಿದನೂರಿಗೆ ಕಾಲೇಜಿಗೆ ಸೇರಿದ್ದದ್ದು. ಅವರೇ ಮತ್ತೊಬ್ಬರಿಗೆ ಹೇಳಿ ಪಿ.ಯು.ಸಿ ಗಣಿತಕ್ಕೆ ಮನೆಪಾಠಕ್ಕೆ ಸೇರಿಸಿದ್ದರು.

ಪಿ.ಯು.ಸಿ ನಂತರ ಬಿ.ಎಸ್.ಸಿ ಗೆ ಸೇರುವುದೆಂದು ನಿರ್ದರಿಸಿದ್ದರೂ ಹಲವರು ಇಂಜಿನಿಯರ್ ಆಗು ಎಂದು ಒತ್ತಾಯಿಸುತ್ತಿದ್ದುದರಿಂದ ಎಲ್ಲೋ ಒಂದಿಷ್ಟು ಅಳುಕು, ಭಯ. ಆದರೆ, ಈಗಲೂ ಆಶ್ಚರ್ಯವೆಂಬಂತೆ ಮೇಡಂ ನಿನಗೇನಿಷ್ಟವಿದೆಯೋ ಅದನ್ನೇ ಮಾಡು ಎಂದು ಪ್ರೋತ್ಸಾಹಿಸಿದ್ದರು. ನಾನು ನ್ಯಾಷನಲ್  ಕಾಲೇಜಿಗೆ ಸೇರಿದೆ. ಅಲ್ಲಿಯೇ ಮೇಡಂ ಉಪನ್ಯಾಸಕಿಯಾಗಿದ್ದರು. ಸಾಮಾನ್ಯವಾಗಿ ಅವರು ಅಲ್ಲಿ ಪದವಿ ತರಗತಿಗಳಿಗೆ ಪಾಠ ಮಾಡುತ್ತಿರಲಿಲ್ಲ. ಆದರೂ ನಾವೊಂದಿಷ್ಟು ಮಂದಿ ಕೇಳಿದೆವೆಂದು ಪಾಠ ಮಾಡಲಿಕ್ಕೆ ಒಪ್ಪಿಕೊಂಡಿದ್ದರು. ಅಲ್ಲದೆ, ಅವರು ತೆಗೆದುಕೊಳ್ಳದ ಭಾಗಗಳನ್ನು, ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದಾಗ, ಮತ್ತೆ ಮನೆ ಪಾಠ ಆರಂಭಿಸಿ ಆ ಉಳಿದ ಭಾಗಗಳನ್ನು ಅಲ್ಲಿ ಹೇಳಿಕೊಡುತ್ತಿದ್ದರು. ಅವರೇನು ಪದವಿ ತರಗತಿಗಳಿಗೆ ಮನೆ ಪಾಠ ಮಾಡುತ್ತಿರಲಿಲ್ಲ. ನಾವು ಒಂದಿಷ್ಟು ಮಂದಿ ಬಹುಷಃ ಆರೇಳು ಮಂದಿ ಇರಬಹುದು, ಕೇಳಿದ್ದಕ್ಕೆ ಒಪ್ಪಿ ಮೂರು ವರ್ಷಗಳ ಕಾಲ ನಮಗೆ ಪಾಠ ಮಾಡಿದ್ದರು. ಅವರು ಅಂದು ಕಲಿಸಿದ ಗಣಿತವೆ ಇಂದಿನ ನನ್ನ ಎಲ್ಲಾ ಸಂಶೋಧನೆಗಳಿಗೂ ಮೂಲ ದ್ರವ್ಯ.

ಈ ಮೂರು ವರ್ಷಗಳಲ್ಲಿ ನನ್ನನ್ನು ಅವರು ಬಹಳ ಪ್ರಭಾವಿಸಿದ್ದರು. ಈ ಸಮಯದಲ್ಲಿ ಹಲವು ದ್ವಂದ್ವಗಳಿಂದ ಎಲ್ಲೋ ಕಳೆದು ಹೋಗಬೇಕಿದ್ದವನಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಮುನ್ನೆಡೆಸುತ್ತಿದ್ದರು.  ನನ್ನ ಸಾಹಿತ್ಯದ ಓದನ್ನು ಪ್ರೋತ್ಸಾಹಿಸುತ್ತಿದ್ದದ್ದು ಮೇಡಂ ಮಾತ್ರಾ. ಹಾಗೆ ಓದು ಪರವಾಗಿಲ್ಲ, ಎಂದು ಹೇಳುತ್ತಲೇ, ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯಬೇಕು ಎಂತಲೂ ಎಚ್ಚರಿಸುತ್ತಿದ್ದರು. ಗ್ರಂಥಾಲಯದ ಅವರ ಕಾರ್ಡುಗಳನ್ನು ನೀಡಿ ಪುಸ್ತಕ ತೆಗೆದುಕೊಂಡು ಹೋಗಲಿಕ್ಕೆ ಸಹಾಯ ಮಾಡುತ್ತಿದ್ದರು.


ಇನ್ನು ಅವರ ಮನೆಯಂತೂ ನನ್ನದೇ ಮನೆಯಂತಿತ್ತು. ಅವರ ಮನೆಯವರೆಲ್ಲರೂ ಆತ್ಮೀಯರಾಗಿದ್ದರು, ಅಜ್ಜಿ, ಮೇಡಂ ತಂದೆ, ಅವರ ಅಕ್ಕ, ಅವರ ತಂಗಿ, ಅವರ ಮಕ್ಕಳು, ಮೇಡಂ ಮಗಳು ದೀಪ್ತೀ.   ಒಂದು ಕಡೆ ಅಜ್ಜಿ, ಮತ್ತೊಂದು ಕಡೆ ಸಾರ್, ಮಗದೊಂದು ಕಡೆ ಮೇಡಂ ಪಾಠ, ಆಟಕ್ಕೆ ಹೋಗಿ ಬಂದ ದೀಪ್ತೀ, ಮೇಡಂ ಅವರ ಅಕ್ಕ, ತಂಗಿ, ರಜೆಗೆ ಬಂದ ಅವರ ಮಕ್ಕಳು, ಅವರ ಜಗಳ, ಇದೆಲ್ಲದರ ಮಧ್ಯ  ನಡೆಯುತ್ತಿದ್ದ ನಮ್ಮ ಪಾಠಗಳು, ಅದೆಷ್ಟು ಜೀವಂತ ಕ್ರಿಯೆ. ಈಗಲೂ ನೆನೆದರೆ ಕಣ್ಣಿಗೆ ಕಟ್ಟುತ್ತದೆ ಆ ದಿನಗಳು.  ನನಗೆ ನಾನು ಯಾರದೋ ಮನೆಗೆ ಮನೆಪಾಠಕ್ಕಾಗಿ ಬಂದಂತೆನಿಸುತ್ತಿರಲಿಲ್ಲ,  ಅದೇ ಮನೆಯವ  ಹೊರಗೋಗಿದ್ದವ ಮತ್ತೆ ಮನೆಗೆ  ಬಂದಂತೆ ಭಾಸವಾಗುತ್ತಿತ್ತು. ಬದುಕು ರೂಪಗೊಳ್ಳಬೇಕಾದದ್ದು ಹೀಗೆ ಅಲ್ಲವ. ಬೇರೆಯವರ ಮನೆಯಲ್ಲಿ ನಾವು ಅವರ ಮನೆಯವರಾಗಬಲ್ಲೆವು ಎಂಬುದರಿಂದಲೇ ಅಲ್ಲವ  ಉತ್ತಮ  ಬದುಕುಗಳು ರೂಪಗೊಳ್ಳುವುದು, ಮಾನವ ಸಮಾಜದ ಮೇಲೆ, ಮನುಷ್ಯರ ಮೇಲೆ ನಂಬಿಕೆ ಮೂಡುವುದು, ಹೆಚ್ಚು ಹೆಚ್ಚು ಮನುಷ್ಯರಾಗುವುದು. ಮೊದಲು ಮಾನವನಾಗು ಎಂದು ನೇರ ಹೇಳಿಕೆಯಿಂದಲ್ಲ, ಬದುಕಿನ ರೀತಿಯಿಂದ, ನಮ್ಮನ್ನು ಮನುಷ್ಯರನ್ನಾಗಿಸುತ್ತಿದ್ದದ್ದು.  ನಮ್ಮ ಸನಿಹದಲ್ಲಿ ಮತ್ಯಾರೋ ಅನಾಮಿಕ ಆತ್ಮೀಯತೆಯ ಭಾವಕ್ಕೊಳಪಡುವಂತೆ  ಬದುಕುವುದೇ ನಾನು ಅವರಿಗೆ ನೀಡಬಲ್ಲ ಗುರು ಕಾಣಿಕೆ.

ಅನಾರೋಗ್ಯದ ಸಮಯದಲ್ಲಿ, ಸಾವಿನ ಸನಿಹದಲ್ಲಿ ಅವರು ತೋರಿದ ಧೈರ್ಯ ಬಹಳ ದೊಡ್ಡದು, ಅಸಾಮಾನ್ಯವಾದದ್ದು. ಕೆಲವೇ ದಿನಗಳ ಹಿಂದೆ ಕರೆ ಮಾಡಿದಾಗಲೂ ಒಂದಿಷ್ಟೂ ಅಳುಕಿಲ್ಲದಂತೆ ಮಾತನಾಡಿ ಆಶೀರ್ವದಿಸಿದ್ದರು. ಬದುಕಿನ ಬಗೆಗೆ ತೀವ್ರವಾದ ಒಳನೋಟ ಸಾಧ್ಯವಿಲ್ಲದೆ ಸಾವನ್ನು ಸಹಜವಾಗಿ ಸ್ವೀಕರಿಸಲಿಕ್ಕೆ ಸಾಧ್ಯವಿಲ್ಲ. ಮೇಡಂ ಸಾವನ್ನು ಸಹಜವಾಗಿ ಸ್ವೀಕರಿಸಿದಂತಿದ್ದರು.  ಬದುಕನ್ನು ತೀವ್ರವಾಗಿ ಜೀವಿಸುವುದೆಂದರೇನೇ ಸಾವಿನ ಸತ್ಯವನ್ನರಿತು ಅದನ್ನು ನಿರಮ್ಮಳವಾಗಿ ಎದುರಿಸಿವುದು. ಆ ಮಾಹಾನ್ ಚೈತನ್ಯಕ್ಕೆ ಅದು ಸಾದ್ಯವಾಗಿತ್ತು.
ಕೈ ಹಿಡಿದು ನಡೆಸೆನ್ನನು ತಾಯೇ ಎಂದು ಹೇಳುತ್ತ ………

[ನಾಗಜ್ಯೋತಿ ಮೇಡಂ ದಿನಾಂಕ 20.08.2019 ರಂದು ದೈವಾಧೀನರಾದರು. ]






ಸೈದ್ಧಾಂತಿಕ ಭೌತವಿಜ್ಞಾನ ಹಾಗು ಅಂತರ್ಶಿಸ್ತೀಯತೆ

ಅಭಿನವ ಚಾತುರ್ಮಾಸಿಕ "ಸುತ್ತುವ ಗ್ರಹಗಳಿಂದ ಚಲಿಸುವ ವಿಗ್ರಹಗಳವರೆಗೆ"ದಲ್ಲಿ ನನ್ನದೊಂದು ಲೇಖನ ಪ್ರಕಟವಾಗಿತ್ತು. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.












   

ಕಾವ್ಯ ಹಾಗು ಸೈದ್ಧಾಂತಿಕ ಭೌತ ವಿಜ್ಞಾನ ಎರಡರ ಧ್ಯೇಯವೂ ಒಂದೇ, ಸತ್ಯವನ್ನು ಹುಡುಕುವುದು, ಕಟ್ಟುವುದು. ಎರಡರ ಮಾಧ್ಯಮವೂ ಒಂದೇ ಭಾಷೆ. ಒಂದು ಸಾರ್ವತ್ರಿಕ ಸತ್ಯವನ್ನ ವಸ್ತುನಿಷ್ಟ ದೃಷ್ಟಿಕೋನಕ್ಕೊಳಪಡಿಸಿದರೆ ಮತ್ತೊಂದು ವೈಯುಕ್ತಿಕ ನೆಲೆಯಲ್ಲಿ ರೂಪಗೊಳ್ಳುತ್ತದೆ. ಸೈದ್ಧಾಂತಿಕ ಭೌತ ವಿಜ್ಞಾನ ಭಾಷೆಗೆ ತರ್ಕದ ಮಿತಿಯನ್ನು ಹಾಕಿದರೆ, ಕಾವ್ಯ ಆ ಯಾವುದೇ ಮಿತಿಗಳಿಲ್ಲದೆ ಭಾಷೆಯನ್ನ ಉಪಯೋಗಿಸಿಕೊಳ್ಳುವ ಎಲ್ಲಾ ಸಾದ್ಯತೆಗಳನ್ನೂ ತೆರೆದಿಡುತ್ತದೆ. ಎರಡೂ ತೀವ್ರವಾಗಿ ಚಡಪಡಿಸುವಂತೆ ಮಾಡುವ ಸೃಜನಾತ್ಮಕ ಕ್ರಿಯೆ. ಇವೆರಡರ ನಡುವೆ ಅದೆಷ್ಟೇ ಸಾಮ್ಯ ಗಳಿದ್ದರೂ ದೃಷ್ಟಿಕೋನದಲ್ಲಿ ಇವೆರಡರದು ವಿರುದ್ಢಾರ್ಥಕವಾದ ನೋಟ. ಈ ಲೇಖನದಲ್ಲಿರುವುದು ನನ್ನ ವೈಯುಕ್ತಿಕ ಅಭಿಪ್ರಾಯ. ನನ್ನ ಮಟ್ಟಿಗೆ ಸೈದ್ಧಾಂತಿಕೆ ಭೌತ ವಿಜ್ಞಾನ ಒಂದು ಮಾಧ್ಯಮ. ಕಾವ್ಯಾವೂ ಒಂದು ಮಾಧ್ಯಮ. ಎರಡೂ ಸತ್ಯವನ್ನು ಹುಡುಕುವ ಮಾಧ್ಯಮ. ಈ ಎರಡೂ ಮಾದ್ಯಮಗಳಲ್ಲಿ ಸ್ವಲ್ಪ ಮಟ್ಟಿಗೆ ಕೆಲಸ ಮಾಡಿರುವುದರಿಂದ ಹೇಗೆ ಒಂದು ಮಾಧ್ಯಮ ಮತ್ತೊಂದನ್ನು ಪ್ರಭಾವಿಸುತ್ತದೆ. ಈ ಎರಡೂ ಮಾಧ್ಯಮಗಳಲ್ಲಿನ ಸಾಮ್ಯತೆಗಳೇನು, ಭಿನ್ನತೆಗಳೇನು, ಹಾಗು ಇವೆರೆಡೂ ಅನುಸಂಧಾನಗೊಳ್ಳಬಹುದಾದ ಸಾದ್ಯತೆ ಹಾಗು ಆ ಸಾದ್ಯತೆಯಲ್ಲಿನ ಸೃಜನಾತ್ಮಕ ಸಂತೃಪ್ತಿಯ ಬಗೆಗೆ ಒಂದಿಷ್ಟು ಮಾತು.

ಸೈದ್ಧಾಂತಿಕೆ ಭೌತ ವಿಜ್ಞಾನದ ನಡೆ ಎಂತಹದ್ದು? ವಿಜ್ಞಾನದ ಉದ್ದೇಶವೇ ಕಾಣುವ ಕಾಣಬಲ್ಲ ಭೌತಜಗತ್ತನ್ನು, ಈ ಭೌತ ಜಗತ್ತಿನ ಕ್ರಿಯೆಗಳಿಗೆ ಕಾರ್ಯ ಕಾರಣದ ವಿವರಗಳನ್ನೊದಗಿಸುವುದು. ಇಲ್ಲಿ ಕಾಣುವ ಎಂದುದನ್ನು ವಿಶಾಲವಾದ ವೈಜ್ಞಾನಿಕವಾಗಿ ದೃಷ್ಟಿಕೋನವನ್ನಾಗಿ ಪರಿಗಣಿಸಬೇಕು. ಗಣಿತದ ತಾರ್ಕಿಕ ನಿಯಮಗಳ ಮೇಲೆ ಸಿದ್ಧಾಂತಗಳನ್ನು ಕಟ್ಟಿ ಅದರ ಮುಖೇನ ಇದಮಿತ್ತಂ ಎಂಬ ವಿಶ್ವಾತ್ಮಕ ಸತ್ಯವನ್ನು ಗುರುತಿಸುವುದು. ಹಾಗಾಗಿ ಇಲ್ಲಿ ವೈಯುಕ್ತಿಕ ಸತ್ಯಗಳಿಲ್ಲ. ಒಬ್ಬರಿಗೆ ಒಂದು ರೀತಿ ಅರ್ಥವಾಗಿದೆ ಮತ್ತೊಬ್ಬರಿಗೆ ಮತ್ತೊಂದು ರೀತಿ ಅರ್ಥವಾಗಿದೆ ಎನ್ನುವಂತಿಲ್ಲ. ಇಷ್ಟಕ್ಕೂ natural language , ಅದು ಯಾವುದೇ ಭಾಷೆಯಾಗಿರಲಲಿ , ವಿಜ್ಞಾನದ ಯಾವುದೇ ಸಂಗತಿಯನ್ನೂ ಅದರ ಆಳದ ಸಂಗತಿಗಳನ್ನು ತಿಳಿಸಲು ಸಾದ್ಯವಿಲ್ಲವೆಂದೇ ಹಲವರ ಅಭಿಪ್ರಾಯ. ಇಲ್ಲಿ ಅರ್ಥವಾಯಿತು ಎಂದರೆ ಅದರ ಭಾಷೆಯಾದ ಗಣಿತದ ಸಮೀಕರಣಗಳ ಮುಖೇನವೇ ಅರ್ಥಕ್ಕೆ ದಕ್ಕಬೇಕು. ಅದುವೇ ಅದರೆ ಭಾಷೆ. ಹಾಗೆಂದು ಗಣಿತೀಯ ಭಾಷೆಯಲ್ಲಿ ವ್ಯಕ್ತವಾದದ್ದೆಲ್ಲವೂ ಸೈದ್ಧಾಂತಿಕೆ ಭೌತ ವಿಜ್ಞಾನದ ಪರಿದಿಯೊಳಗೆ ಬರುವುದಿಲ್ಲ. ಸಿದ್ಧಾಂತವು ಪ್ರಯೋಗಕ್ಕೆ ತೆರೆದುಕೊಳ್ಳಬೇಕು. ಕಡೆಗೆ ಪ್ರಯೋಗಾಲಯದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಾರವಾಗುವುದು.

ಇನ್ನು ಸೈದ್ಧಾಂತಿಕೆ ಭೌತ ವಿಜ್ಞಾನದಲ್ಲಿನ ಸಂಶೋಧನೆಗೆ ಬಹಳಷ್ಟು ಪ್ರಯತ್ನಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ಸುಮಾರು ವರ್ಷಗಳ ಕ್ರಮ ಬದ್ಧ ಅಧ್ಯಯನ ಅಭ್ಯಾಸ ಸಾಗಬೇಕು. ಕಲಿತ ನಂತರ ಸಂಶೋಧನೆಗಿಳಿಯಲು ಸಾಕಷ್ಟು ಪ್ರಯತ್ನ ಬೇಕು. ನೂರಾರು ವರ್ಷಗಳಲ್ಲಿ ನಡೆದ ಸಂಶೋದನೆಗಳನ್ನು ಅಭ್ಯಸಿಸಿ, ಹಾಗೆ ಅಧ್ಯಯನ ಮಾಡುವಾಗ ಇಲ್ಲಿ ಏನೋ ಸರಿ ಇಲ್ಲ, ಏನೋ ಅಪೂರ್ಣವಾಗಿದೆ ಎಂದೆನಿಸಿ ಅದನ್ನ ಸರಿಯಾಗಿಸೋಣ ಎಂದು ಹೊರಟಾಗ ಅದೊಂದು ಸಂಶೋಧನಾ ಕೃತಿಯಾಗುತ್ತೆ. ಇದು ವಿಜ್ಞಾನದ ಕ್ರಮ.

ಕಾವ್ಯದ್ದಾದರೆ, ಅದಕ್ಕೆ ಜಗತ್ತಿನ ಮಿತಿಯಿಲ್ಲ. ಯಾವುದರ ಮಿತಿಯೂ ಇಲ್ಲ. ಸರ್ವ ತಂತ್ರ ಸ್ವತಂತ್ರ. ಏನನ್ನು ಬೇಕಾದರೂ ಕಾಣಬಲ್ಲದು. ನಿಂತ ನೆಲೆಯಲ್ಲೆ ಬ್ರಹ್ಮಾಂಡವನ್ನೆಲ್ಲಾ ಅಲೆಯಬಲ್ಲದು. ಮನುಷ್ಯ ಪ್ರಜ್ಞೆ ಏರಬಲ್ಲ ಎಲ್ಲಾ ಸಾಧ್ಯತೆಗಳನ್ನೂ ಒಂದೇ ನೆಗೆತಕ್ಕೆ ಏರಿ ಕಂಡು ಇಳಿಯಬಲ್ಲದು. ಕಾವ್ಯದ ಭಾಷೆಗೆ ತರ್ಕದ ಹಂಗಿಲ್ಲ. ಇಡೀ ಜಗತ್ತಿನಲ್ಲಿ ಇದೇ ಕಾವ್ಯ, ಇದು ಮಾತ್ರ ಕಾವ್ಯ ಎಂದು ಯಾರಿಂದಲೂ ಹೇಳಲು ಸಾಧ್ಯವಾಗಿಲ್ಲ. ಹೀಗೇ ಇರಬೇಕೆಂದು ಹೇಳಿದಾಗೆಲ್ಲಾ ಅದನ್ನ ಮುರಿದು ಕಟ್ಟಿದ್ದು ಕಾವ್ಯ. ಯಾವ ಕಾರ್ಯ ಕಾರಣದ ಹಂಗೂ ಇಲ್ಲ. ಇಲ್ಲಿ ಎಲ್ಲವೂ ಸಾಧ್ಯ. ಸಾರ್ವತ್ರಿಕ ಅರ್ಥ ಎಂಬುದೇ ಕಾವ್ಯದ ಮೊದಲ ಸೋಲು. ಓದಿದ ವ್ಯಕ್ತಿಗೆ ಓದಿದ ಕ್ಷಣಕ್ಕೆ ದಕ್ಕಿದ್ದೇ ಅದರ ಅರ್ಥ. ಕಾವ್ಯಕ್ಕೆ ಪ್ರತಿಯೊಂದು ಓದಿನಲ್ಲು ಹುಟ್ಟು. ಪ್ರತೀ ಓದಿನಲ್ಲೂ ವಿಸ್ತಾರಗೊಳ್ಳುವ, ಹಾಗೆ ವಿಸ್ತಾರಗೊಳ್ಳುತ್ತಲೇ ಅರ್ಥ ವೈವಧ್ಯವನ್ನು ಕಾಣಬಲ್ಲ ಶಕ್ತಿ ಕಾವ್ಯದ್ದು. ಹೀಗೆ ತೀರ ವೈಯುಕ್ತಿಕ ವೆಂದೆನಿಸುತ್ತಲೇ ಅದೆಷ್ಟೋ ವಿಶ್ವಾತ್ಮಕ ಸತ್ಯಗಳನ್ನ ತೆರೆದಿಡಬಲ್ಲದ್ದು. ಮನುಷ್ಯ ಭಾಷೆಯ ಎಲ್ಲಾ ಮಿತಿಗಳನ್ನು ದಾಟಬಲ್ಲ ಶಕ್ತ ಮಾದ್ಯಮ ಕಾವ್ಯ.

ಮೊದಲ ಓದಿಗೆಲ್ಲ ಸ್ಪಷ್ಟವಾಗಿರುತ್ತೆ, ಈ ಎರಡೂ ಮಾದ್ಯಮಗಳು ವಿರುದ್ಧ ಧೃವಗಳಲ್ಲಿ ನಿಲ್ಲುವವು. ಯಾವುದೇ ಕಾರಣಕ್ಕೂ ಒಂದು ಮಾದ್ಯಮ ಮತ್ತೊಂದು ಮಾದ್ಯಮಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎರಡೂ ಜಗದ ಸತ್ಯವನ್ನೂ ಕಾಣಿಸಬಲ್ಲ ಸೃಜನಾತ್ಮಕವಾದ ಬಹು ಶಕ್ತ ಮಾಧ್ಯಮಗಳು. ಭಾಷೆಯ ತಾರ್ಕಿಕ ನೆಲೆಯಲ್ಲಿ ಕಾಣಲು ಸಾದ್ಯವಾಗುವುದೆಲ್ಲವನ್ನೂ ವಿಜ್ಞಾನ ತೆರೆದು ತೋರಿಸುತ್ತದೆ. ಹಾಗೆ ತೋರಿಸುತ್ತಲೇ ಅದು ಭಾಷೆಯ ಮಿತಿಯನ್ನೂ ತಿಳಿಸುತ್ತದೆ. ಹಾಗೆ ಭಾಷೆಯ ಮಿತಿ ಕಂಡ ಹಂತದಲ್ಲಿ ಅಲ್ಲಿಂದ ಮುಂದೆ ಸಾಗಲಿಕ್ಕೆ ಕಾವ್ಯ ದಾರಿ ಮಾಡಿಕೊಡುತ್ತದೆ. ಭಾಷೆಯ ಮಿತಿ ಕಾಣಲಿಕ್ಕೆ, ತರ್ಕದ ಮಿತಿ ಕಾಣಲಿಕ್ಕೆ ವಿಜ್ಞಾನ ಅನುವು ಮಾಡಿಕೊಡುತ್ತೆ. ಅಲ್ಲಿಂದ ಕಾವ್ಯದ ಕ್ರಿಯೆ ಆರಂಭವಾಗುತ್ತೆ. ಹಾಗೆ ಆರಂಭವಾದ ಕಾವ್ಯ ಅತಾರ್ಕಿಕ ಭಾಷೆಯ ನೆಲೆಗಳಲ್ಲಿ ಅಲೆಯುತ್ತಿರಬೇಕಾದರೆ ಕಳೆದು ಹೋಗುವ ಸಂಭವವೆದುರಾದಾಗ ಮತ್ತೆ ತರ್ಕದ ನೆಲೆಗೆ ಹಿಂತಿರುಗುತ್ತದೆ. ಹೀಗೆ ಹೀಗೆ ಕಾವ್ಯ ಹಾಗು ವಿಜ್ಞಾನ, ತಾರ್ಕಿಕ ಭಾಷೆ ಹಾಗು ಅತಾರ್ಕಿಕ ಭಾಷೆ ಎರಡೂ dialectical ಆಗಿ ಸಂವಾದ ನಡೆಸುತ್ತಾ ಸಾಗಿ ಅನುಸಂಧಾನಗೊಳ್ಳುತ್ತೆ.

ಸೈದ್ಧಾಂತಿಕೆ ಭೌತ ವಿಜ್ಞಾನ ಹಾಗು ಕಾವ್ಯದಲ್ಲಿನ ಸೃಜನಾತ್ಮಕ ಕ್ರಿಯಲ್ಲಿನ ಸಾಮ್ಯತೆ ಹಾಗು ಪ್ರಭಾವ ಹೇಗಿರುತ್ತೆ. ಓದುವ ಕ್ರಮವನ್ನ ಗಮನಿಸೋಣ. ಸೈದ್ಧಾಂತಿಕೆ ಭೌತ ವಿಜ್ಞಾನದ ಓದು ಹೇಗಿರುತ್ತೆ. ಮೊಟ್ಟ ಮೊದಲನೆಯದಾಗಿ ಉತ್ತಮವಾದ ಓದು ಯಾವುದೇ ಪೂರ್ವಾಗ್ರಹಗಳಿಲ್ಲದೆ ನಾವೇ ಸ್ವತಃ ಕೂತು ಒಂದೊಂದೇ ಸಮೀಕರಣಗಳನ್ನು ಅದರ ಪ್ರತೀ ತಾರ್ಕಿಕ ಹಂತಗಳನ್ನೂ ಬಹಳ ಎಚ್ಚರಿಕೆಯಿಂದ ಬಿಡಿಸಬೇಕು ಆಗಲೇ ಆ ಸಮೀಕರಣ, ಸಿದ್ಧಾಂತ ನಮಗೆ ದಕ್ಕುವುದು. ಹಾಗೆ ದಕ್ಕುವುದೆಂದರೆ, ಹಾಗೆ ಓದುವಾಗ ಒಂದು ಹೊಳಹು ದಕ್ಕುತ್ತೆ. ಆಹಾ ಎನ್ನುವ ಸಂದರ್ಭ. ಮೈ ರೋಮಾಂಚನಗಳ್ಳುವ ಸಂದರ್ಭ. ಹಾಗಾಗಿ ಒಂದು ವಿಷಯದ ಬಗೆಗೆ ಯಾರು ಏನೇ ಹೇಳಿದರೂ ಅವರು ಅದೆಷ್ಟೇ ದೊಡ್ಡವರಾಗಿರಲಿ ಅವರ ಹೇಳಿಕೆಗಳನ್ನ ನಂಬುವುದಿಲ್ಲ. ಅಪನಂಬಿಕೆಯಿಂದಲೇ ಇಲ್ಲಿನ ಓದು ಆರಂಭವಾಗುವುದು. ತೀವ್ರವಾದ ವಿಮರ್ಷಾತ್ಮಕ ನೋಟದಲ್ಲೇ ಎಲ್ಲವನ್ನೂ ನೋಡುವುದು. ಅಂದರೆ, ಇಲ್ಲಿ ಸ್ವತಃ ನಾವೇ ಕೂತು ಓದಿ ಬಿಡಿಸಿದಾಗ ದಕ್ಕುವುದಿದೆಯಲ್ಲ ಅದಕ್ಕಾಗಿಯೇ ಎಲ್ಲ ಪ್ರಯತ್ನಗಳು.

ಕಾವ್ಯದ ಓದೂ ಇದೇ ರೀತಿ. ಒಂದು ಕಾವ್ಯವನ್ನು ಯಾರಾದರೂ ವಿವರಿಸಿದರೆ ತೃಪ್ತಿಯಿಲ್ಲ. ಅದನ್ನೂ ನಾವೇ ಓದಬೇಕು. ಒಂದೊಂದೇ ಪದ, ಒಂದೊಂದೇ ಸಾಲು ಬಿಡಿಸಿ ಬಿಡಿಸಿ ಓದಬೇಕು. ಹಾಗೆ ಓದುತ್ತಲೇ ಕಟ್ಟಬೇಕು. ಇಲ್ಲಿ ಇಡಿಯಾಗಿ ಹಾಗು ಬಿಡಿಯಾಗಿ ಒದುವ ಕ್ರಮದ ಬಗೆ ಮುಖ್ಯವಾದದ್ದು. ಮೊದಲಿಗೆ ಒಂದೇ ವೇಗದಲ್ಲಿ ಒಂದು ಕವನವನ್ನ ಓದುತ್ತೇವೆ. ಆಗ ಅದರಲ್ಲಿ ಆ ಕವನದಲ್ಲಿ ಏನೋ ಅಡಗಿದೆ ಎಂದೆನಿಸುತ್ತೆ. ನಂತರ ಒಂದೊಂದೇ ಪ್ಯಾರ, ಒಂದೊಂದೇ ಸಾಲು, ಪದ ಹೀಗೆ ಬಿಡಿಸಿ ಬಿಡಿಸಿ ಒದುತ್ತೇವೆ. ಈ ಪದವು ಇಲ್ಲೇಕೆ, ಇದರ ಅರ್ಥ ಈ ಸಾಲಿನಲ್ಲಿ ಏನು? ಈ ಸಾಲಿನಿಂದ ಮತ್ತೊಂದು ಸಾಲಿಗೆ ಹೋದಾಗ ಆಗುವ ಅರ್ಥಪಲ್ಲಟಗಳೇನು, ಹೀಗೆ ಬಿಡಿ ಬಿಡಿ ಒದು ಸಾಗುತ್ತೆ. ಮತ್ತೆ ಇಡಿಯಾಗಿ ಓದುತ್ತೇವೆ. ಅದಾದ ನಂತರ ಕವನ ಕಟ್ಟಿಕೊಡುವ ಅರ್ಥದ ವಿಚಾರ. ಕವನ ಇಂದಿನ ವಿಚಾರಗಳ ಮಟ್ಟಿಗೆ, ಅದರ ವಸ್ತುವಿನ ಮಟ್ಟಿಗೆ ಎಲ್ಲಿ ಸಲ್ಲುತ್ತೆ, ನಂತರ ಹಾಗೆ ಅದು ವಸ್ತುವಿನ ಬಗೆಗೆ ಧ್ವನಿಸಿದ ಧ್ವನಿ ವೈಯುಕ್ತಿಕ ಅನುಭವದ ನೆಲೆಯಲ್ಲಿ ಇಟ್ಟು ನೋಡಿದಾಗ ಎಲ್ಲಿ ಸಲ್ಲುತ್ತೆ, ಒಟ್ಟೂ ಮನುಷ್ಯ ಇತಿಹಾಸದ ಅನುಭವದ ಹಿನ್ನಲೆಯಲ್ಲಿ ವಿಶ್ಲೇಷಿಸಿದಾಗ ಇದರ ನೆಲೆಯೇನು ಎನ್ನುವ ವಿಶ್ಲೇಷಣೆ ನಡೆಯುತ್ತದೆ. ಈ ಎರಡೂ ಓದಿನಲ್ಲಿ ನಿರಂತರವಾಗಿ ಅರ್ಥ ಕಟ್ಟುತ್ತಾ ಸಾಗಿರುತ್ತೆ.

ಈ ಇಡಿಯಾದ ಹಾಗು ಬಿಡಿಯಾದ ನೋಟ ಸೈದ್ಧಾಂತಿಕೆ ಭೌತ ವಿಜ್ಞಾನದ ಮಟ್ಟಿಗೆ ಬಹುವಾಗಿ ಸಹಾಯ ಮಾಡುತ್ತದೆ. ಸೈದ್ಧಾಂತಿಕೆ ಭೌತ ವಿಜ್ಞಾನ ಬಹು ವಿಶಾಲವಾದ ಕಾರ್ಯ ಕ್ಷೇತ್ರ. ಹಾಗಾಗಿ ಇಲ್ಲಿನ ಒಂದು ಕ್ಷೇತ್ರದಲ್ಲಿ ಪರಿಣಿತನಾಗುವುದಕ್ಕೆ ಇಡೀ ಜೀವಮಾನವೇ ಬೇಕು. ಹಾಗೆ ಒಂದು ಕ್ಷೇತ್ರದ ಪ್ರಾವೀಣ್ಯತೆಯನ್ನು ಸಾಧಿಸುವುದು, ಆ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯ ಬಗೆಗೆ ಸಂಶೋಧಿಸುವುದು ಬಿಡಿಯಾದ ಓದಿನಂತಾದರೆ, ಈ ಕ್ಷೇತ್ರ, ಈ ಪ್ರಶ್ನೆ ಒಟ್ಟು ಸೈದ್ಧಾಂತಿಕೆ ಭೌತ ವಿಜ್ಞಾನ ಜ್ಞಾನ ಶಾಖೆಯಲ್ಲಿ ಇದರ ನೆಲೆಯೇನು ಎಂಬುದೂ, ಇಡೀ ಸೈದ್ಧಾಂತಿಕೆ ಭೌತ ವಿಜ್ಞಾನವದ ಮೇಲ್ಪದರದ ಓದು ಇಡಿಯಾದ ಓದಿಗೆ ಸಂಬಂಧಿಸಿದ್ದು. ಈ ಸಂಶೋಧನಾ ಕ್ಷೇತ್ರ ಪ್ರಕೃತಿಯ ಬಗೆಗೆ ಏನನ್ನು ಹೇಳುತ್ತಿದೆ ಎಂಬುದು ಇಡಿಯಾದ ಸಂಗತಿಯಾದರೆ, ಅದರಲ್ಲಿನ ಒಂದೊಂದು ಪ್ರಶ್ನೆಯೂ ಬಿಡಿಯಾದ ನೋಟಕ್ಕೆ ಸಂಬಂಧಿಸಿದ್ದು. ಒಟ್ಟು ಸತ್ಯದ ಅನಾವರಣಕ್ಕೆ ಇಡಿಯಾದ ಹಾಗು ಬಿಡಿಯಾದ ಎರಡೂ ನೋಟಗಳೂ ಬಹು ಮುಖ್ಯ.

ಒಂದು ಉತ್ತಮ ಕವಿತೆಯನ್ನು ಓದಿದಾಗ ಅದಕ್ಕೆ ಪ್ರತಿಕ್ರಿಯಿಸುವುದು ಹೇಗೆ. ಕೆಲವರು ವಿಮರ್ಶಿಸುತ್ತಾರೆ. ಮತ್ತೊಂದು ಬಗೆಯೆಂದರೆ, ಓದಿದ ಕವನ ಒಂದು ತಲ್ಲಣವನ್ನು ಸೃಷ್ಟಿಸುತ್ತೆ. ಏಳಲಾರದೇ ಕೂರಲಾರದಂತೆ ಮಾಡುವ ತಲ್ಲಣವದು. ಈ ಕಾವ್ಯಲೋಕದ ದೃಷ್ಟಿಯಲ್ಲಿ ಏನೋ ಪೂರ್ಣವಾಗಿಲ್ಲ. ಮತ್ತೇನೊ ಇರಬೇಕಿತ್ತು. ಈ ನೋಟಕ್ಕೆ ಭಿನ್ನವಾದೊಂದು ನೋಟ ಸಾದ್ಯ. ಆ ತಲ್ಲಣದಲ್ಲಿ ಓದಿದ ಕಾವ್ಯದಿಂದ ಪ್ರೇರೇಪಿತವಾಗಿ ಜೀವನಾನುಭವವು ಸೇರಿ ಮತ್ತೊಂದು ಕಾವ್ಯ ರೂಪಗೊಳ್ಳುತ್ತೆ. ಕವಿತೆಯ ಓದಿಗೆ ಪ್ರತಿಕ್ರಿಯೆಯಾಗಿ ಮತ್ತೊಂದು ಕವನವೇ ರೂಪಗೊಳ್ಳುತ್ತೆ. ನಮ್ಮ ಕಾವ್ಯದ ಓದು ಒಳಗಿಳಿದಂತೆಲ್ಲ ಅದಕ್ಕೆ ಪ್ರತಿಕ್ರಿಯೆಯಾಗಿ, ಅದರ ದೃಷ್ಟಿಕೋನಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿ ಮಗದೊಂದು ಸೃಷ್ಟಿಕ್ರಿಯೆ ನಡೆದಿರುತ್ತೆ. ಸೈದ್ಧಾಂತಿಕೆ ಭೌತ ವಿಜ್ಞಾನದಲ್ಲೂ ಇದೇ ರೀತಿಯಲ್ಲಿ ಸೃಜನಾತ್ಮಕ ಪ್ರತಿಕ್ರಿಯೆ ರೂಪಗೊಳ್ಳುವುದು. ಒಂದು ಸಂಶೋಧನಾ ಲೇಖನವನ್ನೂ ಓದಿದಾಗ ಅದರಲ್ಲಿ ಏನೋ ಸರಿ ಇಲ್ಲ ಅಥವಾ ಇದನ್ನು ಮುಂದುವರಿಸಲು ಮಾರ್ಗಗಳಿವೆ. ಇದು ಹೀಗಲ್ಲ ಎಂತಲೂ, ಅಥವಾ ಆ ಲೇಖನದಲ್ಲಿನ ಪ್ರಶ್ನೆ ಮಗದೊಂದು ಪ್ರಶ್ನೆಯನ್ನೇ ಕೇಳುವಂತೆ ಪ್ರೇರೇಪಿಸುತ್ತದೆ. ಉತ್ತರ ಕಾಣಲು ಹೊರಟಾಗ ಅದು ಸಂಶೋಧನಾ ಕೃತಿಯಾಗಿರುತ್ತದೆ. ಕಾವ್ಯ ಹಾಗು ಸೈದ್ಧಾಂತಿಕೆ ಭೌತ ವಿಜ್ಞಾನ ಎರಡರಲ್ಲೂ ನಾವು ಆರಂಭಿಸಿದ ಪ್ರಶ್ನೆಗೇ ಉತ್ತರ ಕಂಡುಕೊಂಡೆವು ಎನ್ನುವ ಹಾಗಿಲ್ಲ. ಎರಡರಲ್ಲೂ ಅದೆಷ್ಟೋ ಬಾರಿ ಬೇರೇನೋ ಉತ್ತರ ಹೊಳೆದು ಅದಕ್ಕೆ ಪೂರಕ ಪ್ರಶ್ನೆಯನ್ನು ನಿರ್ಮಿಸುವಂತೆ ಮಾಡುತ್ತದೆ. ಪ್ರಾಮಾಣಿಕ ಅನ್ವೇಷಣೆಯಲ್ಲಿ ಕೇಳಿದ ಪ್ರಶ್ನೆಗಿಂತ ಉತ್ತಮವಾದ ಉತ್ತರಗಳು ದೊರಕುವುದೇ ಹೆಚ್ಚು. ಈ ಮಾತು ಕಾವ್ಯಕ್ಕೂ ಸಲ್ಲುತ್ತೆ, ಸೈದ್ಧಾಂತಿಕೆ ಭೌತ ವಿಜ್ಞಾನಕ್ಕೂ ಸಲ್ಲುತ್ತೆ. ಸೃಷ್ಟಿಕ್ರಿಯಯ, ಸೃಜನಾತ್ಮಕತೆಯ ಎಲ್ಲಾ ಸ್ಥಿತಿಗಳನ್ನು ಈ ಎರಡೂ ಮಾಧ್ಯಮಗಳಲ್ಲಿ ಅನುಭವಿಸಲು ಸಾದ್ಯವಿದೆ.


ಸೈದ್ಧಾಂತಿಕೆ ಭೌತ ವಿಜ್ಞಾನದಲ್ಲಿನ ಸಂಶೋಧನೆ ಕಾವ್ಯ ವಸ್ತುಗಳಾಗಬಲ್ಲವೆ, ಕಾವ್ಯಕ್ಕೆ ಪ್ರಭಾವಿಸಬಲ್ಲವೆ ಎಂದರೆ ಹೌದು ಬಹುವಾಗಿ ಪ್ರಭಾವಿಸಬಲ್ಲದು ಎನ್ನುವುದು ನನ್ನ ಉತ್ತರ. ನನ್ನ ಸಂಶೋಧನಾ ಕಾರ್ಯಕ್ಷೇತ್ರ ಕ್ವಾಂಟಂ ಸಿದ್ಧಾಂತದ ಮೂಲಭೂತ ಪ್ರಶ್ನೆಗಳ ಕುರಿತಾದದ್ದು. ಹಾಗಾಗಿ ಅಲ್ಲಿ ನಾನು ಕೇಳುವ ಪ್ರಶ್ನೆಗಳನ್ನು ಕವನದಲ್ಲೂ ಕೇಳಬಹುದಾಗಿರುವವುಗಳು. ಅದೆಷ್ಟೋ ವೇಳೆ ಅದೆಷ್ಟೇ ಪ್ರಶ್ನೆಗಳನ್ನು ಏಕಕಾಲದಲ್ಲಿ ಕಾವ್ಯದ ಮಾಧ್ಯಮದಲ್ಲೂ, ಸೈದ್ಧಾಂತಿಕೆ ಭೌತ ವಿಜ್ಞಾನದ ಮಾಧ್ಯಮದಲ್ಲೂ ಚಿಂತಿಸುತ್ತಿರುವುದು ಸಾದ್ಯವಿದೆ. ಕ್ವಾಂಟಂ ಸಿದ್ಧಾಂತವು ಜಗತ್ತಿನ ಬಾಗಶಃ ಎಲ್ಲಾ ಸಂಗತಿಗಳನ್ನೂ ವಿವರಿಸುವಷ್ಟು ಶಕ್ತವಾದ ಸಿದ್ಧಾಂತವಾದರೂ, ಇಲ್ಲಿನವರೆಗೂ ಇದರ ನಿಯಮಗಳ ವಿರುದ್ಧ ಯಾವುದೇ ಪ್ರಯೋಗವೂ ಸಿದ್ಧವಾಗಿಲ್ಲವಾದರೂ, ಇದರ ಮುಖೇನ ಜಗತ್ತನ್ನ ಕಂಡಾಗ ಇದು ಜಗತ್ತಿನ ಬಗೆಗೆ, ಅದರ ಸತ್ಯತೆ( Reality)ಯ ಬಗೆಗೆ ಎಲ್ಲರಿಗೂ ಸಮ್ಮತವಾಗುವಂತಹ ಉತ್ತರ ಇಲ್ಲಿಯವರೆಗೂ ದಕ್ಕಿಲ್ಲ. ಹಾಗಾಗಿ ಅಲ್ಲಿ ನಾವು ಕೇಳುವ ಪ್ರಶ್ನೆಗಳಾದರೋ ಎಂತಹದ್ದು? ಯಾವುದನ್ನು ನಾವು ಸತ್ಯ ಎಂದು ಕರೆಯಬೇಕು? ಈ ಸಿದ್ಧಾಂತದ ಮುಖೇನ ಕಂಡ ನೋಟಗಳು ಸತ್ಯವೆ ಅಥವಾ ಅದಕ್ಕೂ ಮೀರಿದ ಆಳದ ಸತ್ಯಗಳಿವೆಯೆ? ಅವು ಇದ್ದರೆ ಅದು ಹೇಗಿರುತ್ತದೆ? ಹೇಗಿರಬಲ್ಲದು, ನೋಡುವುದಕ್ಕೂ ನೋಡಲ್ಪಟ್ಟಿದ್ದಕ್ಕೂ ಏನಾದರೂ ಸಂಬಂಧವಿದೆಯೆ? ನೋಡಲ್ಪಟ್ಟಿದ್ದು ನೋಟದಿಂದ ಸ್ವತಂತ್ರ್ಯವೆ? ಕಾರ್ಯ ಕಾರಣವೆಂದರೇನು? ಕ್ವಾಂಟಂ ಸಿದ್ಧಾಂತವನ್ನು ಒಂದು ಭಾಷೆಯೆಂದು ಪರಿಗಣಿಸಿದಾಗ ಈ ಭಾಷೆಯ ಮುಖೇನ ಕಂಡ ಸತ್ಯಗಳು ಜಗದ ಸತ್ಯಗಳೇ ಅಥವಾ ಭಾಷೆ ನಿರ್ಮಿಸಿದ ಸತ್ಯಗಳೆ. ಈ ಎಲ್ಲಾ ಪ್ರಶ್ನೆಗಳನ್ನೂ ಬಹಳ ತಾರ್ಕಿಕವಾಗಿ, ಗಣಿತೀಯ ಕ್ರಮಗಳನುಸರಿಸಿ, ಹಲವೊಮ್ಮೆ ಸಾವಿರಾರು ಕೋಟಿ ವೆಚ್ಚದ ಪ್ರಯೋಗಗಳನ್ನು ಮಾಡಿ ಉತ್ತರ ಕಾಣಲು ಪ್ರಯತ್ನಿಸುತ್ತಾರೆ. ಇನ್ನು ಕಾಲದ ಪ್ರಶ್ನೆಯನ್ನೂ ತಂದರಂತೂ ಮುಗಿದೇ ಹೋಯಿತು. ಉತ್ತರಗಳಿಲ್ಲದ ಸಾವಿರ ಪ್ರಶ್ನೆಗಳು. ಇದೆಲ್ಲದರ ಒಟ್ಟೂ ದೃಷ್ಟಿಕೋನವೆಂದರೆ ಜಗತ್ತು ಆಳದಲ್ಲಿ ನಮಗೆ ನಮ್ಮ ಇಂದ್ರಿಯಗಳಿಗೆ ಕಾಣುವ ಪ್ರಪಂಚಕ್ಕಿಂತ ತೀರಾ ಭಿನ್ನವಿದೆ ಎಂಬುದು. ಇದರ ಜೊತೆ ಜೊತೆಯಲ್ಲಿಯೇ ಕ್ವಾಂಟಂ ಸಿದ್ಧಾಂತದಲ್ಲಿ ಅನಿಶ್ಚಿತತೆಯೆಂಬುದು ಮೂಲಭೂತವಾದದ್ದು. ಇದರ ಜೊತೆಯಲ್ಲೇ ನನಗೆ ಹಲವು ಬಾರಿ ಬೆಚ್ಚಿಬೀಳುವಂತೆ ಮಾಡುವುದು ಇಲ್ಲಿನ ಸಂಕೀರ್ಣತೆ ಹಾಗು ಸರಳತೆಗಳ ಸಮ್ಮಿಲನ. ಒಮ್ಮೊಮ್ಮೆ ಬಹಳ ಸರಳವೆನ್ನಿಸುವ ಕೆಲವೇ ಕೆಲವು ನಿಯಮಗಳಿಂದ ಇಡೀ ಸಿದ್ಧಾಂತ ರೂಪಗೊಂಡು ಹಲವು ಸ್ಥರಗಳಲ್ಲಿ ಜಗತ್ತನ್ನು ವಿವರಿಸಲು ಶಕ್ತವಾದರೆ ಅದೇ ಕೆಲವೊಮ್ಮೆ ಬಹು ಸ್ಥರದ ಸಂಕೀರ್ಣ ಸಿದ್ಧಾಂತದ ಅವಶ್ಯವಾಗುತ್ತದೆ.

ಇತ್ತೀಚೆಗೆ ನಮ್ಮ ಕ್ಷೇತ್ರದಲ್ಲಿನ ಖ್ಯಾತ ಸಂಶೋದಕರಾದ "N D Mermin" ಎಂಬುವವರು "Making Better Sense of Quantum Mechanics" ಎಂಬ ಒಂದು ಲೇಖನದಲ್ಲಿನ ಈ ಮಾತುಗಳನ್ನು ಗಮನಿಸಿದರೆ ಸೈದ್ಧಾಂತಿಕ ಭೌತ ವಿಜ್ಞಾನಕ್ಕೂ ಕಾವ್ಯದ ಸಂದರ್ಭದಲ್ಲಿ ಕೇಳುವ ಪ್ರಶ್ನೆಗಳಿಗೂ ಇರುವ ಸಾಮ್ಯ ಕಾಣುತ್ತೆ. "There is mind and there is a world. Quantum mechanics has taught us that we cannot understand what we are talking about without paying attention to both. What links the contents of my mind to the world that induces them is the meaning I construct for my experience. If I had to design a coat of arms for QBism, it would display three words:“Mind, meaning, world” has no poetry in it. And what physicists’ understanding of quantum mechanics has lacked for ninety years is any hint of poetry."

ಈ ಪ್ತ್ರಶ್ನೆಗಳ ಬಗೆಗೆ ಇನ್ನೂ ಸ್ಪಷ್ಟ ರೂಪ ನೀಡಲಿಕ್ಕಾಗಿ ಕೆಳಗೆ ಮುಖ್ಯ ಸಂಶೋಧಕರ ಮಾತುಗಳನ್ನು ಉಲ್ಲೇಖಿಸುತ್ತಿದ್ದೇನೆ.

* " Physics is to be regarded not so much as the study of something a priori given,but as the development of methods for ordering and surveying human experience" --- Niels Bohr

* "Einstein said that the problem of the Now worried him seriously. He explained that the experience of the Now means something special for man, something essentially different from the past and the future, but that this important difference does not and cannot occur within physics. That this experience cannot be grasped by science seemed to him a matter of painful but inevitable resignation." - - - Rudolf Carnap

* " Space and time are modes in which we think and not conditions in which we live" --- Einstein

* "The conception of the objective reality of the elementary particles has thus evaporated in a curious way, not into the fog of some new, obscure, or not yet understood reality concept, but into the transparent clarity of a mathematics that represents no longer the behavior of the elementary particles but rather our knowledge of this behavior" - - - Werner Heisenberg

* " Quantum mechanics forbids statements about what really exists — statements about the object. It deals only with the object-subject relation. Although this holds,after all, for any description of nature, it appears to hold in a much more radical and far-reaching sense in quantum mechanics"--- Erwin Schrodinger

ಈ ಎಲ್ಲಾ ಪ್ರಶ್ನೆಗಳೂ ಹಲವು ವೇಳೆ ಬದುಕಿನ ಮೂಲಭೂತ ಪ್ರಶ್ನೆಗಳೆಂದೇ ಅನ್ನಿಸುತ್ತವೆ. ಮನುಷ್ಯ ಸಂದರ್ಭದಲ್ಲಿ ಇದೇ ಪ್ರಶ್ನೆಗಳು ಎದುರಾಗುತ್ತೆ ಹಾಗು ಉತ್ತರ ಕಾಣಲು ಹೊರಟಾಗ ಕಾವ್ಯ ಹಾಗು ಸೈದ್ಧಾಂತಿಕೆ ಭೌತ ವಿಜ್ಞಾನ ಎಂಬ ಎರಡೂ ಮಾದ್ಯಮಗಳು ಒಂದಕ್ಕೊಂದು ಪೂರಕವಾಗಿ ಉತ್ತರಗಳೆಡೆಗೆ ಸಾಗುತ್ತವೆ.

ನನ್ನ ಕ್ವಾಂಟಂ ಸಿದ್ಧಾಂತದ ಸಂಶೋದನೆಯಲ್ಲಿ ಕಾಡಿದ ಹಲವು ಪ್ರಶ್ನೆಗಳು ಕೆಲವೊಮ್ಮೆ ನನ್ನ ಕವನಗಳಲ್ಲಿ ನುಸುಳಿವೆ. ಇಲ್ಲಿ ಕೆಲವು ಆ ರೀತಿ ಪ್ರಭಾವಿಸಿದ ಕವನಗಳನ್ನ ನೀಡುತ್ತಿದ್ದೇನೆ. ಇವುಗಳು ಹಿಂದೆ ನನ್ನ ಬ್ಲಾಗಿನಲ್ಲಿ ಪ್ರಕಟಗೊಂಡವುಗಳು. ---

೦೧. ****** 
ಅದೊಂದು ಜ್ಯಾಮಿತೀಯ ಆಕಾರ
ಹಿಗ್ಗಿಸಿ ಕುಗ್ಗಿಸಿ ತುಳಿಯಲೂ ಬಹುದು
ಉಳಿಯುವುದಿದೆಯಲ್ಲ
ಅದು ಮತ್ತೆ ಒಂದು ಜ್ಯಾಮಿತೀಯ ಆಕಾರ


ಸ್ವರೂಪ ಬಹಳ ಮುಖ್ಯ
ಇಲ್ಲದಿದ್ದಾಗ ಉಳಿಯುವುದೇನು ಬರೀ ಲೆಕ್ಕಾಚಾರ
ಅದೂ ಸಹ ಹಲವೊಮ್ಮೆ ರಚನೆಯ ಒಳಗೇ ಬರತಕ್ಕದ್ದು
ಹಾಗಾಗಿ ಆಕಾರ ಮುಖ್ಯ
ಇದ್ದರೆ, ತಂದು ಕೂರಿಸುವುದೆಲ್ಲವನ್ನು
ಅದಕ್ಕೊಂದು ಜಾಗ ಬೇಕೇ ಬೇಕು
ಆಕಾರ ನಿರ್ಧಾರವಾದಾಗ ಉಳಿದದ್ದೆಲ್ಲವೂ ಜುಜುಬಿ
ಯಾವ ಅಬ್ಬೇಪಾರಿ ಸಹ ಬಣ್ಣ ಹಚ್ಚಬಲ್ಲ
ರಂಗವನ್ನು ನಿರ್ಮಿಸಬಲ್ಲ ನಾಟಕವಾಡಬಲ್ಲ
ಎರಡು ವಾಕ್ಯಗಳ ನಡುವಿನ ಬಿಡುವಲ್ಲಿ
ರಂಗಮಂದಿರದಲ್ಲದೆಷ್ಟು ನಿಶ್ಯಬ್ದವಡಗಿರುತ್ತೆ
ಅದು ಬೇಕಾದದ್ದು

ಕಡಿದ ಮೀನಿನ ಪ್ಲಾಸ್ಟಿಕ್ ಬಲೆಯ ದಾರಗಳು
ಅದೆಷ್ಟೋ ಬಾರಿ ಕಡಲ ತಡಿಯಲ್ಲಿ ಬಂದು ಬಿದ್ದಿರುತ್ತದಲ್ಲ
ಹಾಗೇ ಇದೂ ಸಹ
ಬಲೆ ನೇಯುವುದು ಅವನ ಹೊಟ್ಟೆ ಪಾಡಾದರೆ
ಮೀನಿಡಿಯುವುದು ಇವನದು
ತಿನ್ನುವುದು ನನ್ನದು

ಸ್ವರೂಪ ಹರಿಯುವುದಿಲ್ಲವೆಂದೇನೂ ಅಲ್ಲ
ರೂಪಾಂತರವನ್ನು ಸಹಿಸುವ ತಂತಿಜಾಲ
ಉಳಿದಿರುತ್ತದೆಯಲ್ಲ ಅದು ಸಲಹಿಬಿಡುತ್ತೆ
ಹಾಗಾಗಿ ನಾನು ಬದುಕಿದ್ದೇನೆ.


ಶಬ್ದವನ್ನ ಕೂಗಿ ಕರೆದೆ
ಬಂದಾಗ
ಗುರುತು ಸಿಕ್ಕಲಿಲ್ಲ.

ಪದಗಳೆಂಬೊ ಚಿಹ್ನೆಗಳ ರಾಶಿಯೊಳಗೆ ಹುದುಗಿ
ಮುಟ್ಟಿನೋಡಿದರೆ
ಸ್ಪರ್ಶಕ್ಕೆ ಸಿಕ್ಕಿದೆಯೆಂದೆನಿಸುತ್ತೆ
ಸ್ಪರ್ಶವೂ ಶಬ್ದದ ರೂಪವಾಗಿದ್ದರೆ?
ಪ್ರಶ್ನೆ ಭಯ ಹುಟ್ಟಿಸುತ್ತೆ
ಪ್ರಶ್ನೆ-ಭಯ ಎರೆಡೂ ಶಬ್ದಗಳೇ ಅಲ್ಲವ
ಅಂದುಕೊಂಡಾಗ
ಉತ್ತರವೂ ಶಬ್ದವಾಗಿ ಬಿಟ್ಟೀತಲ್ಲಾ
ಎಂದು ಗೊಂದಲವಾಗುತ್ತೆ.

ಯಾಕೋ
ಅಕ್ಷರವನ್ನು ಬರೆದುಬಿಟ್ಟೆ
ಹಲವೊಮ್ಮೆ ತಿದ್ದಿದೆ ಕೂಡ
ನನ್ನ ನೆನಪಿನಲ್ಲೀಗ ಬರೀ ಅಕ್ಷರಗಳೇ ಕೂತಿವೆ.

ವ್ಯಾಕರಣವಿಲ್ಲದ ಆಕಾಶ
ಭೂಮಿಯೆಂಬೋ ವಾಕ್ಯವನ್ನ ಕಟ್ಟಿತು
ವ್ಯಾಕರಣವನ್ನೇ ಕಟ್ಟಿ ಹಾಕೋಣವೆಂದಾಗ
ನನ್ನ ಹುಡುಗಿ ಅಡ್ಡ ಬಂದಳು

ಸ್ವ-ಕೇಂದ್ರಿತ ವೃತ್ತಾಂತದ ಗೋಳು
ಕಾಲದ ಮರು ಚರಿತ್ರೆ
ಅರ್ಥದ ಋಣ ಭಾರದ ಶೂಲಕ್ಕೆ
ಕಾರಣಕ್ಕೆ ಮೊರೆಹೋಗಲಾರೆ

ಆತ್ಮಕತೆಯ ಕಡೆಯ ಸಾಲನ್ನ
ಶಬ್ದಕ್ಕೆ ಅಗ್ನಿಸ್ಪರ್ಶಿಸುತ್ತಾ
ಆರಂಭಿಸುತ್ತಿದ್ದೇನೆ

ಸುಟ್ಟ ಶಬ್ದದ ಬೂದಿಯನ್ನ
ವಿಭೂತಿಯನ್ನಾಗಿಸಿ
ಬೆತ್ತಲೆ ಮೈಗೆಲ್ಲ ಬಳಿದುಕೊಂಡು
ದೇವರ ರೂಪವಾಗಿ
ವ್ಯಾಕರಣ ನಿಯಮಗಳ ನಿಯಾಮಕನಾಗಿ
ಸೃಷ್ಟಿಯಾಗಿ, ಸ್ಥಿತಿಯಾಗಿ, ಲಯವಾಗಿ........

೦೩. ಒಂದು Quantum ಕವಿತೆ
ಅಯ್ಯಾ, ಬೆಕ್ಕು
ಕಾಡಿದ್ದು ನಿಮ್ಮನ್ನಷ್ಟೇ ಅಲ್ಲ.
ಒಳಗೆ ಮರಿಗಳನ್ನಿಟ್ಟು
ನಾವಿಲ್ಲದ ವೇಳೆ ನೋಡಿ
ಈಗೇನಾದರು ಮಾಡಬೇಕಲ್ಲ
ಅವಕ್ಕೇನು ತಿಳಿಯುತ್ತೆ
ಪರಚಲಿಕ್ಕೆ ಬರುವುದು
ಎದುರಿಗೋದಾಗ

ಅಯ್ಯಾ, ಬೆಕ್ಕು
ಕಾಡಿದ್ದು ನಿಮ್ಮನ್ನಷ್ಟೇ ಅಲ್ಲ.
ಇಲ್ಲದಿದ್ದಾಗ ಮರಿಗಳಿನ್ನಿಟ್ಟು
ಎಲ್ಲೋ ದೂರದಲ್ಲಿದ್ದೆನೆಂದು
ಮರಿ ಕಿರುಚಿದ್ದು ಕೇಳಲಿಲ್ಲವೆಂಬುದೇನೋ
ನಿಜ
ಗೊತ್ತಿತ್ತೇನು ? ಹಿಂತಿರುಗುವವರೆಗೂ
ಬಂದಾಗ ಆದದ್ದು ಗಾಬರಿ

ಈ ಮರಿಗಳೊಂದು ಆಟಿಕೆ
ಮನೆಯ ಮಾಲಕನ ಮಕ್ಕಳಿಗೆ
ಕೊಟ್ಟು ಬಂದೆವು
ತಪ್ಪಿಸಿಕೊಂಡರೆ ಸಾಕಿತ್ತು
ಊರ ತುಂಬ ನಾಯಿಗಳು
ಬೆಕ್ಕಿನ ಮರಿಗಳು ಕಾಣಲಿಲ್ಲ
ಮಕ್ಕಳು ದಿನಕ್ಕೊಂದು
ಕತೆ ಕಟ್ಟಿ ಹೇಳುತ್ತಿದ್ದವು
ಹೊಸ ಅವತಾರಗಳಲ್ಲಿ



ಅಭಿನವ ಚಾತುರ್ಮಾಸಿಕ:

"ಕನ್ನಡದಲ್ಲಿ ಭಿನ್ನ ಆಶಯ ಮತ್ತು ವಿಭಿನ್ನ ಸರೂಪದ ಪತ್ರಿಕೆ. ಪ್ರತಿ ಸಂಚಿಕೆ: ಯಾರಾದರೊಬ್ಬ ಸಾಹಿತಿ/ಚಿಂತಕ/ಕಲಾವಿದನ ಒಟ್ಟು ಕೆಲಸ ಅಥವಾ ಯಾವುದಾದರೊಂದು ಸಮಸ್ಯೆ/ ಕಲಾ ಪ್ರಕಾರ/ ಮಾಧ್ಯಮವನ್ನು ಕೇಂದ್ರವಾಗಿರಿಸಿಕೊಂಡಿರುತ್ತದೆ. ಪರ್ಯಾಯ ಚಿಂತನೆ, ಸಿನಿಮಾ, ಪರಿಸರ, ದೇವನೂರ ಮಹಾದೇವ, ಪು.ತಿ.ನ, ಷೋಯಿಂಕಾ, ಸಂಗೀತ, ದೇಶೀ ದರ್ಶನಗಳು, ಹಿಂಸೆ, ನೋಮ್ ಚಾಮ್ ಸ್ಕಿ ,ಪಾರ್ಟಿಷನ್, ಕೆ.ಟಿ. ಶಿವಪ್ರಸಾದ್, ಮಲೆಯಾಳಂ ಕವಿತೆ, ಮಹಾರಾಜ ಕಾಲೇಜು, ತಮಿಳು ಕತೆಗಳು, ಜಿ.ಪಿ.ರಾಜರತ್ನಂ, ಕನ್ನಡ ಭಾಷಣಗಳು, ಸಮಗಾರ ಭೀಮವ್ವ, ಕಪ್ಪೆ ಅರಭಟ್ಟನ ಶಾಸನ, ವಿಮುಕ್ತ(ತೆಲುಗು ಕಥಾ ಜಗತ್ತಿನ ಜೊತೆಗೊಂದು ಮಾತುಕಥೆ), ಗುಲಾಬಿ ಟಾಕೀಸ್(ಕಥೆಯಿಂದ ಕಥೆಗೆ), ಅನೇಕ(ತಾಳಮದ್ದಲೆ-ಒಂದು ಶಬ್ಧಚಿತ್ರ),ಸಂಪತ್ತಿನೊಳಗೊಬ್ಬ ಸಂತ(ಎಂ.ವೈ.ಘೋರ್ಪಡೆ ಕುರಿತು),ಚಿತ್ರ ಪಟ ರಾಮಾಯಣ, ಭಕ್ತಿಯ ಬೆರಗು, ಭಕ್ತಿ ಕಂಪಿತ, ಮಾತು ತಲೆ ಎತ್ತಿದ ಬಗೆ, ನನ್ನದೊಂದು ಕನಸಿದೆ ಮುಂತಾದ ಸಂಚಿಕೆಗಳು ಹೊರಬಂದಿವೆ.
(ವಾರ್ಷಿಕ ಚಂದಾ ರೂ.೩೫೦/- ಸಂಸ್ಥೆಗಳಿಗೆ ೫೦೦/-)

ಸಂಪರ್ಕ ವಿಳಾಸ:
ಅಭಿನವ, ೧೭/೧೮-೨, ಮೊದಲನೆ ಮುಖ್ಯರಸ್ತೆ,
ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
ದೂರವಾಣಿ: ೯೪೪೮೮೦೪೯೦೫
email: abhinavaravi@gmail.com

online shopping: https://store.ruthumana.com/product/abhinava-chaturmasika/ 

                     --------------------------------------------------------------
                     --------------------------------------------------------------






 

ಲಹರಿ --- ೩


        {(ಲಹರಿ ೧  ಹಾಗು ಲಹರಿ ೨  ಕ್ಕೆ ಇಲ್ಲಿ ಕ್ಲಿಕ್ಕಿಸಿ )}

ನಿಲ್ಲು ವಿವರಿಸಬೇಡ ಹೇಳು
ಅಲ್ಲಿ ಕಂಡದ್ದರ ಕುರುಹಿನ ಪತ್ತೆ
ಎಲ್ಲರೂ ಹೇಳುವವರೆ  ನಾನೂ ಮತ್ತೆ
ಆಭಾರಿ
ಶಿಕಾರಿ ತಕ್ಕುದ್ದಲ್ಲ
ಬಿಟ್ಟು ಬಿಡು ಸುಮ್ಮನೆ
ಎಲ್ಲಿ ನೋಡಿದರಲ್ಲಿ ಚೆಲ್ಲಿದೆ 

ವೈರುಧ್ಯದ ನಿರೂಪಣೆಯ ಪ್ರಾತಿನಿಧ್ಯಕ್ಕೆ
ನಿನ್ನ ಬಳಿ ಬಂದೆನೆಂದೇ ನಾ ಭಾವಿಸಿದ್ದೆ
ನೀನೋ ನಕ್ಷೆಗೆ ಸಿಲುಕದ ಸಾಧ್ಯತೆ 
ನಿರಂತರತೆಯ ರೂಪಾಂತರಕ್ಕೆ
ಪ್ರತಿಸ್ಪರ್ಧಿಯಾಗಿ ನನ್ನನ್ನು ಆಯ್ದೆಯ ?
ಆ ಘಟನೆಯ ?
ಕಡು ನೀಲಿ ಹಕ್ಕಿ
ನೀರಲ್ಲಿ ಹೂವರಳಿ
ಪುಟಿದಿತ್ತು ಮೀನು
ಹೊಡೆತಕ್ಕೆ ಊರೂರೆ ಕಾಣೆ
ಇಡೀ ಊರೂರೆ ಕಾಣೆ

ಲಹರಿಯ ಹದಕ್ಕೆ ಯಾವುದೂ ಬೇಡದ್ದಲ್ಲ
ಅದು ಹಾಗೇ ಅದರ ಧಿಮಾಕೇ ಹಾಗೆ
ಘಟನೆ ಮೂಲಭೂತವಾದದ್ದು
ಅಮೇಲಿನದ್ದೆಲ್ಲಾ ಕಟ್ಟಿದ್ದು
ಹಗ್ಗ ಕಂಬಿ ಕೋಲು ಕುಡಗೋಲು
ಗುಡುಗು ಮಿಂಚು ಮಳೆ
ನೀರು ಹರಿಯುತ್ತಿದೆ
ಬಣ್ಣ ಬೆರೆತು ಬೂದಿ ಬೆರೆತು
ಹರಿಯುತ್ತಿದೆ

ಹೂವ ದಳಗಳಡಿಯಿಂದ
ಕತ್ತೆತ್ತಿ ವಟಗುಟ್ಟುತ್ತೆ ಕಪ್ಪೆಗಳು
ವಟ ವಟ ವಟ
ಮಳೆಗಾಲ ಮುಗಿದಿಲ್ಲ
ಪರ್ವತಗಳು ಅಲುಗಾಡುತ್ತೆ ಸಮುದ್ರ ಉಕ್ಕಿದೆ
ನೀರು ಎಲ್ಲೆಲ್ಲೂ ನೀರು

ಎಂತಹ ಸಿದ್ಧ ಅನುವಾದಕನಿಗೂ
ಸಿಗಲಿಕ್ಕಿಲ್ಲ ಮೆಜೆಸ್ಟಿಕ್ಕಿನ ಬೆಳಗು
ಜನ ಜನರ ಭಾಷೆ ಸಿಕ್ಕುತ್ತಿಲ್ಲ
ಬರೀ ಶಬ್ಧ ಎಲ್ಲೆಲ್ಲೂ ಶಬ್ಧ 
ನಿಶ್ಯಬ್ಧದ ಗುಂಗನ್ನು ಹಾರಿಸಿ ಏರಿಸಿ
ಮಲಗಿಸಿಬಿಡುತ್ತೆ
ಏನಯ್ಯ ಬೇಕು ಸಮ್ಮೋಹನಕ್ಕೆ
ಮೆಜೆಸ್ಟಿಕ್ಕಿನ ಬೀದಿಗಳಿಗಿಂತ ಹೆಚ್ಚಾಗಿ
ಧ್ಯಾನಿಸಲಿಕ್ಕಿನ್ನೇನು ಬೇಕು
ಹುಟ್ಟಿದಂದಿನಿಂದ ರೂಮ್ ಬಾಯ್
ಮುಪ್ಪರಿಯದ ಮುದುಕನಿಗಿಂತ ಹೆಚ್ಚಾಗಿ

ಧನುಷ್ಕೋಡಿಗೆ ಹೋಗಬೇಡವೆಂದೇಕೆ ಹೇಳಿದೆ
ಪಾಳು ಬಿದ್ದ ಊರು - ಸತ್ಯಕ್ಕೆ
ಎರಡೂ ಬದಿ ಸಮುದ್ರ ಬಿಳೀ ಮರಳ ರಾಶಿ
ಕೂಗಳತೆಗೆ ಮಗದೊಂದು ದೇಶ
ಮನೆ ಮಠ ಚರ್ಚು ಗೋರಿ
ಎಲ್ಲವೂ ಪಾಳುಬಿದ್ದರೂ
ಈಗದೊಂದು ಪ್ರೇಕ್ಷಣೀಯ ಸ್ಥಳ
ಚರಿತ್ರೆಗೆ ಗುರುತಿಸಲಿಕ್ಕೊಂದು ನೆನೆಪು

ಲಹರಿಗೆ ಹಾಗಲ್ಲ
ಲಹರಿಯು ಹಾಗಲ್ಲ

ಶಿವನ ಎದೆ ಮೆಟ್ಟಿ ಕುಣಿವ ಕಾಳಿ
ಕಾಪಿಡು ------

....



೦೧. ಪ್ರದರ್ಶನ

ಕಟ್ಟಿಗೆಯ
ಬಾಬ್ ಕಟ್, ಕ್ಲಿಪ್ಪು ಸ್ಕರ್ಟ್
ಎದೆ ಮಟ್ಟದ ಶಿಲ್ಪ
ಮರದ ಬಾಚಣಿಕೆ
ಮುಖಕ್ಕೆ ಮೆತ್ತಿದ ಕನ್ನಡಿ

೦೨. ಅಧುನಿಕೋತ್ತರವಾದ

ಗುಂಪು ಗುಂಪು ಗೆದ್ದಲು ಹುಳುಗಳು
ರೆಕ್ಕೆ ಬಂದು ಹಾರಿ ಹೋಗುವಾಗ
ಹುಳ ಹೋಗಲೆಂದು ಹಾಕಿದ
ಹರಿಸಿನ ರೆಕ್ಕೆಗಳಿಗೆ ಬಳಿದು
ಚಿಟ್ಟೆಗಳಂತೆ ಕಾಣುತ್ತಿದ್ದವು

೦೩. ರಚನಾತ್ಮಕವಾದ

ಕಾಂಕ್ರಿಟ್ ಕಂಬಿಗಳು
ಆಗಾಗ ನೆರಳು
ಹಸಿರು ಮರಳು
ಒಂದಿಷ್ಟು ಕಸ

ಕಪ್ಪು ರೇಖೆಗಳು
ಬಿಳೀ ರೇಖೆಗಳು
ಕೆಂಪು ಮತ್ತೇ ಕಪ್ಪು
ನಿಶ್ಯಬ್ದದ ಪದರಗಳು
ಒಟ್ಟೂ ಚರ್ಮದ ಸುಕ್ಕಿನಂತೆ

೦೫. ವಾಸ್ತವ

ಗಲಬೆಯಲ್ಲಿ
ಮಕ್ಕಳ ಶೂಗಳು
ಚಲ್ಲಾಪಿಲ್ಲಿಯಾಗಿದ್ದಾಗ
ಕಸ ಆಯುವ ಹುಡುಗ
ತನ್ನ ಕಾಲಿಗೊಂದುವ
ಶೂ ಹುಡುಕುತ್ತಿದ್ದ

೦೬. ಕಲೆ

ಅವಳು ಬರೆದಿಟ್ಟಿದ್ದ
ಪ್ರಯೋಗಾಲಯದ
ಗ್ರಾಫ್ ಶೀಟಿನ ಮೇಲೆ
ಚಿತ್ರ ಬರೆದು ಪ್ರದರ್ಶಿಸಿ
ಬಹು ದೊಡ್ಡ ಕಲಾವಿದನಾದ

೦೭. ಅಭಿವ್ಯಕ್ತಿ

ಬಾಟಲಿನಲ್ಲಿ ಬಿದ್ದಿದ್ದ
ಮನುಷ್ಯನನ್ನು
ಮೇಲಕ್ಕೆತ್ತಲು
ಒಂದೊಂದೇ ಬಿಸ್ಕತ್ತನ್ನು
ಕಾಗೆ ತಂದು ಹಾಕುತ್ತಿತ್ತು

ಬಾಂಗ್ಲ ದಿನಗಳು 2: ಎಷ್ಟೊಂದ್ ಮನೆ ಇಲ್ಲಿ ಯಾವ್ದು ನಮ್ಮನೆ

(ಮೊದಲನೆಯ ಬಾಗಕ್ಕೆ ಇಲ್ಲಿ ಕ್ಲಿಕ್ಕಿಸಿ --- ಬಾಂಗ್ಲಾ ದಿನಗಳು : ಅಲೆಮಾರಿಯ ಆರಂಭ


ಭಾರತದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣವಾದ  ಹೌರಾ ನಿಲ್ದಾಣಕ್ಕೆ ಬಂದಿಳಿದಿದ್ದೆವು. ನಮ್ಮ ಸಂಸ್ಥೆಯಲ್ಲಿ ನಮಗೆ ವಾಸಕ್ಕೆ ಮನೆ ಕೊಟ್ಟಿರಲಿಲ್ಲ. ಹೊರಗೆ ಎಲ್ಲಾದರೂ ಬಾಡಿಗೆಗೆ ಮನೆ ಮಾಡಬೇಕಿತ್ತು. ಒಂದು ವಾರಗಳ ಕಾಲ ಸಂಸ್ಥೆಯ ಅಥಿತಿಗೃಹದಲ್ಲಿ ಇದ್ದುಕೊಂಡು ನಂತರ ಸುತ್ತಲಿನ ಜಾಗಗಳಲ್ಲಿ ಹುಡುಕುತ್ತಾ ಹೋದರೆ ಮನೆ ಸಿಗುವುದು ಸುಲಭ ಎಂದು ತೀರ್ಮಾನಿಸಿದ್ದದ್ದು. ಅದರೆ ನಮ್ಮ ಸಂಸ್ಥೆಯಲ್ಲಿ ಆ ಸಮಯಕ್ಕೆ ಸರಿಯಾಗಿ ಯಾವುದೋ ಸಮ್ಮೇಳನ ಇದ್ದುದರಿಂದ ನಮಗೆ ಸಂಸ್ಥೆಯ ಅಥಿತಿಗೃಹದಲ್ಲಿ ಇರಲಿಕ್ಕೆ ಜಾಗ ಸಿಕ್ಕಿರಲಿಲ್ಲ. ನನ್ನ ಪ್ರೊಫೆಸರ್ ಸಹ ನಮ್ಮ ವಾಸಕ್ಕೆ ಬೇರೆ ಬೇರೆ ಕಡೆಗಳಲ್ಲಿ ಪ್ರಯತನಿಸುತ್ತಲೇ ಇದ್ದರು. ಅವರಂತೂ ಅವರ ಮನೆಯಲ್ಲಿ ಬಂದು ಇರಿ ಎಂದು ಹೇಳಿದ್ದರು ಸಹ. ನಮ್ಮ ಸಂಸ್ಥೆಯ ಸುತ್ತಮುತ್ತಲಿನಲ್ಲಿ ಯಾವುದಾರೂ ಹೋಟೇಲ್ ಇರುತ್ತದ ಎಂದು ನೋಡಿದರೆ, ಯಾವುದೂ ಇರಲಿಲ್ಲ. ಇದ್ದದ್ದು ನಮಗೆ ಸರಿಹೊಂದುತ್ತಿರಲಿಲ್ಲ. ನಮ್ಮ  ಪ್ರೋಫೇಸರ್ ಹತ್ತಿರವೇ ಇದ್ದ (National sample survey office) NSSO ಅಥಿತಿಗೃಹದಲ್ಲಿ ಐದು ದಿನಗಳ ಮಟ್ಟಿಗೆ ವಸತಿ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿ ನಮ್ಮ ವಸತಿ ನಾವು ಕೋಲ್ಕತ್ತ ಸೇರಿದ ಮಾರನೆ ದಿನದಿಂದ ಆರಂಭವಾಗುವುದಿತ್ತು. ಒಂದು ದಿನದ ಮಟ್ಟಿಗೆ ನಾವು ಎಲ್ಲಿಯಾದರೂ ಉಳಿದುಕೊಳ್ಳಬೇಕಿತ್ತು. ನಮ್ಮ ಇಡೀ ಮನೆಯ ಸಾಮಾನುಗಳನ್ನ ಹೊತ್ತುಕೊಂಡು ಸೌಖ್ಯವಾಗಿ ಇರಬಲ್ಲ ಕ್ಷೇತ್ರ ಯಾವುದು ಎಂದು ಹೊಳೆಯಲೇ ಇಲ್ಲ. ತಕ್ಷಣ ನೆನಪಾದದ್ದು ರಾಮಕೃಷ್ಣರ ಬೇಲೂರು ಮಠ. ನಮ್ಮ ಸಂಸ್ಥೆಯ ಹತ್ತಿರದಲ್ಲೇ ಇದೆ, ಅದೂ ಅಲ್ಲದೆ ಬೇಲೂರಿಗೆ ಹೋಗೆಬೇಕೆಂಬುದು ಬಹುದಿನಗಳ ಕನಸಾಗಿತ್ತು. ರಾಮಕೃಷ್ಣರ ಅವಧೂತ ವ್ಯಕ್ತಿತ್ವಕ್ಕೆ ಬಹಳವಾಗಿ ಆಕರ್ಷಿತನಾಗಿದ್ದವನಾದುದರಿಂದ ಅದುವೇ ಸರಿಯೆನಿಸಿ ಬೇಲೂರು ಮಠಕ್ಕೆ ಮಿಂಚಂಚೆ ಕಳುಹಿಸಿ ವಸತಿಯ ಬಗೆಗೆ ಕೇಳಿದ್ದೆ. ಎಲ್ಲಾ ವಿವರಗಳನ್ನ ಪಡೆದು ವಿವೇಕಾನಂದ ಯಾತ್ರೀ‌ನಿವಾಸದಲ್ಲಿ ನಮ್ಮ ವಸತಿಯಾಗಿತ್ತು. ಹಾಗಾಗಿ ಹೌರಾ ರೈಲ್ವೇ ನಿಳಾಣದಿಂದ ನೇರವಾಗಿ ವಿವೇಕಾನಂದ ಯಾತ್ರೀ ನಿವಾಸಕ್ಕೆ ಬಂದಿಳಿದೆವು.

ದೇಹ ದಣಿದಿತ್ತು. ಎರಡು ದಿನಗಳಿಂದ ರೈಲಿನಲ್ಲಿದ್ದ ಕಾರಣ ಒಳ್ಳೆಯ ಊಟ ಸಿಕ್ಕಿರಲಿಲ್ಲ. ಒಳ್ಳೆಯ ಊಟಕ್ಕೆ ಹಪಹಪಿಸುತ್ತಿದ್ದೆವು. ನಾವು ವಿವೇಕಾನಂದ ಯಾತ್ರೀ ನಿವಾಸ ಸೇರಿದಾಗ ಸುಮಾರು ೨. ೩೦ ರ ಹೊತ್ತು. ಹಾಗಾಗಿ ಊಟದ ಸಮಯ ಮುಗಿದಿತ್ತು.  ಆದರೂ ನಾವು ಬಂದ ತಕ್ಷಣ ಊಟ ಸಿದ್ದವಿದೆಯೆಂದು ಹೇಳಿ ಊಟ ಮಾಡಿಹೋಗಿ ಎಂದರು. ಎರಡು ದಿನಗಳ ನಂತರ ಊಟ ಮಾಡುತ್ತಿದ್ದೆವು. ದಪ್ಪ ಅಕ್ಕಿ ಅದೇನೋ ಸಾರು. ಹೆಸರು ಗೊತ್ತಿಲ್ಲವಾದರೂ, ಆಹಾ ಎನ್ನಿಸಿತು. ಸಂಜೆ  ೩.೩೦ ಕ್ಕೆ ಆಶ್ರಮ ತೆಗೆಯುವುದಾಗಿಯೂ, ನಂತರ ಒಳ ಹೋಗಬಹುದೆಂದು ತಿಳಿಸಿದ್ದರು.

ಸಂಜೆ ೩.೦೦ ಗೆಂಟೆಗೆಲ್ಲಾ ಆಶ್ರಮದ ಕಡೆಗೆ ಹೊರಟೆವು. ಆ ಕ್ಷಣ ರಾಮಕೃಷ್ಣರ ಆಶ್ರಮದಲ್ಲಿ ನಿಂತಿದ್ದೆ. ನಾಲ್ಕುಗಂಟೆಗೆಲ್ಲಾ ಎಲ್ಲಿ ನೋಡಿದರೂ ಮಬ್ಬು ಕತ್ತಲು ಆವರಿಸಿಬಿಟ್ಟಿತ್ತು. ಪಕ್ಕದಲ್ಲ್ಲಿ ಹರಿಯುತ್ತಿದ್ದ ಗಂಗಾ ನದಿ.  ಆ ದಡದಲ್ಲಿ ದಕ್ಷಿಣೇಶ್ವರ ಈ ದಡದಲ್ಲಿ ಬೇಲೂರು ಮಠ. ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ನಾವೆಗಳು ಜನರನ್ನು ಹೊತ್ತು ಸಾಗುತ್ತಿತ್ತು. ಎಷ್ಟೋ ಜನ ಪುಟ್ಟ ಪುಟ್ಟ ಮಣ್ಣಿನ ದುರ್ಗಾ ಪ್ರತಿಮೆಗಳನ್ನ ತಂದು ನೀರಿನಲ್ಲಿ ವಿಸರ್ಜಿಸುತ್ತಿದ್ದರು. ಹಾಗೆ ನೀರಲ್ಲಿ ಮುಳುಗಿದ ದುರ್ಗೆ ಕರಗುವುದ ನೋಡುತ್ತಾ ಮುಂದೆ ಆ ದಡದಲ್ಲಿ ಕಾಣುತ್ತಿದ್ದ  ಕಾಳಿಯನ್ನ ನೆನೆಯುತ್ತಾ ಪಕ್ಕದಲ್ಲೇ ಇದ್ದ ರಾಮಕೃಷ್ಣರ ಮಂದಿರದೆಡೆಗೆ ದೃಷ್ಥಿ ನೆಟ್ಟು ತಂಪಾದ ಗಾಳಿಯಲ್ಲಿ ಮೈ ಮರೆತಿದ್ದೆ.

ಯಾರು ತಾನೆ ವಿವೇಕಾನಂದರ ಮಾತುಗಳಿಗೆ ಆಕರ್ಷಿತರಾಗುವುದಿಲ್ಲ. ನಾನು ಅವರ ಮಾತುಗಳಿಂದ ಬಹಳ ಆಕರ್ಷಿತನಾಗಿದ್ದೆ. ನಾನು ಕಾಲೇಜಿಗೆ ಹೋಗುವಾಗ ನನಗೆ  ವಿವೇಕಾನಂದರ ಪುಸ್ತಕಗಳ ಪರಿಚಯವಾದದ್ದು. ಯಾರು ಕೊಟ್ಟರು ಎಂದು ನೆನಪಿಲ್ಲ. ಆಶ್ರಮದವರು ಒಂದು ಕೆಂಪು ಬಣ್ಣದ ಪುಟ್ಟ ಪುಸ್ತಕ ಪ್ರಕಟಿಸಿದ್ದರು. ಒಂದು ರೂಪಾಯಿಗಳ ಪುಸ್ತಕ. ವಿವೇಕಾನಂದರ ಮುಖ್ಯವಾದ ವಿಚಾರಗಳ ಆಯ್ದ ಭಾಗಗಳ ಕಿರು ಹೊತ್ತಿಗೆ. ನಮ್ಮ ಊರಿನಿಂದ ಕಾಲೇಜಿಗೆ ಹೋಗಲಿಕ್ಕೆ ಬಸ್ಸಿನಲ್ಲಿ ಅರ್ದಗಂಟೆ ಹಿಡಿಯುತ್ತಿತ್ತು. ಪ್ರತೀ ನಿತ್ಯವೂ ಹೋಗುವಾಗ ಬರುವಾಗ ಆ ಪುಸ್ತಕವನ್ನ ಓದುವುದು.  ಆ ಪುಸ್ತಕ, ಅದರಲ್ಲಿನ ಮಾತುಗಳು ಅದೆಷ್ಟು ಪ್ರಭಾವಿಸಿದ್ದವೆಂದರೆ, ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತೆಂದೇ ನಾನು ಭಾವಿಸುತ್ತೇನೆ. ಆ ಒಂದು ಪುಸ್ತಕ ಇಲ್ಲದೇ ಹೋಗಿದ್ದರೆ ನನ್ನ ಬದುಕು ಬೇರೆಯ ರೀತಿಯಲ್ಲೇ ಇರುತ್ತಿತ್ತೋ ಏನೋ. ಪದವಿಗೆ ಸೇರಿದ ಮೇಲೆ ಅವರ ಅಷ್ಟೂ ಪುಸ್ತಕಗಳನ್ನ ಓದಿದೆ. ನಂತರದ ದಿನಗಳಲ್ಲಿ, ಓದಿನ ವಿಸ್ತಾರವಾದ ಹಾಗೆ ವಿವೇಕಾನಂದರನ್ನ ಮತ್ತೇ ಓದಬೇಕೆಂದು ಅನ್ನಿಸಲಿಲ್ಲ.   ಈ ಬಾರಿ ರಾಮಕೃಷ್ಣರ ಅವಧೂತ ಪ್ರಜ್ಞೆ ಆಕರ್ಷಿಸಿತು ಹಾಗು ಕಾಡಿತು. ಅವರ ಮುಗ್ದವ್ಯಕ್ತಿತ್ವ ಬಹಳವಾಗಿ ಕಾಡಿತ್ತು.  ರಾಮಕೃಷ್ಣರೆಂದರೆ ಏನೋ ಆಕರ್ಷಣೆ ಏರ್ಪಟ್ಟಿತ್ತು. ಇಂದು ಇಲ್ಲಿ ಮಠದ ಆವರಣದಲ್ಲಿ ನಿಂತಿದ್ದಾಗ ಎಲ್ಲವೂ ನೆನಪಾಯಿತು.

ನಾವು ಮಾರನೆಯ ದಿನವೇ ನಾವು ಉಳಿಯಬೇಕಿದ್ದ ಅಥಿತಿಗೃಹಕ್ಕೆ ಹೋಗಬೇಕಿದ್ದುದರಿಂದ ಮಠದ ಕಚೇರಿಗೆ  ಒಂದು ಪತ್ರವನ್ನ  ಹಾಗು ಸ್ವಲ್ಪ ಕಾಣಿಕೆಯನ್ನು  ನೀಡಬೇಕಿತ್ತು.  ಕಚೇರಿಯಲ್ಲಿದ್ದ ಆಶ್ರಮದ ಸ್ವಾಮೀಜಿ ನಮ್ಮನ್ನು ಮಾತನಾಡಿಸಿ, ನಮ್ಮ ವಿಳಾಸ ನಮ್ಮ ಕೆಲಸ, ಕುಷಲೋಪರಿಗಳನ್ನ ಕೇಳಿ ಪ್ರಸಾದ ನೀಡಿದರು. ನೀವು ದೀಕ್ಷೆ ಪಡೆದ ರಾಮಕೃಷ್ಣರ ಭಕ್ತರ ಎಂದು ಕೇಳಿದರು. ನಾವು ಇಲ್ಲ ಭಕ್ತರಲ್ಲ ಎಂದು ಹೇಳಬೇಕಾಯಿತು. ನಿಜದಲ್ಲಿ ನಾನು ಭಕ್ತನಲ್ಲ. ರಾಮಕೃಷ್ಣರ ಮೇಲೆ ಅಗಾಧವಾದ ಗೌರವ ಇದೆಯಾದರೂ ರೂಡಿಗತವಾದ ಅರ್ಥದಲ್ಲಿ ನಾನು ಅವರ ಭಕ್ತನಲ್ಲ. ಅವರು ಕಂಡ ಸತ್ಯಗಳ ಬಗೆಗೆ ಗೌರವವಿದೆ. ಅವರ  ಸತ್ಯವಲ್ಲ ನನ್ನನ್ನು ಆಕರ್ಷಿಸಿದ್ದು, ಹಾಗೆ ಸತ್ಯವನ್ನು ಅವರದೇ ಮಾರ್ಗಗಳಲ್ಲಿ ಹುಡುಕಬೇಕಾದ ಅಗತ್ಯವನ್ನೂ, ಹಾಗೆ ಹುಡುಕಬಹುದಾದ ಸಾದ್ಯತೆಯನ್ನು ತೆರೆದಿರಿಸಿದ್ದಕ್ಕೆ. ಅವರೇ ಹೇಳಿದಂತೆ ಅದೆಷ್ಟು ನಂಬಿಕೆಗಳೋ ಅಷ್ಟು ದಾರಿಗಳು. ಸತ್ಯವು ಸಾಂಸ್ಥಿಕ ರೂಪ ಪಡೆಯುವುದಕ್ಕೂ, ನಿರಂತರ ಚಲನೆಯಲ್ಲಿರುವುದಕ್ಕೂ ನಡುವಿನ ಘರ್ಷಣೆಯಲ್ಲಿರುವಾಗ ಕಾಣುವುದಾದರೂ ಏನನ್ನೂ ಮತ್ತು ಹೇಗೆ ಎಂಬುದು ತಿಳಿಯದಾಯಿತು. ರಾಮಕೃಷ್ಣರಿಗೆ ವಂದಿಸಿ ನಮ್ಮ ಮುಂದಿನ ಪಯಣಕ್ಕೆ ಸಿದ್ದರಾದೆವು.   

                                             *******************************

NSSO, ಆ ರೀತಿಯ ಒಂದು ಸಂಸ್ಥೆ ಇದೆ ಎಂದೇ ಮೊದಲ ಬಾರಿಗೆ ತಿಳಿದದ್ದು.  ಶ್ರೀ ಮೊಹಲ್ನೋಬಿಸ್ ಅವರು ಸ್ಥಾಪಿಸಿದ, ದೇಶದ ಹಲವಾರು ಯೋಜನೆಗಳಿಗೆ ಪೂರಕವಾದ ದತ್ತಾಂಶಗಳನ್ನು ಶೇಖರಿಸಿ ಕ್ರೋಢೀಕರಿಸಿ ಸೂಕ್ತವಾದ ಸಲಹೆಗಳನ್ನ ಕೊಡುವುದು ಮೇಲ್ನೋಟಕ್ಕೆ ನನಗೆ ತಿಳಿದ ಈ ಸಂಸ್ಥೆಯ ಉದ್ದೇಶ. ಈ ಸಂಸ್ಥೆಯ ಅಥಿತಿಗೃಹದಲ್ಲಿ ನಮಗೆ ಮುಂದಿನ  ಐದು  ದಿನಗಳಿಗೆ ವಾಸ್ತವ್ಯಕ್ಕೆ ವ್ಯವಸ್ತೆ ಆಗಿತ್ತು.  ನನ್ನ ಸಂಸ್ಥೆಯಾದ Indian Statistical Institute ಇಲ್ಲಿಂದ ಬಹಳ ಹತ್ತಿರದಲ್ಲಿತ್ತು. ಹಾಗಾಗಿ ಇಲ್ಲಿ ಇದ್ದುಕೊಂಡು ನನ್ನ ಸಂಸ್ಥೆಗೆ ಹತ್ತಿರದಲ್ಲೇ ಮನೆ ಹುಡುಕುವುದು ಸೂಕ್ತವೆಂದು ಇಲ್ಲಿ ಇರಲು ಒಪ್ಪಿಕೊಂಡಿದ್ದೆ. ಇದೊಂದು ದೊಡ್ಡ ಅಥಿತಿಗೃಹ. ಇದೊಂದು ಸರ್ಕಾರಿ ಅಥಿತಿಗೃಹ. ಯಾವುದೋ ಶತಮಾನದಲ್ಲಿ  ಹಾಕಿದ ಕಿಟಕಿಯ ಬಾಗಿಲಿನ ಕರ್ಟನ್ನುಗಳು, ಅದರಲ್ಲಿನ ದೂಳು, ದೊಡ್ಡ ದೊಡ್ಡ ಭೂತಾಕಾರದ ಮೇಜು, ಮಂಚ, ಹಾಸಿಗೆ ಇತ್ಯಾದಿ. ಈ ಚಳಿಯಲ್ಲಿ ಹೊದಿಯಲಿಕ್ಕೆ ಚಾದರವೇ ಇಲ್ಲವೆ ಎಂದು ನೋಡುತ್ತಾ ಹೋದರೆ, ಕಪಾಟಿನಲ್ಲಿರಬುದೆಂದು ತೆರೆದರೆ, ಇದ್ದ ಬದ್ದ ಎಲ್ಲಾ ದೇವರುಗಳೂ ನೆನಪಾಗುವಷ್ಟು ಸೀನು.   ಮತ್ತಿನ್ನೇನಿರಬಹುದು ಎಂದು ನೋಡಿದರೆ, ಮೇಲೆ ಸೊಳ್ಳೆ ಪರದೆಯ ಬಾಕ್ಸ್ ಇತ್ತು. ಆ ಸೊಳ್ಳೆ ಪರದೆ ಸೊಳ್ಳೆ ಸಂತತಿ ವಿಕಾಸಗೊಂಡ ಹಂತದಲ್ಲಿ ಆದಿಮಾನವನ್ಯಾರೋ ತಯಾರಿಸಿರಬೇಕು ಎಂದೆನಿಸಿದ್ದಂತೂ  ಸತ್ಯ. ಇದೆಲ್ಲದರ ಜೊತೆಗೆ ನಾಲ್ಕು ಅಂತಸ್ತುಗಳ, ಮೂವತ್ತು ನಲವತ್ತು ರೂಮುಗಳ ಈ ಅಥಿತಿ ಗೃಹದಲ್ಲಿ ವಾಸಕ್ಕಿದ್ದ  ವ್ಯಕ್ತಿಗಳೆಂದರೆ ನಾವು ಮಾತ್ರ.  ಪುರಾತನ ವಸ್ತು ಸಂಗ್ರಹಾಲಯದಲ್ಲಿ ರಾತ್ರಿ ಎಲ್ಲರೂ ಹೋದಮೇಲೆ, ಅಲ್ಲೆ ಕಳೆದುಹೋದ ವ್ಯಕ್ತಿಗಳೆಂತೆ ನಾವು ಅಲ್ಲಿ ವಾಸವಿದ್ದೆವು.

ಇಲ್ಲಿನ ಅಧಿಕಾರಿಗಳು, ಅಡುಗೆ ಮಾಡುವವರು ಹಾಗು ಇತರೆ ಕಾರ್ಮಿಕರು,  ಕೋಲ್ಕತ್ತದಲ್ಲಿ ನಮಗೆ ಎದುರಾದ ವ್ಯವಹರಿಸಲೇ ಬೇಕಿದ್ದ  ಮೊದಲ ಕೋಲ್ಕತ್ತ ನಿವಾಸಿಗಳು. ನಮ್ಮ ಮೊದಲ ಬೇಟಿಯಲ್ಲಿ, ಯಾರನ್ನೇ ಬೇಟಿಯಾದರೂ ಮುಖದಲ್ಲಿ ಯಾವ ಚಹರೆಯೂ ಇಲ್ಲ. ನಗು, ಬೇಸರ, ಕೋಪ. ಇಲ್ಲ ಯಾವುದೂ ಇಲ್ಲ.  ಯಾವ ಪ್ರತಿಕ್ರಿಯೆಯೂ ಇಲ್ಲದೆ ನಮ್ಮ ಮುಖವನ್ನು ಒಂದೇ ರೀತಿ ಕಾಣಬಲ್ಲವರು. ಮೊದ ಮೊದಲು ಇವರು ಮಾತ್ರಾ ಹೀಗೆ ಎಂದುಕೊಂಡಿದ್ದೆ, ನಂತರ ತಿಳಿಯಿತು, ನಾವು ಯಾರನ್ನೇ ಮೊದಲ ಬಾರಿಗೆ ಬೇಟಿಯಾದರೂ ಎಲ್ಲರದ್ದೂ ಒಂದೇ ಪ್ರತಿಕ್ರಿಯೆ. ಸುಮ್ಮನೆ ಮುಖ ನೋಡುವುದು. ನಾವೋ ನೋಡಿದವರಿಗೆಲ್ಲಾ ಹಲ್ಲು ಕಿರಿಯುವುದು. ಆದರೆ, ಇದೇ ಜನ ಒಂದೆರೆಡು ಬಾರಿ ನಮ್ಮ ಅದೇ ಮುಖಗಳನ್ನ ಕಂಡ ನಂತರದ ಸ್ಥಿತಿಯೇ ಬೇರೆ. ಅಥಿತಿಗೃಹದ ಎಲ್ಲಾ ಕೆಲಸಗಾರರೂ ಮಾತಿಗಿಳಿದರು. ಒಬ್ಬರಂತೂ, ನಮಗೆ ಬಂಗ್ಲಾ ಬರುವುದಿಲ್ಲ ಎಂದರೂ, ಇರಲಿ ಬಿಡಿ ನೀವು ಕೇಳಿ ಎಂದು  ಬಿಡದೆ ಒಂದು ಗಂಟೆ ತಾನು ಮನೆಗೆ ಹೋಗಬೇಕಾದರೆ ಆಗುವ ಟ್ರಾಫಿಕ್ ಸಮಸ್ಯಯ ಬಗೆಗೆ ಹೇಳಿದರು. ಅಡುಗೆಯವರು ಒಮ್ಮೆ ಬದನೇಕಾಯಿಯ ಪಲ್ಯ ಮಾಡಿದ್ದರು, ಅದನ್ನ ನಾನು ತಿನ್ನುವಹಾಗಿರಲಿಲ್ಲ, ಹಾಗಾಗಿ ತಿನ್ನುವುದಿಲ್ಲ ಎಂದು ಹೇಳಿದ್ದೆ. ನಂತರ ನಾನು ಏನೇನನ್ನ ತಿನ್ನುವುದಿಲ್ಲ ಎಂದು ತಿಳಿದುಕೊಂಡು ಅದನ್ನು ಹಾಕದೆ ಅಡುಗೆ ಮಾಡಿಕೊಡುತ್ತಿದ್ದರು, ಅದೂ ಬಹು ಪ್ರೀತಿಯಿಂದ, ಬಹಳ ರುಚಿಯಿಂದ. ನಾವು ಅಥಿತಿಗೃಹ ಬಿಟ್ಟು ಹೋಗುವಾಗಲಂತೂ   ತಮ್ಮ ಮನೆಯವರನ್ನೇ ಬೇರೆ ಊರಿಗೆ ಕಳುಹಿಸುತ್ತಿದ್ದೇವೆ ಎಂಬಂತೆ, ರಿಕ್ಷ ತಂದು ಎಲ್ಲಾ ರೀತಿಯ ಸಹಾಯ ಮಾಡಿ ಬೀಳ್ಕೊಟ್ಟಿರು. ಅಷ್ಟೇ ಅಲ್ಲದೆ ಮತ್ತೇ ಬಂದು ಸ್ವಲ್ಪ ದಿವಸ ಇದ್ದು ಹೋಗಿ ಎನ್ನುವುದೆ.   ಯಾರು ಬೇಕಾದರೂ ಯಾವಾಗಬೇಕಾದರೂ ನಮ್ಮ ಸನಿಹದ ಬಂದುಗಳಾಗಬಲ್ಲ ಸಾದ್ಯತೆ ತಿಳಿಯದ ದೈರ್ಯವನ್ನು ನೀಡಿತ್ತು.

ಇನ್ನು ನಾವು ಮನೆ ಹುಡುಕಿದ ನಮ್ಮ ಸಾಹಸದ ಕತೆ. ಯಾವಾಗಲೂ ಹಾಸ್ಟಲ್ಗಳಲ್ಲೇ ಇದ್ದು ಬೆಳೆದ  ನನಗೆ ಮೊಟ್ಟ ಮೊದಲನೆ ಬಾರಿಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಿದ್ದೆ ಒಂದು ದೊಡ್ಡ ಕತೆ.  ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಆ ಟ್ರಾಫಿಕ್ ಅಲ್ಲಿ ಓಡಾಡಿ ಮನೆಗೆ ಬರುವಷ್ಟರಲ್ಲಿ ನನ್ನ ಹೆಣಬಿದ್ದಿರುತ್ತಿತ್ತು. ಅದಕ್ಕಾಗಿ ಮುಂದೆ ಎಲ್ಲೇ ಮನೆ ಮಾಡಿದರೂ ಅದು ಸಂಸ್ಥೆಗೆ ನಡೆದು ಹೋಗುವಷ್ಟು ಸನಿಹದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದ್ದೆ.   ಚೆನ್ನೈಗೆ ಬಂದಾಗ ಬಹಳ ಸುಲಭದಲ್ಲಿ ಮನೆ ಸಿಕ್ಕಿತ್ತು. ಚೆನ್ನೈ ಅಲ್ಲಿ  ನಮ್ಮ ಸಂಸ್ಥೆಯ ಆಸುಮಾಸಿನ ರಸ್ತೆಗಳಲ್ಲಿ ಓಡಾಡಿದರೆ  ಮನೆ ಮುಂದೆ ಮನೆ ಖಾಲಿ ಇದೆ ಎಂಬೊ ಬೋರ್ಡ್ ನೋಡಿ,  ಹಲವು ಮನೆಗಳನ್ನ ವಿಚಾರಿಸಿ ಒಂದು ಮನೆ ಇಷ್ಟವಾಗಿ, ಬೆಳಗ್ಗೆ ಹೋಗಿದ್ದವರು ಮದ್ಯಾನ್ಹದ ವೇಳೆಗೆಲ್ಲಾ ಮನೆ ಸಿಕ್ಕಿ ಆಗಿತ್ತು. ಆದರೆ ಕೋಲ್ಕತ್ತದಲ್ಲಿ ಬೇರೆಯದೇ ಪರಿಸ್ಥಿತಿ. ಮೊದಲನೆಯದಾಗಿ ಇಲ್ಲಿ ಮನೆಗಳ ಮುಂದೆ ಬೋರ್ಡ್ ಹಾಕಿರುವುದಿಲ್ಲ.  ಮತ್ತೆ ಅಂತರ್ಜಾಲದಲ್ಲಿ ತಿಳಿಸುವವರೂ ಬಹಳ ಕಡಿಮೆ. ಹಾಗಾಗಿ ದಲ್ಲಾಳಿಯನ್ನ ಬೇಟಿಯಾಗಲೇ ಬೇಕು. ಅವರೋ ಎರಡು ತಿಂಗಳ ಬಾಡಿಗೆಯಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದು ಅರ್ಥವಾಗದ ಲೆಕ್ಕಾಚಾರ. ಜೊತೆಗೆ ನಮಗೆ ಅದು ತೀರ ಹೆಚ್ಚಿನ ಹಣ. ಅಷ್ಟೊಂದು ಕೊಡಲಿಕ್ಕೆ ಇಷ್ಟವೂ ಇರಲಿಲ್ಲ, ಹಣವೂ ಇರಲಿಲ್ಲ. ಸಂಶೋದನ ವಿದ್ಯಾರ್ಥಿಯ ಬಳಿ ಅದೆಷ್ಟು ಹಣ ಇದ್ದೀತು. ಇವೆಲ್ಲ ತಿಳಿದ ನನ್ನ ಪ್ರೊಫೆಸರ್ ಅವರ ಪರಿಚಯದವರ ಬಳಿ ಮಾತನಾಡಿ, ಒಬ್ಬ ದಲ್ಲಾಳಿಯನ್ನ ಗೊತ್ತುಮಾಡಿದ್ದರು. ಅವರು ಕಡಿಮೆ ಹಣಕ್ಕೆ ಮನೆ ತೋರಿಸುವುದೆಂದು ನಿರ್ದಾರವಾಗಿತ್ತು. ನಮಗೆ ಬಂಗ್ಲಾ ಬಾರದ ಕಾರಣ, ಜೊತೆಗೆ ಒಬ್ಬರು ಇಲ್ಲಿನವರು ಇರಲಿ ಎಂದು ನನ್ನ ಗೆಳಯನನ್ನೂ ಜೊತೆಗೆ ಕರೆದೆವು. ಹೀಗೆ ಎಲ್ಲಾ ಸರಂಜಾಮುಗಳೊಂದಿಗೆ ಮನೆ ಹುಡುಕುವ  ಯುದ್ಧಕ್ಕೆ ಸನ್ನದ್ಧರಾದೆವು.

ನಮ್ಮ ದಲ್ಲಾಳಿ ಮೊದಲನೆಯ ಮನೆಗೆ ಕರೆದುಕೊಂಡು ಹೋದರು. ಅದು ಹೇಗೆ ನಮ್ಮನ್ನ ಕರೆದುಕೊಂಡು ಹೋದರು ಎಂದರೆ ಪದ್ಮವ್ಯೂಹವನ್ನ ಬೇದಿಸುವುದನ್ನ ಅಭಿಮನ್ಯುಗೆ ಹೇಳಿಕೊಟ್ಟಿದ್ದರಂತಲ್ಲ ಹಾಗೆ. ಇಲ್ಲಿ ಅಷ್ಟೊಂದು ಗಲ್ಲಿಗಳು. ಎಲ್ಲಾ ಗಲ್ಲಿಗಳೂ ಒಂದೇ ರೀತಿ. ನಾವು ಎಲ್ಲಿ ಹೋದೆವು ಎಂದು ಸ್ವಲ್ಪವೂ ತಿಳಿಯದಂತೆ ನಾವು ನೋಡಬೇಕಿದ್ದ ಮನೆಯ ಮುಂದೆ ಬಂದು ನಿಂತಿದ್ದೆವು. ಒಂದು ಖುಷಿಯ ಸಂಗತಿ ಎಂದರೆ ಕೋಲ್ಕತ್ತದಲ್ಲಿ ಬಾಡಿಗೆ ಕಡಿಮೆ. ಬೇರೆ ಕಡೆಗೆ ಮುಖ್ಯವಾಗಿ ಬೆಂಗಳೂರಿಗೆ ಹೋಲಿಸಿದರಂತೂ ಇಲ್ಲಿ ಬಹಳ ಕಡಿಮೆ. ಆದರೂ ನಮಗೆ, ಇರುವ ಇಬ್ಬರಿಗೆ ಒಂದು ಬಿ ಹೆಚ್ ಕೆ ಮನೆ ಸಾಕಾಗಿತ್ತು.  ಕೆಳಮಹಡಿಯಲ್ಲಿದ್ದ ಮನೆ.  ಹೊರಗೆ ಎಂತಹ ಬೆಳಕಿದ್ದರೂ ಒಳಗೆ ಬರೀ ಕತ್ತಲು. ಬೆಳಕಿಲ್ಲದ ಮನೆಗಳಲ್ಲಿನ ವಾಸದ ಹಿಂಸೆ ಬೆಂಗಳೂರಿನಲ್ಲಿದ್ದಾಗಲೆ ಅನುಭವಿಸಿದ್ದೆವು.  ಏನೇ ಆದರೂ ಈ ಕತ್ತಲ ಗುಹೆಗಳಂತಹ ಮನೆಗಳಲ್ಲಿ ವಾಸಿಸಬಾರದು ಎಂದು ತೀರ್ಮಾನಿಸಿದ್ದೆವು. ಹಾಗಾಗಿ ಮೊದಲ ಮನೆಯೇ ನಮಗೆ ಇಷ್ಟವಾಗದೇ ಹೋಯಿತು.  ಈ ದಲ್ಲಾಳಿ ಒಮ್ಮೆಗೆ ಒಂದಿಷ್ಟು ಮನೆಗಳನ್ನ ತೋರಿಸುತ್ತಾನೆ ನಂತರ ನಾವು ಅದರಲ್ಲಿ ಸರಿಯಾದದ್ದನ್ನು ಆಯ್ಕೆಮಾಡಿಕೊಳ್ಳಬಹುದು ಎಂದು ಕೊಂಡಿದ್ದರೆ, ಅಲ್ಲಿ ನಡದದ್ದೆ ಬೇರೆ.  ಒಂದು ಮನೆ ತೋರಿಸಿದವನೇ ಆತ ಹೊರಟೇ ಹೋದ. ನಾಳೆಯೋ, ನಾಡಿದ್ದೋ ಸಮಯ ಬಂದಾಗ ಮತ್ತೊಂದು ಮನೆ ತೋರಿಸುತ್ತೇನೆ ಎಂದು ಹೇಳಿ ಹೊರಟೇ ಬಿಟ್ಟ. ಏನು ಮಾಡುವುದೋ ತಿಳಿಯದಾಗಿತ್ತು. ನನ್ನ ಸಂಶೋಧನಾ ಕೆಲಸಗಳು ಒಂದು ವಾರದಿಂದ ಹಾಗೆಯೇ ಉಳಿದಿದ್ದವು. ಏನೂ ಓದಿರಲಿಲ್ಲ. ಆದಷ್ಟು ಬೇಗ ನಾವು ಮನೆ ಹುಡುಕಿ ನಮ್ಮ ಕೆಲಸಗಳನ್ನ ಆರಂಭಿಸಬೇಕಿತ್ತು. ಹಾಗಾಗಿ ನಾವು ಸಹ ಏನಾದರೂ ಮಾಡಲೇ ಬೇಕಿತ್ತು.

ಇದ್ದ ಒಂದೇ ಆಯ್ಕೆ ಎಂದರೆ ಅಂತರ್ಜಾಲದಲ್ಲಿ ಮನೆ  ಹುಡುಕುವುದು. ಅಂತರ್ಜಾಲದಲ್ಲಿ ಎಲ್ಲಿಯೂ ೧ ಬಿ ಹೆಚ್ ಕೆ ಮನೆ ಇರಲಿಲ್ಲ. ಇದ್ದದ್ದೆಲ್ಲಾ ೨ ಅಥವಾ ೩ ಬಿ ಹೆಚ್ ಕೆ ಮನೆಗಳೆ. ನಾವು ಯಾವ ಪರಿಸ್ತಿತಿಗೆ ತಲುಪಿದ್ದೆವೆಂದರೆ, ಯಾವುದೋ ಒಂದು ಮನೆ ಸಿಕ್ಕರೆ ಸಾಕಿತ್ತು. ಹೋಗಿ ನಮ್ಮದು ಎಂದು ಮಲಗಿದರೆ ಸಾಕಿತ್ತು. ಹಾಗಾಗಿ ಅಂತರ್ಜಾಲದಲ್ಲಿದ್ದ ಮನೆಗಳಲ್ಲಿ ನಮ್ಮ ಸಂಸ್ಥೆಯ ಹತ್ತಿರದ ಮನೆಗಳನ್ನ ಗುರುತು ಹಾಕಿಕೊಂಡು ಅವರಿಗೆ ಫೋನ್ ಮಾಡಿ ವಿಳಾಸ ತೆಗೆದುಕೊಂಡು ಹೊರಟೆವು.

ಮೊದಲನೆ ಮನೆ ನಾಲ್ಕು ಮಹಡಿ ವಸತಿ ಸಮುಚ್ಚಯದಲ್ಲಿ ನಾಲ್ಕನೆ ಅಂತಸ್ತಿನಲ್ಲಿತ್ತು.  ಹೊಸದಾಗಿ ಕಟ್ಟಿದ ಸಮುಚ್ಚಯ, ಇಡೀ ಸಮುಚ್ಚಯದಲ್ಲಿ ಸುಮಾರು ೧೫ ರಿಂದ ೨೦ ಮನೆಗಳಿರಬಹುದು. ಹಲವಾರು ಮನೆಗಳಲ್ಲಿ ಇನ್ನೂ ಯಾರು ಬಂದಿಲ್ಲವಾದುದರಿಂದ ಖಾಲಿ. ಒಂದೋ ಎರೆಡರಲ್ಲೋ ಜನ ವಾಸ. ಈ ಮನೆಯಲ್ಲೇನೋ ಗಾಳಿ ಬೆಳಕು ಎಲ್ಲಾ ಸರಿ ಇತ್ತು. ಆದರೆ …। ನಮ್ಮದೇ ಕಡೆ ಮನೆ, ಇಡೀ ಸಮುಚ್ಚಯದಲ್ಲಿ ಯಾರೂ ಇಲ್ಲ. ಇಲ್ಲಿ ಕೂಗಿದರೂ, ಯಾರಾದರೂ ಸತ್ತರೂ ಯಾರಿಗೂ ತಿಳಿಯೋಲ್ಲ. ಇನ್ನು ಉಳಿದಂತೆ ಮನೆಯಲ್ಲಿ ಪೂರ ವಿದ್ಯುತ್ ಕಾಮಗಾರಿ ಮುಗಿದಿಲ್ಲ. ಬಾಗಿಲು, ಕಿಟಕಿ  ಹೀಗೆ ಇನ್ನೂ ಕೆಲಸ ಬಾಕಿ ಇದೆ. ಆದರೂ ಬಾಡಿಗೆಗೆ ಕೊಡುತ್ತಾರಂತೆ, ಆದರೆ ಇಡೀ ಒಂದು ತಿಂಗಳು ಕೆಲಸಗಾರರು ಅವರಿಗೆ ಸಮಯ ಬಂದಾಗ ಬಂದು ಕೆಲಸ ಮಾಡುತ್ತಾರಂತೆ. ಜೊತೆಗೆ ವಿದ್ಯುತ್  ಉಪಕರಣಗಳನ್ನ ನಾವೇ ಕೊಂಡು ತರಬೇಕಂತೆ. ಆಗುವುದಿಲ್ಲ ಎಂದು ಅಲ್ಲಿಂದ ಓಡಿದೆವು. ಮೊದಲನೇ ಸೋಲಿಗೆಲ್ಲ ನಾವು ಬಗ್ಗುವವರೆ. ಖಂಡೀತ ಇಲ್ಲ. ಚಲೋ ಎಂದು ಎರಡನೆ ಮನೆ ಕಡೆ ನಡೆದವು. ಮನೆ ಮಾಲೀಕರು ಅವರ ತಮ್ಮ ಅಲ್ಲಿಯೇ  ವಾಸಿಸುತ್ತಿದ್ದಾರೆಂದು ಹೇಳಿ ಅವರ ದೂರವಾಣಿ ಸಂಖ್ಯೆ  ಕೊಟ್ಟು ಬೇಟಿಯಾಗಿ ಮನೆ ನೋಡಿ ಎಂದರು.  ನಾವೂ ವಿಳಾಸ ಹುಡುಕಿ ಹೊರಟೆವು. ಇದೊಂದು ಹಳೆಯ ಕಾಲದ ಮನೆ. ನಾಲ್ಕೈದು ಮನೆಗಳ ಸಮುಚ್ಚಯ. ಗಾಳಿ ಬೆಳಕು ಎಲ್ಲವೂ ಚನ್ನಾಗಿತ್ತು. ಆದರೆ ತೀರ ದೊಡ್ಡ ಮನೆ. ಹಣವೇನೋ ಕಡಿಮೆ , ಆದರೆ ಮೂರು ರೂಮುಗಳ ಮನೆ. ತೀರಾ ದೊಡ್ಡದು. ದೊಡ್ಡ ದೊಡ್ಡ ರೂಮುಗಳು. ಮಾತಾಡಿದರೆ ಪ್ರತಿಧ್ವನಿಸುತ್ತೆ. ಒಳ್ಳೆ ಚತ್ರದ ರೀತಿ ಇದೆ. ಏನು ಮಾಡುವುದು ಇಬ್ಬರು ಇಷ್ಟು ದೊಡ್ಡ ಮನೆಯಲ್ಲಿ, ಅದೂ ನಮ್ಮಲ್ಲಿ ಏನೂ ಸಾಮಾನುಗಳೂ ಇಲ್ಲ. ಇರುವ ಇಬ್ಬರು ಮನೆಯಲ್ಲಿದ್ದೂ ಎಲ್ಲಿದ್ದೀ ಎಂದು ಫೋನ್ ಮಾಡಿ ಹುಡುಕಬೇಕಾದ ಪರಿಸ್ಥಿತಿ. ಅದೂ ಯಾಕೋ ಸರಿ ಹೋಗಲಿಲ್ಲ. ಅಷ್ಟು ಹೊತ್ತಿಗೆಲ್ಲಾ ಮನಸ್ಸು, ದೇಹ ಎರಡೂ ದಣಿದಿತ್ತು. ಕಡೆಯದಾಗಿ ಇನ್ನೊಂದು ಮನೆಯನ್ನ ನೋಡುವಷ್ಟು ಶಕ್ತಿ ಇತ್ತು. ಹಾಗಾಗಿ ಇರೋ ಬರೋ ಶಕ್ತಿಯನ್ನೆಲ್ಲಾ ಒಟ್ಟು ಗೂಡಿಸಿ ಆ ಮನೆಯನ್ನೂ ನೋಡಿಬಿಡೋಣ ಎಂದು ಹೊರಟೆವು. ಅಲ್ಲೂ ಬಹಳಷ್ಟು ಸಂಗತಿಗಳು ಅದೇ ರೀತಿ ಮುಂದುವರೆದಿತ್ತು. ತೀರಾ ದೊಡ್ಡ ಮನೆ, ಅದರ ಜೊತೆಗೆ ಬೆಳಕಿಲ್ಲದ ಅಡುಗೆ ಮನೆ, ಎಲ್ಲವೂ ಸೇರಿದಂತೆ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ. ಸಾಕಾಗಿತ್ತು ನಮ್ಮ ಒಟ್ಟು ಶಕ್ತಿಯನ್ನ ಅಳಿಸಲಿಕ್ಕೆ.  ನಾವು ದಣಿದಿದ್ದೆವು. ಕಡೆಗೆ ದಲ್ಲಾಳಿ, ನೀನೆ ಶರಣು ಎಂದು ಹೇಳಿ. ಮತ್ತೇ ಅವರಿಗೆ ಕರೆ ಮಾಡಿ ಬೇಡಿಕೊಂಡಾಗ, ಮರು ದಿನ ಮತ್ತೊಂದು ಮನೆಯನ್ನ ತೋರಿಸಲಿಕ್ಕೆ ಒಪ್ಪಿಕೊಂಡರು. ಅವರು ತೋರಿಸಿದ  ಮನೆ ಎಲ್ಲಾ ರೀತಿಯಿಂದಲೂ ನಮಗೆ ಹಿಡಿಸಿತು ಎಂದು ಹೇಳಲಾರೆವಾದರೂ, ನಾವು ದಣಿದಿದ್ದೆವು. ಹಾಗಾಗಿ ನಮಗೆ ಹಲವು ರೀತಿಗಳಿಂದ ಹೊಂದಿಕೆಯಾಗುತ್ತಿದ್ದುದರಿಂದ ಆ ಮನೆಯನ್ನು ಒಪ್ಪಿದೆವು. ಕಡೆಗೆ ಮನೆ ದೊರೆತು ಅದೇ ದಿನ ಸಂಜೆ ಹೊಸ ಮನೆಗೆ ಬಂದು ಸಂಪೂರ್ಣವಾಗಿ ಬಂಗ್ಲಾ ನಿವಾಸಿಗಳಾದೆವು.

ಆ ರಾತ್ರಿ ಮಲಗಿರುವಾಗ ಹಲವು ಸಂಗತಿಗಳು ಕಾಡುತ್ತಿದ್ದವು. ಈ ಅಲೆಮಾರಿತನದಲ್ಲು ನಮಗೆ ಒಂದು ದೈರ್ಯವೆಂದರೆ ನಮ್ಮದು ಎಂದು ಒಂದು ನೆಲೆಯಿರುವುದು. ನಮ್ಮದು ಎಂದು ಒಂದು ಮನೆ, ಒಂದು ಊರು, ಪರಿಚಿತ ಜನ, ಸ್ನೇಹಿತರು ಎಲ್ಲಾ ಇರುವುದು. ಈ ನೆಲೆಗೆ ಕಾರಣರು ಯಾರು? ಅದೆಷ್ಟು ಜನರ ಋಣ. ಅಂದು ಮಲಗಿದ್ದಾಗ ಯಾರ ಯಾರೋ ನೆನಪಾಗುತ್ತಿದ್ದರು. ಕಾಲೇಜಿಗೆ ಹೋಗುವಾಗ ಕಾಲೇಜಿನ ಹುಡುಗರೆಂದು ಮೂರು ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಕೊಡುತಿದ್ದ ದಾರಿ ಬದಿ ಗಾಡಿಯಲ್ಲಿ ತಿಂಡಿ ಮಾರುವವ, ಒಂದು ರೂಪಾಯಿ ತೆಗೆದುಕೊಂಡು ನಿತ್ಯ ಕಾಲೇಜಿಗೆ ತಲುಪಿಸುತ್ತಿದ್ದ ಬಸ್ಸಿನ ಕಂಡಕ್ಟರ್,  ಉಚಿತವಾಗಿ ಮನೆಪಾಠ ಹೇಳಿಕೊಟ್ಟ  ಜ್ಯೋತಿ ಮೇಡಂ , ಹಸಿದು  ಬಂದಿದ್ದಾಗಲ್ಲಾ ಹೊಟ್ಟೆ ತುಂಬ ಏನಾದರೂ ಮಾಡಿಕೊಡುತ್ತಿದ್ದ ಐತಾಳ್ ಅಂಕಲ್ ಹಾಗು ಆಂಟಿ,  ಏನೇ ಬೇಕೆಂದರೂ ಇಲ್ಲ ಎನ್ನದೆ ಕೊಡಿಸುತ್ತಿದ್ದ ಗೆಳೆಯ ನಂದಿ, ರಾತ್ರಿ ಎಷ್ಟೇ ಹೊತ್ತಾದರೂ  ರೂಮಿಗೆ ಕರೆದುಕೊಂಡು ಹೋಗಿ ಅಡುಗೆ ಮಾಡಿ ನಿತ್ಯ ಬಿಸಿ ಬಿಸಿ ಊಟ ಹಾಕುತ್ತಿದ್ದ ಗೆಳೆಯ ಮೂರ್ತಿ, ಮದ್ಯಾನ್ಹ ತಿನ್ನಲಿಕ್ಕೆಂದು ಮನೆಯಿಂದ ಏನಾನ್ನಾದರೂ ಮಾಡಿಕೊಂಡು ಬರುತ್ತಿದ್ದ ಗೆಳತಿಯರು, ಕೇಳಿದಾಗ ಇಲ್ಲ ಅನ್ನದೆ ಅವರೇ ಕೊಡುತ್ತಿದ್ದ ಸಾಲಗಳು. ಎಲ್ಲವೂ ನೆನಪಾಯಿತು. ಯಾಕೋ ಎಲ್ಲವನ್ನೂ   ಬರೆಯಬೇಕೂ ಎಂದೆನಿಸಿತು. ನೆನಪುಗಳು, ಎಲ್ಲಿಯೋ ಕಳೆದುಹೋದರೆ ಎಂಬ ಭಯವೂ ಕಾಡಿತು. ಈಗ ಎಲ್ಲರೂ ಎಲ್ಲೋ ಇದ್ದಾರೆ. ಹಲವರು ನನ್ನ ಸಂಪರ್ಕದಲ್ಲಿಯೂ ಇಲ್ಲ. ಎಲ್ಲರನ್ನೂ ನೆನೆಯಬೇಕೆನಿಸಿತು. ಜಿ ಎಸ್ ಶಿವರುದ್ರಪ್ಪನವರ ಈ ಕವನದ ಸಾಲುಗಳು ಅದೆಷ್ಟು ಸರಿಯೆಂದೆನಿಸಿತು

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?

ಹಾಗಾಗಿ ….



ಏನು ನೆನಪಿರಬಹುದೆಂದೆ?
ಬಿದ್ದ ಮಳೆಗೆ ತೊಯ್ದ ದೇಹ
ಅದರುತ್ತಿದ್ದ ತುಟಿಗಳು
ಕತ್ತಲಾಗಿತ್ತಲ್ಲವ ಅಂದು
ಒಂಟಿ ಭಯವಾಗುತ್ತೆ, ರಸ್ತೆ ಕೊನೆ
ಯಾರೂ ಇರುವುದಿಲ್ಲ
ಅಪ್ಪಿ ತುಟಿಗೆ ತುಟಿ ತಾಕಿಸಬೇಕೆಂದೆನಿಸಿತ್ತಲ್ಲವ
ಹೋ ನೆನಪಾಯಿತೆಂದೆಯ
ಸಿನಿಮಾದ ಪ್ರಣಯ ಸನ್ನಿವೇಶದಂತೆ

ಹೇಗೆ ಮಲಗಿದ್ದೆ ಗೊತ್ತ ?
ಡುಮ್ಮಿ ಎಂದು ರೇಗಿಸುತ್ತಿದ್ದೆಯಲ್ಲ
ಬರೀ ಮೂಳೆ ಚರ್ಮದೊಂದಿಗೆ
ಶರೀರ ಅಷ್ಟು ದಪ್ಪ
ತಿಂಗಳುಗಳು ಹಿಡಿದಿತ್ತು
ಅಷ್ಟೂ ರಕ್ತ ಹೊರ ಹರಿಯಲಿಕ್ಕೆ
ಕೊಳ್ಳಿ ಹಿಡಿಯುವವರ್ಯಾರೆಂಬುದು ಧರ್ಮಸಂಕಟ
ಅಪ್ಪನ ? ಗಂಡನ ? ಮೂರು ತಿಂಗಳ ಹಸಿ ಕೂಸ?
ಬಿಡು, ನೀನು ಅಲ್ಲಿರಲಿಲ್ಲವಲ್ಲ

ಹಾಂ ಈಗ ಹೇಳು
ನನ್ನ ಮುಖ ಹೇಗಿತ್ತು
ಕಣ್ಣುಗಳು? ಸ್ವಲ್ಪ ನೆನಪಿಸಿಕೊ
ಪ್ರೇತಾತ್ಮಕ್ಕೆ ಬಿಂಬ ಮೂಡುವುದಿಲ್ಲವಂತೆ
ನೀನಾದರೂ ಹೇಳಬಹುದೇನೋ ಎಂದು