ಅಜ್ಜಿಮನೆ

 

ಊರ ಕೇರಿಯ ಬಾವಿ ನಾಲ್ಕಾರು ಮನೆ 

ದೊಡ್ಡಾಲದ ಮರದ ನೆರಳಲ್ಲಿ ಆಟ ಪಾಠ 

ಊಟಕ್ಕೊಂದು ಮನೆ ದೋಸೆಗೆ ಮತ್ತೊಂದು 

ಬಜ್ಜಿಗೆ ಮಾವನದೇ ಅಂಗಡಿ 

ಚಕ್ಕುಲಿ ಪೆಪ್ಪರಮೆಂಟಿಗೂ 

ಮಾವನಿದ್ದಾನಲ್ಲ ಅವನ ಅಂಗಡಿಯುಂಟಲ್ಲ 


ಕಾದಿದ್ದಿದೆ,  ದಪ್ಪ ಕನ್ನಡಕದೊಳಗಿನ ಕಣ್ಣು ಹೊಳೆವಂತೆ 

ರೈಲು ನಿಲ್ದಾಣದ ಮೂರನೆ ಗಂಟೆಗೆ 

ಅಮ್ಮಾ ನಾನೂ ಬಂದಿದ್ದಿದೆ 

ಅವಳೊಟ್ಟಿಗೆ ಕವಡೆಯಾಡಿದ್ದಿದೆ 

ಮೊಸರನ್ನದ ಕೈ ತುತ್ತಿಗೆ 

ಒಣ ಮೆಣಸಿನ ಕಾರ ನೆಂಜಿಕೊಂಡಿದ್ದಿದೆ 


ಅವಳಲ್ಲಿ ಈಗ  ಕೇಳಬೇಕಿತ್ತು  

ಅದೇಗೆ ಸಾಕಿದೆ ಈ ಏಳು ಜನರನ್ನ 

ಅವರೊಟ್ಟಿಗೆ ಹಲವರನ್ನ 

ಅಜ್ಜ ಸತ್ತಾಗ   ನಿನ್ನ ವಯಸ್ಸೆಷ್ಟೋ 

ಅಜ್ಜನು ಸಂಗೀತ ವಿದ್ವಾಂಸನಂತಲ್ಲ 

ಹಾಡಿದ್ದನ ನಿನ್ನೊಟ್ಟಿಗೆ ? 

ಕಲಿಸಿದ್ದನ ಹಾಡುವ ಬಗೆಯನ್ನ 

ನೀನೇ  ನಡೆಸುವ ಈ ಹೋಟೇಲಿನಲ್ಲಿ 

ಚಪಾತಿ ತಟ್ಟುವಾಗಲಾದರೂ‌

ಹಾಡಬೇಕೆಂದೆನಿಸಿತ್ತ? 


ಇದದೆಂತಹ ಮನೆ !!! 

ದೊಡ್ಡಾಲದ ಮರದ ಬೇರು 

ಒಂದೊಂದೇ ಹೊಕ್ಕು 

ಕಡೆಯುತ್ತಿತ್ತಲ್ಲ ಒಡೆಯುತ್ತಿತ್ತಲ್ಲ 

ಗೋಡೆಗಳೆದ್ದವು ಮನೆಗಳೆದ್ದವು 

ರಸ್ತೆ ರಿವಾಜು ಗಾಡಿ ಗಲಾಟೆ 

ಈಗ, ಯಾರ ಅಂಗಡಿಯೆಂದೇಳುವುದು 

ಅದ್ಯಾರ ಹೋಟೆಲದು 

ನೀ ಅನ್ನುತ್ತಿದ್ದೆ 

ದೊಡ್ಡಾಲದ ಮರಕ್ಕೆ ಅದರದೇ ಪಾಡು 


ಸಾಪಾಟು ಜಾಗ ಈಗದು 

ಇಲ್ಲೊಂದಾಲದ ಮರವಿತ್ತಂತೆ 

ರೈಲ್ವೆ ಗೇಟನ್ನೇ ಹಾಕುವುದಿಲ್ಲ ಈಗ 

ಅಕಸ್ಮಾತ್ ಕಾರು ನಿಂತರೆ 

ಅದೋ ಅದು ನನ್ನಜ್ಜಿಯ ಮನೆ 

ಅಲ್ಲೇ ನಾನು ಪುಟ್ಟದೊಂದು ಮನೆ ಕಟ್ಟಿದ್ದೆ 

ಅಂತ ತೋರಿಸಬಹುದಿತ್ತೋ ಏನೋ 

ಮೇಲ್ಸೇತುವೆ ಆಗಿ ಹೈವೇ ಆಗಿದೆ 

ನೆನಪಿಸಿಕೊಳ್ಳುವಷ್ಟರಲ್ಲಿ ದಾಟಿ ಬಿಟ್ಟಿರುತ್ತೇವೆ 

ದಾರಿಯನ್ನ 

ದೊಡ್ಡಾಲದ ಮರದ ಯಾವ ಕುರುಹೂ 

ಇಲ್ಲದೆ


ಮುರಕಾಮಿಯ ಕಾದಂಬರಿ ಓಟ

 

ಒಂದಿಡೀ ಪುಸ್ತಕವನ್ನ 

ಒಂದೇ ಒಂದು ಪೂರ್ಣ ವಿರಾಮವಿಲ್ಲದೆ 

ಬರೆದಿದ್ದ - ಓಡುವುದೂ 

ಓಡುವಾಗ ಉಸಿರಿನ ಏರಿಳಿತಕ್ಕೆ 

ಗಿಡ, ಹೂ, ಬಳ್ಳಿ, ಮರ, ಹಕ್ಕಿ, ಗುಡ್ಡ 

ಆಕಾಶ ಸೂರ್ಯ ಚಂದ್ರ 

ಮತ್ತು ಗಂಡು ಹೆಣ್ಣು ಮನುಷ್ಯ 

ಏರಿಳಿಯುವ ಕಾಣ್ಕೆ 

ಉಸಿರಿನಂತೆ ಪೂರ್ಣ ವಿರಾಮವಿಲ್ಲದ್ದು

ಸಂದರ್ಶನ


ಬಿಸಿಗಾಳಿ, ಉರಿ ಬಿಸಿಲ ಸೂರ್ಯ 

ಕೆಂಪುಗುಡ್ಡದ ಕಾಳ್ಗಿಚ್ಚು 

ಹಸಿರು ಹಲಗೆ ಬಿಳಿ ಬರಹ 

ಗೋರಂಟಿ ಹಚ್ಚಿದ ಕೈಗೂ 

ನೇಲ್ ಪಾಲಿಷ್ ತಾಕಿದ ಉಗುರು 


ತೂಗುಯ್ಯಾಲೆ ನಿಲ್ಲುವುದೇಕೆ ಕಡೆಯಲ್ಲಿ ? 

ವಿವರಿಸಿ - ಗಣಿತದ ಸಮೀಕರಣದೊಟ್ಟಿಗೆ 

ಆಕಾಶದ ನಕ್ಷತ್ರಗಳನ್ನು ಕಂಡದ್ದಕ್ಕಾಗಿ 

ಖಗೋಳ ಶಾಸ್ತ್ರಜ್ಞ 

ಅಣು ಪರಮಾಣು ಅಲ್ಲಿಂದ 

ಹೊರಹೊಮ್ಮಿದ ಆಕಾರ ವಿಕಾರದ 

ಮಾಪನಕ್ಕೊಳಪಟ್ಟ ಹಂತದಲ್ಲದರ ಪರಿಣಾಮ 

ಸಿದ್ಧಾಂತಕ್ಕೆಲ್ಲಾ ಕಾರ್ಯಕಾರಣ 

ಬಗೆಯ ಬರಹಕ್ಕೆ ಬಾಗುವುದು 

ಬಿಳಿಬಣ್ಣದ ಬೋರ್ಡು 

ನೀಲಿ ಬಣ್ಣದ ಬರಹ 


ಕಾಫಿ ಒಂದಿಷ್ಟು ಸಮೋಸ 

ನಿವಾರಿಸಿಕೊಳ್ಳಲಿಕ್ಕೆ ಚರ್ಚೆ 

ಮಾರ್ಗದ ಕಟ್ಟು - 

ದೂರದೂರಿನ ಬಸ್ಸೂ ರೈಲು 

ಟಿಕೆಟ್ಟು ಸಿಕ್ಕಿಲ್ಲ ಇನ್ನೂ 

ರಾತ್ರಿಯಾಗುವುದು ಕತ್ತಲಾಗುವುದು 

ಬೆಳಗಾಗುವುದು ಮತ್ತೆ 

ಚೀಲ ಸಿದ್ಧ, ಶೋಗೆ ಪಾಲೀಷ್ ಹಚ್ಚಿ 

ಸಿಗಬಹುದು ಅವನೂ ಅವಳೂ ಮತ್ತೆ 

ಬಿಸಿ ಗಾಳಿ ಉರಿ ಬಿಸಿಲ …… 


ಕೆಂಪುಗುಡ್ಡದ ಸಾಲುಗಳು


(ಇಲ್ಲಿನ ಕವನಗಳು ಕೆಂಪುಗುಡ್ಡದ ಬಗೆಗೆ ಪ್ರತ್ಯೇಕವಾಗಿ ರಚಿಸಿದವು.

ಒಂದಕ್ಕೊಂದಕ್ಕೆ ಸಂಬಂಧವಿದೆಯೆಂದರೂ ಆದೀತು, ಇಲ್ಲ ಎಂದರೂ ಆದೀತು.) 


೦೧. 

ಬೆಸಲ ಬೇನೆಗೆ ಕೆಂಪುಗುಡ್ಡ 

ಬಸವಳಿದದ್ದಕ್ಕೆ ಬೇಸಿಗೆ ಬಂದಿತ್ತೆಂದು 

ರಾಗಿ ಕೊಯ್ಲನ್ನು ಚೊಕ್ಕವಾಗಿ 

ಕೊಯ್ದಿತ್ತು 

ಗುಡ್ಡದಿಂದಾರಿ ಬಂದ ಅ ನವಿಲು 

ಅಭಿದಾ ಎಂದ 

“ಹಾವನ್ನಿಡಿಯುತ್ತಲ್ಲ ಆ ನವಿಲು”  



೦೨. 

ನೆನೆಪಿದೆಯಲ್ಲ ನಿನಗೆ, 

ಆಕಾಶ ಅದೆಷ್ಟು ಮುದ್ದಾಗಿತ್ತೆಂದರೆ (ನಿನ್ನಂತೆಯೆ) 

ಕೆಂಪುಮಲೆ ಮೈದಡವಿ ಮುತ್ತಿಕ್ಕಲು ಮೇಲೆದ್ದಾಗ 

ಅಲ್ಲಿದ್ದ ಬಿಳಿ ಮೊಲ 

ಒಂದೇ ಒಂದು ಜಿಂಕೆ 

ಚಂಗನೆ ಹಾರಿ 

ಹುಣ್ಣಿಮೆ ಚಂದ್ರನೊಟ್ಟಿಗೆ ಹೋಗಿಬಿಟ್ಟವು 

ಈಗಲೂ ಚಂದ್ರನಲ್ಲಿ ಕಾಣುತ್ತೆ 

ಹಾಗೇ !!!


ಒಂದು ದಿನ ಮಟ ಮಟ ಮದ್ಯಾಹ್ನ 

ಕೆಂಡ ಕಾರುವ ಬಿಸಿಗೆ ಕೆಂಪುಗುಡ್ಡವೇ ಉರಿದಾಗ 

ಆ ಒಂದು ಮೊಲ ಆ ಒಂದು ಜಿಂಕೆ 

ಚಂದ್ರನಿಂದ ಚಂಗನೆ ಮರಳಿ ಬಂದು 

ಮದ್ಯದಾರಿಯಲ್ಲಿ ನನ್ನನಿಡಿದು ಕೇಳಿತು 

“ಅದೇನದು?” 



೦೩. 

ಮಗುವಿನ ಜಾವಳ ಆಗಿ ನಾಕು 

ಹೊತ್ತಾಗಿಲ್ಲವಲ್ಲೇ 

ಕಮ್ಮನೆ ಬಡಿದಿದೆ ಮೂಗಿಗೆ 

ಕೆಂಪುಗುಡ್ಡದಿಂದ ಸಿದ್ಧ 

ಕೋರಾನ್ನಕ್ಕೆ ಬಂದವ 

ಹೊಸಿಲ ದಾಟಬೇಡ 

ಯಾರ ಬೇನಾಮಿ ಅರ್ಜಿಯೋ ಏನೋ !!! 



೦೪. 

ಸುತ್ತದ ಗುಡ್ಡ ಕರಗಿಸಿ ಕಟ್ಟಿದ ಮನೆಯಲ್ಲಿ 

ಗುಡ್ಡದ ಬೀಜ ಸಸಿಯಾಗಲಿಕ್ಕೆ 

ಕಾತರಿಸಿದೆಯೆಂಬೋ ಸನ್ನೆಯೂ 

ಇಲ್ಲದ ಮನೆಯೊಡೆಯ ಕೂತಲ್ಲಿಯೇ 

ಕಲ್ಲಾಗಿ ಕುಡ್ಡ ಬೆಳೆದಿದೆ 

ಇಲ್ಲಿ ಎಲ್ಲಕ್ಕೂ ನಿಯಮವಿದೆ 

ಯಾವ ಗುಡ್ಡವೂ ಯಾವ ನದಿಯೂ ಯಾವ ಮಣ್ಣೂ 

ಯಾರನ್ನೂ ಬಿಟ್ಟಿದ್ದಿಲ್ಲ 

ಅದರ ನೆನೆಪು ಬಹು ಆಳ ವಿಸ್ತಾರ !!!  



ಕಪ್ಪು ಕಾಗೆ : ಹಲವು ಬಗೆಗಳಲ್ಲಿ


೧. 

ಅವಳು 

ನಾ ಕಪ್ಪು ಕಾಗೆ ಕಂಡೆನೆನ್ನಬೇಕೆ? 

ಕಾಗೆ ಕಪ್ಪೇ ಅಲ್ಲವೆ 

ಅಂದರೆ 

ಕಪ್ಪೆಂದರೆ ಕಡು ಕಪ್ಪು 

ಕಾಣಲೂ ಆಗದಷ್ಟು ಕಪ್ಪು 

ಕಾಗೆ 

ಕಂಡೆನೆನ್ನಬೇಕೇ 


೨. 

ಅದೆಷ್ಟು ಕತ್ತಲಿತ್ತೆಂದರೆ 

ಕಪ್ಪು ಹಕ್ಕಿ 

ತಪ್ಪ 

ಜಗತ್ತಿನದೇನೂ ಕಾಣದಷ್ಟು 

ಆಗೆಷ್ಟು ಸುಂದರಳಾಗಿದ್ದೀ ನೀ !!! 


೩. 

ಕಪ್ಪು ಹಕ್ಕಿ 

ಬಿಳಿ ಸಮುದ್ರದ ಮೇಲೆ 

ಹಾರೋವಾಗ 

ಕೆಳಗೆ ಮೀನು ಈಜುತ್ತಿತ್ತು 


೪. 

ಅದೊಂದು ರಾಷ್ಟ್ರೀಯ ಪ್ರಮುಖ ದಿನ 

ವೃತ್ತ ಪತ್ರಿಕೆಯ ತುಂಬೆಲ್ಲಾ 

ಕಪ್ಪು ಅಕ್ಷರಗಳು 

ಕಾಗೆ ಬಾಯ್ತೆರದದ್ದೇ 

ಎಲ್ಲವನ್ನೂ ತಿಂದು ತೇಗಿತ್ತು 

ಬಿಳೀ ಕಾಗದ ಸುಮ್ಮನ್ನಿತ್ತು 

ಅದರ ಕಣ್ಣು ಅದೆಷ್ಟು ಕಪ್ಪಗಿತ್ತು ಗೊತ್ತ! 


೫. 

ಅನ್ನವಿಟ್ಟಾಗ 

ಕಪ್ಪುಕಾಗೆ ಅಗಳನ್ನ ಹೆಕ್ಕಿ 

“ಆಹಾ ಪಿತೃ ಪಿತಾಮಹರು”

ಎಂದದ್ದೇ 

ಎದ್ದು ಬಂದು 

ಪಟ ಪಟ ಪಟ 

ಎಂದೊಡೆಯಬೇಕೆ ? 

ಕಪ್ಪುಕಾಗೆ 


೬. 

ಕಾ ಕಾ ಕಾ ಎನ್ನುತ್ತಲೇ 

ಅದೆಷ್ಟು ತೀವ್ರವಾಗಿ ತೀಕ್ಷ್ಣವಾಗಿ 

ನೋಡುತ್ತಿತ್ತೆಂದರೆ 

ನಾ ಕಂಡಾಗ 

ಮೂರನೆ ಕಣ್ಣು 

ಕಂಡಿತ್ತು