ಕವಿ, ಕವಿತೆ, ಮನುಷ್ಯ


ನೋಡೀ,
ಇದು ಕವಿತೆ ಅಲ್ಲ.

ಮನುಷ್ಯ ಕವಿತೇನ ಬರೀತಾನೆ
ಕವಿತೆ ಮನುಷ್ಯನ್ನ ಬರಿಯುತ್ತೆ
ಎರ್ಡೂ ತಪ್ಪು.
ಕವಿಯಾದ ದುರಂತದ ಪರಿಹಾರಕ್ಕೆ ನಾ ಕವಿತೆ ಬರೀತೀನಿ.

ಕವಿತೇನ ಹುಡುಕಿ ಹೋಗ್ಬೇಕಂತೆ,
ಮಧ್ಯರಾತ್ರೀಲಿ ಸ್ಮಶಾನಕ್ಕೆ ದಾಳಿ ಇಡೋ ಪ್ರೇತಾತ್ಮಗಳಂತೆ,
ಮೈ ಮೇಲೆ ಬರೋ ದೆವ್ವದಂತೆ,
ಸಾಯುವ ಮಗುವಿನ ಮಾಂಸಕ್ಕೆ ಕಾಯ್ವ ರಣಹದ್ದುವಿನಂತೆ,
ಹಾಗಂತೆ, ಹೀಗಂತೆ,
ಅದೇ
ಕವ್ನಾನಂತೆ.

ಮೈ ನಡುಗುತ್ತೆ. ಎದೆಯಲ್ಲೆಲ್ಲೋ ಜೋರು ನೋವಾಗುತ್ತೆ.
ಸತ್ತು ಹೋಗುತ್ತಿದ್ದೀನಿ ಅಂತನ್ನಿಸುತ್ತೆ.
ಪದದ ಪಕ್ಕ ಪದವಿಟ್ಟದ್ದು ಕವಿತೆಯಾದದ್ದಕ್ಕೆ
ಕಂಗಾಲಾಗುತ್ತೇನೆ.
ಯಾಕೆ ಹೀಗೆ?
ಪ್ರಶ್ನಿಸಿಕೊಳ್ಳುವವನ ಸರದಿಯಲ್ಲಿ ನಿಂತು ತಬ್ಬಿಬ್ಬಾದದ್ದರ  
ಕಾರಣಕ್ಕ?

ಗೊತ್ತಿಲ್ಲ.

ಎಲ್ಲಾ ಮುಗಿದುಬಿಟ್ಟಿದೆಯೆಂಬ ತೀರ್ಮಾನಕ್ಕೆ ಬರಲಿಕ್ಕಾಗುವುದಿಲ್ಲ.

ಅದಕ್ಕೇ ಇರಬೊಹುದು
"ಕ್ಷಮಿಸು ಹುಡುಗಿ,
ನಾ ಸೋತುಬಿಟ್ಟೆ, ಕಾರಣ
ನಾ ಕವಿಯಾಗಿಬಿಟ್ಟೆ"



[ಮೇಲಿನ ಚಿತ್ರದ ಆಕರ http://www.passonapoem.com/re_learningpoetry.htm]