ವಾರಣಾಸಿ

 


ಇದೊಂದು ಮಹಾ ಸ್ಮಶಾನ 

ಹಗಲು ಕಾಯುವವನು ಆ ಕಾಲ ಭೈರವನು 

ರಾತ್ರಿಗೆ  ಬರುವಳಮ್ಮ 

ಆ ವರಾಹಿ ತಾಯಿಯು 

ಕತ್ತಲೆಯಲಿ ಕಾಯುವವಳು 

ಕತ್ತಲಾಗಿ ಪೊರೆಯುವವಳು 


ಕಣ್ಣದೊಂದು ವಿಶಾಲ 

ಕಾಣುವುದೆಲ್ಲಾ ಅದರ ಬಗೆಯೂ 

ಕಾಣದಿರುವುದದರ ಬಗೆಯು 

ದಂಡಪಾಣಿ ಹಿಡಿದ ದಂಡ 

ಕೆಳಗಿನಿಂದ ಮೇಲಕ್ಕೆ 

ದುಂಡಿರಾಜ ಕೂತನಂತೆ   

ಹೋ ಹೋ ನಗುತ್ತಾ 


ಎಲ್ಲಿ ಕಂಡರಲ್ಲಿ ಚೆಲುವು 

ಆ ಬಿಂದುವಿನಿಂದ ಬಂದ ಸೊಗವು 

ಮಾಧವನೋ ಮಾಧವಿಯೋ 

ಹರಿವುದದನು ಕೇಳು ಮತ್ತೆ 

ಆ ಹರಿಯನು ಕೇಳು ಮತ್ತೆ 


ತೈಲಿಂಗನು ಕೂತನಲ್ಲಿ 

ಎದುರಿಗಿರುವಳು  ಮಹಾ ಕಾಲಿ 

ಆ ಕಲ್ಲ ನಂದಿಯ 

ಕಾಲ ನೇವರಿಸಿದರು 

ಕೊರಳ ಮುದ್ದಿಸಿದರು 

ಹೇಗಿರುವೆಯೋ ನಂದಿ 

ಜೀವ ಕರಗುವಂತೆ 

ಕೇಳಿದರವರು 

ಲಿಂಗವಾ ಮೀರಿದ ತೈಲಿಂಗ ಸಾಮಿಯು 


ಅನ್ನವಿದೆಲ್ಲ 

ಅನ್ನವೇ ಅನ್ನವ ತಿನ್ನುವುದಿಲ್ಲಿ ಎಲ್ಲ 

ಅನ್ನವೇ ಪೂರ್ಣವಿಲ್ಲಿ ಅನ್ನ ಪೂರಣಿ 

ಹೊತ್ತಿಸಮ್ಮ ಉರಿಸಮ್ಮ 

ಕೆಳಗಿನಿಂದ ಮೇಲಕಿಲ್ಲಿ 

ಓ  ತ್ರಿಪುರ ಭೈರವಿ 

ಎಲ್ಲವನೂ ಕಟ್ಟಿನಿಂದ ಕಟ್ಟಿಟ್ಟು 

ಬಚ್ಚಿಟ್ಟವಳು ನೀನಲ್ಲವೇ ದುರ್ಗಿಯಲ್ಲವೆ 


ಇದೊಂದು ಮಹಾ ಸ್ಮಶಾನವೆಂದೆ 

ಅದಕೆ ನೀನು ಒಡತಿಯೆಂದೆ 

ಸುಂದರಳಲ್ಲವೇ 

ಮೂರು ಪುರದ ಸುಂದರಳಲ್ಲವೇ 

ಕಾಲಿಯಲ್ಲವೇ 

ಮಹಾ ಸುಂದರ ಕಾಲಿಯಲ್ಲವೇ


ವಾರಾಹಿ : ಒಂದು ಹಾಡು

 


ಮುದ್ದು ಮುಖದವಳೇ ಕಾಡಂದಿ ಮುಖದವಳೇ 

ಪುಟಾಣಿ ಮಗುವು ನೀ 

ಕೋರೆ ಹಲ್ಲು ಕೆಂಪು ಕಣ್ಣು 

ನೋಟವೆಲ್ಲ ನನ್ನ ಮೇಲೆ 

ಅಪ್ಪಿ ಕೊಂಡು ಕೂಸು ನೀನು 

ಆ ಮಗುವು   ಮತ್ತೆ ನಾನು 

ತಂದೆ ರೂಪವು ನೀನೇ ಎಂದು 

ಕಂಡೆ ನಾನು ಮೇಲೆ ನಿಂದು 

ಅದುವೇ ಭಾವ ಅಲ್ಲವೇನೆ 

ತಾಯಿ ವಾರಾಹಿ 

ತಾಯಿ ವಾರಾಹಿ 


ಕೆಂಪು ಮಾಲೆ ದೊಡ್ಡ ಕಾಲು 

ನೋಡಬಲ್ಲೆನೇನೆ ಮುಖವ 

ಆ ಕಣ್ಣು ಉಗ್ರ ರೂಪ

ಇದು ಮಹಾ ಸ್ಮಶಾನವಂತೆ 

ಕತ್ತಲೆಯಲಿ  ಕಾಯುವವಳು ನೀನಂತೆ 

ಬೆಳಗಿನಲ್ಲಿ ಬರುವನಂತೆ 

ಆ ಕಾಲ ಭೈರವನು 

ಇಲ್ಲಿನ ಕೊತವಾಲನು 

ಏನು ಬೇಕು ಹೇಳೆ ತಾಯೆ 

ಬಳಲಿರುವೆ ನೀನು ತಾಯಿ 

ಈ ಹಗಲು ಮಲಗು ತಾಯೆ 

ಜೋ ಜೋ ವರಾಹಿ ತಾಯಿ 

ಜೋ ಜೋ ವರಾಹಿ ತಾಯಿ 

ಬಚ್ಚಿಡುವೆ ತಾಯೆ ನಿನನು 

ಯಾವ ಬೆಳಕು ಬೀಳದಂತೆ 

ಯಾವ ಶಬುದ ತಾಕದಂತೆ 

ಯಾರೂ ಬಾರದಂತೆ 

ಮಲಗು ತಾಯಿ 

ಜೋ ಜೋ ವರಾಹಿ 

ಜೋ ಜೋ ವರಾಹಿ


ಅನುತ್ತರ

 [ಅನುತ್ತರ : ಗುರು ಅಭಿಧ ಜೊತೆ ಅನುಭವಿಸಿದ ಅನುಭವವಿದು. ಬರೀ ಅನುಭವಗಳು. ಒಂದೊಂದೂ ಸ್ವತಂತ್ರ್ಯವಾದದ್ದು, ಸೇರಿಕೊಂಡದ್ದು, ಹಾಗೇ ಉಳಿದದ್ದು. ]

೦೧. 

ಆ ಕಲ್ಲು - ಚಪ್ಪಟೆ ಕಲ್ಲು 

ಓಡಿ ಬಂದು ಬಿದ್ದಾಗ 

ಕಣ್ಣು ತೆರೆಯಿತು 

ಕೆಂಪು ಕಣ್ಣು ತೆರೆಯಿತು 

ಬೆಳಕು ಹೊತ್ತಿತು 



೦೨. 

ಸರಿದಿಲ್ಲ ಅವಳು 

ಮೂರೂ ಎಚ್ಚರದೊಳಗೂ ಹೊರಗೂ 

ಒಮ್ಮೊಮ್ಮೆ ಒಂದೊಂದು ರೂಪ 

ಮನೆಯಲ್ಲಿನ ವಿಗ್ರಹ ಮಾತಾಡುತ್ತಿದೆ 

ಅಲ್ಲ ಸಂಭಾಶಿಸುತ್ತಿದೆ 

ಮಾತನಾಡದೆ ಹೋದಾಗ ಕೋಪವೆಂದೆನಿಸಿದ್ದೂ 

ಧ್ಯಾನಕ್ಕೆ ಕೂತವಳ ರೂಪವೊಮ್ಮೆ 

ಕಣ್ಣು ಮೇಲಕ್ಕೆ ನೋಡುತ್ತಿತ್ತು 

ಆ ಧ್ಯಾನದಲ್ಲಿ 


೦೩. 

ಈ ರಾತ್ರಿ ಕೂತಿದ್ದದ್ದು 

ಯಾವುದೋ ಶವದ ಮೇಲೆ 

ನನ್ನ ಶವವೇ ಆದೀತು ಮತ್ತೆ 

ಬೆತ್ತಲೆ ಶವದ ಮೇಲೆ ಬೆತ್ತಲೆ ಯೋಗಿ 

ಮನೆ ಸುತ್ತ ಮುತ್ತ ಎಲ್ಲಾ ಸ್ಮಾಶಾನ 

ಎದುರಿಗೆ ಕಾಲಿಯಿದ್ದಾಳೆ 

ಘೋರ ಕಾಲಿಯಾದರೋ 

ಕಡುಕಪ್ಪಾದರೋ 

ರಕುತ ಉಕ್ಕುವ ರುಂಡಗಳೊಡನಿದ್ದರೂ 

ರುಂಡ ಮಾಲೆಯ ರಕುತ 

ಮೈಯಲ್ಲಾ ತೋಯ್ದಿದ್ದರೂ 

ನಗುಮುಖದ ಸುಂದರಿಯವಳು 

ತ್ರಿಪುರ ಸುಂದರಿ 


೦೪. 

ಚಂಡಿ, 

ಬಗೆ ಬಗೆಯ ಭಾಷೆ ನೀ

ಅದರೊಳಗಿನ ನಾಧ ನೀ 

ಅಭಿಧಾ ಶಕ್ತಿಯು ನೀ 

ನಮ್ಮಗಳ ಮಾತು 

ನಮ್ಮಗಳ ಮೌನ 

ಎರಡೂ ಭಾಷೆಯೇ 

ಜಗವೆಲ್ಲಾ ಬರೀ ಭಾಷೆ 

ಹಾಗೂ ಆ ಭಾಷೆಯೇ ನೀನು ಚಂಡಿ 


೦೫. 

ಮತ್ತೆ ಮತ್ತೆ ಮುನ್ನುಡಿ ಬರೆಯುತ್ತಿರಬೇಕು 

ಕವನಕ್ಕೆ ಬರಹಕ್ಕೆ ಬದುಕಿಗೆ 

ಬಕುತಿಗೂ ಬೇಕು ಮುಕುತಿಗೂ ಬೇಕು 

ಮುನ್ನುಡಿ ಬರೆಯುತ್ತಿರಬೇಕು 

ನೆನಪಲ್ಲವದು ಇರುವುದಲ್ಲಿ 

ಕೇಳಿಸಿಕೊಳ್ಳಬೇಕು ಕಿವಿ ಮುಚ್ಚಿ 

ನೋಡಬೇಕು ಕಣ್ಮುಚ್ಚಿ 

ತಾಕಬೇಕು ಕೈ ಹಿಡಿಯಬೇಕು 

ಬೆಚ್ಚಗಿನ ಬಿಸಿ ತಾಗಬೇಕು 

ಆ ಆಳದಲ್ಲಿದೆಯದು ಸ್ಪಂದ 

ಸಾದಾರಣ ಸ್ಪಂದ 

ತಾಕಬೇಕು ಕೇಳಬೇಕು ನೋಡಬೇಕು 

ಅದ ಹಾಡಬೇಕು 

ಅದು ಬೇಕು ಜಗಕೆ 

ಹಾಗೆ ಕೇಳಿದ ಹಾಡು ಬೇಕು 

ಸಾದಾರಣ ಸ್ಪಂದವದು 

ಎಲ್ಲರ ಪಾಡದು 

ಎಲ್ಲರ ಹಾಡದು 


೦೬. 

ಕವನ ಮಹಾಕಾರುಣಿ 

ಅರ್ಥ ವಸ್ತು ಧ್ವನಿ ಅಲಂಕಾರ 

ವ್ಯರ್ಥ ಪ್ರಲಾಪವಷ್ಟೆ 

ಯಾರೋ ಏನೋ ನೆನೆದದ್ದನ್ನು 

ಬಯಸಿದ್ದನ್ನು ನೊಂದದ್ದನ್ನು 

ಕೇಳುವುದು 

ಕೇಳಿ ಬರೆಯುವುದಷ್ಟೆ 

ಉಳಿದದ್ದೆಲ್ಲವೂ ಬರೀ ಪದಗಳು 


೦೭

ಭಾಗ ವಿಭಾಗದ ಭಾರವೇ 

ಜೀವವ ಹೂತಿದೆ ಆಳದಾಳಕ್ಕೆ 

ಬರೀ ಮೇಲ್ಪದರದಾಟವದು 

ಚಪ್ಪಾಳೆ ಹೊಡೆದಂತೆ ಜೋರು ಕೇಕೆಯಂತೆ

ಬೆಡಬೇಕು ಹೀಗೆ ಸುಮ್ಮನೆ ಕಟ್ಟಿದ ಗೋರಿಗಳ 


೦೮. 

ಅದಕೆ ಇಚ್ಛೆಯಾಯಿತು 

ಅದುವೇ ಇಚ್ಛೆಯಾಯಿತು 

ಆ ಇಚ್ಛೆಯೇ ಕಾಲವಾಯಿತು 

ಆ ಕಾಲವೇ ಇಚ್ಛೆಯಾಯಿತು 

ಅದುವೇ ಹಬ್ಬಿತು 

ಹಬ್ಬಿದ್ದೇ ಅದಾಯಿತು 

ಆಗುವುದೇನದು ಏನೂ ಇಲ್ಲ 

ಆದದ್ದೆಲ್ಲಾ ಇರುವುದೇ ಅಲ್ಲ 

ಅದೇ ತ್ರಿಪುರ ಸುಂದರ ಕಾಲಿ 

ಏನೂ ಇಲ್ಲದ್ದು ಇರುವುದೆಲ್ಲವೂ ಆದದ್ದು 

ಅನುಭವಿಸಿದ್ದು ಅನುಭವದ್ದು 

ಅದು ಅದರದ್ದು 

ಅದೇ ಅದು 


೦೯. 

ಬಿಂದುವಿನಿಂದೆಲ್ಲಾ ಬಿಂದುಗಳು 

ಒಂದೊಂದಾಗಿ 

ದೇಶಕಾಲ ವಸ್ತು ಪದಾರ್ಥ 

ಅದುವೇ ಆಗಿ 

ಹಿಗ್ಗುವುದೂ ಅದೇ ಕುಗ್ಗುವುದೂ ಅದೇ 

ತೆರೆದಿದ್ದು ಇಲ್ಲಿ ಈ ಮಧ್ಯದಲ್ಲಿ 


೧೦ 

ಅವಳು ಬಂದಳು 

ಬಾಲೆಯಾಗಿ ಮೊದಲು 

ಸೊಂಟದಮೇಲೆ ಕೈಯನಿಟ್ಟು 

ಪುಟ್ಟ ಲಂಗವನ್ನು ತೊಟ್ಟು 

ಜಗದ ನಗುವೆಲ್ಲಾ ತಾನೇ ಏನೋ ಎಂದು 

ಬಂದಳು ಬಾಲೆ ಬಂದಳು 


ಮುಡಿಯ ಬಿಚ್ಚಿದವಳವಳು 

ಸುಂದರಕೆ ಅತಿ ಸುಂದರಳವಳು 

ಕಡು ಕೆಂಪು ತಾವರೆ ಮೊಗ್ಗ ಹಾರದವಳು 

ಆದಳು ನೋಡ ನೋಡುವಂತೆ 

ಉರಿವ ಬೆಂಕಿ ಎಲ್ಲೆಲ್ಲೂ 

ಮುಡಿಯಲ್ಲ ಜಡೆಯಲ್ಲವದು 

ಉರಿವ ಬೆಂಕಿ ಕಿಡಿಗಳು ಮತ್ತೆ 

ರುಂಡ ಹಾರ ಕೆಂಪು ಮುಖವು 

ಉರಿವ ಕಡು ಕಪ್ಪು ಮುಖವು 

ಉಗ್ರ ನೇತ್ರ ಬಿಳಿಯ ಜ್ವಾಲೆ 

ಮೈ ಹತ್ತಿ ಉರಿದಿದೆ 

ಎದೆಯ ಬಡಿತ ನಿಂತಿದೆ 

ಅವಳು ಮತ್ತೆ ಬಾಲೆಯಮ್ಮ 

ಪುಟ್ಟ ಲಂಗ ತೊಟ್ಟ 

ತುಂಟ ನಗೆಯ ಪುಟ್ಟ 

ಬಾಲಳಮ್ಮ ಅವಳು ಪುಟ್ಟ ಬಾಲಳಮ್ಮ 



 

ಹಳೇ ಆಲ್ಬಂಅಲ್ಲಿ ಕಂಡ 

ಗುರುತಿಲ್ಲದ ಆ ಸಣ್ಣ ಹುಡುಗ 

ಇವನೇನ? 

ದಿಡೀರನೆ ಫೋಟೋ ನಡುವೆ 

ಮಬ್ಬಾಗಿ ಕಂಡವನು? 

ರೈಲು ಬರಲಿಕ್ಕೆ ಕಾದಿದ್ದೀನಿ 

ಆ ಮುದ್ದು ಮುಖ 

ಬೆಳೆದಾಗಲೂ ಹಾಗೇ ಉಂಟಲ್ಲ 

ಪರಿಚಯವುಂಟೋ ಅವಗೆ ಈಗ ?

ರೇಶಿಮೆ ಲಂಗ ತೊಟ್ಟ 

ಗಲ್ಲೆನ್ನುವ ಗೆಜ್ಜೆಗೆ ಸಾಥಾದ 

ಜುಮುಕಿ ನಾದಕ್ಕೆ ಬೆರಗಾದ 

ಆ ಪುಟ್ಟ ಹುಡುಗಿ 


ಗುರುತು ಹಚ್ಚಾನ ಈಗ? 

ಸ್ಥನ ಭಾರಕ್ಕೆ ಬೆನ್ನುಬಾಗಿ 

ಕಬ್ಬಿಣದ ಕೋಲ ನೆಟ್ಟಿದ್ದಾರೆ 

ಕಪ್ಪಾಗಿದೆ, ಮಂದಹಾಸವೇನೂ ಇಲ್ಲ 

ಗೆಜ್ಜೆ ಜುಮುಕಿ ಸದ್ದೂ ಇಲ್ಲ 

ನನ್ನೆಡೆಗೆ ಅವನದೊಂದು ನೋಟ ಸಾಕಿತ್ತು 

ನನಗವನ ಗುರುತಿದೆ 

ಒಂದು ನೋಟ ಸಾಕಿತ್ತು 


ಬೆಟ್ಟೆದ ತುದಿಗೆ ಈ ಜೋರು ಮಳೆಯಲ್ಲಿ 

ತೋಯ್ದು ಒದ್ದೆಯಾಗಿ ಗಡಗಡ ನಡುಗುತ್ತಾ 

ನಡು ರಾತ್ರಿ ಒಂಟಿ ಮನೆ 

ಗುರುತು ಹಚ್ಚಿದ್ದಾನೆ ಹುಡುಗ ಈಗ 

“ಹುಡುಗ, ಮೈ ಬೆಚ್ಚಗಾಗಿಸಿಕೋ ಮೊದಲು 

ಬೆಂಕಿಯ ಬಿಸಿಯಿದೆ ಒಳಗೆ 

ದಣಿದಿದ್ದೀಯೆ 

ಮೊದಲು ಮಲಗು - 

ಆಮೇಲೆ ಎಚ್ಚರವಾಗುವೀಯಂತೆ” 


ಎದುರಲ್ಲಿ ಸುಂದರಕಾಲಿ: 

“ಸುಂದರಕಾಲಿ,  

ಕೆಂಪುದಾಸವಾಳದ ಆ ಕೊರಳಮಾಲೆ 

ರುಂಡಗಳೊಟ್ಟಿಗೆ ಜಗಳಕ್ಕಿಳಿದಿದೆ  

ನಾ ಕೆಂಪೆಂದು ನಾ ಕೆಂಪೆಂದು 

ಅದ ಕಂಡು ನೀ ಕೋಪಗೊಂಡಾಗ 

ಆ ಕಣ್ಣ ಕೆಂಪು 

ಜಗವ ಕೆಂಪಾಗಿಸಿದೆ.” 


ಕೆಂಪುಬೆಟ್ಟ

 ೦೧  

ಹಕ್ಕಿ ಅನಾಮಧೇಯ ಆಗಬಾರದೂ 

ಎಂದೋ ಏನೋ 

ಮನೆ ಸೇರಿ ಕೂಗಹತ್ತಿದ 

ಧ್ವನಿಗೆ ಶಬ್ಧಕ್ಕೆ 

ಕೆಂಪು ಬೆಟ್ಟದ ತುಂಬೆಲ್ಲಾ ಬಿಸಿಗಾಳಿ ಹಬ್ಬಿ 

ಮರಕ್ಕೆ ಮರ ತಾಗಿ 

ಹೊತ್ತಿ ಉರಿಯಿತು ಕಾಡು 

ಕೆಂಪು ಬೆಟ್ಟ ಕೆಂಪಾಗುರಿಯಿತು 

ಹಕ್ಕಿ ಹೆಣೆದ ಯಾರೂ ಇಲ್ಲದ 

ಗೂಡು ಸುಡುವ ಮುನ್ನ 

ಯಾರೋ ಅದನ ಅಲಂಕಾರಕ್ಕೆಂದು 

ಮಾರಲಿಕ್ಕೆ ಕೊಯ್ದು ತಂದಿದ್ದರು 

ಕೆಂಪುಬೆಟ್ಟ ಕೆಂಪಾಗುರಿಯಿತು 

ಅದರ ಪಾಡಿಗದು ಫಳ ಫಳ ಹೊಳೆಯುತ 

ಬೆಂಕಿ ಆರಿದರೂ 


೦೨ 

ಆ ಉದ್ಧಾನೆ ಉದ್ಧ ರಸ್ತೆಯ 

ಇಕ್ಕೆಲಗಳಲ್ಲೂ ಬಳಿಯುತ್ತಿದ್ದ ಬಣ್ಣ 

ಕಪ್ಪು ಬಿಳಿ ಕಪ್ಪು ಬಿಳಿ 

ಕೆಂಪುಬೆಟ್ಟದ ಕೆಂಪೆಲ್ಲಾ 

ಆಕಾಶಕ್ಕೆ ಚಿಮ್ಮಿತ್ತು ಆ ಸಂಜೆಯಲ್ಲಿ 

ಆ ಕಪ್ಪು ಬಿಳಿ ಬಣ್ಣವೂ ಚಿಮ್ಮಿತ್ತು 

ಆ ಬಣ್ಣ ಬಳಿಯುವ ಹುಡುಗರೂ 

ಕಪ್ಪು ಬಿಳಿ ಬಣ್ಣದ ಉದ್ದನಿಲುವಂಗಿ 

ತೊಟ್ಟಿದ್ದಂತೇನೋ ನೆನಪು 


ನೀಲಿಹೂವು ಹಾಗೂ ರೂಮಿ


ರೂಮಿಯ ಕವನನಾದರೂ 

ಓದೇ ಹುಡುಗಿ 

ನಿನ್ನದೇ ಅನುವಾದವಿರಲಿ 

ಅವನ ಹುಡುಕಾಟವ ಹುಡುಕಲಿಕ್ಕೆ 

ಈ ಆಸುಪತ್ರೆಯೇ ಮೇಲಲ್ಲವೇ 

ನಿನ್ನಜ್ಜನ ಗುರುತೇನು ನೆನಪಿಲ್ಲವಲ್ಲೇ 

ಈಗಲಾದರೂ ಸಿಕ್ಕಾನೇನೋ 

ಯಮನ ತೋಟದಲ್ಲಿ 

ಬುಡ ಇಲ್ಲದಾ ಗಿಡದಲ್ಲಿ 

ನೀಲಿ ಹೂ ಒಂದು ಅರಳಿರುತ್ತಂತೆ 

ಯಮನಿಗೆ ಭೋ ಪರಾಕ್ ಹೇಳೋಕೆ 

ತಂದು ಕೊಡ್ತಿನಿ ಅದನ 

ಅಂದಿದ್ದವ ಬಾರಲೇ ಇಲ್ಲ 

ತೊಂಬಾತ್ತೈದು ದಾಟಿದವರ್ಯಾರೋ 

ಕೂಗುತ್ತಲೇ ಇದ್ದಾರೆ 

ಪಕ್ಕ ವಾರ್ಡಿನಲ್ಲಿ 

ದೊಡ್ಡ ಮಗ ಬರಲಿಲ್ಲೆಂದು  

ಚಿಕ್ಕ ಮಗನಿಗೆ ಮುನಿಸು 

ಸೊಸೆ ಬಿಟ್ಟಾಳೆಂದು 

ಮಗಳ ನೋವು 

ನಾ ಬದುಕಿರಬೇಕೇಕೆ 

ಎಂಬುದೆಲ್ಲರ  ಪ್ರಶ್ನೆ 

ಅವ ಬಾರಲೇ ಇಲ್ಲವಲ್ಲ 

ಈ ಹೊತ್ತಲ್ಲೂ 

ನೀಲಿ ಹೂವ ಹಿಡಿದು


ಬಸಿರಲ್ಲಿ ರಕ್ತ ಕಾರಿ ಸತ್ತ ಮಗಳಾಗಲೀ 

ಮತಿಗೆಟ್ಟು ಬೆಟ್ಟ ಹತ್ತಿ ಕೂಗುತ್ತಾ ಹೋದ ಮಗನಾಗಲೀ 

ಬಂದೇನೆಂದು ಎಂದೂ ಬಾರದ ತಂಗಿಯಾಗಲೀ 

ಯಾರೋ ಅಪ್ಪನ ಕಡೆಯವರು 

ಮತ್ತಿನ್ಯಾರೋ ಮಗನ ನೆಂಟರು 

ಯಾರೋ ಯಾರೋ 

ಯಾರೆಂದರೆ ಯಾರೂ ನೆನಪಿಲ್ಲವಲ್ಲೇ ಹುಡುಗಿ 

ಕಡೆಗೆ ರೂಮಿಗೂ ಹೀಗೆಯೇ ಆಗಿತ್ತಂತೇನೆ? 


ಯಮನ ತೋಟದ ನೀಲಿ ಹೂವ ಹಿಡಿದ ಆ 

 ಹುಡುಗ ಮತ್ತೆ ಮತ್ತೆ ಕಾಡುತಾನೆ 

ಕಾಡೆಲ್ಲಾ ಬೆಂಕಿ ಬಿದ್ದು ಉರಿದರೂನೂ 

ಹೂವ ಹಿಡಿದು ಬರುತಾನೆ 

ಒಮ್ಮೆ ಈ ಬಾಗಿಲು ತೆಗೆದಾಗ 

ಆಸುಪತ್ರೆಯ ಬಾಗಿಲು ತೆಗೆದಾಗ 

ರೂಮಿ ಬಂದಿದ್ದ 

ನನಗಾಗಿ 

ರೂಮಿ ಬಂದಿದ್ದ 

ನೀಲಿ ಹೂವ ತಂದವನ ಹುಡುಕಿ 

“ಎಲೇ ಹುಡುಗಿ 

ಅವ ಕೊಯ್ದು ತರಲಿಲ್ಲವೇ 

ನನ್ನಲ್ಲಿಂದ ಕದ್ದು ತಂದನೇ 

ತಿರುಗಿ ಕೊಡು ಆ ನನ್ನ ನೀಲೀ ಹೂವ 

ನನ್ನವಳು ಕಾದಿದ್ದಾಳೆ ಅಲ್ಲೆಲ್ಲೋ‌”

“ಕಾದಿದ್ದರೇನಂತೆ ? ಅದು ನೀಲೀ ಹೂ 

ತಂದವನು ನನ್ನವನು ನನಗಾಗಿ 

ಸಾಕಲ್ಲವೆ ಒಲ್ಲೆ ನಾ ಕೊಡಲಾರೆ” 


ಹುಡುಗಿ ನಿಲ್ಲಿಸು ನಿನ್ನ ಅನುವಾದವ 

ಓದಬೇಡ 

ರೂಮಿ ಆ ನೀಲಿ ಹೂ ಹೊತ್ತೊಯ್ದ 

ಆ ಹುಡುಗನನೂ ಕೊಂಡೊಯ್ದ 

ನಾನಿಲ್ಲಿ ನಾನಿಲ್ಲಿ ಈ 

ಆಸುಪತ್ರೆಯಲ್ಲಿ - 

ಕವನ ಬೇಡ ಹುಡುಗಿ 

ಬರಬಹುದೇನೋ 

ನೀಲಿ ಹೂವಿನೊಟ್ಟಿಗೆ ಆ ಹುಡುಗ