ನನಗೆ ಮೊದಲಿನಿಂದಲೂ ನಾಯಿಗಳೆಂದರೆ ಅತೀ ಪ್ರೀತಿಯೂ ಇಲ್ಲ, ಹಾಗಂತ ದ್ವೇಷವೂ ಇಲ್ಲ. ಮೃಣನ್ಮಯಿ ಆಗಾಗ ನಾಯಿಗಳೊಡನೆ ಆಡುವಾಗ, ಅವುಗಳನ್ನು ಮುದ್ದಿಸುವಾಗ ಅವುಗಳನ್ನು ಕಂಡರೆ ಹೊಟ್ಟೆ ಉರಿಯುತ್ತೆ. ಅವಳಿಗೆಂದೂ ನಾನು ನಾಯಿ ಮರಿಯನ್ನು ಕೊಡಿಸುವುದಿಲ್ಲವೆಂದೂ, ನಮ್ಮ ಮನೆಯಲ್ಲಿ ನಾಯಿ ಮರಿಯನ್ನು ಸಾಕಬಾರದೆಂದೂ, ಅವಳಿಗೆ ನಾಯಿಗಳನ್ನು ಕಂಡರೆ ಇಷ್ಟವೆಂದು ತಿಳಿದಂದೇ ತೀರ್ಮಾನಿಸಿದ್ದೇನೆ. ಆದರೂ ನಾನು ಕಂಡು ಕೇಳಿದ ನಾಯಿಯ ಕಥೆಗಳು, ನಾಯಿಗಳೊಡನೆ ಜೀವಿಸಿದ ವ್ಯಕ್ತಿಗಳು, ವೈಶಿಷ್ತ್ಯಗಳು ಹಲವು ಬಾರಿ ಸುಮ್ಮನೆ ಕೂತಿದ್ದಾಗ ಯಾವುದೋ ನಾಯಿ ನನ್ನನ್ನೇ ನೋಡಿ ಮೊದಲಿಗೆ ಬಾಲ ಅಲ್ಲಾಡಿಸಿ, ನಾನು ಅದರ ಕಡೆ ನೋಡದೇ ಇದ್ದಾಗ, ನನ್ನ ನೋಡಿ ಬೊಗುಳಿ ಅದೊಂದು ರೀತಿಯ ಗಾಂಭೀರ್ಯದಿಂದ ಕುಂಡಿ ತಿರುಗಿಸಿಕೊಂಡು ಹೋದಾಗೆಲ್ಲ , ಅದೆಷ್ಟೋ ಕಥೆಗಳು ಒಟ್ಟಿಗೆ ನೆನಪಾಗಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ನನ್ನೆದುರು ತೆರೆದುಕೊಳ್ಳುತ್ತವೆ.
ನನಗೀಗಲೂ ಯಾರಾದರೂ ಪುಟ್ಟ ಮಕ್ಕಳು ನಾಯಿ ಮರಿಗಳನ್ನು ಹೊತ್ತುಕೊಂಡು ಸಾಕುವುದನ್ನು ಕಂಡಾಗೆಲ್ಲ ನಾನು ಚಿಕ್ಕವನಾಗಿದ್ದಾಗ, ನನ್ನ ನೆನಪಿನಲ್ಲಿರದ ದಿನಗಳಲ್ಲಿ, ಎಂದಾದರೂ ನಾಯಿ ಮರಿಯನ್ನು ಹೀಗೆ ಕಂಕುಳಲ್ಲಿ ತಂದು ಸಾಕಿದ್ದೆನೆ ಎಂದು? ಮನೆಯಲ್ಲಿದ್ದ ಎಲ್ಲಾ ಫೋಟೋಗಳನ್ನು ತಡಕಿದಾಗ ಮೇಕೆ ಮರಿಯನ್ನು ಹಿಡಿದುಕೊಂಡು ತೆಗೆಸಿಕೊಂಡ ಫೊಟೋ ಇದೆಯಾದರೂ, ಎಲ್ಲಿಯೂ ನಾಯಿ ಮರಿಯ ಜೊತೆ ತೆಗೆಸಿಕೊಂಡ ಫೋಟೋಗಳಿರಲಿಲ್ಲ. ಅಮ್ಮನನ್ನು ಕೇಳಿದಾಗ ನಾನು ಎಂದಿಗೂ ಯಾವುದೇ ಸಾಕು ಪ್ರಾಣಿಯನ್ನು ಸಾಕಲಿಲ್ಲ ಎಂದೂ, ಬೇರೆ ಪ್ರಾಣಿಯ ಕತೆ ಹಾಗಿರಲಿ ನಾಯಿಯ ಮಟ್ಟಿಗಂತೂ ಎಂದೂ ಅವುಗಳ ಹತ್ತಿರವೂ ಹೋಗುತ್ತಿರಲಿಲ್ಲವೆಂದೂ ಹೇಳಿದಳು. ನಮ್ಮ ಮನೆಯಲ್ಲಿ ಬೇರೆ ಯಾರೂ ಸಾಕಿದ ನೆನಪೂ ನನಗಿಲ್ಲವಾಗಿ ಅಮ್ಮನನ್ನು ಕೇಳಿದಾಗ ತಿಳಿದದ್ದು ನಾಯಿಯ ಬಗೆಗಿನ ಮೊದಲ ಕತೆ.
ನನ್ನ ಮಾವ ಒಂದು ನಾಯಿ ಸಾಕಿದ್ದರಂತೆ. ಬಹಳ ದಷ್ಟಪುಷ್ಟವಾಗಿ ಬಹಳ ಚುರುಕಾಗಿದ್ದ ನಾಯಿಯದು. ನಮ್ಮದು ಹಳ್ಳಿಯಾದದ್ದರಿಂದ ಆಗೆಲ್ಲ ಈಗಿನಂತೆ ಆದುನಿಕ ನಾಯಿಗಳಿರಲಿಲ್ಲ. ಊರಲ್ಲಿ ಇದ್ದದ್ದು ಇರುತ್ತಿದ್ದದ್ದು ಸಹಜವಾಗಿ ಓಡಾಡಿಕೊಂಡಿರುವ ಬೀದಿ ನಾಯಿಗಳು ಅಷ್ಟೆ. ಅದೂ ಸಾಕುವುದು ಅಂದರೆ ಏನು? ದೊಡ್ಡದೊಂದು ಚೈನು ಹಾಕಿ ಎಳೆಯುವುದು, ಅದಕ್ಕೆ ಒಂದು ದೊಡ್ಡ ಜೈಲಿನಾಕಾರದ ಮನೆ ಮಾಡಿ ಅದರಲ್ಲಿ ಕೂಡಿ ಹಾಕಿ ದಿನಾ ಬೆಳಿಗ್ಗೆ ಸಂಜೆ ಹೊರಗೆ ಕರೆದೊಕೊಂಡು ಹೋಗುವುದು, ಹೀಗೆಲ್ಲ ಇರಲಿಲ್ಲ. ಯಾವಗಲೋ ಮರಿಯಾಗಿದ್ದಾಗ ಬೇರೆ ಯಾವುದೋ ನಾಯಿ ಇದನ್ನು ಕಚ್ಚಲು ಬಂದಾಗ ನನ್ನ ಮಾವ ಆ ದೊಡ್ಡ ನಾಯಿಯನ್ನು ಓಡಿಸಿರಬೇಕು, ಈ ಮರಿ ನಾಯಿ ಕುಯ್ಯೋ ಅಂದಾಗ ಒಳಗಿನ ಉಳಿದ ಒಂದು ರಾಗಿ ಮುದ್ದೆ ಚೂರನ್ನೋ , ಅನ್ನದ ಗಟ್ಟಿಯನ್ನೋ ತಂದು ಹಾಕಿರಬೇಕು. ಇಷ್ಟಕ್ಕೇ ಆ ನಾಯಿ ನಮ್ಮ ಮನೆಯನ್ನ ಬಿಟ್ಟು ಹೋಗುತ್ತಿರಲಿಲ್ಲ. ರಾತ್ರಿ ಉಳಿದ ಅನ್ನ ಮುದ್ದೆ ಎಲ್ಲವೂ ಅದಕ್ಕೇ ಆದರೂ , ಅದೇನೂ ನಮ್ಮ ಅನ್ನಕ್ಕೆ ಕಾದು ಕುಳಿತಿರುತ್ತಿರಲಿಲ್ಲ. ಅದೆಷ್ಟೋ ಬಾರಿ ಹಾಕಿದರೂ ತಿನ್ನುತ್ತಿರಲಿಲ್ಲ. ಹೊರಗೆ ಸ್ವಚ್ಚಂದವಾಗಿ ಓಡಾಡಿ ರಾತ್ರಿ ಮಾತ್ರ ತಪ್ಪದೇ ಬಂದು ಮನೆಯ ಓಣಿಯಲ್ಲಿ ಮಲಗಿರುತ್ತಿತ್ತು.
ಆಗಲೇ ಊರಿಗೆ ಮೊಟ್ಟ ಮೊದಲ ಬಾರಿಗೆ ಟೀವಿ ಬಂದದ್ದು. ಊರಿನಲ್ಲಿ ಬಹಳ ಶ್ರೀಮಂತರು ಎಂದು ಹೇಳಿಕೊಳ್ಳುವ ಸುಬ್ಬಣ್ಣನ ಮನೆಗೆ ಆಗ ಟೀವಿ ಬಂದದ್ದು. ಸಹಜವಾಗಿ ಊರವರೆಲ್ಲರಿಗೂ ಅದು ಮುಖ್ಯ ವಿಚಾರವೇ ಆಗಿತ್ತು. ಎಷ್ಟೋ ಜನಕ್ಕೆ ಟೀವಿ ಎಂಬುದೊಂದಿದೆ, ಅದರಲ್ಲೇನೆಲ್ಲವನ್ನು ನೋಡಬಹುದು ಎಂದೆಲ್ಲ ಕೇಳಿ ತಿಳಿದಿದ್ದ ಜನರಿಗೆ ಅದನ್ನು ಈಗ ಪ್ರತ್ಯಕ್ಷವಾಗಿ ನೋಡುವುದೇ ಭಾಗ್ಯವೆನಿಸಿತ್ತು. ನೀರಿಗೆ ಬರುವ ಹೆಂಗಸರ ಮಾತಿಗೆ ಹೊಸದೊಂದು ವಿಷಯ ಸೇರ್ಪಡೆಯಾಯಿತು. ಆ ಟೀವಿಯನ್ನು ಸುಬ್ಬಣ್ಣ ಮನೆಯ ಹೊರಗಿನ ರೂಮಿನಲ್ಲಿ, ತನಗೆ ಮಲಗಲು ವ್ಯವಸ್ಠೆ ಮಾಡಿಕೊಂಡು, ಕಿಟಕಿಯಿಂದ ಹೊರಗಿನ ಜನಕ್ಕೆ ಕಾಣುವಂತೆ ಮಾಡಿದ್ದರು. ಊರ ಜನ ಟೀವಿ ನೋಡಲು ಬಂದಾಗ ತಾನು ಕಾಲು ಕುಣಿಸುತ್ತ ಟೀವಿ ನೊಡುತ್ತಿರುವುದನ್ನು, ಜನರಿದ್ದಾರೆ ಎಂದು ಗೊತ್ತಿದ್ದರೂ ಟೀವಿಗೆ ಅಡ್ಡಲಾಗಿ ಕೈ ಕಾಲು ಆಡಿಸುವುದು, ಅಡ್ಡಲಾಗಿ ಓಡಾಡುವುದು ಹೀಗೆಲ್ಲಾ ಮಾಡುತ್ತಿದ್ದ. ಅದನ್ನು ಯಾರಿಗೂ ದನಿ ಎತ್ತಿ ಹೇಳಲಾಗುತ್ತಿರಲಿಲ್ಲ. ಸುಬ್ಬಣ್ಣನ ಮಾತನ್ನು ಎದುರಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಈ ಟೀವಿ ತರಲು ಅವರು ಪೇಟೆಗೆ ಹೋಗಿದ್ದಾಗ, ಟೀವಿ ಕೊಡಿಸಿದ ಅವನ ಗೆಳೆಯನ ಮನೆಯಲ್ಲಿ ನಾಯಿ ಸಾಕಿದ್ದನ್ನು ಕಂಡವನಿಗೆ, ಮನೆಯಲ್ಲಿ ಕಟ್ಟಿ ಹಾಕಿ ನಾಯಿ ಸಾಕುವುದು ಘನತೆಯ ವಿಷಯವಾಗಿ ಕಂಡಿರಬೇಕು. ಟೀವಿ ಬಂದ ದಿನವೇ ಅವರ ಮನೆಯಲ್ಲಿ ಒಂದು ನಾಯಿ ತಂದು ಕಟ್ಟಿ ಹಾಕಿದ್ದರು.. ಅದನ್ನು ತಾನು ಪೇಟೆಯಿಂದ ದುಡ್ಡು ಕೊಟ್ಟು ತಂದದ್ದೆಂದೂ, ಇಂಗ್ಲೀಷ್ ನಾಯಿಯೆಂದು ಹೇಳಿದರೂ, ನಮ್ಮ ಊರಿನ ನಾಯಿಗಳಂತೆಯೇ ಅದೂ ಇದ್ದುದರಿಂದ ಎಲ್ಲೋ ಪಕ್ಕದ ಊರಿಂದ ಕದ್ದು ತಂದದ್ದೆಂದೇ ಎಲ್ಲರೂ ನಂಬಿದ್ದದ್ದು.
ಆ ನಾಯಿಯೊ ಸದಾ ಜೋರಾಗಿ ಬೊಗಳುತ್ತಿರುತ್ತಿತ್ತು. ಟೀವಿ ನೊಡಲು ಜನ ಕೂತರೆ ಆ ನಾಯಿಯ ಬೊಗಳುವಿಕೆಯ ಸದ್ದಿನಲ್ಲಿ ಏನೂ ಕೇಳುತ್ತಿರಲಿಲ್ಲವಾದರೂ ಬೊಂಬೆ ನೋಡಿ ಖುಷಿ ಪಡುತ್ತಿದ್ದರು. ನನ್ನಮ್ಮನೂ ಆಗಾಗ ಟೀವಿ ನೋಡಲು ಆ ಮನೆಗೆ ಹೋಗುತ್ತಿದ್ದಳು. ನಾನಾಗ ಚಿಕ್ಕ ಹುಡುಗ. ಯಾವಾಗಲೋ ಏನೋ ನನ್ನನ್ನು ಕರೆದುಕೊಂಡು ಹೋದಾಗ ನಾನು ಅತ್ತೆನೋ, ಕೂಗಿದೆನೋ ಒಟ್ಟಿನಲ್ಲಿ ಏನೋ ಗಲಾಟೆ ಮಾಡಿದೆನಂತೆ. ಈ ಸುಬ್ಬಣ್ಣನೋ ಎದ್ದವನೇ ಈ ಜನ ಯಾಕಾಗಿ ಮಕ್ಕಳನ್ನ ಹಡೀತಾರೋ ಸುಮ್ಮನೆ ಕಿರಿಕಿರಿ ಅಂತ ಜೋರಾಗಿ ಬೈದದ್ದೇ ಅಮ್ಮ ಕೇಳಿಸಿಕೊಂಡು ಅಳುತ್ತ ಅಮ್ಮ ಮನೆಗೆ ಬಂದರು. ಅಪ್ಪನಿಗೆ ಗೊತ್ತಾಗುವ ಮುಂಚೆಯೇ ಮಾವನಿಗೆ ಈ ವಿಷಯ ತಿಳಿದಿತ್ತು. ಅಪ್ಪನಿಗೆ ತಿಳಿದರೂ ಅಪ್ಪ ಸಮಾಧಾನ ಪಡಿಸಿದರೆ, ಮಾವನೋ ಹುಟ್ಟಾ ಕ್ರಾಂತಿಕಾರಿ. ಅದೆಲ್ಲಿ ದುಡ್ಡಿಟ್ಟಿದ್ದನೋ ಒಂದೇ ತಿಂಗಳಲ್ಲಿ ನಮ್ಮ ಮನೆಗೂ ಟೀವಿ ಬಂದಿತು, ಅದೇ ಸಮಯದಲ್ಲೇ ಈ ನಾಯಿಯೂ ಮನೆ ಸೇರಿದ್ದು.
ಇಂತಹ ನಾಯಿಗೆ ಯಾರೋ ಅನ್ನದಲ್ಲಿ ವಿಷ ಹಾಕಿ ಕೊಂದು ಹಾಕಿದರು. ಅಂದು ಮಾವ ಎದ್ದಾಗ ನಾಯಿಯ ಶವವನ್ನು ನೋಡಿ ಆ ಊರಲ್ಲಿ ಇರಲಿಕ್ಕಾಗದೆ ಊರು ಬಿಟ್ಟು ಪಟ್ಟಣ ಸೇರಿದ. ಮುಂದಿನದೆಲ್ಲ ದೊಡ್ಡ ಕತೆ. ಹಳ್ಳಿಗೆ ಎಂದೂ ಮಾವ ಹಿಂದಿರುಗಲಿಲ್ಲ. ಮಾವ ಊರು ಬಿಡಲು ಸಿದ್ಧರಾಗಿ ಯಾವುದೋ ಸನ್ನಿವೇಷಕ್ಕಾಗಿ ಕಾಯುತ್ತಿದ್ದರೇ? ನಾಯಿಯ ಸಾವು ಅವರನ್ನು ಊರಿನಿಂದ ಬಿಡಿಸಿತೇ? ಇಷ್ಟಕ್ಕೂ ನಾಯಿಯನ್ನು ಕೊಂದವರು ಯಾರು? ಯಾವುದಕ್ಕೂ ಉತ್ತರಗಳು ದೊರೆಯುವುದಿಲ್ಲ. ಹೀಗೆ ಬಂದ ನಾಯಿ ಸತ್ತಿತು, ಮಾವ ಒಂದು ದಿನ ಪೇಟೆಯಲ್ಲಿ ಬೈಕಿನಲ್ಲಿ ಹೋಗುವಾಗ ಎದೆನೋವೆಂದು ಬಿದ್ದು ಸತ್ತ. ಸುಬ್ಬಣ್ಣ ಯಾವುದೋ ಕಾಯಿಲೆಯೆಂದು ಕಣ್ಣು ಕಾಣದೆ, ಕಿವಿ ಕೇಳದೆ, ಮಂಚದಲ್ಲಿಯೇ ವರ್ಷಾನುಗಟ್ಟಲೆ ಜೀವವನ್ನ ನೂಕಿ ಕಡೆಗೆ ಸತ್ತ. ಅವನು ತಂದ ಟೀವಿ, ನಮ್ಮ ಮಾವ ತಂದ ಟೀವಿ ಎರೆಡನ್ನೂ ಗುಜರಿಗೂ ಯಾರೂ ಕೊಳ್ಳುವವರಿಲ್ಲ. ಇವೆಲ್ಲವುಗಳ ಮಧ್ಯದಲ್ಲಿ ಹಲವು ಕಾದಂಬರಿಗಳಾಗುವಷ್ಟು ಸಂಗತಿಗಳು ಹೊಕ್ಕು ಕೂತಿರುವುದಂತೂ ನಿಜ.
----------------------------------------------------------------------------------------------
----------------------------------------------------------------------------------------------
ನಾಯಿಯ ಕುರಿತಾದ ಮತ್ತೊಂದು ಕತೆ ನಡೆದದ್ದು ಮಯಿಯ ಮನೆಯಲ್ಲಿ. ಇದನ್ನ ಮಯಿ ನನಗೆ ಹೇಳಿದ್ದು. ಅವರ ಮನೆಯಲ್ಲೂ ನಾಯಿ ಸಾಕಿದ್ದರು. ಅವರ ಊರು ಹಳ್ಳಿಯಲ್ಲ ಜಿಲ್ಲಾ ಕೇಂದ್ರ. ಮನೆಗೆ ಒಂದು ದಿನ ಕುಯ್ಯೋ ಕುಯ್ಯೋ ಎನ್ನುತ್ತ ಒಂದು ನಾಯಿ ಮರಿ ಬಂದಿತ್ತು. ಆಗ ಮಳೆ ಬೇರೆ. ಆ ನಾಯಿಯ ಸ್ಥಿತಿಯನ್ನು ನೋಡಿ, ಮನೆಯ ಮುಂದಿನ ಸ್ವಲ್ಪ ಜಾಗದಲ್ಲಿ, ಮಳೆ ನೀರು ಬೀಳದ ಜಾಗದಲ್ಲಿ, ಚೀಲವೊಂದನ್ನು ಹಾಕಿ, ಬಟ್ಟಲಲ್ಲಿ ಹಾಲು ತಂದು ಕೊಟ್ಟದ್ದು ಮಯಿಯ ಅಮ್ಮ ಇಂದ್ರಮ್ಮ. ಆ ಜಾಗವನ್ನೇ ನಾಯಿ ಅದರ ಸಾಮ್ರಾಜ್ಯವಾಗಿ ಸ್ಥಾಪಿಸಿಕೊಂಡು ಬಿಟ್ಟಿತು. ನಿತ್ಯ ಎಲ್ಲೇ ತಿರುಗಿದರೂ, ಎಲ್ಲಿಗೇ ಹೋದರೂ, ರಾತ್ರಿ ಎಂಟು ಗಂಟೆಗೆಲ್ಲಾ ಮನೆಯ ಬಳಿ ಬಂದು ಬೊಗಳಿ ತನಗೆ ಊಟ ಹಾಕುವವರೆಗೂ ಮಾಡಬಾರದ ನಾಟಕ ಮಾಡಿ ನಂತರ ತಿಂದು ಅದೇ ಚೀಲದ ಮೇಲೆ ಮಲಗುತ್ತಿತ್ತು. ನಾಯಿ ಎಂದಿಗೂ ಮನೆಯೊಳಗೆ ಬರುತ್ತಿರಲಿಲ್ಲ.
ಒಮ್ಮೆ ಇಂದ್ರಮ್ಮನಿಗೆ ಆರೋಗ್ಯ ಕೆಟ್ಟಿತು, ಸರಳವಾಗಿ ಮನೆ ಮದ್ದಿಗೆ ಸರಿಹೋಗಬಹುದಾದ ಕಾಯಿಲೆಯಾಗಿ ಆರಂಭವಾದದ್ದು ಬಹು ಬೇಗ ವಿಚಿತ್ರ ನೋವನ್ನುಂಟು ಮಾಡತೊಡಗಿತು. ತೀವ್ರವಾದ ತಲೆ ನೋವು ಹಾಗು ಸುಸ್ತು. ಹಲವು ವೈದ್ಯರಿಗೆ ತೋರಿಸಿದರೂ ಉಪಯೋಗವಾಗಲಿಲ್ಲ. ಮುಖ್ಯವಾಗಿ ಕಾಯಿಲೆ ಏನೆಂಬುದೇ ಯಾವ ವೈದ್ಯರಿಗೂ ತಿಳಿಯಲಾಗಲಿಲ್ಲ. ಮನೆಯವರು ಸ್ವಲ್ಪ ಸ್ಥಿತಿವಂತರಾದುದ್ದರಿಂದ ಇದ್ದ ಬದ್ದ ವೈದ್ಯರಿಗೆಲ್ಲಾ ತೋರಿಸಿದ್ದಾಯಿತು. ಆರೋಗ್ಯ ಒಂದೇ ಸಮನೆ ಹದಗೆಡುತ್ತಾ ಹೋಯಿತೆ ವಿನಃ ಸುದಾರಿಸಲಿಲ್ಲ. ವೈದ್ಯರ, ಆಸ್ಪತ್ರೆಗಳ ಕಾಟ ತಾಳಲಾರದೆ ಇನ್ನು ಯಾವ ವೈದ್ಯರೂ ಬೇಡ ಯಾವ ಆಸ್ಪತ್ರೆಯೂ ಬೇಡ, ಇದ್ದರೆ ಈ ಮನೆಯಲ್ಲಿ ಇರುವುದು, ಇಲ್ಲ ಸಾಯುವುದು ಎಂದು ತೀರ್ಮಾನಿಸಿ ಮನೆಯಲ್ಲೇ ಇರಲು ನಿರ್ದರಿಸಿದರು. ಯಾರು ಎಷ್ಟೇ ಹೇಳಿದರೂ ಕೇಳಲಿಲ್ಲ. ನೋವು ಯಾತನೆ ಹೆಚ್ಚುತ್ತಾ ಹೋಯಿತು, ಕಡಿಮೆಯಾಗಲೇ ಇಲ್ಲ. ಅವಳಿಗೋ ಬದುಕುವ ಆಸೆ. ಮನೆಯಲ್ಲಿ ಆಡಿಕೊಂಡಿರುವ ಪುಟ್ಟ ಹೆಣ್ಣು ಮಗು. ನಿತ್ಯ ನೋವು ಗೋಳಾಟ. ಇದ್ದ ಬದ್ದ ದೇವರುಗಳನ್ನೆಲ್ಲಾ ನೋಡಿ ಬಂದರೂ ನೋವು ಕಡಿಮೆಯಾಲಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಇಂದ್ರಮ್ಮ ನಾಯಿಗೆ ಊಟ ಹಾಕುವುದನ್ನು ಎಂದೂ ಮರೆತಿರಲಿಲ್ಲ. ಜೊತೆಗೆ ಯಾವುದೋ ಒಂದು ಮದ್ಯಾಹ್ನ ಅದರ ಜೊತೆಗಾಡುತ್ತ ಯಾವ ಯಾವುದೋ ಹೆಸರುಗಳಿಂದ ಕೂಗುತ್ತಾ ಇರಬೇಕಾದರೆ ಒಂದು ಹೆಸರಿಗೆ ಈ ನಾಯಿ ತಿರುಗಿದ್ದನ್ನು ಕಂಡು ಅದೇ ಇದಕ್ಕೆ ಸರಿಯಾದ ಹೆಸರೆಂದು ಅದಕ್ಕೊಂದು ಹೆಸರನ್ನೂ ಇಟ್ಟಿದ್ದಳು.
ಯಾರಿಗೂ ಏನೂ ತಿಳಿಯದ ಸ್ಥಿತಿ ತಲುಪಿದಾಗ ಇಂದ್ರಮ್ಮ ಸಾಯುವುದೆಂದೇ ನಿರ್ಧಾರವಾಗಿತ್ತು. ಒಂದು ದಿನ ನೋವು ವಿಪರೀತವಾದಾಗ ಅವಳಿಗೆ ತಾನು ಇಂದು ಸಾಯುವುದೇ ಸರಿ ಎಂದು ಅನ್ನಿಸಿತ್ತು. ಮನೆಯ ಮುಂದೆ ಅವಳೇ ಹೆಸರಿಟ್ಟಿದ್ದ ನಾಯಿ ಹಾಗೆ ಮಲಗಿತ್ತು. ನೋವು ತೀವ್ರವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಇಂದ್ರಮ್ಮನನ್ನು ಹೇಗಾದರೂ ಆಸ್ಪತ್ರೆಗೆ ಸೇರಿಸೋಣವೆಂದರೂ ಅವರಿಗಾಗಲಿಲ್ಲ. ಮನೆಯವರೆಲ್ಲಾ ಏನೂ ದಿಕ್ಕು ತೋಚದೆ ಕೂತಿದ್ದರು. ಮಯಿ ಆಗ ಚಿಕ್ಕ ಹುಡುಗಿ. ಸಾವು, ನೋವು, ಬದುಕು ಯಾವುದರ ಅರಿವೂ ಇರದ ಪುಟ್ಟ ಹುಡುಗಿ. ಅವಳಿಗೆ ಅವಳ ಅಮ್ಮ ಯಾಕೋ ಹೀಗೆ ಮಲಗಿದ್ದಾಳೆ. ಅವಳಿಗೇನೋ ಆಗಿದೆ. ಅವಳು ಖುಶಿಯಾಗಿಲ್ಲ. ಇಷ್ಟೆ ಗೊತ್ತಿದ್ದದ್ದು. ಅವಳಮ್ಮನ ಆ ಸ್ಥಿತಿ ಅವಳು ನೋಡದಿರಲೆಂದು ಅವರಜ್ಜಿ ಅವಳನ್ನು ಮನೆಯ ಹೊರಗಿನ ಮೆಟ್ಟಿಲುಗಳ ಮೇಲೆ ಕೂರಿಸಿ ಬಂದಿದ್ದಳು. ಮನೆಯ ಮುಂದಿದ್ದ ನಾಯಿ ಅವಳೆಡೆಗೇ ಬರಲು ಪ್ರಯತ್ನಿಸುತ್ತಿತ್ತು. ಮಯಿಯೆಂದೂ ಈ ನಾಯಿಯೊಡನೆ ಮಾತಾಡಿರಲಿಲ್ಲ, ಮುದ್ದಿಸಿರಲಿಲ್ಲ, ಆಟವಾಡಿರಲಿಲ್ಲ. ನಾಯಿಯೆಂದರೆ ಅವಳಿಗಾಗ ಭಯ. ನಾಯಿಯನ್ನು ಕಂಡು ಹೆದರಿ ದೂರ ಸರಿದರೂ ಸಹ, ಅವಳೆಡೆಗೆ ಬರುತ್ತಿದ್ದ ನಾಯಿ ನೇರ ಬಂದು ಅವಳ ತೊಡೆಯೆಮೇಲೆ ಮಲಗಿ ಪ್ರಾಣ ಬಿಟ್ಟಿತು. ಒಳಗೆ ಜೋರಾಗಿ ಉಸಿರೆಳೆದುಕೊಂಡ ಇಂದ್ರಮ್ಮ ಕಣ್ಣು ತೆರೆದಿದ್ದಳು. ನಾಯಿ ಹೀಗೆ ಸತ್ತದ್ದನ್ನು ಕಂಡು ಗಾಬರಿಯಾದ ಮಯಿ ಜೋರಾಗಿ ಕಿರುಚಿದ ಶಬ್ದ, ಇಂದ್ರಮ್ಮ ಉಸಿರೆಳೆದುಕೊಂಡ ಶಬ್ದದೊಡನೆ ಹೊಂದಿಕೆಯಾಗಿ ಯಾರಿಗೆ ಏನಾಯಿತು ಎಂದೇ ಉಳಿದವರಿಗೆ ತಿಳಿಯಲಿಲ್ಲ. ಹೊರಗೆ ಕಿರುಚಿ ಕೊಂಡ ಮಯಿಯನ್ನ ನೋಡಲು ಹೊರಗೆ ಬಂದಾಗಲೇ ತಿಳಿದದ್ದು, ಅವಳ ತೊಡೆಯ ಮೇಲೆ ಮಲಗಿ ಅವರ ಮನೆಯ ನಾಯಿ ಸತ್ತಿದೆ ಎಂದು. ಅದಾದ ನಂತರ ಇಂದ್ರಮ್ಮನ ಆರೋಗ್ಯ ಸರಿಹೋಯಿತು. ಅವರು ಈಗ ಆರಾಮಾಗಿದ್ದಾರೆ. ಈಗಲೂ ಮನಯ ಬಳಿ ಆಗಾಗ ಬರುವ ನಾಯಿಗಳಿಗೆ ಹೆಸರಿಡುವುದನ್ನು ಮರೆತಿಲ್ಲ. ಯಾವ ನಾಯಿಯಾದರೂ ತಾನು ಬದುಕುಳಿದ ದಿನ ಸತ್ತ ನಾಯಿಯ ಹೆಸರಿಂದ ಕರೆದಾಗ ತಿರುಗಿ ನೋಡುತ್ತಾ ಎಂಬುದು ಅವಳ ಆಸೆ.
----------------------------------------------------------------------------------------
----------------------------------------------------------------------------------------
ಇನ್ನೂ ಅದೆಷ್ಟೋ ಕತೆಗಳಿವೆ. ನಾಯಿಗಳು ಮನುಷ್ಯ ಸಮಾಜದೊಳಗೆ ಬಹು ಹತ್ತಿರದಲ್ಲಿ ಬದುಕುವ ಪ್ರಾಣಿಗಳಾದುದರಿಂದ, ಮನುಷ್ಯ ಚಟುವಟಿಕೆಯ ಹಲವು ಸ್ಥರಗಳಲ್ಲಿ, ವೇದಿಕೆಗಳಲ್ಲಿ ಇವುಗಳ ಸಹಭಾಗಿತ್ವ ಕಾಣುತ್ತೆ. ಹಾಗಾಗಿ ಹಲವು ಕತೆಗಳಿವೆ. ಆದರೂ ಇದೊಂದು ಕತೆ ಹೇಳಿ ಈ ಬರಹವನ್ನು ಮುಗಿಸುತ್ತೇನೆ. ಈ ಕತೆ ನಾನೂ ಮಯಿ ಒಮ್ಮೆ ಒಬ್ಬರ ಮನೆಗೆ ಹೋದಾಗ ನಡೆದದ್ದು. ಈ ಕತೆ ಅವರಿಗೆ ಸಂಬಂಧಿಸಿದ್ದು. ನಾವು ಕಂಡದ್ದು.
ನಾವು ಅವರ ಮನೆಯ ಗೇಟನ್ನು ತೆರೆದಾಗ ಮೊದಲಿಗೆ ಗಾಬರಿಯಾದದ್ದು ಅಲ್ಲಿದ್ದ ನಾಯಿಗಳು. ಒಂದು ಎರಡಲ್ಲ, ಹನ್ನೆರಡು ನಾಯಿಗಳು. ಬೇರೆ ಬೇರೆ ಜಾತಿಯವು. ಅವುಗಳ ಮರಿಗಳೂ ಉಂಟು. ಎಲ್ಲಾ ವಯಸ್ಸಿನ ನಾಯಿಗಳು. ಮರಿ ನಾಯಿ, ಮುದಿ ನಾಯಿ, ರೋಗಗ್ರಸ್ಠ ನಾಯಿ , ಹೆಣ್ಣು ನಾಯಿ, ಗಂಡು ನಾಯಿ ಹೀಗೆ. ಒಮ್ಮೆಲೆ ಇಷ್ಟೊಂದು ನಾಯಿಗಳನ್ನು ಹೀಗೆ ಎಂದಿಗೂ ಕಂಡಿರದ ನನಗೆ ಒಮ್ಮೆಗೇ ಅಚ್ಚರಿ ಭಯ ಆದದ್ದುಂಟು. ಎಲ್ಲವೂ ಒಟ್ಟಿಗೆ ಮೇಲೆ ಬರುವ ರೀತಿ ಕಂಡರೂ ಮನೆಯವರು ಒಂದು ಮಾತು ಹೇಳಿದ್ದೇ ಎಲ್ಲಾ ಒಂದೊಂದು ದಿಕ್ಕಿಗೆ ಹೋದವು. ಯಾವ ನಾಯಿಯನ್ನೂ ಕಟ್ಟಿ ಹಾಕಿರಲಿಲ್ಲ. ಯಾವ ನಾಯಿಗೂ ಅದರದೇ ಎಂದು ಪ್ರತ್ಯೇಕ ಸ್ಥಳಗಳಿರಲಿಲ್ಲ, ಎಲ್ಲ ನಾಯಿಗಳೂ ಬೇಕಾಬಿಟ್ಟಿ ಸ್ವಚ್ಚಂದವಾಗಿ ಓಡಾಡಿಕೊಂಡಿದ್ದವು. ಎಲ್ಲವೂ ತಮ್ಮದೇ ರಾಜ್ಯವೆಂದು, ತಾವೇ ರಾಜರೆಂಬಂತೆ ಓಡಾಡಿಕೊಂಡಿದ್ದವು. ಹೀಗೆ ಅವೆಲ್ಲವೂ ಒಟ್ಟಿಗೆ ಓಡಾಡುವುದನ್ನು ಒಮ್ಮೆ ನೋಡುವುದೇ ಚಂದ ಎಂದೆನಿಸಿದರೂ ಎಲ್ಲಿ ಒಮ್ಮೆಲೇ ಎಲ್ಲವೂ ಮೇಲೆ ಎರಗಿದರೆ ಎಂಬ ಭಯವೂ ಕಾಡಿದ್ದಿದೆ.
ಹೀಗೆ ಮನೆಯಲ್ಲಿನ ನಾಯಿಗಳನ್ನ ನೋಡುತ್ತ ಇರಬೇಕಾದರೆ ನನಗೆ ಆಶ್ಚರ್ಯವೆನಿಸಿದ್ದು ಆ ಮನೆಯಲ್ಲಿನ ಅಜ್ಜಿ. ಅಜ್ಜಿಯದು ಒಂದು ಸುಂದರವಾದ ಕತೆ. ಅವೆಲ್ಲವನ್ನೂ ಹೇಳುತ್ತಾ ಕೂತರೆ ಒಂದು ಮಹಾಕಾವ್ಯವೇ ಆದೀತೋ ಏನೋ. ಹಾಗಂತ ಹಲವೊಮ್ಮೆ ಅಜ್ಜಿಯೇ ಹೇಳುವುದೂ ಇದೆ. "ಅಯ್ಯೋ, ನನ್ನ ಕತೆಯೆ, ಹೇಳೋಕೆ ಕೂತರೆ ಅದೊಂದು ಭಾರತ್ವನ್ನೋ, ರಾಮಾಯಣವನ್ನೋ ಮೀರಿಸುತ್ತೆ" ಅಂತ. ಒಂದಿಷ್ಟು ಆಸಕ್ತಿಯ ಸಂಗತಿಗಳನ್ನಂತೂ ಹೇಳಬಹುದು. ಆ ಊರಿಗೆ ಮೊದಲ ಬಾರಿಗೆ ರೈಲು ಬರುವ ದಿನವೇ ಅಜ್ಜಿಯ ಮದುವೆ . ಹಾಗಾಗಿ ಮದುವೆಗೆ ಅಂತ ಬಂದ ಜನರೆಲ್ಲರಿಗೂ ರೈಲು ನೋಡುವ ಸಂಭ್ರಮ. ಎಲ್ಲರೂ ಮದುವೆ ಮನೆ ಬಿಟ್ಟು ರೈಲು ನೋಡೋ ಜಾಗಕ್ಕೆ ಹೋಗೋದೆ. ಮದುವೆ ಮನೆಯಲ್ಲಿ ಜನ ಇಲ್ಲದಿದ್ದರೂ ಪರವಾಗಿಲ್ಲ ಮದುವೆ ಮಾಡಬಹುದು, ಆದರೆ, ಈ ಅಜ್ಜಿಯೇ ಊರಿಗೆ ಬರೋ ಹೊಸ ರೈಲನ್ನು ನೋಡೋಕೆ ಹೋಗಿಬಿಟ್ಟರೆ. ಇದ್ದ ಬದ್ದ ಜನರಿಗೆಲ್ಲ ಮದುಮಗಳದೇ ಚಿಂತೆಯಾಗಿತ್ತಂತೆ. ಅಂತವಳು ಈ ಅಜ್ಜಿ. ಅಜ್ಜಿಯ ಗಂಡ ತೀರಿಹೋದ ದಿನ ಅವಳು ಅಜ್ಜನನ್ನು ಅದೆಷ್ಟು ಕಳೆದುಕೊಂಡಳೋ ಏನೋ ಅವಳು ಅಂದು ಅಳು ನಿಲ್ಲಿಸಲೇ ಇಲ್ಲ. ಊಟ ನಿದ್ರೆ ಬಿಟ್ಟು ಅಳುತ್ತಿದ್ದಳು. ಅವಳ ನೋವು ನೋಡೋಕೇ ಆಗದಷ್ಟು. ಯಾರು ಅದೆಷ್ಟೇ ಸಮಾಧಾನ ಮಾಡಿದರೂ, ಯಾರು ಏನೇ ಹೇಳಿದರೂ ಕೇಳಲಿಲ್ಲ. ಏನಾದರೂ ತಿನ್ನು ಎಂದರೂ ತಿನ್ನಲಿಲ್ಲ. ಹೀಗಿರುವಾಗ ಯಾವುದೋ ಮಗು ರಸ್ಕನ್ನು ತಂದು ಕೊಟ್ಟಾಗ ಆ ಪುಟ್ಟ ಮಗುವಿನ ಮುಖ ನೋಡಿ ರಸ್ಕನ್ನು ತಿನ್ನಲು ಆರಂಭಿಸಿದ ಅಜ್ಜಿ, ಆ ರಸ್ಕು ಅದರ ಜೊತೆಗೊಂದಿಷ್ಟು ಕಾಫಿ ಇಷ್ಟು ಬಿಟ್ಟು ಮತ್ತೇನು ಬೇಡವೆಂದೆನಿಸಿತು. ಈ ರಸ್ಕೂ ಕಾಫೀ ಅವಳಿಗದೆಷ್ಟು ಇಷ್ಟವಾಯಿತೆಂದರೆ, ಅವಳಿಗೀಗ ೧೦೪ ವರ್ಷ ವಯಸ್ಸು, ಸುಮಾರು ೩೦ ವರ್ಷಗಳಿಂದ ಕಾಫಿ, ರಸ್ಕನ್ನು ತಪ್ಪ ಮತ್ತೇನನ್ನೂ ತಿನ್ನುವುದಿಲ್ಲ. ಬರೀ ಇಷ್ಟನ್ನೆ ತಿಂದು ಶತಾಯುಷಿಯಾಗಿಬಿಟ್ಟಳು.
ಅವಳಿಗೆ ಈ ನಾಯಿಗಳನ್ನು ಕಂಡರೆ ಕೋಪ. ಅವಳನ್ನು ನೋಡಲು ಬರುವವರು ಅವಳಿಗೆ ಅಂತ ತರೋ ರಸ್ಕಿನಲ್ಲಿ ಕೆಲ ಭಾಗಗಳನ್ನ ಆ ನಾಯಿಗಳಿಗೆ ಹಾಕುತ್ತಾರೆ ಎಂಬುದೇ ಅವಳಿಗಿರುವ ಬೇಸರ. ಹಾಗಾಗಿ ಮನೆಯಲ್ಲಿ ಹಾಸಿಗೆ ಮೇಲೆ ಮಲಗಿರುವಾಗ ಯಾರಾದರೂ ಬಂದರೆ ರಸ್ಕು ತಂದಿಯೇನೋ ಅಂತ ಕೇಳುತ್ತಲೇ ಆ ನಾಯಿಗಳಿಗೆ ಹಾಕಬೇಡಿ ಅಂತಾನೂ ಅಜ್ಜಿ ಹೇಳೋದು ಕೇಳುತ್ತೆ. ಅಜ್ಜಿಗೆ ಸದ್ಯ ನೆನಪಿರುವುದು ಆ ಮನೆಯಲ್ಲಿನ ನಾಯಿಗಳು ಹಾಗು ರಸ್ಕಿನ ರುಚಿ ಮಾತ್ರಾ. ಇನ್ನೇನೂ ನೆನಪಲ್ಲಿ ಉಳಿದಿಲ್ಲ. ಯಾರ ಗುರುತೂ ಸಿಗೋದಿಲ್ಲ.
ಇಷ್ಟೊಂದು ನಾಯಿಗಳನ್ನು ಇವರು ಯಾಕೆ ಸಾಕಿದ್ದಾರೆ ಎಂಬುದು ನನಗೆ ತಿಳಿಯಲಿಲ್ಲವಾದರೂ, ಯಾರನ್ನು ಹೇಗೆ ಕೇಳಬೇಕೆಂದಾಗಲೀ ಯಾಕೆ ಕೇಳಬೇಕೆಂಬುದಾಗಲೀ ತಿಳಿಯಲಿಲ್ಲ. ಆದರೆ ಯಾವಾಗ ಇದೆಲ್ಲಾ ಆರಂಭವಾಯಿತು ಎಂದು ಯಾರನ್ನಾದರೂ ಕೇಳಬೇಕೆಂದೆನಿಸಿತು. ಈ ನಾಯಿಗಳನ್ನು ಸಾಕಿದ್ದದ್ದು, ಸಾಕಲು ಆರಂಭಿಸಿದ್ದು ಇದೇ ಅಜ್ಜಿ. ಅಜ್ಜಿಯ ಗಂಡನ ಸಾವು ಸಹಜವಾಗಿರಲಿಲ್ಲ. ರೈಲಿನಡಿ ಸಿಲುಕಿ ಸತ್ತದ್ದು. ಅದು ಆತ್ಮಹತ್ಯೆಯೊ, ಅಪಘಾತವೋ, ಕೊಲೆಯೋ ತಿಳಿದಿಲ್ಲ. ಎಲ್ಲರದೂ ಅವರವರದೆ ಊಹೆಗಳು, ಅವರವರದೆ ಸತ್ಯಗಳು. ಅಜ್ಜಿಗೆ ಮಾತ್ರಾ ಅವಳ ಗಂಡ ಸತ್ತದ್ದದ್ದು ಸತ್ಯ. ಊಟ ತಿಂಡಿ ಬಿಟ್ಟು ಅಜ್ಜಿ ಅಳುತ್ತಿರಬೇಕಾದರೆ ಮಗು ತಂದುಕೊಟ್ಟ ರಸ್ಕನ್ನು ತಿನ್ನುತ್ತಿದ್ದಾಗ ಅಲ್ಲೇ ಒಂದು ನಾಯಿ ಮರಿ ಅವಳನ್ನೇ ನೋಡುತ್ತಿರುವುದು ಅವಳಿಗೆ ಕಂಡು ತಾನು ತಿನ್ನುತ್ತಿದ್ದ ರಸ್ಕಿನ ಅರ್ಧಭಾಗ ಆ ನಾಯಿ ಮರಿಗೆ ಹಾಕಿದಾಗ, ಅದಕ್ಕೆ ಆ ರಸ್ಕು ಇಷ್ಟವಾಗಿ ಮನೆಯಲ್ಲೇ ಉಳಿಯಿತು. ಹೀಗೆ ರಸ್ಕನ್ನು ತಿನ್ನುವಾಗೆಲ್ಲಾ ಒಂದೊಂದು ಚೂರು ಹಾಕಿ ನಾಯಿಯನ್ನು ಮುದ್ದಿಸಲು ಆರಂಭಿಸಿದವಳಿಗೆ, ಎಲ್ಲೇ ಯಾವ ನಾಯಿ ಮರಿ ಕಂಡರೂ ಅವುಗಳಿಗೆ ರಸ್ಕನ್ನು ಹಾಕುತ್ತಿದ್ದಳು. ಕೆಲವು ಅವಳನ್ನೇ ಹಿಂಬಾಲಿಸಿ ಈ ಮನೆ ಸೇರಿದವು. ಹೀಗೆ ಮನೆಯ ತುಂಬಾ ನಾಯಿಗಳಾದವು. ಈ ನಾಯಿಗಳು ಅವಳೇ ಸಾಕಿದ ನಾಯಿಗಳಾಗಿದ್ದವು.