ಪೀಠಿಕೆಕಟ್ಟು ಕತೆಯ ಸುಂದರಾಂಗಿ

ಚರಿತ್ರೆಯ ಕ್ಷಮಾಭಿಕ್ಷೆಯ ಅರ್ಹತಾ ಪಟ್ಟಿಯ ಸಾಲಿನಲ್ಲಿ ನಿಲ್ಲಲಾರೆ
ನಾನೂ ನೀನು ಎಂದಿಗೂ ಅನರ್ಹರು
ಅದಕ್ಕಾಗಿಯೆ ನಮ್ಮಿಬ್ಬರ ಮಿಲನ ಸಾಧ್ಯವಾಗುವುದು
ಪ್ರತೀ ಹಂತದಲ್ಲೂ ಆಂತರಿಕ ಅಸ್ಥಿರತೆಯ ಅಗಾಧ ಸಾಧ್ಯತೆಗಳ
ಪ್ರಯೋಗಕ್ಕೊಳಪಡುತ್ತಲೆ ನಿನ್ನ ಭೇಟಿಯಾಗುತ್ತಿರಬೇಕು

ಹಪಾಹಪಿಯಲ್ಲಿ ನಿನ್ನ ತಿರಸ್ಕರಿಸಬೇಕೆಂದಿದ್ದೆ
ಆಹಾ ಸಂಕೀರ್ಣಾಕಾರವೆ ಎಂದು
ಸಂರಚನೆಯ ಗೋಜಿನಲ್ಲೆಲ್ಲಿ ಅಡಗಿಬಿಡುತ್ತೀಯೊ
ಎಂದೂ ಅನ್ನಿಸಿದ್ದುಂಟು - ಆದರೆ
ಆಗು ಹೋಗುಗಳ ಸ್ಪಷ್ಟ ಚಿತ್ರಣ ನೆನಪು
ಸಂಘರ್ಷದ ಅಭಿವ್ಯಕ್ತಿಯಲ್ಲಿ ರೂಪತಳೆಯುತ್ತಿತ್ತು
"ಅನಿಶ್ಚಿತ ನಿಯಮಗಳ ಸರದಾರನ ಆದಿಮ ಪ್ರಜ್ಞೆಗೆ ಹುಟ್ಟಿದ ಕೂಸು"
ಕಲಾಕೃತಿಯಿದ್ದ ಪುರಾತತ್ವ ಇಲಾಖಾ ವಸ್ತುಸಂಗ್ರಹಾಲಯದ
ಕೀಲಿಕೈಯನ್ನು ಕಳೆದದ್ದು
ಉದ್ದೇಶ ಪೂರ್ವಕವಾಗಿಯೆ ಎಂದೆನಿಸಿದರೂ
ಪುರಾವೆಗಳು ದೊರೆಯುವುದು ಆಕಸ್ಮಿಕಕ್ಕೇ

ತಾರುಮಾರಾದ
ನಿನ್ನ ಟಿಪ್ಪಣಿ ಪುಸ್ತಕದ ಸರಕು
ಎಂದಾದರೂ ಸ್ಮಾರಕವಾಗಬಹುದು
ಈ ಅವ್ಯವಸ್ಥೆಯ ಅಧೀನದ ಹಕ್ಕುಬಾಧ್ಯಸ್ಥರಾಗಿ ನಾವಿದ್ದೇವೆ
ರೂಪವಾಗಬಯಸಿದ ಪ್ರತೀ ಸಾಧ್ಯತೆಗಳ ಅಡಿಗೆ
ವಿಕಾಸದ ನಿರಂತರತೆಯ ನಿಗೂಢತೆಯಲ್ಲಿನ
ಎಚ್ಚರಿಕೆಯ ನಿನ್ನ ಇರುವಿಕೆಯಿದೆ
ನಮ್ಮ ಮಿಲನಕ್ಕೆ ದಕ್ಕಿದ ಸಿದ್ಧಿಯದು

ಆ ಸಿದ್ಧಿಗೆ ಶರಣು