ಮುನುಷ್ಯಂಗೆ ಭಾವವನ್ನ ಭಾಷಯಲ್ಲಿ ಹಿಡಿದಿಡುವುದು ಸದಾ ಸವಾಲಿನ ಕೆಲಸವೇ ಸರಿ. ಸದಾ ಸ್ಥಾಪಿತ ಅರ್ಥಗಳಿಂದ ಕೂಡಿದ ಭಾಷೆಯಲ್ಲಿ, ಅರ್ಥಕ್ಕೇ ಧಕ್ಕದ ಭಾವವನ್ನ ಹಿಡಿದಿಟ್ಟು ಅದನ್ನ ಮುಟ್ಟಿಸಬೇಕು. ಒಂದು ವಿದಾಯವನ್ನ ನಾನೀಗ ತಿಳಿಸಬೇಕಿದೆ. ವಿದಾಯದ ನೋವು ಮತ್ಯಾವುದೋ ಸ್ವಾಗತದ ಸಂಭ್ರಮದಲ್ಲಿ ತೆರೆದುಕೊಳ್ಳುತ್ತೆ. ಹೀಗೆ ಒಂದು ಕಡೆ ವಿದಾಯ ಮತ್ತೊಂದು ಕಡೆ ಸ್ವಾಗತ. ಎರೆಡನ್ನೂ ಒಮ್ಮೆಗೇ ಹಿಡಿದಿಡಲು ಭಾಷೆ ಸೋಲಬೊಹುದು, ಆದರೆ ಭಾಷೆಗೂ ಮೀರಿದ ಭಾವದೊಂದಿಗೆ ಅದು ತಮ್ಮನ್ನ ತಲುಪಬೊಹುದೆಂದು ಆಶಿಸುತ್ತೇನೆ. ಹಾಗೆ ನೋಡಿದರೆ ಪ್ರತೀ ಕ್ಷಣವೂ ಹಿಂದಿನ ಕ್ಷಣದ ವಿದಾಯವನ್ನ ಹೊತ್ತೂ ಮುಂದಿನ ಕ್ಷಣದ ಸ್ವಾಗತಕ್ಕೆ ತೆರೆದುಕೊಂಡೇ ಇರುತ್ತದೆ.
ಸುಮಾರು ಒಂದು ವರ್ಷಗಳ ಕಾಲ ನನಗೆ ಆಶ್ರಯ ಕೊಟ್ಟ, ಬಂಟ್ವಾಳವನ್ನ, ಧಕ್ಷಿಣ ಕನ್ನಡವನ್ನ ಬೌತಿಕವಾಗಿ ತೊರೆದು ದೂರ ಹೊರಡುತ್ತಿದ್ದೇನೆ. ಹಾಗೆ ನೋಡಿದರೆ ನನಗೆ ಈ ರೀತಿಯ ವಿಧಾಯ ಏನೂ ಹೊಸದಲ್ಲ, ನಾನೊಬ್ಬ ಅಲೆಮಾರಿಯೆ. ಆದರೆ ಈ ಅಲೆಮಾರಿಗೂ ಒಂದು ನೆಲೆಯನ್ನ ಈ ಸ್ಥಳ, ಈ ಸಂಸ್ಥೆ(SVS College, ಬಂಟ್ವಾಳ), ಇಲ್ಲಿನ ಜನ ನೀಡಿದ್ದರು. ಆದ್ದರಿಂದ ಈಗ ಈ ಸ್ಥಳವನ್ನ ಬಿಟ್ಟು ಹೋಗುವಾಗ ಏನೋ ಬೇಸರ. ಏನನ್ನೋ ಕಳೆದುಕೊಳ್ಳುತ್ತಿರುವ ಬೇಸರ. ಆದರೆ ಹೊರಡಲೇ ಬೇಕು, ಒಳಗಿನ ಧ್ವನಿಗೆ ಗೌರವ ನೀಡಿ, ಕೂಗುತ್ತಿರುವ ಹಾದಿಗೆ ಕಿವಿಗೊಟ್ಟು ನಡೆಯಬೇಕು. ಆದ್ದರಿಂದ ಮುಂದಿನ ಪಯಣಕ್ಕೆ ಇಲ್ಲಿಂದ ಹೊರಟಿದ್ದೇನೆ.
ಇಲ್ಲಿನ ಪರಿಸರದಲ್ಲಿ ನಾನು ಕಂಡ ಪ್ರತೀ ವ್ಯಕ್ತಿಯಿಂದಲೂ ಏನನ್ನಾದರೂ ಕಲಿತಿದ್ದೇನೆ. ಆದ್ದರಿಂದ ಎಲ್ಲರಿಗೂ ನನ್ನ ವಂದನೆಗಳನ್ನ ಸಲ್ಲಿಸಲೇ ಬೇಕು. ಬದುಕಿನ ಈ ಪಯಣದಲ್ಲಿ, ಆಕಸ್ಮಿಕವೋ ಅಥವಾ ಪೂರ್ವ ನಿಶ್ಚಿಥವೋ, ಒಟ್ಟಿನಲ್ಲಿ ನನ್ನ ಬದುಕಿನ ಪಯಣದಲ್ಲಿ ತಾವೆಲ್ಲಾ ಜೊತೆಯಾದಿರಿ. ಒಂದು ಅದ್ಭುತ ಜೀವನಾನುಭವವನ್ನು ಹೊತ್ತು ನಡೆವಂತೆ ಮಾಡಿದಿರಿ. ತಮ್ಮ ಎಲ್ಲಾ ಸ್ನೇಹ-ಪ್ರೀತಿಗೆ ವಂದನೆಗಳು.
ಯಾವುದೋ ಒಂದು ಸ್ಥಳ ಕೇವಲ ಬೌತಿಕ ವಸ್ತುವಾಗಿ ಮಾತ್ರ ಉಳಿಯುವುದಿಲ್ಲ. ಅದು ಭಾವನಾತ್ಮಕವಾಗಿ ಬೆಸೆದುಕೊಂಡುಬಿಡುತ್ತದೆ. ಎಲ್ಲೋ ಕರ್ನಾಟಕ-ಆಂದ್ರ ಪ್ರದೇಶದ ಗಡಿ ಬಾಗದಿಂದ ಬಂದ ನನ್ನನ್ನು ಈ ಪ್ರದೇಶ ಸ್ವೀಕರಿಸಿದ ಪರಿ ನಿಜಕ್ಕೂ ಅದ್ಭುತ. ಬದುಕಿನ ಒಂದು ಪ್ರಮುಖ ಘಟ್ಟದಲ್ಲಿ ನನ್ನ ಜೊತೆಗಿದ್ದು, ಮನುಷ್ಯ ಸಂಬಂಧದ ಪ್ರಾಮುಖ್ಯವನ್ನ, ಪ್ರೀತಿ ವಿಶ್ವಾಸಗಳೆಂಬ ಮನುಷ್ಯ ಸಹಜ ಗುಣಗಳಿಂದ ನನ್ನನ್ನ ಆಧರಿಸಿ, ಮಾನವತ್ವದ ಮೇಲೆ ಜೀವನ ಪೂರ್ತಿ ನಂಬಿಕೆ ಇಡುವಂತೆ ಮಾಡಿದ ತಮ್ಮೆಲ್ಲರಿಗೂ ನನ್ನ ವಂದನೆಗಳು. ನನ್ನ ಜೊತೆಗಿದ್ದವರಿಗೆ, ನನ್ನ ಪರಿಚಿತರಿಗೆ, ನನ್ನ ಸಂಸ್ಥೆಯಲ್ಲಿ ಜೊತೆಗಿದ್ದವರಿಗೆ, ಎಲ್ಲಕ್ಕೂ ಮುಖ್ಯವಾಗಿ ನನ್ನ ವಿದ್ಯಾರ್ಥಿ ಮಿತ್ರರಿಗೆ ನನ್ನ ವಂದನೆಗಳು.
ಮನುಷ್ಯ ಸಂಬಂಧಗಳ ಸಂಕೀರ್ಣತೆಗಳನ್ನ ಅರಿತುಕೊಳ್ಳಬೇಕು ಎಂಬೋ ಆಶಯದೊಂದಿಗೆ ಇಲ್ಲಿಗೆ ಬಂದೆ. ಆದರೆ ಒಂದು ಸಂಬಂಧ, ನನ್ನನ್ನು ಆ ಸಂಬಂಧಗಳ ಸಂಕೀರ್ಣತೆಗಳ ಹೊರತಾಗಿ, ಎಲ್ಲಕ್ಕೂ ಮೀರಿ ನನ್ನನ್ನು ಆವರಿಸಿಬಿಟ್ಟಿತು. ಆ ಒಂದು ಸಂಬಂಧಕ್ಕೆ ಯಾವುದೋ ಹೆಸರಿಡಲು ನನಗೆ ಇಷ್ಟವೂ ಇಲ್ಲ, ಅವಶ್ವವೂ ಇಲ್ಲ. ಸಂಬಂಧಗಳಿಗೆ ಭಾವ ಮಾತ್ರಾ ಮುಖ್ಯ, ಹೆಸರುಗಳಲ್ಲ. ಆ ಭಾವಕ್ಕೆ ಎಂದಿಗೂ ವಿದಾಯ ಹೇಳಲಿಕ್ಕೆ ಸಾದ್ಯವೇ ಇಲ್ಲ. ಆ ಭಾವವನ್ನ ಹಾಗೆ ಹೊತ್ತು ಸಾಗುತ್ತೇನೆ.
ಬದುಕಿನ ಧ್ವನಿಗ್ರಹಿಕೆಯ ಮಾರ್ಗದಲ್ಲಿ, ಮತ್ಯಾವುದೋ ಕಾರಣ ಹಿಡಿದು ಹೊರಟಿದ್ದೇನೆ. ದಾರಿ ಬಿಟ್ಟವನಿಗೂ, ನಡೆದ ಒಂದು ದಾರಿ ಇರುತ್ತೆದೆ ಹಾಗು ಗೊತ್ತಿಲ್ಲದೆ ಉಳಿದು ಬಿಡುತ್ತೆ. ನನ್ನ ಮುಂದಿನ ಹಾದಿಯಲ್ಲಿ, ತಮ್ಮಗಳ ಆಶೀರ್ವಾದ, ಮಾರ್ಗದರ್ಶನ, ತಪ್ಪಾದಾಗ ಕಿವಿ ಹಿಂಡಿ ಸರಿ ಮಾಡುವ ಹಿರಿತನ, ಒಂಟಿಯಾದಾಗ ಜೊತೆಯಾಗುವ ಸ್ನಾಹಗುಣ, ಎಲ್ಲವನ್ನೂ ಅಪೇಕ್ಷಿಸುತ್ತಾ, ದಕ್ಷಿಣ ಕನ್ನಡಕ್ಕೆ, ಬಂಟ್ವಾಳಕ್ಕೆ, ಇಲ್ಲಿನವರಿಗೆ ವಂದನೆಗಳನ್ನ ತಿಳಿಸುತ್ತಿದ್ದೇನೆ.
[ಶನಿವಾರ ೩೧/೦೩/೨೦೧೨ ರಂದು ಬಂಟ್ವಾಳದಿಂದ ಹೊರಡುತ್ತಿದ್ದೇನೆ]
ಇಂತಿ
ಅರವಿಂದ