ಯು. ಜಿ. ಯೂ, ಬೆಕ್ಕೂ……… (ರಚನೆಯೂ, ನಿರಚನೆಯೂ, ಸಂರಚನೆಯೂ )


ಆಗಾಗ ಬಂದೋಗುವ ಬೆಕ್ಕು

ಮಿಯಾಂ ಎಂದೆನ್ನಬಹುದಾದರೂ

ಸುಲಭಕ್ಕೆ ಅನ್ನುವುದೇ ಇಲ್ಲ. ಬಲು ಅಪರೂಪ

ಕಾಲಬಳಿಯಲ್ಲಿ ನುಸುಳಿದ್ದಿಲ್ಲ -

ಹಾಗೇ ತಿಳಿಯಬೇಕು

ಹಾಲು ಬೇಕೋ ಏಕಾಂತವೋ ಮತ್ತೊಂದೋ ಮಗದೊಂದೋ


ಯು. ಜಿ. ಗೆ ಕಿಟಕಿಗಳೂ ಬಾಗಿಲುಗಳೂ

ಎಂದರೆ ಅಷ್ಟಕ್ಕಷ್ಟೆ


ಸಾಕ್ರೆಟೀಸಿಗೆ ಕೊಟ್ಟ ವಿಷದ ಬಟ್ಟಲಲ್ಲಿ ನೊಣವೊಂದಿತ್ತು

ಚರಿತ್ರೆಕಾರನ ವಾದಕ್ಕೆ ಅದು ಬದುಕಿತ್ತು ಪ್ರತಿವಾದ

ಈ ಬೆಕ್ಕು ಬಲು ತರಲೆ

ವಿಶಿಷ್ಟತೆಗೆ ಅಡ್ಡಲಾಗಿ ಕಾಲುಚಾಚಿ

ಮಲಗಿದ ಧಿಮಾಕಿಗೆ

ನಾವ್ಯಾರಾದರೂ ಅದಕೆ ಲೆಕ್ಕವೇ ಇಲ್ಲ



ಪತ್ರಗಳಿಗೊಂದು ರೀತಿಯ ವಾಸನೆಯಿರುತ್ತದೆ

ಎಂಬುದು ಈ ಬೆಕ್ಕು ಹತ್ತಿರ ಬಂದಾಗೆಲ್ಲಾ

ಅನ್ನಿಸುವುದು ಆದರೂ

ನಿತ್ಯ ಪತ್ರಿಕೆ ತಿರುವಿಹಾಕುವಾಗಲೆಲ್ಲಾ

ವಾಸನೆ - ಬೆಕ್ಕಿನದೋ

ಮತ್ಯಾವುದರದೋ ತಿಳಿಯುವುದೇ ಇಲ್ಲ


ಜೀವವಿಜ್ಞಾನಕ್ಕೂ ಆತ್ಮಜ್ಞಾನಕ್ಕೂ

ನಡುವಲ್ಲಿ ಬೆಕ್ಕು ಕುಳಿತು

ಇಲಿ ಮೇಯುತ್ತಿರುತ್ತದೆಂಬುದು

ಅನಿರ್ವಚನೀಯವೆಂದೆನಿಸಿದರೂ ಸರಿಯೆಂಬ

ವಾದಕ್ಕೆ ಬೆಕ್ಕು ತಲೆಯಾಡಿಸುತ್ತಿರುತ್ತದೆ.


ಇದು ಹೀಗಿರಲಾಗಿ………


ರಚನೆ ವಿರಚನೆ ಹೇಗೋ

ಹಾಗೆಯೇ ಸ್ಮೃತಿ ವಿಸ್ಮೃತಿ


೫೦ ವರ್ಷಗಳ ಹಿಂದೆ"

ಪತ್ರಿಕೆಯ ಸಣ್ಣ ಅಂಕಣದಲ್ಲಿ

ತಾ ನಟಿಸಿದ ನಾಟಕದ ಅಂಕದಲ್ಲಿ

ಮೈ ಮರೆತು ನಟಿಸಲೋಗಿ

ನಿಜದ ಹಲ್ಲು ಮುರಿದದ್ದು

ಪ್ರಕಟವಾಗದೇ ಹೋದದ್ದು

ನನ್ನ ತಾತನಿಗೆ

ಕಾಫೀ ತೊರೆದು ಮುಖ ಊದಿಸಿಕೊಳ್ಳಲಿಕ್ಕೆ

ಕಾರಣವಾಗಿತ್ತು.


[ಯು. ಜಿ. ಎಂದರೆ ಯು. ಜಿ. ಕೃಷ್ಣಮೂರ್ತಿ ]

3 ಕಾಮೆಂಟ್‌ಗಳು: