ದೇಹವು ಕಾಣುತ್ತಿದೆ
ಕಾಣುತ್ತಿದೆ ದೇಹವು
ಹೀಗಿರಲಾಗಿ…………
ಪ್ರತ್ಯಕ್ಷ ಪ್ರಮಾಣ ಪ್ರಕ್ರಿಯೆ
ಸಮಾನ ಅಂಶ
“ಪ್ರ" ಎಂಬಕ್ಷರ
ಹಾಗೂ ಪ್ರ ಸ್ವರಾಕ್ಷರವಲ್ಲ
ಎಂಬುದೊಂದು ಪ್ರತಿಮೆ
ಎರಡರ ವರ್ಗಮೂಲದ ಅಂಕಿಗಳು
ಅನಂತಕ್ಕೆ ಅಂಕೆಯಿಲ್ಲದೆ ಬೆಳೆವಾಗ
ಧುತ್ತನೆ ನಿಲ್ಲಿಸಿಬಿಡುವುದಿದೆಯಲ್ಲ
ಅದನ್ನು ಜಗತ್ತಿನ ಸೃಷ್ಟಿ ಎನ್ನಬಹುದು.
ಕೇಕೆ ಹಾಕುವ ಭಾಗ್ಯವು
ಒಂಥರಾ ರೋಚಕ
ಬಣ್ಣಕ್ಕೆ ಒಂದೊಂದು ಸಂಖ್ಯೆಯನ್ನು
ಸಮಾಂತರಿಸಿ ನಮೂದಿಸಿದಾಗ
ಚಿತ್ರವು ಒಂದು ಸಂಖ್ಯೆ
ಕಟ್ಟುವುದೆಂದರೆ ಹೀಗೇನೆ
ಮೂಲೆ ಮುಟ್ಟಿದಾಕ್ಷಣ ಎದುರು
ಗೋಡೆಯಲ್ಲಿ ಪ್ರತ್ಯಕ್ಷ
ಅಲ್ಲಿಂದ
ನೆಲದ ಕೊನೆ ಮುಟ್ಟಿದಾಗ
ಆಕಾಶದಲ್ಲಿ ಮತ್ತೆ
ಇದೊಂದು ಜ್ಯಾಮಿತೀಯ ಆಕಾರ
ಇದ್ದಿಲಲ್ಲಿ ತೀಡಿದ ಕಣ್ಣ ಹುಬ್ಬು
ಮೂರ್ತಿ ಸಿದ್ಧ
ಸೊಂಟದಲ್ಲೊಂದು ಕಮಲಪುಷ್ಪವು
ಜಾತ್ರೆಯ ಪೂರ್ವಾರ್ಧದಲ್ಲಿ
ಸಲ್ಲಮುದ್ದೆ ನಾಲ್ಕು ದಿಕ್ಕುಗಳಲ್ಲಿ
ಮೊದಲ ಲಿಪಿ ಹಾಡು
ಆ ಹಾಡು ತನಗೆ ಬರುತ್ತಿತ್ತೆಂದವನದು
ಬರೀ ಮಣ ಮಣ
ಕೇಳಿದರೆ, ಹಿಂದೆ ಹಿಂದೆ ಹಿಂದೆ ಇನ್ನೂ ಹಿಂದೆ………
ಅಡಿಟಿಪ್ಪಣಿಯಲ್ಲಿನ ರೇಖಾಚಿತ್ರಕ್ಕೆ
ಬಣ್ಣವು ಬೇಕಿಲ್ಲ – ಕೈ ಬರಹ
ಬಲು ಒರಟು - ಸ್ಥಳಾವಕಾಶ
ಸಂಕೀರ್ಣ ದ್ವಂದ್ವ ರಚನೆ
ಅರಳೀ ಕಟ್ಟೆಯ ಹರಟೆ
ಛಂದಸ್ಸಿನ ಮಿತಿ ಅಲಂಕಾರ
ಅದೇ ಹಾಡು ಹಸೆ ಕುಣಿತ
ಹರಿಕತೆ ದಾಸರಿಗೆ ಮರೆವು
ಕಥೆಯಲ್ಲಿನ ಸಂಬಂಧಗಳೆಲ್ಲಾ ಅದಲು ಬದಲು
ವಯ್ಯಾಕರಿಣಿಗೆ ದಕ್ಕದೆ
ತರುಣಿ ಬೆಂಬತ್ತಿ ಹಠವಿಡಿದಾಗ
ಹಂತಗಳಿಗೆ ಎಗ್ಗಿಲ್ಲದ ಸುಗ್ಗಿಯ
ಜೊತೆಗೆ ಒಂದೇ ಹಠ, ಆಟ ಹೂಡಿದ
ತರುಣಿಗೆ ವರ್ಣಕ್ಕೆ ಬಣ್ಣ ಹಚ್ಚುವ
ತವಕ ಬಣ್ಣದಿಂತೆಗೆವ ಚಿತ್ರಕ್ಕೆ
ಪ್ರದರ್ಶನದ ಗೀಳು
ಪುಳಕ್ -
ಸಮೀಕರಣವಿಲ್ಲ
ಆಗ ಕರೆಯುತ್ತೆ ಕರಿ ಮೀನು
ಕೂಗುತ್ತೆ
ಆಕಾಶದಲ್ಲಿ ಹಾರುವ ಮೀನ
ಪಥದಲ್ಲಿ ಹಬ್ಬಿದ ಬಳ್ಳಿಯಲ್ಲರಳಿದ
ಹೂವನು ಬಯಸಿದ ತರುಣಿಯ
ಮನವಗೆದ್ದ ಓ ಮುದುಕನೆ
ಚಿರ ಯುವಕನೆ
ಒಂಟಿ ನಕ್ಷತ್ರದ ಸುತ್ತೆಲ್ಲ
ಬಣ್ಣದ ರಾಶಿ
ಕಡುಗಪ್ಪು ಆಕಾಶ
ಸೀಳಿ ಹಾರಿದೆ
ಮೀನು ದಿಕ್ಕು ದಿಕ್ಕು ತಪ್ಪಿ.
[ವಸುಗುಪ್ತನ ಶಿವಸೂತ್ರದ ಒಂದು ಸೂತ್ರ]
ಅನುತ್ತರ ಮಾರ್ಗ ಸಾಧ್ಯ ಆಣವಮಲ ಕರಗಿದಾಗ
ಪ್ರತ್ಯುತ್ತರಅಳಿಸಿ