...

 

ಮದಗಜದ ಪಕ್ಕದ ಹಕ್ಕಿಯ ಸುಳಿವು 

ಸುರುಳಿ ಸುತ್ತಿ ಧೋ ಧೋ ಎಂದದ್ದನ್ನು 

ಕೇಳಿದ್ದೇ ಹಚ್ಚ ಹಸಿರಿನ ಕಾಡು 

ಕಂಪಿಸಿತು 

ಕಾಡು ಹೊತ್ತ ಬೆಟ್ಟ ನಡುಗಿತು 

 

ಸುಗ್ಗಿ ಕಣದ ಮೇಲಿನ 

ಪಿಳ್ಳೇರಾಯನ್ನ ಮಾಡಿ ಹೋದವ 

ಮರಳಿ ಬಂದಾಗ 

ತೆನೆ ತೂರಿತ್ತು – ಜೊಳ್ಳು ಹರಿದಿತ್ತು 

ಇಲಿ ಗೂಡು ಕಡಿದು ಭತ್ತ ಹೆಕ್ಕೋ 

ಜನ ಕಾಂಬರಿಲ್ಲ 

ಕಂಬಾಲ ರಾಯದ ಸಿದ್ಧ 

ಯಾಕೋ ಬಾರಲೇ ಇಲ್ಲ 

 

ಇಷ್ಟೇ ಸಾಕಿತ್ತು ಬೆಳೆಸೋದೇಕೆ ಬೇಕಿತ್ತು

ಬಣ ಬಣ ಅನ್ನೋ ಬಕರಿ ಬರೀ ಬಕ ಬಕ 

ಎಂಬೋವಾಗ ಅವ ರಾಗ ಎಳೆದ 

ಕಾಣೋದಿಲ್ಲೋ ಸಿದ್ಧ ನಿನ್ನಾ ರೂಪ ತಾಪ 

ಇಷ್ಟೆಲ್ಲಾ ಆದಮೇಲೂ 

ಸುಮ್ಮನೆ ನಗ್ತಾ ಇದ್ದ ಅವ 

ಕಾಣೋದ್ಯಾರಿಗೆ 

ಕೇಳೋದ್ಯಾರಿಗೆ 

...

  

ಆ ಗಾಜಿನ ಮನೆಗೊಂದಾಕಾರ 

ಷಟ್ಕೋಣದ ಮನೆಯೆಂಬೋಣ 

ಅವನು ಎಷ್ಟಾದರೂ ಗಣಿತಜ್ಞ 

ಮತ್ತೆ ನೀರು ದ್ವೀಪವದು 

ಹೊರಗೂ ಉಂಟು ಒಳಗೂ ಉಂಟು 

ಜನ ಜನ ಜನ 

ಬಿಂಬ ಪ್ರತಿಬಿಂಬ ಎರಡೂ ಉಂಟು 

 

ನಮಗಲ್ಲಿ ಹಬ್ಬ 

ಕೂತವರು ನಾವು 

ಮೃಷ್ಟಾನ್ನ ಭೋಜನವೇನ್ 

ಮತ್ತೆ ಪಾನೀಯವೇನ್ 

ಎಲ್ಲವೂ ಉಂಟು 

 

ಹೊರಗಿರುವುದ್ಯಾವುದು 

ಸುರುಳಿ ಸುರುಳಿ ಆಕಾರದಲ್ಲಿ ಹೊಗೆ 

ಧೂಮ್ರಲೋಚನ 

ಅರೆ!!! ಇವನಿಲ್ಲೇ ಇದ್ದಾನಲ್ಲ! 

ಹೊರಗೇಗೆ? 

ಅಥವಾ ಎರಡೂ ಕಡೆಯೂ 

ಒಟ್ಟೊಟ್ಟಿಗೆ 

ಅವನು ಗಣಿತಜ್ಞ 

ಇಲ್ಲಿ ಗಾಜು ನೀರು ಎಲ್ಲಾ ಬೆರೆತಿದೆ 

ಎಲ್ಲವೂ ಸಾಧ್ಯ – ಎಂದ     

...

  

ಅದೆಷ್ಟು ಬಾರಿ ಹರಟೆಯೊಡೆದಿಲ್ಲ

ನಾನೂ ನೀವೂ – ಗಂಟೆಗಟ್ಟಲೆ 

ಸುತ್ತೆಲ್ಲಾ ಕಾಣ್ವ ಆ ಭಾರೀ ಜನರೊಟ್ಟಿಗೆಯೂ

ಗುರುತಿಸಿದ್ದೀರಿ ನನ್ನನ್ನು 

ಬಂದಿದ್ದೀರಿ ನನ್ನ ಬಳಿಗೆ 

ಸನ್ಮಾನ ಆ ದೊಡ್ಡ ಪೀಠ 

ಎಲ್ಲವನ್ನೂ ಬಿಟ್ಟು 

ಭಗವಂತನೇ ಭಕ್ತನೆಡೆಗೆ 

ಆ ಭಾಗವತದಲ್ಲೇ ನುಡಿದಂತೆ 

ಬಂದಿದ್ದೀರಿ – ನಾ  ಭಕ್ತನಲ್ಲ ಮತ್ತೆ 

 

ಈ ಬಾರಿ ಇಬ್ಬರೂ ಹರಟೆಯೊಡೆದೆವು 

ನೀವೂ ಮಾತನಾಡಲಿಲ್ಲ ನಾನೂ ಕೇಳಲಿಲ್ಲ 

ಅಲ್ಲಿ ರಾಮಕೃಷ್ಣರ ಬಗೆಗಿನದು ನಿಮ್ಮ ಮಾತು

ಆ ಮಹಾಕಾಳಿ ಅಲ್ಲಿ ಮಾತನಾಡುತ್ತಿದ್ದದ್ದು

ನಾ ಕೇಳುತ್ತಿದ್ದೆ – ಹಾಗೇ ಸುಮ್ಮನೆ 

 

ಬೀಳ್ಕೊಡುಗೆ – ಅದುವೇ  ನೋಟ 

ಅದೇ ನೋಟ 

ನೀವೂ, ಆ ಕಣ್ಣು 

ಹರಸಿದ್ದು ಮಾತ್ರ ತಿಳಿದಿತ್ತು 

 

 

  

...

 

ಕಂಡನೇನೆ ಅವನು ಅಲ್ಲಿ ನಿನಗೆ 

ಉತ್ತರ ಬಾಗಿಲಲ್ಲಿ ಹೋದೆಯಲ್ಲೇ 

ಕಂಡಿರಲಿಕ್ಕಿಲ್ಲ ಬಿಡು 

ಆ ಬಂಗಾರದ ಗೋಪುರದಲ್ಲೇನೂ 

ನೀ ಅಲ್ಲಿದ್ದಾಗ ಅವ ಇಲ್ಲೇ ಇದ್ದ 

ನನ್ನ ಪಕ್ಕದಲ್ಲೇ ಬಲು ಸನಿಹದಲ್ಲಿ 

ಭಾರವಾದ ಕಿರೀಟವಿಲ್ಲ 

ವಜ್ರ ವೈಡೂರ್ಯ ಬಂಗಾರದ ಪದಕಗಳಿಲ್ಲ 

ಕಣ್ಣು ಕಾಣದಂತಿಟ್ಟ ಮೂರು ನಾಮವೂ ಇಲ್ಲ 

ಅಭಯ  ವರದ ಯಾವ ಮುದ್ರೆಯೂ ಇಲ್ಲ 

ಹಾಗೇ ಸುಮ್ಮನೆ ಕೂತಿದ್ದಾಳೆ ಆ ಪುಟ್ಟ ಬಾಲೆ

ಕಾಲ ಮೇಲೆ ಕಾಲಾಕಿ ಒಮ್ಮೆ 

ಸೊಂಟದ ಮೇಲೆ ಕೈಯಿಟ್ಟು ಮತ್ತೊಮ್ಮೆ 

ಆಹಾ ಎಂದು ಜೋರಾಗಿ ನಗುತ್ತಾ ಮಗದೊಮ್ಮೆ