ಅನುತ್ತರ

 [ಅನುತ್ತರ : ಗುರು ಅಭಿಧ ಜೊತೆ ಅನುಭವಿಸಿದ ಅನುಭವವಿದು. ಬರೀ ಅನುಭವಗಳು. ಒಂದೊಂದೂ ಸ್ವತಂತ್ರ್ಯವಾದದ್ದು, ಸೇರಿಕೊಂಡದ್ದು, ಹಾಗೇ ಉಳಿದದ್ದು. ]

 

೦೧

ಪಂಚಮಗಳೊಂದಿಗೆ ಧ್ಯಾನ 

ಇರುವು ಮಾಂಸದ ದೇಹ 

ಮದ್ಯವು ಮತ್ತು

ಮತ್ಸ್ಯವು ದೇಹದಲ್ಲಿರಿವ ಪ್ರಾಣ 

ಮುದ್ರೆಯು ನಾನಿಲ್ಲದ 

ಅವಳಾದ ಅವಸ್ಥೆ 

ಮೈಥುನವು  ಮಹಾ ಮುದ್ರೆ  

 

೦೨ 

ಅದೆಲ್ಲವೂ ನಾನೇ 

ನಾನೇ ಅದೆಲ್ಲವೂ 

ಅದುವೆ ಭಕುತಿ 

ಅದುವೆ ಭಾವನ 

ಅದುವೆ ಶ್ರೀಗುರು 

 

೦೩  

ಭಾವನ ಎಂಬೋ ಭಕ್ತಿ 

ಎಲ್ಲದರೊಳು ಕಾಣ್ವ ಸ್ಪಂದ 

“ಚೈತನ್ಯಂ ಆತ್ಮ” 

ಕಾಣ್ಕೆ, ಕಂಡದ್ದು, ಕಂಡವನು 

ಮೂರೂ ಒಂದೆ 

ಗುರು ವಾಕ್ಯ 

 

೦೪. 

ಭೈರವಿ ಕಂಡಳು 

ಅದೆಷ್ಟು ದೊಡ್ಡ ಹಾವದು 

ಕೆಳಗಿಂದ ಮೇಲೆ ಚಾಚಿತ್ತು 

ಮೈಯಲ್ಲಾ ಬಿಸಿಯಾಗಿತ್ತು 

ತೀವ್ರ ಪ್ರಜ್ಞೆಯ ಸಾಕಾರ  

ಎಂದಳವಳು -  ತ್ರಿಪುರ ಭೈರವಿ 

 

೦೫ 

ಮಣಿಕರ್ಣಿಕದಲ್ಲಿ 

ಉರಿಯುತ್ತಿರುವ ದೇಹ ಕಂಡೆ 

ಹಿಂಬದಿಯಲ್ಲಿ 

ಉರಿವ ಮಶಾನ  ಶಂಕರ ಕಂಡ 

ಮುಂದೆ ನದಿಗುಂಟ ನಡೆದೆ 

ಶಿವನು ಕಂಡ 

ಶಿವಾನುಭವ 

ಶಿವವಾಯಿತು 

 

೦೬ 

ಹಣೆಯ ಮೇಲೊಂದು ಕಾಲು 

ಎದೆಯ ಮೇಲೊಂದು ಕಾಲನಿಟ್ಟು 

ನನ್ನ ಮುಖವ ಕಂಡಳು 

ಅವಳು ಮುಖವ ಕಂಡಳು 

ಅವಳ ಕಣ್ಣಲ್ಲಿ ಕಣ್ಣ ಕಂಡೆ 

ನನ್ನ ಕಣ್ಣು ಅವಳದಾಯಿತು 

ಎಲ್ಲವೂ ಮಂತ್ರವಾಯಿತು 

 

೦೭. 

ಕತ್ತರಿಸೆಂದೆ 

ಕುಡುಗೋಲಿನ ತುದಿಗೆ 

ಗಂಟಲ ಸೀಳಿ 

ಮಾತಂಗಿ ಚಾಂಡಾಲಿ

ಮಾತು ಆಡಲೂ ಬೇಕು 

ಸುಮ್ಮನಿರಲೂ ಬೇಕು 

 

೦೮. 

ಎದುರಿಗೆ ಬಂದಿರಿ 

ಏನೇನನ್ನೋ ಹೇಳಿದಿರಿ 

ನೆನಪಲ್ಲಾವುದೂ ಉಳಿಯಲಿಲ್ಲ 

ಉರಿವ ಬೆಂಕಿ ರೂಪದಲ್ಲವಳು 

ಬಂದಳು, ನಿಂದಳು, ಹೊಕ್ಕಳು 

ಅವಳನ್ನ ಕಾಣಬೇಕು 

ಅವಳ ಮಾತ ಕೇಳಬೇಕು 

ಅವಳೊಟ್ಟಿಗೆ ಹರಟೆಯೊಡೆಯಬೇಕು 

 

೦೯. 

ಆ ಒಂದು ಆಕಾರದ ದರ್ಶನಕ್ಕೆ 

ಏನೂ ಇಲ್ಲದ್ದು ಮೊದಲಿದ್ದದ್ದು 

ಇರುವುದು ಮತ್ತೆ 

ಏನೂ ಇಲ್ಲದೆ ಇರುವ 

ಏನೂ ಆಗದೆ ಇರುವ 

ಒಂದನುಭವ 

ಅಲ್ಲಿ ಯಾರೂ ಇರಲಿಲ್ಲ