ಅಲುಗಾಡದ ಬಂಡೆಗೆ
ಸ್ಥಿರವಾದ ಆಧಾರವಿಲ್ಲ
ಗಂಡೂ ಅಲ್ಲದ ಹೆಣ್ಣೂ ಅಲ್ಲದ
ಎರಡೂ ಆಗಿರಬಹುದಾದವರು
ಬೆಂಕಿ ಕಾಯಿಸಿಕೊಳ್ಳುತ್ತಿದ್ದಾರೆ
ಮಧ್ಯರಾತ್ರಿಯ ಚಳಿಯಲ್ಲೂ
ಎಲ್ಲೋ ಮಂಜು ಕರಗಿ
ಧೂಮ್ಮಿಕ್ಕುತ್ತಲೇ ಇದೆ
ಬೋರೆಂದು
ದರ್ಶನಕ್ಕೆ ನಿಂತ ಸಾಲು
ಉರಿಯುವ ಕೆಂಡದ ಮುಂದಿನ ಅಘೋರಿ
ಕರೆಯುತ್ತಲೇ ಇದ್ದಾನೆ ಹೊಗೆಯ ಹಾಕಿ
ಎತ್ತರದ ಗುಡ್ಡದ ಭೈರವನ ಗುಡಿ
ಮುಚ್ಚಿದ್ದಾರೆ - ಬೆಳಕು ಬೇಕು ತೆರೆಯಲಿಕ್ಕೆ ಮತ್ತೆ
ಇವರು ಪಂಚ ಪಾಂಡವರಂತೆ
ದ್ರೌಪದಿಯೂ ಕೃಷ್ಣನೂ ಸಹ
ಸ್ವರ್ಗಾರೋಹಣಕ್ಕೂ ಮುನ್ನ ಸಂಧಿಸಿದ್ದಿಲ್ಲಿ!!
ಏನನ್ನು ಕೇಳಬಹುದಿತ್ತು ಅವರನ್ನು ಆಗ!?
ಧರ್ಮರಾಯನ ನಾಯಿ ಕಂಡಿತ್ತ?
ಅದು ಗುಡಿಯಲ್ಲೆಲ್ಲೂ ವಿಗ್ರಹವಾಗಲೇ ಇಲ್ಲ
ನನ್ನ ಹೊತ್ತ ಕುದುರೆಯ
ಉಸಿರಾಟದ ಉಬ್ಬಸಕ್ಕೆ ಬಾಧ್ಯನಾರು?
ಸಾಮೂಹಿಕವಾಗಿ ಸಾಂಕ್ರಾಮಿಕ ರೋಗ ತಗುಲಿತ್ತು
ಒಂದಿಷ್ಟು ದಿನಗಳ ಹಿಂದೆ
ಎಲ್ಲ ಕುದುರೆಗಳಿಗೂ
ಹತ್ತುವುದೂ ಇಳಿಯುವುದೆರಡೂ
ಸಂಭವವಲ್ಲ
ಬೆನ್ನು ನೆಟ್ಟಗಿದ್ದರೂ ಬಳುಕುತ್ತಿದ್ದರೂ
ಹೇಗೇ ಇದ್ದರೂ ಸಾಲದದಕೆ
ಏರುವಾಗೊಂದು ಹದವಾದರೆ
ಬಳುಕಿದರೆ
ಇಳಿವಾಗ ಜಾರಿದರೆ
ಎಲ್ಲೋ ಏನೋ ಮಾತನಾಡಿದರೂ ಸಾಕು
ಮಣ್ಣ ಹೆಂಟೆಯಂತೆ
ಒಂದೇ ಬಾರಿಗೆ
ಇರುವುದೆಲ್ಲ ಬರೀ ಪ್ರಪಾತ
ಅದರ ಸುತ್ತೆಲ್ಲ
ಸುತ್ತು ಸುತ್ತು ಸುತ್ತಾಕಿ
ತಲುಪುವ ಜಾಗ ಉಂಟಲ್ಲ
ಆಗಲೂ ಅಲ್ಲೆಲ್ಲ ಬರೀ ವಾಹನಗಳೇ ಇದ್ದವು
ನೂರಾರು? ಬಹುಶಃ ಸಾವಿರಾರು?
ಟೀ ಕುಡಿಯುತ್ತಲೋ
ಹರಟುತ್ತಲೋ
ಇಸ್ಪೀಟಾಡುತ್ತಲೋ
ಕಡೆಗೆ ಜಗಳವಾಡುತ್ತಲೋ
ಆ ಚಾಲಕರಲ್ಲಿ ಯಾರೂ ಸಿಗಲಿಲ್ಲ
ಯಾರ ದೇಹವೂ ಸಿಗಲಿಲ್ಲವಂತೆ
ಮಂದಾಕಿನಿ ಮೈದಡವಿ ಹರಿದಾಗ
ಅದರೊಳಗಿನ ಅದೆಷ್ಟು ನುಣ್ಣಗಿನ ಕಲ್ಲುಗಳು
ಹರಿದವೋ ಏನೋ
ಸಾವಿರಾರು ವರ್ಷಗಳಿಂದ ಹರಿದು ಹರಿದು
ನುಣ್ಣಗಾಗಿಸಿದ ಕಲ್ಲುಗಳು
ಬಯಲ ರಾಶಿಯಲ್ಲಿ
ಉತ್ಖನನಕ್ಕೊಳಪಟ್ಟು ತೆಗೆದ ರಾಶಿ ರಾಶಿ
ತಲೆಬುರುಡೆಗಳಂತೆ
ಕಾಣುತ್ತೆ
ಲೀಚೀ ಮಾರುವವಳ ಮುಖದಲ್ಲೊಂದೇ ಪ್ರಶ್ನೆ
ನಿಮ್ಮಲ್ಲಿ ಲೀಚೀ ಬೆಳೆಯುವುದಿಲ್ಲವೆ?
ಏಕೆ?
ಒಂದು ಬೆಟ್ಟ ಮುಗಿದ ಮೇಲೆ
ಮತ್ತೊಂದು ಬೆಟ್ಟ ಮಗದೊಂದು ಮತ್ತೆ
ಸಪಾಟು ನೆಲವೇ ಇಲ್ಲವೇ
ಆ ಹಳ್ಳಿಗೂ ಈ ಜಾಗಕ್ಕೂ
ಇರುವುದೊಂದೇ ಮಾರ್ಗ
ಹಗ್ಗದ ಸೇತುವೆ
ಕೆಳಗೆ ಕಾಣುವುದೆಲ್ಲ
ಸಣ್ಣ ದೊಡ್ಡ ಮನೆ ಮಹಡಿಗಳ
ಅಡಿಪಾಯ ಮಾತ್ರ
ಎಲ್ಲವೂ ನೀರಲ್ಲಿ ಮುಳುಗಿ ಆಗಿದೆ
ಈ ಜಲಾಶಯ ವಿದ್ಯುತ್ ಆಗರ
ಬೆಳಗಬಲ್ಲದು ಅರ್ಧರಾಜ್ಯದ ಬೆಳಕ
ಮಕ್ಕಳಾಟಿಕೆಯ ಗೀಟಿನಂತಾಗಿದೆ
ಮುಳುಗಿದ ಕಟ್ಟಡದ ಅಡಿಪಾಯಗಳು
ನೀರೆಲ್ಲ ಆವರಿಸಿದಾಗ
ಗುರುತಿಸಬಲ್ಲಿರ
ಅದು ನಮ್ಮನೆ ಇದು ನಿಮ್ಮನೆ ?
ಕಣಿವೆಯ ನೀರಿನ ಸೌಂದರ್ಯಕ್ಕೆ
ಕ್ಲಿಕ್ಕಿಸಿದ ಫೋಟೋಗಳಿಗೇನು ಲೆಕ್ಕ ಬೇಕೇ?
ದಿಡೀರನೆ
ದಡಾರನೇ ಮೇಲಿಂದ ಬಿದ್ದ ಕಲ್ಲು
ಜಖಂ ಆದ ಕಾರಿನಲ್ಲಿದ್ದವರೆಲ್ಲ
ಹೋದದ್ದಾದರೂ ಎಲ್ಲಿಗೆ?
ಪ್ರತಿ ಪ್ರಯಾಗದಲ್ಲು
ಎರಡು ನದಿಗಳ ಮಿಲನ
ಭಿನ್ನ ಬಣ್ಣದ ನೀರ ಹರಿವು
ದೇವಪ್ರಯಾಗದಿಂದದು ಗಂಗೆ ಮತ್ತೆ
ಕೊರೆವ ತಂಪಿನ ನೀರು
ಅಯ್ಯೋ, ಯಾರೂ ನೆನಪಾಗುತ್ತಿಲ್ಲವಲ್ಲ
ಯಾರದೂ ಕರೆಯಿಲ್ಲವಲ್ಲ
ಮುಳುಗಿದರೆ ಆ ಕೊರೆವ ತಂಪಿಗೆ
ದೇಹದ ಉರಿ ಬಿಸಿ ಹೊರಗೆ
ಮೈಮೇಲೆ ಲಂಗೋಟಿ ಇನ್ನೂ ಉಂಟಲ್ಲ
ಆ ಗುಡ್ಡ ಮರಿ ಬೆಟ್ಟ
ನೋಡುತ್ತಿರುವಾಗಲೇ
ಹೊಸ ಹೆಸರು ಕೊಟ್ಟಿತ್ತು
ಹಳೆಯದನ್ನೆಲ್ಲಾ ಸುಟ್ಟಂತೆ
ಕೇದಾರ - ಬಟಾ ಬಯಲೋ
ಬಯಲಲ್ಲಿಟ್ಟ ಬದುವೋ
ಎಲ್ಲಾ ಮಂಜಾಗಿಬಿಟ್ಟಿದ್ದಾಗ
ನಿನ್ನ ಬಿಸಿಗೆನು ಗತಿ?
ಕಲ್ಲಾದರೂ ಸರಿ - ಶಿಲೆಯಲ್ಲಿದ್ದರೂ
ಅಪ್ಪಿಕೊಂಡಾಗ
ಆ ಬೆಟ್ಟವನ್ನಪ್ಪಿಕೊಂಡಂತೆ
ಗುಡ್ಡವನ್ನಪ್ಪಿಕೊಂಡಂತೆ
ಬಂಗಾರದ ಬಣ್ಣದ ಬೆಳಕು
ಮಂಜು ಬೆಟ್ಟದ ತುದಿಗೆ ತಾಗಿ
ಹರಿದ ನೀರು - ಮೈಯೆಲ್ಲಾ ಹಬ್ಬಿ
ಶ್ರೀರುದ್ರವಾಗಿ
ನೆಲ ತಾಕಿದ ಕಾಲು
ತಂಪಾಯಿತು