ಕಾಗೆ ಗುಡ್ಡ ಮತ್ತು ಕಾಗೆ


ಇದಮಿತ್ಥಂ- ಇತ್ತಿತ್ತಲಾಗಿ 

ರಸ್ತೆಬದಿಯ ಕಾರಕೂನ

ಖೂನಿ ಮಾಡಿದ ಖೈದಿಯ 

ಕರಾರುವಕ್ಕಾದ ಭವಿಷ್ಯಕ್ಕೆ 

ಅವಾಕ್ಕಾದದ್ದೇ 

ಕಾಗೆ  ಹಿಂಬಾಲಿಸಹತ್ತಿತು


ಎಲ್ಲೂ ಬಿಟ್ಟಿದ್ದಿಲ್ಲ 

ಬದಿಗೆ ಬದಿ ನಡೆ ನಡೆದಾಗಲೂ  

ತಾಕದೆಲ್ಲೋ  ದೂರದಲ್ಲಿರಬೇಕಾದರೂ 

ತಾರಸಿಯಿಂದ ತಾರಸಿಗ್ಹಾರಿ 

ಸಿಕ್ಕ ತಿಪ್ಪೆಯಲ್ಲಿನ ಉಳಿದ ಮಾಂಸಕ್ಕಷ್ಟೇ ಅಲ್ಲ  

ದಾರಿಯಲ್ಲೆಲ್ಲಾ ಚೆಲ್ಲಿದ್ದ 

ಕಡಿದ ಮೀನಿನ ರೆಕ್ಕೆಯ ಬದಿಯ ಚೂರನ್ನೂ  

ಬಿಡದೆ ಎಗರಿಸಿದ ಪರಿಯಲ್ಲೇ 

ರಸ್ತೆ ದಾಟುತ್ತಿದ್ದಂತೆಯೇ ಬಣ್ಣ ಮಾಸಿದ ಸಿಮೆಂಟು ವಿಗ್ರಹದ 

ಕಣ್ಣು ನೋಡುತ್ತಿದ್ದದ್ದಾದರೂ  ಯಾರನ್ನು


ಕಪ್ಪು ಕಾಗೆ ಕಡು ಕಪ್ಪು ಕಾಗೆ 

ನನ್ನ ಹೆಜ್ಜೆ ಹೆಜ್ಜೆಗೂ ನಿನ್ನ ಹಾರಾಟ

ಸುಮ್ಮನಿರುವಾಗಲೆಲ್ಲ ಕಿವಿಗಡಚಿಕ್ಕುವ  ಕಾಕಾ ಚಿರಾಟ 


ಸಣ್ಣ ಸಣ್ಣ ಹಕೀಮತ್ತಿಗೆಲ್ಲಾ 

ಅಲುಗಾಡಿಸಲಿಕ್ಕಾಗಬಾರದು 

ಉದ್ಭವದ  ಸ್ಥಿರತೆಯೇ ನಿರ್ಮಿತಿ

ನಾಡಿಗೆ ಬಂದದ್ದಾದರೂ ಏಕೆ

ಕಾಡಿನಲ್ಲೇ ಇರಬಹುದಿತ್ತಲ್ಲ

ಕಾಗೆ ಬುದ್ಧಿವಂತ 

 

ಉನ್ಮೇಷದ  ನಿಮೇಶಕ್ಕೆ 

ಉನ್ಮತ್ತಳ  ಉದ್ಭೂತಕ್ಕೆ 

ಆಗೋ ಅಲ್ಲೇ ಕಾಣಿಸಿಕೊಂಡದ್ದು 

ಮುನ್ನಾ ಮುನ್ನಾ ಮುನ್ನಾ 

ಕಾಳಿಯ ಕಂಕಾಳಕ್ಕೂ ಮುನ್ನಾ… “ 




 “ಹೇಳು, ಪದ ಅಕ್ಷರಗಳ ಮಾತು

ಭಾಷೆ ಅರ್ಥವಾದೀತ  ನಿನಗೆ?  

ನಿನ್ನ ಕಾಕಾ ಎಂಬೋ ಒಂದೇ ಶಬ್ದದಿಂದೆಲ್ಲಿಯದು 

ಅನಂತ  ಸಾಧ್ಯತೆಯ ಅರ್ಥ ವಿನ್ಯಾಸ ?

ನಿಲ್ಲು, ಕಲ್ಲು ಕುಕ್ಕ ಬೇಡ

ಒಡೆದುಳಿದ  ಪುಡಿಯ ಮಣ್ಣಲ್ಲಿ 

ತಿದ್ದುತ್ತಾ ಕೂರಲಾರೆನೀಗ” 

 

ಯಾಕೆ ಕರೆದೊಯ್ದದ್ದು

ಕಂಬಾಲರಾಯನ ಬದಿಯ 

ಕಾಗೆ ಗುಡ್ಡಕ್ಕೆ - ಕಡು ಕಪ್ಪು ಕಾಗೆ ಗುಡ್ಡಕ್ಕೆ 

ಒಂದಾನೊಂದು ಕಾಲದಲ್ಲಿ ಹಾಗೇ  ಬಂದು ಕುಳಿತ 

ನಾನೇ ಕಪ್ಪು ಗುಡ್ಡ, ಕಡು ಕಪ್ಪು ಗುಡ್ಡ - ಕಾಗೆ ಗುಡ್ಡ

ಎಂದದರ ಬಳಿಗೆ ಹಾರಿ ಹೋದಾಗ 

ಕಡು ಕಪ್ಪಲ್ಲಿ ಬೇರೇನೂ ಗುರುತಿಸಲಾರದೆ ಹೋದೆ.