ಅಭಿಧಾ ೦೨ : ದ್ವಂದ್ವ ದಾಟಿ ದಾರಿ ಹೊಕ್ಕಿ

ಅಭಿಧಾ ೦೧ ಇಲ್ಲಿ ಕ್ಲಿಕ್ಕಿಸಿ 

೦೧. 

ಡೈಯಲೆಕ್ಟಿಕ್ (dialectics) ಬಗ್ಗೆ ಓದುತ್ತಿದ್ದೆ. 

ಇಲ್ಲಿ 'ನೋಡುವುದು' ಎಂಬುದು ಬರುವುದು. ನೋಡುವುದು ಪ್ರಜ್ಞೆಗೆ ಬಹಳ ಮುಖ್ಯವಾಗುತ್ತದೆ. ನೋಡಲಿಕ್ಕೆ ಪ್ರಕೃತಿ ಬೇಕು. ಪ್ರಜ್ಞೆಯು ಸ್ವತಂತ್ರ, ಪ್ರಕೃತಿಯೂ ಸ್ವತಂತ್ರ. ಇವೆರಡೂ ಒಂದಾದಾಗ, ಒಂದಾಗುವುದೆಂದರೆ: ಅಲ್ಲಿ   ಸೃಜನಾತ್ಮಕವಾಗುತ್ತೆ,   ಕಾವ್ಯ ಹುಟ್ಟುವುದು ಆಗಲೇ.

ಈಗ  ಜಿಡ್ಡು ಹೇಳುತ್ತಿದ್ದದ್ದು ಮುಖ್ಯವಾಗುವುದು,  ಅದೆಂದರೆ 'ನೋಡುವುದು'.

೦೨. 

ಬದುಕು ಸಂಪೂರ್ಣ ವೈರುಧ್ಯಗಳಿಂದ ಕೂಡಿದೆ ಎಂದು ಗುರುಗಳು ಇಂದು  ಬೆಳಗ್ಗೆ ಮಾತನಾಡುತ್ತಾ ಹೇಳಿದ್ದನ್ನು  ಅರಗಿಸಿಕೊಳ್ಳಲಿಕ್ಕೆ  ಪ್ರಯತ್ನಿಸುತ್ತಲೇ ಇದ್ದೇನೆ; ಅರ್ಥವಾಗಲಿಲ್ಲ. ಕಾವ್ಯಕ್ಕೆ ಶರಣಾಗಬೇಕು.

ಹಲವು ಕಾಲದಿಂದ ಕಾವ್ಯ ಸಿದ್ಧಾಂತದ ಬಗ್ಗೆ ಯೋಚಿಸುತ್ತಲೇ ಇದ್ದೇನೆ. ಭಾರತೀಯ ಕಾವ್ಯಮೀಮಾಂಸೆಯು ಬಹಳಷ್ಟು ಐಡಿಯಾಲಿಸ್ಟ್‌(Idealist) ಆಗಿದೆ. ಅದಕ್ಕೆ ಸಮಾನಾಂತರವಾಗಿ ಯಾವ ಕಾವ್ಯಮೀಮಾಂಸೆಯನ್ನು ಕಟ್ಟಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದವನಿಗೆ  ಡೈಯಲೆಕ್ಟಿಕ್ಸ್ ಒಂದು   ಉತ್ತರವನ್ನು ನೀಡುತ್ತದೆಯೇ  ಎಂದು ಪ್ರಯತ್ನಿಸಬೇಕಿದೆ.

ಬುದ್ಧನ ತಾತ್ವಿಕತೆ, ಮಾರ್ಕ್ಸ್‌ನ ಡೈಯಲೆಕ್ಟಿಕ್ಸ್, ಜಿದ್ದು, ರಿಲ್ಕೆ ಅವರ ಕಾಣುವಿಕೆ ಹೀಗೆಲ್ಲಾ  ರೂಪಗೊಳ್ಳುತ್ತಿದೆ. ಈಗ ಕಾವ್ಯಕ್ಕೆ ಮನಸ್ಸನ್ನು ಸಿದ್ಧಗೊಳಿಸಿಕೊಳ್ಳಬೇಕು. 

ಓದುತ್ತಾ ಹೋದ ಹಾಗೆ ಅಮಲು ಹತ್ತುತ್ತಿದೆ. ಯಾಕೆ ನನ್ನನ್ನು ಇಷ್ಟು ಕಾಲ ಓದುವುದರಿಂದ ದೂರ ಇಟ್ಟರು?

ಮತ್ತೆ ಮತ್ತೆ ಇದು ರೂಪಗೊಳ್ಳುತ್ತಲೆ ಇದೆ.  ಶಾಶ್ವತವೆಂಬುದು  ಏನೂ ಇಲ್ಲ. ಹಾಗೆ ಇರುವುದೇ ಆದರೆ ಅದು  ಚಲನೆ ಮಾತ್ರ. ಚಾಲನೆ ಮಾತ್ರ ಶಾಶ್ವತ ನಿರಂತರ ಪ್ರಕ್ರಿಯೆ.

೦೩. 

ಈ ವರ್ಷ ಮುಗಿಯುತ್ತಾ ಬಂದಿದೆ. ಒಂದು ರೀತಿಯ ನೆಮ್ಮದಿ, ಏನೋ ಒಂದು ಸ್ಪಷ್ಟವಾದ ಹಾದಿ. ಹಿಂದಿನ ವರ್ಷದ ಆರಂಭದಲ್ಲಿದ್ದ ಹಲವು ಗೊಂದಲಗಳಿಗೆ ಮಾರ್ಗದರ್ಶನ ಸಿಕ್ಕಿದೆ. ಜಗತ್ತಿನ, ಸತ್ಯದ, ನೋಟದ ವಿಶ್ಲೇಷಣಾ ವಿಧಾನಗಳು ಹಲವರಿಗಿದೆ. ಅದಕ್ಕಾಗಿ ಕೃತಜ್ಞತೆಗಳು.

ಈ ವರ್ಷ ಎರಡು ತತ್ವಗಳು ನನ್ನನ್ನು ಕೇವಲ ಆಕರ್ಷಿಸಿದ್ದು ಮಾತ್ರವಲ್ಲ, ಒಂದು ನಿರ್ದಿಷ್ಟ ಸೂತ್ರವನ್ನೊದಗಿಸಿದವು. ಮೊದಲನೆಯದು ಶ್ರೀವಿದ್ಯಾ ಶಾಕ್ತ ತಂತ್ರ: ಶಿವಶಕ್ತಿ ದ್ವೈತ ತತ್ವವೂ,   ಅವುಗಳ ನಡುವಿನ ವೈರುಧ್ಯವೂ,  ಸಾಮ್ಯವೂ ವಿಶದಗೊಳ್ಳುತ್ತಲೇ,  ಪ್ರಜ್ಞೆಯ ವಿಕಾಸದ ಅಗಾಧ ಸಾಧ್ಯತೆಗಳನ್ನು ಬೆಚ್ಚಿ ಬೀಳಿಸುವ ಹಾಗೆ ತೆರೆದಿಟ್ಟಿತು.   ಮತ್ತೊಂದು ಡೈಯಲೆಕ್ಟಿಕ್ ವಿಧಾನ. ಇದು ಆಹಾ ಎನ್ನುವಷ್ಟು ಅಗಾಧವಾಗಿದೆ! ಸಮಾಜವನ್ನು, ಬದುಕನ್ನು ಕಾಣಲನುಗುಣವಾಗುವಂತೆ ಮಾಡಿದುದು. ಈ ಎರಡು ಹಾದಿಗಳು ತೆರೆದಿಟ್ಟ ಕಾರಣದಿಂದಾಗಿ ಹಲವು ಪ್ರಶ್ನೆಗಳಿಗೆ ಉತ್ತರ ದೊರಕಿದರೂ, ಹಲವು ತೆರೆದುಕೊಂಡಿದೆ. 


೦೪. 

ಪ್ರೀತಿಯ 20**ಕ್ಕೆ ಧನ್ಯವಾದಗಳು. ಆತ್ಮೀಯ ಹೊಸ ವರ್ಷವೇ, ಸ್ವಾಗತ!

ಬರವಣಿಗೆಗೆ  ಕಾರಣವನ್ನು ಹುಡುಕುವುದು ಮೊದಲಿನಿಂದಲೂ ಬಂದಂತಹ ಚಾಳಿ. ಮರೆಯುವುದಿಲ್ಲ.  ಮತ್ತೆ ಮತ್ತೆ ಕೇಳಿಕೊಳ್ಳುವುದು: ಯಾಕೆ ಬರವಣಿಗೆ? ಹಿಂದೆ ಇದಕ್ಕೊಂದು ಅಸ್ಪಷ್ಟ ಉತ್ತರವಿತ್ತು. ಅನುಭವದ ಪುನರ್ ಅನುಭಾವದಲ್ಲಿ ಹೊಸ ನೋಟ ಕಾಣುತ್ತದೆ ಎಂದು. ಅಸ್ಪಷ್ಟವಾಗಿ ಸತ್ಯ. ಈಗ ಅದಕ್ಕೊಂದು ಸ್ಪಷ್ಟ ರೂಪ ಕಾಣುತ್ತಿದೆ. ಪದಾರ್ಥ ಹಾಗು  ಪ್ರಕೃತಿ ಎರೆಡೂ  ಎದುರಿಗಿರುವುದು. ಅದನ್ನು ಕಾಣುತ್ತೇನೆ, ಕಾಣಬೇಕು. ಹಾಗೆ  ಎದುರು ಕಾಣುತ್ತಿರುವುದು ನನ್ನ  ನಿಯಂತ್ರಣವಲ್ಲ; ಎದುರಿಗಿರುವುದು ವಾಸ್ತವ ಸತ್ಯ  ಕಾಣುತ್ತಿರುವುದು. ಹಾ, ಕಾಣುತ್ತಿರುವುದು   ಪ್ರಕೃತಿ ಪದಾರ್ಥ ಎದುರಿಗಿದೆ.  ಹಾಗೆ ಕಂಡದ್ದು ಪ್ರಜ್ಞೆಯೊಳಗೆ ಏರಬೇಕಿದೆ. 

ಹಾಗಾಗಿ ಪ್ರಜ್ಞೆಗೂ ಅಸ್ತಿತ್ವವುಂಟು, ಅದೇ ರೀತಿ ಪದಾರ್ಥಕ್ಕೂ ಉಂಟು. ಹೀಗೆ ಪದಾರ್ಥದಿಂದ ಪ್ರಜ್ಞೆಯು ವಿಕಸನಗೊಳ್ಳುತ್ತದೆ. ಹಾಗಾದರೆ ಇದು ಒಂದು ದಿಕ್ಕಿನ ಪಯಣವಲ್ಲ. ಹಾಗೆ ವಿಕಾಸಗೊಂಡ ಪ್ರಜ್ಞೆಯು ನೋಟವನ್ನು ಹರಿತಗೊಳಿಸುತ್ತದೆ. ಹಾಗಾಗಿ ಪದಾರ್ಥ ಪ್ರಪಂಚವನ್ನು ಕಾಣುವ ಬಗೆ ಬೇರೆ ರೀತಿಯಿರುತ್ತದೆ. ಹೀಗೆ ನಿರಂತರವಾದ ಪದಾರ್ಥ ಪ್ರಪಂಚ ಹಾಗೂ ಪ್ರಜ್ಞೆಯ ನಡುವಿನ ಸಂವಹನವೇ ಅಸ್ತಿತ್ವಕ್ಕೆ ಕಾರಣ. ಈ ಸಂವಹನಕ್ಕೆ ವಾಹಕವಾಗಿರುವುದೇ ಸಾಹಿತ್ಯ. 

೦೫. 

ಹಿಂಸೆ ಮೂಲಭೂತವಾದದ್ದು, ವಾಸ್ತವವಾದದ್ದು. ಬುದ್ಧ ದುಃಖ ಎಂದು ಇದನ್ನೇ ಹೇಳಿದ್ದಿರಬೇಕು. ಇರುವುದು ವಾಸ್ತವ, ಹಾಗೇ  ಇರುವುದು. ಹಾಗೆ ಇರುವುದು ಎಲ್ಲಾ. ಹಾಗೆ ಇರುವುದರಲ್ಲಿ ಹಿಂಸೆಯೂ ಸೇರಿದೆ. ಹಿಂಸೆಯು ನಿಜದಲ್ಲಿ ಕೇಡಲ್ಲ, ಅಥವಾ ಕೆದೂ  ಸಹ ವಾಸ್ತವ. ಕಾಳಿ ಕಡುಕಪ್ಪು ಬಣ್ಣ, ಕಾಡು ಕಪ್ಪು,   ಉಗ್ರರೂಪ. ಶಿವನ ಎದೆಯ ಮೇಲೆ ಹತ್ತಿ ಕುಣಿಯುತ್ತಾಳೆ. 

ಕಾಳಿ, ಮಹಾಕಾಲ, ಸಾವು – ಎಲ್ಲವೂ ವಾಸ್ತವಗಳು. ಹಿಂಸೆ ವಾಸ್ತವ.  ಹಾಗೆಂದು ಅದು ವಿರುದ್ಧವಲ್ಲ. ಅಥವಾ ಹಾಗೆ ಅದನ್ನು ವೈರುಧ್ಯವೆಂದೂ ವಿರುದ್ಧವೆಂದೂ ಬಗೆದರೆ, ಆ ವಿರುದ್ಧದ ಜೊತೆಗಿನ  ಹೋರಾಟದಲ್ಲಿ ನಿಜವೂ ಏಳಲ್ಪಡುವುದು.   

ಹಿಂಸೆಯನ್ನು ಯಾವುದೇ ಪೂರ್ವಗ್ರಹವಿಲ್ಲದೆ ಕಾಣಲು ಸಾಧ್ಯವಾ?


೦೬. 

ಇತಿಹಾಸ ಎಂದರೇನು ಎಂಬ ಪ್ರಶ್ನೆಗೆ ವರ್ಗಸಂಘರ್ಷ ಎಂಬುದು ಅವರ  ಉತ್ತರ. ಅದು ಒಪ್ಪುವುದು-ಬಿಡುವುದು ಸದ್ಯಕ್ಕೆ ದೂರದ ಸಂಗತಿ. ಹಲವು ಬಗೆಯ ಸಿದ್ಧಾಂತಗಳನ್ನು ಓದಿ ನಂತರ  ಸ್ಪಷ್ಟ ಚಿತ್ರಣ ಮೂಡಬಹುದೆಂದೆನಿಸುತ್ತೆ.  ಇತಿಹಾಸ ಎನ್ನುವುದು  ಘಟನೆಗಳ ನಿರೂಪಣೆಯಲ್ಲ. ಹಾಗೆ   ಘಟನೆಗಳು ನಡೆಯುವುದಕ್ಕೆ ಕಾರಣವನ್ನು ಕಾಣುವುದು ಎಂಬುದಿದೆಯಲ್ಲ, ಅದು ಸರಿ ಎನ್ನಿಸಿತು. ಸ್ವಲ್ಪ ವಿಸ್ತರಿಸಿಕೊಂಡರೆ ಸಾಹಿತ್ಯದಲ್ಲೂ ಅಷ್ಟೇ ಅಲ್ಲವ.  ಮುಖ್ಯವಾಗಿ ಕಥೆ-ಕಾದಂಬರಿಗಳಲ್ಲಿ ಪಾತ್ರಗಳಿವೆ. ಒಮ್ಮೆ ಒಂದು ಪಾತ್ರವನ್ನು ಮೂಡಿಸಿದ ತಕ್ಷಣ

 ಅಲ್ಲಿ ಅದರ ವಿರುದ್ಧ ಬಿಂಬ ಮೂಡಿದೆ. ಹಾಗೆ ಪಾತ್ರಗಳು  ಅದರ ಒಳಗೆ ಹಾಗು ಹೊರಗೆ ನಿರಂತರ ಘರ್ಷಣೆಗಳಿಗಿಳಿದಿವೆ., ಈ ಘರ್ಷಣೆಯಲ್ಲಿ ಬೆಳವಣಿಗೆ, ವಿಕಾಸ ಎಲ್ಲವೂ.  

ಜಗತ್ತನ್ನು ನೋಡುವ ನಾನು, ಕವಿ, ಲೇಖಕ – ನೋಡುವುದೂ,   ಕೇವಲ ನೋಡಿ ಜರುಗಿದ್ದನ್ನು ದಾಖಲಿಸುವ ಕೆಲಸವಲ್ಲ ನಮ್ಮ ಕೆಲಸ.  ಹಾಗೆ ನೋಡುವುದು, ನೋಡಿದ ನಂತರ ಜರುಗುವ ಪ್ರಜ್ಞೆಯಲ್ಲಿನ  ಘರ್ಷಣೆಗಳು, ಪ್ರಜ್ಞೆ ಹಾಗು ಕಂಡ ಪದಾರ್ಥದ ನಡುವಿನ ಘರ್ಷಣೆ ಅದು ಮುಖ್ಯ. ಅದುವೆ ಮುಖ್ಯ. ಹಾಗೂ ಸೂಕ್ಷ್ಮ.   

೦೭. 

ಮತ್ತೆ ದಿನಾಂಕ ಹಾಗೂ ಸಮಯವನ್ನು ಹಾಕುತ್ತಿದ್ದೇನೆ. ಆಕಸ್ಮಿಕವಾಗಿ ನಾನು ಎರಡು ವರ್ಷಗಳ ಕಾಲ ಬರೆದ ಡೈರಿ ಮೊನ್ನೆ ಸಿಕ್ಕಿತು. ಅದರಲ್ಲಿ ಎಲ್ಲಾ ದ್ವಂದ್ವಗಳು, ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅದೆಷ್ಟು ಪಲ್ಲಟಗೊಂಡ ಮನಸ್ಸು ಎಂದು ಆಶ್ಚರ್ಯವಾಯಿತು!

ಇಂದು ಅಷ್ಟೊಂದು ಕ್ಷೋಭೆಯಿಲ್ಲ. ಒಂದು ರೀತಿಯ ಶಾಂತತೆ, ಬಿಡುವಿನ ಬದುಕು. ಆಗ ಉತ್ತರಕ್ಕೆ ತೀವ್ರವಾಗಿ ಹಂಬಲಿಸುತ್ತಿದ್ದೆ ಎಂದೆನಿಸುತ್ತೆ. ಈಗ ಅದಿಲ್ಲವೋ ಏನೋ. ಏನೇ ಇರಲಿ ಈಗ ಅನಿಸುತ್ತದೆ ನಂತರದ ದಿನಗಳಲ್ಲಿಯೂ ನಾನು ಡೈರಿ ಬರೆದಿಡಬೇಕಿತ್ತು ಅಂತ.

೦೮. 

ಮೀಮಾಂಸೆ ಪದಕ್ಕೆ 'ಆಳವಾಗಿ ವಿಚಾರ ಮಾಡುವುದು' ಎಂಬ ಅರ್ಥ. ಮೀಮಾಂಸೆ ಅಗತ್ಯ ಹಾಗೂ ಅವಶ್ಯ. ಮುಂದೆ ಒಂದಿಷ್ಟು ಸಾಲುಗಳನ್ನು ಅರ್ಥದ ಪರಿಧಿಯನ್ನು ಮೀರಿ ಬರೆಯ  ಹೊರಟಿದ್ದೇನೆ. ಮಾತಿನ ಬಗೆಗೆ  ಚಿಂತಿಸುತ್ತಿದ್ದೆ. ಮಾತು ಪ್ರಜ್ಞೆಯ ಅಭಿವ್ಯಕ್ತಿ. ನೋಟ  ಪ್ರಜ್ಞೆಯ  ಸ್ವೀಕೃತಿಯಾದರೆ, ಮಾತು ಅಭಿವ್ಯಕ್ತಿ. ಎಲ್ಲಾ ಬಗೆಯ ಮಾತು ಅದರ ಅಭಿವ್ಯಕ್ತಿ. ಹೀಗಾಗಿಯೇ ಮೌನವೂ ಅದರ ಅಭಿವ್ಯಕ್ತಿ. ಆ ಅಭಿವ್ಯಕ್ತಿಗೆ ಹಾದಿ ಕೊಡುವುದು, ಕೊಡಬೇಕಾದದ್ದು ಕರ್ತವ್ಯ.

ಮಾತು ಎರಡು ಬಗೆ: ತಾರ್ಕಿಕವಾದದ್ದು, ಅತಾರ್ಕಿಕವಾದದ್ದು. ಈ ವಿಭಜನೆಯೂ  ಮಾತಿನಲ್ಲೆ   ಸೃಷ್ಟಿ. ತಾರ್ಕಿಕ-ಅತಾರ್ಕಿಕವೆಂಬ ಭಿನ್ನ ವಿರುದ್ಧ ಧ್ರುವಗಳು ನಿಜಕ್ಕೂ ವಿರುದ್ಧವೇ? ತಾರ್ಕಿಕವಾಗಿ ಮುನ್ನಡೆದ ಮಾತು ಮುಗಿದದ್ದು ತರ್ಕಕ್ಕೆ ಸಿಗಲಾದದ್ದು  ಸಾಧ್ಯ ಎಂದು ತಾರ್ಕಿಕವಾಗಿ ತಿಳಿದ ನಂತರ. ಹಾಗಾಗಿ, ಅತಾರ್ಕಿಕಕ್ಕೆ  ಮುನ್ನುಡಿಯಾದದ್ದು ತಾರ್ಕಿಕಕ್ಕೆ ಮಾತ್ರ ಸಾಧ್ಯ.

 ತಾರ್ಕಿಕವಾದದ್ದು ವಿಜ್ಞಾನ, ಅತಾರ್ಕಿಕವಾದದ್ದು ಕಾವ್ಯ. ಎರಡು ಮುಟ್ಟಲು ಹೊರಟಿರುವುದು ಸತ್ಯವನ್ನೇ. ಹಾಗೂ ಎರಡು ವಿರುದ್ಧ ಧ್ರುವಗಳಲ್ಲ, ಅಥವಾ ವಿರುದ್ಧವೆಂದು ಭಾವಿಸಬೇಕಿಲ್ಲ, ಭಾವಿಸಬಾರದು. ಸತ್ಯವು ತಾರ್ಕಿಕ-ಅತಾರ್ಕಿಕತೆಗಳ ಅನುಸಂಧಾನ ಕ್ರಿಯೆಯಿಂದೊದಗುವ  ಉತ್ಪನ್ನ ಅಥವಾ ಪರಿಣಾಮ. ಹೌದು, ಸತ್ಯವು ಪರಿಣಾಮ ಅಥವಾ ಉತ್ಪನ್ನ.

ಹಾಗಾದರೆ ಮೀಮಾಂಸೆ ಅಗತ್ಯ. ಕಾವ್ಯದಲ್ಲೂ ಕಥನದಲ್ಲೂ ಮೀಮಾಂಸೆ ಅಗತ್ಯ. ಕಾವ್ಯ ಹಾಗೂ ಕಥನಗಳು ಎರಡಕ್ಕೂ ಮೂಲಭೂತ ಸಾಮ್ಯತೆಗಳೂ ವೈರುಧ್ಯಗಳೂ ಇವೆ.. ಪ್ರಜ್ಞೆಯು ಎರಡು ಸ್ತರದಲ್ಲಿ ಕುಳಿತಿರುತ್ತದೆ: ಒಂದು ಬೌದ್ಧಿಕ, ಮತ್ತೊಂದು ಭಾವನಾತ್ಮಕ. ಇಲ್ಲೂ ವೈರುಧ್ಯಗಳಂತೆ  ಕಂಡರೂ ವೈರುಧ್ಯಗಳಲ್ಲ. ಕಾವ್ಯ-ಕಥನದ ಮೂಲ ಉದ್ದೇಶ ಪ್ರಜ್ಞೆಯನ್ನು ಬೌದ್ಧಿಕ ಹಾಗೂ ಭಾವನಾತ್ಮಕ ಎರಡೂ  ನೆಲೆಗಳಲ್ಲಿ ಅನುಸಂಧಾನಗೊಳಿಸಿ ಸತ್ಯವನ್ನು ಕಾಣಿಸುವುದು. ಹಾಗೆ ಕಂಡದ್ದು ಮತ್ತೆ ಮಾತಾಗಿ, ಕಾವ್ಯವಾಗಿ, ಕಥನವಾಗಿ ಹರಡುವುದು. ಅದೆಷ್ಟು ಮಟ್ಟಿಗೆ ಈ ಎರಡೂ  ವಲಯಗಳನ್ನು ಸಂಶ್ಲೇಷಿಸಲು ಶಕ್ತ ಎನ್ನುವ ಮೇರೆಗೆ ಅದರ ಮಹತ್ವ. 

ಕವಿ/ಕಥನಕಾರನ ಮುಖ್ಯ ಉದ್ದೇಶವು ತಾನು ಕಂಡ ನೋಟಗಳನ್ನು ಪ್ರಜ್ಞೆಗರ್ಪಿಸಿ, ಆ  ಪ್ರಜ್ಞೆಯು ಬೌದ್ಧಿಕ ಹಾಗೂ ಭಾವನಾತ್ಮಕ ನೆಲೆಗಳಲ್ಲಿ ಹರಿದಾಡುವುದನ್ನನುಭವಿಸಿ ಆ  ಅನುಭವವನ್ನು  ಕೃತಿಯಾಗಿಸುವುದು. ಇದು ನೋಟ ಹಾಗೂ ಮಾತಿನೆರಡರ  ನಡುವೆ, ಬೌದ್ಧಿಕ ಹಾಗೂ ಭಾವನಾತ್ಮಕ ಸ್ಥರಗಳೆರಡರ ನಡುವೆ ಪ್ರಜ್ಞೆಯು ನಿರಂತರವಾಗಿ ಸಂಚರಿಸುವ ಕ್ರಮವನ್ನು,  ಆ  ಕ್ರಮದಲ್ಲಿ ದಕ್ಕುವುದನ್ನು  ಅನುಭವಿಸಲಿಕ್ಕೆ.  ಹಾಗೆ ಸಂಚರಿಸುವ ಕ್ರಮವನ್ನು ಸತ್ಯವೆನ್ನಬಹುದೇನೋ. 

ಈ ಸಂಚಾರ ಹಾಗೂ ಎಚ್ಚರಗಳ ಬಹುಮುಖ್ಯ. 

೦೯. 

ಅಂದುಕೊಂಡಿದ್ದು, ಮಾಡಿದ್ದು ಯಾವುದೂ  ಏನೂ ಆಗುತ್ತಿಲ್ಲ. ನನ್ನ ಪ್ರಯತ್ನ   ಮುಂದುವರೆಯುತ್ತಲೇ ಇದೆಯಾದರೂ, ಒಂದು ಹೆಜ್ಜೆ ಮುಂದೆ ನಡೆದರೆ ನಾಲ್ಕು ಹೆಜ್ಜೆ ಹಿಂದೆ ಸಾಗುತ್ತಿದ್ದೇನೆ. ಕೈಯಲ್ಲಿ ಹಣ ಇಲ್ಲ, ಬೇಕು ಎಂದದ್ದು  ಮಾಡಲಿಕ್ಕೆ ಆಗುತ್ತಿಲ್ಲ. ನನ್ನ ಸಂಪಾದನೆ ಸಾಕಾಗುತ್ತಿಲ್ಲ, ಏನಕ್ಕೂ ಸಾಕಾಗುತ್ತಿಲ್ಲ. ವೇದಾಂತ ಎಲ್ಲ ಗೊತ್ತು. ಎಲ್ಲ ಉಪದೇಶಗಳು ಗೊತ್ತಾದರೂ ಯಾಕೋ ಮನಸ್ಸು ತೀವ್ರವಾದ  ಬೇಸರಕ್ಕೆ ಒಳಗಾಗಿದೆ.  ಸೋತು ಸುಣ್ಣವಾಗಿದ್ದೇನೆ.  ತಾಯಿ, ನೀನೇ ಕಾಪಾಡಬೇಕು. ಪೂರ್ತಿ ಸೋತೆ ಎಂದರೆ, ಎಲ್ಲೋ ಒಂದು ಬೆಳಕು ಕಾಣುತ್ತೆ. ವಿಶ್ವಾಸ ಮೂಡುತ್ತೆ. ಆಗಲೇ   ಗಾಬರಿಯಾಗೋದು. ನಂಬಿ ಹೊರಡಲು ಸಿದ್ಧವಾಗಿ ಹೊರಟರೆ, ಮತ್ತೆ ತುಸು ಹಾದಿ ನಡೆದ ನಂತರ ಬೆಳಕು ಕಾಣೋದಿಲ್ಲ. ಪೂರ ಕಟ್ಟಲು.  ಈಗ ಈ  ಬೆಳಕನ್ನು ನಂಬಬೇಕೆ? ನಂಬಿ ನಡೆಯಬೇಕೆ? 

 ಆಲೋಚನೆಗಳು ಸ್ಪಷ್ಟವಾದಾಗ, ಒಂದು ಹಂತಕ್ಕೆ ಉತ್ತರಗಳು ಸ್ಪಷ್ಟವಾಗತೊಡಗುತ್ತವೆ, ಸ್ಪಷ್ಟವಾಗಿವೆ.

 ಯಾಕೆ ಬೇಸರ ಯಾಕೆ ಈ ಕಿನ್ನತೆ.  ನನಗೆ ದೊರೆಯುತ್ತಿಲ್ಲ ದಕ್ಕುತ್ತಿಲ್ಲ ಎಂಬುದು ಒಂದು ಕಡೆಯಾದರೆ, ಮತ್ತೊಂದು ಆಲೋಚನೆಯಿಂದ ಬೇರೆಯವರಿಗೆ ದೊರಕುತ್ತಿವೆ  ಎಂದು  ಅಲ್ಲವ.   ಇದರ ಆಳದಲ್ಲಿ ನಾನು ನನ್ನ ಶ್ರಮದಿಂದ ಬುದ್ಧಿವಂತಿಕೆಯಿಂದ ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರೂ ನಾನು ಯೋಗ್ಯ ನಾಗಿದ್ದರೂ ದಕ್ಕ ಬೇಕಿದ್ದದ್ದು ದಕ್ಕುತ್ತಿಲ್ಲ ಎಂಬುದು ಬೇಸರ. ನಾನು ಯೋಗ್ಯನಾಗಿದ್ದರೂ ದಕ್ಕ ಬೇಕಿರುವುದು ದಕ್ಕುತ್ತಿಲ್ಲ ಎಂಬುದು ಬೇಸರ.  

 ಮೂಲದಲ್ಲಿ ನಾನು ಅರ್ಹ ಎಂಬ ಅಹಂಕಾರ, ಹಾಗೂ ನನಗಿಂತ ಕಡಿಮೆ ಅರ್ಹರಿಗೆ ದಕ್ಕುತ್ತದೆ ಎಂಬುದು ಮತ್ತೊಂದು.  ಈ ಎಲ್ಲ ಸಂಗತಿಗಳಲ್ಲಿ ಅಡಗಿರುವುದು ಕೇವಲ ನಾನು ಅರ್ಹ ನಾನು ಹೆಚ್ಚಿನ ಅರ್ಹ ಎಂಬ ಅಹಂಕಾರ ಮಾತ್ರ.   ಈ ಅಹಂಕಾರದಿಂದಾಗಿ ಎಲ್ಲ ಸಮಸ್ಯೆ, ಎಲ್ಲ ಬೇಸರ.  ಹಾಗಾದರೆ ನಾನು ಏನು ಅಲ್ಲ ಎಂದುಕೊಳ್ಳಬೇಕು. ಅದು ಕೀಳರಿಮೆ.  ಅಹಂಕಾರವು ಬೇಡ ಕೀಳರಿಮೆಯೂ ಬೇಡ.  ದಕ್ಕಿದ್ದು ನನ್ನದಷ್ಟೇ.  ಸುಮ್ಮನೆ ಕೆಲಸ ಮಾಡುತ್ತಿರಬೇಕು ಅಷ್ಟೇ.  ಬಯಸಬಾರದು.  ಆಗುತ್ತಿಲ್ಲವಲ್ಲ, ಅದೇ ಬೇಸರ.  


೧೦. 


ಅಗ್ರಜ ಹೇಳುತ್ತಿದ್ದರು. ಭಾರತದ ಬಗಗೆ.   ಭಾರತವನ್ನು ಇಡಿಯಾಗಿ ಹಾಗೂ ಬಿಡಿಯಾಗಿ ಓದಬೇಕು.   ಇತಿಹಾಸವು ಹೀಗೆ  ಬಿಡಿಯಾಗಿ ಇಡಿಯಾಗಿ ದಕ್ಕಿಸಿಕೊಳ್ಳಬೇಕೆನ್ನುವ ಕ್ರಮದ ಬಗೆಗೆ ಹೇಳುತ್ತಿದ್ದರು.  ಹಲವು ಸಂದರ್ಭದಲ್ಲಿ ಇದು  ವ್ಯಕ್ತಗೊಳ್ಳುವವು.  ಮೂಲತಃ ಭೌತವಿಜ್ಞಾನದಲ್ಲಿ ಒಟ್ಟಾಗಿ  ನಾವು ಇದೇ ರೀತಿ  ನೋಡುತ್ತೇವೆ.  


 ಬದುಕನ್ನೂ  ಇದೇ ರೀತಿ ನೋಡಬೇಕೆಂದೆನಿಸಿದ್ದು ಹೊಳವು.   ನನ್ನದೇ ಬದುಕಿನ ಪಾತ್ರಗಳನ್ನು, ಘಟನೆಗಳನ್ನು, ಸಂಘರ್ಷಗಳನ್ನು ಹೀಗೆ ಎರಡೂ  ದೃಷ್ಟಿಯಿಂದ ಕಾಣಬೇಕು.   ಎದುರಿಗಿರುವುದನ್ನು ಪಾತ್ರಗಳನ್ನಾಗಿಸಿ ಅವರ ಸಂಘರ್ಷಗಳನ್ನು ನಾಟಕದ ರೀತ್ಯ  ನಾನು ಒಳಗೊಳ್ಳದೆ  “ಕಾಣುವುದುಂಟಲ್ಲ ಅದಕ್ಕೆ ಬೇರೆಯದೇ ಎಚ್ಚರಬೇಕು. ಗಾಢವಾದ ಎಚ್ಚರ ಬೇಕು. 

 

 ತಾಯಿಯೇ ಎಚ್ಚರವನ್ನು ನೀಡು. 


೧೧. 


ಸಂದರ್ಶನಕ್ಕೆ ಹೋಗುವ ಸಮಯದಲ್ಲಿ ಬಹಳ  ಗಾಬರಿಯಾಗಿತ್ತು.  ಯಾಕೆ ಆ ಗಾಬರಿ ಎಂದು ಪರೀಕ್ಷಿಸ ಹೊರಟಾಗ  ಉತ್ತರ ಮತ್ತೂ  ಗಾಬರಿಪಡಿಸಿತ್ತು.  ನನಗೆ ಗೊತ್ತಿಲ್ಲದೇ ನನ್ನ ಕೆಲಸದ ಬಗೆಗೆ ಮಾಡುವ ಸಂಗತಿಗಳ ಬಗೆಗೆ ಒಂದು ರೀತಿಯ ಅಭಿಮಾನ ಏರ್ಪಟ್ಟಿತ್ತು.   ಗೌರವವನ್ನು ಅದರಿಂದ ಬಯಸುತ್ತಿದ್ದೆ.  ನಾನು ಏನು ಮಹಾನ್ ಅನ್ನು ಮಾಡುತ್ತಿದ್ದೇನೆಂಬ ಅಹಂಕಾರ.  ದುರಹಂಕಾರ.  ತಿಳಿದಾಗ ಬಹಳಷ್ಟು ಕೆಡೆನಿಸಿತು.  ನನಗೆ ಗೊತ್ತಿಲ್ಲದೆ ನಾನು ಮಾಡುವುದು ದೊಡ್ಡದೆಂಬ ಬ್ರಮೆ ಆಳವಾಗಿ ಬೆಳೆದುಬಿಟ್ಟಿತ್ತು.  ಅದು ತಪ್ಪು, ನನ್ನದೇನು ಅಲ್ಲ.  ಪರಿಸ್ಥಿತಿಗಳು ಅನುಕೂಲವಾಗಿ  ಎಲ್ಲ ಮಾಡಲು ಸಾಧ್ಯವಾಯಿತು.   ನೀರು ಹರಿವ ದಿಕ್ಕಿನಲ್ಲಿ ಧೋಣಿ  ಚಲಿಸಿ ಮುಂದೆ ಕಳಿಸಿದ್ದೇ  ನನ್ನಿಂದ ಎಂದುಕೊಳ್ಳುವುದು ಅದೆಷ್ಟು ಮೂರ್ಖತನ. ಅದೆಷ್ಟು ತಪ್ಪು.  ಇದರಿಂದಾಗಿಯೇ ಮನುಷ್ಯ ಸಣ್ಣವ ನಾಗುವುದು.  “ತ್ವಾಂ ಅಹಮಿತಿ ಭಾವಯತಿಯಹ”    ನಾನು ನೀನೆ ಎಂಬ ಭಾವ  ರಾತ್ರಿ ಒಂದು ಹೊಳಹು ಕಂಡೆ.   ನಾನು ನೀನು  ಎಂಬ ಭಾವ ಅಂದರೆ,  ನಾನು ಏನು ಅಂದುಕೊಂಡಿದ್ದೇನೆ ಅದಲ್ಲ ಎಂದು.  

 ನನ್ನ ಬಯಕೆಗಳು ಆಸೆಗಳು ತಲ್ಲಣಗಳು ಚಿಂತನೆಗಳು ಸೇರಿಸಿದ ನಾನು ಎಂಬ ಅಸ್ಮಿತೆ ಅದು ನಾನಲ್ಲ.  ಆ ಭಾವದಿಂದ ಬದುಕಿದರೆ ಆಹಾ ಎನ್ನಿಸಿತು.   ಇದನ್ನು ಬದುಕದೆ ಅನುಭವಿಸದೆ ವಿವರಿಸುವುದು ವ್ಯರ್ಥ.  ಬದುಕಿ ನೋಡಬೇಕಷ್ಟೇ. 


೧೨. 


ಕವನ ಕಲಿಸುವುದು ಏನನ್ನು ಎಂದರೆ ನೋಡುವುದು ಹೇಗೆ ಎಂದು.  ಸರಳವಾಗಿ ಏನನ್ನೋ  ನೋಡಿದರೆ ಅಲ್ಲಿರುವುದೇ ಆಗಲೇ ಇರುವುದೇ  ಮಾತ್ರ ಕಾಣುತ್ತದೆ.   ನಿಜವಾಗಿ ಕಾಣ ಬೇಕಾಗಿರುವುದು ಮತ್ತೇನೋ ಇದೆ.   ಈ ನಿಜವ ಕಾಣಬೇಕೆಂದರೆ ಬೇರೆಯದೇ ರೀತಿಯಲ್ಲಿ ಸಿದ್ಧಗೊಳ್ಳಬೇಕು.  

 “ತೀವ್ರವಾದ ಎಚ್ಚರದ ಸ್ಥಿತಿಯಲ್ಲಿ ಎದುರಿಗಿರುವುದನ್ನು ಕಾಣಬೇಕು.   ಹಾಗೆ ಕಂಡರೆ ಮಾತ್ರ ಏನನ್ನಾದರೂ ಕಾಣಲಿಕ್ಕೆ ಸಾಧ್ಯ. ಇಲ್ಲವಾದರೆ ಏನನ್ನು ಕಾಣಲಿಕ್ಕೆ ಆಗುವುದಿಲ್ಲ . 


೧೩. 


ಇಲ್ಲಿಗೆ   ಬಂದಾಯಿತು.  ಬಂದು ಒಂದು ಹಂತಕ್ಕೆ ಸ್ಥಿರ ಗೊಂಡಿದ್ದೇನೆ.  ಮೊನ್ನೆ  ಊರಿಗೆ ಕೂಡ ಹೋಗಿ ಬಂದೆ.  ಎಲ್ಲೆಲ್ಲೂ ಗೆಲುವಿನ ಸಂಭ್ರಮ.  ಸಂಭ್ರಮಿಸುವ ಹುಚ್ಚಾಟ.  ಎಲ್ಲೆಲ್ಲೂ ಸಂಭ್ರಮ ಎದ್ದು ನಿಂತಿವೆ.  ಎಲ್ಲಿ ಕಂಡರಲ್ಲಿ ಬರೀ ಗೆದ್ದ ಕೆಕೆ ಶಬ್ದ.   ಗೆಲ್ಲುವ ಹುಚ್ಚು ಓಟ.   ಗೆದ್ದೆನೆಂಬ ಸಾಧಿಸಲಿಕ್ಕೆ ಒಟ್ಟೂ  ಪಯಣ.   ಗಾಬರಿ ಹಾಗುವ ಹಾಗೆ  ನನ್ನನ್ನೂ  ಸೇರಿಸಿಕೊಂಡು  ಎಲ್ಲೆಲ್ಲೂ ಗೆದ್ದವರೆ ಎಲ್ಲಾ  ಕಡೆ.  ಚೆನ್ನಾಗಿರಲಿ. ಖುಷಿಯಾಗಿರಲಿ. 


 ಭಯ ಆಗುತ್ತೆ  ತಿಳಿಯದೆ , ಹೇಗೂ ತಿಳಿಯದೆ, ಗೆದ್ದವರ ಹಿಂದೆ ಓಡುತ್ತಿದ್ದೇವೆ.  ಓಡುತ್ತಿದ್ದೇವೆ.   ಗೆದ್ದೆ ವನೆಂದು ಸಾಧಿಸಲಿಕ್ಕೆ.  ಯಾರ ಮುಂದೆಯೋ   ಮತ್ಯಾರ ಮುಂದೆಯೋ.   ಗೆದ್ದೆವೆಂದು ಸಾಧಿಸಿ ತೋರಿಸಲಿಕ್ಕೆ ಹೊರಟಿದ್ದೇವೆ.   ತಪ್ಪಲ್ಲವ ?  ಯಾಕೆ ಗೆಲ್ಲಬೇಕು?   ಗೆದ್ದೆವೆಂದು ಹೇಳುವುದಾದರೂ ಯಾತಕ್ಕೆ?   ಗೆಲ್ಲುವುದಾದರೆ ಯಾರಿಗೆ?  ಯಾರ ಬಳಿ?   ಮೇಲ್ಪದರದ ಬದುಕಿನಿಂದ ಆಳಕ್ಕೆ ಇಳಿದು ತಳ ಸ್ಪರ್ಶವಾಗಿ ಅರ್ಥೈಸಿಕೊಳ್ಳಬೇಕು.  

ಆಳಕ್ಕಿಳಿದು ತಿಳಿಯಬೇಕು. 

 

ಅಗ್ರಜ  ಹೇಳಿದ್ದು  “ಅದಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿಕೊಳ್ಳಬೇಕು.   ಅದು ಒಳಿತು-ಕೆಡುಕುಗಳಿಗಿಂತ ಬಹಳ ಹೆಚ್ಚಾಗಿ, ಅದಕ್ಕೆ  ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಿದೆಯಲ್ಲ.   ಆಗ ಅದೇ ಕರೆದುಕೊಂಡು ಹೋಗುತ್ತೆ” 


೧೪. 


ಪ್ರಶ್ನೆ ಉದ್ಭವವಾಗುವುದು ಇಲ್ಲಿಂದ.  ಮಾಧ್ಯಮದ ಬಗೆಗಿನ ಸತ್ಯಾಸತ್ಯತೆಯನ್ನು  ಕೆದಕುವುದರೊಂದಿಗೆ.  ಆ ಸ್ಥಿತಿಯಲ್ಲಿ ನಿಜವ ಕಾಣುತ್ತೆ.   ಹಾಗೆ ಕಾಣುವುದು ಮಾಧ್ಯಮಕ್ಕೆ ಸಾಧ್ಯವಿಲ್ಲ.   ಅದಕ್ಕೆ ಮಾತ್ರ ಸಾಧ್ಯ.   ಹಾಗಾದರೆ ಮಾಧ್ಯಮದ ಕ್ರಿಯೆ ಏನು ಎಂದರೆ ಮಾಧ್ಯಮವು  ತನ್ನ  ಮುಖಾಂತರವೇ ತನ್ನ ಸೋಲನ್ನು ತೋರಿಸುವುದು.   ಹಾಗೆ ತೋರಿಸಿದಾಗ ಮಾತ್ರ ಅದು ಮಾಧ್ಯಮಕ್ಕೆ ತಕ್ಕುದಲ್ಲ ಎಂಬ ಅರಿವು.   ಹಾಗೆ ಮಾಧ್ಯಮಕ್ಕೆ  ದಕ್ಕಲೊಲ್ಲದ್ದು  ಮಾಧ್ಯಮದ ಹೊರಗಿದೆ ಎಂಬ ಅರಿವು ನೀಡಬಲ್ಲದ್ದೇ  ಮಾಧ್ಯಮದ ಸಾಮರ್ಥ್ಯ.    ಹಾಗಾದರೆ ಬದುಕಿನ ಮೂಲ ಉದ್ದೇಶವಾದರೂ ಏನು?  ಅದರೊಡನೆ  ಸಾಗುವುದು. ಪೂರ ಕುರುಡುತನವೆಂಬಂತೆ ನಂಬಬೇಕು.   ನನ್ನ ಬದುಕಿನ ಭಾರವನ್ನೆಲ್ಲ ಅದಕ್ಕೊಪ್ಪಿಸಿ  ನಾನು ಏನೂ  ಅಲ್ಲ ನನ್ನಲ್ಲಿ ನಡೆಯುವುದೆಲ್ಲವೂ ಅದರ ಪೂಜೆ ಎಂಬ ಭಾವ ದೃಡವಾಗುವಾ  ಹಾಗೆ ನಂಬಿ  ಸುಮ್ಮನಿರುವುದನ್ನು ಕಲಿಯಬೇಕು.  ಮಾಧ್ಯಮ ಸತ್ಯವಲ್ಲವೆಂದು ಮಾಧ್ಯಮದ ಬಗೆಗಿನ ಮೋಹ ಅಳಿಯಬೇಕು.  


೧೫. 


ಯಾಕೋ ಮನಸ್ಸು ಬಹಳ ಪಲ್ಲಟವಾಗುತ್ತದೆ ನಿರಂತರವಾಗಿ.   ಯಾವುದರ ಮೇಲೂ ಹೆಚ್ಚು ಸಮಯ ಕೇಂದ್ರೀಕರಿಸಲು ಆಗುತ್ತಿಲ್ಲ.   ಏನೋ ಒಂದು ಬಗೆಯ ಪ್ರಕ್ಷುಬ್ಧತೆ.  ಇದು ಬೇಡ ಅದು ಬೇಕು ಹೀಗೆಯೇ ಎಲ್ಲಾ ಆಲೋಚನೆಗಳು ಸಹ.   


 ನಾನು ಯಾರು,   ಯಾರು ನಾನು ಎಂಬ ರಮಣರ ಪ್ರಶ್ನೆ ಇದ್ದಕ್ಕಿದ್ದಂತೆ ನೆನ್ನೆ ಅವರ ಯಾವುದೋ ಬರಹವನ್ನು ಓದಿದ ತಕ್ಷಣ  ಯಾಕೋ ನನ್ನ ಬೆನ್ನು ಹತ್ತಿತ್ತು.   ನಾನೆಂದರೆ ಈ ದೇಹವ?  ನನ್ನ ಗುರುತ?  ಓದಿನ ಮುಖಾಂತರ ಗಳಿಸಿದ ಗುರುತ?  ಚಿಂತನೆಯ ಮುಖಾಂತರ ಗಳಿಸಿದ ಗುರುತ?   ಇದ್ಯಾವುದೂ ಅಲ್ಲ.  ಹಾಗಾದರೆ ನಾನೆಂಬುದು ಏನು? 

 

೧೬. 


ಬದುಕು ಅಸಾಧ್ಯವಾಗುತ್ತಿದೆ. ಸ್ವಲ್ಪ ಬಿಡುವು ಪಡೆದು ಇಷ್ಟದ ಕೆಲಸವನ್ನು ಮಾಡೋಣ ಎಂದುಕೊಂಡರೆ ಸಾಧ್ಯವೇ ಆಗುತ್ತಿಲ್ಲ.  ಇದು ಎಲ್ಲಿಗೆ ಹೋಗುತ್ತದೆಯೋ ತಿಳಿಯುತ್ತಿಲ್ಲ.  ಅಥವಾ ಏನು ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ.  ಸುಮ್ಮನೆ ಜವಾಬ್ದಾರಿಗಳು.  ದಿನಬೆಳಗಾದರೆ ಅದು ಮಾಡಬೇಕು ಇದು ಮಾಡಬೇಕು ಹೀಗೆ ಸಾಕಾಗಿಹೋಗಿದೆ.  ಮನೆಮಠ ಎಲ್ಲವನ್ನು ಬಿಟ್ಟು ಹೋಗಬೇಕು. 

 

 ಯಾರು ಇಲ್ಲದ ಜಾಗಕ್ಕೆ,  ಯಾರೂ  ಗುರುತಿಸಿದ ಜಾಗಕ್ಕೆ.   ಹೇಳುತ್ತಲೇ ಇದ್ದೇನೆ ಹೋಗುತ್ತೇನೆಂದು, ಆದರೆ ಯಾರೂ ಅದನ್ನು ಮುಖ್ಯವಾಗಿ ಸ್ವೀಕರಿಸಲೇ ಇಲ್ಲ. ನಾನಾದರೂ ಸ್ವೀಕರಿಸಿದೆನ. ಇಲ್ಲ.   ಎರಡು ವರ್ಷ ಇವರೊಟ್ಟಿಗೆನ ಕೆಲಸ ಮುಗಿಸಬೇಕು.  ಸಂಸ್ಕೃತ ಕಲಿತಿರಬೇಕು. ವಾರಣಾಸಿಯಲ್ಲಿ ನೆಲೆಸಬೇಕು. ಇಲ್ಲದವನಂತೆ ಇಲ್ಲದವನಂತೆ, ಬೆತ್ತಲಾಗಿ ಓಡಾಡಬೇಕು. 

 

 ಸಂಸಾರ ಕೊಲ್ಲುತ್ತಿದೆ.  ಕಾಯುತ್ತಿದ್ದೇನೆ.   ತಲೆಯ ತುಂಬ ಬರೀ ಮಾತು ಕೇಳಿಸುತ್ತಿದೆ.  ಬರೀ ಮಾತುಗಳು ಬರೀ ಮಾತು.  ತಲೆ ಸುಮ್ಮನೆ ನಿಲ್ಲುತ್ತಿಲ್ಲ.  ಏನು ಮಾಡುವುದು ತಿಳಿಯುತ್ತಿಲ್ಲ.  ತಡೆಯಲು ಆಗದಷ್ಟು ಮಾತು.   ಸಣ್ಣ ಸಣ್ಣ ಆಸೆಗಳನ್ನು ತೀರಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ.  ಹಣ ಕೈಯಲ್ಲಿ ಉಳಿಯುತ್ತಲೇ  ಇಲ್ಲ.  


೧೭. 


“ಅವರ  ನಡಿಗೆಗಳು:  ದಿನಚರಿಯ ಪುಟಗಳಿಂದ” ಲೇಖನಗಳ ಸಂಗ್ರಹದ ಪುಸ್ತಕ ಓದುತ್ತಿದ್ದೇನೆ.   ಮೊದಲನೇ ಭಾಗದಲ್ಲಿ ಅವರ ಮೈಸೂರಿನ ದಿನಗಳು ನಂತರದ ಮಧುರೈನ ದಿನಗಳಲ್ಲಿನ ದಿನಚರಿಯಲ್ಲಿ ಸಂಗತಿಗಳಿವೆ.   ಓದಿ ಖುಷಿಯಾಯಿತು.   ನಾನು ಸಹ ಸುಮಾರು ಒಂದು ವರ್ಷದಿಂದ ಈ ದಿನಚರಿಯನ್ನು ಬರೆಯುತ್ತಿದ್ದೇನೆ.  

 ನನ್ನಲ್ಲಿನ ಹಲವು ಆಲೋಚನೆಗಳು, ಚಿಂತನೆಗಳು ಒಂದು ಸೂತ್ರಕ್ಕೆ ಸಿದ್ಧಗೊಳಿಸಲು ಇದು ನೆರವಾಗುತ್ತದೆ.  ಬರೆಯುತ್ತಿರುವುದು ಬಹಳ ಒಳ್ಳೆಯದೆನಿಸುತ್ತದೆ.   ಹಾಗೆ ನೋಡಿದರೆ ಈ ಪುಸ್ತಕದ ಆರಂಭದ ದಿನಕ್ಕೆ ತಿಂಗಳಿಗೆ ಒಂದು ವರ್ಷಗಳಾಯಿತು.  ಈ ವರ್ಷದಲ್ಲಿ ಹಾದುಹೋದ ಚಿಂತಿಸಿದ ಹಲವು ವಿಚಾರಗಳು ಇಲ್ಲಿವೆ.  

 ಇವರ ಡೈರಿಯನ್ನು ಓದುವಾಗ ನನಗನಿಸಿದ್ದು:   ಅವರು ಸಾಮಾನ್ಯದಂತೆ ಕಂಡದ್ದು.   ವ್ಯಕ್ತಿಯನ್ನು ಹತ್ತಿರದಿಂದ ಬಲ್ಲವರಿಗೆ ಅವರ ಕೃತಿಗಳಿಗಿಂತ ಹೊರಗಿಟ್ಟು ಅವರನ್ನು ಕಾಣಲು ಸಾಧ್ಯವಾಗುತ್ತದೆ.  ಇದನ್ನು ಓದುವಾಗ ಅವರು ಸಾಮಾನ್ಯ ವ್ಯಕ್ತಿಯಂತೆ, ನಮ್ಮೆಲ್ಲರ ದ್ವಂದ್ವಗಳನ್ನು ಹೊಂದಿರುವ ಮನುಷ್ಯನಂತೆ ಕಾಣುತ್ತಾರೆ. 

 

 ಸೃಜನಾತ್ಮಕ ಕಷ್ಟಗಳ ಬಗೆಗೆ ಬರೆಯುತ್ತಾರೆ.  ಕಂಡದ್ದರ ಬಗ್ಗೆ ಬರೆಯುತ್ತಾರೆ.  ಮೂರು ನಾಲ್ಕು ಕಿಲೋಮೀಟರುಗಳು  ನಡೆದು ಬರುವ ವಿದ್ಯಾರ್ಥಿಗಳ ಬಗೆಗೆ ಮರುಕ ಪಡುತ್ತಾರೆ.  ಕೆರೆಯಲ್ಲಿ ಸತ್ತವರ ಬಗ್ಗೆ ಚಿಂತಿಸುತ್ತಾರೆ. 


೧೮. 


ಈ  ದಿನಚರಿಯಲ್ಲಿ ಬಹಳವಾಗಿ ಆಲೋಚನೆಗಳನ್ನೆ  ಬರೆದಿದ್ದೆನೆ.  ಕಂಡದ್ದನ್ನು, ನಡೆದ ಸಂಗತಿಗಳನ್ನು ಹೆಚ್ಚಾಗಿ ಬರೆದಿಲ್ಲ.  ಇನ್ನು ಮುಂದೆ ನಡೆದದ್ದನ್ನು ಬರೆಯಬೇಕು.  ಬಹುಶಃ  ಹಾಗೆ ಬರೆಯಲಿಕ್ಕಾದರೂ ಕಾಣಬೇಕು.  

 ಪೂರ್ತಿ ಬ್ಲಾಕ್ ಆದ  ಪರಿಸ್ಥಿತಿಯಲ್ಲಿ ನಾನು ಇದ್ದೇನೆ.  ಕಾಣುತ್ತಿಲ್ಲ, ಏನೂ ಕಾಣುತ್ತಿಲ್ಲ. ಎಲ್ಲಿ  ಸಮಸ್ಯೆಯಾಗಿದೆ ಎಂದು ತಿಳಿಯುತ್ತಿಲ್ಲ.   ಓಡಾಟ ಆಯಿತು.  ಹೊರಗೋಗಿ ಬಂದೆ.  ಎಲ್ಲವೂ ಸರಿ.  ಪದ್ಯದ ಪದಗಳು ಹುಟ್ಟುತ್ತಲೇ ಇಲ್ಲ.  ಬಹಳ ಬಹಳ ನೀರಸವಾಗಿದೆ.  ಏನು ಮಾಡಬೇಕು ಎಂದು ತೋರಿಸುತ್ತಲೇ ಇಲ್ಲ.  ತಾಯಿ ಕಾಪಾಡು ಎಂದು ಕೈ ಚೆಲ್ಲುವುದು ತಪ್ಪ ಮಾಡಲಿಕ್ಕೆ ಏನು ಇಲ್ಲ. 


೧೯.  


ಮತ್ತೆ ಒಂದಿಷ್ಟು ಸರಿ ಹಾದಿಗೆ ಬರುವ ಲಕ್ಷಣಗಳು ಕಾಣುತ್ತಿವೆ.   ಸುಮ್ಮನೆ ಇರಬಲ್ಲೆ ಎಂದು ಅನಿಸುತ್ತಿದೆ.  ಇಂದು ಸುಮ್ಮನೆ ಇದ್ದೆ.   ಸೌಂದರ್ಯ ಲಹರಿಯನ್ನು ಓದುವಾಗ ವಿಶಿಷ್ಟ ಅನುಭವಗಳಾಗುವುದುಂಟು.ಒಂದೊಂದೆ ಶ್ಕ್ಲೋಕಗಳನ್ನು ಓದಿದಾಗ ಅರ್ಥಗಳು ಆ ಶ್ಲೋಕದ  ಮುಖೇನ ವ್ಯಕ್ತಗೊಳ್ಳುತ್ತವೆ. ಆದರೆ ನಿಜವಾದ ಅರ್ಥ ಒಳಗೊಂಡಿರುವುದು ಒಟ್ಟು ಶ್ಲೋಕಗಳು ಪೊಣಿಸಲ್ಪಟ್ಟಿರುವ ವಿಧದಲ್ಲಿ ಎಂದೆನಿಸುತ್ತಿದೆ.   ಒಂದೊಂದು ಶ್ಲೋಕದಲ್ಲಿ ವಿಭಿನ್ನ ಅರ್ಥಗಳಿವೆ. ಹಾಗಿರುವ ವಿಭಿನ್ನ ಅರ್ಥಗಳು ಏಕೆ ಲಹರಿಯಲ್ಲಿರುವ ವಿಧಾನದಲ್ಲೇ  ಪೋಣಿಸಲ್ಪಟ್ಟಿದೆ ಅಂತ ಆಶ್ಚರ್ಯವಾಗುತ್ತೆ. ಧ್ಯಾನಿಸ ತೊಡಗಿದಾಗ ಅದು ಪ್ರಜ್ಞೆಯ ವಿಕಾಸದ ಜಾಡನ್ನು, ಗುರುತನ್ನು ಒಳಗೊಂಡಿರುವುದು ಕಾಣುತ್ತದೆ. ಅರ್ಥವಿರುವುದು ಸಾಲಿನಲ್ಲಿ ಅಲ್ಲ, ಪದಗಳಲ್ಲಿ ಅಲ್ಲ,  ಶ್ಲೋಕದಲ್ಲಿ ಅಲ್ಲ, ಬದಲಿಗೆ ಒಂದು ಶ್ಲೋಕದಿಂದ ಮತ್ತೊಂದು ಶ್ಲೋಕದ  ನಡುವಿನಲ್ಲಿ.   ಅದರ ಬಗೆಗೆ ಧ್ಯಾನಿಸಬೇಕು.



ಇಂತಿ 

ಅಭಿಧಾ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ