ಕವಿ, ಕವಿತೆ, ಮನುಷ್ಯ


ನೋಡೀ,
ಇದು ಕವಿತೆ ಅಲ್ಲ.

ಮನುಷ್ಯ ಕವಿತೇನ ಬರೀತಾನೆ
ಕವಿತೆ ಮನುಷ್ಯನ್ನ ಬರಿಯುತ್ತೆ
ಎರ್ಡೂ ತಪ್ಪು.
ಕವಿಯಾದ ದುರಂತದ ಪರಿಹಾರಕ್ಕೆ ನಾ ಕವಿತೆ ಬರೀತೀನಿ.

ಕವಿತೇನ ಹುಡುಕಿ ಹೋಗ್ಬೇಕಂತೆ,
ಮಧ್ಯರಾತ್ರೀಲಿ ಸ್ಮಶಾನಕ್ಕೆ ದಾಳಿ ಇಡೋ ಪ್ರೇತಾತ್ಮಗಳಂತೆ,
ಮೈ ಮೇಲೆ ಬರೋ ದೆವ್ವದಂತೆ,
ಸಾಯುವ ಮಗುವಿನ ಮಾಂಸಕ್ಕೆ ಕಾಯ್ವ ರಣಹದ್ದುವಿನಂತೆ,
ಹಾಗಂತೆ, ಹೀಗಂತೆ,
ಅದೇ
ಕವ್ನಾನಂತೆ.

ಮೈ ನಡುಗುತ್ತೆ. ಎದೆಯಲ್ಲೆಲ್ಲೋ ಜೋರು ನೋವಾಗುತ್ತೆ.
ಸತ್ತು ಹೋಗುತ್ತಿದ್ದೀನಿ ಅಂತನ್ನಿಸುತ್ತೆ.
ಪದದ ಪಕ್ಕ ಪದವಿಟ್ಟದ್ದು ಕವಿತೆಯಾದದ್ದಕ್ಕೆ
ಕಂಗಾಲಾಗುತ್ತೇನೆ.
ಯಾಕೆ ಹೀಗೆ?
ಪ್ರಶ್ನಿಸಿಕೊಳ್ಳುವವನ ಸರದಿಯಲ್ಲಿ ನಿಂತು ತಬ್ಬಿಬ್ಬಾದದ್ದರ  
ಕಾರಣಕ್ಕ?

ಗೊತ್ತಿಲ್ಲ.

ಎಲ್ಲಾ ಮುಗಿದುಬಿಟ್ಟಿದೆಯೆಂಬ ತೀರ್ಮಾನಕ್ಕೆ ಬರಲಿಕ್ಕಾಗುವುದಿಲ್ಲ.

ಅದಕ್ಕೇ ಇರಬೊಹುದು
"ಕ್ಷಮಿಸು ಹುಡುಗಿ,
ನಾ ಸೋತುಬಿಟ್ಟೆ, ಕಾರಣ
ನಾ ಕವಿಯಾಗಿಬಿಟ್ಟೆ"[ಮೇಲಿನ ಚಿತ್ರದ ಆಕರ http://www.passonapoem.com/re_learningpoetry.htm]

5 ಕಾಮೆಂಟ್‌ಗಳು:

 1. ಕವನ ಅಲ್ಲಾಂತೀರಾ
  ಕವನದ ಹಾಗೇ ಇಪ್ಪತ್ತಾರು ಸಾಲು ಗೀಚ್ತೀರಾ
  ಕವಿತ್ವ ನಿರಾಕರಿಸಿದ ಸಾಲುಗಳ ವಿಕಾಸದಲ್ಲೇ
  ಮರಣ, ಮರಣೋತ್ತರ ಅವಸ್ಥೆಗಳ ಕೊನೆಯಲ್ಲೇ
  "ಕವಿಯಾಗಿಬಿಟ್ಟೆ" ಘೋಷಣೆಯನ್ನೂ ಹಾಕ್ತೀರಾ
  ತೋರಿಕೆಯಲ್ಲಿ ನಮ್ಮನ್ನುದ್ದೇಶಿಸಿದಂತಿದ್ದರೂ
  ಕಾಣ್ಕೆಯಲ್ಲಿ ಅದ್ಯಾವಳೋ ಹುಡ್ಗೀಗ್ ಶರಣಾದ್ದು ಕಾಣುವಾಗ
  ಕವನ ಒಬ್ಬಳು ಹುಡುಗಿ ಇರಬಹುದಾ?
  ಇದಕ್ಕೆ ಓದುಗ ರಸಿಕನಾಗಿ ಸ್ಪಂದಿಸಬೇಕೇ
  ಹಿತೈಷಿಯಾಗಿ ಸಂಬಂಧಿಸಿದವರಿಗೆ ತಿಳಿಸಬೇಕೇ?

  - ಅಶೋಕವರ್ಧನನೆಂಬ ಹಿತೈಷಿ

  ಪ್ರತ್ಯುತ್ತರಅಳಿಸಿ
 2. prateesaladante ee salavuuuu enenuuuu artha agilla dear Aravind.. enmadli..elli kaliyali..intha kavite ya kavana galannu artha madikollalu???

  premalatha pai

  ಪ್ರತ್ಯುತ್ತರಅಳಿಸಿ
 3. ಆತ್ಮೀಯ ಪ್ರೇಮಲತ ಪೈ ಮೇಡಮ್, ಧನ್ಯವಾದಗಳು.
  ತಾವು ಕವನವನ್ನ ಅರ್ಥ ಮಾಡಿಕೊಳ್ಳಲು ಹೊರಟಿದ್ದೀರಿ, ಮೊದಲ ಪ್ರಶ್ನೆ ಕವನವನ್ನ ಅರ್ಥ ಮಾಡಿಕೊಳ್ಳಬೇಕೆ? ಈ ಪ್ರಶ್ನೆ ಹಾಗು ಕಾವ್ಯದ ಅರ್ಥದ ಬಗ್ಗೆ ಬಹು ಚರ್ಚೆ ನಡೆದಿದೆ. ಎರಡು ದಿನಗಳಿಂದ ನನ್ನ ಸ್ನೇಹಿತರೊಬ್ಬರೊಡನೆ(ನರೇಂದ್ರ ಪೈ http://narendrapai.blogspot.com/) ಕಾವ್ಯಾನುಸಂದಾನದ ಬಗ್ಗೆ ಚರ್ಚಿಸುತ್ತಿದ್ದೆ, ಅವರ ಮಾತುಗಳನ್ನೇ ಇಲ್ಲಿ ನೀಡುತ್ತೇನೆ ಅದು ತಮಗೆ ಉಪಯೋಗವಾಗಬೊಹುದು.
  " ಭಾಷೆ ಹೇಗೆ ಕ್ರಮೇಣ ಇವಾಲ್ವ್ ಆಯಿತು, ಅದು ಹೇಗೆ ಕ್ರಮೇಣ ಮನುಷ್ಯ ಹುಟ್ಟಿಸಿದ ಒಂದು ಬಗೆಯ ಶಬ್ದ ಉಚ್ಚಾರ, ಸದ್ದು ಹಲವರಿಗೆ ಸಮಾನ ಅರ್ಥ ಕೊಡುವ ಸಾಧ್ಯತೆಯನ್ನು ಮಾನವ ಜನಾಂಗ ಕಂಡುಕೊಂಡಿತು ಮತ್ತು ಅದೇ ಕಾಲಕ್ರಮೇಣ ಒಂದು ಸಶಕ್ತ ಸಂವಹನಾ ಮಾಧ್ಯಮವಾಗಿ ಅದು ರೂಪುಗೊಂಡಿತು ಎಂದೆಲ್ಲ ಈಚೆಗೆ ಒಂದು ಪುಸ್ತಕದಲ್ಲಿ ಓದಿದೆ. ಹೆಚ್ಚಿನಂಶ ಇತಾಲಿನೊ ಕೆಲ್ವಿನೊ ಬರೆದ ಲಿಟರರಿ ಮೆಶಿನ್ ಪುಸ್ತಕದಲ್ಲಿ ಎಂದು ನೆನಪು. ಆದರೆ ನಿಮಗೂ ತಿಳಿದಿರುವಂತೆ ಎಷ್ಟೋ ಸಂಗತಿಗಳು ಇವತ್ತಿಗೂ ಭಾಷೆಯಲ್ಲಿ ವ್ಯಕ್ತವಾಗುವ ಅಗತ್ಯವೇ ಇಲ್ಲದಂತಿವೆ ಮತ್ತು ಮನುಷ್ಯ ಜೀವನದ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲ ಕ್ಷಣಗಳೆಲ್ಲ ಈ ನೆಲೆಯಲ್ಲೇ ಇವೆ. ಅವು ಭಾಷೆಯಲ್ಲಿ ಬರತೊಡಗಿದರೆ ಅದರ sanctityಯೇ ಹೊರಟು ಹೋಗುತ್ತದೆ. ಕಾವ್ಯ ಇದನ್ನು ನಮಗೆ ಮಾತುಗಳಲ್ಲದ ಮಾತುಗಳಲ್ಲಿ ಹಿಡಿದು ಕೊಡುತ್ತದೆ. ಅದು ಅನುಭವಕ್ಕೆ, ಸಂವೇದನೆಗೆ ದಕ್ಕುತ್ತದೆಯೇ ಹೊರತು ಅರ್ಥದ ಜಗತ್ತಿಗೆ ತೆರೆದುಕೊಳ್ಳುವುದಿಲ್ಲ. ಒಳ್ಳೆಯ ಕವನದಲ್ಲಿ ಅರ್ಥ ಹುಡುಕುವುದಕ್ಕಿಂತ ಹೆಚ್ಚಿನ ಮೂರ್ಖತನ ಇರಲಿಕ್ಕಿಲ್ಲ. ಮತ್ತೆ, ಇದರ ಅರ್ಥವನ್ನೆಲ್ಲ ವಿಮರ್ಶೆ, ರಿವ್ಯೂ ಎಂದು ವಿವರಿಸತೊಡಗಿದರೆ ಶಬ್ದಸೂತಕವಾಗುವುದಿಲ್ಲವೇ?"

  ಪ್ರತ್ಯುತ್ತರಅಳಿಸಿ
 4. ಆಶೋಕ್ ಅಂಕಲ್, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 5. ಆಶೋಕ್ ಅಂಕಲ್, ಕವನ ನನ್ನ ಸೊತ್ತಲ್ಲ ಅಂತ ಹೇಳುತ್ತಲೇ ಅತ್ಯುತ್ತಮವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಏನೂ ಆಗಬಾರದು ಎಂದು ಹೊರಟವ ಕೂಡ ಆ "ಏನೂ ಆಗಬಾರದ್ದಕ್ಕೆ" ಒಂದು ಮಾರ್ಗವನ್ನ ಅನುಸರಿಸಿಬಿಡಬೇಕದದ್ದರ ಸ್ಥಿತಿ ನನಗೆ ಚಿಂತಿಗೀಡು ಮಾಡಿದಾಗ ಈ ಕವನ ರಚಿಸಬೇಕಾಯಿತು. ಮಾರ್ಗವನ್ನೆ ತಿರಸ್ಕರಿಸಿ ಹೊರಟಾಗ, ಹಾಗೆ ತಿರಸ್ಕರಿಸಿದ್ದೆ ಒಂದು ಮಾರ್ಗವಾಗಿಬಿಟ್ಟಾಗಿನ ಸ್ಥಿತಿಯ ಅವಲೋಕನದಲ್ಲಿ ಈ ಕವನ ರಚಿತವಾಯಿತು. ನಿರಾಕರಣ ವಿಕಾಸಕ್ಕೆ ಕೊಂಡೊಯ್ದು, ಅಂತಿಮ ಸ್ಥಿತಿಯಲ್ಲಿ(ಅದು ಮರಣವೋ, ಮರಣೋತ್ತರವೋ ತಿಳಿದಿಲ್ಲ) ಆ ನಿರಾಕರಿಸಿದ್ದೆ ನನ್ನನ್ನಾವರಿಸಿದಾಗ ಏನೂ ಮಾಡುವುದು...?

  ಪ್ರತ್ಯುತ್ತರಅಳಿಸಿ