ತಿರುಬೋಕಿಯ ಸ್ವಗತ ೩



ಪರಸ್ಪರ ವಿರೋಧಾತ್ಮಕವಾಗಬಲ್ಲ ಪ್ರತೀ ರಚನೆಯೂ ಸ್ವ-ಸ್ಥಿರವಾಗಿರುತ್ತದೆ.
ಅಥವಾ
ಪ್ರತೀ ಅಸಂಗತ ರಚನೆಯೂ ಸ್ವ-ಸ್ಥಿರವಾಗಿರುತ್ತದೆ.
ಅಥವಾ
ಯಾವುದೇ ಶಬ್ದಕ್ಕೂ ಅರ್ಥಗಳಿರುವುದಿಲ್ಲ.
ಅಥವಾ
ಪ್ರತೀ ಶಬ್ದಕ್ಕೂ ಜೀವವಿರುತ್ತದೆ.



ಕತ್ತಲ ರಾತ್ರಿಗಳು ಒಂಟಿಯಾಗಿದ್ದಾಗ ಭೀಕವೆನಿಸುತ್ತದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಹತ್ತುವುದಿಲ್ಲ. ಏನೋ ದಿಗಿಲು, ಭಯ. ಶಬ್ದವೇ ಇಲ್ಲದ ಕಡೆ ಏನೋ ಶಬ್ದವನ್ನ ಭಾವಿಸೋದು. ಶೂನ್ಯದಿಂದ ಏನೋ ರೂಪಗೊಳ್ಳುತ್ತಾ ಇದೆ ಅಂತ ಅಂದು ಕೊಳ್ಳುವುದು. ಹಗಲಿನಲ್ಲಿ ಇದನ್ನೇ ಏಕಾಂತ ಅಂತ ತಬ್ಬಿಕೊಂಡದ್ದು. ಈಗ ರಾತ್ರಿಯಾದಾಗ ತಬ್ಬಿಕೊಂಡದ್ದು ಶರೀರವನ್ನೇ ಸುಡುತ್ತಿದೆ. ಭಯ ಯಾಕೆ ಅಂತ ಚಿಂತಿಸತೊಡಗಿ, ಆ ಚಿಂತನೆಯೇ ಭಯದ ಮೂಲವಾಗಿ ಹೋದಾಗ ತೀವ್ರ ಭಯದಿಂದ ನರಳುತ್ತೇನೆ. ಒಮ್ಮೆ ಮನೆಯ ಬಾಗಿಲುಗಳನ್ನೆಲ್ಲಾ ಗಟ್ಟಿಯಾಗಿ ಭದ್ರಪಡಿಸಿ ಬರುತ್ತೇನೆ. ಸಾದ್ಯವಾಗುವುದಿಲ್ಲ, ಮತ್ತೇ ಹೋಗಿ ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನ ಅಂತ ಪರೀಕ್ಷಿಸುತ್ತೇನೆ. ಎಷ್ಟೇ ಬಾರಿ ಪರೀಕ್ಷಿಸಿದರೂ ಭಯವೇನು ಹೋಗಲಿಲ್ಲ. ಕಡೆಗೆ ಬಚ್ಚಲಿಗೋಗಿ ಬಂದು ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನಿ ಎಂಬೋ ನಂಬಿಕೆಯಲ್ಲಿ ಮಲಗುತ್ತೇನೆ. ನಿದ್ರೆ ಬಾರದಾದಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಎಲ್ಲೋ ದೂರದಲ್ಲಿ ನಾಯಿಯೊಂದು ಬೊಗಳುತ್ತಿರುತ್ತದೆ. ಗಾಳಿಗೆ ಕ್ಯಾಲೆಂಡರಿನ ಹಾಳೆಗಳು ಪಟ ಪಟ ಅಂತ ಸದ್ದುಮಾಡಿದಾಗ ಬೆದರಿ ಕಾಲದ ಪರಿವೆಯೆ ಭೀಕರತೆಯನ್ನ ತೆಗಳಿ ,ಇಡೀ ಕ್ಯಾಲೆಂಡರನ್ನೇ ಹೊರಗೆಸೆದು ಬಂದ ನಂತರವೂ, ಮತ್ತೇನೋ ಭಯವಾಗ ತೊಡಗುತ್ತೆ. ಕತ್ತಲಲ್ಲಿ ಯಾವುದೋ ನೆರಳಿನ ರೂಪವೊಂದು ಕೂತಂತೆ ಕಾಣುತ್ತದೆ. ಬೆಚ್ಚಿ ದೀಪವಾಕಿದಾಗ ಏನೂ ಕಾಣುವುದೇ ಇಲ್ಲ. ಭಯಕ್ಕೆ, ದೀಪವಾಕಿಯೇ ಮಲಗುತ್ತೇನೆ. ನಿದ್ರೆಯೇ ಬರುವುದಿಲ್ಲ. ಹೀಗೆ ರಾತ್ರಿಗಳಹೊತ್ತು ನಿದ್ರೆ ಹೋಗುವುದನ್ನೇ ಮರೆತುಬಿಟ್ಟೆ.

ಎಲ್ಲೋ ಅಡುಗೇಮನೆಯಲ್ಲಿ ನಲ್ಲಿಯಲ್ಲಿ ನೀರು ತೊಟ್ಟಿಕ್ಕುವ ಸದ್ದು ಕೇಳಿ ಒಮ್ಮೆಲೇ ಬೆಚ್ಚಿಬಿದ್ದು, ಅಡುಗೇ ಮನೆಗೋಗಿ ನಲ್ಲಿಯನ್ನ ಭದ್ರಪಡಿಸುವಾಗ ನಲ್ಲಿಯೇ ಕಿತ್ತು ನೀರು ಹರಿಯುತ್ತದೆ. ನನ್ನ ಕೈಚೆಲ್ಲಿ ಹೋಗುತ್ತಾ ನಿಂತ ನೀರನ್ನ ನೋಡುತ್ತಾ ಕೂರುತ್ತೇನೆ. ನೀರು ಮನೆಯನ್ನ ತುಂಬುತ್ತದೆ, ನಾನು ನೋಡುತ್ತಾ ನೋಡುತ್ತಾ ಕೂರುತ್ತೇನೆ. ಮನೆಯಿಂದ ನೀರು ಹೊರನುಗ್ಗಿತು, ಇಡೀ ಊರನ್ನ ಆಕ್ರಮಿಸಿದೆ. ಎಲ್ಲವೂ ನೀರಿನಲ್ಲಿ ತುಂಬಿಹೋಗಿದೆ. ನಾನು ನೋಡುತ್ತಾ ನಿಂತಿದ್ದೀನಿ. ಊರು, ರಾಜ್ಯ, ದೇಶ, ಎಲ್ಲವೂ ನೀರು ನೀರು. ಸರ್ವವೂ ಜಲ ರಾಶಿಯಲ್ಲಿ ಸಮಾದಿಯಾಗಿದೆ. ನನ್ನ ಭಯದಿಂದ ಕಿತ್ತ ನಲ್ಲಿಯಿಂದ ಹೊರಟ ನೀರು, ಜಗತ್ತನ್ನ ಜೀರ್ಣಿಸಿಕೊಳ್ಳತೊಡಗಿದೆ. ಆದರೂ, ನಾನಿನ್ನೂ ನೀರಿನಲ್ಲಿ ಮುಳುಗಿಲ್ಲ. ಪಾಪ ಪ್ರಜ್ಞೆಯೊಂದು ಕಾಡುತ್ತಿದೆ. ಹೊರಗೆ ನೋಡುತ್ತಿದ್ದೇನೆ, ಯಾವುದಾದರೂ ಚೀತ್ಕಾರಕ್ಕೆ, ಕೂಗಾಟಕ್ಕೆ. ಎಲ್ಲಿಯೂ ಯಾವ ಶಬ್ದವೂ ಕಾಣದ್ದನ್ನ ಕಂಡು ನಾನೂ ನೀರಿಗೆ ದುಮುಕಿದೆ. ಉಸಿರು ಕಟ್ಟುತ್ತೆ, ನರ ನರಗಳು ಬಿಗಿಸುತ್ತೆ. ಶರೀರದ ಪ್ರತೀ ಬಾಗವೂ ನೋಯುತ್ತೆ. ಸಾವು ಎದುರಿಗೆ ಬಂದು ನಿಂತಿದೆ. ಮೆಲ್ಲಗೆ ಹೋಗಿ ಮುಟ್ಟಿನೋಡಿದೆ. ಏನೋ ರೋಮಾಂಚನ! ಅರೆ ಸಾವು! ತುಂಬಾ ಮುದ್ದಾಗಿತ್ತು. ಹೋಗಿ ಅಪ್ಪಿಕೊಂಡೆ, ನಾ ಸಾವಾಗಿದ್ದೆ. ಯಾವ ಪ್ರಯತ್ನವೂ ಇಲ್ಲದೆ ನೀರಿನ ಮೇಲೆ ತೇಲುತ್ತಿದ್ದೆ. ಜಗದ ಜಲರಾಶಿಯಲ್ಲಿ ತೇಲುತ್ತಿದ್ದೆ.



ಯಾಕೆ ಹೀಗಾಯಿತು.......? ಸತ್ತ ನಂತರ ಕೇಳಿಕೊಂಡ ಮೊದಲ ಪ್ರಶ್ನೆ......!!!

ನನ್ನ ಎದುರಿಗೆ ನಿಂತ ಒಂದು ಹೆಣ್ಣು ಶರೀರದ ಮುಂದೆ ಪೂರ್ಣ ಶರಣಾಗಬೇಕು ಅಂತ ಅನ್ನಿಸಿದ್ದು ಈ ಹುಡುಗಿಯ ಮುಂದೆ ಮಾತ್ರಾ. ಪ್ರೀತಿ ಶರಣಾಗತಿಯ ಮಹೋನ್ನತ ತತ್ವವಾಗಿ ಕಂಡಾಗ ನನ್ನಹಂಕಾರಕ್ಕೆ ಸರಿ ಬಾರಲಿಲ್ಲ. ನನ್ನಂತರಂಗದ ದ್ವನಿ ಹೇಳಿತು, ಬೆತ್ತಲೆಯಾಗಿ ನಿಂತುಬಿಡು ಅವಳ ಮುಂದೆ, ಪ್ರೀತಿ ಅದ್ವೈತದ ಪರಮೋಚ್ಚ ಸ್ಥಿತಿ ಎಂದು. ಆದರೆ ನನ್ನಹಂಕಾರಕ್ಕೆ ಅದು ಸರಿಬಾರಲಿಲ್ಲ. ನನ್ನತನವನ್ನ ಕಳೆದುಕೊಳ್ಳಲು ನಾ ಸಿದ್ದನಾಗಲಿಲ್ಲ. ನಾ ಗೆಲ್ಲಲು ಹೊರಟೆ, ಪ್ರೀತಿ ನನ್ನಿಂದ ದೂರ ಸಾಗತೊಡಗಿತು. ನಾ ಗೆಲ್ಲುತ್ತಿದ್ದೇನೆ ಎಂಬೋ ಭ್ರಮೆಯಲ್ಲೇ ಇದ್ದೆ. ಬೆತ್ತಲೆ, ಬಯಲು, ಅದ್ವೈತ ಎಲ್ಲವೂ ಕೇವಲ ಪದಗಳಾಗಿ ಮಾತ್ರ ಉಳಿದುಬಿಟ್ಟಿತ್ತು. ಮತ್ತೇ ಮತ್ತೇ ಎಷ್ಟೇ ಸಾರೀ ಪ್ರಶ್ನಿಸಿಕೊಂಡರೂ ಉತ್ತರವೇ ಸಾದ್ಯವಾಗದ ಪ್ರಶ್ನೆಗಳ ಗೊಂದಲಕ್ಕೆ ತಲೆಕೊಟ್ಟುಬಿಟ್ಟಿದ್ದೇನೆ. ಅವಳಿಗೆ ಶರಣಾಗದೆ, ರೂಪಾಂತರ ನಿರಂತರವೇ? ನಿರಂತರವಾಗಿ ರೂಪಾಂತರಕ್ಕೊಳಗಾಗುವುದು ಸ್ಥಾವರವೆ? ಅಥವಾ ಜಂಗಮವೇ? ನಾನೇ? ಅವಳೇ?, ಎಂಬೋ ಪ್ರಶ್ನೆಗಳಿಗೆ ಎಂದಿಗೂ ಉತ್ತರ ದಕ್ಕದು. ಆದರೆ, ಆ ನನ್ನನ್ನ ತಡೆದುಕೊಳ್ಳುವ ತಾಕತ್ತು ಅವಳಿಗಿದೆಯೇ ಎಂಬೋ ಪ್ರಶ್ನೆಯೂ ಕಾಡಿದೆ.

ಅವಳು ಹೇಳಿದ್ದು ಇಷ್ಟೇ ಮಾತು,

"ಮಾಂಸದ ಮುದ್ದೆ ಕಣೋ ನೀನು. ಈಗ ತಾನೆ ಹುಟ್ಟಿದ ಮಗುವಿನ ದೇಹ ಉಂಟಲ್ಲ, ಅದೇ ನೀನು. ನಿನ್ನ ದೇಹದ ಗಂಧ ಗೊತ್ತ ನಿನಗೆ, ಆ ದೇಹದ ಗಂಧಕ್ಕೆ ನಾ ಹುಚ್ಚಿಡಿಸಿಕೊಂಡಿದ್ದೇನೆ. ನಿನ್ನ ಕಂಡಾಗ, ಆ ನಿನ್ನ ದೇಹಗಂಧಕ್ಕೆ ಮೂರ್ಚೆ ಹೋಗಿ ಒಂದು ಮಾತು ಆಡದೆ ನಿಂತುಬಿಡುತ್ತಿದ್ದೆ. ಆ ಗಂಧಕ್ಕೆ ನರ ನರಗಳು ಬಿಗಿಯುತ್ತೆ, ಉಸಿರು ಕಟ್ಟಿದಂತ ಬಾಸವಾಗುತ್ತೆ. ಉಸಿರೂ ಆಡದಂತೆ ನಿನ್ನ ಅಪ್ಪಿಕೊಂಡು ಸತ್ತು ಹೋಗಿಬಿಡಬೇಕು ಅಂತ ಅನ್ನಿಸುತ್ತೆ. ನಿನ್ನ ಶಾರೀರದ ಪ್ರತೀ ಕಣವನ್ನೂ ನಾನು ಬಯಸುತ್ತಿದ್ದೀನಿ ಕಣೋ! ಶವದ ಕಣ್ಣುಗಳಲ್ಲಿ ನಿನ್ನ ಮುಖವನ್ನ ನೋಡಿಕೊಳ್ಳೋ ನೀನು, ನನ್ನ ಕಣ್ಣುಗಳನ್ನು ನೋಡಲಿಲ್ಲ, ನನ್ನ ಶರೀರವನ್ನೂ ನೋಡಲಿಲ್ಲ"

ಆ ಕಣ್ಣುಗಳನ್ನ ನೋಡುತ್ತಾ ಇದ್ದೆ. ಮೃತ್ಯು ನನ್ನೆದುರಿಗೆ ನಿಂತಿತ್ತು. ಮೃತ್ಯುವಿಗೆ ಮಾತು ಬರುವುದಿಲ್ಲ. ನಾ ಕುಸಿದು ಹೋದೆ. ತಲೆಯನ್ನ ಅವಳ ಕಾಲಡಿಯಲ್ಲಿ ಇಟ್ಟು ನಮಸ್ಕರಿಸತೊಡಗಿದೆ, ನನ್ನ ಕಣ್ಣ ಹನಿಯೊಂದು ಅವಳ ಗೋರಂಟಿ ಹಾಕಿದ ಉಗುರಿಗೆ ತಾಕಿತು. ಅವಳ ಕಣ್ಣೀರು ಅವಳ ಬೆಂಕಿಯಲ್ಲಿ ಶಾಂತವಾಯಿತೆಂದು ನಾ ಭಾವಿಸಿದೆ. ಎಲ್ಲಿಂದಲೋ ಪುರುಷಸೂಕ್ತ ಕೇಳುತ್ತಲ್ಲಿತ್ತು. ಕಡೆಗೆ, ಶಾಂತಿ ಮಂತ್ರ, ಓಂ ಶಾಂತಿ ಶಾಂತಿ ಶಾಂತಿಃ.

5 ಕಾಮೆಂಟ್‌ಗಳು:

  1. ಮದುವೆ ಮಾಡಿಕೊಳ್ಳಿ ಸಾರ್
    ಅಶೋಕವರ್ಧನ

    ಪ್ರತ್ಯುತ್ತರಅಳಿಸಿ
  2. >>"ನಿರಂತರವಾಗಿ ರೂಪಾಂತರಕ್ಕೊಳಗಾಗುವುದು ಸ್ಥಾವರವೆ? ಅಥವಾ ಜಂಗಮವೇ?"

    ಹರಿಯುವುದೂ ಒಂದು ನಿಲುವು, ನಿಂತದ್ದರಲಿನ್ನೇನೋ ಒಳಹರಿವು.

    ಒಂದು ನದಿಯನ್ನ ಎರಡು ಸಾರಿ ಎಡತಾಕಲು ಸಾಧ್ಯವಾ?

    ಇಲ್ಲಿ ಹೀಗಿದ್ದದ್ದೇ ಹಾಗಾಗಿಬಿಟ್ಟು ಅಲ್ಲಿ ಹೋಗಿದೆ ಅಂದಾಗ, ಹೀಗಿರೋದಕ್ಕೂ ಹಾಗಾಗೋದಕ್ಕೂ ಮಧ್ಯೆ ರೂಪಾಂತರಗೊಳ್ಳದೇ ಉಳಿದ ಏನೋ ಒಂದು ಸಾಮ್ಯತ್ವವಿರಬೇಕು. Something must remain invariant under a transformation. -ಹಾಗಿಲ್ಲದಿದ್ದರೆ ಇದೇ ಅದಾಗಿರುವುದು ಅಂತ ಗುರ್ತಿಸಲು ಸಾಧ್ಯವಿಲ್ಲ. Tracking of the 'individual' is otherwise impossible under a transformation. ಇದು ಭೌತಶಾಸ್ತ್ರದ ಒಂದು ಪ್ರಮುಖ ಮೂಲಭೂತತತ್ವವೂ ಹೌದು.

    ರೂಪಾಂತರವಿದ್ದುದಕ್ಕೇ ಜಂಗಮ ಅನ್ನೋಣವೇ? ಅಥವಾ ಸಾಮ್ಯತ್ವವಿದ್ದಾಕ್ಷಣ ಅದನ್ನ ಸ್ಥಾವರ ಅನ್ನೋಣವೇ?

    ಸಂದರ್ಭವನ್ನು ಅವಲಂಬಿಸಿ ಅದೇ ನದಿಯು ಸ್ಥಾವರ-ಜಂಗಮಗಳೆರಡಕ್ಕೂ ರೂಪಕವಾಗುತ್ತದೆ. ಆ ಕಾರಣಕ್ಕೆ ಅವೆರಡೂ ಪರಸ್ಪರ ಪೂರಕ ಪ್ರಕಲ್ಪನೆಗಳೇ ಹೊರತೂ ವಿರುದ್ಧವಲ್ಲ.

    ಮೆಚ್ಚಿದೆ!
    :)

    ಪ್ರತ್ಯುತ್ತರಅಳಿಸಿ
  3. ನಿರಂತರ ಬದಲಾವಣೆ ಎಂಬುದೇ ಒಂದು ಬದಲಾವಣೆಯಿಲ್ಲದ ಪರಿಸ್ಥಿತಿ.... ನ್ಯೂಟನ್ ಮೊದಲನೇ ನಿಯಮ ಹೇಳುವ ಹಾಗೆ ವೇಗವನ್ನು ಬದಲಾಯಿಸಿಕೊಳ್ಳದೇ ಸುಮ್ಮನೆ ಚಲಿಸುತ್ತಲೇ ಇರುವುದು ಒಂದು ಬಗೆಯ ಜಡತ್ವ(inertia) ಎಂದೇ ಅಲ್ಲವೇ?
    ಕತ್ತಲೆಯನ್ನು ನಾವು ಕುರುಡು ಎನ್ನುತ್ತೇವೆ. ಅತಿಯಾದ ಬೆಳಕೂ ಸಹಾ ಕಣ್ಣಿಗೆ ಕುರುಡು ಕವಿಸುವುದಿಲ್ಲವೇ?

    ನೀವು ನಿಮ್ಮ ಮೊದಲನೇ ಸಾಲುಗಳಲ್ಲಿ ಬರೆದುಕೊಂಡ ಹಾಗೆ contradiction constitutes a stable system. ಅದು ನನ್ನ ಅಭಿಪ್ರಾಯವೂ ಅನುಭವವೂ ಆಗಿದೆ. ನಾನೂ ನನ್ನ ಸ್ನೇಹಿತರೂ ಈ ಕುರಿತು ಹಲವಾರು ಬಾರಿ ಚರ್ಚಿಸಿದ್ದುಂಟು. ನಿಮಗೂ ಹಾಗೆಯೇ ಅನ್ನಿಸಿದ್ದು ಬಹಳ ಸಂತೋಷವನ್ನೂ ಸೋಜಿಗವನ್ನೂ ಉಂಟು ಮಾಡಿದೆ.

    ಸಮಾನ ಆಸಕ್ತಿಯುಳ್ಳ ನಿಮ್ಮಂತವರು ಆಗೀಗ ಕಾಣಿಸಿಕೊಳ್ಳುತ್ತೀರಲ್ಲ ಅನ್ನುವುದೇ ನನಗೆ ಒಂದು ಸಮಾಧಾನ.

    ನಿಮಗೆ ಎದುರಾದ ಹೆಣ್ಣೂ ನಿಮ್ಮ ತಾಯಿ. ಅದಕ್ಕೆಂದೇ ನೀವು ಆಕೆಯ ಶರೀರವನ್ನು ನೋಡಲಿಲ್ಲ. ಆಕೆಯ ಕಣ್ಣುಗಳೇ ಸಾಕಾದವು. ಸಾವು ನಮ್ಮೆಲ್ಲರ ತವರು ಮನೆ..... ಬದುಕು ನಮ್ಮೆಲ್ಲರ ಗಂಡನ ಮನೆ. ಅಲ್ಲಿ ಮಾತ್ರ ಅದೇ ಹೆಣ್ಣು ನಮ್ಮ ತೃಷೆಗೆ ಒದಗಿ ಬರುತ್ತಾಳೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮಾನ್ಯರೆ, ಧನ್ಯವಾದಗಳು....ಸಮಾನ ಆಸಕ್ತಿಯುಳ್ಳ ತಮ್ಮಂತವರು ನನ್ನ ಬ್ಲಾಗಿಗೆ ಬರುವುದು ನನಗೂ ಸಂತೋಷದ ಸಂಗತಿಯೆ....Every contradictory system is self consistent, ಎಂದು ನನಗೆ ಅನಿಸಿತು. ಯಾಕೆ ಎಂಬುದಕ್ಕೆ ತಿಳಿಯಲು ಹೊರಟಿದ್ದೇನೆ.... ಸಾವು ನಮ್ಮಲ್ಲೆರ ತವರುಮನೆ ಎಂದದ್ದೂ ನಿಜ.... ಅದಕ್ಕೇ ನಾವು, ಸಾವಿಗೆ ಖುಷಿ ಪಡೆಬೇಕು, ದುಃಖವನ್ನಲ್ಲ, ಆದರೆ ಆ ಸ್ಥಿಗೆ ಹೋಗುವುದು ಅಷ್ಟು ಸುಲಭವ ಎಂಬುದೇ ಪ್ರಶ್ನೆ.....
      ಇಂತಿ

      ಅಳಿಸಿ