ಪಯಣ

                                

ಹಿಂದಿನಿಂದ ಕೇಳುತ್ತಿತ್ತು-----
"ಯಾಕೆ?"
"ಗೊತ್ತಿಲ್ಲ."
"ಯಾಕೆ ಗೊತ್ತಿಲ್ಲ?"
"ಅದೂ ಗೊತ್ತಿಲ್ಲ."

ದೊಡ್ಡ ತಪ್ಪು. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಅದು ತಪ್ಪಲ್ಲ, ಆದರೆ, ಒಂದು ಪ್ರಶ್ನೆಯನ್ನ ಕೇಳಿದಾಗ ಆ ಪ್ರಶ್ನೆಯನ್ನ ಯಾಕೆ ಕೇಳಿದ ಅನ್ನೋದು ಗೊತ್ತಿರಬೇಕು. ಪ್ರತೀ ಪ್ರಶ್ನೆಯ ಹಿಂದಿನ ಕಾರಣವನ್ನ ನೀನು ನೀಡಲೇ ಬೇಕು. ಅದು ನಿನ್ನ ಕರ್ತವ್ಯ ಹಾಗೂ ಹೊಣೆ. ಪ್ರತೀ ಪ್ರಶ್ನೆಗೂ, ಉತ್ತರಕ್ಕೂ, ಕಾರಣವಿದ್ದೇ ಇರುತ್ತೆ. ಆ ಕಾರಣವನ್ನ ನೀನು ತಿಳಿಯಲೇಬೇಕು. ಅದು ನಿಯಮ. ನಿಯಮವನ್ನು ನಿರಾಕರಿಸುವ ಹಕ್ಕು ನಿನಗೆ ಇಲ್ಲ.

-------------------------------------------
ಈ ಸಂಸ್ಥೆಯಲ್ಲಿ ನನಗಿದು ಕಡೆಯದಿನ. ಒಂದು ವರ್ಷದ ಕೆಲಸದ ನಂತರ ಉನ್ನತ ವ್ಯಾಸಂಗಕ್ಕಾಗಿ ತೆರೆಳುತ್ತಿರುವುದರಿಂದ ಈ ಸಂಸ್ಥೆಯಲ್ಲಿ ಇನ್ನು ಶಿಕ್ಷಕನಾಗಿ ಮುಂದುವರೆಯಲು ಸಾದ್ಯವಿಲ್ಲ. ಅದಕ್ಕಾಗಿ ನೆನ್ನೆ ರಾಜೀನಾಮೆ ಸಲ್ಲಿಸಿ ಇಂದು ಹೊರಡುತ್ತಿದ್ದೇನೆ.
ಡೈರಿಯಲ್ಲಿ ಈ ರೀತಿ ಬರೆದೆ.
"ಇಂದು ವಿಧಾಯವನ್ನ್ ಹೇಳಬೇಕಿದೆ. ಸ್ವಗತ ಸಹಕಾರಿಯಲ್ಲ. ಸಲ್ಲದ ಸ್ಥಳಗಳಲ್ಲಿ ಸ್ವಗತಕ್ಕೆ ಇಳಿಯಬಾರದು. ಆದರೂ...."

ರಾಯರಿಗೆ ನನ್ನ ಪ್ರಶ್ನೆ ಅರ್ಥವಾಗಿತ್ತು ಅಂತ ಅನ್ನಿಸುತ್ತೆ.
"ವಿದಾಯದ ಈ ಕ್ಷಣ ಒಮ್ಮೆ ಹಿಂದೆ ನೋಡಿದಾಗ, ಅಚ್ಚರಿ, ಭಯ, ಕುತೂಹಲ, ಇಷ್ಟೇನ? ಇಷ್ಟೊಂದ?  ಕಾಡುತ್ತ ಹೋಗುತ್ತೆ.  ಕಡೆಗೆ ಅನುಭವ ಅನ್ನೋದೊಂದು ಜೊತೆಗಿರುತ್ತೆ ಅಷ್ಟೆ."
"ಯಾವುದೋ ತಿರುವು, ಇಲ್ಲಿಗೆ ಯಾಕೆ ಬಂದೆ? ಇಲ್ಲಿ ಬಂದದ್ದಕ್ಕೆ ಉದ್ದೇಶ ಅಂತ ಇದೆಯ? ಇದ್ಯಾವುದಕ್ಕೂ ಉತ್ತರಾನೇ ಇಲ್ಲ ನೋಡಿ. ಅಥವಾ ಪ್ರಶ್ನೆಗಳಾದರೂ ಸರಿ ಇದೆಯ ಅಂದರೆ, ಅದೂ ಅನುಮಾನವೆ.!"

ರಾಯರು ತಮ್ಮ ಪಾಡಿಗೆ ಉಸಿರೆಳೆದುಕೊಳ್ಳುತ್ತಾ ನಿಂತುಬಿಟ್ಟರು. ಅವರಿಗೆ ಮೌನವೆಂದರೆ ಇಷ್ಟ್.

-----------------------------------------
ಈ ನಾಟಕದ ಬಗ್ಗೆ ಅವನಿಗೆ ತುಂಬಾ ಆಸಕ್ತಿಯಿತ್ತು. ಹಲವರಿಗೆ ತಾನೆ ಕರೆ ಮಾಡಿ ವಿಜಯ್ ತೆಂಡೂಲ್ಕರ್ ರ"Silence....The court is in session" ನಾಟಕ ಅಂತಲೂ, IISc ಅಲ್ಲಿ ಪ್ರದರ್ಶನವೆಂದೂ, IISc ಯವರೇ ನಡೆಸಿಕೊಡುವುದೆಂದೂ ತಿಳಿಸಿದ್ದ. ನಾಟಕ ಮುಗಿದ ನಂತರ...
"ನಾಟಕ ತಂತ್ರ ಅದ್ಭುತವಾಗಿದೆ ನೋಡಿ. ಅವರ ನಟನೆ ಸಹ ಬಹಳ ಪ್ರಬುದ್ಧವಾಗಿ ಬಂದಿದೆ. ಆದರೆ, ನಾನು ಆ ಕಡೇ ದೃಷ್ಯದಲ್ಲಿ ಜಾನಕಿ ಬಾಗಿಲನ್ನ ಒದೆಯುತ್ತಾಳೆ ಅಂತ ಭಾವಿಸಿದ್ದೆ. ಆದರೆ ಹಾಗೆ ಆಗಲೇ ಇಲ್ಲ. "
"ನಾಟಕ ನಿಮಗೆ ಬೇಕಾದ ರೀತೀಲಿ ನಡೆಯೋಲ್ಲ ಕಂಣ್ರಿ."
"ಆದರೂ....ಇರಲಿ, ಇದನ್ನೇ ಒಂದು ಕತೆ ಮಾಡಿ ಬರೀಬೇಕು. ಜಾನಕಿಯ ಪಾತ್ರ ಮಾಡಿದ್ದಳಲ್ಲ, ಅವಳ ಮನಸ್ಥಿತಿಯನ್ನ ಬಿಂಬಿಸಿ ಒಂದು ಉತ್ತಮ ಕತೆ ಬರೆಯಬೊಹುದು. ಕತೆಯನ್ನ ಹೀಗೆ ಬರೆದರೆ ಹೇಗೆ..? ನಾಟಕದ ಜಾನಕಿಯ ಪಾತ್ರವು ಜಾನಕಿಯ ಪಾತ್ರ ಮಾಡಿದವಳೊಂದಿಗೆ ಮಾತಿಗಿಳಿಯುವಂತೆ ಚಿತ್ರಿಸಿ, ಅಲ್ಲಿ ಆಕೆಯ ಭಾವನೆಗಳನ್ನ ತಲ್ಲಣಗಳನ್ನ ಚಿತ್ರಿಸೋದು. ಏನಂತೀರ.? ಸ್ವಲ್ಪ ಬಿಂಬ ಪ್ರತಿಬಿಂಬ ಅಂತ ಎಲ್ಲಾ ಸೇರಿಸ್ಬೋದು. "
"ಹೂ, ಅದೂ ಆಗಲಿ... ಆದರೆ, ಈ ನಾಟಕ ಬರೆದದ್ದು ೧೯೬೩ ರಲ್ಲಿ, ಈಗಲೂ ಈ ನಾಟಕ ಮಾಡಬೇಕು ಅಂತ ಅನ್ನಿಸುತ್ತಲ್ಲ.ಕೃತಿಯಾಗಿ ಗೆದ್ದಿರಬೊಹುದು, ಆದರೆ ಈ ನಾಟಕ ಇಂದಿಗೂ ಪ್ರಸ್ತುತವೆ? IISc ಅನ್ನೋ ಸ್ಥಳದಲ್ಲಿ ಮಾಡುವ ಅವಶ್ಯ ಇತ್ತ. ? "
"ನಾಟಕ ಯಾಕ್ರೀ ಪ್ರಸ್ತುತವಾಗಬೇಕು..? ಸುಮ್ನೆ ನೋಡಿದ್ರೆ ಸಾಕಾಗಲ್ವ."
"ಬಿಡಿ.. ವಾದ ಇನ್ನೆಲ್ಲಿಗೋ ಹೋಗುತ್ತೆ. ಆದರೂ ಈವತ್ತಿನ ದಿನಗಳಲ್ಲಿ ಜಾನಕಿಯಂತ ಪಾತ್ರವಾಗಲೀ, ಆ ರೀತಿಯ ಸ್ಥಿತಿಯಾಗಲೀ ಇಲ್ಲ ಅಂತ ಅನ್ನಿಸುತ್ತೆ.
ಹೇ ಸುಷ್ಮಿತ, ನೀ ಯಾಕೇ ಎದ್ದೆ..? ಎಲ್ಲಿಗೆ ಹೊರಟೆ...?"
"ನೀವು ಮಾತಾಡೋದು ಕೇಳಿದ್ರೆ ಏನು ಹೇಳೋದು ಅಂತ ತಿಳಿಯೋಲ್ಲ. ನೀವು ಹೇಳೋ ಆ ಪಾತ್ರ, ಕತೆ, ನಾಟಕ, ಅದೇನೋ ಒಂದೂ ನಂಗೆ ಗೊತ್ತಿಲ್ಲ. ಆದರೆ ನಾಟಕದಿಂದ ಹೊರಗೆ ಬಂದ ಮೇಲೆ ನನಗೆ "ಅವಳು" ನೆನಪಾದದ್ದು. ನಾನೇ ಇಳಿಸಿದ್ದು ಗೊತ್ತ! ಫ್ಯಾನಿಗೆ ನೇತಾಡುತ್ತಿದ್ದ್ಲು. ಈಗಲೂ ಆ ಇಡೀ ದೃಷ್ಯ ನನ್ನ ಕಣ್ಮುಂದೆ ನಡೆಯುತ್ತಿರೋ ರೀತೀಲಿದೆ. ನನ್ನ ಮೆದುಳಲ್ಲಿ ಇರೋದನ್ನ project ಮಾಡೋ ರೀತಿ ಇದ್ದಿದ್ರೆ ಎಷ್ಟು ಚೆನ್ನಾಗಿರ್ತುತ್ತು ಅಲ್ವ ಅಂತ ಅನ್ನಿಸುತ್ತೆ. ನಂಗೆ ನಿನ್ನ ತರ ಕತೆ ಕವಿತೆ ಎಲ್ಲಾ ಬರೆಯೋಕೆ ಬರೋಲ್ಲ. "
------------------------------------------
ಈ ಸಂಸ್ಥೆಯಲ್ಲಿ ನನ್ನ ಕಡೆಯದಿನದಂದೇ ಈಕೆಯ ನಿವೃತ್ತಿಯ ದಿನವೂ ಸಹ. ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿ ಪಾಠ ಮಾಡುತ್ತಿದ್ದರಂತೆ. ನನಗೆ ಎಂದಿಗೂ ಈಕೆ ಕುತೂಹಲದ ವಿಷಯವಾಗಿರಲೇ ಇಲ್ಲ. ಈ ದಿನದ ವರೆಗೂ ಈಕೆಯನ್ನ ನಾನು ಸೂಕ್ಷ್ಮವಾಗಿ ಗಮನಿಸಿಯೇ ಇರಲಿಲ್ಲ. ಇಂದೂ ನಾನು ಈಕೆಯನ್ನ ಸೂಕ್ಷ್ಮವಾಗಿ ಗಮನಿಸಿದ್ದೀನ? ಕಾಲೇಜಿನ ಹಿಂದಿನ ಗೋಡೆಗಳ ಮೇಲೆ ಬರೆದ ಈಕೆಯ ಹೆಸರನ್ನ ಕುತೂಹಲದಿಂದ ನೋಡಿದ ಹಾಗೆ ಈಕೆಯನ್ನ ಎಂದಿಗಾದರೂ ಗಮನಿಸಿದ್ದೆನ? ನನ್ನ ಯಾವ ಕತೆಯ ಪಾತ್ರಕ್ಕೂ ಈಕೆ ಹೊಂದುತ್ತಿರಲಿಲ್ಲ. ಯಾವ ಆಸಕ್ತಿಯೂ ಇಲ್ಲದ ರೀತಿಯಲ್ಲಿ ನಿತ್ಯ ೯ಕ್ಕೆ ಬಂದು ೫ಕ್ಕೆ ಹೊರಡುವ ಈಕೆಯನ್ನ ಗಮನಿಸುವ ಆಸಕ್ತಿಯೇ ಇರಲಿಲ್ಲ. ಹೇಳಿಕೊಳ್ಳಲಿಕ್ಕೆ Professor ಅಂತ ಆದರೂ ಈಕೆಗೆ ಏನು ಗೊತ್ತಿತ್ತು? ಸಾಹಿತ್ಯ ಗೊತ್ತಿರಲಿಲ್ಲ, ಕವಿತೆ ತಿಳಿದಿರಲಿಲ್ಲ, ರಾಜಕೀಯ, ಚರಿತ್ರೆ ಯಾವುದೂ ಏನೂ ತಿಳಿದಿರಲಿಲ್ಲ. ನಮ್ಮ ಜೊತೆ ಕ್ಯಾಂಟೀನಲ್ಲಿ ಕೂತು ಗಂಟೆಗಟ್ಟಲೆ ಮಾತನಾಡಲಿಕ್ಕೆ ಎಂದಿಗೂ ಬರಲಿಲ್ಲ. ಆದ್ದರಿಂದ ಈಕೆ ನನಗೆ ಆಸಕ್ತಿಯ ವಿಷಯವೇ ಅಲ್ಲ. ಇನ್ನು ಈಕೆಯ ಪರಿಣಿತಿಯ ವಿಷಯದ ಬಗ್ಗೆಯೂ ಸಹ ಈಕೆಗೆ ಏನೂ ತಿಳಿದಿರಲಿಲ್ಲವಂತೆ.
ಒಮ್ಮೆ ಅನ್ನಿಸಿತ್ತು, ಕನಿಷ್ಟ ಒಂದು ಕತೆಯನ್ನಾದರೂ ಬರೆಯಬೇಕು ಅಂತ. ಆಗ ಏನಾಯಿತು ಅಂದರೆ, ಯಾರೋ ಹೇಳಿದ್ದರು, ಸುಮಾರು ವರ್ಷಗಳ ಹಿಂದೆ ಈಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು ಅಂತ. ಈಕೆ ಆ ವಿಷಯವನ್ನೇ ಯಾರಿಗೂ ತಿಳಿಸಿರಲಿಲ್ಲವಂತೆ. ತನ್ನ ಮಗಳು ಸತ್ತ ಮಾರನೆಯೆ ದಿನವೇ ಕಾಲೇಜಿಗೆ ಬಂದಿದ್ದಳಂತೆ. ಆಗ ಅನ್ನಿಸಿತ್ತು ಈ ವಿಷಯ ಒಂದು ಕತೆಗೆ ವಸ್ತುವಾಗಲಿಕ್ಕೆ ಸರಿಯಾಗಿದೆ ಅಂತ. ಆದರೆ ಯಾಕೋ ಬರೆಯಲೇ ಇಲ್ಲ.
ನಿವೃತ್ತಿಯ ದಿನ ಹತ್ತಿರ ಬರುತ್ತಿದ್ದಂತೆ, ಎಂದಿಗೂ ಹೊಸ ಸೀರೆ ಉಡದ ಈಕೆ ದಿನಕ್ಕೊಂದರಂತೆ ಹೊಸ ಸೀರೆ ಉಟ್ಟು ಬರುತ್ತಿದ್ದಳು.  ತನ್ನ ವಿಭಾಗದ ಗೋಡೆಯ ಮೇಲೆ ಫೋಟೋ ತಗಲಾಕುತ್ತಾರೆ ಎಂದು ಗೊತ್ತಾದಾಗ ರೇಶ್ಮೆ ಸೀರೆ ಉಟ್ಟು ಫೋಟೋ ತೆಗೆಸಿಕೊಂಡಿದ್ದಳು.
ಇವತ್ತು ಈಕೆಯ ಕಡೆಯ ದಿನ. ಯಾವುದೇ ಬೀಳ್ಕೊಡುಗೆ ಸಮಾರಂಭವನ್ನ ಮಾಡಕೂಡದೆಂದು ಹಠ ಹಿಡಿದ ಪರಿಣಾಮ ಯಾವುದೇ ಗದ್ದಲಗಳಿರಲಿಲ್ಲ. ಈ ಕಡೇ ದಿನದಲ್ಲಿ ಯಾರಿಗೂ ತಿಳಿಸದೆ ಸಾಮಾನ್ಯ ದಿನದಂತೆ ಬಸ್ಸು ಹತ್ತಿ ಮನೆಗೆ ತೆರಳಿದಳು.
ಹಾ, ಹೇಳಲು ಮರೆತೆ ಈಕೆಯ ಹೆಸರು ಸುನಂದಮ್ಮ ಅಂತ....


 

2 ಕಾಮೆಂಟ್‌ಗಳು:

  1. ಅರವಿಂದ್,
    ನಿಮ್ಮ ಕತೆ ಇಷ್ಟವಾಯಿತು. ನಿಮ್ಮ ನಿರೂಪಣಾ ಶೈಲಿ ನಿಜಕ್ಕೂ ಚೆನ್ನಾಗಿದೆ. ಆದರೆ ಸ್ವಲ್ಪ ಆತುರದಿಂದ ಒಳ್ಳೊಳ್ಳೆಯ ಕತೆಗಳನ್ನು ತಿದ್ದಿ ತೀಡದೆ ಹಾಗೆ ತೇಲಿಬಿಡುತ್ತಿದ್ದೀರಿ ಅನಿಸುತ್ತದೆ. ಈಗಿರುವ ಆಕೃತಿಯಲ್ಲಿ ಇದರ ಓದಿಗೆ ಅನಿವಾರ್ಯವಾಗುವ ‘ವೇಗ’ ನಿಮ್ಮ ಕತೆಯ ಪರಿಣಾಮಕಾರಿ ಸಂವಹನಕ್ಕೆ ತೊಡಕನ್ನೊಡ್ಡದಂತೆ ವಿವರಗಳಿಂದ ಕತೆಯನ್ನು ಮೈದುಂಬಿಸಿ. ವಿವರಗಳು ಕತೆಯ ನಿಗೂಢತೆಯನ್ನು ಬಿಟ್ಟುಕೊಡದೇನೆ ಕತೆಯನ್ನು ಹೆಚ್ಚು ನಿಧಾನಗತಿಯ ಓದಿಗೆ ಒಗ್ಗಿಸುವುದು ಸಾಧ್ಯವಿದೆ, ಆ ದಿಸೆಯಲ್ಲಿ ಸ್ವಲ್ಪ ಪ್ರಯತ್ನ ಅಗತ್ಯವಿದೆ ಅನಿಸುತ್ತದೆ.

    ಪ್ರತ್ಯುತ್ತರಅಳಿಸಿ
  2. ನರೇಂದ್ರ ಪೈ,

    ತುಂಬಾ ಧನ್ಯವಾದಗಳು.... ಮುಂದಿನ ಪ್ರಯತ್ನದಲ್ಲಿ ತಮ್ಮ ಸಲಹೆಯನ್ನ ಪಾಲಿಸಲು ಪ್ರಯತ್ನಿಸುತ್ತೇನೆ....ತಾವು ಹೇಳಿದ್ದು ನಿಜ.

    ಪ್ರತ್ಯುತ್ತರಅಳಿಸಿ