ಅಭಿಧಾ 3 : ಸಂಕೀರ್ಣತೆಗೊಂದು ಮುನ್ನುಡಿ

 


ಅಭಿಧಾ 1 ಕ್ಕೆ ಹಾಗೂ ಅಭಿಧಾ 2 ಕ್ಕೆ ಇಲ್ಲಿ ಕ್ಲಿಕ್ಕಿಸಿ : 


*****


ಎರಡು ದಿನಗಳಿಂದ ಬೆಂಗಳೂರಲ್ಲಿ ಇದ್ದೆ. ಶುಕ್ರವಾರ ರಾತ್ರಿ ಹೊರಟವರು, ಶನಿವಾರ ಬೆಳಗ್ಗೆ ಬೆಂಗಳೂರು ತಲುಪಿದ್ದೆವು. ಕೆಲಸ ಮುಗಿಸಿಕೊಂಡು ಭಾನುವಾರ ಮಧ್ಯಾಹ್ನ ಬಸ್ಸಿನಲ್ಲಿ ಚೆನ್ನೈಗೆ ತಲುಪಿದ್ದೆವು. ಇಂದಿನಿಂದ ಮತ್ತೆ ಕೆಲಸ, ಅದು, ಇದು. ಶನಿವಾರ ನಿಜಕ್ಕೂ ಅದ್ಭುತ ದಿನ


ಹೇಗಿದ್ದರೂ ಬೆಂಗಳೂರಿಗೆ ಹೋಗುತ್ತಿದ್ದೇನೆ ಆದುದರಿಂದ, ಮೂರ್ತಿಗಳನ್ನು ಬೇಟಿಯಾಗೋಣವೆಂದು ಹಿಂದಿನ ದಿನವೇ ಕರೆ ಮಾಡಿದ್ದೆಶನಿವಾರ ಶಂಬಾ ಅವರ ಕೃತಿಗಳ ಕುರಿತಾಗಿ ಮಾತನಾಡುತ್ತಿದ್ದೇನೆ, ಬನ್ನಿ ಎಂದು ತಿಳಿಸಿದರು. ಶನಿವಾರದ ಬೆಳಗ್ಗೆ ಕಾರ್ಯಕ್ರಮ ನಡೆಯುವ ಜಾಗದ ವಿಳಾಸ ಕಳುಹಿಸಿದ್ದರು. ರಾಮಮಂದಿರದ ಬಳಿ ಇರುವ ಮನೆಯ ವಿಳಾಸ ಕಳುಹಿಸಿದ್ದರು. ಹುಡುಕಿಕೊಂಡು ಹೋದೆ. ಅಲ್ಲಿ ಒಂದು ವಸತಿ ಸಮುಚ್ಚಯದಲ್ಲಿ ಒಂದು ಮನೆಯ ಸಂಖ್ಯೆಯಲ್ಲಿ ರಮೇಶ್  ಎಂಬುವರು ಇರುತ್ತಾರೆ ಎಂದು ತಿಳಿಸಿದರು. ನಂತರ ತಿಳಿದದ್ದೆಂದರೆ ರಮೇಶ್ ಎಂಬುವವರು ನನಗೆ ತಿಳಿದಿದ್ದವರೇ ಆಗಿದ್ದದ್ದು. ಬಹಳ ಕಾಲದ ಹಿಂದೆ ನಾನು ಅವರನ್ನು ಹೆಗ್ಗೋಡಿನಲ್ಲಿ ಬೇಟಿಯಾಗಿದ್ದೆ. ಅಂದಿನಿಂದಲೂ ಪರಿಚಿತರು. ದೇಶಿ ಉತ್ಪನ್ನಗಳು, ಸಾವಯವ ಕೃಷಿ, ಸಹಜ ಸಾಮಾನ್ಯ ಬದುಕು ಎಂಬ ಹಲವು ತಾತ್ವಿಕ ವಿಚಾರಗಳೊಟ್ಟಿಗೆ ಬದುಕುತ್ತಿದ್ದವರು. ಇಂಜಿನಿಯರಿಂಗ್ ಓದಿಯೂ ಬಗೆಯಲ್ಲಿ ಬದುಕುತ್ತಿದ್ದರು ಮನುಷ್ಯನ ಬಗೆಗೆ ಆಗಾದವಾದ ಗೌರವ ಮೂಡಿತು. ಎಲ್ಲವನ್ನು ಬಿಟ್ಟು ಹೀಗೆ ಜನರ ಬದುಕಿನ ಮಾದರಿಗಳು, ಪರಿಸರ ಹೋರಾಟ ಎಂದು ಇಡೀ ಬದುಕನ್ನೇ ಅದಕ್ಕೆ ಮುಡುಪಾಗಿಟ್ಟಿದ್ದಾರೆ. ಮುಂದಿನ ಬದುಕಿನ ಬಗೆಗೆ ಅವರಿಗೆ ಹೆದರಿಕೆ ಇಲ್ಲವೇ? ಆಶ್ಚರ್ಯ ಆಗುತ್ತೆ. ಎಲ್ಲಾ ರೀತಿಯ ಭದ್ರತೆಗಳಿದ್ದರೂ ನಾವುಗಳು, ನನ್ನನ್ನೂ  ಸೇರಿಸಿಕೊಂಡು, ಅದಷ್ಟು ಅಭದ್ರತೆಯಿಂದ ನರಳುತ್ತಿದ್ದೇವೆ  ಎಂದು ಗಾಬರಿ ಆಗುತ್ತೆ.


*****


ನಂತರ ಮೂರ್ತಿಗಳು ಬಂದರುಶಂಬಾರ ಮೇಲೆ ಅದ್ಭುತವಾಗಿ ಮಾತನಾಡಿದರು. ಅವರಿಗೆ ಮಾತ್ರ ಹಾಗೆ ಮಾತನಾಡಲು ಸಾಧ್ಯ. ಅದೇನೋ ಅಪಾರವಾದ ಜ್ಞಾನಕೋಶ, ಅಗಾಧವಾದ ನೆನಪು. ಹೇಗೆ ಶಂಬರವರ  ಒಳನೋಟಗಳು ನಮಗೆ ಪರ್ಯಾಯ ಚಿಂತನಾಕ್ರಮವನ್ನು ಕಟ್ಟಿಕೊಡಲಿಕ್ಕೆ ಸಾಧ್ಯ ಎಂದೆಲ್ಲ ತಿಳಿಸಿದರು.


ನಮ್ಮ ಬಾಹ್ಯ ಗುರುತು ಮೂಡುವುದರ ಹಿಂದೆ ಶತಮಾನಗಳ ಸಂಕೀರ್ಣವಾದ ವಿಕಾಸದ ಅವಶ್ಯಕತೆ ಇದೆ. ಸಂಕೀರ್ಣತೆಯ ಅರಿವಾದರೆ, ಬಹುಶಃ ನಾವುಗಳು ನಮ್ಮ ಭಾಷೆ, ಗುರುತಿನ ಬಗೆಗೆ ಹೆಚ್ಚು ಪ್ರಸ್ತುತವಾದ ಅರಿವು ಮೂಡಿಸಿಕೊಳ್ಳುತ್ತೇವೆ ಎಂದರು. ಯಾಕೆ ನಾವು ಸಂಶೋಧಕರಾಗಬೇಕು ಎಂದರೆ, ಹೆಚ್ಚು ಹೆಚ್ಚು ಮನುಷ್ಯರಾಗಲು ಎಂದುಸೃಷ್ಟಿಯ, ಪ್ರಕೃತಿಯಾಗಿರಬಹುದು, ಮಾನವ ಸಮಾಜವಾಗಿರಬಹುದು, ಸಂಬಂಧಗಳಾಗಿರಬಹುದು ಅಥವಾ ಇನ್ಯಾವುದೇ  ಆಗಿರಲಿ, ಅಲ್ಲಿನ ಅಭ್ಯಾಸದಿಂದ, ಅರಿವಿನಿಂದ ನಮ್ಮ ಅಭಿಮಾನದ ಗುರುತಿಸುವಿಕೆಯನ್ನು ಕಳೆದುಕೊಳ್ಳುತ್ತೇವೆ. ಹೀಗೆ ಕಳೆದುಕೊಳ್ಳುವುದೇ ಸಂಕೀರ್ಣ ಕ್ರಿಯೆ. ಆಹಾ! ಒಂದು ಸಂಕೀರ್ಣತೆ ಮತ್ತೊಂದು ಸಂಕೀರ್ಣತೆಗೆ  ಪೂರಕವಾಗುತ್ತವೆ. ಬದುಕಲ್ಲವೇ?


*****



ನಿನ್ನೆಯೇ ಬರೆಯಬೇಕಿತ್ತು. ಆದರೆ ಬರೆಯಲಿಕ್ಕೆ ಆಗಲಿಲ್ಲ, ಬರೆಯುವ ಮನಸ್ಸಿರಲಿಲ್ಲ. ಏನೋ ಬೇಸರ. ಬೇಸರ ಅನ್ನೋದಕ್ಕಿಂತ ಅದೇ ಹಳೆಯ ಚಾಳಿ, ಕಿನ್ನತೆ. ಕಾರಣ ಗೊತ್ತಿಲ್ಲ ಅಥವಾ ಏನಾದರೂ ಆಗಿರಬಹುದು. ಇರಲಿ, ಅದು ಈಗ ಮುಖ್ಯವಲ್ಲ. ನಿನ್ನೆ ನನ್ನ ಮೊದಲ ಸಿಂಗಲ್ ಆಥರ್ ಪೇಪರ್ ಅಕ್ಸೆಪ್ಟ್ ಆಯಿತು. ಒಂದು ವರ್ಷದ ನಿರಂತರ ಪ್ರಯತ್ನ; ಬರೆಯುವುದು, ಮತ್ತೆ ಕಳುಹಿಸುವುದು, ಅದಕ್ಕೆ ಬೇಕಿರುವ ಗಣಿತೀಯ ಲೆಕ್ಕಗಳನ್ನು ಮಾಡುವುದು, ಎಲ್ಲಕ್ಕೂ ಮಿಗಿಲಾಗಿ ನಿರಂತರವಾಗಿ ಉತ್ತರಕ್ಕೆ ಕಾಯುವುದು. ಹಲವು ಬಾರಿ ಎಕ್ಸೈಟ್ಮೆಂಟ್, ಆದರೆ ಮತ್ತೆ ಹಲವು ಬಾರಿ ಬೇಸರದ ಸಂಗತಿಯಾಗಿತ್ತು.


ನನಗೆ ಲೇಖನ ಅಕ್ಸೆಪ್ಟ್ ಆಗುವುದು, ಪ್ರಕಟವಾಗುವುದು ಬಹುಮುಖ್ಯ ಆಗಿತ್ತು. ನಾನು ಸ್ವಂತವಾಗಿ, ಸ್ವತಂತ್ರವಾಗಿ, ಅಂದರೆ ಇಲ್ಲಿರುವ ಹಲವಾರು ಲೆಕ್ಕಾಚಾರಗಳನ್ನು ಒಬ್ಬನೇ ಮಾಡಿದ್ದೇನೆ. ಯಾವಾಗ ಸ್ವೀಕೃತ ಎಂದು ತಿಳಿಯುತ್ತದೆ ಎಂದು ಕಾದುಕೂತಿದ್ದೆ. ಇದು ನನಗೊಂದು ಬಹುಮುಖ್ಯವಾದ ನಂಬಿಕೆ ನೀಡುವುದರಲ್ಲಿ ಬೇಕಿತ್ತು. ಅದಕ್ಕಾಗಿಯೇ ಬಹಳ ತವಕದಿಂದ ಕಾದುಕೂತಿದ್ದೆ. ನೆನ್ನೆ ಇದು ಆಯ್ಕೆ ಆಗಿದೆ ಎಂದು ಸಂದೇಶ ಬಂದಿತ್ತು. ಸುಮಾರು ಒಂದು ವರ್ಷದ ಕೆಲಸ. ಮೊದಲಿಗೆ ನನಗನ್ನಿಸಿತ್ತು ಸಂಶೋಧನಾ ಲೇಖನ ಆಯ್ಕೆ ಆದರೆ ಬಹಳ ಖುಷಿ ಆಗುತ್ತದೆ ಎಂದು. ಆದರೆ ಹಾಗೆ ಆಗಲಿಲ್ಲ. ಯಾಕೋ ಸುಮ್ಮನಿರಬೇಕು ಅಷ್ಟೆ ಎಂದೆನ್ನಿಸಿಬಿಟ್ಟಿತು


*****


ಕಣ್ಣಿಗೆ ಏನು ಹೊಸದು ಕಾಣುತ್ತಿಲ್ಲ. ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ಒಂದೇ ಒಂದು ಹೊಸ ಪದ ಸಿಕ್ಕುತ್ತಿಲ್ಲ. ಅದೆಷ್ಟೇ ತಿಣುಕಿದರೂ  ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ಪ್ರಜ್ಞೆಯ ಹಲವು ಸ್ತರಗಳ ನಡುವಿನ ಕಾಟಕ್ಕೆ, ಪ್ರಜ್ಞೆ ಹಾಗೂ ಪದಾರ್ಥಗಳ ನಡುವಿನ……. ಪ್ರಜ್ಞೆ ಭಾಷೆಯನ್ನು ಹದಗೊಳಿಸುತ್ತದೆ. ಆಗಲೇ ಶೈಲಿ ಮುಖ್ಯವಾಗುವುದು. ವಿಜ್ಞಾನದಲ್ಲಿ ಭಾಷೆಯ ಮುಖಾಂತರವೇ ಚಿಂತಿಸಬೇಕು. ಭಾಷೆಯ ಸಾಧ್ಯತೆಗಳನ್ನು ಅವಲೋಕಿಸದ ಹೊರತು ಪ್ರಜ್ಞೆಯ ಸ್ಥಿತಿಗಳು ವ್ಯಕ್ತವಾಗುವುದಿಲ್ಲ. ಅದೇರೀತಿ, ಪ್ರಜ್ಞೆಯ ಸ್ಥಿತಿಗಳನ್ನು ಅವಲೋಕಿಸದ  ಹೊರತು ಭಾಷೆಯು ತನ್ನ ಸಾಧ್ಯತೆಗಳನ್ನು ತೆರೆಯುವುದಿಲ್ಲ.


ಸೃಜನಶೀಲತೆಯ ವ್ಯಕ್ತ ರೂಪಗಳಾದ ಕಾವ್ಯ ಹಾಗೂ ವಿಜ್ಞಾನಗಳೆರಡರ ಮಾಧ್ಯಮವೂ ಒಂದೇ, ಅದು ಭಾಷೆ. ಭಾಷೆಯಲ್ಲಿ ವ್ಯಕ್ತಗೊಳ್ಳುವ ಮುನ್ನ ಸ್ಥಿತಿ ವಿಶಿಷ್ಟವಾದದ್ದು. ಅಲ್ಲಮನ ಮಾತಿನ ಅರ್ಥ ಬೇರೆಯೇ ರೀತಿಯಲ್ಲಿ ಸೃಜಿಸುತ್ತಿದೆ. ಶಬ್ದದೊಳಗಣ ನಿಶ್ಯಬ್ದದಂತೆ. ಅಂದರೆ, ಅದು ವ್ಯಕ್ತಗೊಳ್ಳುವ ಭಾಷೆಯ ಶಬ್ದದೊಳಗಿನದ್ದಲ್ಲಅದರೊಳಗಿನ ನಿಶಬ್ದದ್ದು. ಹೀಗೆ ಭಾಷೆಯಲ್ಲಿ ಅದನ್ನು ಕಾಣಬೇಕಾದರೆ, ಭಾಷೆಯನ್ನಲ್ಲ ದಕ್ಕಿಸಿಕೊಳ್ಳಬೇಕಿರುವುದು, ಬದಲಿಗೆ ಅಗಾಧವಾದ ನಿಶ್ಯಬ್ದವನ್ನು ದಕ್ಕಿಸಿಕೊಳ್ಳಬೇಕು.


*****


 ಅದೇನು ವಿಚಿತ್ರವೋ ಏನೋ. ಜಪಾನಿಯರ ಸಾವಿನ ಕವನಗಳು ಓದುತ್ತಿರುವ ಸಂದರ್ಭದಲ್ಲಿ, ಅವರು ತೀರಿಕೊಂಡಿದ್ದು ರಾತ್ರಿ ತಿಳಿಯಿತು. ಮೊದಲಿಗೆ ಹೋಗಬೇಕು ಎಂದೆನಿಸಿದರೂನಂತರ ಯಾಕಾಗಿ ಎಂದೆನಿಸಿತ್ತು. ಒಂದಿಷ್ಟು ದಿನಗಳ ಹಿಂದೆ ಕರೆ ಮಾಡಿದ್ದೆ, ಮಾತನಾಡಿದ್ದೆ.


ಯಾವುದೇ ಚಿಕಿತ್ಸೆ ತೆಗೆದುಕೊಳ್ಳುತ್ತಿಲ್ಲ ಎಂದೇ ಹೇಳಿದ್ದರುಅವರು ಸಾವನ್ನು ಕಂಡಿದ್ದರು. ಅವರಿಗೆ ಗೌರವಿಸಲು ನಾನು ಅಲ್ಲಿಗೆ ಹೋಗಿ  ಅವರ ಮೃತ ಶರೀರವನ್ನು ಕಾಣಬೇಕೆಂದೇನೂ ಇಲ್ಲ. ಅವರು ತೋರಿದ ಧೈರ್ಯ ಹಾಗೂ ಮಾನವೀಯ ಮೌಲ್ಯಗಳ ದಾರಿಯಲ್ಲಿ ನಡೆಯಬೇಕು. ಮುಖ್ಯವಾಗಿ ಅವರಿಂದ ಕಲಿತದ್ದೇನು? ಸಾವನ್ನು ನಿರಾಯಾಸವಾಗಿ, ಸಹಜವಾಗಿ ಎದುರಿಸುವುದು. ಅದಕ್ಕಿನ್ನೆಂತಹ  ಧೈರ್ಯ, ಬದುಕಿನ ಬಗೆಗಿನ ಒಳನೋಟ ಬೇಕಲ್ಲವಾ? ನಾನು ಅವರಿಗೆ ಗೌರವಿಸಬೇಕಾದದ್ದು, ಸಾವನ್ನು ಹೀಗೆ ನಿರಾಯಾಸವಾಗಿ ಸ್ವೀಕರಿಸುವುದನ್ನು, ಒಪ್ಪಿಕೊಳ್ಳುವುದರಿಂದ. ಅದೇ ನಾನು ಅವರಿಗೆ ನೀಡಬಹುದಾದ ಗೌರವ.


*****


ಅಗ್ರಜ ಮಾತನಾಡುತ್ತಿದ್ದರು


ಸಂಕೀರ್ಣತೆಯ ಬಗೆ ಸರಳವಲ್ಲ. ಸರಳವಾಗಿದ್ದರೆ ವಿಕಸನವೇ ಇಲ್ಲ. ಸಂಕೀರ್ಣವಾಗಿದೆ. ಹಾಗಂತ ಸಂಕೀರ್ಣತೆಯಿಂದಾಗಿ ತಿರಸ್ಕರಿಸಲಾಗದ ಲೋಕವ್ಯವಹಾರದ ಅರಿವನ್ನು, ಸಂಕೀರ್ಣತೆ ಒಳಗಿಂದಲೇ ಕಾಣಬಲ್ಲ ವ್ಯವಸ್ಥೆಯನ್ನು ಬೆಳೆಸಿಕೊಳ್ಳಬೇಕು


ಬದುಕಿನ ಬಗ್ಗೆ, ಬದುಕಿನ ಬಗೆಗೆಬದುಕು ಧೈನ್ಯವಾಗಬಾರದು. ಆಡಂಬರ ಆಗಬಾರದು. ಒಂದು ಹರಿವು. ಅದನ್ನು ಹರಿದಂತೆ ಬಿಡಬೇಕು. ಕಟ್ಟೆ ಕಟ್ಟಲಾಗದು, ತಿರುಗಿಸಬಾರದು. ಹಾಗೆ ಬದುಕಿದರೆ ಯಾವ ನಷ್ಟವೂ ಇಲ್ಲ. ಆದರೆ ಎಂದಿಗೂ ಪಾಪಪ್ರಜ್ಞೆ ಇರಬಾರದು. ಪಾಪಪ್ರಜ್ಞೆಯಲ್ಲಿ ಬದುಕಬಾರದು. ಸಂಕೀರ್ಣತೆಯಲ್ಲಿ, ಸಂಕೀರ್ಣತೆಗೆ, ಸಂಕೀರ್ಣತೆಯನ್ನು ನಿರಾಕರಿಸದೆ ನೋಡಬೇಕಾದ ಅಗತ್ಯ


*****


ನಿರಂತರವಾಗಿ ಬರೆಯಬೇಕು ಎಂದೆನಿಸುತ್ತೆ. ಅದಕ್ಕೂ ಹೆಚ್ಚಾಗಿ ತಲೆಯ ತುಂಬಾ, ಬೆಟ್ಟದಷ್ಟು ಹಲವು ಆಲೋಚನೆಗಳು. ತಲೆ ಬಹಳ ಬಹಳ ಜೋರಾಗಿ ಓಡುತ್ತಿದೆ. ಯಾಕೋ ಎದೆಯಲ್ಲಿ ನೋವು. ಎಲ್ಲಾ ಬಿಟ್ಟು ಓಡಿಹೋಗಬೇಕು ಅಂತ ಬಹಳ ಅನಿಸುತ್ತೆ. ನನ್ನ ಕೈಯಲ್ಲಿ ಆಗುತ್ತಿಲ್ಲ. ಏಕಾಂತ ಬೇಕು, ಒಬ್ಬನೇ. ನನ್ನ ನಾನು ಕಂಡುಕೊಳ್ಳಬೇಕು. ಏನೇನೋ ಯಾಕೆ ಮಾಡಬೇಕು ಎಂತಲೂ ಅನ್ನಿಸುತ್ತೆ.


ಏನು ಸ್ವತಃ ಮಾಡಬಾರದು. ಏನಾದರೂ ಬಂದರೆ, ಏನು ಬರುತ್ತದೆ, ಅದಕ್ಕೆ ತೆರೆದುಕೊಳ್ಳುವುದು ಅಷ್ಟೇ. ಸ್ವತಃ ಆಲೋಚನೆಯೇ ಎಲ್ಲಿಗೋ ಕೊಂಡೊಯ್ಯುತ್ತಿದೆ. ಸದ್ಯಕ್ಕೆ ಎಲ್ಲಿಗೆ ಕರೆದುಕೊಂಡು ಹೋದರೆ  ಅಲ್ಲಿಗೆ ಹೋಗಬೇಕು. ಇದು ನಿರಾಶಾದಾಯಕವಾಗಿ ಹೇಳುತ್ತಿರುವ ಮಾತು ಅಲ್ಲ. ಪ್ರಯತ್ನವೇ ದಿಕ್ಕನ್ನು ಕೆಡಿಸುವುದು. ಸುಮ್ಮನಿರುವುದು ಅಷ್ಟೇ. ಗಿಡ, ಹಕ್ಕಿ, ಎಲ್ಲವೂ ಹಾಗೆಯೇ ಇದೆ  ಎಂದೆನಿಸುತ್ತೆ.


*****


ಬದುಕಿನ ಮೂಲವೇ ಪ್ರಜ್ಞೆಯ ವಿಕಸನ ಎಂದಾಗ, ಪ್ರಜ್ಞೆಯ ವಿಕಸನ ಎಂದರೇನು ಎಂಬುದು ಪ್ರಶ್ನೆಯಾಗುತ್ತದೆ. ಸೃಷ್ಟಿಯ ಸ್ಪಂದನಕ್ಕೆ ನಮ್ಮ ಸ್ಪಂದನ ರೆಸೋನೆಟ್ ಆಗುತ್ತೆ. ಅದರೊಟ್ಟಿಗೆ, ಅದರ ಒಡಲಲ್ಲಿ, ಜೊತೆಯಲ್ಲಿ, ಇಡೀ ಸೃಷ್ಟಿ ಒಂದು ಮೂರ್ತ ರೂಪದಂತೆ ಎದುರುಗೊಳ್ಳುತ್ತದೆ. ಹಾಗೆ ಎದುರುಗೊಳ್ಳುತ್ತಲೇ  ಇರಬೇಕು. ಬರೀ ಮಾತುಗಳೇ ಆಗುತ್ತಿವೆ, ಕೃತಿ ಮೂಡುತ್ತಿಲ್ಲ. ಬರೀ ತೊಳಲಾಟ, ಒದ್ದಾಡುತ್ತಿದ್ದೇನೆ.


ಅರಚಬೇಕು ಎಂದೆನಿಸುತ್ತೆ. ಹೊರಗೆ ಬರೀ ತೋರಿಕೆ, ಒಳಗೆ ಅಳುತ್ತಲೇ ಇರಬೇಕು. ನಾನಲ್ಲ, ನಾನಲ್ಲ. ಏನಾಗಿದೆ ತಿಳಿಯದಾಗಿದೆ. ಯಾಕಾಗಿದೆ ಗೊತ್ತಿಲ್ಲ, ಅದಕ್ಕೆ ಸ್ವಲ್ಪವೂ ತಿಳಿಯುತ್ತಿಲ್ಲ. ಶರಣಾಗಿದ್ದೇನೆ, ಆದರೆ ಅದು ಆಗುತ್ತಿಲ್ಲ. ಯಾವುದನ್ನು ಕಾವ್ಯವಾಗಿಸುವುದು? ಭಾವಗಳು ಯಾವ ರೂಪದಲ್ಲಿ ಹೊರಗೆ ಕಾವ್ಯವಾಗುವುದು?


ಇದನ್ನೇ ಧ್ಯಾನಿಸುತ್ತಿದ್ದೆ  ಸುಮ್ಮನೆ ಹಲವುದಿನಗಳಿಂದ. ಕಾವ್ಯ ಕ್ರಿಯೆಗೆ ಎರಡು ಬಹುಮುಖ್ಯವಾದ ಹಂತಗಳು. ಮೊದಲಿಗೆ ಪ್ರಜ್ಞೆಯಲ್ಲಿ ಅದು ಮೂಡಬೇಕು. ಹಾಗೆ ಮೂಡಿದ್ದು ಪೂರ್ಣಾವತಾರಕ್ಕೆ ರೂಪಗೊಳ್ಳಬೇಕು. ಹಾಗೆ ರೂಪಗೊಳ್ಳುವ  ಕ್ರಿಯೆಗೆ ನಾನು ಸುಮ್ಮನೆ ನೋಡುವಂತಾಗಬೇಕು. ಪ್ರಜ್ಞೆಯ ಒಂದು ಹಂತಕ್ಕೆ ದೃಶ್ಯ ಗೋಚರವಾಗುತ್ತೆ. ಅದಕ್ಕೆ ಸರಿಯಾಗಿ ದೃಶ್ಯವೊಂದು ಪ್ರಜ್ಞೆಯ ಮತ್ತೊಂದು ಹಂತದಲ್ಲಿ ಕಾಣುತ್ತೆ. ಹೀಗೆ ಕಾಣುವ ಅಡಗಿದ ದೃಶ್ಯಗಳ ಪೂರ್ಣದೃಷ್ಟಿಯ ಸಂವಿಧಾನ ಅಥವಾ ಸಮ್ಮಿಲನ ಇದೆಯಲ್ಲ, ಅದೊಂದೇ ಕಾವ್ಯದ ಆತ್ಮ.


*****


ಜಗತ್ತಿನ ವೈರುದ್ಧ್ಯಗಳು, ವಿರುದ್ಧಾರ್ಥಕಗಳನ್ನು ಒಟ್ಟಿಗೆ ಕಂಡು ಸಂಭ್ರಮಿಸುವುದು. ಹಾಗೆ ಕಾಣಲಿಕ್ಕೆ ವಿರುದ್ಧಗಳನ್ನು ತಂದು ನಿಲ್ಲಿಸುವುದು. ಒಂದು ದಶಕ ಕಳೆಯಿತು. ಬಹುಮುಖ್ಯ ಘಟಕ. ಹತ್ತು ವರ್ಷಗಳು. ನನ್ನ ಓದು ಮುಗಿದ ನಂತರದ ಬಹುಮುಖ್ಯ ಹತ್ತು ವರ್ಷಗಳು. ನೆನೆದರೆ ಅನ್ನಿಸುತ್ತೆ. ಅಲ್ಲಿಗೆ ಸೇರಿದ್ದು, ನಂತರ ಬಿಟ್ಟಿದ್ದು, ಮತ್ತೆ ಸೇರಿದ್ದು, ಮತ್ತೆಲ್ಲೋ ಒಂದು ವರ್ಷ. ಮದುವೆಯಾದದ್ದು, ಬೆಂಗಳೂರಲ್ಲಿ ಮನೆ ಮಾಡಿದ್ದು, ಕಾಳಿಯನ್ನು ಹುಡುಕಿ  ಕೊಲ್ಕತ್ತಾಗೆ ಹೋದದ್ದು, ಮತ್ತೆ ಮದರಾಸಿಗೆ ಬಂದದ್ದು, ಕವನ ಪ್ರಕಟವಾದದ್ದು, ಸ್ವಂತವಾಗಿ ಸಂಶೋಧನೆ ಮಾಡಬಲ್ಲೆ ಎಂದು  ಅನ್ನಿಸಿದ್ದು. ಮಾತು ಲಿಂಗ ಮೆಚ್ಚಿ ಅಹುದಹುದೆನ್ನಬೇಕು


*****


ಮಂಗಳೂರಿನ ಬಸ್ಸು ನಿಲ್ದಾಣದಲ್ಲಿ ಇದ್ದೇನೆಅಗ್ರಜನ ಮನೆಗೆ ಹೋಗಿ ಬಂದಿದ್ದೇನೆ. ಹೊಸವರ್ಷದ ಮೊದಲ ದಿನವನ್ನು ಆರಂಭಿಸಿದ್ದೆ ಅವರ ಮನೆಯಲ್ಲಿ. ಏನೋ ಒಂದು ರೀತಿಯ ಭಾವ. ಬಹಳಷ್ಟು ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ಒಂದೊಂದಾಗಿ ಬರೆಯುತ್ತಾ ಹೋಗುತ್ತೇನೆ.


ನೆನ್ನೆಯ ದಿನ ರಾತ್ರಿ ಕನಸಲ್ಲಿ ಅವರು ಬಂದಿದ್ದರು. ಕನಸು ಬಹಳ ಸ್ಪಷ್ಟವಾಗಿ ನೆನಪಿದೆ. ಅಗ್ರಜ ಮಾತನಾಡುತ್ತಿರುತ್ತಾರೆ. ಮತ್ತೆ ತಲೆಯೆತ್ತಿ ನೋಡಿದಾಗ, ಅಲ್ಲಿ ಅಗ್ರಜನ ಜಾಗದಲ್ಲಿ ಅವರು ಮಾತನಾಡುತ್ತಾರೆ. ಇದು ಕನಸು. ಕನಸುಗಳು ಹೊಳಹು ಎನ್ನೋಣ.


ಹಾಗಾದಾಗ, ನಾನು ಕಂಡದ್ದು ನಿಜವೇ ಇರಬಹುದಲ್ಲವೆ?


ಬಾರಿ ಅಗ್ರಜ ಬಹಳ ಮಾತನಾಡಿದರು. ಸ್ವಾವಲಂಬನೆಯ ಬಗೆಗೆ, ಬಹುತ್ವದ ಬಗೆಗೆ, ನನ್ನ ದಾರಿಯನ್ನು ಕಂಡು, ಬೇರೆಯವರನ್ನು, ಅವರನ್ನು ಕಾಣುವ ಬಗೆಯನ್ನು, ಗಾಂಧಿ ಕಂಡ ದೇಶವನ್ನು, ಮಠಗಳ ಬಗ್ಗೆ, ಅದರ ಕರ್ಮಟತನದ ಬಗೆಗೆ, ಅದರೊಳಗಿದ್ದೂ ಮಾತಂಧರಾಗದೆ ಉಳಿಸುವುದರ ಹೆಚ್ಚುಗಾರಿಕೆಯ ಬಗೆಗೆ, ವ್ಯವಸ್ಥೆಗಳ ಬಗೆಗೆ


ಹಾಗೆ ಬಹಳ ಮಾತನಾಡಿದರು.


ಆಗ ಅನ್ನಿಸಿದ್ದು, ನಾವು ಯಾರನ್ನೂ, ಯಾವುದನ್ನೂ, ಅದೆಷ್ಟೇ ಹತ್ತಿರದವರಾಗಿದ್ದರೂ, "ಇದು ಹೀಗೆ, ಇವರು ಹೀಗೆ" ಎಂದು ಹೇಳುವುದರಲ್ಲಿ ಬಹಳಷ್ಟು  ತಪ್ಪುಗಳಾದೀತು. ಅಂತಹುದರಲ್ಲಿ, ವೈಯುಕ್ತಿಕವಾಗಿ ಗೊತ್ತಿರದ, ತಿಳಿದಿರದ, ಹತ್ತಿರದಿಂದ ಕಂಡಿರದ ವ್ಯಕ್ತಿಯ, ವ್ಯವಸ್ಥೆಯ ಬಗೆಗೆ ಏನನ್ನೂ ಹೇಳುವುದು ಸಾಧ್ಯವಿಲ್ಲ. ಹಾಗೆ 'ಇದಮಿತ್ತಂ' ಎಂದು ಹೇಳುವುದು ಒಂದು ಮಹಾ ಮೌಢ್ಯ.


*****


ಅದರ ಬಗ್ಗೆ ಒಂದು ಕುತೂಹಲ, ಆಸಕ್ತಿ ಹುಟ್ಟಬೇಕಾದರೆ, ಅದೇ ಪ್ರೇರೇಪಿಸಬೇಕಲ್ಲದೆ ಬೇರೆ ಸ್ಥಿತಿಯಿಲ್ಲ. ಅದಕ್ಕೇ  ಅದನ್ನು ನೋಡಬೇಕೆಂಬ ಕುತೂಹಲ, ತೋರಬೇಕೆಂಬ ಆಸಕ್ತಿ ಉಂಟು. ಆದರೆ ನಾವು ಸಿದ್ಧರಿಲ್ಲ. ಸಿದ್ಧರಾಗುವುದು ಎಂದರೇನು? ಮನಸ್ಸು ಪ್ರಕ್ಷಿಪ್ತವಾಗಿ, ಯಾವುದೇ ಪೂರ್ವ ನಿಯೋಜನೆ ಇಲ್ಲದೆ, ಯೋಜನೆಗಳಿಲ್ಲದೆ ಬದುಕುವುದು. ಅದು ಸಂಭವಿಸಿದಂತೆ ನಾವು ಆಗುವುದು, 'ನಾವು ಆಗಬೇಕು' ಎಂಬ ಬಯಕೆಗಾಗಿ ಅಲ್ಲ ಎಂದು ಬದುಕುವುದು


ಅದು ಯಾವಾಗ?


ಇರಲಿ, ತಾಂತ್ರಿಕತೆಯ ಬೇಡ. ಮೊದಲಿಗೆ ಒಂದು ಸ್ಥಿತಿ ಉಂಟು ಎಂದು ಒಪ್ಪುವುದು. ನಂತರ ಸ್ಥಿತಿಗೆ, ಅದಕ್ಕೆ ನಮ್ಮನ್ನು ಪೂರ್ತಿಯಾಗಿ ಅರ್ಪಿಸಿಕೊಳ್ಳುವುದು. ಹಾಗೆ ಅರ್ಪಿಸಿಕೊಂಡ... ಆದರೆ ಅದು ನಡೆಸುತ್ತೆ. ಹಾಗೆ ಪೂರ್ತಿ ಶರಣಾಗತಿ, ಯೋಜನೆಗಳಿಲ್ಲ, ಬಟಾಬಯಲು. ಆಗ ಮನಸ್ಸು ಸಿದ್ಧಗೊಂಡದ್ದು. ಅಂತಹ ಮನಸ್ಸಿನಿಂದ ಅದನ್ನು ನೋಡಬೇಕು.