ಹುಟ್ಟುಹಬ್ಬಕ್ಕೆ

 

ತಿರುವಲಂಗಾಡಿನ ಕಾಲಿ 

ಹಾಗೇ ತಿರುಗುತ್ತಾ ದಾರಿಯಲ್ಲಿ 

ಸಿಕ್ಕಿದ ಸೂಫಿ ಫಕೀರನ್ನ 

ಕಂಡು ಕೇಳಿದಳಂತೆ 

'ಶಿವ ಹೇಗಿದ್ದಾನೆ?”


ಹಾಗೆ ಸಿಕ್ಕಿದ ಫಕೀರ 

ಕೊಟ್ಟಿದ್ದ ಜರತಾರಿ ಜುಬ್ಬ 

ಹತ್ತಿಯ ಪೈಜಾಮ 

ಗಮ್ಮೆನ್ನುವ ಅತ್ತರು 

"ಶಿವನಿಗೆ ಕೊಟ್ಟುಬಿಡು


ಅಕ್ಷರಕ್ಷರವನ್ನು ಕೂಡಿ ಹಾಕಿ 

ಮಾಡಿದ ಪಜೀತಿಯಂತಲ್ಲ 

ಕಟ್ಟೂ ಕಟ್ಟದೆ ಬಿಟ್ಟ 

ಬಯಲಲ್ಲಿ ನಿಂತಾಗ 

ಅಯ್ಯೋ ದೇಹಬಾರ 

ನಡೆಯಲಾಗುತ್ತಿಲ್ಲ ಎನ್ನುತ್ತಲೇ 

ಹಾರುತ್ತಲೇ ಇದ್ದೀರಿ 


ಪದಗಳ ಮೋಹದ ಸಾಮ್ರಾಜ್ಯದ 

ಸಿಂಹಾಸನಕ್ಕೆ ಬಾರೀ ಮಸಲತ್ತಿನ 

ಜಂಜಾಟದಲ್ಲಿ ತಕ ತಕ ಎನ್ನುವಾಗಲೇ 

ಮಗಳೇ, ನಡಿಗೆಯಲ್ಲವೂ ನೃತ್ಯವೇ

ಮಾತೆಲ್ಲವೂ ಗೀತೆಯೆ 

ನೋಟವೆಲ್ಲವೂ ಧ್ಯಾನವೇ

ಎಂದಾಗಲೆಲ್ಲಾ ನೋಡುತ್ತಲೇ ಇರುತ್ತೇನೆ 

ನಿಮ್ಮ ಶರೀರ ಆಕಾರವನ್ನು ಹಾಗೆಯೇ 



ನಿಮ್ಮ ಹುಟ್ಟುಹಬ್ಬಕ್ಕೆ 

ಹಾರೈಸಬೇಕಿದೆ 

ಏನೆಂದು ತಿಳಿಯುತ್ತಿಲ್ಲ

ಮಾರಿಯಮ್ಮನ ಗುಡಿಯಲ್ಲಿ 

ಮರೆತು ಬಿಟ್ಟು ಹೋದ ಎಳೆ 

ಮಗುವಿನ ಹಸಿವಿನ ಚೀರಾಟಕ್ಕೆ 

ಅವಳೇ ಬಂದು ಮೊಲೆಯುಡಿಸಿದ್ದಾಳೆ 

ದೂರದರ್ಶನದಲ್ಲಿನ ಸಿನೆಮ 

ದೃಶ್ಯ ಹಾಗೇ ಮುಂದುವರೆಯುತ್ತಿತ್ತು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ