ಮಾಸ್ತಿಯ ಮದಲಿಂಗನ ಕಣಿವೆ

 

[ಮಾಸ್ತಿಯವರ ಮದಲಿಂಗನ ಕಣಿವೆ ಓದಿದಾಗ ಬಹಳ ಕಾಡಿತು. ಅದಕ್ಕೆ ಪ್ರತಿಯಾಗಿ ಈ ಕವನ -  ಮಾಸ್ತಿಯವರ ಕವನ ಕಳುಹಿಸಿ ಓದಿ ಎಂದ ಹೆಚ್ ಎಸ್ ರಾಘವೇಂದ್ರರಾವ್ ರವರಿಗೆ ಧನ್ಯವಾದಗಳು] 


ಮದಲಿಂಗನ ಕಣಿವೆಗೆ
ಹೋದದ್ದೆ ಅವನನ್ನ ಕಾಣಲಿಕ್ಕೆ
ಈಗಲೂ ದಾಹದಲ್ಲಲ್ಲೆಯುತ್ತಿರುತ್ತಾನಂತೆ
ಮಡಿಕೆ ತುಂಬಾ ಹೊತ್ತ ನೀರು
ಕಟ್ಟಿನ ಸಾರು ರಾಗಿ ಮುದ್ದೆ
ಹಾಲು ಒಬ್ಬಟ್ಟು ಬಿಸಿ ಮೊಸರನ್ನ

“ ನಿನ್ನ ಬಗೆಗಿನ ಕವನವೊಂದಿದೆ
ನೀನೆಂದಾದರೂ ಕೇಳಿದ್ದೀಯ ?
ಬಹಳ ಸರಳ ಕಥೆಯಂತೆ
ಆರಂಭವಾಗಿ ಆವರಿಸುತ್ತಾ
ಓದು ಮುಗಿಸಿದಾಗ ಕಣ್ಣು ತೊಯ್ದು
ಬುತ್ತಿ ಕಟ್ಟಿ ನಿನ್ನ ಹುಡುಕಿ
ಈ ಕಣಿವೆಯ ಬಳಿ ಬಂದಿದ್ದೇನೆ

ಹಾಗೆ ದಿಡೀರಿನ ತಿರುವಿಗೆ
ತುಟಿಯ ರಂಗೆ
ಸರಸವೇ ಪಂಥವೇ
ಗೆದ್ದ ಸಂತೋಷವೇ
ಏರಿ ಇಳಿಯುವ ಕಾರಣದ
ಆ ಕಣಿವೆಯೇ
ಯಾವುದಿರಬಹುದು ?

ಇಷ್ಟಕ್ಕೂ
ಇಲ್ಲಿ ಅಲೆಯುತ್ತಿರುವುದಾದರೂ ಯಾತಕ್ಕೆ ? “