ಬಾಂಗ್ಲ ದಿನಗಳು 2: ಎಷ್ಟೊಂದ್ ಮನೆ ಇಲ್ಲಿ ಯಾವ್ದು ನಮ್ಮನೆ

(ಮೊದಲನೆಯ ಬಾಗಕ್ಕೆ ಇಲ್ಲಿ ಕ್ಲಿಕ್ಕಿಸಿ --- ಬಾಂಗ್ಲಾ ದಿನಗಳು : ಅಲೆಮಾರಿಯ ಆರಂಭ


ಭಾರತದ ಅತ್ಯಂತ ಹಳೆಯ ರೈಲ್ವೇ ನಿಲ್ದಾಣವಾದ  ಹೌರಾ ನಿಲ್ದಾಣಕ್ಕೆ ಬಂದಿಳಿದಿದ್ದೆವು. ನಮ್ಮ ಸಂಸ್ಥೆಯಲ್ಲಿ ನಮಗೆ ವಾಸಕ್ಕೆ ಮನೆ ಕೊಟ್ಟಿರಲಿಲ್ಲ. ಹೊರಗೆ ಎಲ್ಲಾದರೂ ಬಾಡಿಗೆಗೆ ಮನೆ ಮಾಡಬೇಕಿತ್ತು. ಒಂದು ವಾರಗಳ ಕಾಲ ಸಂಸ್ಥೆಯ ಅಥಿತಿಗೃಹದಲ್ಲಿ ಇದ್ದುಕೊಂಡು ನಂತರ ಸುತ್ತಲಿನ ಜಾಗಗಳಲ್ಲಿ ಹುಡುಕುತ್ತಾ ಹೋದರೆ ಮನೆ ಸಿಗುವುದು ಸುಲಭ ಎಂದು ತೀರ್ಮಾನಿಸಿದ್ದದ್ದು. ಅದರೆ ನಮ್ಮ ಸಂಸ್ಥೆಯಲ್ಲಿ ಆ ಸಮಯಕ್ಕೆ ಸರಿಯಾಗಿ ಯಾವುದೋ ಸಮ್ಮೇಳನ ಇದ್ದುದರಿಂದ ನಮಗೆ ಸಂಸ್ಥೆಯ ಅಥಿತಿಗೃಹದಲ್ಲಿ ಇರಲಿಕ್ಕೆ ಜಾಗ ಸಿಕ್ಕಿರಲಿಲ್ಲ. ನನ್ನ ಪ್ರೊಫೆಸರ್ ಸಹ ನಮ್ಮ ವಾಸಕ್ಕೆ ಬೇರೆ ಬೇರೆ ಕಡೆಗಳಲ್ಲಿ ಪ್ರಯತನಿಸುತ್ತಲೇ ಇದ್ದರು. ಅವರಂತೂ ಅವರ ಮನೆಯಲ್ಲಿ ಬಂದು ಇರಿ ಎಂದು ಹೇಳಿದ್ದರು ಸಹ. ನಮ್ಮ ಸಂಸ್ಥೆಯ ಸುತ್ತಮುತ್ತಲಿನಲ್ಲಿ ಯಾವುದಾರೂ ಹೋಟೇಲ್ ಇರುತ್ತದ ಎಂದು ನೋಡಿದರೆ, ಯಾವುದೂ ಇರಲಿಲ್ಲ. ಇದ್ದದ್ದು ನಮಗೆ ಸರಿಹೊಂದುತ್ತಿರಲಿಲ್ಲ. ನಮ್ಮ  ಪ್ರೋಫೇಸರ್ ಹತ್ತಿರವೇ ಇದ್ದ (National sample survey office) NSSO ಅಥಿತಿಗೃಹದಲ್ಲಿ ಐದು ದಿನಗಳ ಮಟ್ಟಿಗೆ ವಸತಿ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿ ನಮ್ಮ ವಸತಿ ನಾವು ಕೋಲ್ಕತ್ತ ಸೇರಿದ ಮಾರನೆ ದಿನದಿಂದ ಆರಂಭವಾಗುವುದಿತ್ತು. ಒಂದು ದಿನದ ಮಟ್ಟಿಗೆ ನಾವು ಎಲ್ಲಿಯಾದರೂ ಉಳಿದುಕೊಳ್ಳಬೇಕಿತ್ತು. ನಮ್ಮ ಇಡೀ ಮನೆಯ ಸಾಮಾನುಗಳನ್ನ ಹೊತ್ತುಕೊಂಡು ಸೌಖ್ಯವಾಗಿ ಇರಬಲ್ಲ ಕ್ಷೇತ್ರ ಯಾವುದು ಎಂದು ಹೊಳೆಯಲೇ ಇಲ್ಲ. ತಕ್ಷಣ ನೆನಪಾದದ್ದು ರಾಮಕೃಷ್ಣರ ಬೇಲೂರು ಮಠ. ನಮ್ಮ ಸಂಸ್ಥೆಯ ಹತ್ತಿರದಲ್ಲೇ ಇದೆ, ಅದೂ ಅಲ್ಲದೆ ಬೇಲೂರಿಗೆ ಹೋಗೆಬೇಕೆಂಬುದು ಬಹುದಿನಗಳ ಕನಸಾಗಿತ್ತು. ರಾಮಕೃಷ್ಣರ ಅವಧೂತ ವ್ಯಕ್ತಿತ್ವಕ್ಕೆ ಬಹಳವಾಗಿ ಆಕರ್ಷಿತನಾಗಿದ್ದವನಾದುದರಿಂದ ಅದುವೇ ಸರಿಯೆನಿಸಿ ಬೇಲೂರು ಮಠಕ್ಕೆ ಮಿಂಚಂಚೆ ಕಳುಹಿಸಿ ವಸತಿಯ ಬಗೆಗೆ ಕೇಳಿದ್ದೆ. ಎಲ್ಲಾ ವಿವರಗಳನ್ನ ಪಡೆದು ವಿವೇಕಾನಂದ ಯಾತ್ರೀ‌ನಿವಾಸದಲ್ಲಿ ನಮ್ಮ ವಸತಿಯಾಗಿತ್ತು. ಹಾಗಾಗಿ ಹೌರಾ ರೈಲ್ವೇ ನಿಳಾಣದಿಂದ ನೇರವಾಗಿ ವಿವೇಕಾನಂದ ಯಾತ್ರೀ ನಿವಾಸಕ್ಕೆ ಬಂದಿಳಿದೆವು.

ದೇಹ ದಣಿದಿತ್ತು. ಎರಡು ದಿನಗಳಿಂದ ರೈಲಿನಲ್ಲಿದ್ದ ಕಾರಣ ಒಳ್ಳೆಯ ಊಟ ಸಿಕ್ಕಿರಲಿಲ್ಲ. ಒಳ್ಳೆಯ ಊಟಕ್ಕೆ ಹಪಹಪಿಸುತ್ತಿದ್ದೆವು. ನಾವು ವಿವೇಕಾನಂದ ಯಾತ್ರೀ ನಿವಾಸ ಸೇರಿದಾಗ ಸುಮಾರು ೨. ೩೦ ರ ಹೊತ್ತು. ಹಾಗಾಗಿ ಊಟದ ಸಮಯ ಮುಗಿದಿತ್ತು.  ಆದರೂ ನಾವು ಬಂದ ತಕ್ಷಣ ಊಟ ಸಿದ್ದವಿದೆಯೆಂದು ಹೇಳಿ ಊಟ ಮಾಡಿಹೋಗಿ ಎಂದರು. ಎರಡು ದಿನಗಳ ನಂತರ ಊಟ ಮಾಡುತ್ತಿದ್ದೆವು. ದಪ್ಪ ಅಕ್ಕಿ ಅದೇನೋ ಸಾರು. ಹೆಸರು ಗೊತ್ತಿಲ್ಲವಾದರೂ, ಆಹಾ ಎನ್ನಿಸಿತು. ಸಂಜೆ  ೩.೩೦ ಕ್ಕೆ ಆಶ್ರಮ ತೆಗೆಯುವುದಾಗಿಯೂ, ನಂತರ ಒಳ ಹೋಗಬಹುದೆಂದು ತಿಳಿಸಿದ್ದರು.

ಸಂಜೆ ೩.೦೦ ಗೆಂಟೆಗೆಲ್ಲಾ ಆಶ್ರಮದ ಕಡೆಗೆ ಹೊರಟೆವು. ಆ ಕ್ಷಣ ರಾಮಕೃಷ್ಣರ ಆಶ್ರಮದಲ್ಲಿ ನಿಂತಿದ್ದೆ. ನಾಲ್ಕುಗಂಟೆಗೆಲ್ಲಾ ಎಲ್ಲಿ ನೋಡಿದರೂ ಮಬ್ಬು ಕತ್ತಲು ಆವರಿಸಿಬಿಟ್ಟಿತ್ತು. ಪಕ್ಕದಲ್ಲ್ಲಿ ಹರಿಯುತ್ತಿದ್ದ ಗಂಗಾ ನದಿ.  ಆ ದಡದಲ್ಲಿ ದಕ್ಷಿಣೇಶ್ವರ ಈ ದಡದಲ್ಲಿ ಬೇಲೂರು ಮಠ. ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ನಾವೆಗಳು ಜನರನ್ನು ಹೊತ್ತು ಸಾಗುತ್ತಿತ್ತು. ಎಷ್ಟೋ ಜನ ಪುಟ್ಟ ಪುಟ್ಟ ಮಣ್ಣಿನ ದುರ್ಗಾ ಪ್ರತಿಮೆಗಳನ್ನ ತಂದು ನೀರಿನಲ್ಲಿ ವಿಸರ್ಜಿಸುತ್ತಿದ್ದರು. ಹಾಗೆ ನೀರಲ್ಲಿ ಮುಳುಗಿದ ದುರ್ಗೆ ಕರಗುವುದ ನೋಡುತ್ತಾ ಮುಂದೆ ಆ ದಡದಲ್ಲಿ ಕಾಣುತ್ತಿದ್ದ  ಕಾಳಿಯನ್ನ ನೆನೆಯುತ್ತಾ ಪಕ್ಕದಲ್ಲೇ ಇದ್ದ ರಾಮಕೃಷ್ಣರ ಮಂದಿರದೆಡೆಗೆ ದೃಷ್ಥಿ ನೆಟ್ಟು ತಂಪಾದ ಗಾಳಿಯಲ್ಲಿ ಮೈ ಮರೆತಿದ್ದೆ.

ಯಾರು ತಾನೆ ವಿವೇಕಾನಂದರ ಮಾತುಗಳಿಗೆ ಆಕರ್ಷಿತರಾಗುವುದಿಲ್ಲ. ನಾನು ಅವರ ಮಾತುಗಳಿಂದ ಬಹಳ ಆಕರ್ಷಿತನಾಗಿದ್ದೆ. ನಾನು ಕಾಲೇಜಿಗೆ ಹೋಗುವಾಗ ನನಗೆ  ವಿವೇಕಾನಂದರ ಪುಸ್ತಕಗಳ ಪರಿಚಯವಾದದ್ದು. ಯಾರು ಕೊಟ್ಟರು ಎಂದು ನೆನಪಿಲ್ಲ. ಆಶ್ರಮದವರು ಒಂದು ಕೆಂಪು ಬಣ್ಣದ ಪುಟ್ಟ ಪುಸ್ತಕ ಪ್ರಕಟಿಸಿದ್ದರು. ಒಂದು ರೂಪಾಯಿಗಳ ಪುಸ್ತಕ. ವಿವೇಕಾನಂದರ ಮುಖ್ಯವಾದ ವಿಚಾರಗಳ ಆಯ್ದ ಭಾಗಗಳ ಕಿರು ಹೊತ್ತಿಗೆ. ನಮ್ಮ ಊರಿನಿಂದ ಕಾಲೇಜಿಗೆ ಹೋಗಲಿಕ್ಕೆ ಬಸ್ಸಿನಲ್ಲಿ ಅರ್ದಗಂಟೆ ಹಿಡಿಯುತ್ತಿತ್ತು. ಪ್ರತೀ ನಿತ್ಯವೂ ಹೋಗುವಾಗ ಬರುವಾಗ ಆ ಪುಸ್ತಕವನ್ನ ಓದುವುದು.  ಆ ಪುಸ್ತಕ, ಅದರಲ್ಲಿನ ಮಾತುಗಳು ಅದೆಷ್ಟು ಪ್ರಭಾವಿಸಿದ್ದವೆಂದರೆ, ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತೆಂದೇ ನಾನು ಭಾವಿಸುತ್ತೇನೆ. ಆ ಒಂದು ಪುಸ್ತಕ ಇಲ್ಲದೇ ಹೋಗಿದ್ದರೆ ನನ್ನ ಬದುಕು ಬೇರೆಯ ರೀತಿಯಲ್ಲೇ ಇರುತ್ತಿತ್ತೋ ಏನೋ. ಪದವಿಗೆ ಸೇರಿದ ಮೇಲೆ ಅವರ ಅಷ್ಟೂ ಪುಸ್ತಕಗಳನ್ನ ಓದಿದೆ. ನಂತರದ ದಿನಗಳಲ್ಲಿ, ಓದಿನ ವಿಸ್ತಾರವಾದ ಹಾಗೆ ವಿವೇಕಾನಂದರನ್ನ ಮತ್ತೇ ಓದಬೇಕೆಂದು ಅನ್ನಿಸಲಿಲ್ಲ.   ಈ ಬಾರಿ ರಾಮಕೃಷ್ಣರ ಅವಧೂತ ಪ್ರಜ್ಞೆ ಆಕರ್ಷಿಸಿತು ಹಾಗು ಕಾಡಿತು. ಅವರ ಮುಗ್ದವ್ಯಕ್ತಿತ್ವ ಬಹಳವಾಗಿ ಕಾಡಿತ್ತು.  ರಾಮಕೃಷ್ಣರೆಂದರೆ ಏನೋ ಆಕರ್ಷಣೆ ಏರ್ಪಟ್ಟಿತ್ತು. ಇಂದು ಇಲ್ಲಿ ಮಠದ ಆವರಣದಲ್ಲಿ ನಿಂತಿದ್ದಾಗ ಎಲ್ಲವೂ ನೆನಪಾಯಿತು.

ನಾವು ಮಾರನೆಯ ದಿನವೇ ನಾವು ಉಳಿಯಬೇಕಿದ್ದ ಅಥಿತಿಗೃಹಕ್ಕೆ ಹೋಗಬೇಕಿದ್ದುದರಿಂದ ಮಠದ ಕಚೇರಿಗೆ  ಒಂದು ಪತ್ರವನ್ನ  ಹಾಗು ಸ್ವಲ್ಪ ಕಾಣಿಕೆಯನ್ನು  ನೀಡಬೇಕಿತ್ತು.  ಕಚೇರಿಯಲ್ಲಿದ್ದ ಆಶ್ರಮದ ಸ್ವಾಮೀಜಿ ನಮ್ಮನ್ನು ಮಾತನಾಡಿಸಿ, ನಮ್ಮ ವಿಳಾಸ ನಮ್ಮ ಕೆಲಸ, ಕುಷಲೋಪರಿಗಳನ್ನ ಕೇಳಿ ಪ್ರಸಾದ ನೀಡಿದರು. ನೀವು ದೀಕ್ಷೆ ಪಡೆದ ರಾಮಕೃಷ್ಣರ ಭಕ್ತರ ಎಂದು ಕೇಳಿದರು. ನಾವು ಇಲ್ಲ ಭಕ್ತರಲ್ಲ ಎಂದು ಹೇಳಬೇಕಾಯಿತು. ನಿಜದಲ್ಲಿ ನಾನು ಭಕ್ತನಲ್ಲ. ರಾಮಕೃಷ್ಣರ ಮೇಲೆ ಅಗಾಧವಾದ ಗೌರವ ಇದೆಯಾದರೂ ರೂಡಿಗತವಾದ ಅರ್ಥದಲ್ಲಿ ನಾನು ಅವರ ಭಕ್ತನಲ್ಲ. ಅವರು ಕಂಡ ಸತ್ಯಗಳ ಬಗೆಗೆ ಗೌರವವಿದೆ. ಅವರ  ಸತ್ಯವಲ್ಲ ನನ್ನನ್ನು ಆಕರ್ಷಿಸಿದ್ದು, ಹಾಗೆ ಸತ್ಯವನ್ನು ಅವರದೇ ಮಾರ್ಗಗಳಲ್ಲಿ ಹುಡುಕಬೇಕಾದ ಅಗತ್ಯವನ್ನೂ, ಹಾಗೆ ಹುಡುಕಬಹುದಾದ ಸಾದ್ಯತೆಯನ್ನು ತೆರೆದಿರಿಸಿದ್ದಕ್ಕೆ. ಅವರೇ ಹೇಳಿದಂತೆ ಅದೆಷ್ಟು ನಂಬಿಕೆಗಳೋ ಅಷ್ಟು ದಾರಿಗಳು. ಸತ್ಯವು ಸಾಂಸ್ಥಿಕ ರೂಪ ಪಡೆಯುವುದಕ್ಕೂ, ನಿರಂತರ ಚಲನೆಯಲ್ಲಿರುವುದಕ್ಕೂ ನಡುವಿನ ಘರ್ಷಣೆಯಲ್ಲಿರುವಾಗ ಕಾಣುವುದಾದರೂ ಏನನ್ನೂ ಮತ್ತು ಹೇಗೆ ಎಂಬುದು ತಿಳಿಯದಾಯಿತು. ರಾಮಕೃಷ್ಣರಿಗೆ ವಂದಿಸಿ ನಮ್ಮ ಮುಂದಿನ ಪಯಣಕ್ಕೆ ಸಿದ್ದರಾದೆವು.   

                                             *******************************

NSSO, ಆ ರೀತಿಯ ಒಂದು ಸಂಸ್ಥೆ ಇದೆ ಎಂದೇ ಮೊದಲ ಬಾರಿಗೆ ತಿಳಿದದ್ದು.  ಶ್ರೀ ಮೊಹಲ್ನೋಬಿಸ್ ಅವರು ಸ್ಥಾಪಿಸಿದ, ದೇಶದ ಹಲವಾರು ಯೋಜನೆಗಳಿಗೆ ಪೂರಕವಾದ ದತ್ತಾಂಶಗಳನ್ನು ಶೇಖರಿಸಿ ಕ್ರೋಢೀಕರಿಸಿ ಸೂಕ್ತವಾದ ಸಲಹೆಗಳನ್ನ ಕೊಡುವುದು ಮೇಲ್ನೋಟಕ್ಕೆ ನನಗೆ ತಿಳಿದ ಈ ಸಂಸ್ಥೆಯ ಉದ್ದೇಶ. ಈ ಸಂಸ್ಥೆಯ ಅಥಿತಿಗೃಹದಲ್ಲಿ ನಮಗೆ ಮುಂದಿನ  ಐದು  ದಿನಗಳಿಗೆ ವಾಸ್ತವ್ಯಕ್ಕೆ ವ್ಯವಸ್ತೆ ಆಗಿತ್ತು.  ನನ್ನ ಸಂಸ್ಥೆಯಾದ Indian Statistical Institute ಇಲ್ಲಿಂದ ಬಹಳ ಹತ್ತಿರದಲ್ಲಿತ್ತು. ಹಾಗಾಗಿ ಇಲ್ಲಿ ಇದ್ದುಕೊಂಡು ನನ್ನ ಸಂಸ್ಥೆಗೆ ಹತ್ತಿರದಲ್ಲೇ ಮನೆ ಹುಡುಕುವುದು ಸೂಕ್ತವೆಂದು ಇಲ್ಲಿ ಇರಲು ಒಪ್ಪಿಕೊಂಡಿದ್ದೆ. ಇದೊಂದು ದೊಡ್ಡ ಅಥಿತಿಗೃಹ. ಇದೊಂದು ಸರ್ಕಾರಿ ಅಥಿತಿಗೃಹ. ಯಾವುದೋ ಶತಮಾನದಲ್ಲಿ  ಹಾಕಿದ ಕಿಟಕಿಯ ಬಾಗಿಲಿನ ಕರ್ಟನ್ನುಗಳು, ಅದರಲ್ಲಿನ ದೂಳು, ದೊಡ್ಡ ದೊಡ್ಡ ಭೂತಾಕಾರದ ಮೇಜು, ಮಂಚ, ಹಾಸಿಗೆ ಇತ್ಯಾದಿ. ಈ ಚಳಿಯಲ್ಲಿ ಹೊದಿಯಲಿಕ್ಕೆ ಚಾದರವೇ ಇಲ್ಲವೆ ಎಂದು ನೋಡುತ್ತಾ ಹೋದರೆ, ಕಪಾಟಿನಲ್ಲಿರಬುದೆಂದು ತೆರೆದರೆ, ಇದ್ದ ಬದ್ದ ಎಲ್ಲಾ ದೇವರುಗಳೂ ನೆನಪಾಗುವಷ್ಟು ಸೀನು.   ಮತ್ತಿನ್ನೇನಿರಬಹುದು ಎಂದು ನೋಡಿದರೆ, ಮೇಲೆ ಸೊಳ್ಳೆ ಪರದೆಯ ಬಾಕ್ಸ್ ಇತ್ತು. ಆ ಸೊಳ್ಳೆ ಪರದೆ ಸೊಳ್ಳೆ ಸಂತತಿ ವಿಕಾಸಗೊಂಡ ಹಂತದಲ್ಲಿ ಆದಿಮಾನವನ್ಯಾರೋ ತಯಾರಿಸಿರಬೇಕು ಎಂದೆನಿಸಿದ್ದಂತೂ  ಸತ್ಯ. ಇದೆಲ್ಲದರ ಜೊತೆಗೆ ನಾಲ್ಕು ಅಂತಸ್ತುಗಳ, ಮೂವತ್ತು ನಲವತ್ತು ರೂಮುಗಳ ಈ ಅಥಿತಿ ಗೃಹದಲ್ಲಿ ವಾಸಕ್ಕಿದ್ದ  ವ್ಯಕ್ತಿಗಳೆಂದರೆ ನಾವು ಮಾತ್ರ.  ಪುರಾತನ ವಸ್ತು ಸಂಗ್ರಹಾಲಯದಲ್ಲಿ ರಾತ್ರಿ ಎಲ್ಲರೂ ಹೋದಮೇಲೆ, ಅಲ್ಲೆ ಕಳೆದುಹೋದ ವ್ಯಕ್ತಿಗಳೆಂತೆ ನಾವು ಅಲ್ಲಿ ವಾಸವಿದ್ದೆವು.

ಇಲ್ಲಿನ ಅಧಿಕಾರಿಗಳು, ಅಡುಗೆ ಮಾಡುವವರು ಹಾಗು ಇತರೆ ಕಾರ್ಮಿಕರು,  ಕೋಲ್ಕತ್ತದಲ್ಲಿ ನಮಗೆ ಎದುರಾದ ವ್ಯವಹರಿಸಲೇ ಬೇಕಿದ್ದ  ಮೊದಲ ಕೋಲ್ಕತ್ತ ನಿವಾಸಿಗಳು. ನಮ್ಮ ಮೊದಲ ಬೇಟಿಯಲ್ಲಿ, ಯಾರನ್ನೇ ಬೇಟಿಯಾದರೂ ಮುಖದಲ್ಲಿ ಯಾವ ಚಹರೆಯೂ ಇಲ್ಲ. ನಗು, ಬೇಸರ, ಕೋಪ. ಇಲ್ಲ ಯಾವುದೂ ಇಲ್ಲ.  ಯಾವ ಪ್ರತಿಕ್ರಿಯೆಯೂ ಇಲ್ಲದೆ ನಮ್ಮ ಮುಖವನ್ನು ಒಂದೇ ರೀತಿ ಕಾಣಬಲ್ಲವರು. ಮೊದ ಮೊದಲು ಇವರು ಮಾತ್ರಾ ಹೀಗೆ ಎಂದುಕೊಂಡಿದ್ದೆ, ನಂತರ ತಿಳಿಯಿತು, ನಾವು ಯಾರನ್ನೇ ಮೊದಲ ಬಾರಿಗೆ ಬೇಟಿಯಾದರೂ ಎಲ್ಲರದ್ದೂ ಒಂದೇ ಪ್ರತಿಕ್ರಿಯೆ. ಸುಮ್ಮನೆ ಮುಖ ನೋಡುವುದು. ನಾವೋ ನೋಡಿದವರಿಗೆಲ್ಲಾ ಹಲ್ಲು ಕಿರಿಯುವುದು. ಆದರೆ, ಇದೇ ಜನ ಒಂದೆರೆಡು ಬಾರಿ ನಮ್ಮ ಅದೇ ಮುಖಗಳನ್ನ ಕಂಡ ನಂತರದ ಸ್ಥಿತಿಯೇ ಬೇರೆ. ಅಥಿತಿಗೃಹದ ಎಲ್ಲಾ ಕೆಲಸಗಾರರೂ ಮಾತಿಗಿಳಿದರು. ಒಬ್ಬರಂತೂ, ನಮಗೆ ಬಂಗ್ಲಾ ಬರುವುದಿಲ್ಲ ಎಂದರೂ, ಇರಲಿ ಬಿಡಿ ನೀವು ಕೇಳಿ ಎಂದು  ಬಿಡದೆ ಒಂದು ಗಂಟೆ ತಾನು ಮನೆಗೆ ಹೋಗಬೇಕಾದರೆ ಆಗುವ ಟ್ರಾಫಿಕ್ ಸಮಸ್ಯಯ ಬಗೆಗೆ ಹೇಳಿದರು. ಅಡುಗೆಯವರು ಒಮ್ಮೆ ಬದನೇಕಾಯಿಯ ಪಲ್ಯ ಮಾಡಿದ್ದರು, ಅದನ್ನ ನಾನು ತಿನ್ನುವಹಾಗಿರಲಿಲ್ಲ, ಹಾಗಾಗಿ ತಿನ್ನುವುದಿಲ್ಲ ಎಂದು ಹೇಳಿದ್ದೆ. ನಂತರ ನಾನು ಏನೇನನ್ನ ತಿನ್ನುವುದಿಲ್ಲ ಎಂದು ತಿಳಿದುಕೊಂಡು ಅದನ್ನು ಹಾಕದೆ ಅಡುಗೆ ಮಾಡಿಕೊಡುತ್ತಿದ್ದರು, ಅದೂ ಬಹು ಪ್ರೀತಿಯಿಂದ, ಬಹಳ ರುಚಿಯಿಂದ. ನಾವು ಅಥಿತಿಗೃಹ ಬಿಟ್ಟು ಹೋಗುವಾಗಲಂತೂ   ತಮ್ಮ ಮನೆಯವರನ್ನೇ ಬೇರೆ ಊರಿಗೆ ಕಳುಹಿಸುತ್ತಿದ್ದೇವೆ ಎಂಬಂತೆ, ರಿಕ್ಷ ತಂದು ಎಲ್ಲಾ ರೀತಿಯ ಸಹಾಯ ಮಾಡಿ ಬೀಳ್ಕೊಟ್ಟಿರು. ಅಷ್ಟೇ ಅಲ್ಲದೆ ಮತ್ತೇ ಬಂದು ಸ್ವಲ್ಪ ದಿವಸ ಇದ್ದು ಹೋಗಿ ಎನ್ನುವುದೆ.   ಯಾರು ಬೇಕಾದರೂ ಯಾವಾಗಬೇಕಾದರೂ ನಮ್ಮ ಸನಿಹದ ಬಂದುಗಳಾಗಬಲ್ಲ ಸಾದ್ಯತೆ ತಿಳಿಯದ ದೈರ್ಯವನ್ನು ನೀಡಿತ್ತು.

ಇನ್ನು ನಾವು ಮನೆ ಹುಡುಕಿದ ನಮ್ಮ ಸಾಹಸದ ಕತೆ. ಯಾವಾಗಲೂ ಹಾಸ್ಟಲ್ಗಳಲ್ಲೇ ಇದ್ದು ಬೆಳೆದ  ನನಗೆ ಮೊಟ್ಟ ಮೊದಲನೆ ಬಾರಿಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಿದ್ದೆ ಒಂದು ದೊಡ್ಡ ಕತೆ.  ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಆ ಟ್ರಾಫಿಕ್ ಅಲ್ಲಿ ಓಡಾಡಿ ಮನೆಗೆ ಬರುವಷ್ಟರಲ್ಲಿ ನನ್ನ ಹೆಣಬಿದ್ದಿರುತ್ತಿತ್ತು. ಅದಕ್ಕಾಗಿ ಮುಂದೆ ಎಲ್ಲೇ ಮನೆ ಮಾಡಿದರೂ ಅದು ಸಂಸ್ಥೆಗೆ ನಡೆದು ಹೋಗುವಷ್ಟು ಸನಿಹದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದ್ದೆ.   ಚೆನ್ನೈಗೆ ಬಂದಾಗ ಬಹಳ ಸುಲಭದಲ್ಲಿ ಮನೆ ಸಿಕ್ಕಿತ್ತು. ಚೆನ್ನೈ ಅಲ್ಲಿ  ನಮ್ಮ ಸಂಸ್ಥೆಯ ಆಸುಮಾಸಿನ ರಸ್ತೆಗಳಲ್ಲಿ ಓಡಾಡಿದರೆ  ಮನೆ ಮುಂದೆ ಮನೆ ಖಾಲಿ ಇದೆ ಎಂಬೊ ಬೋರ್ಡ್ ನೋಡಿ,  ಹಲವು ಮನೆಗಳನ್ನ ವಿಚಾರಿಸಿ ಒಂದು ಮನೆ ಇಷ್ಟವಾಗಿ, ಬೆಳಗ್ಗೆ ಹೋಗಿದ್ದವರು ಮದ್ಯಾನ್ಹದ ವೇಳೆಗೆಲ್ಲಾ ಮನೆ ಸಿಕ್ಕಿ ಆಗಿತ್ತು. ಆದರೆ ಕೋಲ್ಕತ್ತದಲ್ಲಿ ಬೇರೆಯದೇ ಪರಿಸ್ಥಿತಿ. ಮೊದಲನೆಯದಾಗಿ ಇಲ್ಲಿ ಮನೆಗಳ ಮುಂದೆ ಬೋರ್ಡ್ ಹಾಕಿರುವುದಿಲ್ಲ.  ಮತ್ತೆ ಅಂತರ್ಜಾಲದಲ್ಲಿ ತಿಳಿಸುವವರೂ ಬಹಳ ಕಡಿಮೆ. ಹಾಗಾಗಿ ದಲ್ಲಾಳಿಯನ್ನ ಬೇಟಿಯಾಗಲೇ ಬೇಕು. ಅವರೋ ಎರಡು ತಿಂಗಳ ಬಾಡಿಗೆಯಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದು ಅರ್ಥವಾಗದ ಲೆಕ್ಕಾಚಾರ. ಜೊತೆಗೆ ನಮಗೆ ಅದು ತೀರ ಹೆಚ್ಚಿನ ಹಣ. ಅಷ್ಟೊಂದು ಕೊಡಲಿಕ್ಕೆ ಇಷ್ಟವೂ ಇರಲಿಲ್ಲ, ಹಣವೂ ಇರಲಿಲ್ಲ. ಸಂಶೋದನ ವಿದ್ಯಾರ್ಥಿಯ ಬಳಿ ಅದೆಷ್ಟು ಹಣ ಇದ್ದೀತು. ಇವೆಲ್ಲ ತಿಳಿದ ನನ್ನ ಪ್ರೊಫೆಸರ್ ಅವರ ಪರಿಚಯದವರ ಬಳಿ ಮಾತನಾಡಿ, ಒಬ್ಬ ದಲ್ಲಾಳಿಯನ್ನ ಗೊತ್ತುಮಾಡಿದ್ದರು. ಅವರು ಕಡಿಮೆ ಹಣಕ್ಕೆ ಮನೆ ತೋರಿಸುವುದೆಂದು ನಿರ್ದಾರವಾಗಿತ್ತು. ನಮಗೆ ಬಂಗ್ಲಾ ಬಾರದ ಕಾರಣ, ಜೊತೆಗೆ ಒಬ್ಬರು ಇಲ್ಲಿನವರು ಇರಲಿ ಎಂದು ನನ್ನ ಗೆಳಯನನ್ನೂ ಜೊತೆಗೆ ಕರೆದೆವು. ಹೀಗೆ ಎಲ್ಲಾ ಸರಂಜಾಮುಗಳೊಂದಿಗೆ ಮನೆ ಹುಡುಕುವ  ಯುದ್ಧಕ್ಕೆ ಸನ್ನದ್ಧರಾದೆವು.

ನಮ್ಮ ದಲ್ಲಾಳಿ ಮೊದಲನೆಯ ಮನೆಗೆ ಕರೆದುಕೊಂಡು ಹೋದರು. ಅದು ಹೇಗೆ ನಮ್ಮನ್ನ ಕರೆದುಕೊಂಡು ಹೋದರು ಎಂದರೆ ಪದ್ಮವ್ಯೂಹವನ್ನ ಬೇದಿಸುವುದನ್ನ ಅಭಿಮನ್ಯುಗೆ ಹೇಳಿಕೊಟ್ಟಿದ್ದರಂತಲ್ಲ ಹಾಗೆ. ಇಲ್ಲಿ ಅಷ್ಟೊಂದು ಗಲ್ಲಿಗಳು. ಎಲ್ಲಾ ಗಲ್ಲಿಗಳೂ ಒಂದೇ ರೀತಿ. ನಾವು ಎಲ್ಲಿ ಹೋದೆವು ಎಂದು ಸ್ವಲ್ಪವೂ ತಿಳಿಯದಂತೆ ನಾವು ನೋಡಬೇಕಿದ್ದ ಮನೆಯ ಮುಂದೆ ಬಂದು ನಿಂತಿದ್ದೆವು. ಒಂದು ಖುಷಿಯ ಸಂಗತಿ ಎಂದರೆ ಕೋಲ್ಕತ್ತದಲ್ಲಿ ಬಾಡಿಗೆ ಕಡಿಮೆ. ಬೇರೆ ಕಡೆಗೆ ಮುಖ್ಯವಾಗಿ ಬೆಂಗಳೂರಿಗೆ ಹೋಲಿಸಿದರಂತೂ ಇಲ್ಲಿ ಬಹಳ ಕಡಿಮೆ. ಆದರೂ ನಮಗೆ, ಇರುವ ಇಬ್ಬರಿಗೆ ಒಂದು ಬಿ ಹೆಚ್ ಕೆ ಮನೆ ಸಾಕಾಗಿತ್ತು.  ಕೆಳಮಹಡಿಯಲ್ಲಿದ್ದ ಮನೆ.  ಹೊರಗೆ ಎಂತಹ ಬೆಳಕಿದ್ದರೂ ಒಳಗೆ ಬರೀ ಕತ್ತಲು. ಬೆಳಕಿಲ್ಲದ ಮನೆಗಳಲ್ಲಿನ ವಾಸದ ಹಿಂಸೆ ಬೆಂಗಳೂರಿನಲ್ಲಿದ್ದಾಗಲೆ ಅನುಭವಿಸಿದ್ದೆವು.  ಏನೇ ಆದರೂ ಈ ಕತ್ತಲ ಗುಹೆಗಳಂತಹ ಮನೆಗಳಲ್ಲಿ ವಾಸಿಸಬಾರದು ಎಂದು ತೀರ್ಮಾನಿಸಿದ್ದೆವು. ಹಾಗಾಗಿ ಮೊದಲ ಮನೆಯೇ ನಮಗೆ ಇಷ್ಟವಾಗದೇ ಹೋಯಿತು.  ಈ ದಲ್ಲಾಳಿ ಒಮ್ಮೆಗೆ ಒಂದಿಷ್ಟು ಮನೆಗಳನ್ನ ತೋರಿಸುತ್ತಾನೆ ನಂತರ ನಾವು ಅದರಲ್ಲಿ ಸರಿಯಾದದ್ದನ್ನು ಆಯ್ಕೆಮಾಡಿಕೊಳ್ಳಬಹುದು ಎಂದು ಕೊಂಡಿದ್ದರೆ, ಅಲ್ಲಿ ನಡದದ್ದೆ ಬೇರೆ.  ಒಂದು ಮನೆ ತೋರಿಸಿದವನೇ ಆತ ಹೊರಟೇ ಹೋದ. ನಾಳೆಯೋ, ನಾಡಿದ್ದೋ ಸಮಯ ಬಂದಾಗ ಮತ್ತೊಂದು ಮನೆ ತೋರಿಸುತ್ತೇನೆ ಎಂದು ಹೇಳಿ ಹೊರಟೇ ಬಿಟ್ಟ. ಏನು ಮಾಡುವುದೋ ತಿಳಿಯದಾಗಿತ್ತು. ನನ್ನ ಸಂಶೋಧನಾ ಕೆಲಸಗಳು ಒಂದು ವಾರದಿಂದ ಹಾಗೆಯೇ ಉಳಿದಿದ್ದವು. ಏನೂ ಓದಿರಲಿಲ್ಲ. ಆದಷ್ಟು ಬೇಗ ನಾವು ಮನೆ ಹುಡುಕಿ ನಮ್ಮ ಕೆಲಸಗಳನ್ನ ಆರಂಭಿಸಬೇಕಿತ್ತು. ಹಾಗಾಗಿ ನಾವು ಸಹ ಏನಾದರೂ ಮಾಡಲೇ ಬೇಕಿತ್ತು.

ಇದ್ದ ಒಂದೇ ಆಯ್ಕೆ ಎಂದರೆ ಅಂತರ್ಜಾಲದಲ್ಲಿ ಮನೆ  ಹುಡುಕುವುದು. ಅಂತರ್ಜಾಲದಲ್ಲಿ ಎಲ್ಲಿಯೂ ೧ ಬಿ ಹೆಚ್ ಕೆ ಮನೆ ಇರಲಿಲ್ಲ. ಇದ್ದದ್ದೆಲ್ಲಾ ೨ ಅಥವಾ ೩ ಬಿ ಹೆಚ್ ಕೆ ಮನೆಗಳೆ. ನಾವು ಯಾವ ಪರಿಸ್ತಿತಿಗೆ ತಲುಪಿದ್ದೆವೆಂದರೆ, ಯಾವುದೋ ಒಂದು ಮನೆ ಸಿಕ್ಕರೆ ಸಾಕಿತ್ತು. ಹೋಗಿ ನಮ್ಮದು ಎಂದು ಮಲಗಿದರೆ ಸಾಕಿತ್ತು. ಹಾಗಾಗಿ ಅಂತರ್ಜಾಲದಲ್ಲಿದ್ದ ಮನೆಗಳಲ್ಲಿ ನಮ್ಮ ಸಂಸ್ಥೆಯ ಹತ್ತಿರದ ಮನೆಗಳನ್ನ ಗುರುತು ಹಾಕಿಕೊಂಡು ಅವರಿಗೆ ಫೋನ್ ಮಾಡಿ ವಿಳಾಸ ತೆಗೆದುಕೊಂಡು ಹೊರಟೆವು.

ಮೊದಲನೆ ಮನೆ ನಾಲ್ಕು ಮಹಡಿ ವಸತಿ ಸಮುಚ್ಚಯದಲ್ಲಿ ನಾಲ್ಕನೆ ಅಂತಸ್ತಿನಲ್ಲಿತ್ತು.  ಹೊಸದಾಗಿ ಕಟ್ಟಿದ ಸಮುಚ್ಚಯ, ಇಡೀ ಸಮುಚ್ಚಯದಲ್ಲಿ ಸುಮಾರು ೧೫ ರಿಂದ ೨೦ ಮನೆಗಳಿರಬಹುದು. ಹಲವಾರು ಮನೆಗಳಲ್ಲಿ ಇನ್ನೂ ಯಾರು ಬಂದಿಲ್ಲವಾದುದರಿಂದ ಖಾಲಿ. ಒಂದೋ ಎರೆಡರಲ್ಲೋ ಜನ ವಾಸ. ಈ ಮನೆಯಲ್ಲೇನೋ ಗಾಳಿ ಬೆಳಕು ಎಲ್ಲಾ ಸರಿ ಇತ್ತು. ಆದರೆ …। ನಮ್ಮದೇ ಕಡೆ ಮನೆ, ಇಡೀ ಸಮುಚ್ಚಯದಲ್ಲಿ ಯಾರೂ ಇಲ್ಲ. ಇಲ್ಲಿ ಕೂಗಿದರೂ, ಯಾರಾದರೂ ಸತ್ತರೂ ಯಾರಿಗೂ ತಿಳಿಯೋಲ್ಲ. ಇನ್ನು ಉಳಿದಂತೆ ಮನೆಯಲ್ಲಿ ಪೂರ ವಿದ್ಯುತ್ ಕಾಮಗಾರಿ ಮುಗಿದಿಲ್ಲ. ಬಾಗಿಲು, ಕಿಟಕಿ  ಹೀಗೆ ಇನ್ನೂ ಕೆಲಸ ಬಾಕಿ ಇದೆ. ಆದರೂ ಬಾಡಿಗೆಗೆ ಕೊಡುತ್ತಾರಂತೆ, ಆದರೆ ಇಡೀ ಒಂದು ತಿಂಗಳು ಕೆಲಸಗಾರರು ಅವರಿಗೆ ಸಮಯ ಬಂದಾಗ ಬಂದು ಕೆಲಸ ಮಾಡುತ್ತಾರಂತೆ. ಜೊತೆಗೆ ವಿದ್ಯುತ್  ಉಪಕರಣಗಳನ್ನ ನಾವೇ ಕೊಂಡು ತರಬೇಕಂತೆ. ಆಗುವುದಿಲ್ಲ ಎಂದು ಅಲ್ಲಿಂದ ಓಡಿದೆವು. ಮೊದಲನೇ ಸೋಲಿಗೆಲ್ಲ ನಾವು ಬಗ್ಗುವವರೆ. ಖಂಡೀತ ಇಲ್ಲ. ಚಲೋ ಎಂದು ಎರಡನೆ ಮನೆ ಕಡೆ ನಡೆದವು. ಮನೆ ಮಾಲೀಕರು ಅವರ ತಮ್ಮ ಅಲ್ಲಿಯೇ  ವಾಸಿಸುತ್ತಿದ್ದಾರೆಂದು ಹೇಳಿ ಅವರ ದೂರವಾಣಿ ಸಂಖ್ಯೆ  ಕೊಟ್ಟು ಬೇಟಿಯಾಗಿ ಮನೆ ನೋಡಿ ಎಂದರು.  ನಾವೂ ವಿಳಾಸ ಹುಡುಕಿ ಹೊರಟೆವು. ಇದೊಂದು ಹಳೆಯ ಕಾಲದ ಮನೆ. ನಾಲ್ಕೈದು ಮನೆಗಳ ಸಮುಚ್ಚಯ. ಗಾಳಿ ಬೆಳಕು ಎಲ್ಲವೂ ಚನ್ನಾಗಿತ್ತು. ಆದರೆ ತೀರ ದೊಡ್ಡ ಮನೆ. ಹಣವೇನೋ ಕಡಿಮೆ , ಆದರೆ ಮೂರು ರೂಮುಗಳ ಮನೆ. ತೀರಾ ದೊಡ್ಡದು. ದೊಡ್ಡ ದೊಡ್ಡ ರೂಮುಗಳು. ಮಾತಾಡಿದರೆ ಪ್ರತಿಧ್ವನಿಸುತ್ತೆ. ಒಳ್ಳೆ ಚತ್ರದ ರೀತಿ ಇದೆ. ಏನು ಮಾಡುವುದು ಇಬ್ಬರು ಇಷ್ಟು ದೊಡ್ಡ ಮನೆಯಲ್ಲಿ, ಅದೂ ನಮ್ಮಲ್ಲಿ ಏನೂ ಸಾಮಾನುಗಳೂ ಇಲ್ಲ. ಇರುವ ಇಬ್ಬರು ಮನೆಯಲ್ಲಿದ್ದೂ ಎಲ್ಲಿದ್ದೀ ಎಂದು ಫೋನ್ ಮಾಡಿ ಹುಡುಕಬೇಕಾದ ಪರಿಸ್ಥಿತಿ. ಅದೂ ಯಾಕೋ ಸರಿ ಹೋಗಲಿಲ್ಲ. ಅಷ್ಟು ಹೊತ್ತಿಗೆಲ್ಲಾ ಮನಸ್ಸು, ದೇಹ ಎರಡೂ ದಣಿದಿತ್ತು. ಕಡೆಯದಾಗಿ ಇನ್ನೊಂದು ಮನೆಯನ್ನ ನೋಡುವಷ್ಟು ಶಕ್ತಿ ಇತ್ತು. ಹಾಗಾಗಿ ಇರೋ ಬರೋ ಶಕ್ತಿಯನ್ನೆಲ್ಲಾ ಒಟ್ಟು ಗೂಡಿಸಿ ಆ ಮನೆಯನ್ನೂ ನೋಡಿಬಿಡೋಣ ಎಂದು ಹೊರಟೆವು. ಅಲ್ಲೂ ಬಹಳಷ್ಟು ಸಂಗತಿಗಳು ಅದೇ ರೀತಿ ಮುಂದುವರೆದಿತ್ತು. ತೀರಾ ದೊಡ್ಡ ಮನೆ, ಅದರ ಜೊತೆಗೆ ಬೆಳಕಿಲ್ಲದ ಅಡುಗೆ ಮನೆ, ಎಲ್ಲವೂ ಸೇರಿದಂತೆ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ. ಸಾಕಾಗಿತ್ತು ನಮ್ಮ ಒಟ್ಟು ಶಕ್ತಿಯನ್ನ ಅಳಿಸಲಿಕ್ಕೆ.  ನಾವು ದಣಿದಿದ್ದೆವು. ಕಡೆಗೆ ದಲ್ಲಾಳಿ, ನೀನೆ ಶರಣು ಎಂದು ಹೇಳಿ. ಮತ್ತೇ ಅವರಿಗೆ ಕರೆ ಮಾಡಿ ಬೇಡಿಕೊಂಡಾಗ, ಮರು ದಿನ ಮತ್ತೊಂದು ಮನೆಯನ್ನ ತೋರಿಸಲಿಕ್ಕೆ ಒಪ್ಪಿಕೊಂಡರು. ಅವರು ತೋರಿಸಿದ  ಮನೆ ಎಲ್ಲಾ ರೀತಿಯಿಂದಲೂ ನಮಗೆ ಹಿಡಿಸಿತು ಎಂದು ಹೇಳಲಾರೆವಾದರೂ, ನಾವು ದಣಿದಿದ್ದೆವು. ಹಾಗಾಗಿ ನಮಗೆ ಹಲವು ರೀತಿಗಳಿಂದ ಹೊಂದಿಕೆಯಾಗುತ್ತಿದ್ದುದರಿಂದ ಆ ಮನೆಯನ್ನು ಒಪ್ಪಿದೆವು. ಕಡೆಗೆ ಮನೆ ದೊರೆತು ಅದೇ ದಿನ ಸಂಜೆ ಹೊಸ ಮನೆಗೆ ಬಂದು ಸಂಪೂರ್ಣವಾಗಿ ಬಂಗ್ಲಾ ನಿವಾಸಿಗಳಾದೆವು.

ಆ ರಾತ್ರಿ ಮಲಗಿರುವಾಗ ಹಲವು ಸಂಗತಿಗಳು ಕಾಡುತ್ತಿದ್ದವು. ಈ ಅಲೆಮಾರಿತನದಲ್ಲು ನಮಗೆ ಒಂದು ದೈರ್ಯವೆಂದರೆ ನಮ್ಮದು ಎಂದು ಒಂದು ನೆಲೆಯಿರುವುದು. ನಮ್ಮದು ಎಂದು ಒಂದು ಮನೆ, ಒಂದು ಊರು, ಪರಿಚಿತ ಜನ, ಸ್ನೇಹಿತರು ಎಲ್ಲಾ ಇರುವುದು. ಈ ನೆಲೆಗೆ ಕಾರಣರು ಯಾರು? ಅದೆಷ್ಟು ಜನರ ಋಣ. ಅಂದು ಮಲಗಿದ್ದಾಗ ಯಾರ ಯಾರೋ ನೆನಪಾಗುತ್ತಿದ್ದರು. ಕಾಲೇಜಿಗೆ ಹೋಗುವಾಗ ಕಾಲೇಜಿನ ಹುಡುಗರೆಂದು ಮೂರು ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಕೊಡುತಿದ್ದ ದಾರಿ ಬದಿ ಗಾಡಿಯಲ್ಲಿ ತಿಂಡಿ ಮಾರುವವ, ಒಂದು ರೂಪಾಯಿ ತೆಗೆದುಕೊಂಡು ನಿತ್ಯ ಕಾಲೇಜಿಗೆ ತಲುಪಿಸುತ್ತಿದ್ದ ಬಸ್ಸಿನ ಕಂಡಕ್ಟರ್,  ಉಚಿತವಾಗಿ ಮನೆಪಾಠ ಹೇಳಿಕೊಟ್ಟ  ಜ್ಯೋತಿ ಮೇಡಂ , ಹಸಿದು  ಬಂದಿದ್ದಾಗಲ್ಲಾ ಹೊಟ್ಟೆ ತುಂಬ ಏನಾದರೂ ಮಾಡಿಕೊಡುತ್ತಿದ್ದ ಐತಾಳ್ ಅಂಕಲ್ ಹಾಗು ಆಂಟಿ,  ಏನೇ ಬೇಕೆಂದರೂ ಇಲ್ಲ ಎನ್ನದೆ ಕೊಡಿಸುತ್ತಿದ್ದ ಗೆಳೆಯ ನಂದಿ, ರಾತ್ರಿ ಎಷ್ಟೇ ಹೊತ್ತಾದರೂ  ರೂಮಿಗೆ ಕರೆದುಕೊಂಡು ಹೋಗಿ ಅಡುಗೆ ಮಾಡಿ ನಿತ್ಯ ಬಿಸಿ ಬಿಸಿ ಊಟ ಹಾಕುತ್ತಿದ್ದ ಗೆಳೆಯ ಮೂರ್ತಿ, ಮದ್ಯಾನ್ಹ ತಿನ್ನಲಿಕ್ಕೆಂದು ಮನೆಯಿಂದ ಏನಾನ್ನಾದರೂ ಮಾಡಿಕೊಂಡು ಬರುತ್ತಿದ್ದ ಗೆಳತಿಯರು, ಕೇಳಿದಾಗ ಇಲ್ಲ ಅನ್ನದೆ ಅವರೇ ಕೊಡುತ್ತಿದ್ದ ಸಾಲಗಳು. ಎಲ್ಲವೂ ನೆನಪಾಯಿತು. ಯಾಕೋ ಎಲ್ಲವನ್ನೂ   ಬರೆಯಬೇಕೂ ಎಂದೆನಿಸಿತು. ನೆನಪುಗಳು, ಎಲ್ಲಿಯೋ ಕಳೆದುಹೋದರೆ ಎಂಬ ಭಯವೂ ಕಾಡಿತು. ಈಗ ಎಲ್ಲರೂ ಎಲ್ಲೋ ಇದ್ದಾರೆ. ಹಲವರು ನನ್ನ ಸಂಪರ್ಕದಲ್ಲಿಯೂ ಇಲ್ಲ. ಎಲ್ಲರನ್ನೂ ನೆನೆಯಬೇಕೆನಿಸಿತು. ಜಿ ಎಸ್ ಶಿವರುದ್ರಪ್ಪನವರ ಈ ಕವನದ ಸಾಲುಗಳು ಅದೆಷ್ಟು ಸರಿಯೆಂದೆನಿಸಿತು

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?

ಹಾಗಾಗಿ ….



ಏನು ನೆನಪಿರಬಹುದೆಂದೆ?
ಬಿದ್ದ ಮಳೆಗೆ ತೊಯ್ದ ದೇಹ
ಅದರುತ್ತಿದ್ದ ತುಟಿಗಳು
ಕತ್ತಲಾಗಿತ್ತಲ್ಲವ ಅಂದು
ಒಂಟಿ ಭಯವಾಗುತ್ತೆ, ರಸ್ತೆ ಕೊನೆ
ಯಾರೂ ಇರುವುದಿಲ್ಲ
ಅಪ್ಪಿ ತುಟಿಗೆ ತುಟಿ ತಾಕಿಸಬೇಕೆಂದೆನಿಸಿತ್ತಲ್ಲವ
ಹೋ ನೆನಪಾಯಿತೆಂದೆಯ
ಸಿನಿಮಾದ ಪ್ರಣಯ ಸನ್ನಿವೇಶದಂತೆ

ಹೇಗೆ ಮಲಗಿದ್ದೆ ಗೊತ್ತ ?
ಡುಮ್ಮಿ ಎಂದು ರೇಗಿಸುತ್ತಿದ್ದೆಯಲ್ಲ
ಬರೀ ಮೂಳೆ ಚರ್ಮದೊಂದಿಗೆ
ಶರೀರ ಅಷ್ಟು ದಪ್ಪ
ತಿಂಗಳುಗಳು ಹಿಡಿದಿತ್ತು
ಅಷ್ಟೂ ರಕ್ತ ಹೊರ ಹರಿಯಲಿಕ್ಕೆ
ಕೊಳ್ಳಿ ಹಿಡಿಯುವವರ್ಯಾರೆಂಬುದು ಧರ್ಮಸಂಕಟ
ಅಪ್ಪನ ? ಗಂಡನ ? ಮೂರು ತಿಂಗಳ ಹಸಿ ಕೂಸ?
ಬಿಡು, ನೀನು ಅಲ್ಲಿರಲಿಲ್ಲವಲ್ಲ

ಹಾಂ ಈಗ ಹೇಳು
ನನ್ನ ಮುಖ ಹೇಗಿತ್ತು
ಕಣ್ಣುಗಳು? ಸ್ವಲ್ಪ ನೆನಪಿಸಿಕೊ
ಪ್ರೇತಾತ್ಮಕ್ಕೆ ಬಿಂಬ ಮೂಡುವುದಿಲ್ಲವಂತೆ
ನೀನಾದರೂ ಹೇಳಬಹುದೇನೋ ಎಂದು

ಬಾಂಗ್ಲಾ ದಿನಗಳು : ಅಲೆಮಾರಿಯ ಆರಂಭ


ಅಮ್ಮನಿಗೆ ಕರೆ ಮಾಡಿದಾಗ ಹೇಳಿದ್ದು ಮತ್ತೆ ನಿಮ್ಮ ಪ್ರಯಾಣವ, ಎಲ್ಲಾ ಸಿದ್ದವಾಯ್ತ, ಇರೋ ಮನೇ ಬಿಡಲಿಕ್ಕೆ, ಹೊಸ ಮನೆ ಹುಡುಕಲಿಕ್ಕೆ, ಹೊಸ ಊರಿಗೆ ಹೋಗಲಿಕ್ಕೆ, ಒಳ್ಳೇ ಅಲೆಮಾರಿ ಬದುಕು ನಿಂದು ಅಂತ. ಕೇಳಿದಾಗ ನಮ್ಮೂರಲ್ಲಿ ಹಿಂದೆ ನಡೆಯುತ್ತಿದ್ದ ಒಂದು ಸಂಗತಿ ನೆನಪಾಯಿತು. ನಮ್ಮೂರಲ್ಲಿ ಮುಂಚೆ ನಾನು ಚಿಕ್ಕವನಾಗಿದ್ದಾಗ ಹೀಗೆ ಊರಿಗೆ ಅಲೆಮಾರಿಗಳು ಬರುತ್ತಿದ್ದರು. ಏನೋ ಕೆಲಸ ಇಟ್ಟುಕೊಂಡು. ಉದಾಹರಣೆ, ಪಾತ್ರೆ ಮಾರುವುದು, ಸರಿ ಮಾಡುವುದು, ಬಡಗಿಗಳು, ಇಲ್ಲಾ ದೇವರ ವಿಗ್ರಹ ಮಾಡುವವರು. ಇವರಲ್ಲದೆ ಡ್ಯಾನ್ಸ್ ಮಾಡೋರೂ ಹೀಗೆ ಬೇರೆ ಬೇರೆ ಕೆಲಸದ ನಿಮಿತ್ತವಾಗಿ ಹಳ್ಳಿಗೆ ಬರುತ್ತಿದ್ದರು. ಒಂದು ಮೂರು ದಿನದಿಂದ ಒಂದು ವಾರಗಳ ಕಾಲ ಇಡೀ ಕುಟುಂಬ, ಒಂದು ಹತ್ತು ಜನ ಇರುತ್ತಿದ್ದರು. ಬಂದ ಊರಲ್ಲಿ ಕೆಲಸ ಎಲ್ಲಾ ಆಯಿತು, ಇನ್ನೇನೂ ಇಲ್ಲಿ ಗಿಟ್ಟುವುದಿಲ್ಲ ಅಂತ ತಿಳಿದ ನಂತರ ಊರು ಬಿಟ್ಟು ಹೋಗುತ್ತಿದ್ದರು. ಪಕ್ಕಾ ಅಲೆಮಾರಿ ಬದುಕು. ಆಗ ನನಗೆ ತಿಳಿಯುತ್ತಿರಲಿಲ್ಲ. ಈಗ ಅನ್ನಿಸುತ್ತೆ, ಅವರಿಗೆ ಅವರದು ಅಂತ ಒಂದು ಊರು, ಮನೆ ಎಲ್ಲಾ ಇರುತ್ತದ ಅಂತ. ಈ ಎಲ್ಲಾ ಆಲೋಚನೆಗಳು ಬಂದದ್ದು ಅಮ್ಮ ನನ್ನನ್ನೂ ಒಬ್ಬ ಅಲೆಮಾರಿ ಎಂದು ಕರೆದಾಗ. ನನಗೆ ಯಾವುದೇ ಸ್ವಂತ ಮನೆ ಊರು ಇಲ್ಲವಾದರೂ, ಹೇಳಿಕೊಳ್ಳಲಿಕ್ಕೆ , ಅರ್ಜಿಗಳಲ್ಲಿ ಬರೆಯಲಿಕ್ಕೆ ಖಾಯಂ ವಿಳಾಸ ಅಂತೂ ಒಂದಿದೆಯಲ್ಲ ಎಂದೆನ್ನಿಸಿ, ಅಮ್ಮ ಅಲೆಮಾರಿಯೆಂದು ಕರೆದದ್ದು ಹಿತವೆನಿಸಿ ಈ ಅಲೆಮಾರಿತನದ ಆಯ್ಕಯಲ್ಲಿ ಕಂಡ, ಕಾಣುವ ಅನುಭವಗಳನ್ನ ಧಾಖಲಿಸಬೇಕೆನಿಸಿತು.

ನನ್ನ ಈ ಅನುಭವಗಳನ್ನು ಬರೆಯ ಹೊರಟಾಗ ಯಾವಾಗಲೂ ಕಾಡುವಂತೆ, ನನ್ನ ಅನುಭವಗಳನ್ನ ಯಾಕೆ ಹಂಚಿಕೋಬೇಕು, ಯಾಕೆ ಬರೆಯಬೇಕು ಎಂದು ಮತ್ತೇ ಮತ್ತೇ ಕಾಡಿದ್ದಿದೆ. ಈ ಊರಿಂದ ಊರಿಗೆ ತಿರುಗಬೇಕಾದ ಸಂದರ್ಭದಲ್ಲಿ ಬದುಕಿನ ಕುರಿತಾದ ಒಂದಿಷ್ಟು ದ್ವಂದ್ವಗಳು ಕಾಡಿದಾಗ, ಅವುಗಳಿಗೆ ಉತ್ತರಗಳನ್ನ ಕಂಡುಕೊಳ್ಳುವ ಸಾಧ್ಯತೆಯಲ್ಲಿ ಈ ಬರಹ ರೂಪಗೊಂಡಿತು.
 
ಈ ರೀತಿಯ ಅಲೆಮಾರಿ ಬದುಕು , ನಮ್ಮದೇ ನಿರ್ಧಾರವಾಗಿತ್ತು. ಮೇಲೆ ಹೇಳಿದಷ್ಟು ನಾವು ಅಲೆಮಾರಿಗಳಲ್ಲದಿದ್ದರೂ, ಒಂದು ಊರಲ್ಲಿ ಈಗ ಆರು ತಿಂಗಳಿಂದ ಒಂದು ವರ್ಷ ಇರುವುದು ಎಂದು ತೀರ್ಮಾನವಾಗಿತ್ತು. ಮದ್ರಾಸಿನಲ್ಲೆ ಎರೆಡು ವರ್ಷವಿದ್ದದ್ದು. ಅಲೆಮಾರಿತನದ ಆಯ್ಕೆ ಅಂತಿಮ ತೀರ್ಮಾನವಲ್ಲದಿದ್ದರೂ, ಸದ್ಯದ ತೀರ್ಮಾನವಷ್ಟೆ. ಈ ಅಲೆಮಾರಿತನವು ಅದರದೇ ಆದ ಹೊಸ ಅನುಭವಗಳಿಗೆ ನಮ್ಮನ್ನು ತೆರೆದಿಡುವುದು ಒಂದೆಡೆಯಾದರೆ, ತೀರ ಅನಿಶ್ಚಿತ ಅಪರಿಚಿತ ಪ್ರಪಂಚಕ್ಕೆ ಒಮ್ಮೆಗೇ ನೂಕಿಬಿಡುವಾಗ ಭೀಕರವೆನಿಸುವುದೂ ಉಂಟು. ಈ ಎಲ್ಲವನ್ನೂ ಎದುರಿಸಬೇಕಾದ ಅನಿವಾರ್ಯವೂ ಉಂಟು. ಈ ಘಟ್ಟದಲ್ಲಿ ನಮ್ಮ ಪಯಣ ಸಾಗಿದ್ದು ಮದ್ರಾಸಿನಿಂದ ಕೋಲ್ಕತ್ತಾ ಕಡೆಗೆ.
 
ನನ್ನ ಸಹಚರರೆಲ್ಲಿ ಬಹಳಷ್ಟು ಮಂದಿ ಬೆಂಗಾಲಿಗಳು. ಭಾರತದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆಯಲ್ಲಿರುವವರ ಪೈಕಿ ಬೆಂಗಾಲಿಗಳ ಸಂಖ್ಯೆ ಬಹಳ ದೊಡ್ಡದಿದೆ. ಅದಕ್ಕೆ ಅಲ್ಲಿನ ಸಾಂಸ್ಕೃತಿಕ ಕಾರಣಗಳು ಬಹಳಷ್ಟಿವೆ. ಹಾಗಾಗಿ ನನ್ನ ಜೊತೆಗೆ ನನ್ನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರೆಲ್ಲರೂ ಬೆಂಗಾಲಿಗಳು.. ಅವರು ಕೋಲ್ಕತ್ತಾವನ್ನು, ಅಲ್ಲಿನ ಭೌದ್ಧಿಕ ಪ್ರಪಂಚವನ್ನು ಹೊಗಳುವುದನ್ನು ಕಂಡಾಗ ಒಮ್ಮೆಯಾದರೂ ಅಲ್ಲಿ ಇರಬೇಕೆಂದೆನಿಸಿದ್ದು ಸತ್ಯ. ಅದೊಂದೇ ಅಲ್ಲದೆ ನನ್ನ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆಯೂ ಇಲ್ಲ ಬಹಳಷ್ಟು ಮಂದಿಯಿದ್ದಿದ್ದರಿಂದ ಇಲ್ಲಿಗೆ ಹೋಗುವುದೆಂದು ತೀರ್ಮಾನಿಸಿದ್ದು. ನಿರ್ಧರಿಸಿದ ನಂತರ ನನಗೆ ಉದ್ಯೋಗದ ಆಯ್ಕೆ ಪತ್ರ ಬಂದ ನಂತರ ಕೇವಲ ಹತ್ತು ದಿನಗಳು ಮಾತ್ರ ಉಳಿದಿತ್ತು.. ಈ ಹತ್ತು ದಿನಗಳಲ್ಲಿ ಮದ್ರಾಸಿನಿಂದ ಹೊರಟು ಕೋಲ್ಕತ್ತಾ ಸೇರಿ ಅಲ್ಲಿ ಮನೆ ಮಾಡಿ ಎಲ್ಲವನ್ನೂ ಹೊಂದಿಸಬೇಕಿತ್ತು.
 
ಅಲೆಮಾರಿತನದ ಸಾದ್ಯತೆಗೆ ತೆರೆದುಕೊಳ್ಳಬೇಕೆಂದುಕೊಂಡಾಗ ಮೊದಲು ಎದುರಿಸಿದ ಸಂದಿಗ್ಧತೆಯೆಂದರೆ ನಮ್ಮ ಬದುಕಿಗೆ ಅವಶ್ಯವಾದ ವಸ್ತುಗಳೇನು ? ಬೆಂಗಳೂರಿನಿಂದ ಚೆನ್ನೈಗೆ ಬಂದಾಗ, ಅಪ್ಪಟ ಸಂಸಾರಿಯ ಬದುಕಿಗೆ ಸಿದ್ದಗೊಂಡಿದ್ದೆ. ಅಪ್ಪಟ ಸಂಸಾರಿಯ ಎಲ್ಲಾ ಸಾಮಗ್ರಿಗಳೂ ಬೆಂಗಳೂರಿನಿಂದಲೇ ಇಲ್ಲಿಗೆ ಬಂದಿದ್ದವು. ಅಲ್ಲದೆ ಚೈನ್ನೈಗೆ ಬಂದ ಒಂದೇ ದಿನದಲ್ಲಿ ಹೋಗಿ ಟಿ.ವಿ, ಬಟ್ಟೆ ಒಗೆಯೋ ಯಂತ್ರ, ಮಂಚ, ದಿವಾನ ಎಂದು ಮನೆಯಲ್ಲಿ ಜಾಗ ಎಲ್ಲಿದೆ ಎಂದು ಹುಡುಕಬೇಕು ಎನ್ನುವಷ್ಟು ಸಾಮಗ್ರಿಗಳನ್ನ ಜೋಡಿಸಿಟ್ಟುಕೊಂಡದ್ದು. ಸಂಸಾರಿಯೆಂದರೆ ಅಷ್ಟೇ ಅಲ್ಲವ. ಎಲ್ಲರಿಗೂ ತೋರಿಸಬೇಕಲ್ಲವ. ಮನೆಯಲ್ಲಿ ಸಾಮಾನು ಸೇರಿದಷ್ಟೂ ನಾವು ಸುಖೀ ಜೀವಿಗಳಲ್ಲವೆ. ಇದು ಸಮಾಜ ಬರೆದದ್ದು ಅಲ್ಲವ. ಹಾಗಾಗಿ ಮನೆ ತುಂಬಾ ಸಾಮಾನುಗಳೇ, ಸಾಮಾನುಗಳು. ಯಾರೋ ಎಂದೋ ಬರುತ್ತಾರೆಂದು ನಾಲ್ಕು ಹಾಸಿಗೆ, ಒಂದಿಷ್ಟು ಜಮಖಾನ, ಇರುವ ಇಬ್ಬರಿಗೆ ಮತ್ತೇ ಎರಡು ಖುರ್ಚಿ. ಹೀಗೆ ವಿವರಿಸುತ್ತಾ ಹೋದರೆ ಹೋಗುತ್ತಲೇ ಇರುತ್ತದೆ. ಇಷ್ಟ ಪಟ್ಟು, ದುಡ್ಡು ಕೊಟ್ಟು ತಂದಿದ್ದೇನೋ ಆಯಿತು. ಆದರೆ…. ಸ್ವಲ್ಪೇ ದಿನಕ್ಕೆ ಈ ಸಂಸಾರಿಯ ಜೀವನ ಹೊಂದುವುದಿಲ್ಲವೆಂದು ತಿಳಿದು ಹೋಯಿತು. ಟಿ. ವಿ ನಮ್ಮ ಮನೆಗೆ ಮೊದಲ ಶತ್ರುವಾಗಿದ್ದು. ನಾನು ಮನೆಗೆ ಬರುತ್ತಿದ್ದದ್ದೆ, ರಾತ್ರಿ ಏಳು ಗಂಟೆಗೆ. ಬಂದ ನಂತರ ಆಯಾಸವಾಗಿರುತ್ತಿತ್ತು, ತಗೋ ಟಿ. ವಿ. ಮುಂದೆ ಕೂತರೆ ಆಯಿತು. ಬೇಕೋ ಬೇಡವೋ ಸುಮ್ಮನೆ ನೋಡುತ್ತ ಕೂರುವುದು. ಒಂದಾದರೂ ಉಪಯೋಗಕ್ಕೆ ಬರುವ ಕಾರ್ಯಕ್ರಮಗಳಿದ್ದವ, ಇಲ್ಲ. ಟಿ ವಿ ನೋಡುವ ಖುಷಿಯಲ್ಲಿ ಮೃಣನ್ಮಯಿಯೊಂದಿಗೆ ಮಾತನಾಡುವುದೇ ತಪ್ಪಿ ಹೋಯಿತು, ಹಾ ಇದೆ, ಇಲ್ಲ ಅಷ್ಟೆ. ಅವಳೂ ಟಿ ವಿ ನಾನೂ ಟಿ ವಿ. ಇನ್ನು ನಿತ್ಯವೂ ನಾನು ರಾತ್ರಿ ಮಲಗುವ ಮುಂಚೆ ಪುಸ್ತಕ ಓದುತ್ತಿದ್ದ ಹವ್ಯಾಸಕ್ಕೂ ಸ್ಪಷ್ಟವಾಗಿ ಎಳ್ಳು ನೀರು ಬಿಟ್ಟದ್ದಾಯಿತು. ಯಾರಾದರೂ ಏನನ್ನಾದರೂ ಓದಿದೆಯ ಎಂದು ಕೇಳಿದರೆ ಸಿದ್ಧ ಉತ್ತರ. “ಅಯ್ಯೋ ಸಮಯಾನೆ ಇಲ್ಲಪ್ಪ, ಕೆಲಸಾನೇ ಸಾಕಾಗಿ ಹೋಗುತ್ತೆ". ನಿಜ ಹೇಳಬೇಕೆಂದರೆ, ಕೆಲಸ ಅಷ್ಟೋಂದು ಇರುತ್ತಿರಲಿಲ್ಲ. ನಾನೋ post-doctoral fellow ಆಗಿದ್ದದ್ದು. ಮನೆ ಪಕ್ಕವೇ ಸಂಶೋದನಾ ಸಂಸ್ಥೆಯಿದ್ದದ್ದು. ಯಾವುದೇ ಒತ್ತಡಗಳಿರಲಿಲ್ಲ. ಬಿಂದಾಸ್ ಕೆಲಸ. ಆದರೂ ಮನೆಗೆ ಬಂದರೆ ಮಾಡುತ್ತಿದ್ದದ್ದೇನಪ್ಪಾ ಎಂದರೆ ನಯಾ ಪೈಸೆ ಉಪಯೋಗವಿಲ್ಲದ ಕಿತ್ತು ಹೋದ ಧಾರವಾಹಿಗಳನ್ನೋ, ವಾರ್ತೆಗಳನ್ನೋ ನೋಡುತ್ತಿದ್ದದ್ದು. ಅದು ಇಷ್ಟಕ್ಕೇ ನಿಲ್ಲಲಿಲ್ಲ, ತಿಳಿದೋ ತಿಳಿಯದೆಯೊ ನಮ್ಮ ಆಲೋಚನೆಗಳನ್ನ ಈ ಧಾರವಾಹಿಗಳು ನಿಯಂತ್ರಿಸಹೊರಟಿದ್ದವು. ಮಯಿಯೂ ನಾನು ಯಾವ ಕಾರಣಕ್ಕೆ ಕೋಪಿಸಿಕೊಳ್ಳುತ್ತಿದ್ದೇವೆ ಎಂಬ ಅರಿವೇ ಇರುತ್ತಿರಲಿಲ್ಲ. ಊಟ ತಿಂಡಿ ಮಾಡುವಾಗ ಎದುರಿಗೆ ಟಿ ವಿ, ತಿನ್ನುತ್ತಿದ್ದುದರ ಬಗೆಗೆ ಸ್ವಲ್ಪವೂ ಗಮನವಿಲ್ಲ. ಅದೂ ಒಂದು ತಿನ್ನುವ ವಿಧಾನವ? ಈಗ ನೆನೆದರೆ ಹೇಸಿಗೆಯೆನಿಸುತ್ತೆ. ಇಬ್ಬರ ಮನಸ್ಥಿತಿಗಳು ಪೂರ ಕೆಡುತ್ತಿದೆ ಎಂದು ಅರಿವಾದಾಗ, ಈ ಟಿ ವಿ ಅನ್ನು ಬಂದ್ ಮಾಡುವುದೆಂದು ನಿರ್ದರಿದೆವು. ಸಂಸಾರಿಯ ಮೊದಲ ಸರಂಜಾಮು ಹೀಗೆ ಮೂಲೆ ಸೇರಿತು. ನಂತರ ಅದು ಹೇಗೋ ಏನೋ ಅದನ್ನ ಹಳ್ಳಿ ಮನೆಗೆ ಸೇರಿಸಿದ್ದಾಯಿತು. ಹಳ್ಳಿಯಲ್ಲಿ ನಮ್ಮ ಮನೆಯಲ್ಲಿ ಹೊಸ ಟಿ ವಿ ಎಲ್ಲರಿಗೂ ಖುಶಿಯೋ ಖುಶಿ. ಹಳೇ ಟಿ ವಿ ಯನ್ನೂ ಇಟ್ಟುಕೊಂಡು ಎರೆಡರಲ್ಲೂ ಈಗ ನೋಡುವುದು ಸಾದ್ಯವಾದದ್ದಕ್ಕೆ.
 
ಹೀಗೆ ಸಂಸಾರಿಯಾಗಲಿಕ್ಕೆ ತಂದ ಒಂದೊಂದು ವಸ್ತುವಿಗೂ ಒಂದೊಂದು ಕತೆಗಳಿವೆ. ತಾಳ್ಮೆಯಿಂದಿರಿ. ಹೇಳುತ್ತಿರುತ್ತೇನೆ. ಇನ್ನು ಕಬ್ಬಿಣದ ಮಂಚ. ಅದನ್ನ ಹೇಗೆ ಕೊಂಡೆವೋ ದೇವರಿಗೇ ಗೊತ್ತು. ಬರೀ ತಗಡು. ಹೇಗೇ ಮಲಗಿದರೂ ಬೆನ್ನು ನೋವು. ಅದನ್ನೂ ಮೂಲೆಗೆ ಸೇರಿಸುವುದೆಂದು ನಿರ್ದಾರವಾಯಿತು. ಸುಮ್ಮನೆ ಮೂಲೆಯಲ್ಲಿಡಲಿಕ್ಕೆ ಸಾದ್ಯವಿಲ್ಲವಲ್ಲ. ಅದಕ್ಕೊಂದಿಷ್ಟು ಜಾಗ ದಂಡ. ಏನು ಮಾಡುವುದು. ಯಾರಿಗಾದರೂ ಮಾರುವುದ?. ಏನಂತ ಹೇಳಿ ಮಾರುವುದು, ಇದು ಡಬ್ಬ ತಗಡು, ರಾತ್ರಿ ಮಲಗಿದರೆ ಸರಿಯಾಗಿ ಬೆನ್ನು ನೋವು ಬರುತ್ತೆ ಎಂದೇ. ಇಲ್ಲ ಹೇಳದೆ ಮಾರಿದೆವು ಎಂದಿಟ್ಟುಕ್ಕೊಳ್ಳೋಣ, ಮಂಚ ಮುರಿದೋ ಇನ್ನೇನೋ ಆದರೆ, ಕೊಂಡವ ಸುಮ್ಮನಿದ್ದಾನೆಯೆ, ಅದೂ ಮದ್ರಾಸಿನಲ್ಲಿ, ಭಾಷೆ ಗೊತ್ತಿಲ್ಲದ ನಮ್ಮನ್ನ ಸುಮ್ಮನೆ ಬಿಟ್ಟಾರೆಯೆ. ಹೀಗೆಲ್ಲ ಆಲೋಚನೆಗಳು ಸಾಗುತ್ತಿರಬೇಕಾದರೆ, ನನ್ನ ಶ್ರೀಮತಿಗೆ ಅದೆಲ್ಲಿಂದ ಅದೇನು ಆಲೋಚನೆ ಹೊಳೆಯಿತೋ ಏನೋ ಸೀದ ತೆಗೆದುಕೊಂಡು ಹೋಗಿ ಮನೆಯ ಮುಂದೆ ಇಟ್ಟು ಬೇಕಿದ್ದವರು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಎಂದು ತಮಿಳು ಬಾರದಿದ್ದರೂ, ಅದ್ಯಾವ ಭಾಷೆಯಲ್ಲಿ ಹೇಳಿದಳೋ, ಅವರಿಗೇನರ್ಥವಾಯಿತೋ ಒಟ್ಟಿನಲ್ಲಿ ಮಂಚವನ್ನು ಉಚಿತವಾಗಿ ತೆಗೆದುಕೊಂಡುಹೋಗಿದ್ದರು. ಹೀಗೆ ಮತ್ತೊಂದು ವಸ್ತುವು ಉಚ್ಚಾಟಿಸಲ್ಪಟ್ಟಿತು. ಅಜ್ಜಿ ಮಲಗಲಿಕ್ಕೆ ಅಂತ ಸಣ್ಣ ಮಂಚೆ, ದಿವಾನ ತಂದಿದ್ದದ್ದು. ಅಜ್ಜಿ ಯೇನೋ ಇದ್ದಷ್ಟೂ ದಿವಸ ಮಲಗಿದ್ದರು. ಅಜ್ಜಿ ಹೋದ ಮೇಲೆ ಆ ಒಂದು ಸಣ್ಣ ಮಂಚವೂ ಅನಾಥವಾಗಿಹೋಯಿತು. ಚೆನ್ನೈ ಅಲ್ಲಿ ಬಟ್ಟೆ ಒಗೆಯುವ ಯಂತ್ರ ತೆಗೆದುಕೊಂಡದ್ದು ಬೇಸಿಗೆ ಬಂದ ತಕ್ಷಣ ಅದರ ನಿರುಪಯುಕ್ತತೆ ತಿಳಿದುಹೋಯಿತು. ಎಲ್ಲಿದೆ ನೀರು ಅಷ್ಟೊಂದು. ಯಂತ್ರವೇನೋ ಉಂಟು। ಸ್ವಲ್ಪ ಬಟ್ಟೆ ಒಗೆಯಲಿಕ್ಕೆ ಬಕೀಟುಗಳ ಗಟ್ಟಲೆ ನೀರನ್ನ ತೆಗೆದುಕೊಳ್ಳುತ್ತೆ. ನಮ್ಮ ಮನೆಯಲ್ಲೋ ನಾಲ್ಕು ಸಾರಿ ಮೋಟರ್ ಹಾಕಿದರೂ ನೀರು ಬರುವುದು ಅಷ್ಟೆಕ್ಕಷ್ಟೆ ಒಮ್ಮೆ ಕಾಲು ತೊಳೆದರೆ ಮುಖ ತೊಳೆಯಲ್ಲಿಕ್ಕೆ ಇರುತ್ತಿರಲಿಲ್ಲ. ಹಾಗಾಗಿ ಬಟ್ಟೆ ಒಗೆಯುವ ಯಂತ್ರವೂ ಉಪಯೋಗವಿಲ್ಲದೆ ಹೋಯಿತು.
 
ಈಗ ಒಂದೂರಿಂದ ಮತ್ತೊಂದೂರಿಗೆ ಪಯಣ. ಇಲ್ಲಿಂದ ಅಲ್ಲಿಗೋಗಿ ಮತ್ತೆ ಬದುಕನ್ನ ಕಟ್ಟಿಕೋಬೇಕು. ಹೊಸ ಜಗತ್ತು. ಹೊಸ ಜನ. ಹೊಸ ರೀತಿ ನೀತಿಗಳು. ಒಮ್ಮೆಗೇ ಹೊಂದುವುದಿಲ್ಲ. ಬಹಳಷ್ಟು ಬಾರಿ ಭಯವಾಗುತ್ತಿರುತ್ತದೆ. ಆದರೂ ಆಯ್ಕೆಯಿದು. ಆ ಹೊಸ ಅವತಾರಗಳೇ ಹೊಸ ಅನುಭವಗಳಾಗುವುದು. ಅದೇ ನಂಬಿಕೆ. ಹಾಗಾಗಿಯೆ ಹೊಸದಕ್ಕೆ ಹಾರೈಕೆ. ಮೊದಲನೆಯದಾಗಿ, ಕೋಲ್ಕತ್ತಾಗೆ ಹೋಗಲಿಕ್ಕಿರುವುದೇ ಇನ್ನು ಹತ್ತು ದಿನಗಳು. ಅಲ್ಲಿ ಎಷ್ಟು ಕಾಲ ಇರುತ್ತೇವೆಯೋ ಗೊತ್ತಿಲ್ಲ. ಬಹಳ ಅನಿಶ್ಚಿತತೆಯಿದೆ. ಅಲ್ಲದೆ ಮದ್ರಾಸಿನಿಂದ ಕೋಲ್ಕತ್ತ ಬಹಳ ದೂರ. ಇಲ್ಲಿಂದ ಸಾಮಾನುಗಳನ್ನು ಸಾಗಿಸಲಿಕ್ಕೆ ಆಗುವುದಿಲ್ಲ. ಅದಕ್ಕೆ ಕೊಡುವ ಹಣದಲ್ಲಿ ನಾವದನ್ನು ಕೊಳ್ಳಲೇ ಬಹುದು. ಹೀಗೆ ಅನಿವಾರ್ಯವಾದ ಪ್ರಾಯೋಗಿಕ ಕಷ್ಟಗಳೊಂದಿಗೆ ಸೈದ್ಧಾಂತಿಕವಾಗಿಯು ಹಲವು ಪ್ರಶ್ನೆಗಳಿದ್ದವು. ನಮ್ಮಿಬ್ಬರಿಗೆ ಬೇಕಿರುವುದೆಷ್ಟು? ನಮ್ಮ ಕೈಯಲ್ಲಿ ಕೊಂಡೊಯ್ಯಲಿಕ್ಕೆ ಆಗುವುದೆಷ್ಟೋ ಬಹುಷಃ ಅಷ್ಟು ಮಾತ್ರ ನಮಗೆ ಬೇಕಿರುವುದು. ಉಳಿದದ್ದು ವ್ಯರ್ಥ. ಬೇಕಿಲ್ಲ. ಅನವಶ್ಯ. ಎರಡೇ ಮುಖ್ಯ ಅವಶ್ಯ ವಸ್ತುಗಳು. ಬಟ್ಟೆ,, ಹಾಕಿಕೊಳ್ಳುವ ಹಾಗು ಹೊದೆಯುವವು ಮತ್ತು ಅಡುಗೆ ಮಾಡಿಕೊಳ್ಳಲು ಬೇಕಿರುವ ಕನಿಷ್ಟ ಪಾತ್ರೆ ಸಾಮಾನುಗಳು. ಉಳಿದಂತೆ ಲ್ಯಾಪ್ ಟಾಪ್ ಮತ್ತಿತರೆ ಸಣ್ಣ ಪುಟ್ಟ ಸಾಮಾನುಗಳು. ಮಾನಸಿಕವಾಗಿ ನಿರ್ದರಿಸಿದೆವು. ನಮ್ಮ ಬಳಿ ಎರೆಡು ಟ್ರಾಲಿ ಸೂಟ್ ಕೇಸ್ ಗಳಿದ್ದವು, ಒಂದು ಕೈ ಸೂಟ್ ಕೇಸ್, ಮಿಕ್ಸಿ ಬೇಕೇ ಬೇಕಿದ್ದುದರಿಂದ ಅದರದೊಂದು ಡಬ್ಬ. ಎರಡು ಬ್ಯಾಕ್ ಪ್ಯಾಕ್. ಇಷ್ಟರಲ್ಲಿ ನಮ್ಮ ಮನೆಯ ಸಾಮಾನುಗಳಿಡಿಸಬೇಕು ಎಂದು ನಿರ್ದರಿಸಿಯಾಗಿತ್ತು.
 
ಇನ್ನು ವಸ್ತುಗಳನ್ನ ಜೋಡಿಸುವುದೆಂದು. ತೆಗೆದುಕೊಂಡು ಹೋಗಬೇಕಾದ ವಸ್ತುಗಳೇನು ಎಂಬುದೇನೋ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಆದರೆ, ಉಳಿದವುಗಳನ್ನು ಏನು ಮಾಡುವುದು. ಅಷ್ಟೊಂದು ಸಾಮಾನುಗಳು. ಬೇರ್ಪಡಿಸುವುದು ಸುಲಭವಾಗಿರಲಿಲ್ಲ. ಅದೆಷ್ಟು ವಸ್ತುಗಳು, ಅವುಗಳ ಜೊತೆಗಿದ್ದ ನೆನಪುಗಳೂ, ಹಾಗು ಭಾವಗಳು. ಮಯಿಗೆ ಯಾವ ಯಾವ ಕಾರಣಕ್ಕೋ, ಯಾವುದೋ ದಿನದ ವಿಶೇಷವೆಂದೋ, ಯಾವುದೋ ನೆನಪುಗಳಿಗೋ ಎಂಬಂತೆ ಕೊಂಡುತಂದು ಕೊಟ್ಟ ವಸ್ತುಗಳು. ಎಂದಿಗಾದರೂ ಅವಶ್ಯಕ್ಕೆ ಬಂದೀತು ಎಂದು ಶೇಖರಿಸಿಟ್ಟ ವಸ್ತುಗಳು. ಮನೆಗೆ ಯಾರಾದರೂ ಬಂದರೆ ಅವರುಗಳಿಗೆ ಎಂದು ಎಂದು ತಂದಿಟ್ಟ ವಸ್ತುಗಳು. ಹಲವಕ್ಕೆ ಹಣ ವ್ಯಯಿಸಿ ಕೊಂಡವುಗಳು. ಏನನ್ನು ಮಾಡುವುದು. ಎಲ್ಲಕ್ಕಿಂತಲೂ ಮುಖ್ಯವಾಗಿ ಎಷ್ಟೋ ಪುಸ್ತಕಗಳು. ಈಗ ಬೇಡವೆಂದೆನಿಸಿರುವುದನ್ನು ಏನು ಮಾಡುವುದು, ಒಮ್ಮೆಗೇ ತಿಪ್ಪೆಗೆ ಹಾಕಲಿಕ್ಕೆ ಮನಸ್ಸು ಒಪ್ಪುವುದಿಲ್ಲವಲ್ಲ. ಒಂದಿಷ್ಟು ಬೆಲೆ ಬಾಳುವ, ಮಯಿಯ ಮನೆಯಿಂದ ತಂದಿದ್ದ ಪಾತ್ರೆಗಳನ್ನು, ಹಾಗು ಅತೀ ಮುಖ್ಯವಾಗಿ ಕನ್ನಡ ಪುಸ್ತಕಗಳನ್ನು, ಸುಮಾರು ನೂರರ ಮೇಲ್ಪಟ್ಟು ಪುಸ್ತಕಗಳಿರಬಹುದು, ಎಲ್ಲವನ್ನೂ ಶಿವಮೊಗ್ಗದ ಬಸ್ಸಿಗಾಕಿ ಮಯಿಮನೆಗೆ ಕಳುಹಿಸಿದ್ದಾಯಿತು. ಆದರೂ ಇನ್ನೂ ನೂರಕ್ಕೂ ಹೆಚ್ಚು ಪುಸ್ತಕಗಳಿವೆ. ಹಲವಾರು ಆಂಗ್ಲ ಪುಸ್ತಕಗಳು. ರಷ್ಯಾದ ಮೂಲ ಆವೃತ್ತಿಗಳು, ಭಾರತೀಯ ತತ್ವಶಾಸ್ತ್ರ, ಬೌದ್ಧ ತತ್ವಗಳು, ಮಾದ್ವ ಸಿದ್ಧಾಂತ, ಮಾರ್ಕ್ಸನ, ಲೆನಿನರ ಅಷ್ಟೂ ಪುಸ್ತಕಗಳು, ಹೀಗೆ ಅದೆಷ್ಟೋ ಪುಸ್ತಕಗಳು. ಅವಗಳನ್ನು ಎಲ್ಲಿಗೂ ಕಳುಹಿಸಲಿಕ್ಕೆ ಆಗಲಿಲ್ಲ. ಅಂತರ್ಜಾಲದಲ್ಲಿ ಯಾರಾದರೂ ತೆಗೆದುಕೊಂಡು ಹೋಗುತ್ತಾರ, ಯಾವುದಾದರೂ ಉಪಯೋಗಿಸುವ ಗ್ರಂಥಾಲಯವಿದೆಯ ಎಂದು ಅದೆಷ್ಟೋ ಹುಡುಕಿದೆ, ಸಾದ್ಯವಾಗಲಿಲ್ಲ. ನಮಗೆ ಅವಶ್ಯ ಇಲ್ಲಾ ಎಂದು ತಿಳಿದರೂ ಅದನ್ನು ಉಪಯೋಗಿಸಿದ್ಧಕ್ಕಾಗಿ ಅದನ್ನು ಸೂಕ್ತ ಸ್ಥಳಕ್ಕೆ ತಲುಪಿಸಬೇಕಾದ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಕಡೆಗೆ ಸೋತು, ನಮ್ಮದೇ ಸಂಶೋಧನಾ ಸಂಸ್ಥೆಗೇ ಕೊಟ್ಟು ಬಿಡುವುದೆಂದು ತೀರ್ಮಾನಿಸಿದ್ದೆ. ಅದೃಷ್ಟವಷಾತ್ ಚೆನ್ನೈ ಗಣಿತ ಸಂಸ್ಥೆಯ ಸಹೋದ್ಯೋಗಿಯೊಬ್ಬರು ತಾವು ಕಮ್ಯೂನಿಟಿ ಗ್ರಂಥಾಲಯವನ್ನ ನಡೆಸುತ್ತಿರುವುದಾಗಿ, ಎಲ್ಲಾ ಪುಸ್ತಕಗಳನ್ನ ತೆಗೆದುಕೊಳ್ಳುತ್ತೇನೆಂದು ಹೇಳಿದರು. ಒಂದು ದೊಡ್ಡ ಭಾರ ನೀಗಿತು. ಆ ಎಲ್ಲಾ ಪುಸ್ತಕಗಳನ್ನು ಅವರಿಗೆ ಕೊಟ್ಟು ಬಂದು ನೆಮ್ಮದಿಯಿಂದ ಕೂತೆ.
 
ಇನ್ನು ಉಳಿದ ಸಾಮಾನುಗಳು. ಬೀರುವಿನ ತುಂಬಾ ಬಟ್ಟೆಗಳು. ಯಾಕೆ ಕೊಂಡೆ ಎಂದು ಈಗಲೂ ತಿಳಿದಿಲ್ಲ. ಕೊಂಡವುಗಳನ್ನು ಸುಮ್ಮನೆ ಬೀರುವಿನ ತುಂಬಾ ತುಂಬಿಸಿದ್ದದ್ದು. ಮದುವೆಗೆ ಕೊಂಡ ಬಟ್ಟೆಗಳೂ ಸಹ ಸುಮ್ಮನೆ ಬೀರುವಿನ ತುಂಬ. ಅದೆಷ್ಟು ಲೋಲುಪರು ನಾವು ಎಂದೆನಿಸಿತು. ಬೇಸರವಾಯಿತು. ಈ ಅನವಷ್ಯಕ ದುಂದು ವೆಚ್ಚಕ್ಕೆ. ಎಲ್ಲವನ್ನೂ ತೆಗೆದು ಹತ್ತಿರದಲ್ಲೆ ಇದ್ದ ಗೊತ್ತಿದ್ದವರೊಬ್ಬರ ಮನೆಗೆ ನೀಡಿದೆವು. ಅವರೂ, ಅವರಿಗೆ ಗೊತ್ತಿರುವವರು, ಅವಶ್ಯಕತೆಯಿರುವವರಿಗೆ ಕೊಡುತ್ತಾರೆಯೆಂದು ತೀರ್ಮಾನವಾಗಿತ್ತು. ಅದೇ ರೀತಿ ಪಾತ್ರೆಗಳೂ. ಎಲ್ಲವೂ ಅನವಶ್ಯ. ಎಲ್ಲವನ್ನೂ ಅಲ್ಲೇ ವಿಲೇವಾರಿ ಮಾಡಿಬಿಟ್ಟೆವು. ಸಾಕು ಸಾಕಾಗಿ ಹೋಯಿತು. ನಮ್ಮ ಮನಯ ಮಾಲೀಕರೂ ಸಹ ನಿಮಗೆ ಬೇಡವಾದುದ್ದನೆಲ್ಲ ಇಲ್ಲೇ ಬಿಟ್ಟು ಹೋಗಿ ನಾವದನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು. ಹಾಗಾಗಿ ಎಲ್ಲವನ್ನೂ ಚೊಕ್ಕ ಮಾಡಿ ಅಲ್ಲೇ ಬಿಟ್ಟೆವು. ಕಡೆಗೆ ತೀರ್ಮಾನಿಸಿದ್ದಷ್ಟನ್ನ ಮಾತ್ರಾ ಜೋಡಿಸಿಟ್ಟುಕೊಂಡಿದ್ದೆವು. ನಾವಿಬ್ಬರೂ ಜೊತೆಯಾಗಿ ತೆಗೆದು ಕೊಂಡು ಹೋಗುವಷ್ಟು. ನಮ್ಮ ಕೈಯಲ್ಲಿ ಎಲ್ಲಾ ಕಡೆಯೂ ಹೊರುವುದಕ್ಕಾಗುತಿರಲಿಲ್ಲವಾದರೂ, ಕನಿಷ್ಟ ಕಾರಿನಲ್ಲಿ ಇಡುವಷ್ಟಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ಸಹಾಯಕ್ಕೆ ಕೂಲಿಯವರು ಸಿಗುತ್ತಿದ್ದುದರಿಂದ ಸರಿಹೋಯಿತು.
 
ಈ ಅಲೆಮಾರಿ ಬದುಕಿನ ಆರಂಭದ ಪ್ರಯಾಣ ಮಾನಸಿಕವಾಗಿಯೂ, ಬೌದ್ಧಿಕವಾಗಿಯೂ ಹಲವು ಪ್ರಶ್ನೆಗಳಿಂದ ಕಾಡಿತು. ಪಕ್ಕದ ಊರಿಗೇ ಏನನ್ನೂ ಸಾಗಿಸಲಾಗದ ಪರಿಸ್ತಿತಿ ನಮ್ಮದಾಗಿತ್ತು. ಇಂತಹ ಸಂದರ್ಭದಲ್ಲಿ ಅನ್ನಿಸಿದ್ದು. ಸಾವು ನಿಶ್ಚಿತ ಎಂದು ತಿಳಿದಿರುವಾಗ, ಸತ್ತ ನಂತರ ಏನನ್ನೂ ಕೊಂಡೊಯ್ಯಲಿಕ್ಕ ಸಾದ್ಯವಾಗಲಿಲ್ಲವಲ್ಲ ಎಂಬ ಕೊರಗಿನ ಸಮಾಧಾನಕ್ಕ ಒಂದು ಶಾಶ್ವತದ ಚಿತ್ರಣ ಕಟ್ಟಿದ್ದು? ಏನೋ ಒಂದು ಶಾಶ್ವತವಾದದ್ದುಂಟು. ಮಾಡುವುದೆಲ್ಲವುದಕ್ಕೂ ಅದರಲ್ಲಿ ಲೆಕ್ಕವುಂಟು. ಬದುಕಿನಲ್ಲಿ ಸಂಪಾದಿಸಿದ್ದು, ಅದು ಪುಣ್ಯವಿರಲಿ, ಪಾಪವಿರಲಿ ಕೊಂಡೊಯ್ಯಲಿಕ್ಕುಂಟು. ಕಳೆದುಕೊಳ್ಳಬೇಕಾದ ಭೀಕರವಾದ ಶೂನ್ಯಕ್ಕೆ ಸಂವಾದಿಯಾಗಿ ಶಾಶ್ವತದ ಚಿತ್ರಣ ಮೂಡಿದ್ದಿರಬಹುದ? ಗೊತ್ತಿಲ್ಲ. ನನಗೆ ಶಾಶ್ವತದ ಮೇಲೆ ನಂಬಿಕೆ ಇಲ್ಲ. ಸದ್ಯದ ಮಟ್ಟಿಗೆ ನನ್ನ ಶರೀರದ ಹೊರತಾಗಿ ನನ್ನದು ಎಂದು ಇರಬಹುದಾದುದರ ಚಿತ್ರಣ ನನಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸಾವು ನಿಶ್ಚಿತ ಎಂದು ತಿಳಿದು, ಏನನ್ನೂ ಎಂದಿಗೂ ಎಲ್ಲಿಗೂ ಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎಂದು ತಿಳಿದಾಗ, ಸ್ವಲ್ಪ ವಿಚಲಿತನಾದೆ. ಲಕ್ಷ್ಮೀಶ ತೋಳ್ಪಾಡಿಯವರು ಭಾಗವತದ ಕುರಿತಾಗಿ ಮಾತನಾಡುವಾಗ, ಆಡಿದ "ಮನುಷ್ಯ ಸಾವು ನಿಶ್ಚಿತ ಎಂದು ತಿಳಿದಾಗ ಮಾಡಲೇಬೇಕಾಗಿರುವುದೇನು" ಎಂಬಂತಹ ಮಾತು ನೆನಪಾಯಿತು. ಸ್ವಲ್ಪ ಬದಲಾಯಿಸಿದರೆ, ಸಾವು ನಿಶ್ಚಿತ ಎಂದು ತಿಳಿದ ಮನುಷ್ಯ ಬದುಕಬೇಕೇಕೆ ಎಂಬ ಪ್ರಶ್ನೆ ಇನ್ನೂ ಮುಖ್ಯವಾಗಿ ಕಾಡಲಾರಂಭಿಸಿತು.
 
ಆರಂಭದಲ್ಲಿ ನಾನೆ ಕೇಳಿಕೊಂಡ, ಬರೆಯಬೇಕೇಕೆ, ಅನುಭವಗಳನ್ನ ಹಂಚಿಕೊಳ್ಳಬೇಕೇಕೆ ಎಂಬ ಪ್ರಶ್ನೆಗೆ ಈ ಸಂದರ್ಭದಲ್ಲಿ ಮೂಡಿದ ಪ್ರಶ್ನೆಗಳ ಜೊತೆಯಲ್ಲೆ ಉತ್ತರ ಕಾಣ ಬಯಸಿದೆ. ಅನುಭವಕ್ಕಿಂತ ಮಿಗಿಲಾದದ್ದು ಏನುಂಟು? ಕಾಣುವುದಕ್ಕಿಂತ ಉಳಿದದ್ದು ಏನಿದೆ? ಹೊತ್ತಯ್ಯೊಲಿಕ್ಕೆ ಆಗದಾದಾಗ ಇರುವುದಲ್ಲದೆ ಇನ್ನೇನುಂಟು. ಇರುವುದರಲ್ಲೆ ಕಾಣಬೇಕಿದೆ. ಈ ಕಾಣುವುದು ಎನ್ನುವ ಪದ ವಿಶೇಷವಾದದ್ದು. ನಾನು ಒಂದು ಬಗೆಯಲ್ಲಿ ಎದುರಿಗಿರುವುದನ್ನು ಕಾಣಬಹುದು, ಮತ್ತೊಬ್ಬರಿಗೆ ಅದು ಬೇರೆಯದೇ ರೀತಿಯಲ್ಲಿ ಕಾಣಬಹುದು. ಈ ಕಾಣುವುದು ಎನ್ನುವ ಪದವನ್ನ ನಾನು ಬಹಳ ಎಚ್ಚರಿಕೆಯಿಂದ ಬಳಸುತ್ತಿದ್ದೇನೆ. ಹೆಚ್ಚಿನ ವಿವರಣೆ ಸಾದ್ಯವಾಗುತಿಲ್ಲ. ಎದುರಿಗಿರುವ ವಸ್ತುವಿನಲ್ಲೆ, ದಕ್ಕಿದ ಅನುಭವದಲ್ಲೆ ನಮಗೆ ಕಾಣುವುದಕ್ಕೊಂದಿದೆ. ಅನುಭವಗಳನ್ನು ಪುನಃ ನಿರ್ಮಿಸಿ ಬರೆಯಹೊರಟಾಗ ಕಾಣುವುದು ಬೇರೆಯದೇ ಹಂತ ತಲುಪಲಿಕ್ಕುಂಟು. ನೋಟ ಸೂಕ್ಷ್ಮವಾದಷ್ಟೂ ಇರುವಿಕೆಯು ಹಲವು ಪದರಗಳಲ್ಲಿ ತೆರೆದುಕೊಳ್ಳತೊಡಗುತ್ತವೆ. ಹೀಗೆ ಕಾಣುವುದೇ ಈ ಅಲೆಮಾರಿತನದ ಉದ್ದೇಶವೋ ಏನೋ ಎಂದು ಆಲೋಚಿಸುತ್ತಾ ಕೋರಮಂಡಲ್ ರೈಲು ಹತ್ತಿ ಕೋಲ್ಕತ್ತಾ ಕಡೆಗೆ ಹೊರಟೆವು.


ವಿಸರ್ಜನೆ

                                        

ಕಾಳೀ, ನೀನೂ ಮಣ್ಣೇನ
ಏನು ಸೋಜಿಗವೆ ನಿಂದು
ಒಳಗೆಲ್ಲಾ ಬರೀ ಹುಲ್ಲು
ವಿಸರ್ಜನೆಗೆ ಹೂಗ್ಲಿ 
ಹರಿಯುತ್ತಲೇ ಇದ್ದಾಳೆ
ಜನಜಂಗುಳಿ
ಎಲ್ಲೆಲ್ಲೂ ಆರತಿ ಬೆಳಕು
ನೀರೊಳಗಿನ ಮೀನು ಕಂಡೀತೆ
ಒಬ್ಬನೇ ನಿಂತಿದ್ದೀನಿ ದೂರದಲ್ಲಿ
ಕೆಂಪು ದಾಸವಾಳ ಕೈಲಿಡಿದು
ಕರಗಿದ ಮೇಲೆ ಬರುತ್ತೀಯ
ಒಂದಿಷ್ಟು ಹರಟೋಣವಂತೆ

ರಥಬೀದಿ

                                        

ಮರೆಯಾಗಿದೆ  ರಥಬೀದಿ
ಹಣೆಯಲ್ಲಿನ ವಿಭೂತಿ
ಅಳಿಸಿದಂತೆ ಮಳೆನೀರಲ್ಲಿ
ಒಂದೇ ಹೊಡೆತಕ್ಕೆ
ತುಂಬಿದೆ ನೀರು ಎಲ್ಲೆಲ್ಲೂ
ಕಾಣೆಯಾಗಿದ್ದಾಳೆ - ಸಿಕ್ಕಿಲ್ಲ
ಕಪಾಲಿ, ಸ್ಮಶಾನ ದೂರ
ಅದೂ ಮುಳುಗಿರಬಹುದು
ಇದ್ದಾರ ಯಾರಾದರೂ
ಬಿಕ್ಷೆ ಹಾಕಲಿಕ್ಕೆ 
ಈಗಲೂ ಬೇಡಲಿಕ್ಕುಂಟ
ನಾನೂ ನೀರಲ್ಲಿ ಮುಳುಗಿದ್ದೇನೆ
ಉಸಿರುಕಟ್ಟಿದೆಯಾದರೂ ಹಸಿವಿದೆ
ಕೊಡುತ್ತೀಯ ನೀನು ಬೇಡಿತಂದಿದ್ದರಲ್ಲಿ
ಸ್ವಲ್ಪವನ್ನಾದರೂ
ಓ ಕಪಾಲಿ