ಮುಖಾಮುಖಿ


                                                                               

"ಬೆಳಗಾಯ್ತು ಏಳೋ, ಇಗೋ ಏಳಲಿಲ್ಲ ಅಂದ್ರೆ ನೀರು ತಗೊಂಡು ಬಂದು ಸುರೀತೀನಿ"
ಅಂತ ಅಣ್ಣ(ಅಪ್ಪ) ಎಷ್ಟೇ ಹೇಳ್ತಾ ಇದ್ದರೂನೂ ಕಾಲ ಬಳಿ ಇದ್ದ ಹೊದಿಕೆಯೊಳಗೆ ಮುಖ ಅಡಗಿಸಿಟ್ಟು ಮಲಗಿಬಿಡೋನು. ಅಪ್ಪ ಬೇರೆ ಕಡೆ ಹೋದರೆ ಅಜ್ಜಿ ತನ್ನದೂ ಹೊದಿಕೆ ಹೊದ್ದಿಸಿ ಮುದ್ದಿಸೋಳು. ಆ ಚಳೀಲಿ ಬೆಚ್ಚಗೆ ಹೊದಿಕೆ ಹೊದ್ದು ಮಲಗಿರ್ಬೇಕಾದ್ರೆ ಅದೆಷ್ಟು ಕನಸುಗಳೋ, ಕಬ್ಬಡಿ ಆಡೋವಾಗ ನಾಲ್ಕು ಜನನ್ನ ಒಬ್ಬನೆ ಎತ್ತಿ ಕೆಡವಿದ ಹಾಗೆ, ಕೈಗಳನ್ನ ಪಟ ಪಟ ಅಂತ ಹಕ್ಕಿತರ ಹೊಡೀತ ಹೊಡೀತ ಮೇಲೆ ಹಾರ್ತ ಇರೋ ಹಾಗೆ, ಮಾಯಬಜಾರ್ ಸಿನಿಮಾದಲ್ಲಿ ಆಯಪ್ಪನ  ಬಾಯೊಳಗಡೆಗೆ ಅಷ್ಟೊಂದು ತಿಂಡಿ ಅದರಷ್ಟಕ್ಕೆ ಅದೇ ಹೋಗ್ತಿತ್ತಲ್ಲ ಆ ರೀತಿ, ಅಜ್ಜಿ ಅಮ್ಮ ತಿಂಡೀನ ತಂದಿಡ್ತಾ ಇದ್ದರೆ ಬಾಯೊಳಗೆ ನೇರವಾಗಿ ಹೋಗ್ತ ಇರೋ ರೀತಿ, ನಾಲ್ಕು ಏರೋಪ್ಲೇನ್ ಚಿಟ್ಟೆಗಳನ್ನ ಹಿಡ್ಕೊಂಡು ಆಡಿಸ್ತಾ ಇರೋ ರೀತಿ,  ಕನಸು ಕಾಣ್ತನೇ ಕನಸಿನಲ್ಲಿ ಕನವರಿಸ್ತಾ, ಏಡಿ ಅಂತಾನೋ, ಕಂಬಾಲಪ್ಪನ್ ಗುಡ್ಡ ಅಂತಾನೋ ಅಂದು ಬಿಡೋನು. ಅಮ್ಮಂಗೆ ಕೇಳಿಸಿದ್ರೆ
" ಯಾಕೋ ನೆನ್ನೆ ಏಡಿ ಹಿಡೀಲಿಕ್ಕೆ ಹೋಗಿದ್ಯ, ಇಲ್ಲ ಕಂಬಾಲಪ್ಪನ್ನ ಗುಡ್ಡಕ್ಕೆ ಹೋಗಿದ್ಯ, ನಿಮಣ್ಣಂಗೆ ಹೇಳ್ತೀನಿ, ಕಾಲು ಮುರೀತಾರೆ"
ಅಂತ ಬೆಳೆಗ್ಗೇನೆ ಶುರುಮಾಡಿಬಿಡುತ್ತಿದ್ದಳು. ಹೀಗೆ ಕನಸಿನ ಲೋಕಕ್ಕೂ ವಾಸ್ತವದ ಲೋಕಕ್ಕೂ ವ್ಯತ್ಯಾಸ ಅರಿಯದೆ, ಆ ಕನಸಿನಲ್ಲೆ ಇರಬೇಕಾದರೆ, "ವೆಂಕಟರಮಣ ಗೋವಿಂದಾ ಗೋssವಿಂದ" ಅಂತ ಜೋರು ಜಾಗಟೆ ಬಾರಿಸ್ತಾ ಶಂಖ ಊದುತ್ತ ಎದುರಿಗೆ ದಾಸಯ್ಯ ನಿಂತಿರುತ್ತಿದ್ದ. ನನ್ನ ಕನಸನ್ನ ಭಗ್ನ ಮಾಡಿದ ದಾಸಯ್ಯನ ಮೇಲೆ ಭಯಂಕರ ಕೋಪಗೋಡು ಎದ್ದು ಬಿಟ್ಟಾಗ
"ಬಲಗಡೇ ಏಳೋ ಅಂತ ಎಷ್ಟ ಸರೀನೋ ನಿಂಗೆ ಹೇಳೋದು"
ಅಂತ ಅಮ್ಮ ಆಗಲೇ ಎದ್ದಿದ್ದ ನನ್ನನ್ನ ಮತ್ತೇ ಮಲಗಿಸಿ ಬಲಗಡೆ ಏಳಿಸಿದ್ದಕ್ಕೆ,
"ಅಮ್ಮ ನಾನು ದೊಡ್ಡೋನಾಗಿದ್ದೀನಿ, ನೀ ಹೀಗೆಲ್ಲ ಎಲ್ಲರ ಮುಂದೇನು ಬೈಬೇಡ"
ಅಂತ ಅಂದ್ರೆ ಈ ದಾಸಯ್ಯ ಅಮ್ಮ ಇಬ್ಬರೂ ನಕ್ಕುಬಿಡೋರು. ಆಮೇಲೆ ಅಮ್ಮ ಎತ್ತಿ ಮುದ್ದಿಸಿದಾಗ ನಾನು ದೊಡ್ಡವನಾಗಿದ್ದ ಸಂಗತಿ ಮರೆತು, ಅಮ್ಮನ ಸೊಂಟ ಹತ್ತಿ ಅಲ್ಲೂ ಮಲಗಿದಾಗ, "ನನ್ನ ಮುದ್ದಿನ ಕೂಸು" ಅಂತ ಹೇಳ್ತಾನೆ ಬಚ್ಚಲಿಗೆ ಕರ್ದುಕೊಂಡು ಹೋಗೋಳು. ಹೀಗೆ ಪ್ರತಿ ಶನಿವಾರ ನಾನು ದಾಸಯ್ಯನ್ನ ನೋಡ್ತಾ ಇದ್ದೆ.

ಬಿಳಿ ಪಂಚೆ. ಅದ್ರ ಮೇಲೆ ಬಿಳಿ ಪೈಜಾಮ. ಬಿಳಿ ಅಂತ ನಾವು ಅನ್ನಬೇಕು ಅಷ್ಟೆ. ಅದು ಪೂರ ಬಿಳಿ ಅಲ್ಲ. ಮಾಸಿದ ಬಿಳಿ. ಅದಕ್ಕೆ ಸರಿ ಹೊಂದುವಂತೆ ಬಿಳಿ ಪೇಟ. ಹಣೆ ಮೇಲೆ ಒಪ್ಪಿ ತಿದ್ದಿದ ಎರೆಡು ಬಿಳಿ ನಾಮಗಳ ಮದ್ಯ ಒಂದು ಕೆಂಪು ನಾಮ. ಕೊರಳೊಳಗೊಂದಿಷ್ಟು ಮಾಲೆ. ಕೈಯಲ್ಲಿ ಗರುಡಗಂಬ ಅದರಲ್ಲಿ ಉರಿಯೋ ದೀಪ, ಅದಕ್ಕೆ ಮೆತ್ತಿಕೊಂಡಿರೋ ಕಪ್ಪು ಕಾಟಿಗೆ, ಬುಜಕ್ಕೆ ಜೋಳಿಗೆ, ಒಂದು ನವಿಲು ಗರಿ.
ನಾನಾಗ ಆರು ವರ್ಷದವನಿರಬೇಕು. ಮನೆಯಲ್ಲಿ ಒಬ್ಬನೇ, ಆದ್ದರಿಂದ ನಾನೇ ರಾಜ. ನೋಡೋಕೆ ಗುಂಡಾಗಿ ಮುದ್ದು ಮುದ್ದಾಗಿ(ಕೆಲವೊಮ್ಮೆ ಮೊದ್ದಾಗಿ) ಇದ್ದೆ. ಕಾಫಿ ಬಣ್ಣದ ಮೇಲೆ ಬಿಳಿ ಅಡ್ಡ ಪಟ್ಟಿಗಳಿದ್ದ ಚಡ್ಡಿ ಹಾಕಿ ಮೇಲೊಂದು ಬಿಳೀ ಬನಿಯಾನ್ ತೊಟ್ಟು, ಸೊಂಟದಮೇಲೆ ಕೈಯಿಟ್ಟುಕೊಂಡು ದಾಸಯ್ಯನ ಪ್ರತಿ ಚಹರೆಯನ್ನ ನೋಡುತ್ತಿರುವಾಗ, ನನ್ನನ್ನ ನೋಡಿ ನಗುತ್ತ, ಆ ನಗುವಿಗೆ ನಾ ಮತ್ತೆ ನಕ್ಕರೆ, ಮುಖವನ್ನ ಚಿತ್ರ ವಿಚಿತ್ರದ ಭಂಗಿಗೆ ತಂದು ನಗಿಸಲಿಕ್ಕೆ ಪ್ರಯತ್ನಿಸ್ತಾ ಇರೋ ವೇಳೆ ಅಮ್ಮ ಒಳಗಿನಿಂದ ಅಕ್ಕಿ ತಂದು ದಾಸಯ್ಯನ ಜೋಳಿಗೇಗೆ ಹಾಕೋಳು. "ಒಳ್ಳೇದಾಗ್ಲೀ ತಾಯಿ" ಅಂತ ಹೇಳ್ತಾ ಶುಭ್ರವಾದ ನಗುವೊಂದನ್ನ ನಕ್ಕು ಶಂಖ ಊದಿ ಜಾಗಟೆ ಬಾರಿಸಿ ಹೊರಟು ಬಿಡೋನು. ಹೀಗೆ ಹಿಂತಿರುಗಿ ಹೋಗುತ್ತಿದ್ದ  ದಾಸಯ್ಯನ್ನ ನೋಡುತ್ತಾ ಅಂದಿನ ನನ್ನ ಜಗತ್ತು ತೆರೆದುಕೊಳ್ಳೋದು. ಪಕ್ಕನೆ ಏನೋ ಹೊಳೆದು ಅಮ್ಮನ ಬಳಿ ಓಡಿ ಏನೋ ಕೆಲಸದಲ್ಲಿ ಇರ್ತಿದ್ದ ಅಮ್ಮನ ಸೆರಗನ್ನ ಕಿತ್ತು ಹಟ ಮಾಡಿದ್ರೆ,
" ಏನೋ ನಿನ್ನ ಗಲಾಟೆ"
"ಅಮ್ಮ, ದಾಸಯ್ಯ ಯಾಕೆ ಶಂಖ ಊತ್ತಾನೆ..? ಅಮ್ಮ ಅವ್ನ ಶಂಖದಲ್ಲಿ ಅದೆಂಗೆ ಶಬ್ದ ಬರುತ್ತಮ್ಮ, ಅದೂ ಪೂ ಪೂ ಅಂತ ಊದಿದ್ರೆ..?"
ಅಂದರೆ ನಿಮ್ಮ ಅಜ್ಜಿಯನ್ನ ಕೇಳು ಅಂತಲೋ, ಆಡ್ಕೋ ಹೋಗು ಅಂತಲೋ ಕಳ್ಸಿ ಬಿಡೋಳು. ಸ್ವಲ್ಪ ಹಟ ಹಿಡಿದ್ರೆ, ಅಡುಗೆ ಮನೇಲಿ ಸಾಲಾಗಿ ಜೋಡಿಸಿಟ್ಟಿರುತ್ತಿದ್ದ ಯಾವುದೋ ಡಬ್ಬಿಯಿಂದ ಏನಾದ್ರೂ ತಿಂಡಿ ಕೊಟ್ಟು ತಿನ್ನೋಗು ಅನ್ನೋಳು. ಹಾಗೆ ತಿನ್ನೋ ಹಂಬಲದಲ್ಲಿ, ಆ ರುಚಿಯಲ್ಲಿ ಕೇಳಿದ ಪ್ರಶ್ನೆಯನ್ನ ಮರೆತೇ ಬಿಡುತ್ತಿದ್ದೆ.

ದಾಸಯ್ಯನ ಬಳಿ ಒಂದು ನವಿಲುಗರಿ ಇತ್ತು. ನನಗೆ ಆ ನವಿಲು ಗರೀನ ನೋಡಿದಾಗೆಲ್ಲ ಆ ನವಿಲುಗರಿಯನ್ನ ನಾ ಇಟ್ಟುಕೋಬೇಕು ಅಂತ ಆಸೆ ಆಗ್ತಾ ಇತ್ತು. ನನ್ನ ಜೊತೆ ಆಡ್ತಾ ಇದ್ದ ಯಾರ ಬಳೀನೂ ಅಂತ ನವಿಲುಗರಿ ಇರಲಿಲ್ಲ. ಅದೂ ಅಷ್ಟು ದೊಡ್ಡದು ಇರಲಿಲ್ಲ. ಅದೆ ನಾನು ಇಟ್ಟುಕೊಂಡರೆ ಎಲ್ಲರೂ ನನ್ನ ಹತ್ತಿರಕ್ಕೆ ಬರ್ತಾರೆ, ಆಗ ನಾನು ಅವ್ರನ್ನ ಯಾವ ಆಟಕ್ಕೆ ಸೇರಿಸ್ಕೋ ಬೇಕು ಅಂದರೆ ಆ ಆಟಕ್ಕೆ ಸೇರಿಸ್ಕೋತಾರೆ ಅನ್ನೋ ಆಸೆ. ಅಷ್ಟೇ ಅಲ್ಲ. ಅದು ಎಷ್ಟು ಚೆನ್ನಾಗಿತ್ತು ಅಂದರೆ ಅದ್ರ ಬಣ್ಣ ಬಹ್ಳಾನೇ ಆಕರ್ಷಿಸೋದು. ದಾಸಯ್ಯನ ಬಳಿಯಿಂದ ಹೇಗಾದ್ರೂ ಮಾಡಿ ಆ ಗರೀನ ಪಡಿಬೇಕು ಅಂತ ಬಹ್ಳ ಆಸೆ ಪಟ್ಟೆ. ಒಂದು ದಿನ
"ದಾಸಯ್ಯ, ಆ ನವಿಲು ಗರಿ ಕೊಡೋ"
"ಯಾಕೆ ಸಾಮಿ"
"ನಂಗೆ ಬೇಕು. ಅದ್ರ ಜೊತೆ ನಾ ಆಟ ಆಡ್ತೀನಿ. ನಿಂಗೇತಕ್ಕೆ ಹೇಳು, ನೀನು ದೋಡ್ಡವ್ನಾಗಿ ಹೋಗಿದ್ದೀಯ. ನಾನು ಚಿಕ್ಕೋನು, ನಂಗೆ ಕೊಡೋ"
"ಇಲ್ಲ ಸಾಮಿ, ನಾನು ಅದನ್ನ ಅಂಗೆಲ್ಲ ಕೊಡ್ಲಿಕ್ಕಿಲ್ಲ. ಅದು ದೇವ್ರ ಪರ್ಸಾದ ಸಾಮಿ"
"ಅಯ್ಯೋ, ದಾಸಯ್ಯ ಒಂದು ಕೆಲ್ಸ ಮಾಡುವ, ನಂಗೆ ಇವತ್ತು ನೀನು ಆ ನವಿಲು ಗರಿ ಕೊಡು. ನಾನು ಅದನ್ನ ನಮ್ಮನೆ ಪುಸ್ತಕದಲ್ಲಿ ಇಟ್ಟು ಮರಿ ಮಾಡ್ಕೋತೀನಿ. ಮರೀನ ನಾನಿಟ್ಟುಕೋತೀನಿ. ಅದರ ಅಮ್ಮನ್ನ ನಾನೇ ನಿಂಗೆ ಕೊಡ್ತೀನಿ. ಈಗ ಕೊಡ್ತೀಯ"
"ಅಂಗೆಲ್ಲ ನವ್ಲುಗರಿ ಮರಿ ಆಕ್ಲಿಕ್ಕಿಲ್ಲ ಸಾಮಿ"
"ಓಗೋ ದಾಸಯ್ಯ ನಿಂಗೇನೂ ಗೊತ್ತೇ ಇಲ್ಲ. ನಂಗೊಮ್ಮೆ ಕೊಟ್ಟು ನೋಡು, ನಾ ಮರಿ ಹಾಕ್ಸಿ ತೋರಿಸ್ತೀನಿ"
"ಇಲ್ಲ ಸಾಮಿ ಅಂಗೆಲ್ಲ ಕೊಡ್ಲಿಕ್ಕಿಲ್ಲ"
"ಹೋಗೋ ದಾಸಯ್ಯ. ನಮ್ಮನೆಗೆ ಬರ್ಬೇಡ"
ಅಂತ ಗದುರಿಸಿ ಕಳಿಸಿಬಿಟ್ಟಿದ್ದೆ. ಸ್ವಲ್ಪ ದಿನ ಆದ್ಮೇಲೆ ಯಾರೋ ನಂಗೆ ನವಿಲು ಗರೀನ ತಂದು ಕೊಟ್ಟಿದ್ದರು. ನಾನು ದಾಸಯ್ಯನ್ನ ಕೇಳೋದನ್ನ ಬಿಟ್ಟು ಬಿಟ್ಟಿದ್ದೆ. ಆದ್ರೆ ನಾನು ನಮ್ಮನೇಗೆ ಬರ್ಬೇಡ ಅಂತ ಹೇಳಿದ್ರೂನು, ದಾಸಯ್ಯ ಪ್ರತೀ ಶನಿವಾರ ಬರ್ತಾ ಇದ್ದ. ಅಕ್ಕಿ ತಗೊಂಡು ಹೋಗ್ತಾ ಇದ್ದ. ಯಾವಾಗಾದ್ರು ಅಮ್ಮ ಹೊರ್ಗೆ ಹೋದ್ರೆ ದಾಸಯ್ಯ ಬಂದರೆ ಅಕ್ಕಿ ಹಾಕು ಅಂತ ನಂಗೆ ಹೇಳಿ ಹೋಗೋಳು.

ಹಬ್ಬ ಅಂದ್ರೆ  ಸಂಭ್ರಮ ನಂಗೆ. ಅದೂ ದೀಪಾವಳಿ. ಹೊಸ ಬಟ್ಟೆ ಹಾಕ್ಕೊಂಡು ಪಟಾಕಿ ಹೊಡೀಬೋದು. ಆಮೇಲೆ ನನ್ನ ಹತ್ರ ಇರೋ ಪಟಾಕಿನೆಲ್ಲ ಎಲ್ಲಾರ್ಗೂ ತೋರಿಸ್ಬೋದು. ಅದ್ರ ಸಂಭ್ರಮಾನೇ ಬೇರೆ. ನನ್ನಪ್ಪಂಗೆ ವ್ಯರ್ಥವಾಗಿ ಪಟಾಕಿಗೆಲ್ಲಾ ಹಣ ಹಾಕೋದು ಸ್ವಲ್ಪಾನೂ ಇಷ್ಟ ಇರ್ಲಿಲ್ಲ. ಆದ್ರೆ ನಾನು ಹಟ ಮಾಡಿದ್ದಕ್ಕೆ, ತಾತ ಸ್ವಲ್ಪ ಪಟಾಕಿ ತಂದು ಕೊಟ್ಟಿದ್ರು. ತಾತ ಹೊಸ ಪಟಾಕಿ ಹೊಡ್ಯೋ ಪಿಸ್ತೂಲು ತಂದು ಕೊಟ್ಟಿದ್ರು. ಅದನ್ನ ತಾತ ಹಿಂದಿನ ದಿನ ಪೇಟೇಗೆ ಹೋದಾಗ ತಂದಿದ್ರಿಂದ ಅದು ನಮ್ಮೂರಲ್ಲಿ ಸಿಗೋ ಪಿಸ್ತೂಲಿಗಿಂತ ದೊಡ್ಡದಾಗಿ ಇತ್ತು. ಅದಕ್ಕಿ ಪಟಾಕಿ ಮದ್ದು ಇಟ್ಟು ಡಬ ಡಬ ಅಂತ ಶಬ್ದ ಮಾಡ್ತ ಊರೆಲ್ಲ ಸುತ್ತೋಕೆ ಹೊರ್ಡುತ್ತಿದ್ದೆ.

ನನ್ನ ತಾತಂಗೂ ಹಬ್ಬದ ಸಂಭ್ರಮ . ತಾತ ಅವರ ಗೆಳೆಯರನ್ನೆಲ್ಲಾ ಸೇರಿಸಿ ಪಕ್ಕದ ಮನೇಲಿ ಇಸ್ಪೀಟಾಟ ಆಡೋರು. ತಾತಂಗೆ ಬೀಡಿ ಸೇದೋ ಹವ್ಯಾಸ ಇದ್ದದ್ರಿಂದ ಮನೇಲಿ ಅಜ್ಜಿ ಬಯ್ತಾರೆ ಅಂತ ಪಕ್ಕದ ಮನೇಲಿ ಆಟ ಆಡ್ತಾ ಬೀಡೀ ಸೇದುತ್ತ ಇರೋರು. ನಾನು ಮನೇ ಹತ್ತಿರ ಪಿಸ್ತೂಲಿನೊಟ್ಟಿಗೆ ಆಟ ಆಡ್ತ ಇರ್ಬೇಕಾದ್ರೆ ಅಪ್ಪ ಯಾಕೋ ತಾತನ್ನ ಕರ್ದು ಬಿಟ್ಟು ಬಾ ಅಂತ ಅಂದ್ರು. ನಾನು ಪಟಾಕಿ ಶಬ್ದ ಮಾಡ್ತಾನೇ ಹೋದೆ. ಪಟಾಕಿ ಹೊಡೀತ ಹೋಗಿ, ತಾತನ ಬಳಿ ಅಪ್ಪ ಕರೀತೀದ್ದಾರೆ ಬರ್ಬೇಕಂತೆ ಅಂತ ಹೇಳಿದ್ರೂನು, ತಾತ ತನ್ನ ಆಟದಲ್ಲಿ ತಲ್ಲೀನನಾಗಿ ಹೋಗಿದ್ದ. ವಾಪಸ್ಸು ಒಬ್ಬನೇ ಹೋದ್ರೆ ಮತ್ತೆ ಅಣ್ಣ ವಾಪಸ್ಸು ಕಳಿಸ್ತಾರೆ ಅಂತ ತಾತನ್ನ ಹಟ ಮಾಡಿ ಕೈ ಹಿಡಿದು ಎಳೆದುಕೊಂಡು ಹೊರಟೆ. ಮೆಟ್ಟಿಲಿಳುವುವ ವೇಳೆ ಅದೇನಾಯಿತೋ ತಾತ ಒಂದು ಮೆಟ್ಟಿಲಲ್ಲಿ ನನ್ನ ಪುಟ್ಟ ಕೈಗಳನ್ನ ಗಟ್ಟಯಾಗಿ ಹಿಡಿದು ಕುಸಿದು ಬಿದ್ದರು. ಜೋರು ಹಿಡಿದದ್ದರಿಂದ ಕೈ ನೋಯುತ್ತಿತ್ತು .ತಾತ ತಾತ ಅಂತ ಕರೆದೆ. ಏನೂ ಕೇಳದವರಂತೆ ಸುಮ್ಮನಾಗಿಹೋಗಿದ್ದರು. ನನಗೆ ಭಯ ಆಯ್ತು. ತಾತ ನನ್ನ ಕೈಗಳನ್ನ ಜೋರಾಗಿ ಹಿಡಿದಿದ್ರು. ನಾನು ಜೋರಾಗಿ ಕರೆದಿದ್ದಕ್ಕೆ, ತಾತನ ಗೆಳೆಯರು ಬಂದರು, ಅಣ್ಣಾನೂ ಓಡಿ ಬಂದ. ನನ್ನ ಕೈಯೊಳಗೆ ಇದ್ದ ತಾತನ್ನ ಅವರು ಬಿಡಿಸಿ, ನನ್ನನ್ನ ಪಕ್ಕಕ್ಕೆ ಸರಿಸಿ ನಾನು ನೋಡುತ್ತಾ ಇರೊ ಹಾಗೆ ತಾತನ್ನ ಐದಾರು ಜನ ಎತ್ತಿಕೊಂಡು ಹೊರಟರು. ನನಗೆ ಗಾಬರಿ. ಆಶ್ಚರ್ಯ. ಏನು ನಡೀತಿದೆ ಅಂತಾ ತಿಳೀತಿಲ್ಲ. ಎಲ್ಲರೂ ಜೋರು ಜೋರಾಗಿ ಓಡಾಡುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮನೆಯ ಮುಂದೆ ಹಲವು ಜನ ಸೇರಿಬಿಟ್ಟರು. ಎಲ್ಲರ ಮುಖಗಳು ನಾನು ಹಿಂದೆ ನೋಡಿದ ಮುಖದಂತೆ ಕಾಣುತ್ತಲೇ ಇಲ್ಲ. ನಾನು ಸೀದ ಅಮ್ಮನ್ನ ಹುಡುಕಿ ಹೊರಟು ಅಮ್ಮನ್ನ ತಬ್ಬಿಕೊಂಡು ವಾರೆ ನೋಟದಲ್ಲಿ ಮಂಚದ ಮೇಲೆ ಮಲಗಿದ್ದ ತಾತನ್ನ, ಸುತ್ತ ನೆರೆದಿದ್ದ ಜನಗಳನ್ನ ನೋಡುತ್ತಿದ್ದೆ. ಕೆಲವೇ ಕ್ಷಣಗಳಲ್ಲಿ ಚಿತ್ರಗಳೆಲ್ಲಾ ಬದಲಾಗಿ ಹೋಯಿತು. ಜನಗಳೆಲ್ಲಾ ಸೇರಿದರು. ಎಲ್ಲರೂ ಅಳುತ್ತಿದ್ದಾರೆ. ಅದ್ಯಾಕೆ ಎಲ್ಲರೂ ಅಳುತ್ತಾ ಇದ್ದಾರೆ, ಎಲ್ಲರಿಗೂ ಒಮ್ಮೆಗೇ ಯಾರು ಪೆಟ್ಟು ಕೊಟ್ಟರೋ ಪಾಪ ಅಂತ ಒಮ್ಮೆ ಅನ್ನಿಸಿ, ಮತ್ತೊಮ್ಮೆ ಎಲ್ಲರೂ ಒಮ್ಮೆಗೇ ಏನಕ್ಕೋ ಹಟ ಹಿಡಿದಿದ್ದಾರೆ ಅಂತ ಅಂದುಕೊಂಡೆ. ತಕ್ಷಣ ನನ್ನ ಜೇಬಿನಲ್ಲಿದ್ದ ಪಟಾಕಿ ಪಿಸ್ತೂಲನ್ನ ಮುಟ್ಟಿ ನೋಡಿಕೊಂಡು ಒಳಗಡೆಯಿಟ್ಟಿದ್ದ ಪಟಾಕಿಯನ್ನ ಬಚ್ಚಿಟ್ಟು ಬಂದೆ. ಕಡೆಗೆ ಅಮ್ಮನೂ ಅಳಲಿಕ್ಕೆ ಶುರು ಮಾಡಿದಾಗ
"ಅಮ್ಮ ಯಾಕಮ್ಮ ಎಲ್ಲರೂ ಅಳ್ತಾ ಇದ್ದಾರೆ"
"ನಿಮ್ಮ ತಾತ ದೇವರ ಹತ್ತಿರಕ್ಕೆ ಹೋದರು ಕಣೋ"
"ಹಾಗಾದ್ರೆ ಮತ್ತೆ ತಾತ ಬರೋಲ್ವ ಅಮ್ಮ"
"ಇಲ್ಲಪ್ಪ"
ಅಂದಾಗ ನನಗೂ ಅಳು ಬಂತು.
ಅಯ್ಯೋ ತಾತ ದಿನಾ ನನ್ನ ರಂಗ ಬಾರೋ ರಂಗ ಬಾರೋ ಅಂತ ಆಟ ಆಡಿಸ್ತಾ ಇದ್ದ. ಇನ್ನೂ ಆಡಿಸೋರೇ ಇಲ್ಲ. ತಾತಂದು ನಾರದನ ವೇಷ ಹಾಕಿ ನಾಟಕದಲ್ಲಿರೋ ಫೋಟೋನೂ ಇತ್ತು. ತಾತ ನಂಗೂ ಬಣ್ಣ ಹಚ್ಚಿ ವೇಷ ಹಾಕ್ತೀನಿ ಅಂತ ಹೇಳಿದ್ದ, ಅದೂ ಇಲ್ದೆ ಹೋಯ್ತು. ತಾತ ಇನ್ನು ಬರ್ದೇ ಹೋದ್ರೆ ಮುಂದಿನ ದೀಪಾವಳಿ ಹಬ್ಬಕ್ಕೆ ಹೊಸ ಪಿಸ್ತೂಲು ಸಿಗೋಲ್ಲ. ಛೆ ಅಂತ ಚಿಂತೆಗೀಡಾಗಿದ್ದೆ. ತುಂಬಾ ಜನ ಸೇರಿದ್ದರಿಂದ ನಮ್ಮನೇಲಿ ಇನ್ನೊಂದು ಹಬ್ಬ ಮಾಡ್ತಾ ಇದ್ದಾರೆ ಅಂತ ಅಂದ್ಕೊಂಡೆ. ಈ ಬಾರಿ ಇನ್ನೂ ದೊಡ್ಡ ಹಬ್ಬ ಅಂತಾ ಖುಶಿ ಆಗಿ ಆಡೋಕ್ಕೆ ಹೊರಟೆ.

ಆಗ ಮನೆ ಮುಂದೆ ಮತ್ತೆ ದಾಸಯ್ಯ ಬಂದ. ಅದೇ ಬಟ್ಟೆ, ಅದೇ ಶಂಖ, ಅದೇ ಜಾಗಟೆ, ಅದೇ ಮುಖ. ಹಿಂದೆ ಶನಿವಾರದ ದಿನ ಕಂಡ ಮುಖವೇ ಮತ್ತೆ. ದಾಸಯ್ಯ ಅಳುತ್ತಾ ಇರಲಿಲ್ಲ. ಒಳಗೋಗಿ ಅಮ್ಮಂಗೆ "ಅಮ್ಮ ದಾಸಯ್ಯ ಬಂದೀದಾನೆ" ಅಂತ ಕರೆದೆ. ಅಮ್ಮ ಕೇಳಿಸ್ಕೊಳ್ಳಲೇ ಇಲ್ಲ. ಅಮ್ಮ ಬಹಳ ಕೆಲಸ ಮಾಡ್ತಾ ಇದ್ದಳು. ಸರಿ ಅಂತ ನಾನೇ ಸೇರು ತೆಗೆದುಕೊಂಡು ಹೋಗಿ ಅಕ್ಕಿ ತುಂಬಿಸಿಕೊಂಡು ದಾಸಯ್ಯಂಗೆ ಹಾಕಲಿಕ್ಕೆ ಕೊಂಡೊಯ್ಯೊವಾಗ ಅಮ್ಮ ಬಂದು ಸೇರನ್ನ ಕಿತ್ತುಕೊಂಡು ಬಯ್ದು, ನಾಲ್ಕು ಏಟು ಕೊಟ್ಟು ಅತ್ತೆ ಬಳಿ ಕಳೀಸಿದ್ಲು. ಸ್ವಲ್ಪ ಹೊತ್ತಾದ ಮೇಲೆ, ಸ್ವಲ್ಪ ಜನ ತಾತನ್ನ ಹೊತ್ತುಕೊಂಡು ಎಲ್ಲಿಗೋ ಕರೆದುಕೊಂಡು ಹೋಗುತ್ತಾ ಇದ್ದರು. ಮುಂದೆ ಇದೇ ದಾಸಯ್ಯ ಜಾಗಟೆ ಹೊಡೀತ, ಶಂಖ ಊದುತ್ತಾ ಹೋಗುತ್ತಾ ಇದ್ದ. ದಾಸಯ್ಯನ ಹಿಂದೆ ನಾಲ್ಕು ಜನ ತಾತನ್ನ ಹೊತ್ತು ಕೊಂಡು ಹೋಗ್ತಾ ಇದ್ರು. ಅವರ ಹಿಂದೆ ಅದೆಷ್ಟೋ ಜನ ಸಾಲಾಗಿ ಹೋಗ್ತಾ ಇದ್ದರು. ಪಕ್ಕದಲ್ಲೇ ಇದ್ದ ಅಮ್ಮಂಗೆ "ಅಮ್ಮ ತಾತ ಯಾಕೆ ದಾಸಯ್ಯನ ಹಿಂದೆ ಹೋಗ್ತಾ ಇದ್ದಾರೆ" ಅಂತ ಕೇಳಿದಾಗ, ಅಮ್ಮನ ಕಣ್ಣುಗಳಲ್ಲಿ ನೀರಿತ್ತು. ಅಮ್ಮ ಉತ್ತರಿಸಲಿಲ್ಲ. ದೂರದಲ್ಲಿ ಹೊತ್ತೊಯ್ಯುತ್ತಿದ್ದ ತಾತನನ್ನ, ಅವರ ಹಿಂದೆ ಹೋಗುತ್ತಿದ್ದ ಜನಗಳನ್ನ ನೋಡುತ್ತಾ ಕಣ್ಣೊರಸಿಕೊಂಡಳು. ನಾನು ಮತ್ತೆ ಪ್ರಶ್ನೆಯನ್ನ ಕೇಳಲಿಲ್ಲ. ತಾತನ್ನ ದಾಸಯ್ಯನೇ ಕರೆದುಕೊಂಡು ಹೋದದ್ದು ಅಂತ ತೀರ್ಮಾನಿಸಿ ಬಿಟ್ಟೆ. ಮುಂದೆಂದೂ ದಾಸಯ್ಯನ್ನ ನಾನು ನೋಡಲೇ ಇಲ್ಲ.

ಎಲ್ಲಾ ನೆನೆಸಿಕೊಳ್ಳೋಕು ಕಾರಣ ಇತ್ತು. ಮೊನ್ನೆ ಹಳ್ಳೀಗೆ ಹೋಗಿದ್ದಾಗ ಹಳೇ ಫೋಟೋಗಳನ್ನ ನೋಡುತ್ತಾ ಇದ್ದೆ. ಅದರಲ್ಲಿ ನನ್ನ ಬಾಲ್ಯದ ಫೋಟೋ ಒಂದನ್ನ ನೋಡಿದೆ. ಅಂದು ಆ ಫೋಟೋ ಯಾಕೋ ಬಹಳ ಆಕರ್ಷಿಸಿತು. ತುಂಬಾ ಹೊತ್ತು ಅದನ್ನೇ ನೋಡುತ್ತಾ ಇದ್ದೆ. ಅವತ್ತು ರಾತ್ರಿ ನಂಗೊಂದು ಕನಸು ಬಿತ್ತು. ಕನಸಿನಲ್ಲಿ, ದೊಡ್ಡ ಅರವಿಂದ ಚಿಕ್ಕ ಅರವಿಂದ ಇಬ್ಬರೂ ಒಟ್ಟಿಗೆ ಬೇಟಿಯಾಗುತ್ತಾರೆ. ಊರು, ಕುಲ, ಗೋತ್ರ ಎಲ್ಲಾ ಪರಿಚೆಯಿಸಿಕೊಳ್ಳುತ್ತಾ, ನಾನು ಅರವಿಂದ ಎಂದು ಚಿಕ್ಕ ಅರವಿಂದನೂ ನಾನು ಅರವಿಂದ ಅಂತ ದೊಡ್ಡ ಅರವಿಂದನು ಹಟಕ್ಕೆ ಬೀಳುತ್ತಾರೆ. ಹಟ ಜಗಳವಾಗುವ ಹಂತಕ್ಕೆ ತಲುಪಿದಾಗ ದಾರೀಲಿ ಇದೇ ದಾಸಯ್ಯ ಶಂಖ ಊದುತ್ತಾ, ಜಾಗಟೆ ಬಾರಿಸ್ತಾ ಯಾರಿಗೋ ಕಾದಿರ್ತಾನೆ. ಇಬ್ಬರೂ ದಾಸಯ್ಯನನ್ನ ಬೇಟಿಯಾಗಿ ತಮ್ಮ ಸಮಸ್ಯೆ ಹೇಳಿ, ಯಾರು ಇದರಲ್ಲಿ ನಿಜವಾದ ಅರವಿಂದ ಅಂತ ಹೇಳಿ ಅಂದಾಗ, ಆತ ಒಂದು ದೊಡ್ಡ ಕನ್ನಡೀನ ತಂದು ಇದರಲ್ಲಿ ನೋಡಿಕೊಂಡು ನೀವೇ ತೀರ್ಮಾನಿಸಿ ಅಂದು ಯಾರೋ ಕರೀತಿದ್ದಾರೆ ಅಂತ ಹೊರಟು ಹೋಗುತ್ತಾನೆ. ಹೀಗೆ ಕೊಟ್ಟ ಕನ್ನಡಿಯಲ್ಲಿ ಚಿಕ್ಕ ಅರವಿಂದ ನೋಡಿಕೊಂಡಾಗ ದೊಡ್ಡ ಅರವಿಂದ ಕಾಣುತ್ತಾನೆ. ದೊಡ್ಡ ಅರವಿಂದ ನೋಡಿಕೊಂಡಾಗ ಚಿಕ್ಕ ಅರವಿಂದ ಕಾಣುತ್ತಾನೆ. ಅಷ್ಟು ಹೊತ್ತಿಗೆ ಎಚ್ಚರವಾಗಿ ಹೋಯಿತು. ಈ ಕನಸಿನ ತಳ ಬುಡ ಎರೆಡೂ ತಿಳೀಲಿಲ್ಲ.  ಆದರೆ ಅದರ ನೆನಪಲ್ಲಿ ನಂಗೆ ದಾಸಯ್ಯ ನೆನಪಾದ.  

2 ಕಾಮೆಂಟ್‌ಗಳು:

  1. ಬದಲಾದ ಕಾಲಮಾನದೊಂದಿಗೆ ನೆನಪುಗಳಲ್ಲಿ ದಾಸಯ್ಯ ಸಿಗುವುದು, ಕನ್ನಡಿಯಲ್ಲಿ ಚಿಕ್ಕ ಅರವಿಂದನಿಗೆ ದೊಡ್ಡ ಅರವಿಂದನೂ, ದೊಡ್ಡ ಅರವಿಂದನಿಗೆ ಚಿಕ್ಕ ಅರವಿಂದನೂ ಕಾಣಿಸುವುದು - ಈ ಪರಿಕಲ್ಪನೆಗಳೆಲ್ಲ ಇಷ್ಟವಾದವು. ಇಡೀ ನಿರೂಪಣೆಯಲ್ಲಿ ಬಾಲ್ಯದ ಸ್ಮೃತಿ ಎಲ್ಲ ಆಪ್ತ ಪರಿಸರದೊಂದಿಗೆ ಹದವಾಗಿ ನವಿರಾಗಿ ಮನಸ್ಸಿಗೆ ಹಿತನೀಡುವಂತಿದೆ. ಓದಿ ಖುಶಿಯಾಯಿತು.
    ನಿಮ್ಮ
    ನರೇಂದ್ರ

    ಪ್ರತ್ಯುತ್ತರಅಳಿಸಿ