ಮಂತ್ರ



ಇಲ್ಲಿ ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತೆ.

ಅರ್ಥವಾಗದ ಭಾಷೆಯ ಲಿಪಿ
ಅವ್ಯಕ್ತ ಚಿತ್ರಗಳಂತೆ ಕಾಣುತ್ತೆ,
ದೂಳಿಡಿದ ಹಳೆ X-rayಯನ್ನ ಬೆಳಕಿಗೊಡ್ಡಿದಾಗ
ಬರೀ ಎಲುಬುಗಳೇ ಕಾಣುತ್ತೆ ಹೃದಯವಿಲ್ಲದಂತೆ,
ಕಾರ್ಯಕಾರಣದ ಭ್ರಮನಿರಸನಕ್ಕೆ
ಸೂಳೇ ಮಗುವಿನಂತೆ ಕವಿತೆ ಹುಟ್ಟುತ್ತೆ.

ನನ್ನ ಕತೆಯ ಪಾತ್ರವೊಂದು ಸತ್ತಿದ್ದಕ್ಕೆ
ಸ್ಮಶಾನಕ್ಕೋಗಿ ಬಂದು
ಹತ್ತು ದಿನ ಸೂತಕದಲ್ಲಿದ್ದೆ.

ಒಂದೂರಲ್ಲಿ ಒಬ್ಬ ಮನುಷ್ಯ ಇದ್ದ
ನಾಟಕದ ಪಾತ್ರಕ್ಕೆ ಬಣ್ಣ ಹಚ್ಕೊಂಡು ಬದುಕ್ತಿದ್ದ
ಒಬ್ಬ ಹುಡ್ಗಿ ಆ ಪಾತ್ರಾನ ನೋಡಿದ್ದೇ
ಶರತ್ತೊಂದಾಕಿ ಮದುವೆಯಾಗಿಬಿಟ್ಳು
"ರಾತ್ರಿ ಮಲಗೋವಾಗ ಆ ಪಾತ್ರದ ಬಣ್ಣದಲ್ಲೇ ಮಲಗ್ಬೇಕು"
ಹುಡ್ಗಿ ತಾನೂ ಸುಂದರವಾಗಿ ಕಾಣಬೇಕೂಂತ
ಕನ್ನಡೀಗೇ ಬಣ್ಣ ಹಚ್ಚಿ
ನೋಡ್ತಾ ಕೂತ್ಲು.

ಪ್ರತಿಮೆ ರೂಪಕಗಳೆಲ್ಲಾ ಕನ್ನಡಿಯೆದುರು ಸಿಂಗರಿಸಿಕೊಳ್ಳುತ್ತಿರುವಾಗ
ಅರ್ಧ ಸುಟ್ಟ ಶವಕ್ಕೆ ಜೀವ ಬಂದಿದೆ
ಹಸ್ತ ಮೈಥುನದಿಂದ ಮಕ್ಕಳನ್ನುಟ್ಟಿಸುವ ಮಾರುಕಟ್ಟೆಯಲ್ಲಿ
ಬದುಕುತ್ತಿದ್ದೇನೆ
ನಿನ್ನ ಮಾಯಾ ನವಿಲುಗರಿಯಿಂದಲಾದರೂ
ಹುಟ್ಟಿಸಿಬಿಡು
ನಿಜವಾದ ಗಂಡು-ಹೆಣ್ಣನ್ನ

ಅನಾಥ ಸಾವಿನ ಮೂಖ ಮೌನಕ್ಕೆ
ಹುಟ್ಟು ತನ್ನ ತಾನೇ ಕಂಡು ಸಂಭ್ರಮಿಸಿತು
ಅರ್ಥವೆಂಬೋ ಉನ್ಮಾದದಲ್ಲಿ
ಆಕಾರಕ್ಕೆ ಧ್ಯಾನಿಸುತ್ತಿದ್ದೇನೆ

ಇಲ್ಲಿ ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತ?




2 ಕಾಮೆಂಟ್‌ಗಳು:

  1. ಸಮ್ ಭವಿಸ್ತು! ಸಂಭವಿಸ್ತು!! ದುರಹಂಕಾರಿಗಳು ದಂಗ್ ಫೌಂಡೆಡ್ಡು... !ಓಂಸ್ವಸ್ತಿ!

    ಪ್ರತ್ಯುತ್ತರಅಳಿಸಿ
  2. ಪ್ರಿಯ ಅರವಿಂದ್ ಅವರಿಗೆ
    ನಿಮ್ಮ 'ಮಂತ್ರ' ಪದ್ಯ ಚೆನ್ನಾಗಿದೆ, ಆದರೆ ಕೊನೆಯ ಕೆಲವೊಂದು ಸಾಲುಗಳು ಈಗಾಗಲೇ ಕೇಳಿದಂತೆ ಅನಿಸಿದುವು. ಆರಂಭ, ಬೆಳವಣಿಗೆ ಹೊಸದೆನಿಸಿದುವು.
    ಕೆ.ವಿ.ತಿರುಮಲೇಶ್

    ಪ್ರತ್ಯುತ್ತರಅಳಿಸಿ