೧.
ಸೀರಯಂಗಡಿ ಮುಂದೆ ಇದ್ದ ಹೆಣ್ಣುಗೊಂಬೆಯನ್ನು ಹೊತ್ತೋದವನು
ರಾತ್ರಿಯಲ್ಲಿ ನಿರ್ಜನ ಮಧ್ಯರಸ್ತೆಯಲ್ಲಿ
ವಿಗ್ರಹದ ಪಕ್ಕದಲ್ಲಿ ಸೀರೆಯುಡಿಸತೊಡಗಿದ
ನನಗೆ ಗಾಬರಿಯಾಗಿದೆ
ಆತ ನಿಜದ ವ್ಯಕ್ತಿಯ? ಪ್ರೇತಾತ್ಮವ?
ಹುಚ್ಚನ? ಙ್ಞಾನಿಯ?
ನಿನ್ನ ಮಾಂತ್ರಿಕ ತಂತ್ರ ವಿದ್ಯೆಗೆ
ನಾನೇ ಗಾಬರಿಗೊಂಡಿದ್ದೇನೆ
ಕಲಿಸಿದ್ದು ನಾನೇ ಇರಬೊಹುದು
ಉಪಸಂಹಾರಕ್ಕೆ ನೀನೇ ಬೇಕು
೨.
ವಿದ್ಯೆ ನನಗೆ ಅಸ್ಮಿತೆ ಹಾಗೂ ಅಹಂಕಾರ
ಅಚ್ಚರಿಗೊಳ್ಳುತ್ತೀರೆಂದು ಭಾವಿಸಿದ್ದೆ
ಗಾಬರಿಗೊಂಡಿದ್ದರ ಮರ್ಮ ತಿಳಿಯುತ್ತಿಲ್ಲ.
ಕಪ್ಪು ಬೆಕ್ಕು ಮಾಂತ್ರಿಕ ವಿದ್ಯೆಯಲ್ಲಿ ಶ್ರೇಷ್ಠ ಬಲಿ
ಮೊದಲು ಹುಡುಕಬೇಕು
ಕಪು ಬೆಕ್ಕು ಅಪರೂಪ
ಸಣ್ಣ ತಂತಿಯನ್ನಿಟ್ಟುಕೊಂಡು ತಣ್ಣಗಿನ ಹಾಲನ್ನಿಟ್ಟು
ಅದರ ಬರುವಿಕೆಯ ನಿರಂತರ ಧ್ಯಾನದಲ್ಲಿರಬೇಕು
ಬರುತ್ತೆ, ಬಂದೇ ಬರುತ್ತೆ, ಮೆಲ್ಲಗೆ
ಯಾರೂ ಇಲ್ಲವೆಂದು ಭಾವಿಸಿ
ಹಾಲು ಕುಡಿಯುತ್ತಿರುತ್ತೆ
ಅರ್ದ ಕುಡಿದಿದ್ದಾಗ ನೆಮ್ಮದಿಯಿಂದಿರುತ್ತೆ
ಆಗ ಎಳೆಯಬೇಕು ತಂತಿಯನ್ನ
ಚೀರುತ್ತೆ, ತೊಳಲಾಡುತ್ತೆ, ಒದ್ದಾಡುತ್ತೆ, ಪರಚಲು ಮೇಲೆ ಬರುತ್ತೆ
ಸೋತಾಗ ದೀನ ನೋಟದಿಂದ ನೋಡುತ್ತೆ
ಆಗ ಮನಸು ಕರಗತೊಡಗುತ್ತೆ
ಇಲ್ಲಿಯವರೆಗೆ ಎಲ್ಲ ಸಾಮಾನ್ಯನೂ ಮಾಡಬಲ್ಲ
ಅಯ್ಯೋ ಪಾಪ ಬಿಟ್ಟುಬಿಡುವ ಅಂತ ಅನ್ನಿಸುತ್ತೆ
ಆಗ
ಬಿಗಿಹಿಡಿದು ತಂತಿಯನ್ನ ಎಳೆಯಬೇಕು
ಅದರ ಕಡೆಯ ಕ್ಷಣಗಳನ್ನ ನಿಬ್ಬೆರಗಾಗದೆ ನೋಡಬೇಕು
ಸಾಯುವ ಕ್ಷಣಗಳಲ್ಲಿ ಆ ಕಣ್ಣುಗಳಲ್ಲಿ ಭೀಕರ ಕಠೋರತೆ ಕಾಣುತ್ತೆ
ಅಲ್ಲಿದೆ ನೋಡಿ ಮಾಂತ್ರಿಕ ಶಕ್ತಿಯ ಮಹೋನ್ನತ ಸಾಕ್ಷಾತ್ಕಾರ
ನಿಮಗೆ ಉಪಸಂಹರಿಸಬೇಕು ಅಷ್ಟೆ
ಮೂರ್ತಿ ಸ್ಥಾಪನೆಯ ಕೀರ್ತಿಗೋ
ಭಂಜನೆಯ ಶ್ರೇಷ್ಠತೆಗೋ
ಕಲಿಸಿದ್ದು ನೀವೆ...
ಉಪಸಂಹರಿಸುತ್ತೇನೆ,
ಬರುತ್ತೀರ
ಹೊರಗೆ ಹೋಗುವ....
ಕವಿ:- ಸಾವಯವ ಶಿಲ್ಪವು ಅನಿಶ್ಚಿತ ನಿಯಮಗಳ ದಾಸತ್ವವನ್ನ ಪಡೆದು ಮರಳಲಿ.
ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ