ಎರಡು ಕೋಡಿನ ಮೊಲ


"ಇಲ್ಲ, ನನಗೆ ಆ ಕ್ಷಣದಲ್ಲಿ ಯಾವುದೇ ಸಂಧಿಗ್ಧತೆ ಇರಲಿಲ್ಲ. ಸೀದಾ ಸಾಮಾನ್ಯ ಪರಿಸ್ಥಿತಿಯಂತೆ ಅನ್ನಿಸಿತ್ತು. ಅವತ್ತು ಬೆಳಗ್ಗೆ ಎದ್ದಾಗ ನನಗೆ  ಗಾಬರಿಯಾಗುವಷ್ಟು ಏನೂ ನೆನಪಿರಲಿಲ್ಲ. ರಾತ್ರಿ ವಿಚಿತ್ರ ಅನುಭವವಾಗಿತ್ತು. ರಾತ್ರಿ ಒಮ್ಮೆ ಎಚ್ಚರಾದಾಗ ಎಲ್ಲವೂ ಕರಗುತ್ತಿರುವಂತೆ ಭಾಸವಾಯಿತು. ಗೋಡೆಗಳು, ಮನೆ, ನಾ ಮಲಗಿದ್ದ ಮಂಚ, ಕಡೆಗೆ ಇಡೀ ಜಗತ್ತೆ ಕರಗುತ್ತಿರುವಂತೆ ಅನ್ನಿಸಿತು. ಎಷ್ಟು  ಭಯವಾಯಿತು ಎಂದರೆ ಗಟ್ಟಿಯಾಗಿ ಹೊದ್ದು  ಮಲಗಿಬಿಟ್ಟೆ. ಬೆಳಗಾಗಿ ಎದ್ದಾಗ  ಯಾಕೋ ಏನೂ ನೆನಪಿರಲಿಲ್ಲ, ಏನೂ ನೆನಪಾಗುತ್ತಿರಲಿಲ್ಲ. ಆಗಲೆ ನಾನು ನಿರ್ಧರಿಸಿದ್ದು, ಅವಳಿಗೆ ನಾನು ಅವಳನ್ನ ಇಷ್ಟ ಪಡುತ್ತಿರುವ ಸಂಗತಿಯನ್ನು, ಮದುವೆಯಾಗಲು  ಬಯಸುತ್ತಿರುವ ಸಂಗತಿಯನ್ನು ತಿಳಿಸಬೇಕು ಅಂತ. ಹಾಗಾಗಿ ಅದೇ ಸಂಜೆ ತಿಳಿಸಿಬಿಟ್ಟೆ.  ಹಂಸ, ನೀನು ನಿನ್ನ ಕುಟುಂಬವನ್ನು ಪ್ರೀತಿಸುವ, ನಿನ್ನ ಅಣ್ಣನಿಗೆ ನೀನು ಮದುವೆ ಮಾಡಬೇಕೆನ್ನುವ ನಿನ್ನ ಕಾಳಜಿಯಿಂದಾಗಿ ನಾನು ನಿನ್ನನ್ನ ಇಷ್ಟ ಪಡುತ್ತಿದ್ದೇನೆ ಅಥವಾ ಪ್ರೀತಿಸುತ್ತಿದ್ದೇನೆ. ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ನಿನಗಿದೆ ಆದರೆ ತೀರ್ಮಾನವನ್ನು ತಿಳಿಸುವುದು ನಿನ್ನ ಕರ್ತವ್ಯ. 
ಒಂದೆರೆಡು ದಿನಗಳ ಕಾಲ ಉತ್ತರದ ನಿರೀಕ್ಷೆಯಲ್ಲಿದ್ದೆ. ನಂತರ ಅದೇನಾಯಿತೋ ನನ್ನ ಕೆಲಸಗಳಲ್ಲಿ ನಾನು ಮರತೇ ಬಿಟ್ಟೆ. ಅವಳನ್ನು, ಅವಳ ಸಂಗತಿಯನ್ನು  ಮರೆತೇ ಬಿಟ್ಟಿದ್ದೆ . ಈಗ ನೋಡು ನೀನು ಕೇಳಿದಾಗ  ನೆನಪಾಯಿತು. ನನ್ನ ಸಮಸ್ಯೆಯೆಂದರೆ ನನ್ನ ನೆನಪು ತೀರಾ ತೆಳುವು. ಎಲ್ಲವನ್ನೂ  ಮರೆತುಹೋಗುತ್ತಿದ್ದೇನೆ."

ತಾರಕ ಹೇಳುತ್ತಲೇ ಇದ್ದ...... 

ತಾರಕನ ಬಗ್ಗೆ, ಅವನ ಸ್ಥಿತಿಯ ಬಗ್ಗೆ,  ನಿಮಗೆ ಒಂದಿಷ್ಟು  ವಿವರವಾಗಿ  ಹೇಳುವು ಅವಶ್ಯಕತೆಯಿದೆ. ನಮ್ಮೂರು ಆಂಧ್ರದ ಗಡಿಬಾಗದಲ್ಲಿರುವ ಗೌರೀಬಿದನೂರು ಎಂಬ ತಾಲೂಕು ಕೇಂದ್ರದ ಹತ್ತಿರವಿರುವ ಒಂದು ಹಳ್ಳಿ. ಆಂಧ್ರಕ್ಕೆ ಸುಮಾರು ಮೂವತ್ತು  ಕಿಲೋ ಮೀಟರುಗಳ ಅಂತರ. ತೊಂಬತ್ತು  ಪ್ರತಿಶತ ಆಡುಭಾಷೆ ತೆಲುಗು. ಪಕ್ಕದ ಹಿಂದೂಪುರದಲ್ಲೋ, ಪೆನುಗೊಂಡದಲ್ಲೋ ರಾಜಕೀಯ ಸ್ಥಿತ್ಯಾಂತರಗಳಾದರೆ, ಕೊಲೆಗಳಾದರೆ, ನಮ್ಮೂರ ಅರಳಿಕಟ್ಟೆಗಳಲ್ಲಿ  ಚರ್ಚೆಗಳಾಗುತ್ತಿತ್ತು. ಇಲ್ಲಿನ ಮುಖ್ಯಮಂತ್ರಿ ಯಾರು ಎಂಬುದನ್ನ ಜನ ಮರೆತರೂ, ಅಲ್ಲಿನ ಮುಖ್ಯಮಂತ್ರಿಯನ್ನು ಮರೆಯುತ್ತಿರಲಿಲ್ಲ. ಅತ್ಯಂತ  ಮುಖ್ಯವಾಗಿ ತೆಲುಗು ಸಂಸ್ಕೃತಿ ಎಂಬೋದು ತನ್ನ ಆದಿಪತ್ಯವನ್ನ ಸಾದಿಸಿದ್ದದ್ದು, ತೆಲುಗು ಸಿನಿಮಾಗಳ  ಮುಖಾಂತರವಾಗಿ. ಊಟ ನಿದ್ರೆ ಮೈಥುನಗಳೆಂಬ  ಪ್ರಾಣಿ  ಸಹಜ ಅವಶ್ಯಕತೆಗಳಂತೆಯೆ, ತೆಲುಗು ಸಿನಿಮಾ ಎಂಬುದು ಬದುಕಿನ ಅವಶ್ಯಕತೆಗಳಲ್ಲಿ ಒಂದಾಗಿ ಹೋಗಿತ್ತು. ಬಯಲು ನಾಟಕಗಳನ್ನು ತಮ್ಮ ಮನರಂಜನೆಯ ಮಾರ್ಗವಾಗಿಸಿಕೊಂಡಿದ್ದ ಇಲ್ಲಿನ ಜನಕ್ಕೆ, ಸಿನಿಮಾ ಆವಿಷ್ಕಾರದಿಂದಾಗಿ ನಾಟಕಗಳಷ್ಟೇ ಮುಖ್ಯವಾಗಿ ಸಿನಿಮಾ ಅವರುಗಳನ್ನ ಸೆಳೆಯಿತು. ದೇವರುಗಳೆಂದರೆ ಇವರು ಮಾತ್ರ. ಪಾತ್ರಗಳನ್ನ ಮೀರಿ ವ್ಯಕ್ತಿಗಳನ್ನ ದೈವತ್ವಕ್ಕೇರಿಸಿದರು. ಉತ್ತಮ ಉದಾಹರಣೆಯೆಂದರೆ ನಂದಮೂರಿ ತಾರಕ ರಾಮ ರಾವ್ ರವರು. ನಾನು  ಭೈರಪ್ಪನವರ  ಪರ್ವ ಓದುವಾಗ ಅವರು ಕಟ್ಟುಕೊಡುತ್ತಿದ್ದ ಪಾತ್ರಗಳು ಎಷ್ಟೇ ಶ್ರೇಷ್ಟವಾಗಿದ್ದರೂ ನನ್ನ ಮನೋ ಭೂಮಿಕೆಯಲ್ಲಿ ದಾಖಲಾಗುತ್ತಿದ್ದದ್ದು ಇದೇ ತೆಲುಗು ಸಿನಿಮಾಗಳ ಪಾತ್ರಗಳು. ಇಷ್ಟೆಲ್ಲಾ ಹೇಳಲಿಕ್ಕೆ ಕಾರಣ ತಾರಕನಿಗೂ ತೆಲುಗು ಸಿನಿಮಾಗಳಿಗೂ ಇದ್ದ ಸಂಬಂಧ.   

ತಾರಕನಿಗೆ ತಾರಕ ಅಂತ ಹೆಸರು ಬರಲಿಕ್ಕೆ ಕಾರಣವಿತ್ತು. ನಮ್ಮೂರ ಪಕ್ಕದ ಅಲಕಾಪುರದಲ್ಲಿ ಸೋಮೇಶ್ವರ ಜಾತ್ರೆಗೆ ಟೆಂಟ್ ಹಾಕಿ ಸಿನಿಮಾ ಹಾಕಿದ್ದರು. ತಾರಕನ ತಾಯಿ ನರಸಮ್ಮನಿಗೆ  ಆ ಸಿನಿಮಾ ನೋಡಲೇ ಬೇಕು ಅಂತ ಅನ್ನಿಸಿತಂತೆ. ಬಸುರಿಯ ಆಸೆ ಇಲ್ಲ ಅನ್ನಲಿಕ್ಕಾಗದೆ,   ಅವಳ ಗಂಡ ಗಾಡಿ ಕಟ್ಟಿ ಸಿನಿಮಾ ಟೆಂಟಿಗೆ ಕರೆದೊಯ್ದ. ಸಿನಿಮಾ ನೋಡೋವಾಗ ನರಸಮ್ಮನಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಿನಿಮಾ ನೋಡಲಿಕ್ಕೆ ಅಂತ ಪಕ್ಕದೂರಿನ ಸೂಲಗಿತ್ತಿ ಸಹ ಬಂದಿದ್ಲು. ಹಾಗಾಗಿ ಸಿನಿಮ ಟೆಂಟಿನೊಳಗೆ ಸಿನಿಮಾ ನೋಡುವಾಗಲೆ, ನರಸಮ್ಮನಿಗೆ ಹೆರಿಗೆಯಾಯಿತು. ಹೆರಿಗೆ ನೋವನ್ನನುಭವಿಸೋವಾಗ, ಕೃಷ್ಣನ ವೇಷಧಾರಿಯಾದ ತಾರಕ ರಾಮಾರಾಯರಿಗೆ ಕೈ ಮುಗಿದು ಕಾಪಾಡು ಅಂತ ಬೇಡಿಕೊಂಡಳಂತೆ. ಮಗು ಹುಟ್ಟಿದ್ದು  ಆ ಕೃಷ್ಣನ ಕೃಪೆಯಿಂದ ಎಂಬುವುದಕ್ಕಿಂತ ಕೃಷ್ಣನ ವೇಷಧಾರಿಯಾದ ತಾರಕರಾಮಾರಾಯರಿಂದ ಅಂತ ನಂಬಿದ್ದ ನರಸಕ್ಕ ತನ್ನ ಮಗನಿಗೆ ತಾರಕ ಅಂತ ಆರಿಸಿ ಹೆಸರಿಟ್ಟಿದ್ದಳು. ತನ್ನ ಮಗ ಕಣ್ಣು ಬಿಟ್ಟ ತಕ್ಷಣ ರಾಮಾರಾಯರನ್ನ ನೋಡಿದನೆಂದೂ, ರಾಮಾರಾಯರೂ ತನ್ನ ಮಗನನ್ನು ನೋಡಿದರೆಂದೂ ತನ್ನ ಮಗನಿಗೆ ರಾಮಾರಾಯರ ಆಶೀರ್ವಾದಗಳಿವೆಯೆಂದೂ ನರಸಮ್ಮ ಆಳವಾಗಿ ನಂಬಿದ್ದಳು ಹಾಗೂ ಊರಿಗೆಲ್ಲ ಹಾಗೆ ಹೇಳುತ್ತಿದ್ದಳು. 

ನಮ್ಮೂರಿಗೆ  ಡಿಸ್ಕೋ ಡ್ಯಾನ್ಸು  ಆಡೋರು ಬರೋರು. ಒಂದು ಊರಿಂದ ಮತ್ತೊಂದು ಊರಿಗೆ ಸಂಚರಿಸುತ್ತ, ಒಂದು ಊರಲ್ಲಿ ಒಂದು ದಿನವೋ ಎರಡು ದಿನವೋ ಇದ್ದು  ಆಟ ಆಡಿ ಹಣ ಸಂಗ್ರಹಿಸಿ ಹೊರಟು ಹೋಗೋರು. ಅವರದು ಬಹಳ ದೊಡ್ಡ ಕುಟುಂಬ. ರಾತ್ರಿ ಸುಮಾರು ಏಳು ಅಥವಾ ಎಂಟು ಗಂಟೆಗೆ ಆಟ ಶುರುವಾಗೋದು. ಒಬ್ಬನು  ಎನ್ ಟಿ ಆರ್  ವೇಷವನ್ನ ದರಿಸಿದರೆ, ಅದಕ್ಕೆ ಸರಿಯಾಗಿ ಒಬ್ಬಾಕೆ  ಶ್ರೀದೇವಿಯ ವೇಷ ತೊಟ್ಟು,  ಈ ಇಬ್ಬರೂ ನಟಿಸಿದ ಸಿನಿಮಾದ ಹಾಡುಗಳ ಡ್ಯಾನ್ಸನ್ನ ಮಾಡೋರು. ಅದೇ ರೀತಿ ನಾಗೇಶ್ವರ ರಾವ್, ವಾಣೀಶ್ರೀ, ಕೃಷ್ಣ, ಚಿರಂಜೀವಿ, ರಾದಿಕ, ಶೋಭನ್ ಬಾಬು, ಹೀಗೆ ಅದೆಷ್ಟೋ ಹೀರೋಗಳ ವೇಷಗಳನ್ನ ಹಾಕಿಕೊಂಡು ಹಾಡಿ ಕುಣಿಯೋರು. ಕಡೆಗೆ ನಮ್ಮ ಬಳಿಯಲ್ಲಿ ಒಂದಿಷ್ಟು  ಹಣ ಬೇಡಿ ಪಡೆದು ಹೋಗೋರು. ಎಷ್ಟೋ ಬಾರಿ ಒಬ್ಬನೆ ವ್ಯಕ್ತಿ ಎರಡು ಮೂರು ವೇಷಗಳನ್ನ ಹಾಕ್ತಿದ್ದ. ಅದೇಗೆ ಒಬ್ಬನೇ ವ್ಯಕ್ತಿ ಎರಡು ಮೂರು ರೀತಿ ಕಾಣಬಲ್ಲ ಎಂಬೋದು ಆಗ ನಮಗೆ ದೊಡ್ಡ ವಿಸ್ಮಯವಾಗಿತ್ತು. ಒಮ್ಮೆ  ಈ ಡಿಸ್ಕೊ  ಡಾನ್ಸನ್ನ ನೋಡಿದ ನಂತರ ಅದರಲ್ಲಿನ ಎನ್.ಟಿ.ಆರ್ ವೇಷವನ್ನ ನೋಡಿ ತಾರಕ, ತಾನು ಎನ್.ಟಿ.ಆರ್ ಜೊತೆ ಹೊರಟು ಹೋಗ್ತೇನೆ ಅಂತ ಅಂದಾಗ ಗಾಬರಿಯಾಗಿತ್ತು. ಆಗ ನಮಗೆ ಆರು ವರ್ಷ. ಏನೋ ಚಿಂತಿಸಿ ನಿರ್ದಾರ ತೆಗೆದುಕೊಂಡವನಂತೆ ನನ್ನ ಬಳಿ ಬಂದು, " ಲೋ, ನಾನೂ ಅವರ ಜೊತೆ ಹೊರ್ಟು ಹೋಗ್ತೇನೆ. ನಂಗೆ ಅವರ ರೀತೀಲಿ ವೇಷ ಹಾಕ್ಬೇಕು ಅಂತನ್ನಿಸ್ತಾ ಇದೆ.ಆ ಎನ್.ಟಿ.ಆರ್ ಇದ್ದರಲ್ಲ ಅವರ ಜೊತೆಗೆ ಹೊರ್ಟು ಹೋಗ್ತೇನೆ" ಅಂತ ಹೇಳಿ ನಾನು ಬೇಡ ಅಂದರೂನೂ ನನ್ನನ್ನು ಕರೆದು ಕೊಂಡು ಅವರತ್ತಿರ ಹೋದ. ರಾತ್ರಿ ಚೆನ್ನಾಗಿ ಕುಣಿದು ದಣಿದಿದ್ದ ಆ ಜನ, ಚನ್ನಾಗಿ ತಿಂದು ಕುಡಿದು ಮಲಗಿದ್ದರು. ಎದ್ದ ನಂತರ ರಾತ್ರಿ ಯಾರು ಯಾವ ವೇಷ ದರಿಸಿದ್ದರು ಎಂಬೋದೆ ತಿಳೀಲಿಲ್ಲ. ಪರಿಸ್ಥಿತಿ ಕೆಟ್ಟು  ರಾತ್ರಿಯ ಎನ್.ಟಿ.ಆರ್ ಯಾರು ಎಂದು ಅಲ್ಲಿನ ಜನರನ್ನ ವಿಚಾರಿಸಿದಾಗ, ದೂರದಲ್ಲಿ ಹರಿದ ಲುಂಗಿ ಉಟ್ಟುಕೊಂಡು, ಮಾಸಿದ ಕೊಳಕು ಬನಿಯನ್ ತೊಟ್ಟ ವ್ಯಕ್ತಿಯನ್ನ ತೋರಿಸಿ, ಅವನೆ ಎನ್.ಟಿ.ಆರ್ ಅಂದಾಗ ತಾರಕ ನಂಬದೆ ತನಗೆ ರಾತ್ರಿಯ ಎನ್.ಟಿ.ಆರ್ ಬೇಕೆಂದು ಹಟ ಮಾಡಿದ. ಆ ಗಲಾಟೆಯಿಂದಾಗಿ ಅಷ್ಟೊತ್ತಿಗೆ ತಾರಕನಪ್ಪನಿಗೆ ಸುದ್ದಿ  ತಲುಪಿ ಅವರು ಬಂದು ನಾಲ್ಕೇಟು ಕೊಟ್ಟು  " ಓದ್ಕೊಳ್ರೋ ಅಂದ್ರೆ ತಿರುಬೋಕಿಗಳ ಜೊತೆ ಹೋಗ್ತೀನಿ ಅಂತೀರ " ಅಂತ ಮನೆಗೆ ಕಳುಹಿಸಿದರು. 

ಈಗ ಅನ್ನಿಸುತ್ತೆ ಒಬ್ಬ ವ್ಯಕ್ತಿಯ ವೃತ್ತಾಂತವನ್ನ ತಿಳಿಸ ಹೊರಟರೆ ಅದು ಮುಗಿಯುವುದೇ ಇಲ್ಲ . ಚರಿತ್ರೆಗಾಗಲಿ, ಕತೆಗಾಗಲಿ,  ಆರಂಭ  ಅಂತ್ಯ ಎಂಬೋದು ಅದೆಷ್ಟು  ಆಸಕ್ತಿದಾಯಕವೊ, ಅಷ್ಟೆ ಅಪಾಯವೂ ಸಹ. ಕನಿಷ್ಠ ಕತೆಯಲ್ಲಾದರೂ ಕಥೆಯನ್ನ ನಿರಾಕರಿಸಲಿಕ್ಕೆ ಸಾದ್ಯವಾಗುತ್ತ ನೋಡಬೇಕು. ಇನ್ನು ಮುಂದೆ ತಾರಕನ ಬಗ್ಗೆ ಹೆಚ್ಚಿಗೆ ತಿಳಿಸೋಲ್ಲ. ತಾರಕ ಎಂಬುವವನು ನನ್ನ ಚಿಕ್ಕಂದಿನ ಗೆಳೆಯ. ನಾನೂ ಅವನೂ ಒಟ್ಟಿಗೆ ಬೆಳೆದವರು, ಓದಿದವರು. ಒಂದನೆ ತರಗತಿಯಿಂದ ಒಟ್ಟಿಗೆ ಓದಿದೆವು. ನಾನು ಅವನ ಆತ್ಮೀಯ ಗೆಳೆಯನಾಗಿದ್ದೆ. ಆದರೆ  M.Sc ಗೆ ಹೋದ ನಂತರ ಅದೇನಾಯಿತು ತಿಳಿಯಲಿಲ್ಲ. ಅವನು ಎಲ್ಲರೊಡನೆ ಸಂಪರ್ಕ ಕಡಿದುಕೊಂಡು ಬಿಟ್ಟ. ನಮ್ಮ ಯಾವ ಗೆಳೆಯರಿಗೂ ಅವನು ಏನಾದ, ಏನು ಮಾಡುತ್ತಿದ್ದಾನೆ ಯಾವುದೂ ತಿಳಿಯಲಿಲ್ಲ. ಮೊನ್ನೆ ಎಲ್ಲೋ ಹೀಗೆ ಸಿಕ್ಕಾಗ ಮಾತಿಗಿಳಿದ. ನೆನ್ನೆಯವರೆಗು ಜೊತೆಯಲ್ಲಿದ್ದವನಂತೆ ನನ್ನ ಜೊತೆಗೆ ಮಾತನಾಡತೊಡಗಿದ. ಅವನನ್ನ ನೋಡಿದಾಗ ಅನ್ನಿಸಿದ್ದು. ಕತೆಯಲ್ಲಿ ಮಾತ್ರ ಕತೆಯನ್ನ ನಿರಾಕರಿಸಲಿಕ್ಕೆ ಸಾದ್ಯ ಅಂತ. 

ಅವನು ಮಾತಾಡುತ್ತಲೆ ಇದ್ದ....
"ನೀನು ಕೇಳಿದೆ , ಯಾಕೆ ಹೀಗಾದೆ ಅಂತ. ಹೀಗೆ ಎಂದರೆ ಹೇಗೆ ಎಂಬೋದೂ ನನಗೆ ತಿಳಿದಿಲ್ಲ. ನಮಗೆ ಕಾರಣಗಳ ಹುಚ್ಚು , ಎಲ್ಲಕ್ಕೂ ಕಾರಣಗಳನ್ನ ಕೊಡಬೇಕು. ಕನಿಷ್ಠ ನಮ್ಮ ಸಮಾದಾನಕ್ಕಾಗಿಯಾದರೂ ಕಾರಣಗಳನ್ನ ಕೊಡಬೇಕು ಅಥವಾ ಕೊಟ್ಟುಕೊಳ್ಳಬೇಕು. ಎಷ್ಟೋ ಬಾರಿ ಕಾರಣಗಳೇ ಇಲ್ಲದೆ ಮಾಡಿದ ಸಂಗತಿಗಳಿಗೆ ಕಾರಣವನ್ನ ಹುಟ್ಟು  ಹಾಕುತ್ತೇವೆ. ನಾನೂ ಸಹ ಇಂದಿನ ನನ್ನ ಈ ಪರಿಸ್ಥಿತಿಗೆ ಒಂದು ಅಥವಾ ಹಲವು ಕಾರಣಗಳನ್ನ ಕಂಡುಕೊಂಡೆ ಅಥವಾ ಕೊಟ್ಟುಕೊಂಡೆ. ಈಗೀಗ ನನ್ನ ಮಾತುಗಳಲ್ಲಿ ಅಥವಾ ಅಂತ ಹೆಚ್ಚು ಬಾರಿ ಬರುತ್ತೆ. ಅದೇಕೋ ನನಗೆ ಒಂದು ಸಿದ್ದ ಉತ್ತರ ಅಂತ ದೊರಕುವುದೇ ಇಲ್ಲ. ಸದಾ ಎರಡು ವಿರುದ್ಧಾರ್ಥಕ ವಾಕ್ಯಗಳನ್ನ ಕೂಡಿಸಿ ಅಥವಾ ಅಂತ ಸೇರಿಸಿ ಬಿಡುವುದೋ ಏನೋ. 
ನನಗೆ ತೆಲುಗು ಸಿನಿಮಾಗಳ ಹುಚ್ಚು ಅಂತ ಬೈಯ್ಯುತ್ತಿದ್ದೆ. ಅದನ್ನ ಅದೇಗೋ ನೋಡ್ತೀಯ, ಅಲ್ಲಿ ಏನೂ ಅಂದರೆ ಏನೂ ಇರೋದಿಲ್ಲ. ಬರೀ ಕಲ್ಪನೆ, ವಾಸ್ತವದ ಸುಳಿಯೂ ಅಲ್ಲಿರೋದಿಲ್ಲ ಅಂತಿದ್ದೆ. ನಾನು ಸಿನಿಮಾ ನೋಡಿ ನೋಡಿ ಹಾಗಾದೆನ ಅಂತನ್ನಿಸುತ್ತೆ. ನನ್ನ ಸುತ್ತಲಿನ ಜಗತ್ತನ್ನ ನೋಡಿದಾಗ ಇದೂ ಸಹ ಸಿನಿಮಾನ ಅಥವಾ ಇದು ಬರಿ ಸಿನಿಮಾ ಅಷ್ಟೇನ ಅಂತನ್ನಿಸುತ್ತೆ. ಕ್ವಾಂಟಂ ಫಿಸಿಕ್ಸ್ ನ ತಾತ್ವಿಕತೆಯ ಆಳದಲ್ಲಿನ ವಾಸ್ತವದ ಪರಿಕಲ್ಪನೆಯನ್ನ ಅರಿಯುವ ಪ್ರಯತ್ನ ಮಾಡುವಾಗ ಮನುಷ್ಯರ, ಅವರ ನಡುವಳಿಕೆಗಳ ಸಮೀಕರಣದ ಗೊಂದಲ ಕಾಡುತ್ತೆ. ವಾಸ್ತವವು ನೋಡುಗನ ನೋಟದ ಮೇಲೆ ಅವಲಂಬಿತವಾಗುತ್ತೆ  ಎಂಬುದರ ನೇರ ಪ್ರಭಾವವು ಜೀವನ ದರ್ಶನದ ಮೇಲೂ ಆಗುತ್ತೆ. ಬೆಳಗಿನಿಂದ ರಾತ್ರಿಯವರೆಗೂ ಬರೀ ಬೌತಶಾಸ್ತ್ರದ ಸಮೀಕರಣಗಳೊಂದಿಗೆ ಕಳೆದುಬಿಟ್ಟಾಗ ರಾತ್ರಿ ನಿದ್ರೆ ಬರುವುದಿಲ್ಲ. ಆಗ ತೆಲುಗು ಸಿನಿಮಾವನ್ನ ಹಾಕಿಕೊಂಡು ಜೋರಾಗಿ ನಗುತ್ತ ಇರುತ್ತೇನೆ. ಅದರಲ್ಲಿನ ಹಾಸ್ಯ ಸನ್ನಿವೇಷಗಳಿದ್ದಾಗ ನಗುತ್ತ, ಭಾವನಾತ್ಮಕ ಸನ್ನಿವಾಷಗಳಿದ್ದಾಗ ಅತ್ತುಬಿಡುತ್ತೇನೆ. ಬರೀ ಪ್ರಶ್ನೆಗಳಿಂದಲೇ ತುಂಬಿದ ಬದುಕಿನಲ್ಲಿ ಬದುಕಲಿಕ್ಕೆ  ಕಷ್ಟವಾಗುತ್ತೆ. ಸಿನಿಮಾ ನೋಡುವಷ್ಟೊತ್ತೂ ಆ ನಟನ ಭಾವಗಳೊಂದಿಗೆ ಬೆರೆತಿರುತ್ತೇನೆ, ಸಿನಿಮಾ ಮುಗಿದಾದ ಮೇಲೆ ನೆಮ್ಮದಿಯ ನಿದ್ರೆ ಬರುತ್ತೆ. ಬೆಳಗೆದ್ದಾಗ ಆ ಸಿನಿಮಾವೂ, ಅದರ ಪಾತ್ರಗಳೂ ಎಲ್ಲವೂ ಮರೆತಿರುತ್ತೆ ಅಷ್ಟೆ.

ಆದರೂ ನಿನಗೆ ಎರಡು ಸಂಗತಿಗಳನ್ನ ತಿಳಿಸಬೇಕು. ನನ್ನ ಬದುಕಿನಲ್ಲಿ ರಾಜೇಶ ಎಂಬೋ ಒಬ್ಬ ಗೆಳೆಯ ಇದ್ದ. ಅವನ ಬಗ್ಗೆ ಅದೆಷ್ಟೋ ಸಂಗತಿಗಳನ್ನ ಹೇಳಬೇಕಿದೆ. ಅದು ಇಲಿ ಮುಖ್ಯ ಅಲ್ಲ . ಮುಖ್ಯವಾದ ಸಂಗತಿ ಒಂದಿದೆ. ಅವನ ಮಾತಲ್ಲೆ ನಿಂಗೆ ಹೇಳ್ತೀನಿ ಕೇಳು " ತಾರಕ , ನಾನು ಚಿಕ್ಕೋನಿದ್ದಾಗಲೆ, ನಮ್ಮ ಅಮ್ಮ ಬೇರೊಬ್ಬರ ಜೊತೆ ಮಲಗಿದ್ದನ್ನು ನಾನು ನೋಡಿದ್ದೆ. ನಮ್ಮ ತಂದೆ ಬೇರೆಯವರ ಜೊತೆ ಇರುತ್ತಿದ್ದದ್ದನ್ನು ನಾನು ಕಂಡಿದ್ದೆ. ಅದು ನನಗೆ ಎಂದಿಗೂ ಅವರ ಬಗ್ಗೆ ತಪ್ಪು ಭಾವನೆಯನ್ನ ಮೂಡಿಸಲಿಲ್ಲ. ನನ್ನ ತಂದೆ ಒಬ್ಬ ಪ್ರಾಮಾಣಿಕ ಅಧಿಕಾರಿ. ಒಬ್ಬ ಉತ್ತಮ ತಂದೆ. ನನ್ನ ತಾಯಿಯೂ ಸಹ. ಅವರುಗಳು ನನ್ನ ಉತ್ತಮ ತಂದೆ ತಾಯಂದಿರು." ನಿನಗೆ ಈ ಸಂಗತಿ ಮುಖ್ಯವಾಯಿತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇದು ನನ್ನ ಬದುಕಿನ ಮೇಲೆ ತೀವ್ರವಾದ ಪ್ರಭಾವ ಬೀರಿತು ಎಂದು ಭಾವಿಸಿದ್ದೇನೆ. ಇಂದಿಗೂ ಅದು ಯಾಕೆ ಪ್ರಭಾವ ಬೀರಿತು ಎಂಬುದು ತಿಳಿದಿಲ್ಲ.

ನನಗೆ ನೆನ್ನೆ ರಾತ್ರಿ ಎಚ್ಚರಿಕೆಯಲ್ಲಿ ಜರುಗಿದ ಅದೆಷ್ಟೋ ಸಂಗತಿಗಳು ನೆನಪಿರುವುದಿಲ್ಲ. ಹಾಗಾದಾಗ ಇನ್ನು ರಾತ್ರಿಯ ಕನಸಿನ ಮಾತೆಲ್ಲಿ. ಆದರೆ ಅದೇಕೋ ಆ ದಿನದ ಕನಸು ನನಗೆ ಬೆಳಗಾದಾಗಲೂ ನೆನಪಿತ್ತು . ಬಹಳ ಸ್ಪಷ್ಟವಾಗಿ, ಪ್ರತೀ ಸಂಗತಿಯೂ ನೆನಪಲ್ಲಿ ಉಳಿದಿತ್ತು. ಕನಸು ಬಹಳ ಸುಲಭವಾಗಿತ್ತು. ಕನಸು ಈ ರೀತಿ ಸಾಗುತ್ತೆ. ಒಮ್ಮೆ ನಾನು ಮಂಚೇನಳ್ಳಿಯ ಟೆಂಟಿಗೆ ಸಿನಿಮಾಕ್ಕೆ ಹೋಗಿದ್ದೆ. ಯಾವ ಸಿನಿಮಾ, ನಾಯಕ ಯಾರು ಎಂಬುದು ಯಾವುದೂ ಗೊತ್ತಿಲ್ಲದೆ ಹೋಗಿದ್ದೆ. ಜನ ಬಹಳ ಇದ್ದರು. ಎಷ್ಟೇ ಹೊತ್ತಾದರೂನೂ ಸಿನಿಮಾ ಆರಂಭ ಆಗಲಿಲ್ಲ. ಆಗ ಅನ್ನಿಸ್ತು , ಜನ ಯಾಕೆ ಇಷ್ಟು ಗಲಾಟೆ ಮಾಡ್ತಾರೆ, ಇವರೆಲ್ಲ ಹೊರಟು ಹೋದರೆ ಎಷ್ಟು ಚೆನ್ನಾಗಿರುತ್ತೆ ಅಂತಂದುಕೊಂಡಾಗ ಜನರೆಲ್ಲ ಹೊರಟು ಹೋದರು. ಸಿನಿಮಾ ಆರಂಭವಾಗಬಾರದ ಅಂತ ಅಂದುಕೊಂಡಾಗ ಅದು ಆರಂಭ ಆಯಿತು. ನಾನು ಕಲ್ಪಿಸಿಕೊಂಡ ಪಾತ್ರಗಳು ಪರದೆಯ ಮೇಲೆ ಮೂಡಿ ಬಂದವು. ನಾನು ಕಲ್ಪಿಸಿಕೊಂಡ ಚಿತ್ರಗಳು, ಪಾತ್ರಗಳು, ಸನ್ನಿವೇಷಗಳು, ಹಾಸ್ಯ, ಕೋಪ, ದುಃಖ ಎಂಬೋ ಭಾವಗಳು ಎಲ್ಲವೂ ನಾನು ಅಂದುಕೊಂಡಂತೆ ನಡೆಯುತ್ತಿತ್ತು.
ಮೊದಲಿಗೆ ಖುಷಿಯಾಯಿತು. ಆಮೇಲೆ ನನ್ನ ಕಲ್ಪನೆಯೆಲ್ಲಾ ಬರಿದಾಗುತ್ತ ಸಾಗಿತು. ಎಷ್ಟೇ ಕಲ್ಪಿಸಿಕೊಂಡರೂನು ಅವು ಮತ್ತೆ ಮತ್ತೆ ಪುನರಾವೃತ್ತಿಯಾಗುತಿತ್ತೆ ವಿನಃ ಯಾವುದೇ ಹೊಸ ಸನ್ನಿವೇಷಗಳು ಮೂಡಲೇ ಇಲ್ಲ. ಒಂದು ರೀತಿಯ ನಿಶ್ಯಕ್ತಿ ಕಾಡಿತು. ಕಲ್ಪನೆಯು ಸೋತುಬಿಟ್ಟಾಗ  ಚಿತ್ರಗಳು ಚಲನೆಯಿಲ್ಲದೆ ಸ್ತಬ್ಧವಾಗಿ ಹೋದವು. ಕೇವಲ ಸ್ತಬ್ಧ ಚಿತ್ರಗಳು ಎದುರಿಗೆ ಸಾಲಾಗಿ ನಿಂತಿದ್ದವು, ಯಾವುದೇ ಚಲನೆ ಇಲ್ಲದೆ. ಕಡೆಗೆ ಮುಗಿಯಬಾರದ ಈ ಹಾಳು ಸಿನಿಮಾ ಅಂದು ಕೊಂಡಾಗ ಸಿನಿಮಾ ಮುಗಿದಿತ್ತು. ನಾನು ಹೊರಗೆ ಬಂದಾಗ ಜಗತ್ತು ಕೇವಲ ನನ್ನ ಕಲ್ಪನೆಯಂತೆಯೆ ಮೂಡಿ ಬಂದಿದೆಯ?, ನಾನು ಕಲ್ಪಿಸಿಕೊಂಡಂತೆ ಜರುಗುತ್ತ? ಎಂದು ಪರೀಕ್ಷಿಸೋಣ ಎಂದುಕೊಂಡಾಗ ಎಚ್ಚರವಾಗಿ ಹೋಯಿತು. "

"ಅಬ್ಬ, ದೊಡ್ಡ ಕತೆ ಮಾರಾಯ. ಅದೆಲ್ಲ ಸರಿ, ಯಾವುದಾದರೂ ಹುಡುಗಿಯನ್ನ ಇಷ್ಟ ಪಟ್ಟಿದ್ದೀಯ...? ಪ್ರಪೋಸ್ ಮಡಿದ್ದೀಯ"
"ಹೂಂ. ಒಬ್ಬ ಹುಡುಗಿಗೆ ಪ್ರಪೋಸ್ ಮಾಡಿದ್ದೆ. ... ಆದರೆ...."
"ಯಾಕೋ, ಏನಾಯ್ತು.....? ಹೇಗನ್ನಿಸಿತ್ತು   ಆ ಕ್ಷಣ, ಮಸ್ತ ಮಜ ಅಲ್ವ..."
"ಇಲ್ಲ, ನನಗೆ..................................................................................................................................................... 
..............................................................................................
................................. ಮರೆತುಹೋಗುತ್ತಿದ್ದೇನೆ"

           *********************************************
ಇದಾದ ನಂತರ ತಾರಕ ಮತ್ತೆ ಬೇಟಿಯಾಗಲಿಲ್ಲ. ಒಮ್ಮೆ ಒಂದು ಈ-ಮೇಲ್ ಕಳಿಸಿದ್ದ. 
"ಆತ್ಮೀಯ ಅರವಿಂದ, ಹೇಗಿದ್ದಿ? ಹಂಸನ ವಿಷಯವನ್ನ ಯಾರಿಗೂ ಹೇಳಿರಲಿಲ್ಲ. ನಾನು ಮರೆತುಹೋಗಿದ್ದದ್ದು ನಿನಗೆ ಗೊತ್ತಿದೆ. ಮೊನ್ನೆ ಅವಳು ಒಂದು ಪತ್ರ (ಇ-ಮೇಲ್) ಕಳುಹಿಸಿದ್ದಳು. ಯಾಕೋ ನಿನ್ನ ಬಳಿ ಹೇಳಿಕೊಳ್ಳಬೇಕೆಂದೆನಿಸಿತು. 
"ನನಗೆ ಗೊತ್ತು, ನಾನು ನಿನಗೆ ಪ್ರತಿಕ್ರಿಯಿಸಬೇಕೆಂದು. ಬಹಳ ಆಲೋಚಿಸಿದೆ. ನೀನು ನನ್ನ ಆತ್ಮೀಯ ಗೆಳೆಯ, ಆದರೂ ನಾನು ನಿನ್ನನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲಿಕ್ಕೆ ಆಗೋಲ್ಲ. ನಿನ್ನನ್ನೇ ಅಲ್ಲಾ ಯಾವ ಹುಡುಗನನ್ನೂ ಬಾಳಸಂಗಾತಿಯಾಗಿ ಚಿಂತಿಸಲೂ ಸಾದ್ಯವಾಗುತ್ತಿಲ್ಲ. ಪ್ರತೀ ಬಾರಿಯೂ ಒಬ್ಬರನ್ನು ನೋಡಿದಾಗ, ನನಗನ್ನಿಸುತ್ತೆ, ನಾನು ಯಾಕೆ ಅವರನ್ನ ಬಾಳ ಸಂಗಾತಿಯಂತಲೊ, ಪ್ರಿಯತಮ ಅಂತಲೊ, ಗಂಡ ಅಂತಲೊ ಸ್ವೀಕರಿಸಬೇಕು ಅಂತ. ಪ್ರತೀ ಹುಡುಗಿಗೂ ಬರಲೇ ಬೇಕಿದ್ದ ಆ ಭಾವನೆ ನನಗಿಲ್ಲ, ನನಗೆ ಬರುತ್ತಿಲ್ಲ. ಎಂತಹ ರೋಮಾಂಚನವಾದ, ಲೈಂಗಿಕವಾದ ದೃಷ್ಯವನ್ನು ಕಂಡಾಗಲು, ಅದು ನನಗೆ ಮನರಂಜನೆಯ ಬಾಗವಾಗಿ ಕಂಡಿದೆಯೆ ವಿನಃ ನನ್ನಲ್ಲಿ ಯಾವ ಭಾವನೆಯನ್ನೂ ಮೂಡಿಸಲಿಲ್ಲ. ಸ್ವತಃ ನನ್ನನ್ನು ನಾನು ಆ ಸ್ಥಿತಿಯಲ್ಲಿ ಊಹಿಸಿಕೊಂಡಾಗಲು ನನಗೆ ಏನೂ ಅನ್ನಿಸಲಿಲ್ಲ. ನಾನು ಸೋತಿದ್ದೇನೆ. ಅದು ನನ್ನ ಸಮಸ್ಯೆಯಿರಬಹುದು. ನಿನ್ನ ಬೌದ್ಧಿಕತೆಗೆ ಇದು ಅರ್ಥವಾಗುತ್ತೆಂದು ಭಾವಿಸಿದ್ದೇನೆ." 
ಹೀಗೆಂದು ಬರೆದಿದ್ದಳು. ನನ್ನಹಂಕಾರಕ್ಕೆ ದೊಡ್ಡ ಪೆಟ್ಟಾಗಿತ್ತು. ಅವಳ ತಿರಸ್ಕಾರ ಯಾವುದೇ ಕಾರಣಕ್ಕೂ ನನಗೆ ಬೇಸರವಾಗಿರಲಿಲ್ಲ. ನಿನ್ನ ಬೌದ್ಧಿಕತೆಗೆ ಇದು ಅರ್ಥವಾಗುತ್ತೆ ಎಂಬುದನ್ನು ಓದಿದಾಗ ಯಾರು ಬೌಧಿಕತೆಯಲ್ಲಿ ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆಂಬುದು  ಚಿಂತಿಸಿದಾಗ ಕುಗ್ಗಿ ಹೋದೆ. ತೀರ ಕುಬ್ಜನಾಗಿ ನಾನು ಕಾಣ್ತಾ ಇದ್ದೇನೆ. ಪುರುಷ ದೇಹದ ಅಹಂಕಾರವನ್ನು ನಿರಾಕರಿಸುವ ಶಕ್ತಿ ಹೆಣ್ಣಿಗೆ ಮಾತ್ರ ಇದೆಯೆಂದೆನಿಸುತ್ತೆ. ಅವಳು ನನಗಿಂತ ತೀರ ಎತ್ತರದಲ್ಲಿದ್ದಾಳೆ. 
ಈಗ ಹೊರಡುತ್ತಿದ್ದೇನೆ. ಎಲ್ಲಿಗೆ ಅಂತ ಕೇಳಬೇಡ, ಸಂಪರ್ಕಿಸಬೇಡ, ಸಂಪರ್ಕಿಸುವ ಪ್ರಯತ್ನವನ್ನೂ ಮಾಡಬೇಡ. ನಿನ್ನನ್ನು ಸಂಪರ್ಕಿಸಬೇಕೆಂದೆನಿಸಿದಾಗ ಕಂಡೀತವಾಗಿಯು ಸಿಗುತ್ತೇನೆ.  

ಇಂತಿ
ತಾರಕ


1 ಕಾಮೆಂಟ್‌:

  1. ಪ್ರಿಯ ಅರವಿಂದ್
    ನಿಮ್ಮ `ಎರಡು ಕೋಡಿನ ಮೊಲ' ಎಂಬ ಕತೆ ಸೂಕ್ಷ್ಮ ಕಥಾವಸ್ತುವನ್ನು ಒಳಗೊಂಡಿದೆ, ಕಥನವೂ ಚೆನ್ನಾಗಿದೆ; ಆದರೆ ಆ ಸೂಕ್ಷ್ಮತೆ ಶೀರ್ಷಿಕೆಯಲ್ಲಿ ಇಲ್ಲ--ಶೀರ್ಷಿಕೆ ಸ್ವಲ್ಪ ಜರ್ನಲಿಸ್ತಿಕ್ ಆಗಿದೆ ಅನಿಸಿತು.

    ಪ್ರತ್ಯುತ್ತರಅಳಿಸಿ