ಇತಿಹಾಸಕಾರನ ದಿನಚರಿಯಿಂದ


೧.
ನಮ್ಮೂರಲ್ಲಿ ಒಂದು ಕಲ್ಲಿನ ಶಾಸನ
ಯಾವ ಕಾಲದಿಂದಲೋ ನಿರ್ಲಿಪ್ತವಾಗಿ ಮಲಗಿತ್ತು
ಪಾಪ, ಯಾವ ರಾಜನೋ ಸಾಮಂತನೋ
ಬರೆಸಿದ್ದಿರಬೇಕು  
ಅದರ ಭಾಷೆ ನಮಗ್ಯಾರಿಗೂ ಓದಲು ಬರುತ್ತಿರಲಿಲ್ಲ.

ನಮ್ಮೂರಿಗೆ ಹೊಸದಾಗಿ ಬಂದ ಶಾಮನಿಗೆ
ಸಂಪೂರ್ಣವಾಗಿ ತನ್ನನ್ನೇ ಅರ್ಪಿಸಿಕೊಂಡ ಶಾಸನ
ಅವನಿಗೆ ಕೂರಲು ಆಸನವಾಗಿ, ಮಲಗಲು ಮಂಚವಾಗಿ
ಇನ್ನೂ ಏನೇನೋ ಆಗಿ ಶಾಮನದ್ದಾಗಿ ಹೋಯಿತು.

ಒಂದು ದಿನ ಶಾಮ ಎಲ್ಲಾನೂ ಬಿಟ್ಟು ಎಲ್ಲಿಗೋ ಓಡಿ ಹೋದ
ಓಡಿ ಹೋಗಲಿಕ್ಕೆ ಏನೇನೋ ಜರುಗಿತ್ತಂತೆ ಹಾಗೂ ಕಾರಣಗಳಿತ್ತಂತೆ
-ಅಂತ ಜನಗಳು ಮಾತನಾಡಿಕೊಳ್ಳುತ್ತಿದ್ದರು.

೨.
ನನ್ನಜ್ಜಿಯ ಪ್ರೇಮ ಪತ್ರಗಳೇನಾದರೂ ಸಿಕ್ಕಬಹುದೆಂದು ಪ್ರಯತ್ನಿಸುತ್ತಿದ್ದೇನೆ
ನನ್ನಜ್ಜಿ ಬಹಳ ಸುಂದರವಾಗಿದ್ದಳು
ಎಲ್ಲಾ ವಯಸ್ಸಿನಲ್ಲೂ.
ನನ್ನ ತಾತ ಕರ್ರಗೆ, ಉಬ್ಬುಹಲ್ಲು, ಸೊಣಕಲು ಶರೀರ
ಎಷ್ಟೋ ಊರುಗಳು ದಾಟಿ ಎಲ್ಲೋ ನೆಲೆನಿಂತು ಸಾಕಿದ್ದಳು ನನ್ನಜ್ಜಿ
ಅವಳ ಚರಿತ್ರೆಯನ್ನ ಬರೆಯಲಿಕ್ಕೆಂದೇ ನಾನು ಇತಿಹಾಸಕಾರನಾದೆ.

ಕಡೆ ದಿನಗಳಲ್ಲಿ ನನ್ನಜ್ಜಿಗೆ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಂಡು
ತೀವ್ರ ನೋವಿನಲ್ಲಿದ್ದಾಗ, ಸತ್ತು ಹೋಗುವಷ್ಟು ನೋವಾಗಿದ್ದಾಗ
ತನ್ನ ನೆಚ್ಚಿನ ಮಸಾಲೆ ದೋಸೆ ತರಿಸಿಕೊಂಡು ತಿಂದು
ಮಾರನೆ ದಿನ ಸತ್ತು ಹೋದಳು.

೩.
ಮೆಜಸ್ಟಿಕ್ ಅಲ್ಲಿ
ಒಂದು ಕಾಲದಲ್ಲಿ
ಒಬ್ಬ ಅಜ್ಜಿ ಬುಟ್ಟಿಯಲ್ಲಿ ಇಡ್ಲಿ ತಂದು ಮಾರೋಳು
ನಂಗೆ ದಿನ ಎರಡು ಇಡ್ಲಿ ಕೊಡೋಳು
ತನ್ನ ಅನಿಮಿತ್ತ ಕರ್ಮದಂತೆ
ಈಗ ಎಲ್ಲೋ ಬಂದು ಏನೋ ಮಾಡಿ ಆಗಿದೆ
ಹಿಂತಿರುಗಿ ಹೋದಾಗ ಅಲ್ಲಿ ಅಜ್ಜಿ ಇರೋಲ್ಲ ಅಂತಾನೆ ಅನ್ನಿಸುತ್ತೆ.
ನನ್ನದೊಂದು ಪುಸ್ತಕ ಪ್ರಕಟವಾಗಿದೆ
ಪ್ರಪಂಚ ಇತಿಹಾಸ ಹಾಗು ನಾನು

೩.
ಈ ಒಬ್ಬ ಕವಿ* ತೀರ ವಿಚಿತ್ರ ಎಂಬಂತೆ ಕವಿತೆ ಬರೆದ
ದಂಗೆಯೆದ್ದು ಏನೋ ಮಾಡಲಿಕ್ಕೋಗಿ ಜೀವನಾನೆ ಜೈಲಲ್ಲಿ ಕಳೆದು
ಹೊರಬಂದಾಗ
ತನ್ನ ರೂಮನ್ನು ಸೂಳೇಯರಿಗೆ ಬಾಡಿಗೆಗೆ ಕೊಟ್ಟು
ಬಂದ ಹಣದಲ್ಲಿ ಪೆನ್ನು ಪೇಪರ್ ಕೊಂಡು
ಕವಿತೆ ಬರೆದ.

೪.
ಗ್ಲೋಬು, ಭೂಪಟ, ಪೆನ್ನು, ಪೆನ್ಸಿಲ್ಲು, ಭೂತಗನ್ನಡಿ
ಈ ಇತಿಹಾಸಕಾರನ ದಿನಚರಿಯ ಪುಸ್ತಕ
-ಹೊತ್ತ ಈ ಚೀಲವನ್ನು
ನನ್ನ ತಾತ ಗಾಂದೀತಾತನ ಫೋಟೋ ಹಾಕಿದ್ದ ಮೊಳೆಗೆ
ಹಾಕಿ - ಹೊರಡುತ್ತಿದ್ದೇನೆ.

* Nguyen chi Thein ಎಂಬ Vietnam ಕವಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ