ಮಹಾಭಾರತ ಯಾರ ಕಥೆ? ಕೃಷ್ಣನ ಕಥೆಯೆ? ಭೀಮನ ಕಥೆಯೆ? ಅರ್ಜುನನ ಕಥೆಯೆ? ಇವರ್ಯಾರದೂ ಅಲ್ಲ. ಅದು ಅಂಬೆ, ಗಾಂಧಾರಿ, ಮಾದ್ರಿ, ಕುಂತಿ, ದ್ರೌಪದಿಯರೆಂಬ ಐದು ಹೆಣ್ಣುಗಳ ಕಥೆಯೆಂದು ಅಗ್ನಿಪಥ ನಾಟಕ ತೆರೆದುಕೊಂಡಿತು. ಭಾನುವಾರ(೧-ಸೆಪ್ಟಂಬರ್) ಮೈಸೂರಿನ ನಟನ ತಂಡದವರ "ಅಗ್ನಿಪಥ" ನಾಟಕವನ್ನು ರಂಗಶಂಕರದಲ್ಲಿ ನೋಡಿದ ನಂತರ ನನ್ನನ್ನು ಇಡೀ ಮಹಾಭಾರತ ಕತೆಯೆ ಮತ್ತೊಮ್ಮೆ ಮತ್ತೊಂದು ಅರ್ಥದಲ್ಲಿ ತೆರೆದುಕೊಂಡಿತು. ಇತ್ತೀಚಿನ ದಿನದಲ್ಲಿ ಹಲವಾರು ಖ್ಯಾತನಾಮರ(ಮುಖ್ಯವಾಗಿ ಧಾರವಾಹಿಗಳಲ್ಲಿ ಮಾಡುವ ಖ್ಯಾತನಾಮರ) ನಾಟಕಗಳನ್ನು ನೋಡಿ ಅದರ ಏಕತಾನತೆಗೆ ಬೇಸರಬಂದಿತ್ತು. ನಟನದ(http://natanamysore.com/) ಈ ಪ್ರಯೋಗ ಎಲ್ಲ ವಿಧದಲ್ಲಿಯೂ ಇಷ್ಟವಾಯಿತು.
ಪುರಾಣಪಾತ್ರಗಳನ್ನು ಮತ್ತೆ ಮತ್ತೆ ಕಾವ್ಯದಲ್ಲಿಯೋ, ನಾಟಕದಲ್ಲಿಯೋ, ಕಾದಂಬರಿಯಲ್ಲಿಯೋ ತಂದಾಗಲೆಲ್ಲ, ಅದೇಕೆ ಅದೆ ಹಳೆ ಪಾತ್ರಗಳನ್ನೇ ತರುತ್ತಾರೆ? ಹೊಸ ಪಾತ್ರಗಳನ್ನೂ, ಹೊಸ ಕತೆಯನ್ನೂ ಕಟ್ಟಿಕೊಡಬಹುದಲ್ಲವ ಎಂದು ಅನ್ನಿಸುತ್ತೆ. ಹೀಗಿದ್ದರೂ, ಪುರಾಣ, ಐತಿಹಾಸಿಕ ಪಾತ್ರಗಳು, ಕತೆಗಳು ಎಂದೆಂದಿಗೂ ಪ್ರಸ್ತುತವಾಗಿರುತ್ತೆ ಎಂಬ ಉತ್ತರದಿಂದ ಅದು ಮತ್ತೆ ಮತ್ತೆ ರಂಗಕ್ಕೇರುತ್ತೆ. ಹೀಗೆ ಒಂದು ಪುರಾಣ, ಐತಿಹಾಸಿಕ ಕೃತಿ ರಂಗಕ್ಕೇರಿದಾಗ ಅದು ಆ ಕಾಲದ ಪರಿಸ್ಥಿಗಳೊಂದಿಗೆ ಪ್ರಸ್ತುತವಾದಾಗ, ಹಾಗೆ ಹೊಸದಾಗಿ ರೂಪಾಂತರಗೊಂಡ ಕೃತಿಗೆ ಮೌಲ್ಯ. ಮಹಾಭಾರತದ ಕತೆ, ಅದರ ಆಳ, ಸಂಕೀರ್ಣತೆಗಳಿಂದ ಎಂದಿಗೂ ಪ್ರಸ್ತುತವಾದರೂ, ಯಾವ ಪ್ರಶ್ನೆಯನ್ನ ಮುಂದಿಟ್ಟುಕೊಂಡು ಮಹಾಭಾರತದ ಕತೆಯನ್ನ ಮತ್ತೆ ರಂಗಕ್ಕೆ ತರುತ್ತಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತೆ. ಹೀಗಾಗಿ, ನಟನದ "ಅಗ್ನಿಪಥ" ಪ್ರಯೋಗ ಮಹಾಭಾರತದ ಸ್ತ್ರೀ ಪಾತ್ರಗಳ ನೋವು, ಹತಾಷೆ, ಅವಮಾನಗಳ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಹಾಭಾರತದ ಕತೆಯನ್ನು ಮತ್ತೆ ರಂಗಕ್ಕೇರಿಸಿರುವುದು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಸರಿಯಾಗಿದೆ.
ಅಗ್ನಿಪಥ ನಾಟಕವು ಅಂಬೆ, ಗಾಂದಾರಿ, ಮಾದ್ರಿ, ದ್ರೌಪದಿ ಹಾಗು ಕುಂತಿಯರ ಕಥೆಗಳುಳ್ಳ, ಅವರ ಬದುಕಿನ ದುರಂತಗಳನ್ನೂ, ಸೂಕ್ಷ್ಮಗಳನ್ನೂ ಎಚ್ಚರಿಕೆಯಿಂದ ನಮ್ಮ ಮುಂದೆ ಇಡುವ, ನಮ್ಮ ಮುಂದೆ ಇಟ್ಟು, ನಮ್ಮನ್ನೂ ನೇರವಾಗಿ ಪ್ರಶ್ನೆಸುವ ಕಥೆಯುಳ್ಳ ನಾಟಕ. ಬಿ. ಜಯಶ್ರಿಯವರು ನಿರ್ದೇಶಿಸಿ, ಸಂಗೀತವನ್ನು ನೀಡಿದ ನಾಟಕ. ಸಂಭಾಷಣೆ ಮಂಡ್ಯ ರಮೇಶ ಹಾಗು ಮುರಳಿ ಶೃಂಗೇರಿ.
ಸ್ವಯಂವರಕ್ಕಾಗಿ ಸಿಂಗರಿಸಿಕೊಂಡು ಅಂಬೆ, ಅವರ ಸಹೋದರಿಯರೊಡನೆ ನಿಂತಿದ್ದಾಳೆ. ಎಲ್ಲ ದೇಶದ ರಾಜರುಗಳೂ ಸೇರಿದ್ದಾರೆ. ಆಗ ಭೀಷ್ಮನೂ ಸ್ವಯಂವರಕ್ಕೆ ಬರುತ್ತಿದ್ದಾನೆಂದು ಸುದ್ದಿಯಾಗುತ್ತೆ. ಭೀಷ್ಮನೇಕೆ ಬಂದ ಎಂದು ಎಲ್ಲರೂ ಗಾಬರಿಗೊಳ್ಳುತ್ತಾರೆ. ಹಲವು ವಿಧದ ಮದುವೆಗಳನ್ನು ಹೇಳಿದ ಭೀಷ್ಮನು ತಾನು ಅಲ್ಲಿ ಸೇರಿದ ರಾಜರುಗಳನ್ನೆಲ್ಲ ಸೋಲಿಸಿದರೆ, ಅಂಬೆ ಹಾಗು ಅವರ ಸೋದರಿಯರು ಅವನದ್ದಾಗುತ್ತಾರೆಂದು ಹೇಳಿ ರಾಜರುಗಳನ್ನೆಲ್ಲಾ ಸೋಲಿಸಿ ಅಂಬೆ ಹಾಗು ಅವರ ಸೋದರಿಯರನ್ನು ಕೊಂಡೊಯ್ಯುತ್ತಾನೆ. ಇಲ್ಲಿನ ಭೀಷ್ಮನ ಮಾತುಗಳನ್ನು ಕೇಳಬೇಕು, ತಾನು ಅಲ್ಲಿ ಸೇರಿದ ರಾಜರುಗಳನ್ನು ಸೋಲಿಸಿದ್ದಕ್ಕೆ ಆ ಹೆಣ್ಣುಗಳ ಮೇಲೆ ತನಗೆ ಅಧಿಕಾರವೆಂದೇಳುತ್ತಾನೆ. ಹೆಣ್ಣಿನ ಮೇಲಿನ ಅಧಿಕಾರವನ್ನು ತೋಳ್ಬಲದ ಆಧಾರದಲ್ಲಿ ಹೊಂದುತ್ತಾನೆ. ನಂತರ ಅಂಬೆ ತಾನು ಸಾಳ್ವನನ್ನು ಇಷ್ಟಪಟ್ಟಿರುವುದಾಗಿಯೂ, ತನ್ನ ತಂದೆಯೂ ಇದನ್ನು ಮೆಚ್ಚಿದ್ದರೆಂದೂ ತಿಳಿಸಿದಾಗ ಭೀಷ್ಮನು "ನೀನು ಸ್ವತಂತ್ಯ್ರಳು" ಎಂದಾಗ, ಯಾವ ರೀತಿಯಲ್ಲಿ ಭೀಷ್ಮನು ಅವರುಗಳನ್ನು ತಂದ, ನಂತರ "ಸ್ವತಂತ್ರ್ಯಳು" ಎಂದು ಹೇಳಿದಾಗ ಸ್ವಾತಂತ್ರ್ಯದ ಅರ್ಥವು ಇಡೀ ಪ್ರಕರಣದಲ್ಲಿ ಮತ್ತೊಮ್ಮೆ ರೂಪಗೊಂಡಿತು. ಸ್ವಾತಂತ್ರ್ಯದ, ಅದೂ ಸ್ತ್ರೀ ಸ್ವಾತಂತ್ರ್ಯದ ಅರ್ಥ ಈ ಪ್ರಕರಣದಿಂದ, ಅದೂ "ನೀನು ಸ್ವತಂತ್ರ್ಯಳು" ಎಂದ ಮಾತಿನಿಂದ, ಸ್ವತಂತ್ರ್ಯದ ಮೂಲವನ್ನೆ ಪ್ರಶ್ನಿಸಿದಂತಾಯಿತು. ಅಂಬೆ ಸಾಳ್ವನ ಬಳಿಗೋದಾಗ,"ನಿನ್ನನ್ನು ನೋಡಿದಾಗ ನನಗೆ ಭೀಷ್ಮನ ವಿರುದ್ದದ ನನ್ನ ಸೋಲೆ ನನಗೆ ನೆನಪಾಗುತ್ತೆ...""....ನಿನ್ನನ್ನ ಮದುವೆಯಾದರೆ, ರಾಜ್ಯದ ಜನ, ಪರಿವಾರ ಏನೆಂದಾರು...." ಎನುತ್ತಾನೆ. ಅಲ್ಲಿಂದ ಭೀಷ್ಮನ ಬಳಿಗೋದಾಗ ".....ನನ್ನ ಪ್ರತಿಜ್ನೆ...""....ನನ್ನ ಕೀರ್ತಿ...." ಎಂತಹ ಮಾತುಗಳು!. ಒಬ್ಬನು ತನ್ನ ಜನ, ಪರಿವಾರದ ನೆಪವೊಡ್ಡುತ್ತಾನೆ. ಮತ್ತೊಬ್ಬನು ಕೀರ್ತಿ, ಪ್ರತಿಜ್ನೆ ಎಂಬ ಉತ್ತರವನ್ನ ನೀಡುತ್ತಾನೆ. ಹೆಣ್ಣಿನ ಆತ್ಮಗೌರವದ ಪ್ರಶ್ನೆ ಇಲ್ಲಿ ಯಾರಿಗೂ ಮುಖ್ಯವಾಗುವುದಿಲ್ಲ. ಭೀಷ್ಮನ ಬಾಯಲ್ಲಿ "ಧರ್ಮ"ದ ಮಾತು ಹಲವಾರು ಬಾರಿ ಬರುತ್ತೆ. ಆಗ ಅನ್ನಿಸಿತು, ಯಾವುದು ಧರ್ಮ? ಯಾರು ಮಾಡಿದ್ದು ಧರ್ಮ?
ತಾನು ಮದುವೆಯಾಗಬೇಕಿರುವ ಗಂಡನ ಕುರಿತಾಗಿ ಹಲವು ಕನಸುಗಳನ್ನು ಕಟ್ಟಿಕೊಂಡು ಸಂತಸದಲ್ಲಿದ್ದ ಗಾಂಧಾರಿ,ಧೃತರಾಷ್ಟ್ರನಿಗೆ ಆರತಿ ಬೆಳಗಹೋದಾಗ ಅದನ್ನು ದಬ್ಬಿ ಎಡವಿ ಬೀಳುತ್ತಾನೆ. ಆಗ ಗಾಂಧಾರಿಗೆ ತಾನು ಮದುವೆಯಾಗಲಿರುವುದು ಒಬ್ಬ ಕುರುಡನನ್ನು ಎಂದು ತಿಳಿಯುತ್ತೆ. ಇಲ್ಲಿ ನಾಟಕದ ತಂತ್ರ ಇಷ್ಟವಾಯಿತು. ಗಾಂಧಾರಿ ಹಾಗು ಗಾಂಧಾರಿಯ ಮನಸ್ಸು ಎಂಬ ಎರಡು ಪಾತ್ರಗಳು ಮಾತನಾಡುತ್ತೆ. ಇಲಿ ಸಖಿಯರಾಡುವ ಮಾತುಗಳು ನೇರವಾಗಿ ಹಲವು ಸೂಕ್ಷ್ಮಗಳನ್ನೊಳಗೊಂಡಿದೆ. ಸಖಿಯರು ಹೇಳುತ್ತಾರೆ, ಗಾಂಧಾರಿ ನೀನು ಅದೃಷ್ಟವಂತೆ, ಅವರನ್ನು ಮದುವಯಾದರೆ ನೀನು ಕುರುವಂಶದ ಸೊಸೆಯಾಗುತ್ತೀಯ. ಧೃತರಾಷ್ಟ್ರನು ಮಹಾ ಪಂಡಿತನು ಕುರುಡನಾದರೇನಂತೆ. ಭೀಷ್ಮನು ಗಾಂಧಾರ ದೇಶಕ್ಕೆ ಭದ್ರತೆಯನ್ನೊದಗಿಸುತ್ತಾನಂತೆ ಎಂದೆನ್ನುತ್ತಾರೆ. ಅಂದರೆ ಸೇನೆಯನ್ನು ತಂದಿಟ್ಟು ಹೆಣ್ಣನ್ನು ಕೇಳಿದ್ದಾನೆ ಭೀಷ್ಮ. ಅಧಿಕಾರದ ಬಲಕ್ಕೆ ಇಲ್ಲಿ ಗಾಂಧಾರಿಯ ಬಲಿಯಾಯಿತು. ನಾಟಕದ ಕೊನೆಯಲ್ಲಿ ಕೃಷ್ಣನನ್ನು ಶಪಿಸುವ ಪ್ರಸಂಗವೊಂದು ಬರುತ್ತೆ, ಆಗ ".. ದೇವರಾದರೂ ಸರಿ, ನಿನ್ನನ್ನು ಶಪಿಸುತ್ತೇನೆ....." ಎಂದು ಶಪಿಸುತ್ತಾಳೆ. ಯಾವ ಯಾವುದೋ ಪಾತ್ರಗಳು ಯಾವುದೋ ಹಂತಗಳಲ್ಲಿ ಅದೇಗೆ ಬಲಿಯಾಗಿಹೋಯಿತು. ಇದು ಗಾಂಧಾರಿ ಎಂಬೋ ಮಹಾಭಾರತದ ಕತೆಯಲ್ಲಿನ ಒಂದು ಪಾತ್ರದ ಕತೆ ಮಾತ್ರ ಅಲ್ಲ. ಅದೆಷ್ಟೋ ಹೆಣ್ಣುಗಳ ಕತೆಯೋ ಹೌದು.
ಸಹಜ ಪ್ರಕೃತಿ ಧರ್ಮಕ್ಕೆ ಒಳಗಾಗಿ ಪಾಂಡುವಿನ ಸಾವಿಗೆ ತಾನೆ ಕಾರಣಳು ಎಂದು ತಿಳಿದು ಅಗ್ನಿಗೆ ಆಹುತಿಯಾಗುವ ಮಾದ್ರಿಯದು ಮೂರನೆ ಪಾತ್ರ. "...ನಾನು ಕಾಮಕಲೆಯಲ್ಲಿ ನಿಷ್ಣಾತಳೆಂದೆ ನನ್ನನ್ನು ಭೀಷ್ಮ ಪಾಡುವಿಗೆ ಕಟ್ಟಿದ...." "....ರೋಗಿಷ್ಟ, ಶಾಪದ ನೆವ ಬೇರೆ..." ಎಂದು ತನ್ನ ಆಳದ ನೋವನ್ನು ಹೇಳಿಕೊಳ್ಳುತ್ತಾಳೆ. "....ಪಾಂಡು ಮಹಾರಾಜ ಇಂದು ಉಲ್ಲಸಿತನಾಗಿದ್ದ....ಬಂದು ಅಪ್ಪಿಕೊಂಡ.....ನೋಡ ನೋಡುತ್ತಿದ್ದಂತೆಯೆ ಕುಸಿದು ಬಿದ್ದ...." ಅದ್ಬುತ ಸಂಭಾಷಣೆ. ಧರ್ಮದ ನೆಪಹೇಳಿ ಅಗ್ನಿಗಾಹುತಿಯಾಗುತ್ತಾಳೆ ಮಾದ್ರಿ. ಯಾರ ತಪ್ಪಿತ್ತು ಇಲ್ಲಿ. ಇನ್ನು ಉಳಿದ ಎರಡು ಪಾತ್ರಗಳು ಕುಂತಿ ಹಾಗು ದ್ರೌಪದಿಯದು. ದ್ರೌಪದಿಯನ್ನು ಧರ್ಮರಾಯ ಜೂಜಿನಲ್ಲಿ ಒಂದು ವಸ್ತುವನ್ನ ಇಟ್ಟಂತೆ ಇಟ್ಟು ಜೂಜಾಡಿ ಸೋಲುತ್ತಾನೆ. ದ್ರೌಪತಿಯನ್ನು ತುಂಬು ಸಭೆಗೆ ಎಳೆದು ತಂದು ವಸ್ತ್ರಾಪಹರಣವನ್ನು ಮಾಡುತ್ತಾರೆ. ಕುಂತಿಯದು ಮದುವೆಗೆ ಮುಂಚೆಯೆ ತಾಯಾದ ಕತೆ. ಈ ಎರಡೂ ಪಾತ್ರಗಳು ಚೆನ್ನಾಗಿ ಮೂಡಿಬಂದರೂ ಸಹ, ವೈಯುಕ್ತಿಕವಾಗಿ ಮೇಲಿನ ಮೂರು ಪಾತ್ರಗಳಷ್ಟು ಆಳವಾಗಿ ಬಂದಿಲ್ಲವೆಂದೆನಿಸಿತು. ಅದಕ್ಕೂ ಹೆಚ್ಚಾಗಿ ಅಂಬೆ, ಗಾಂಧಾರಿ ಹಾಗು ಮಾದ್ರಿ ನನ್ನನ್ನು ಬಹಳ ಕಾಡಿದ ಪಾತ್ರಗಳಾದವು.
ಇನ್ನು ನಾಟಕದ ತಂತ್ರದ ಬಗ್ಗೆ, ನಾಟಕಕ್ಕೆ ಗೊಂದಲಿಗರ ಮೇಳ ಎಂಬ ಜಾನಪದ ಪ್ರಕಾರವನ್ನೂ ಅನುಸರಿಸಿರುವುದು ಸರಿಯಾಗಿ ಮೂಡಿಬಂದಿದೆ. ಗೊಂದಲಿಗರ ಮೇಳ ಎಂಬುದು ಉತ್ತರ ಕರ್ನಾಟಕದಲ್ಲಿನ ಜಾನಪದ ಶೈಲಿ. ಅಂಬಾಭವಾನಿಯ ಪೂಜಾ ಸಮಯದಲ್ಲಿ, ಇಡೀ ರಾತ್ರಿ ಆಕೆಯ ಪವಾಡಗಳನ್ನು ಹಾಡಿ ಹೊಗಳುತ್ತ ಕುಣಿಯುತ್ತ, ದೇವಿ ಸ್ಥುತಿ ಮಾಡುತ್ತ ರಾತ್ರಿ ಕಳೆಯುವುದನ್ನ ಗೊಂದಲ ಹಾಕುವುದು ಎನ್ನುತ್ತಾರೆ. ಗೊಂದಲ ಹಾಕಲು ಕನಿಷ್ಟ ಐದು ಜನರಿರುತ್ತಾರೆ, ಒಬ್ಬ ಮುಖ್ಯ ಗಾಯಕ, ಒಬ್ಬ ಸಂಭಾಳ ನುಡಿಸುವವ, ಒಬ್ಬ ಚೌಡಿಕೆ ನುಡಿಸುವವ, ಮತ್ತಿಬ್ಬರು ಪಂಜನ್ನ ಹಿಡಿದಿರುತ್ತಾರೆ. ವೇಷ, ಸಂಗೀತ, ಕೊಳಲು ಎಲ್ಲವೂ ಚೊಕ್ಕವಾಗಿ ಮೂಡಿಬಂದಿದೆ. ಇನ್ನು ನಟನ ತಂಡವನ್ನು ಅಭಿನಂದಿಸಲೇಬೇಕು. ಮುಖ್ಯವಾಗಿ ನಟನದ ರುವಾರಿ ಮಂಡ್ಯ ರಮೇಶರಿಗೆ ಧನ್ಯವಾದಗಳು.
ಪಾತ್ರ ಪರಿಚಯ:
ಅಂಬೆ : ದಿಶಾ ರಮೇಶ್
ಮಾದ್ರಿ: ಕಾವ್ಯ ನಟನ
ಗಾಂಧಾರಿ ಹಾಗು ದ್ರೌಪದಿ: ಪ್ರಿಯ ನಟನ
ಕುಂತಿ : ಅಪೂರ್ವ ಅಕ್ಕಿಹೆಬ್ಬಾಳ
ಭೀಷ್ಮ: ರಾಮು ನಟನ
ಕರ್ಣ:ಮೇಘ ಸಮೀರ
ದುಶ್ಯಾಸನ : ಚಂದನ್
ದುರ್ಯೋದನ: ಅರಸ್
ಸಾಳ್ವ: ಮಧುಸೂದನ್
ಕೃಷ್ಣನ ಧ್ವನಿ: ಮಂಡ್ಯ ರಮೇಶ
ಗೊಂದಲಿಗ ದುಗ್ಗಪ್ಪ ಹಾಗು ದೃತರಾಷ್ಟ್ರ : ಮುರುಳಿ ಶೃಂಗೇರಿ
ಸಂಭಾಳದವರು: ಸುಭ್ರಮಣ್ಯ ಹಾಗು ಮೇಘ ಸಮೀರ
ಫೋಟೋ ಕೃಪೆ : ನಟನ ತಂಡ
ಗೊಂದಲಿಗರ ಮೇಳದ ಕುರಿತು ಮಾಹಿತಿ: ಬಿ.ಜಯಶ್ರೀರವರು ಅಗ್ನಿಪಥ ನಾಟಕದ ಕರಪತ್ರದಲ್ಲಿ ನೀಡಿದ್ದ ವಿವರಣೆ: ಕೃಪೆ: ನಟನ ತಂಡ
ಮಾಹಿತಿಯನ್ನ ನೀಡಿದ ಶಿರಿಷ್ ನಟನ ರವರಿಗೆ ಧನ್ಯವಾದಗಳು.
ಬರಹ ಚೆನ್ನಾಗಿದೆ. ನಾಟಕ ಇತ್ತ ಬಂದಾಗ ಅವಶ್ಯ ನೋಡುತ್ತೇನೆ.ಮಹಾಭಾರತ ಅವಶ್ಯ ಓದಿ. ಈ ನಿಟ್ಟಿನಲ್ಲಿ ಪರ್ವ (ಭೈರಪ್ಪನವರ ಕಾದಂಬರಿ)ಕೂಡಾ ಅವಶ್ಯ ಓದಬೇಕಾದ್ದೇ. ಯಕ್ಷಗಾನ ಅದರಲ್ಲೂ ತಾಳಮದ್ದಳೆ ಪ್ರಕಾರದ ರಸಿಕರಿಗೆ ಅಂಬೆ, ದ್ರೌಪದಿಯರ ಸಾಧ್ಯತೆಗಳು ಎಷ್ಟೂ ಪರಿಚಯವಿದೆ. ನೀವು ಒಂದಾದರೂ ಅನುಭವಿಗಳ ಕೂಟ ಕೇಳಬೇಕು (ಸಿಡಿಯಲ್ಲೂ ಸಿಗುತ್ತವೆ - ಕೊಂಡು ಕೇಳಬಹುದು) ಢುಂಡಿ ಕಾದಂಬರಿಯ ಬೆಳಕಿನಲ್ಲಿ ಬರಲಿರುವ ದಿನಗಳಲ್ಲಿ ವಿಚಾರವಂತಿಕೆ ಅಪಾಯಕಾರಿಯಾಗಲಿದೆ ಎಂದು ಕಾಣುವಾಗ ಅಗ್ನಿಪಥ ಕೂಡಾ ಕೆಟ್ಟಾ ಬೆಳಕಿಗೆ ಬಿದ್ದರೆ ಆಶ್ಚರ್ಯವಿಲ್ಲ, ವಿಷಾದವುಂಟು.
ಪ್ರತ್ಯುತ್ತರಅಳಿಸಿಅಶೋಕವರ್ಧನ ಜಿ.ಎನ್