ಗರುಡಗಂಬದ ಕತೆಗಳು


ನನ್ನ ತಾತ ಕಡೇ ದಿನಗಳಲ್ಲಿ ಬಾಳ ಹಲುಬುತ್ತಿದ್ದ
ಗರುಡಗಂಬ ಗರ್ಡಗಂಬ ಗರ್ಡಗಂಬ ಅಂತ
ಚಂದಾ ಪಡೀಲಿಕ್ಕೆ ರಸೀದಿಗಳನ್ನೂ ಮುದ್ರಿಸಿದ್ದ
ಅದ್ಯಾಕೋ ಗರುಡಗಂಬಾನ ಪ್ರತಿಷ್ಟಾಪಿಸಲಿಕ್ಕೆ ಆಗಿರಲೇ ಇಲ್ಲ.

ತಾತ ಹೋದ ನಂತರ
ನನ್ನ ಗಣಿತದ ಲೆಕ್ಕಾಚಾರದ ಅಭ್ಯಾಸಕ್ಕೆ
ಈ ರಸೀದಿ ಪುಸ್ತಕಗಳನ್ನುಪಯೋಗಿಸಿದ್ದೆ
ಪ್ರಥಮ ದರ್ಜೆಯಲ್ಲಿ ಪಾಸಾಗಿ
ಸೈದ್ಧಾಂತಿಕ ಭೌತಶಾಸ್ತ್ರಜ್ಞನಾದೆ

ನನ್ನ ತಾತ ಕಟ್ಟಿದ ಮನೆಯನ್ನ
ನವೀಕರಣಕ್ಕೊಳಪಡಿಸಹೊರಟಾಗ
ನನ್ನ ಹಳೆಯ ಪುಸ್ತಕಗಳ ಜೊತೇಲಿ
ಈ ರಸೀದಿ ಪುಸ್ತಕಗಳೂ ಸಿಕ್ಕವು

ಇತ್ತೀಚೆಗೊಮ್ಮೆ ಆಕಸ್ಮಿಕವಾಗಿ
ಊರ ಹೊಲದಲ್ಲಿ ಗರುಡಗಂಬವೊಂದು ಸಿಕ್ಕಿತು
ದೇವಸ್ಥಾನದ ಮುಂದೆ ತಂದು ಮಲಗಿಸಿದ್ದಾರೆ

ನನ್ನ ಮಗಳು ಈ ರಸೀದಿಗಳಿಂದ ಕಾಗದದ ದೋಣಿಯನ್ನು ಮಾಡಿ
ಮಳೆ ನೀರಲ್ಲಿ ಹರಿಬಿಟ್ಟಿದ್ದಳು
ಆ ಕಾಗದದ ದೋಣಿಗಳೆಲ್ಲಾ ಬಂದು ಗರುಡಗಂಬಕ್ಕೆ ಸಿಕ್ಕಿ ಹಾಕಿಕೊಂಡಿತ್ತು
ನಾನು ಮಾತ್ರ
ಒಂದೊಂದೇ ದೋಣಿಗಳು ಬಂದು ಅಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನ
ನೋಡುತ್ತಿದ್ದೆ.

1 ಕಾಮೆಂಟ್‌:

  1. ಪ್ರಿಯರೆ,
    ವಿಜ್ಞಾನ-ಮಾನವಿಕಗಳ ಸುಂದರ ಸಮನ್ವಯದ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
    ’ಗರುಡಗಂಬದ ದಾಸಯ್ಯ’ ಎಂಬ ಪಠ್ಯ ಶಾಲಾ ದಿನಗಳಲ್ಲಿ ಓದಿದ್ದು ನೆನಪಾಯಿತು.
    ಭಂಡಾರಕಾರ್

    ಪ್ರತ್ಯುತ್ತರಅಳಿಸಿ