..................



ಚಿಟ್ಟೆ ಬೇಟೆಯಾಡುತ್ತಾ?
ತಟಸ್ಥ ನಿಶ್ಚಲ ರೆಕ್ಕೆ ಹೊಡೆಯುತ್ತಾ
ಹಾರದೆ ಕೂತ, ಹೊಂಚುಹಾಕುತ್ತಿದೆಯೇನೊ
ಭಾಸವಾಗುವ ಭಂಗಿಯಿಂದಾಗಿ
ಅನುಮಾನದಿಂದ ಹತ್ತಿರ ಸರಿದಾಗ
ಚಿಟ್ಟೆಗೂ ಅಹಂಕಾರವ? ನಮ್ಮನ್ನು ಕಂಡರೂ ನಮ್ಮೆಡೆಗೇ ನೋಡುತ್ತಿತ್ತಲ್ಲ
ಅದು ಬೆಳಗಿನ ಹೊತ್ತು, ಹುಡುಗಿ ಜೊತೆಗಿದ್ದಳು
ಚಿಟ್ಟೆಯ ನೆಪದಲ್ಲಿ ದೊರೆತದ್ದು ಅವಳ ಸಾಂಗತ್ಯ

ಹಾಗೆ ಕಂಡ ಚಿಟ್ಟೆಗಾಗಿ ಕನವರಿಸುವವಳು ನನ್ನವಳಾದಳು
ಕಂಡಲ್ಲಲ್ಲಾ ಕಾವ್ಯಾತ್ಮಕವಾಗಿ ಚಿಟ್ಟೆಯನ್ನು ಭ್ರಮಿಸಿದಳು
ಚಿಟ್ಟೆ ಭೂತವಾಗಿ ಕಾಡುವುದೆಂದು ಸಿದ್ಧಗೊಳಿಸಿ ತೋರಿಸಲು
ಸೂಕ್ತ ಪರಿಕರಗಳು ಅವಳಲ್ಲಿರಲಿಲ್ಲ ನಾನು ನಂಬಲಿಲ್ಲ.

ಆ ಚಿಟ್ಟೆಯ ಚಿತ್ರವನ್ನೇನಾದರೂ ಬಿಡಿಸಿದರೆ ಸರಿಹೋದೀತು
ಎಂಬ ನಂಬಿಕೆಯೊಂದು ಅಚಾನಕ್ಕಾಗಿ ಆವಾಹಿಸಿ
ಬಿಡಿಸಿದ ಚಿತ್ರವ್ಯಾವುದೂ ಆ ಚಿಟ್ಟೆಯದೆಂದೆನಿಸದಿರಲು
ಬಿಡಿಸುತ್ತಲೇ ಇದ್ದೇನೆ  ಈ ಪ್ರಕ್ರಿಯೆಯಲ್ಲಿ
ಅವಳು ಕನವರಿಸುವುದನ್ನೂ ಭ್ರಮಿಸುವುದನ್ನೂ ಬಿಟ್ಟಿದ್ದಾಳೆ
ನನಗೆ ಎಲ್ಲೆಲ್ಲಿಯೂ ಚಿಟ್ಟೆ ಮಾತ್ರ ಕಾಣುತ್ತಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ