ಮಗಳು ಕಂಡ ಸಂಖ್ಯೆಗಳು

                                         

ನನ್ನ ಮಗಳಿಗೆ ಸಂಖ್ಯೆಗಳ
ಕೆತ್ತಿದ ಬಿಲ್ಲೆಗಳೆಂದರೆ
ಅವುಗಳೊಡನೆ ಆಡುವುದೆಂದರೆ
ಬಹಳ ಇಷ್ಟ

ಅವಳ ತಾತ
ಒಂದೊಂದೆ ಮರ ಹುಡುಕಿ,
ಕಟ್ಟಿಗೆ ಕಡಿದು ಸಾಪಾಟುಗೊಳಿಸಿ
ನಾಣ್ಯದಾಕಾರದ ಬಿಲ್ಲೆಗಳ ಮಾಡಿ
ಮೊದಲಿಗೆ ಒಂದರಿಂದ ಹತ್ತರವರೆಗೆ ಕೆತ್ತಿದವರು
ನಂತರ ಸೊನ್ನೆಯನ್ನು ಕೆತ್ತಿ ಹತ್ತನ್ನು ಹೊರಗೆಸೆದರು
ನಿತ್ಯ ಸೊನ್ನೆಯಿಂದ ಒಂಬತ್ತರವರೆಗೆ ಕೆತ್ತುವುದು
ನನ್ನಪ್ಪನ ದಿನಚರಿಯಾಗಿತ್ತು.

ನನ್ನ ಮಗಳಿಗೆ ಆ ಸಂಖ್ಯೆಗಳ ಬಿಲ್ಲೆಗಳೊಡನೆ
ಆಡುವುದೆಂದರೆ ಬಹಳ ಇಷ್ಟ

ಮೊದಲಿಗೆ ಸೊನ್ನೆಯಿಂದ ಒಂಬತ್ತರ ಒಂದು ಕಟ್ಟಿನೊಂದಿಗೆ
ಆಟವಾಡುತ್ತಿದ್ದವಳು
ಸಾಲದೆಂದು
ಮತ್ತೂ ಒಂದು ಕಟ್ಟನ್ನು ತೆಗೆದುಕೊಂಡಳು
ಮತ್ತೂ ಒಂದು, ಹೀಗೆ
ಆಡುತ್ತಾ ಹೋದಳು

ಅವಳ ತಾತ ಸತ್ತ

ಹೀಗೆ ಆಯ್ದ ಅಂಕೆಗಳ ಕಟ್ಟಿನೊಳಗಿನ ಸಂಖ್ಯೆಗಳಿಗೇನಾದರೂ
ಸಂಬಂಧವಿದೆಯೆ?
ಮಗಳು ಕೇಳುತ್ತಲೇ ಇದ್ದಳು

ಈಗವಳು ಗಣಿತದ ಸಂಖ್ಯಾಶಾಸ್ತ್ರಙ್ಞೆ
ಅವಳೋ ಅವಳ ಸಂಖ್ಯೆಗಳೋ

ನನ್ನ ಮಗಳಿಗೆ ಸಂಖ್ಯೆಗಳೊಡನೆ ಆಡುವುದೆಂದರೆ ಬಹಳ ಇಷ್ಟ

1 ಕಾಮೆಂಟ್‌:

  1. ಹೀಗೆ ಆಯ್ದ ಅಂಕೆಗಳ ಕಟ್ಟಿನೊಳಗಿನ ಸಂಖ್ಯೆಗಳಿಗೇನಾದರೂ
    ಸಂಬಂಧವಿದೆಯೆ?

    ಪ್ರತಿಯೊಂದನ್ನೂ ಮನಸ್ಸು ಕನೆಕ್ಟ್ ಮಾಡಲು, ಅರ್ಥದ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಲೇ ಇರುತ್ತದೆ. ಹಾಗೆ ಮಾಡದೇ ಕಾಣಲು ಸಾಧ್ಯವಿಲ್ಲವೆ ..... ಯೆಸ್, ಕವನ ಕುಶಿ ಕೊಟ್ಟಿತು, ಚೆನ್ನಾಗಿದೆ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ