ಬಹುಶೃತ ವಿದ್ವಾಂಸರಾದ, ನಾಲ್ಕು ಸಂಪುಟಗಳಲ್ಲಿ ನಾಟ್ಯ ಶಾಸ್ತ್ರದ ಪದವಿವರಣ ಕೋಶವನ್ನೂ, ಸುಮಾರು ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಶ್ರೀ ರಾಧಾವಲ್ಲಭ ತ್ರಿಪಾಠಿಯವರು ೨೦೧೩ರಲ್ಲಿ ಜಯಪುರದ ರಾಷ್ಟ್ರೀಯ ಸಂಸ್ಕೃತ ಅಕಾಡೆಮಿಯಲ್ಲಿ ನೀಡಿದ ವಿಶೇಷ ಉಪನ್ಯಾಸವನ್ನು ಅಕಾಡೆಮಿಯು ಪುಸ್ತಕ ರೂಪದಲ್ಲಿ ಪ್ರಕಟಿಸಿತ್ತು. "ನಾಟ್ಯ ಶಾಸ್ತ್ರದ ವಿಚಾರ" ಎಂಬ ನಾಟ್ಯಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿರುವ ಶ್ರೀ ಅತ್ತಿಮುರುಡು ವಿಶ್ವೇಶ್ವರರವರು "ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ" ಎಂಬ ಹೆಸರಿನಲ್ಲಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ನಾಟ್ಯ ಶಾಸ್ತ್ರದ ಕುರಿತಾಗಿ ಕನ್ನಡದಲ್ಲಿ ಭರತನ ನಾಟ್ಯ ಶಾಸ್ತ್ರದ ಕನ್ನಡ ಅನುವಾದವನ್ನು ಶ್ರೀಯುತ ಶ್ರೀರಂಗರು ಮಾಡಿರುವರು. ನಂತರ ಸುಬ್ಬಣ್ಣನವರು ಧನಂಜಯನ ದಶರೂಪಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಎರಡೂ ಕೃತಿಗಳೂ ಬೃಹತ್ ಸ್ವರೂಪದ್ದಾಗಿದ್ದು ವಿಸ್ತಾರವಾದ ಓದನ್ನು ಬೇಡುತ್ತವೆ. ಆದರೆ "ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ"ಯೊಂದು ಸಣ್ಣ, ಅರವತ್ತು ಪುಟಗಳ ಹೊತ್ತಿಗೆಯಾದರೂ ವಿಸ್ತಾರದಲ್ಲಿ ನಾಟ್ಯ ಶಾಸ್ತ್ರದ ಪ್ರಾಥಮಿಕ ಸ್ವರೂಪ, ಚರಿತ್ರೆ ಎಲ್ಲಕ್ಕಿಂತಲೂ ಮುಖ್ಯವಾಗಿ ನಾಟ್ಯ ಶಾಸ್ತ್ರದೊಂದಿಗೆ ನಡೆದ ತತ್ತ್ವ ಶಾಸ್ತ್ರದ, ತತ್ತ್ವ ಜಿಜ್ಞಾಸೆಗಳೆಲ್ಲವನ್ನು ಒಂದೇ ಹರವಿನಲ್ಲಿ ಕಟ್ಟಿಕೊಡುತ್ತದೆ. ಹೀಗಾಗಿ ನಾಟ್ಯ ಶಾಸ್ತ್ರದ ಪ್ರಾಥಮಿಕ ಪರಿಚಯಕ್ಕೆ , ಅದರ ತತ್ತ್ವಜಿಜ್ಞಾಸೆಯ ಬಗ್ಗೆ ತಿಳಿಯಲಿಚ್ಛಿಸುವವರಿಗೆ ಇದೊಂದು ಅತ್ಯತ್ತಮ ಕೃತಿಯಾಗಿದೆ.
ಈ ಕೃತಿಯು ೧೮೬೫ರಲ್ಲಿ ಮೊಟ್ಟ ಮೊದಲಿಗೆ ನಡೆದ ನಾಟ್ಯಶಾಸ್ತ್ರ ಕೃತಿಯ ಸಂಪಾದನೆ ಅದರ ಹುಡುಕಾಟದ ಕಾರಣಗಳಿಂದ ಆಪ್ತವಾಗಿ ಆರಂಭವಾಗುತ್ತದೆ. ಸಂಸ್ಕೃತ ಸಾಹಿತ್ಯ, ತತ್ತ್ವಶಾಸ್ತ್ರ ಇತರೆ ಕೃತಿಗಳ ಸಂಪಾದನ ಕಾರ್ಯದ ಒಟ್ಟು ಹಿನ್ನೆಲೆಯು ಇಲ್ಲಿ ಆವಿಷ್ಕಾರಗೊಂಡಿದೆ. ನಂತರ ನಾಟ್ಯ ಶಾಸ್ತ್ರದ ಆಧಾರದ ಮೇಲೆ ನಡೆದ ಸಂಸ್ಕೃತ ನಾಟಕಗಳ ವಿವರಗಳು, ಅವುಗಳ ಆಧಾರದ ಮೇಲೆ ಜರುಗಿದ ಭಾರತೀಯ ನಾಟಕಗಳ ಬಗೆಗಿನ ವಿಷ್ಲೇಷಣೆಗಳು ಸಾಗುತ್ತವೆ. ಇನ್ನು ನಾಟ್ಯ ಶಾಸ್ತ್ರದ ವಿಷಯ, ಪ್ರಯೋಜನ ಸಂಬಂಧ, ಅದರ ಪೌರಾಣಿಕ ಕಥೆಗಳು, ಅದರ ತತ್ತ್ವಶಾಸ್ತ್ರ ಹೀಗೆ ಬಹು ವಿಸ್ತಾರವಾದ ವಿಷಯಗಳನ್ನೆಲ್ಲಾ ಕಿರು ಹೊತ್ತಿಗೆಯಲ್ಲಿ ರೂಪಿಸಿದ್ದು ಸಾಧನೆಯೇ ಸರಿ. ಒಟ್ಟಿನಲ್ಲಿ ಈ ಕೃತಿಯನ್ನು ಓದಿದ ನಂತರ ನಾಟ್ಯಶಾಸ್ತ್ರದ ಬಗೆಗಿನ ಎಲ್ಲಾ ಕೃತಿಗಳನ್ನು ಓದಬೇಕೆನಿಸಿದ್ದು ನಿಜ.
ಇಲ್ಲಿನ ಭಾಷೆಯು ಬಹಳ ಇಷ್ಟವಾಯಿತು. ಕೃತಿಯ ಮಹತ್ವವನ್ನು ತೋರುವ ಒಂದಿಷ್ಟು ಸಾಲುಗಳು.
"ಅಭಿನವ ಗುಪ್ತರ ದೃಷ್ಟಿಯಲ್ಲಿ ಕಲೆಯು ಭ್ರಮೆಯಾಗಲೀ, ಆರೋಪವಾಗಲೀ ಅಲ್ಲ. ನಿಶ್ಚಯಾತ್ಮಕ ಜ್ಞಾನವಾಗಲೀ ಅಥವಾ ಅಧ್ಯವಸಾಯವಾಗಲೀ ಅಲ್ಲ; ಅದು ರಸಸ್ವಭಾವದ ವಸ್ತುವಾಗಿದೆ. ಕಲೆಯು ರಸವಾಗಿದೆ ಮತ್ತು ರಸವು ಕಲೆಯಾಗಿದೆ. ಇದೇ ರಸವು ಪರಮತತ್ತ್ವವೂ ಆಗಿದೆ. ಆದುದರಿಂದ ರಸಾನುಭೂತಿಯು ಪರಮ ತತ್ತ್ವದ ಅನುಭೂತಿಯೂ ಆಗಿರುತ್ತದೆ.”
“ನಿಷ್ಕರ್ಷವಾಗಿ ಭರತಮುನಿಯ ರಸದ ಕಲ್ಪನೆಯು ಏಕತಾನತೆಯನ್ನು ಪ್ರತಿರೋಧಿಸುತ್ತದೆ. ಯಾವುದೇ ರಸವು ಏಕಾಕಿಯಾಗಿ ಬರುವುದಿಲ್ಲ. ಯಾವುದೇ ಒಂದು ಪುರುಷಾರ್ಥವು ಎಲ್ಲಿಯವರೆಗೆ ಅನ್ಯ ಪುರುಷಾರ್ಥಗಳಲ್ಲಿ ಸಮನ್ವಿತವಾಗಿ ಇರುವುದಿಲ್ಲವೋ ಅಲ್ಲಿಯವರೆಗೆ ತನ್ನಷ್ಟಕ್ಕೆ ತಾನೇ ಪೂರ್ಣವಾಗಲಾರದು.”
“ಕಲಾಸೃಷ್ಟಿಯ ಸಮಯದಲ್ಲಿ ಕವಿ ಅಥವಾ ಕಲಾವಿದನು ಶಿವನ ಭೂಮಿಕೆಯಲ್ಲಿರುತ್ತಾನೆ ಎಂದಾದರೆ, ಕಲೆಯ ಅನುಭವದ ಸ್ಥಿತಿಯಲ್ಲಿ ಪ್ರೇಕ್ಷಕನೂ ಈಶ್ವರರೂಪಿಯಾಗಿರುತ್ತಾನೆ. ಚಿತ್ತವು ಕಲೆಯ ರಚನೆ ಮತ್ತು ಅನುಭವ ಎರಡರಲ್ಲಿಯೂ ಶಿವಸಮಾನವಾಗಿರುತ್ತದೆ.”
ಪುಸ್ತಕ ಕೊಳ್ಳಲು ಈ ಕೊಂಡಿಗಳನ್ನು ಬಳಸಬಹುದು ---
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ