ಚಿತ್ರ ವಿಚಿತ್ರ


ಬೆರಳ ತುದಿಯಲಿ ಆಕಾಶವನೆತ್ತಿ

ಮೊಲೆ ತೊಟ್ಟೆಂದರೆ ನೆಚ್ಚು

ಆಟೋ ಚಾಲಕನ ಕಾಲಿಗೆ ಗಾಯ

ಹಾಲು ಕುಡಿಯದ ಬೆಕ್ಕಿನ ವರಾತ

ಅವ್ಯಕ್ತವು ಹೆಚ್ಚಾಗಬಾರದು

ವ್ಯಕ್ತಕ್ಕಾದರೋ ಉರಿಯಬೇಕಿದೆ


"ನಿನಗೇಕೆ ರಚನೆಯ ಮೇಲಿಷ್ಟು ಮೋಹ?’

ಎಂದದ್ದಕ್ಕೆ -

"ಇಲ್ಲಿ ಬರೀ ಚಿತ್ರಗಳು ನನಗದರ ಮೋಹ

ಬಿಡಲಾರೆ, ಬಿಟ್ಟಿರಲಾರೆ'


ಸಂಖ್ಯೆಗಳೂ ಸಹ ಚಿತ್ರಗಳು

ಮನುಷ್ಯ ಪ್ರಾಣಿ ಮರ ಗಿಡ

ಹೀಗೆ ಚಿತ್ರ ಬರೆಯುತ್ತಾರಲ್ಲ

ಥೇಟ್ ಹಾಗೆಯೇ


ಚಿತ್ರಗಳು ಭೌತಿಕ ಸಾಧ್ಯತೆಗಳು

ಛಂದಸ್ಸು, ಮೇಲೊಂದು ಗೆರೆ ಕೆಳಗೊಂದು

ಚಿತ್ರವೇ ಅದೂ

ಕಡೆಗೆ ಧ್ವನಿಯೂ ಶಬ್ದವೂ 


ಎಲ್ಲಕ್ಕೂ ಮಾದರಿಯೆಂದೆನಿಸಿದ್ದಿದು

ದೇಶಕಾಲವು ಜ್ಯಾಮಿತೀಯ ಆಕಾರ

ಹಾಗಾಗಿ ಅದೊಂದು ಚಿತ್ರ

ಬ್ರೆಡ್ಡಿನ ಪದರಗಳಂತೆ ಒಂದರ ಮೇಲೊಂದು

ದೇಶಕಾಲದ ಸಂರಚನೆ

ಮುಂದೆ ಹಿಂದೆ ಅಲ್ಲಿ ಇಲ್ಲಿ 




 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ