ಊರೊಳಗಿನ ಜಾಗವೇ ಹಾಗೆ


ಊರೊರಗಿನ ಜಾಗವೇ ಹಾಗೆ

ಮೊದಲಿಗೆಲ್ಲಾ ಒಂಟಿ ಮನೆಗಳು

ಅಲ್ಲಿಯೇ ಮನೆಯ ಚರಂಡಿ

ಧಿಡೀರ್ ರಸ್ತೆ ಹಾದು ಹೋದರೆ

ಯಾವುದೋ ಕೆರೆ ಕಟ್ಟೆ ನುಂಗಿ

ಬೆಳೆದದ್ದಕ್ಕೆ ಮಳೆಗಾಲದ ರಾತ್ರಿ ನಿದ್ರೆಯ

ಹಂಗಿಗಿಲ್ಲ ಅಪಜಯದ ಸೋಗು

ಗ್ಯಾರೇಜುಗಳಿಂದ ತಟ್ಟುವ ಗದ್ದಲಕ್ಕೆ

ಮಾರಮ್ಮ ಗುಡಿಯ ಗಂಟೆಗೆ

ಗೋಪುರಕ್ಕೆ ಸಮಿತಿ ಅಧ್ಯಕ್ಷತೆ


ವರ್ತುಲ ವರ್ತುಲ ಹೊರ ವರ್ತುಲ

ಎನ್ನುವಾಗಲೆಲ್ಲಾ ತಪ್ಪೋದುವ

ಬಟ್ಟೆ ಬ್ಯಾಗು ನೇತಾಕಿಕೊಂಡ ಮಗನ

ಭಾಷಾ ಶುದ್ಧತೆಗೆ ಹಾತೊರೆವವ

ತನ್ನ ಆಟೋದಲ್ಲಿ ಕೇಳುವ ಎಫ್ ಎಮ್

ಬದಲಿಸಿ ಎನ್ನೋ ಪಯಣಿಗನಿಗೆ

ನಾರಾಯಣಪ್ಪ ಎಂಬೋ ಹೆಸರನ್ನ

ಪೋಲೀಸಿನವರು ನಾರಾಯಪ್ಪ ಎಂದು

ಬರೆದದ್ದನ್ನು ಬದಲಿಸಲಿಕ್ಕೆ ಸುತ್ತಿದ್ದರಲ್ಲಿ

ವರ್ತುಲ ವರ್ತುಲ ರಸ್ತೆ ಎದ್ದಿದೆ


ಆ ರಸ್ತೆಗೊಂದು ಹೆಸರಿಡಬೇಕು ಆ ಸಂಸ್ಥೆಗೊಂದು

ಲಾಂಛನ ಕೆತ್ತಬೇಕಂತೆ ಕಟ್ಟಿಗೆಯಲ್ಲಿ ಕಲಂಕಾರಿಯಲ್ಲಿ

ಹೆಮ್ಮೆಯಂತೆ ಕಲಾ ಪೋಷಕರು

ವರ್ತುಲ ರಸ್ತೆ ಪಕ್ಕದ ಊರೊರಗಿನ

ರಾಷ್ಟ್ರೀಯ ವಿದ್ಯಾಸಂಸ್ಥೆಯ ಪ್ರಾಚಾರ್ಯರು


ಊರೊಳಗಿನ ಜಾಗವೇ ಹಾಗೆ


2 ಕಾಮೆಂಟ್‌ಗಳು:

 1. ಸರ್
  ನಿಮ್ಮ ಕವಿತೆಗಳನ್ನು ಓದಿದೆ.ಹೀಗೆ ಚಾಕ್ಷುಷ ಚಿತ್ರಗಳನ್ನು ಬಳಸುವುದರಿಂದ ಅನುಭವದ ಆಧುನಿಕ ಸಂಕೀರ್ಣತೆ ಗೆ,ಅಸಂಗತ ತೆಗೆ,ಸಂಕಟಕ್ಕೆ,ಸಂಭ್ರಮ ಕೆ ಹೆಚ್ಚು ತೀವ್ರವಾದ,ಆದಿ ಭೌತಿಕ ರೂಪಕಗಳು ಸಿಗುತ್ತವೆ.ನಿಮಗೆ ಸಿಕ್ಕಿವೆ.ಅದರಿಂದಾಗಿ ಕವಿತೆಯ ಇಡಿಕಿರಿದ ದೃಶ್ಯ ರೂಪಗಳು ಮನುಷ್ಯನ ಲೋಕದ ಎಲ್ಲ ಗದ್ದಲ ಗಳನು ಗದ್ದಲದ ಚಿತ್ರಗಳನ್ನೇ ಬಳಸಿ ಬಿಡಿಸುವುದು ಸಾಧ್ಯ ಆಗಿದೆ.

  ಆದರೆ ಹೀಗೆ ಲೋಕ ದೃಶ್ಯಗಳನ್ನು ಬಳಸುವ ಕವಿಗೆ ಸೃಜನಶೀಲ ಸಂಯಮ ವೂ ಅತ್ಯವಶ್ಯ.ಚಿತ್ರ ಬಿಡಿಸುವ ಕಲೆ ಕರಗತ ಆಗಿದೆ ಎಂದು ಚಿತ್ರ ಬಿಡಿಸುವ ಒಂದು ಲೋಲುಪ ಶಕ್ತಿಯೂ ಕ್ರಿಯಾಶೀಲ ಆಗಿ ಬಿಡಬಹುದು.ಒಳಾಂಗಣ ರೂಪಗಳನ್ನು ಮಾತ್ರ ನೆಚ್ಚಿದ ಕವಿ ಪ್ರತಿ ಕ್ಷಣವೂ ತನ್ನೊಳಗೆ ನೆ ಅವಿತ ರೂಪಕಗಳನ್ನು ಬಗೆದು ಬಯಾಪ್ಸಿ ಮಾಡಿ ಕೊಂಡು ಪಡೆಯ ಬೇಕಾಗುತ್ತದೆ.ಆದರೆ ಹೊರ ದೃಶ್ಯ ಲೋಕವನ್ನು ನೆಚ್ಚಿದ ಕವಿಗೆ ಪ್ರಜ್ಞೆಯ ಮಾಲ್ ಗಳಲ್ಲಿ ಪದಾರ್ಥಗಳು.ತುಂಬಿ.ಬಿಟ್ಟಿರುತ್ತವೆ.ಕವಿಯು ಯಾವುದನ್ನು ಯಾವ ಭಾಷಿಕ ಪೌ ಚ್ ಗಳಲ್ಲಿ ಕಟ್ಟಿ ಕೊಡಬೇಕು ಅನ್ನೋದನ್ನ ಅಷ್ಟೇ ನಿರ್ಣಯಿಸುವ. ಮನುಷ್ಯ ಆಗಬಾರದು.
  ನಾನೂ ಕೂಡ ಇದೇ ಮೃತ್ಯು ಗೋಲ ದಲ್ಲೀ ಸಿಕ್ಕವನೆ.ಅದಕ್ಕೆ ಇಷ್ಟು ತೋಡಿ ಕೊಂಡೆ
  ನಿಮ್ಮ ಕಾವ್ಯ ನಿಜವಾದ ಇಂಧನವನ್ನು ಪಡೆದು ಕೊಳ್ಳುವ ಸ್ಥಾವರಗಳ ಜೊತೆ ಲಿಂಕ್ ತಪ್ಪಿಸಿ ಕೊಳ್ಳದಿರಲಿ ಎಂದು ಹಾರೈಸುವೆ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸರ್, ನಮಸ್ಕಾರಗಳು --- ತಾವು ಪ್ರತಿಕ್ರಿಯಿಸಿದ್ದೇ ಖುಶಿಯಾಯಿತು --- ನನ್ನದೇ ಸಮಸ್ಯೆಯನ್ನು ಬಹಳ ಸ್ಪಷ್ಟವಾಗಿ ನಿರೂಪಿಸಿದ್ದೀರಿ --- ಒಳಗಿನ ರೂಪಗಳನ್ನು ಬಗೆಯಬೇಕೆಂಬುದೇ ಬಯಕೆ --- ಅದಕ್ಕೇ ಎಲ್ಲಾ ಪ್ರಯತ್ನಗಳೂ ಸಹ --- ಅದರ ದಾರಿಯಲ್ಲಿ ಪ್ರಜ್ಞೆಯನ್ನು ತೃಪ್ತಿಪಡಿಸಬೇಕಿದೆ. ಇದು ಪ್ರಯತ್ನ ಪೂರ್ವಕವಾಗಿ ನಡೆವೆ ತೃಪ್ತಿ ಅಲ್ಲ. ಎಲ್ಲೋ ಮತ್ತೊಂದಕ್ಕೆ ನಡೆವ ಸಿದ್ದತೆ ಎಂದೂ ಕರೆಯಬಹುದೇನೋ --- ಕವಿತೆ ಎನ್ನುವುದೇ ಸದಾ ನಮ್ಮ ಎಲ್ಲಾ ರಚನೆಗಳನೂ ಇದಲ್ಲ ಎಂದು ಹೇಳುವುದೇ ಅಗಿದೆ ಎಂದೆನಿಸಿತ್ತೆ. ಹಾಗಾಗಿ ಒಂದು ಕವಿತೆಯ ನಂತರ ಇದಲ್ಲ ಮತ್ತೇನೋ ಇದೆ ಅದು ಎಂದೇ ಸಾಗುತ್ತದೆ. ಒಂದು ಬಗೆಯಲ್ಲಿ "ನೇತಿ" "ನೇತಿ" ಎಂದು ಸಾಗುವಂತೆ.

   ನೀವು ಹೇಳಿದ ಮಾತು ಅಪ್ಪಟ ಸತ್ಯ. ಆ ಎಚ್ಚರಿಕೆಯನ್ನು ಗಮನದಲ್ಲಿರಿಸಿಕೊಳ್ಳುತ್ತೇನೆ.
   ಧನ್ಯವಾದಗಳೊಂದಿಗೆ
   ಅರವಿಂಡ

   ಅಳಿಸಿ