ಅದರೊಳಹೊಕ್ಕು ಅದಾಯಿತು ಹಕ್ಕಿ ಮೀನು

 

ಇದೂ ರೆಕ್ಕೆಯೆಂದೇ ಎನ್ನಿಸಿದರೂ 

ನೀರಿನಿಂದೆದ್ದು ಆಕಾಶಕ್ಕೆಗರಲಿಕ್ಕೆ 

ರೂಪಾಂತರಕ್ಕೆ ತಕ್ಕ ತಯಾರಿ 

ಆ ನಡುವಲ್ಲಿನ ವಿರಾಮ 

ಪಕ್ಕನೆ ಜೀವ ತೆಗೆದು 

ತೊಡಿಸುವ ಆವೇಗಕ್ಕೆ 

ಹೊಂದಿ ನಡೆಯಬೇಕಲ್ಲ 

ಬರೀ ಮೂಳೆಯೆಂದೆನಿಸುತ್ತಿದ್ದರೂ 

ಕೊಕ್ಕು ಕಾಲುಗಳ ಪಡೆದು 

ಮಾಂಸತುಂಬಿ ಗಾಳಿಗುಬ್ಬಿ 

ಹಾರಬೇಕು 


ಮೀನಿಂದ ಹಕ್ಕಿಯಾಗುವುದು 

ಸುಲಭವೇನೂ ಅಲ್ಲ 

ಹಕ್ಕಿಯಿಂದ ಮೀನಾಗುವುದೂ 


ಮೇಲಿಂದ ಕೆಳಗೆ ಹಾರಬೇಕಷ್ಟೆ 

ಮುಳುಗಿದಾಗ ಉಸಿರಿಡಿದುಕೊಳ್ಳುವ ಗುಣ 

ಎಲ್ಲಾ ಹಕ್ಕಿಗಳ ಪಾಡೇನೂ ಅಲ್ಲ 

ಹೀಗಿರಲಾಗಿ 

ಗಾಳಿತೊರೆದು ನೀರೊಳಗವಿತುಬಿಡುವ 

ಈ ರೂಪಾಂತರದ ನಡುವಲ್ಲೂ 

ಜೀವ ತೆಗೆದು ತುಂಬುವ 

ಕಾರುಣ್ಯಕೆ ಸವಾಲೆಸೆಯುವ ಕಠೋರತೆಯನ್ನ

ನೇವರಿಸಿ ಮೈದಡವಿ ಮುದ್ದಿಸಿ 

ಹೋಗಬೇಕು 

ನೀರು ಆಳ-ಅಗಲಕ್ಕೆ  ಪ್ರಸಿದ್ಧಿ

ತೇಟ್ ಆಕಾಶದಂತೆಯೇ ಆದರೂ 

ದೇಹ ಕ್ರಮ ಪರಿಕ್ರಮ ರಚನಾ ವ್ಯೂಹಕ್ಕೆ 

ಬೇರೆಯದೇ ಜಂಜಾಟವಿದೆಯಾದರೂ 


ಮೀನಾಗಿದ್ದೇನೆಂದು ತಿಳಿದದ್ದೇ 

ಮುಳುಗಿದಾಗ ಉಸಿರಾಡದೆ ಹಾಗೇ  ಹೋಗಬಹುದು 

ಮೀನಿಗೂ ಅಷ್ಟೇ 

ಹಕ್ಕಿಯಾದೇನೆಂದು ನೀರಿನಿಂದ ಹಾರಿದಾಗ 

ಮತ್ಯಾವುದೋ ಹಕ್ಕಿ ಹಾಗೇ ಕಚ್ಚಿಕೊಂಡು 

ಹೋಗಿಬಿಡಬಹುದು 

ಹಾರುತ್ತಿದ್ದೇನೆಂದೋ ಈಜುತ್ತಿದ್ದೇನೆಂದೋ 

ಅನ್ನಿಸುತ್ತಿರುವಾಗಲೇ 

ಉಸಿರುನಿಂತು ಸಾಯುವುದು ಮಾಮೂಲು ಸಂಗತಿ 


ಪೂರಾ ಬದಲಾಗಬೇಕು  ಇದ್ದಕ್ಕಿದ್ದಂತೆ 

ಎಲ್ಲಾ ಮಾಂಸ ಮೂಳೆ ಹರಿದು ಕೊರೆದು ಹಂಚಬೇಕು 

 ರೂಪಾಂತರದ ಕ್ಷಣದಲ್ಲಿನ 

ಆ ನೋಟ ಆ ನೋವು  ಆ ಆನಂದ 

ಅರ್ಧ ಮೀನು ಅರ್ಧ ಹಕ್ಕಿ ಆದದ್ದಿದೆಯಲ್ಲ 

ಅದುವೇ ಸಾಕ್ಷಿ  


ಈ ನಡುವಲ್ಲಿ 

ಹಕ್ಕಿ ಮೀನಾಗುವ ಮೀನು ಹಕ್ಕಿಯಾಗುವ 

ಆ ಜಾಗದಲ್ಲಿ 

ಎರಡೂ ಸಂದಿಸುತ್ತಿದೆಯಲ್ಲಾ 

ಅಲ್ಲಿ ಅವುಗಳೆಂದವು 

ಆಕಾಶಕ್ಕೂ ಸಾಗರಕ್ಕೂ ಭಿನ್ನವೇನಿಲ್ಲ 

ಅಲ್ಲೆಲ್ಲೋ ಈಜುವುದು  ಇನ್ನೆಲ್ಲೋ  ಹಾರುವುದು 

ಎರಡೂ ವಿಶೇಷವೇನೂ ಅಲ್ಲ 


ಇಷ್ಟಾದರೂ 

ಹಕ್ಕಿಗೆ ಮೀನಾಗಿಯೂ 

ಮೀನಿಗೆ ಹಕ್ಕಿಯಾಗಿಯೂ 

ಆಗುವಾಸೆ 


ಇಷ್ಟೆಲ್ಲಾ ಯಾಕೆಂದರೆ 

ಒಂದು ಮತ್ತೊಂದಾಗುವುದು 

ಬರೀ ರೂಪಾಂತರವಷ್ಟೇ ಅಲ್ಲವಲ್ಲ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ